ಮಣಿವಣ್ಣನ್ ಅವರ ಎಡವಟ್ಟಿಗೆ ಸರಕಾರದ ‘ಉದಾರನೀತಿಯೇ’ ಕಾರಣ !

ಮೂರನೇ ಕಣ್ಣು : ಮಣಿವಣ್ಣನ್ ಅವರ ಎಡವಟ್ಟಿಗೆ ಸರಕಾರದ ‘ಉದಾರನೀತಿಯೇ’ ಕಾರಣ !

ಮುಕ್ಕಣ್ಣ ಕರಿಗಾರ

ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ಅವರ ಎಡವಟ್ಟಿಗೆ ರಾಜ್ಯಸರಕಾರ ಪೇಚಿಗೆ ಸಿಲುಕುವಂತೆ ಆಗಿದೆ.ವಸತಿಶಾಲೆಗಳಲ್ಲಿ ಮಹಾಕವಿ ಕುವೆಂಪು ಅವರ ‘ ಜ್ಞಾನದೇಗುಲವಿದು ಕೈ ಮುಗಿದು ಒಳಗೆ ಬಾ’ ಎನ್ನುವ ವಾಕ್ಯವನ್ನು ಬದಲಿಸಿ ‘ ಜ್ಞಾನದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ’ ಎನ್ನುವ ವಾಕ್ಯವನ್ನು ಅಳವಡಿಸಲು ಸೂಚನೆ ನೀಡಿದ್ದ ಮಣಿವಣ್ಣನ್ ಅವರು ಇದೀಗ ವಿಷಯವು ತೀವ್ರ ರಾಜಕೀಯ ಸಂಘರ್ಷದ ವಿವಾದವಾಗಿ ಮಾರ್ಪಟ್ಟು ತಲೆನೋವು ಆಗಿ ಎತ್ತಂಗಡಿಯ ತಲೆದಂಡ ಆಗಬಹುದೆನ್ನುವ ಮುನ್ನಚ್ಚೆರಿಕೆಯ ಕ್ರಮವಾಗಿ KREIS Office Team ಎನ್ನುವ ಟೆಲಿಗ್ರಾಮ ಗ್ರೂಪಿನಲ್ಲಿ ಒಂದು ಸ್ಪಷ್ಟೀಕರಣ ನೀಡಿ ಈ ಮೊದಲು ಇದ್ದಂತೆ ಮಹಾಕವಿ ಕುವೆಂಪು ಅವರ ವಾಕ್ಯವೇ ಇರಲಿ ಎನ್ನುವ ಸಂದೇಶ ಹಾಕಿದ್ದಾರೆ.ವಿರೋಧ ಪಕ್ಷದ ನಾಯಕ ಆರ್.ಅಶೋಕ ಮತ್ತು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಆರೋಪಿಸಿರುವಂತೆ ಸರಕಾರದ ಗಮನಕ್ಕೆ ತಾರದೆ ಅಂದರೆ ಸಮಾಜ ಕಲ್ಯಾಣ ಇಲಾಖೆಯ ಸಚಿವರ ಗಮನಕ್ಕೆ ತಾರದೆ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ಮತ್ತು ಅವರ ಅಧೀನದ ಅಧಿಕಾರಿಗಳೇ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನುವುದು ಮಣಿವಣ್ಣನ್ ಅವರ ಟೆಲಿಗ್ರಾಮ್ ಪೋಸ್ಟಿನಿಂದ ಸ್ಪಷ್ಟವಾಗುತ್ತಿದೆ.ಮಣಿವಣ್ಣನ್ ಅವರು ಆ ಪೋಸ್ಟಿನಲ್ಲಿ “ಜನೆವರಿ ಹತ್ತೊಂಬತ್ತರಂದು ನಾವು ಕುವೆಂಪು ಸರ್ ಅವರ ವಾಕ್ಯವನ್ನು ಬದಲಿಸುವ ಕುರಿತು ಚರ್ಚಿಸಿದ್ದನ್ನು ಸಂಜೆ 4.59 ಕ್ಕೆ ಪೋಸ್ಟ್ ಮಾಡಿದ್ದೆ.ಇದು ಮಾನ್ಯ ಸಚಿವರ ಗಮನಕ್ಕೆ ತಂದು ನಿರ್ಣಯಿಸಬೇಕಾದ ಸಂಗತಿಯಾಗಿದ್ದು ಆದರೆ ಇದುವರೆಗೂ ಕೆ ಆರ್ ಇ ಐ ಎಸ್ ನ ಕಾರ್ಯನಿರ್ವಾಹಕ ನಿರ್ದೇಶಕರು ಈ ವಿಷಯಕ್ಕೆ ಸಂಬಂಧಿಸಿದ ಕಡತ ಮಂಡಿಸಿಲ್ಲ” ಎಂದು ಬರೆದುಕೊಂಡಿದ್ದಾರೆ.ಇಲ್ಲಿ ಎರಡು ಪ್ರಶ್ನೆಗಳು ಉದ್ಭವವಾಗುತ್ತವೆ.ಸರಕಾರದ ಹಂತದಲ್ಲಿ ನಿರ್ಣಯಿಸಬೇಕಾಗಿದ್ದ ವಿಷಯವು ಚರ್ಚೆಯ ಸ್ವರೂಪದಲ್ಲೇ ಇರುವಾಗ ಮಣಿವಣ್ಣನ್ ಅವರು ಕೆ ಆರ್ ಇ ಐ ಎಸ್ ಅಧಿಕಾರಿಗಳ ಗುಂಪಿನಲ್ಲೇಕೆ ಇದನ್ನು ಪೋಸ್ಟ್ ಮಾಡಿದರು ? ಕೆ ಆರ್ ಇ ಐ ಎಸ್ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಧಾನಕಾರ್ಯದರ್ಶಿಯವರ ಗಮನಕ್ಕೆ ತಾರದೆ ಇಂತಹದ್ದೊಂದು ಸೂಚನೆ ನೀಡಿರಲು ಸಾಧ್ಯವೆ ? ಮಣಿವಣ್ಣನ್ ಅವರು ತಮ್ಮ ‘ಸಲ್ಲದ ನಡೆ’ ಯ ಭಾರವನ್ನು ಮತ್ತೊಬ್ಬ ಅಧಿಕಾರಿಯ ಮೇಲೆ ಹೊರಿಸಹೊರಟಿದ್ದಾರೆ. ಐಎಎಸ್ ಅಧಿಕಾರಿಗಳು ಉಗುಳಿದರೂ ‘ಪ್ರಸಾದ’ವೆಂದೇ ಭಾವಿಸುವ ಅಧಿಕಾರಿಗಳು,ನೌಕರರ ಪಡೆ ಇರುವ ಸಾರ್ವಜನಿಕ ಆಡಳಿತಕ್ಷೇತ್ರದ ಅನಾರೋಗ್ಯಕರ,ವಿಪರೀತ ವಿದ್ಯಮಾನದ ದಿನಗಳಲ್ಲಿ ಆ ಟೆಲಿಗ್ರಾಂ ಗುಂಪಿನಲ್ಲಿ ವಿಷಯ ಹಂಚಿಕೊಂಡ ಮಣಿವಣ್ಣನ್ ಅವರು ‘ ಇದು ಸರಕಾರದ ಆದೇಶ ಎಂದು ಪರೋಕ್ಷವಾಗಿ ಹೇಳಿದಂತೆ ಆಗಲಿಲ್ಲವೆ ?ಮಣಿವಣ್ಣನ್ ಅವರೇ ಶಾಲೆಗಳಲ್ಲಿ ಸರಸ್ವತಿ ಪೂಜೆಯಂತಹ ಧಾರ್ಮಿಕ ಆಚರಣೆಗಳನ್ನು ಆಚರಿಸಕೂಡದು ಎಂದು ಆದೇಶಿಸಿ ಪ್ರತಿಭಟನೆ ವ್ಯಕ್ತಗೊಂಡಾಗ ಅದೇ ದಿನ ಹಿಂತೆಗೆದುಕೊಂಡಿರುವ ಪ್ರಸಂಗವನ್ನು ಗಮನಿಸಿದಾಗ ಮಣಿವಣ್ಣನ್ ಅವರು ಸಮಾಜಕಲ್ಯಾಣ ಇಲಾಖೆಯ ಸಚಿವರಾದ ಡಾ.ಎಚ್ ಸಿ ಮಹಾದೇವಪ್ಪನವರನ್ನು ಕಡೆಗಣಿಸುತ್ತಿದ್ದಾರೆ ಎಂದು ಭಾವಿಸಬೇಕೋ ಅಥವಾ ಮಣಿವಣ್ಣನ್ ಅವರ ಇಂತಹ ನಿರ್ಧಾರಗಳಿಗೆ ಡಾ. ಎಚ್ ಸಿ ಮಹಾದೇವಪ್ಪರ ಅವರ ಬೆಂಬಲ ಸ್ಫೂರ್ತಿ,ಪ್ರೇರಣೆ ಇದೆ ಎಂದು ಅರ್ಥೈಸಬೇಕೋ ?

ಅಷ್ಟಕ್ಕೂ ಮಹಾಕವಿ ಕುವೆಂಪು ಅವರ ‘ ಜ್ಞಾನದೇಗುಲವಿದು ಕೈ ಮುಗಿದು ಒಳಗೆ ಬಾ’ ಎನ್ನುವ ವಾಕ್ಯದಲ್ಲಿ ಏನು ದೋಷವಿದೆ ? ಯಾವ ಮೌಲ್ಯಗಳ ಅಪಮೌಲ್ಯವಾಗಿದೆ?ಎಚ್ ಸಿ ಮಹಾದೇವಪ್ಪನವರು ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಮಾತ್ರಕ್ಕೆ ಕುವೆಂಪು ಅವರಿಗಿಂತ ದೊಡ್ಡರಾಗುವುದಿಲ್ಲ,ಮಣಿವಣ್ಣನ್ ಅವರು ಹಿರಿಯ ಐಎಎಸ್ ಅಧಿಕಾರಿಯಾದ ಮಾತ್ರಕ್ಕೆ ಕುವೆಂಪು ಅವರಿಗಿಂತ ದೊಡ್ಡವರಾಗುವುದಿಲ್ಲ.ಕುವೆಂಪು ಅವರು ಕರ್ನಾಟಕದ ಅಸ್ಮಿತೆಯ ಸಂಕೇತ,ಯುಗಕವಿ- ವಿಶ್ವಕವಿಯಾದ ಕನ್ನಡದ ಮೇರು ಪ್ರತಿಭೆ. ಮೌಢ್ಯ -ಕಂದಾಚಾರಗಳನ್ನು ಕಿಂಚಿತ್ತೂ ಒಪ್ಪದ ಸಮಾನತೆ,ಸ್ವಾತಂತ್ರ್ಯ,ಸರ್ವೋದಯ ಪರಿಕಲ್ಪನೆಗಳನ್ನು ಕನ್ನಡ ಸಾಹಿತ್ಯ ಸಾಂಸ್ಕೃತಿಕ ಲೋಕದಲ್ಲಿ ಪರಿಚಯಿಸಿದ ವಿಶ್ವಮಾನವ ಸಂದೇಶದ ಕವಿ,ಕನ್ನಡದ ಹೆಮ್ಮೆ.ಶಾಲೆ ಕಾಲೇಜುಗಳು ಜ್ಞಾನೋಪಾಸನೆಯ ಕೇಂದ್ರಗಳು ಆಗಿದ್ದರಿಂದ ಶಿಕ್ಷಣ ಸಂಸ್ಥೆಗಳು ಬರಿಯ ಆರ್ ಸಿ ಸಿ ಕಟ್ಟಡಗಳು ಎಂದು ಭಾವಿಸಬಾರದು,ಶಾಲೆ ಕಾಲೇಜುಗಳು ಕತ್ತಲೆಯನ್ನು ಕಳೆದು ಬೆಳಕನ್ನುಣಿಸುವ ಜ್ಞಾನದೇಗುಲಗಳಾಗಿದ್ದರಿಂದ ಶಾಲೆ ಕಾಲೇಜುಗಳಿಗೆ ನಮಿಸುವುದು ಜ್ಞಾನಕ್ಕೆ ನಮಿಸಿದಂತೆ .ಜ್ಞಾನಕ್ಕೆ ತಲೆಬಾಗದವನು ವ್ಯರ್ಥಪೊಗರಿನ ಮನುಷ್ಯನೇ ಹೊರತು ಸುಸಂಸ್ಕೃತನಲ್ಲ.ಎಚ್ ಸಿ ಮಹಾದೇವಪ್ಪ ಮತ್ತು ಮಣಿವಣ್ಣನ್ ಅವರಿಗೆ ಕುವೆಂಪು ಅವರ ವಾಕ್ಯ ಅರ್ಥವಾದಂತಿಲ್ಲ !’ ಕೈಮುಗಿಯುವ ‘ ಮತ್ತು ‘ ಪ್ರಶ್ನಿಸುವ’ ಕ್ರಿಯೆಗಳು ಎಲ್ಲಿ ನಡೆಯುತ್ತವೆ ಎಂದು ಸಮಾಜಕಲ್ಯಾಣ ಇಲಾಖೆಯ ಮಂತ್ರಿಗಳು ಮತ್ತು ಪ್ರಧಾನಕಾರ್ಯದರ್ಶಿಗಳಿಗೆ ಗೊತ್ತಿದ್ದರೆ ಈ ಗೊಂದಲ ಉಂಟಾಗುತ್ತಿರಲಿಲ್ಲ.ಶಾಲೆಯ ಆವರಣ ಪ್ರವೇಶಿಸಿದಾಗ ಇಲ್ಲವೆ ತರಗತಿ ಕೋಣೆಯನ್ನು ಪ್ರವೇಶಿಸುವ ಮುಂಚೆ ಕೈಮುಗಿಯಲಾಗುತ್ತದೆ.ಪ್ರಶ್ನೆ ಕೇಳುವುದು ತರಗತಿಕೋಣೆಯಲ್ಲಿ.ತರಗತಿಯಲ್ಲಿ ಕೇಳಬೇಕಾದ ಪ್ರಶ್ನೆಗಳಿಗೆ ಬಯಲು ಇಲ್ಲವೆ ಆವರಣದಲ್ಲಿ ನಮಸ್ಕರಿಸುವ ಕ್ರಿಯೆಗೆ ತಳುಕು ಹಾಕಿ ಕುವೆಂಪು ಅವರ ವಾಕ್ಯ ಬದಲಿಸುವುದು ಎಷ್ಟು ಸಮಂಜಸ ? ಕುವೆಂಪು ಅವರ ವಾಕ್ಯ ಮಕ್ಕಳಲ್ಲಿ ನಯ ವಿನಯ ಸಂಪತ್ತನ್ನು ರೂಢಿಸುವ ಒಂದು ಸಲಹೆಯೇ ಹೊರತು ಅದೇನು ಕಡ್ಡಾಯಶಾಸನವಲ್ಲ.ವಸತಿ ಶಾಲೆಯ ಮಕ್ಕಳು ಸೇರಿದಂತೆ ಯಾವ ಶಾಲೆಯ ಮಕ್ಕಳು ಶಾಲೆಗಳಿಗೆ ಕೈ ಮುಗಿದು ಒಳಗೆ ಪ್ರವೇಶಿಸುವುದಿಲ್ಲ.ಅದೊಂದು ಸಂಸ್ಕಾರವನ್ನುಂಟು ಮಾಡುವ ಸದ್ಬೋಧೆ ಅಷ್ಟೆ.ಅದನ್ನೂ ಸಹಿಸುವುದಿಲ್ಲ ಎಂದರೆ ಹೇಗೆ ?

ಪ್ರಜಾಪ್ರಭುತ್ವದಲ್ಲಿ ಶಾಸಕರು,ಸಚಿವರಾದವರುಗಳು ಪ್ರಜೆಗಳಿಗೆ ಜವಾಬ್ದಾರರಾಗಿ ಕಾರ್ಯನಿರ್ವಹಿಸಬೇಕು.ಸಚಿವರುಗಳಿಗೆ ಆಡಳಿತದಲ್ಲಿ ನೆರವಾಗಲು ಹಿರಿಯ ಐಎಎಸ್ ಅಧಿಕಾರಿಗಳಿದ್ದಾರೆಯೇ ಹೊರತು ಐಎಎಸ್ ಅಧಿಕಾರಿಗಳೇ ರಾಜ್ಯಭಾರ ಮಾಡುವಂತಿಲ್ಲ.ಲೋಕಸಭೆ,ವಿಧಾನಸಭೆಗಳ ಅಧಿವೇಶನ ನಡೆದಾಗ ಅಧಿಕಾರಿಗಳು ಅವರು ಯಾರೇ ಆಗಿರಲಿ ಕ್ಯಾಬಿನೆಟ್ ಸೆಕ್ರೆಟರಿ ( ಕೇಂದ್ರಸರಕಾರದಲ್ಲಿ) ಅಥವಾ ಚೀಫ್ ಸೆಕ್ರೆಟರಿಯೇ ( ರಾಜ್ಯಗಳಲ್ಲಿ) ಆಗಿರಲಿ ಸದನಕ್ಕೆ ಹೊಂದಿಕೊಂಡಂತೆ ಇರುವ ಅಧಿಕಾರಿಗಳ ಗ್ಯಾಲರಿಯಲ್ಲಿ ಕುಳಿತುಕೊಳ್ಳಬೇಕೇ ಹೊರತು ಸದನದಲ್ಲಿ ಇಲಾಖೆಗಳ ಮಂತ್ರಿಗಳೊಂದಿಗೆ ಕುಳಿತುಕೊಳ್ಳುವಂತಿಲ್ಲ.ಈ ಶಿಷ್ಟಾಚಾರವು ಪ್ರಜಾಪ್ರಭುತ್ವದ ಸೌಂದರ್ಯ ಮತ್ತು ಅಧಿಕಾರಿಶಾಹಿಯ ಮಿತಿ.ಸದನವು ಜನಪ್ರತಿನಿಧಿಗಳಾದ ಆಳುವವರು ಮತ್ತು ಕೇಳುವವರ ಪ್ರಜಾಕಲ್ಯಾಣ ಕೆಲಸ ಕಾರ್ಯಗಳನ್ನು ಚರ್ಚಿಸಿ ನೀತಿ- ನಿಯಮಾವಳಿಗಳನ್ನು ರೂಪಿಸುವ ಪರಮೋಚ್ಚ ವೇದಿಕೆಯಾದ್ದರಿಂದ ಅಲ್ಲಿ ಜನಪ್ರತಿನಿಧಿಗಳಾದ ಸಚಿವರುಗಳು ಮತ್ತು ಶಾಸಕರುಗಳಷ್ಟೇ ಆದ್ಯತೆ.ಸದನದ ನಿರ್ಣಯಗಳನ್ನು ಕಾನೂನನ್ನಾಗಿ,ಆಡಳಿತ ನೀತಿಯನ್ನಾಗಿ ರೂಪಿಸುವಲ್ಲಿ ಸಂಬಂಧಪಟ್ಟ ಇಲಾಖೆಯ ಸಚಿವರಿಗೋ ಮುಖ್ಯಮಂತ್ರಿಯವರಿಗೋ ನೆರವಾಗುವುದಷ್ಟೇ ಹಿರಿಯ ಐಎಎಸ್ ಅಧಿಕಾರಿಗಳ ಕಾರ್ಯ.

ಸರಕಾರದ ಭಾಗವೇ ಆಗಿರುವ ಐಎಎಸ್ ಮತ್ತು ರಾಜ್ಯಸೇವೆಯ ಅಧಿಕಾರಿಗಳಿಗೆ ಅವರ ಕಾರ್ಯವ್ಯಾಪ್ತಿಯ ಇಲಾಖೆ,ಕಛೇರಿಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ ಸಿಬ್ಬಂದಿಗಳಿಂದ ಕೆಲಸ ಮಾಡಿಸಿಕೊಂಡು ಸರಕಾರದ ಯೋಜನೆಗಳು, ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಆಡಳಿತಾತ್ಮಕ,ಹಣಕಾಸಿನ ಅಧಿಕಾರಗಳನ್ನು ಪ್ರತ್ಯಾಯೋಜಿಸಬಹುದು.ಕೆಲವು ಮಟ್ಟಿಗೆ ಸ್ವಾತಂತ್ರ್ಯವನ್ನೂ ನೀಡಬಹುದು.ಆದರೆ ಐಎಎಸ್ ಅಧಿಕಾರಿಗಳಿಗೆ ಅಪರಿಮಿತ ಅಧಿಕಾರವನ್ನು ‘ ಅನುಗ್ರಹಿಸಬಾರದು’. ರಾಜ್ಯದ ಜನಜೀವನದ ಮೇಲೆ ಪರಿಣಾಮ ಬೀರುವ,ರಾಜ್ಯದ ಸಾಹಿತ್ಯ ಸಂಸ್ಕೃತಿ ಶಿಷ್ಟಾಚಾರಗಳ ವಿಷಯದಲ್ಲಿ ಮೂಗು ತೂರಿಸದಂತೆ ಅಧಿಕಾರಿಗಳನ್ನು ನಿರ್ಬಂಧಿಸಬೇಕು.ಮಣಿವಣ್ಣನ್ ಅವರಾಗಲಿ ಅಥವಾ ಅವರ ಕಾರ್ಯನಿರ್ವಾಹಕ ನಿರ್ದೇಶಕರಾಗಲಿ ಮಾಡಿದ್ದು ರಾಜ್ಯದ ಸಾಂಸ್ಕೃತಿಕ ನೀತಿಯಲ್ಲಿ ಕೈ ಆಡಿಸುವ ಕೆಲಸ.ಆ ಅಧಿಕಾರ ಅವರಿಗಿಲ್ಲ.ಲೋಕಸಭಾ ಚುನಾವಣೆಯು ಹತ್ತಿರ ಇರುವ ದಿನಗಳಲ್ಲಿ ತಮ್ಮ ಸರಕಾರದ ಯಾವ ಇಲಾಖೆಯು ಜನರ ಭಾವನೆಗಳನ್ನು ಕೆಣಕದಂತೆ,ಜನರನ್ನು ಸರಕಾರದ ವಿರುದ್ಧ ತಿರುಗಿ ಬೀಳದಂತೆ ನೋಡಿಕೊಳ್ಳುವುದು,ಎಚ್ಚರಿಕೆ ವಹಿಸುವುದು ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೇ ಶ್ರೇಯಸ್ಸನ್ನುಂಟು ಮಾಡುವ ಕಾರ್ಯ.ಆದ್ದರಿಂದ ಅವರು ತಮ್ಮ ಸರಕಾರದ ಅಧಿಕಾರಿಗಳಿಗೆ ಒಂದು ಸ್ಪಷ್ಟ ‘ ಲಕ್ಷ್ಮಣರೇಖೆ’ ಯನ್ನು ಕೊರೆಯಬೇಕು.

೨೦.೦೨.೨೦೨೪

About The Author