ಹಾಲುಮತ ಸಂಸ್ಕೃತಿ : ವೀರಭದ್ರನೇ ಬೀರೇಶ್ವರ,ಬೀರಲಿಂಗೇಶ್ವರನು

ಹಾಲುಮತ ಸಂಸ್ಕೃತಿ : ವೀರಭದ್ರನೇ ಬೀರೇಶ್ವರ,ಬೀರಲಿಂಗೇಶ್ವರನು: ಮುಕ್ಕಣ್ಣ ಕರಿಗಾರ

‘ಶ್ರೀ ಕನಕ ನೌಕರರ ಸ್ವಯಂಸೇವಕರ ಬಳಗ’ ಎನ್ನುವ ರಾಜ್ಯಮಟ್ಟದ ಕುರುಬ ಸಮುದಾಯದ ಅಧಿಕಾರಿಗಳು ಮತ್ತು ವಿಚಾರವಾದಿಗಳು ಇರುವ ಗುಂಪಿನಲ್ಲಿ ಎಂ.ಚಂದ್ರಶೇಖರ ಅವರು ಕುರುಬರ ಕುಲದೈವವಾದ ಬೀರೇಶ್ವರರ ಬಗ್ಗೆ ಮಾಹಿತಿ ನೀಡಲು ಕೋರಿದ್ದರು.ಚಂದ್ರಶೇಖರ ಅವರಿಗೆ ಧ್ವನಿಗೂಡಿಸಿ ಹಕ್ಕೊತ್ತಾಯ ಮಂಡಿಸಿದರು ರಾಮಚಂದ್ರಯ್ಯನವರು ಮತ್ತು ಡಾ.ವಿಜಯಾನಂದ ಪೂಜಾರಿಯವರು.ನಾನು ಪ್ರವಾಸದಲ್ಲಿ ಇದ್ದುದರಿಂದ ಸ್ವಲ್ಪ ತಡವಾಗಿ ಈದಿನ ವೀರಭದ್ರನೇ ಬೀರಪ್ಪನು,ಬೀರೇದೇವರು ಎನ್ನುವ ಸತ್ಯಕಥನವನ್ನು ಪೌರಾಣಿಕ ಪ್ರಸಂಗಗಳ ಆಧಾರದಲ್ಲಿ ವಿವರಿಸುವೆ.

ಅದಕ್ಕೂ ಪೂರ್ವದಲ್ಲಿ ಒಂದು ಮಾತನ್ನು ಸ್ಪಷ್ಟಪಡಿಸಿ ಮುಂದೆ ಸಾಗುವೆ.ಕುರುಬರಲ್ಲಿ ಲೇಖಕರು,ಸಾಹಿತಿಗಳೆನ್ನಿಸಿಕೊಂಡವರು ಕುರುಬರ ಬಗ್ಗೆ,ಬೀರೇಶ್ವರರ ಬಗ್ಗೆ ತಮತಮಗೆ ತೋಚಿದಂತೆ ಬರೆದು ಗೊಂದಲವನ್ನುಂಟು ಮಾಡಿದ್ದಾರೆ.ಕೆಲವರಿಗೆ ಸಂಸ್ಕೃತ ಭಾಷೆ ,ಸಾಹಿತ್ಯದ ಅಧ್ಯಯನದ ಕೊರತೆ ಇರುವುದರಿಂದ ಅವರು ದೇಶದ ಅತ್ಯಂತ ಪ್ರಾಚೀನ ಸಂಸ್ಕೃತಿಯಾದ ಹಾಲುಮತ- ಕುರುಬ ಸಂಸ್ಕೃತಿಯನ್ನು ಅರಿಯುವಲ್ಲಿ ವಿಫಲರಾಗಿದ್ದಾರೆ.ಮತ್ತೆ ಕೆಲವರು ಅವರಿವರು ಬರೆದ ಪುಸ್ತಕಗಳನ್ನು ಓದಿ ತಾವೇ ಮಹಾವಿದ್ವಾಂಸರು ಎಂಬಂತೆ ಬರೆದಿದ್ದಾರೆ.ಕುರುಬರ ಬಗ್ಗೆ,ಕುರುಬರ ಸಾಂಸ್ಕೃತಿಕ ಇತಿಹಾಸದ ಬಗ್ಗೆ ನಿಖರ ಅಧ್ಯಯನ ಮಾಡಿ,ಕುರುಬರ ಹಿರಿಮೆಗೆ ಪ್ರಖರಬೆಳಕನ್ನೊಡ್ಡಿದವರು ಶಂ ಬಾ ಜೋಶಿಯವರು.ಶಂ ಬಾ ಜೋಶಿಯವರ ‘ಹಾಲುಮತ ದರ್ಶನ ‘ಕುರುಬರ ಪುರಾಣವೂ ಹೌದು,ಕುರುಬರ ಇತಿಹಾಸ ಕಥನವೂ ಹೌದು.ಕುರುಬರ ಯಾವ ವಿದ್ವಾಂಸರೂ ಇಂದಿನವರೆಗೂ ಶಂ ಬಾ ಜೋಶಿಯವರನ್ನು ಮೀರಿ ಮುನ್ನಡೆದು ಸಂಶೋಧನೆ ಕೈಗೊಂಡಿಲ್ಲ.ಶಂ ಬಾ ಜೋಶಿಯವರು ಐವತ್ತು ವರ್ಷಗಳ ಹಿಂದೆಯೇ ಕುರುಬರ ಬಗ್ಗೆ ಹಾಲುಮತ ಸಂಸ್ಕೃತಿ ,ಹಟ್ಟಿಕಾರ ಸಂಸ್ಕೃತಿಯ ಬಗ್ಗೆ ನಿಖರ ಅಧ್ಯಯನ ಮಾಡಿದ್ದಾರಾದರೂ ಶಂ ಬಾ ಜೋಶಿಯವರ ತಿಳಿವಿಗೆ ದಕ್ಕದ ಕೆಲವು ಹೊಳಹುಗಳಿವೆ,ಐತಿಹಾಸಿಕ ಸುಳಿವುಗಳಿವೆ.ಭಾರತದ ಮೂಲ ನಿವಾಸಿಗಳಾದ ಕುರುಬರನ್ನು ದ್ರಾವಿಡರು ಎನ್ನುತ್ತ ನಂತರ ಆರ್ಯರ ಪ್ರಭಾವಕ್ಕೊಳಗಾಗಿ ಆರ್ಯೀಕರಣಗೊಂಡವರು ಎನ್ನುವುದು ಶಂ ಬಾ ಜೋಶಿಯವರ ನಿಲುವು.ಕುರುಬರ ವಿದ್ವಾಂಸರಲ್ಲಿ ಕೆಲವರು ಕುರುಬರನ್ನು ಆರ್ಯರು ಎಂದು ಭ್ರಮಿಸಿದ್ದಾರೆ.ಭಾರತಕ್ಕೆ ಆರ್ಯರ ಆಗಮನದ ಬಹುಪೂರ್ವದಲ್ಲಿಯೇ ಭಾರತದಲ್ಲಿ ಕುರುಬರು ಇದ್ದರು.ಸಿಂಧೂ ನಾಗರಿಕತೆಯ ಹರಪ್ಪ ಮೊಹಂಜೋದಾರ ಉತ್ಖನನಗಳಲ್ಲಿ ಸಿಕ್ಕ ಪಶುಪತಿ ಶಿವ ,ಲಿಂಗಗಳು ಮತ್ತು ಸ್ತ್ರೀದೇವಿ ವಿಗ್ರಹಗಳು ಕುರುಬರ ಹಾಲುಮತ ಸಂಸ್ಕೃತಿ ಭಾರತದ ಮೂಲಸಂಸ್ಕೃತಿ ಎನ್ನುವುದರ ಸ್ಪಷ್ಟ ಕುರುಹುಗಳು. ವೇದಪೂರ್ವ ಕಾಲದಿಂದಲೂ ಕುರುಬರು ಭಾರತದ ನಿವಾಸಿಗಳಾಗಿದ್ದರು ಎನ್ನುವುದಕ್ಕೆ ವೇದಸಂಹಿತೆಗಳಲ್ಲಿಯೇ ಅತ್ಯಂತ ಪುರಾತನವಾದ ಋಗ್ವೇದದಲ್ಲಿ ಬರುವ ಪುರರಸ್ಸು ಮತ್ತು ಊರ್ವಸಿಯರ ಪ್ರೇಮಪ್ರಕರಣವೇ ಬಹುದೊಡ್ಡ ನಿದರ್ಶನ,ಸಾಕ್ಷಿ.ಕವಿಕುಲಗುರು ಕಾಳಿದಾಸನು ಋಗ್ವೇದದ ಈ ಐತಿಹ್ಯವನ್ನು ಆಧರಿಸಿಯೇ ತನ್ನ ‘ವಿಕ್ರಮೋರ್ವಶೀಯ’ ನಾಟಕವನ್ನು ರಚಿಸಿದ್ದಾನೆ. ಉತ್ತರ ಭಾರತದ ಹಿಮಾಲಯದ ಕೊಳ್ಳಗಳಲ್ಲಿ ಗಂಧರ್ವರ ಎರಡು ಪಂಗಡಗಳಿದ್ದು ಊರ್ವಸಿಯು ಒಂದು ಪಂಗಡಕ್ಕೆ ಸೇರಿದ ಸುಂದರಿಯಾಗಿದ್ದರೆ ಪುರುರಸ್ಸು ಮತ್ತೊಂದು ಪಂಗಡದ ದೊರೆ,ಮುಖ್ಯಸ್ಥ.ಒಂದು ದಿನ ಊರ್ವಸಿಯನ್ನು ಕಂಡು ಅವಳ ಅಲೌಕಿಕ ಸೌಂದರ್ಯಕ್ಕೆ ಮಾರುಹೋಗಿ ಅವಳನ್ನು ತನ್ನರಮನೆಗೆ ಕರೆ ತರುವನು.ಊರ್ವಸಿಯು ಪುರರಸ್ಸುವಿನ ಹಿಂದೆ ಹೋಗಿದ್ದು ಅವಳ ಪಂಗಡದವರಿಗೆ ಸರಿ ಕಾಣಿಸುವುದಿಲ್ಲ.ಬಹುದಿನಗಳಾದರೂ ತಮ್ಮ ಬೀಡಿಗೆ ಮರಳಿ ಬಾರದ ಊರ್ವಸಿಯನ್ನು ಮರಳಿ ತಮ್ಮ ಬೀಡಿಗೆ ತರಲು ಒಂದು ಉಪಾಯ ಯೋಜಿಸುವರು.ಊರ್ವಸಿಗೆ ಆಡಿನ ಮೇಲೆ ಬಹಳ ಪ್ರೀತಿ ಇದ್ದುದರಿಂದ ಅವಳ ಅರಮನೆಯಲ್ಲಿ ಮರಿಸಮೇತ ಒಂದು ಆಡನ್ನು ಕಟ್ಟಿ ಬರುವರು.ಮರುದಿನ ತಾಯಿ ಆಡನ್ನು ಕದ್ದು ಒಯ್ಯುವರು.ಆಡು ಮರಿ ಬ್ಯಾ ಬ್ಯಾ ಎಂದು ತನ್ನ ತಾಯಿಯನ್ನು ಕೂಗಿ ಕರೆಯುವುದರಿಂದ ಊರ್ವಸಿಯು ತಾಯಿ ಆಡನ್ನು ಹುಡುಕಿಕೊಂಡು ಹೊರಬರುತ್ತಾಳೆ.ಆಕೆಯನ್ನು ಕರೆದುಕೊಂಡು ಬೀಡಿಗೆ ಹಿಂದಿರುಗಬೇಕು ಎನ್ನುವುದು ಊರ್ವಸಿಯ ಬಣಪ್ರಮುಖರ ಯೋಚನೆ.ಇದು ಋಗ್ವೇದದ ಪ್ರಸಂಗ.ಈ ಪ್ರಸಂಗವನ್ನೇ ಮತ್ತಷ್ಟು ವಿಸ್ತರಿಸಿ ಊರ್ವಸಿಯ ಷರತ್ತುಗಳು,ಷರತ್ತಿಗೊಳಗಾಗಿ ಅವಳನ್ನು ಅನುಭವಿಸದೆ ಪರಿತಪಿಸುವ ಪುರರಸ್ಸು ಮತ್ತು ಕೊನೆಗೊಂದು ರಾತ್ರಿ ಷರತ್ತು ಉಲ್ಲಂಘಿಸಿದ ಪುರರಸ್ಸುವನ್ನು ತೊರೆದು ಹೋಗುವ ಪ್ರಸಂಗಗಳನ್ನು ಸೇರಿಸಿದ್ದಾರೆ ವೇದವ್ಯಾಸರು ಮಹಾಭಾರತದಲ್ಲಿ.ಋಗ್ವೇದದ ಪ್ರಸಂಗವನ್ನು ಓದಿ,ಮಹಾಭಾರತದ ಪ್ರಸಂಗದಿಂದ ಸ್ಫೂರ್ತಿಗೊಂಡು ಅಮರಪ್ರೇಮಕಾವ್ಯವಾಗಬಲ್ಲ ಒಂದು ನಾಟಕ ರಚಿಸಿದ ಮಹಾಕವಿ ಕಾಳಿದಾಸ.ಋಗ್ವೇದದಲ್ಲಿ ಬರುವ ದಸ್ಯುಗಳು ಮತ್ತು ಪಣಿಗಳು ಕುರುಬರು.ಇವರೇ ಮುಂದೆ ಉತ್ತರ ಭಾರತದಲ್ಲಿ ಪಾಲರು ಆದರು.ಋಗ್ವೇದದಲ್ಲಿರುವ ಅಹೀರರು ಕುರುಬರು.ಅವರೇ ಪಾಶುಪತಶೈವಮತ ಸ್ಥಾಪಕರು.ನೇಪಾಳದ ಪಶುಪತಿನಾಥನನ್ನು ಸ್ಥಾಪಿಸಿ,ಪೂಜೆ ಸಲ್ಲಿಸಿದವರು ಅಹೀರಬುಡಕಟ್ಟಿನ ಕುರುಬರು.

ಸಿಂಧೂನದಿ ಸಂಸ್ಕೃತಿಯ ಪೂರ್ವದಲ್ಲಿ ಭಾರತದ ಗೊಂಡಾರಣ್ಯವು ಕುರುಬರ ಮೂಲ ನೆಲೆಯಾಗಿತ್ತು.ಬುಡಕಟ್ಟು ಮೂಲದ ಕುರುಬರು ಇಡೀ ದೇಶದಾದ್ಯಂತ ವಾಸಿಸುತ್ತಿರುವ ಅತ್ಯಂತ ಪುರಾತನ ಜನಾಂಗ.ಉತ್ತರ ಭಾರತದ ನದಿಕೊಳ್ಳಗಳಲ್ಲಿ,ಮಧ್ಯಭಾರತದ ಗೊಂಡ್ವಾನ ಮತ್ತು ದಕ್ಷಿಣ ಭಾರತದ ದಂಡಕಾರಣ್ಯಗಳು ಕುರುಬರ ಮೂಲ ನೆಲೆಗಳಾಗಿದ್ದವು.ನಂತರ ವಿಂಧ್ಯಪರ್ವತ,ತಮಿಳುನಾಡಿನ ಬೆಟ್ಟ ಗುಡ್ಡಗಳು,ಕರ್ನಾಟಕ ಮಹಾರಾಷ್ಟ್ರದ ಗಿರಿ ಗುಹೆ ಕಂದರ ನದಿ ತೀರಗಳಲ್ಲಿ ನೆಲೆಕಂಡುಕೊಂಡರು.ಗೋಂಡಿಭಾಷೆ ಮತ್ತು ಅದನ್ನು ಹೋಲುವ ಪ್ರಾಕೃತ ಭಾಷೆಯು ಆದಿವಾಸಿ ಕುರುಬರ ಭಾಷೆಯಾಗಿತ್ತು.ಶಂ ಬಾ ಜೋಶಿಯವರು ಊಹಿಸಿದಂತೆ ಕಂದಮಿಳ ಭಾಷೆಯು ಅಷ್ಟು ಪುರಾತನ ಭಾಷೆಯಲ್ಲ.ತಮಿಳುನಾಡು ಕರ್ನಾಟಕದ ಕುರುಬರು ಆಡುತ್ತಿದ್ದ ಭಾಷೆಯೇ ಕಂದಮಿಳ.ಆದರೆ ಋಗ್ವೇದ ಪೂರ್ವಕಾಲದಿಂದಲೂ ಭಾರತದ ಮೂಲನಿವಾಸಿಗಳಾಗಿ ಕುರುಬರು ಇದ್ದರಲ್ಲ ! ಕುರುಬರು ಭಾರತದ ಮೂಲನಿವಾಸಿಗಳಾದ ಶೂದ್ರರು,ದ್ರಾವಿಡರು ಎನ್ನುವುದಕ್ಕೆ ಹಿನ್ನೆಲೆಯಾಗಿ ಈ ವಿಚಾರವನ್ನು ಪ್ರಸ್ತಾಪಿಸಿದ್ದೇನೆ.ಕುರುಬರು ನೆಲಮೂಲನಿವಾಸಿಗಳಾದ ದ್ರಾವಿಡರೇ ಹೊರತು ಅವರು ಆರ್ಯರಲ್ಲ.

ಕುರುಬರು ಮೂಲತಃ ಶಿವೋಪಾಸಕರು,ಶಿವ ಕುರುಬರ ಆರಾಧ್ಯದೇವರು.ಹಾಲುಮತವು ಪಾರ್ವತಿಯ ಎದೆಹಾಲಿನಿಂದ ಹುಟ್ಟಿದ ಮತ ಎನ್ನುವಲ್ಲಿ ಕುರುಬರ ಶೈವಮೂಲವಿದೆ.ಕುರುಬರ ಜಾನಪದ ಕಥೆಗಳಂತೆ ಶಿವ ಪಾರ್ವತಿಯರು ಭೂಲೋಕ ಪ್ರದಕ್ಷಿಣೆ ಮಾಡುತ್ತ ಗೊಂಡಾರಣ್ಯದಲ್ಲಿ ವಿಶ್ರಮಿಸಿಕೊಳ್ಳಲು ತಂಗುವರು.ಪಾರ್ವತಿಯ ಎದೆ ಬಿರಿದು ಹಾಲು ಉಕ್ಕುವುದು.ಪಾರ್ವತಿಯ ಎದೆ ಹಾಲು ವ್ಯರ್ಥವಾಗಬಾರದೆಂದು ಶಿವನು ಪಾರ್ವತಿಯ ಎದೆಹಾಲು ಬಿದ್ದ ನೆಲದ ಮಣ್ಣಿನಿಂದ ಒಂದು ಗಂಡು,ಒಂದು ಹೆಣ್ಣು ಹೀಗೆ ಎರಡು ಮಣ್ಣಿನ ಗೊಂಬೆಗಳನ್ನು ಮಾಡುವನು.ಪಾರ್ವತಿಯ ಆಗ್ರಹಕ್ಕೆ ಮಣಿದು ಆ ಮಣ್ಣಿನ ಗೊಂಬೆಗಳಿಗೆ ಜೀವ ತುಂಬಿ ಗಂಡುಗೊಂಬೆಗೆ ಮುದ್ದುಕೊಂಡ ಎಂದೂ ಹೆಣ್ಣುಗೊಂಬೆಗೆ ಮುದ್ದವ್ವ ಎಂದು ಹೆಸರಿಡುವನು.ಪಾರ್ವತಿಯ ಎದೆಹಾಲಿನಿಂದ ಹುಟ್ಟಿ ಪರಮೇಶ್ವರನ ಪ್ರೀತಿಯನ್ನು ಕೊಂಡವನಾದ ಮುದ್ದುಕೊಂಡನೇ ಗೊಂಡಾರಣ್ಯವಾಸಿಯಾದ ಮುದ್ದುಗೊಂಡನಾಗಿ ಕುರುಬರ ಮೂಲಪುರುಷನಾದ.ಶಿವನು ಹುತ್ತದಿಂದ ಕುರಿಗಳನ್ನು ಸೃಷ್ಟಿಸಿ ಕುರಿಕಾಯುವ ಕಸುಬನ್ನು ಮುದ್ದುಗೊಂಡ ಮತ್ತು ಮುದ್ದವ್ವೆಯರ ಕುಲಕಸುಬನ್ನಾಗಿ ನಿರ್ಣಯಿಸಿದ. ತನ್ನ ಜಟೆಯ ಕೂದಲಿನಿಂದ ಕಂಬಳಿಯನ್ನು ತಯಾರಿಸಿ ಮುದ್ದುಗೊಂಡನ ರಕ್ಷಣೆಗೆಂದು ಅದನ್ನು ನೀಡುವನು.ಇದು ಕುರುಬರ ಶೈವಮೂಲ ಕಥೆ.

ಕುರುಬರ ಮೂಲಪುರುಷನು ಮುದ್ದುಕೊಂಡನಾದರೆ ಕುರುಬರಿಗೆ ಐತಿಹಾಸಿಕ- ಸಾಂಸ್ಕೃತಿಕ ಮಹತ್ವನೀಡಿದವನು ವೀರಭದ್ರನು.ವೀರಭದ್ರನೇ ಕುರುಬರ ಮೂಲ ಪುರುಷನು.ವೇದವ್ಯಾಸರು ರಚಿಸಿದ ಶಿವಮಹಾಪುರಾಣ,ವಾಯುಪುರಾಣ,ಸ್ಕಂದ ಮಹಾಪುರಾಣಗಳಲ್ಲಿ ವಿವರವಾಗಿ ಇತರ ಪುರಾಣಗಳಲ್ಲಿ ಉಪಕಥೆಯಾಗಿ ಬರುವ ದಕ್ಷಯಜ್ಞಧ್ವಂಸ ಪ್ರಕರಣವು ಭಾರತದ ಮೂಲನಿವಾಸಿಗಳಾದ ಕುರುಬರಿಗೂ ಮತ್ತು ಹೊರಗಿನಿಂದ ಬಂದ ಆರ್ಯರಿಗೂ ನಡೆದ ಹೋರಾಟದ ಸತ್ಯಕಥೆ,ನಿಜ ಚಿತ್ರಣವಾದ್ದರಿಂದ ಕುರುಬರು ಆರ್ಯರು ಎಂದು ವಾದಿಸುವುದು ಹಾಸ್ಯಾಸ್ಪದ ಸಂಗತಿಯು.ನೆಲಮೂಲಜನರಾದ ಕುರುಬರು ಭಕ್ತಿಸಂಸ್ಕೃತಿಯ ಶಿವೋಪಾಸಕರು.ಆರ್ಯರು ಯಜ್ಞಸಂಸ್ಕೃತಿಯ ಜನರು.ಭಕ್ತಿ ಸಂಸ್ಕೃತಿ ಮತ್ತು ಯಜ್ಞಸಂಸ್ಕೃತಿಗಳ ನಡುವಿನ ಹೋರಾಟವೇ ಶ್ರೀ ವೀರಭದ್ರನಿಂದ ದಕ್ಷಯಜ್ಞಧ್ವಂಸ ಪ್ರಸಂಗ.ಇದೇ ದ್ರಾವಿಡರು ಆರ್ಯರ ನಡುವಿನ ಹೋರಾಟ.ಆರ್ಯರು ಅಲೆ ಅಲೆಯಾಗಿ ಹಲವು ಅಲೆಗಳಲ್ಲಿ ವಾಯುವ್ಯಮೂಲೆಯಿಂದ ಭಾರತವನ್ನು ಪ್ರವೇಶಿಸುವರು.ಬಹುಶಃ ಆರ್ಯರ ಎರಡನೆಯ ಅಲೆಯು ಭಾರತಪ್ರವೇಶಿಸಿದ ಸಂದರ್ಭದಲ್ಲಿ ದಕ್ಷಯಜ್ಞಧ್ವಂಸ ಪ್ರಸಂಗವು ಘಟಿಸಿರಬೇಕು.ಋಗ್ವೇದದ ‘ಪುರಂದರ’ ಖ್ಯಾತಿ ಯ ಇಂದ್ರನೇ ಹರಪ್ಪನಾಗರಿಕತೆಯ ವಿದ್ವಂಸಕ ಆರ್ಯದೇವನಾಗಿದ್ದು ಹರಪ್ಪನಾಗರಿಕತೆಯ ಧ್ವಂಸದಿಂದ ಭಾರತದಲ್ಲಿ ಭದ್ರವಾಗಿ ನೆಲೆಯೂರಿದ ಆರ್ಯರು ದೇಶವಾಸಿಗಳಾದ ಮೂಲನಿವಾಸಿ ಜನಾಂಗಗಳೊಡನೆ ಕಾದು ತಮ್ಮ ಯುದ್ಧಾಸ್ತ್ರಗಳಿಂದ ಅವರನ್ನು ಮಣಿಸಿ ತಮ್ಮ ಪ್ರಭುತ್ವ ಸ್ಥಾಪಿಸುತ್ತಾರೆ.ಪ್ರಭುತ್ವಸ್ಥಾಪಿಸಿದ ಆರ್ಯರು ದೇಶವಾಸಿಗಳ ಧರ್ಮ ಸಂಸ್ಕೃತಿ ನಂಬಿಕೆಗಳ ಮೇಲೆ ದಾಳಿ ಮಾಡುತ್ತಾರೆ.ಇದಕ್ಕೆ ಪ್ರತ್ಯುತ್ತರ ಕೊಟ್ಟು ಆರ್ಯರ ಅಟ್ಟಹಾಸವನ್ನು ಅಡಗಿಸಿದ ಗಂಡುಗಲಿ,ಮಹಾವೀರನೇ ವೀರಭದ್ರನು.

ದಕ್ಷಯಜ್ಞಧ್ವಂಸದ ಪ್ರಕರಣವನ್ನು ಸ್ವಲ್ಪ ಆರೈದು ನೋಡಿದರೆ ದಕ್ಷನು ಶಿವನಿಗೆ ಪ್ರತಿಯಾಗಿ ವಿಷ್ಣುವನ್ನು ಯಜ್ಞಪುರುಷನನ್ನಾಗಿ ಪ್ರತಿಷ್ಠಾಪಿಸ ಹೊರಡುವನು.ವಿಷ್ಣುವು ಆರ್ಯರ ದೇವತೆಯಾದರೆ ಶಿವನು ಮೂಲನಿವಾಸಿ,ಬುಡಕಟ್ಟು ಜನಾಂಗದ ದೇವರು.ಶಿವನಿಗೆ ಪ್ರತಿಯಾಗಿ ವಿಷ್ಣುವನ್ನು ಯಜ್ಞಪುರುಷನನ್ನಾಗಿ ಮಾಡುವ ಪ್ರಯತ್ನವೆಂದರೆ ಬುಡಕಟ್ಟು ಜನಾಂಗದ ದ್ರಾವಿಡ ಸಂಸ್ಕೃತಿಯ ಮೇಲೆ ಆರ್ಯಸಂಸ್ಕೃತಿಯ ಪ್ರತಿಷ್ಠಾಪನೆ ಎಂದರ್ಥ.ಇದನ್ನು ಮೊದಲು ಪ್ರತಿಭಟಿಸಿದವಳು ಒಬ್ಬಸ್ತ್ರೀ,ಶಿವಪತ್ನಿಯಾದ ಸತಿಯು.ತನ್ನ ಗಂಡನ ಯಜ್ಞಪುರುಷ ಪಟ್ಟವನ್ನು ವಿಷ್ಣುವಿಗೆ ಕಟ್ಟಲೆತ್ನಿಸಿದ ತಂದೆ ದಕ್ಷನ ದುಸ್ಸಾಹಸವನ್ನು ಖಂಡಿಸುವ ಸತಿಯು ತಂದೆಯಿಂದ ತನ್ನ ಪತಿಯ ನಿಂದನೆಯ ಬಿರುನುಡಿಗಳನ್ನು ಕೇಳಿ ಯೋಗಾಗ್ನಿಯಿಂದ ಆತ್ಮಾಹುತಿ ಮಾಡಿಕೊಳ್ಳುವಳು.ಸತಿಯ ಆತ್ಮಾರ್ಪಣೆಯ ಸುದ್ದಿ ಕೇಳಿ ಕನಲಿ ಕೆಂಡವಾದ ಶಿವನು ತನ್ನ ಜಟೆಯನ್ನು ಕೈಲಾಸದ ಬಂಡೆಗೆ ಅಪ್ಪಳಿಸಿ,ವೀರಭದ್ರನನ್ನು ಸೃಷ್ಟಿಸಿ ದಕ್ಷಯಜ್ಞಧ್ವಂಸಕ್ಕೆ ಅಪ್ಪಣೆಯನ್ನೀಯುವನು.ವೀರಭದ್ರನು ಬ್ರಹ್ಮ,ವಿಷ್ಣು,ಇಂದ್ರ,ಸೂರ್ಯ,ಚಂದ್ರಾದಿ ದೇವತೆಗಳನ್ನು ಅಟ್ಟಾಡಿಸಿ ಹೊಡೆದು ಓಡಿಸುವನು.ನಾಯಿಯನ್ನು ಹಿಡಿದೆಳೆದು ತರುವಂತೆ ದಕ್ಷನನ್ನು ದರದರನೆ ಹಿಡಿದು ಎಳೆತಂದು ಅವನ ಶಿರವನ್ನು ಕತ್ತರಿಸಿ ಯಜ್ಞಕುಂಡದಲ್ಲಿ ಹಾಕಿ ಸತಿಯ ಆತ್ಮಾರ್ಪಣೆಯ ಸೇಡು ತೀರಿಸಿಕೊಳ್ಳುವನು.ದಕ್ಷಪತ್ನಿಯ ಪ್ರಲಾಪ ಮತ್ತು ಶಿವನ ಆಜ್ಞೆಯಂತೆ ದಕ್ಷನಿಗೆ ಪ್ರಾಣದಾನ ಮಾಡುವನು.ವೀರಭದ್ರನು ದಕ್ಷನ ತಲೆಯನ್ನು ಕತ್ತರಿಸಿ ಯಜ್ಞಕುಂಡದಲ್ಲಿ ಬಿಸುಟು ಸುಟ್ಟಿದ್ದರಿಂದ ಅವನಿಗೆ ಮೂಲತಲೆಯನ್ನು ಇಡುವಂತಿರಲಿಲ್ಲ ಪ್ರಾಣದಾನ ಗೈಯಲು.ಹಾಗಾಗಿಯೇ ವೀರಭದ್ರನು ಒಂದು ಟಗರಿನ ತಲೆಯನ್ನು ಕತ್ತರಿಸಿ ದಕ್ಷನ ಮುಂಡಕ್ಕೆ ಅದನ್ನಿಟ್ಟು’ ಓಂ ನಮಃ ಶಿವಾಯ’ ಎನ್ನುವ ಶಿವಷಡಕ್ಷರಿ ಮಂತ್ರದಿಂದ ಅಭಿಮಂತ್ರಿಸಲ್ಪಟ್ಟ ಜಲವನ್ನು ಅವನ ಕುರಿತಲೆಯ ಶಿರ ಮತ್ತು ಮುಂಡಕ್ಕೆ ಸಂಪ್ರೋಕ್ಷಿಸಿ,ಪ್ರಾಣದಾನ ಗೈಯುವನು.ದಕ್ಷನು ಕುರಿತಲೆಯವನಾಗಿ ಮರುಹುಟ್ಟು ಪಡೆಯುವನು.ಬ್ರಾಹ್ಮಣ್ಯದ ಅಹಂ ಅಳಿದುಕೊಂಡ ದಕ್ಷನು ಟಗರುದಲೆಯವನಾಗಿ ಶಿವಭಕ್ತನಾಗಿ ವೀರಭದ್ರನಿಗೆ ಶರಣಾಗಿ ಶಿವೋಪದೇಶ ಪಡೆಯುವನು.ಅಂದು ವೀರಭದ್ರನು ಉಪದೇಶಿಸಿದ ಶೈವವೇ ಶೈವದ ಮೊದಲ ಶಾಖೆಯಾದ ಪಾಶುಪತಶೈವವು ( ವೀರಶೈವರು ಇದನ್ನೇ ವೀರಶೈವ ಮತವೆನ್ನುತ್ತಾರೆ ತಮ್ಮ ಮತದ ಪ್ರಾಚೀನತೆಯನ್ನು ಸಾಧಿಸಲು.ವೀರಶೈವಮತವು ಎಂಟನೆಯ ಶತಮಾನದಿಂದೀಚೆಗೆ ಕಾಣಿಸಿಕೊಳ್ಳುವ ಶೈವಧರ್ಮದ ಶಾಖೆಯೇ ಹೊರತು ಪುರಾತನ ಶೈವವಲ್ಲ ) ದಕ್ಷನು ಪಶುತಲೆಯವನಾಗಿ ಮರುಹುಟ್ಟು ಪಡೆದದ್ದೇ ಪಾಶುಪತ ಶೈವವು.ದಕ್ಷನು ತನ್ನ ಅಹಮಿಕೆಯ ಪಶುಸ್ವಭಾವವನ್ನು ಕಳೆದುಕೊಂಡು ಹಸುಸ್ವರೂಪದ ಶಿವಭಕ್ತಸಾಧುವಾಗಿ ಪರಿವರ್ತನೆ ಗೊಂಡಿದ್ದೇ ಪಾಶುಪತ ಶೈವವು.ವೀರಭದ್ರನು ಬೋಧಿಸಿದ್ದು ಜೀವರುಗಳೆಂಬ ಕುರಿಗಳು,ಗುರುವೆಂಬ ಕುರುಬನು ಮತ್ತು ಜಗತ್ತು ಎನ್ನುವ ಪಾಶವಾದ ಕುರಿಹಟ್ಟಿಯ ಪಾಶ ಎನ್ನುವ ಪಶು,ಪಾಶ ಮತ್ತು ಪತಿತತ್ತ್ವಗಳ ಪಾಶುಪತ ಶೈವವನ್ನು.ಇದು ಕುರುಬರ ಮೂಲ,ಹಿರಿಮೆ.ವೀರಭದ್ರನೇ ಕುರುಬರ ಪ್ರಥಮಾಚಾರ್ಯನು.ದಕ್ಷನು ವೀರಭದ್ರನ ಶಿಷ್ಯನಾಗುವ ಮೂಲಕ ಕುರುಬರ ಹಾಲುಮತದ ಮೂಲಪುರುಷನಾದ.ದಕ್ಷನು ವೀರಭದ್ರನಿಂದ ಟಗರು ತಲೆಯವನಾಗಿ ಮರುಹುಟ್ಟು ಪಡೆಯುವುದು ಶೈವಮತದ ಮತ್ತೊಂದು ಶಾಖೆಯಾಗಿ ಹಾಲುಮತವು ಉದಯಿಸುವ ಪುರಾತನ ಇತಿಹಾಸ,ಸಾಕ್ಷಿ.

ವೀರಭದ್ರನು ದಕ್ಷಯಜ್ಞಧ್ವಂಸಗೊಳಿಸಿದ ಪ್ರಸಂಗದಲ್ಲಿ ಅವನು ಇಂದ್ರನ ಮೇಲೆಯೂ ದಾಳಿ ಮಾಡಿ ಇಂದ್ರನನ್ನು ಒದ್ದೋಡಿಸುತ್ತಾನೆ ಎನ್ನುವ ಸಂಗತಿಯು ಒಂದು ಐತಿಹಾಸಿಕ ಸತ್ಯದತ್ತ ನಮ್ಮ ಗಮನವನ್ನು ಸೆಳೆಯುತ್ತದೆ.ಮೂರು ಅಲೆಗಳಲ್ಲಿ ಆರ್ಯರು ಭಾರತಕ್ಕೆ ವಲಸೆ ಬಂದರು ಎಂದು ಇತಿಹಾಸಕಾರರು ಗುರುತಿಸಿದ್ದಾರೆ.ಮೊದಲ ಅಲೆಯಲ್ಲಿ ಬಂದ ಆರ್ಯರು ಮೂಲನಿವಾಸಿಗಳಾದ ದ್ರಾವಿಡರ ಪುರಗಳನ್ನು ನಾಶಗೊಳಿಸಿದರು.’ ಪುರಂದರ’ ಅಂದರೆ ಪುರಗಳನ್ನುನಾಶಮಾಡಿದ ಇಂದ್ರ ಮೊದಲ ಅಲೆಯ ಆರ್ಯರೊಂದಿಗೆ ಭಾರತಕ್ಕೆ ಬಂದಿದ್ದ ಆರ್ಯರ ದೇವತೆ.ಆ ಇಂದ್ರನ ವಿರುದ್ಧ ವೀರಭದ್ರನು ವಿಜಯ ಸಾಧಿಸುತ್ತಾನೆ ಎಂದರೆ ದಕ್ಷಯಜ್ಞಧ್ವಂಸದ ‘ವೀರಭದ್ರವಿಜಯ’ ಪ್ರಸಂಗವು ಆರ್ಯರ ಆಗಮನದ ಎರಡನೆಯ ಅಲೆಯ ಕಾಲಘಟ್ಟದ ಐತಿಹಾಸಿಕ ಸಂಗತಿ ಎಂದರ್ಥ. ಈ ಹಿನ್ನೆಯಲ್ಲಿ ವೀರಭದ್ರನು ಒಬ್ಬ ಪುರಾಣಪುರುಷನೂ ಹೌದು ಐತಿಹಾಸಿಕ ಮಹಾವೀರನೂ ಹೌದು.ಈ ವೀರಭದ್ರನೇ ಬೀರಪ್ಪನು.ವೀರ – ಬೀರ ಎರಡೂ ಒಂದೆ.ಸಂಸ್ಕೃತದ ವೀರನು ಕನ್ನಡದ ಬೀರನಾಗಿದ್ದಾನೆ.ಎಂಟು ಒಂಬತ್ತನೆಯ ಶತಮಾನಗಳಲ್ಲಿ ವೀರಶೈವ ಮತವು ಪ್ರವರ್ಧಮಾನಕ್ಕೆ ಬಂದಾಗ ವೀರಶೈವರು ವೀರಭದ್ರನನ್ನು ವೀರಶೈವ ಮತಸ್ಥಾಪಕ ಎಂದು ಗುರುತಿಸಿಕೊಂಡು ಅವನನ್ನು ಪೂಜಿಸತೊಡಗಿದರು.ಕುರುಬರ ಬುಡಕಟ್ಟು ಮೂಲದ ಜನಾಂಗವಾಗಿದ್ದರಿಂದ ಕುರುಬರ ಬೀರಪ್ಪನು ವೀರಶೈವರ ವೀರಪ್ಪ,ವೀರಭದ್ರನಾದನು. ವೀರಭದ್ರ ಮತ್ತು ಬೀರಪ್ಪನ ಪೂಜಾಪದ್ಧತಿಯಲ್ಲಿ ಇಂದಿಗೂ ಸಾಮ್ಯತೆಗಳು ಉಳಿದುಕೊಂಡು ಬಂದಿವೆ.ಬೀರಪ್ಪನ ಪೂಜೆಯಲ್ಲಿ ವೀರಗಾಸೆ ಕುಣಿತವಿದ್ದರೆ ವೀರಭದ್ರನಿಗೆ ಪುರವಂತಿಕೆ ಸೇವೆ ಇದೆ.ಪೂಜಾರಿಗಳು,ಪುರವಂತರು ಧರಿಸುವ ಬೀರಪ್ಪ ಮತ್ತು ವೀರಭದ್ರರ ವೇಷಭೂಷಣಗಳು ಒಂದೇ ತೆರನಾಗಿರುತ್ತವೆ.ವೀರಭದ್ರನು ಪುರುಷಾಕಾರದಲ್ಲಿ ಪೂಜೆಗೊಳ್ಳುತ್ತಿದ್ದರೆ ಬೀರಪ್ಪನು ಲಿಂಗಾಕಾರದಲ್ಲಿ ಪೂಜೆಗೊಳ್ಳುತ್ತಿರುವುದರಿಂದ ಬೀರಲಿಂಗ ಎನ್ನಿಸಿಕೊಂಡಿರುವನು.ಕೆಲವು ಕಡೆ ಕ್ವಚಿತ್ತಾಗಿ ಬೀರಪ್ಪನಿಗೂ ಮುಖಮಂಡಲವಿದೆ.ಬೀರಪ್ಪನಿಗೂ ಸಸ್ಯಾಹಾರ ನೈವೇದ್ಯ,ವೀರಭದ್ರನಿಗೂ ಸಸ್ಯಾಹಾರವೇ ನೈವೇದ್ಯ.ವೀರಭದ್ರನ ದೇವಸ್ಥಾನದಲ್ಲಿ ಗುಗ್ಗುಳದ ಧೂಪಕೊಟ್ಟರೆ ಬೀರಪ್ಪನ ಗುಡಿಯಲ್ಲಿ ಲೋಬಾನದ ಹೊಗೆಯನ್ನೆಬ್ಬಿಸುತ್ತಾರೆ.

ಕೆಲವು ಜನ ಕುರುಬರ ವಿದ್ವಾಂಸರು,ಲೇಖಕರು ಪ್ರಸ್ತಾಪಿಸುವ ಕುರುಬರ ಹಾಲುಮತೋತ್ತೇಜಕ ಪುರಾಣ,ಮೇಷವಿಜಯ ಮೊದಲಾದವುಗಳು ಹದಿನಾಲ್ಕನೇ ಶತಮಾನದಿಂದ ಹತ್ತೊಂಬತ್ತನೆಯ ಶತಮಾನದವರೆಗಿನ ಕುರುಬರ ಜಾನಪದ ಕಥೆ,ಐತಿಹ್ಯಗಳನ್ನು ಆಧರಿಸಿದ ರಚನೆಗಳಾಗಿದ್ದು ಅವು ಕುರುಬರ ಪುರಾತನ ಇತಿಹಾಸವಲ್ಲ.ಅವುಗಳಲ್ಲಿ ಬರುವ ಭರುಮ,ಪದ್ಮಗೊಂಡ,ನಾರಾಯಣ,ಕಾಳಿನಾರಾಯಣಿ,ಗೌಡ,ಮಾಯಮ್ಮ ಮೊದಲಾದ ಹೆಸರುಗಳು ಪೂರ್ವಕಾಲದ ಹೆಸರುಗಳಲ್ಲ ಎನ್ನುವುದನ್ನು ಗಮನಿಸಬೇಕು.ಹಾಗಾಗಿ ಕುರುಬರು ವೀರಭದ್ರನನ್ನೇ ತಮ್ಮ ಮೂಲಪುರುಷನಾದ ಬೀರಪ್ಪನೆಂದು ತಿಳಿದುಕೊಳ್ಳಬೇಕು.

೨೦.೦೨.೨೦೨೪

About The Author