ಶಿವನನ್ನು ಪೂಜಿಸಿ ಅನ್ಯದೈವಗಳಿಗೆರಗುವವರು ಅಜ್ಞಾನಿಗಳು,ಪಾಮರರು !

ಬಸವೋಪನಿಷತ್ತು ೪೮ : 

ಶಿವನನ್ನು ಪೂಜಿಸಿ ಅನ್ಯದೈವಗಳಿಗೆರಗುವವರು ಅಜ್ಞಾನಿಗಳು,ಪಾಮರರು !

ಮಮಮುಕ್ಕಮಣ್ಗರ

ಭಕ್ತರ ಕಂಡರೆ ಬೋಳರಪ್ಪಿರಯ್ಯಾ ;
ಸವಣರ ಕಂಡರೆ ಬತ್ತಲೆಯಪ್ಪಿರಯ್ಯಾ ;
ಹಾರುವರ ಕಂಡರೆ ಹರಿನಾಮವೆಂಬಿರಯ್ಯಾ ;
ಅವರವರ ಕಂಡರೆ ಅವರವರಂತೆ !
ಸೂಳೆಗೆ ಹುಟ್ಟಿದವರ ತೋರದಿರಯ್ಯಾ.
ಕೂಡಲ ಸಂಗಮದೇವನ ಪೂಜಿಸಿ ಅನ್ಯದೈವಂಗಳಿಗೆರಗಿ
ಭಕ್ತರೆನಿಸಿಕೊಂಬ ಅಜ್ಞಾನಿಗಳ ನಾನೇನೆಂಬೆನಯ್ಯಾ ?

ಬಸವಣ್ಣನವರ ಉಗ್ರಶಿವನಿಷ್ಠೆ ಅಭಿವ್ಯಕ್ತಗೊಂಡ ವಚನವಿದು.ಶಿವಭಕ್ತರಾಗಿಯೂ ಕಂಡಕಂಡ ದೇವ ದೇವಿಯರುಗಳನ್ನು ಪೂಜಿಸುವ,ನಮಸ್ಕರಿಸುವ ಮೂಢಮತಿಗಳನ್ನು ಬಸವಣ್ಣನವರು ಅತ್ಯಂತ ಕಟುವಾದ ಶಬ್ದಗಳಲ್ಲಿ ಖಂಡಿಸಿದ್ದಾರೆ.ಭಕ್ತರನ್ನು ಕಂಡು ಅವರಂತೆ ಇವರು ತಲೆಬೋಳಿಸಿಕೊಳ್ಳುತ್ತಾರೆ.ಜೈನಯತಿಗಳನ್ನು ಅನುಸರಿಸಿ ಬೆತ್ತಲೆಯಾಗುತ್ತಾರೆ.ಬ್ರಾಹ್ಮಣರನ್ನು ಕಂಡು ಹರಿನಾಮ ಸ್ಮರಿಸುತ್ತಾರೆ.ಯಾವ ಮತಧರ್ಮದವರನ್ನು ಕಂಡರೆ ಆ ಮತ ಧರ್ಮದ ಆಚರಣೆಗಳನ್ನು ಅನುಸರಿಸುತ್ತಾರೆ.ಇಂತಹವರು ವೇಶ್ಯೆಯ ಸಂತಾನವಾದ್ದರಿಂದ ಇಂತಹ ಪಾಪಾತ್ಮರ ಮುಖಗಳನ್ನು ನೋಡಲಾಗದು.ಶಿವಭಕ್ತರಾಗಿ ಶೈವ ವೀರಶೈವ ಪರಿಸರದಲ್ಲಿ ಹುಟ್ಟಿ ಶಿವನನ್ನು ಪೂಜಿಸುತ್ತ ಇತರ ದೈವಗಳಿಗೆ ಎರಗಿ,ನಮಿಸುವ ಅಜ್ಞಾನಿಗಳು ಶಿವಭಕ್ತರಲ್ಲ,ಅವರು ಶಿವಪಥಕ್ಕೆ ಸಲ್ಲರು ಎನ್ನುತ್ತಾರೆ ಬಸವಣ್ಣನವರು.

ಶಿವದೀಕ್ಷೆಯನ್ನು ಪಡೆಯುವಾಗ ದೀಕ್ಷಿತನು ತಲೆಬೋಳಿಸಿಕೊಳ್ಳಬೇಕಾಗಿತ್ತು ಸಾಂಪ್ರದಾಯಿಕ ಶೈವದೀಕ್ಷಾ ಪದ್ಧತಿಯಂತೆ.ದೀಕ್ಷೆಗಾಗಿ ತಲೆಬೋಳಿಸಿಕೊಂಡವರನ್ನು ಕಂಡು ಇತರರು ತಲೆಬೋಳಿಸಿಕೊಳ್ಳುತ್ತಿದ್ದರು.ಜೈನರಲ್ಲಿ ದಿಗಂಬರರು,ಶ್ವೇತಾಂಬರರು ಎನ್ನುವ ಎರಡು ಪಂಗಡಗಳಿದ್ದು ದಿಗಂಬರ ಪಂಥಕ್ಕೆ ಸೇರಿದ ಜೈನಯತಿಗಳು ಬೆತ್ತಲೆ ಇರುತ್ತಾರೆ.ಸವಣರು ಎಂದರೆ ಜೈನಯತಿಗಳು ಎಂದರ್ಥ.ಜೈನ ಯತಿಗಳು ಬೆತ್ತಲೆ ಇರುವುದನ್ನು ಕಂಡು ಇದೇ ಪರಮಾದರ್ಶ ಎಂದು ಇತರರು ಬೆತ್ತಲಾಗುವುದು ಅವಿವೇಕತನವಲ್ಲವೆ ? ಬ್ರಾಹ್ಮಣರನ್ನು ಕಂಡು ಅವರ ದೈವವಾದ ಹರಿಯನ್ನು ಕೊಂಡಾಡುವುದು,ಹರಿನಾಮಸ್ಮರಿಸುವುದು ಪಾತಕದ ಕೃತ್ಯ.ಯಾರು ಬರುತ್ತಾರೋ ಅವರಂತೆ ವರ್ತಿಸುವ ಅವಕಾಶವಾದಿ,ಸಮಯಸಾಧಕ ಪ್ರವೃತ್ತಿಯವರು ಶಿವಭಕ್ತರಾಗರಾದ್ದರಿಂದ ಅಂಥವರನ್ನು ಸೂಳೆಗೆ ಹುಟ್ಟಿದ ಮಕ್ಕಳು ಎಂದು ಆಕ್ರೋಶದ ನುಡಿಗಳನ್ನಾಡುತ್ತಾರೆ ಬಸವಣ್ಣನವರು.ಶಿವಭಕ್ತರಾಗಿ ,ಲಿಂಗೋಪಾಸಕರಾಗಿ ಶಿವನನ್ನು ಮಾತ್ರಪೂಜಿಸಬೇಕಲ್ಲದೆ ಕಂಡ ಕಂಡ ದೇವರುಗಳನ್ನು ಪೂಜಿಸಬಾರದು,ನಡೆದುಕೊಳ್ಳಬಾರದು.ಇಂತಹವರು ಅಜ್ಞಾನಿಗಳು,ಪಾಮರರು ಎನ್ನುತ್ತಾರೆ ಬಸವಣ್ಣನವರು.ಶಿವದೀಕ್ಷೆ ಪಡೆದು ಶಿವಭಕ್ತರಾದವರು,ಗುರುವಿನಿಂದ ಇಷ್ಟಲಿಂಗ ದೀಕ್ಷೆಪಡೆದು ಲಿಂಗಾಯತರು ಆದವರು,ನಾವು ಜಂಗಮರು ಎಂದುಕೊಳ್ಳುವ ವೀರಶೈವರು ಬಸವಣ್ಣನವರ ಈ ವಚನವನ್ನು ಅರ್ಥಮಾಡಿಕೊಳ್ಳಬೇಕು.ಶಿವನನ್ನು,ಇಷ್ಟಲಿಂಗವನ್ನು ಪೂಜಿಸುತ್ತ ಕಂಡಕಂಡ ದೇವರುಗಳನ್ನು ಒಪ್ಪಿ,ಪೂಜಿಸುವ ಮಹಾನುಭಾವರುಗಳನ್ನು ಬಸವಣ್ಣನವರು ಏನೆಂದು ಕರೆದಿದ್ದಾರೆ ಎನ್ನುವುದನ್ನು ಅರ್ಥಮಾಡಿಕೊಂಡು ಈಗಲಾದರೂ ಹಾದಿಬೀದಿಯ ದೇವರು ದೈವಗಳಿಗೆ ನಡೆದುಕೊಳ್ಳುವುದನ್ನು ಬಿಡಬೇಕು.

ಬಸವಣ್ಣನವರು ಈ ವಚನದಲ್ಲಿ ಶಿವನಲ್ಲದೆ ಬೇರೆ ದೇವರುಗಳಿಗೆ ನಡೆದುಕೊಳ್ಳುವ ಜನರನ್ನು ‘ ಸೂಳೆಗೆ ಹುಟ್ಟಿದವರು’ , ‘ ಸೂಳೆಯ ಮಕ್ಕಳು’ ಎಂದು ಕಟುವಾಗಿ ನಿಂದಿಸಿರುವುದು ಪ್ರಜಾಪ್ರಭುತ್ವ ಯುಗದ ನಮಗೆ ಸರಿ ಕಾಣದೆ ಇರಬಹುದು.ಅಪಮೌಲ್ಯಗಳೇ ಮೌಲ್ಯಗಳಾಗಿರುವಾಗ,ಅನಾಗರಿಕತೆಯೇ ನಾಗರಿಕತೆಯಾಗಿರುವಾಗ,ಅನೀತಿಯೇ ಸಚ್ಚಾರಿತ್ರ್ಯವಾಗಿರುವಾಗ,ಅಧರ್ಮವೇ ಧರ್ಮವಾಗಿರುವಾಗ ಬಸವಣ್ಣನವರ ಮಾತು ಸ್ವಲ್ಪ ಘೋರ,ಕಹಿ ಎನ್ನಿಸಬಹುದು.ಆದರೆ ಹಿಂದಿನ ಕಾಲದಲ್ಲಿ,ಬಸವಣ್ಣನವರ ಕಾಲದಲ್ಲಿ ಚಾರಿತ್ರ್ಯಕ್ಕೆ ಮಹತ್ವವಿತ್ತು; ಹೆಣ್ಣು ಗಂಡುಗಳಿಬ್ಬರೂ ಸನ್ನಡತೆಯುಳ್ಳವರಾಗಿರಬೇಕು ಎಂದು ನಿರೀಕ್ಷಿಸುವ ಸಮಾಜ ಅದಾಗಿತ್ತು.ಕಾಮವು ಮನುಷ್ಯ ಸಹಜ ದೌರ್ಬಲ್ಯವೇ ಆಗಿದ್ದರೂ ಕಾಮೇಚ್ಛೆಯನ್ನು ಪೂರೈಸಿಕೊಳ್ಳಲು ವಿವಾಹದಂತಹ ಸಾಮಾಜಿಕ ವ್ಯವಸ್ಥೆ ಇರುವಾಗ ಲಂಪಟರಾಗುವುದು ತಪ್ಪಲ್ಲವೆ? ಹೆಣ್ಣೇ ಇರಲಿ,ಗಂಡೇ ಇರಲಿ ಕಾಮೇಚ್ಛೆಗೆ ದಾರಿ ತಪ್ಪಿದರೆ ಅದು ತಪ್ಪೆ ! ಇಂತಹ ಕಟುವಾದ ಶಬ್ದಗಳ ಬಳಕೆ ಇಂಗ್ಲೀಷ ನಾಗರಿಕ ಜೀವನಪದ್ಧತಿಯನ್ನು ಅಪ್ಪಿ,ಒಪ್ಪಿದ ನಮಗೆ ಆಘಾತಕಾರಿಯಾಗಿರಬಹುದು,ಮಹಿಳಾ ಹಕ್ಕುಗಳ ಮೇಲಿನ ಹಲ್ಲೆಯಾಗಿಯೂ ಕಾಣಬಹುದು.ಆದರೆ ಬಸವಣ್ಣನವರ ಕಾಲದಲ್ಲಿ ಕೌಟುಂಬಿಕ ವ್ಯವಸ್ಥೆಗೆ,ಸಾಮಾಜಿಕ ವ್ಯವಸ್ಥೆಗೆ ಮಹತ್ವವಿದ್ದುದರಿಂದ ಬಸವಣ್ಣನವರು ಡೋಂಗಿ ಶಿವಭಕ್ತರುಗಳನ್ನು ಹಾಗೆ ನಿಂದಿಸಿದ್ದಾರೆ ಎಂದು ತಿಳಿದುಕೊಳ್ಳಬೇಕೇ ಹೊರತು ‘ ಬಸವಣ್ಣನವರ ಬಾಯಲ್ಲಿ ಇಂಥ ಮಾತೆ ?’ ಹಾಗೆ ಹೀಗೆ ಅಪಾರ್ಥ ಕಲ್ಪಿಸಿಕೊಳ್ಳಬಾರದು.ಬಸವಣ್ಣನವರು ಮಹಾನ್ ಸಮಾಜೋಧಾರ್ಮಿಕ ಸುಧಾರಕರು,ಪ್ರತಿಜೀವಿಯಲ್ಲಿಯೂ ಪರಶಿವನಿದ್ದಾನೆ ಎಂದು ಬಗೆದಿದ್ದ ಪುಣ್ಯಪುರುಷರು,ಮಹಾನುಭಾವರು.ಶಿವಪಾರಮ್ಯವನ್ನು ಪ್ರತಿಷ್ಠಾಪಿಸುವ ಭರದಲ್ಲಿ,ಆವೇಶ ಭರಿತರಾಗಿ ಆಡಿದ ಶಿವಾವೇಶದ,ಮತಾವೇಶದ ಮಾತಿದು ಎಂದು ತಿಳಿದುಕೊಂಡರೆ ಸಾಕು.ಜೈನ ಬೌದ್ಧ ವೈಷ್ಣವ ಮತಗಳ ಅಬ್ಬರವಿದ್ದ ಕಾಲದಲ್ಲಿ ಬಸವಣ್ಣನವರು ಶಿವಧರ್ಮದ ಪಾರಮ್ಯ ಪ್ರತಿಷ್ಠಾಪಿಸುತ್ತಿದ್ದರು.ಅನುಕರಣ ಶೂರರಾದ,ಸ್ವಾಭಿಮಾನ ಶೂನ್ಯರಾದ ಶಿವಭಕ್ತರ ನಡೆ ನುಡಿಗಳನ್ನು ಕೆಡೆನುಡಿಯುವುದು ಅನಿವಾರ್ಯವಾಗಿತ್ತು ಬಸವಣ್ಣನವರಿಗೆ.ಬಸವಣ್ಣನವರನ್ನು ನಾವು ಅವರ ಕಾಲದ ಸಾಮಾಜಿಕ ಧಾರ್ಮಿಕ ಸ್ಥಿತಿಗತಿಗಳ ವಿಪರೀತ- ವಿಪ್ಲವಕಾರಿ ಸನ್ನಿವೇಶಗಳ ನಡುವೆ ಅರ್ಥಮಾಡಿಕೊಳ್ಳಬೇಕೇ ಹೊರತು ಬಸವಣ್ಣನವರ ಮಹೋನ್ನತ ವ್ಯಕ್ತಿತ್ವದಲ್ಲಿ ಕುಂದನ್ನರಸಬಾರದು.ಬಸವಣ್ಣನವರ ದಿವ್ಯೋಜ್ವಲ ವ್ಯಕ್ತಿತ್ವದಲ್ಲಿ ಕುಂದನ್ನರಸುವುದು ಮಂದಮತಿಗಳ ಲಕ್ಷಣವೆನ್ನಬಹುದಷ್ಟೆ.

೨೦.೦೨.೨೦೨೪

About The Author