ವೇಷಧಾರಿಯಾಗಿದ್ದರೂ ವಿಭೂತಿ ಧರಿಸಿದವರನ್ನು ನಂಬುತ್ತಿದ್ದರು ಬಸವಣ್ಣನವರು !

ಬಸವೋಪನಿಷತ್ತು ೪೬ : ವೇಷಧಾರಿಯಾಗಿದ್ದರೂ ವಿಭೂತಿ ಧರಿಸಿದವರನ್ನು ನಂಬುತ್ತಿದ್ದರು ಬಸವಣ್ಣನವರು ! —ಮುಕ್ಕಣ್ಣ ಕರಿಗಾರ

ಅಡ್ಡ ತ್ರಿಪುಂಡ್ರದ ಮಣಿಮುಕುಟದ ವೇಷದ ಶರಣರ ಕಂಡರೆ
ನಂಬುವುದೆನ್ನ ಮನವು,ನಚ್ಚುವುದೆನ್ನ ಮನವು ಸಂದೇಹವಿಲ್ಲದೆ,
ಇವಿಲ್ಲದವರ ಕಂಡರೆ ನಂಬೆ,ಕೂಡಲ ಸಂಗಮದೇವಾ.

ಶಿವವೇಷಲಾಂಛನಧಾರಿಗಳನ್ನು ಶಿವನೆಂದೇ ನಂಬುವ ಮುಗ್ಧ,ನೈಜ ಭಕ್ತಿ ಬಸವಣ್ಣನವರದು.ಶರಣರು ಎಂದುಕೊಳ್ಳುತ್ತ ಬೆಳ್ಳಿ ಬಂಗಾರ ಮುತ್ತು ಮಾಣಿಕ್ಯಗಳ ಕಿರೀಟಧರಿಸಿದವರು ವೇಷಧಾರಿಗಳಾಗಿದ್ದರೂ ಅವರ ಹಣೆಯಲ್ಲಿ ಮೂರುಬೆರಳ ವಿಭೂತಿ ಇರುವುದರಿಂದ ಅಂತಹವರನ್ನು ಶಿವಶರಣರೆಂದೂ ನಂಬುವೆ ,ಆದರಿಸುವೆ ಇದರಲ್ಲಿ ಸಂದೇಹವೇ ಇಲ್ಲ ಎನ್ನುವ ಬಸವಣ್ಣನವರು ಹಣೆಯಲ್ಲಿ ವಿಭೂತಿ ಧರಿಸದ ಯಾರನ್ನೂ ನಂಬಲಾರೆ ಎನ್ನುತ್ತಾರೆ.ಶಿವಭಕ್ತರಾದವರು ನಿಜಶರಣರಲ್ಲದಿದ್ದರೂ ಶಿವಲಾಂಛನಧಾರಿಗಳನ್ನು ಗೌರವಿಸಬೇಕು ಎನ್ನುವ ಸಂದೇಶ ನೀಡುವಲ್ಲಿ ವೇಷಧಾರಿಗಳ ಕರ್ಮ ಅವರನ್ನೇ ತಿನ್ನುತ್ತದೆ, ಭಕ್ತರು ವಿಭೂತಿಗೆ ಗೌರವಿಸಿದರೆ ಅದು ಶಿವನಿಗೆ ಕೊಡುವ ಗೌರವಾದ್ದರಿಂದ ವಿಭೂತಿಯನ್ನು ಕಂಡುಗೌರವಿಸಬೇಕು ಎಂದು ಉಪದೇಶಿಸಿದ್ದಾರೆ.

ಬಸವಣ್ಣನವರ ಭಕ್ತ್ಯಾತಿಶಯದ ಮುಗ್ಧ ಶಿವಭಕ್ತಿಯನ್ನು ಅಲ್ಲಮ ಪ್ರಭುದೇವರಾದಿ ಕೆಲವು ಜನ ಶರಣರು ಪ್ರಶ್ನಿಸಿದ್ದುಂಟು ; ‘ ಲಾಂಛನಧಾರಿಗಳನ್ನೆ ಶಿವನೆಂಬೆ’ ಎನ್ನುವ ಬಸವಣ್ಣನವರ ಮುಗ್ಧ ಭಕ್ತಿಯನ್ನು ಆಕ್ಷೇಪಿಸಿದ್ದುಂಟು.ಈ ವಚನವು ಸಹ ಅಂತಹದೆ ಒಂದು ಪ್ರಸಂಗದಲ್ಲಿ ರಚನೆಗೊಂಡಿರಬಹುದೆಂದು ತೋರುತ್ತದೆ.ಶಿವನಲ್ಲಿ ಅನನ್ಯ,ಅದ್ವಿತೀಯ ಭಕ್ತಿಯನ್ನುಳ್ಳ ಬಸವಣ್ಣನವರು ಶಿವಲಾಂಛನಗಳಲ್ಲಿಯೂ ಕೂಡ ಶಿವನನ್ನೇ ಕಂಡ ಶಿವಭಕ್ತಶ್ರೇಷ್ಠರು,ಪರಮಾನುಭವಿಗಳು.ಶಿವಶರಣರಾದವರು ಸರಳವಾಗಿ ಬದುಕಬೇಕು,ಆಡಂಬರ ಕೂಡದು ಎನ್ನುವ ಬಸವಣ್ಣನವರು ಶಿವಶರಣರ ಸೋಗಿನ ಕೆಲವರು ಬೆಳ್ಳಿ ಬಂಗಾರ,ಮುತ್ತು ಮಾಣಿಕ್ಯಗಳ ಕಿರೀಟವನ್ನು ಮುಡಿದು ಆಡಂಬರ ಪ್ರದರ್ಶಿಸುತ್ತಾರೆ.ಶಿವನು ಸ್ವಯಂಸ್ಮಶಾನವಾಸಿಯಾಗಿ ನಿರಾಡಂಬರನಾಗಿ ಬದುಕುತ್ತಿದ್ದರೂ ಶಿವಶರಣರು,ಶಿವಭಕ್ತರು,ಶಿವಯೋಗಿಗಳು ಎಂದು ಹೇಳಿಕೊಳ್ಳುತ್ತ ರಾಜಮಹಾರುಜರುಗಳಂತೆ ವೇಷಧರಿಸಿ ವೈಭವಮೆರೆಯುವವರು ಶಿವಪಥಕ್ಕೆ ಸಲ್ಲದಿದ್ದರೂ ಅವರ ಹಣೆಯಲ್ಲಿ ಕಾಣುವ ಮೂರು ಬೆರಳ ವಿಭೂತಿಗೆ ನಾನು ನಮಿಸುವೆ ಎನ್ನುವ ಬಸವಣ್ಣನವರು ವಿಭೂತಿತತ್ತ್ವದ ಮಹಿಮೆಯನ್ನು ಪ್ರತಿಪಾದಿಸಿ ಶಿವಭಕ್ತರಾದವರು ವಿಭೂತಿಯನ್ನು ಧರಿಸಲೇಬೇಕು.ವಿಭೂತಿಯು ಶಿವನಿಗೆ ಪ್ರಿಯವಾದುದರಿಂದ ವಿಭೂತಿಧಾರಣೆ ಮಾಡಿದವರನ್ನು ಶಿವಭಕ್ತರೆಂದು ನಂಬಿ,ಆದರಿಸಿದರೆ ಶಿವನು ಪ್ರಸನ್ನನಾಗುವನು ಎನ್ನುತ್ತಾರೆ.

ಬಸವಣ್ಣನವರು ಈ ವಚನದಲ್ಲಿ ‘ ವೇಷದ ಶರಣರು’ ಎಂದಿದ್ದಾರಲ್ಲದೆ ನಿಜ ಶರಣರು ಎಂದಿಲ್ಲ ಎನ್ನುವುದನ್ನು ಗಮನಿಸಬೇಕು.ಕೆಲವರು ಈ ವಚನಕ್ಕೆ ವಿಪರೀತಾರ್ಥ ಕಲ್ಪಿಸಿ ಬಸವಣ್ಣನವರು ನಿಜಶರಣರನ್ನು ಗೌರವಿಸುತ್ತಿದ್ದರು ಎಂದು ಅರ್ಥೈಸಿದ್ದಾರೆ ಮಠ ಪೀಠಾಧೀಶರುಗಳ ಕಿರೀಟ ಧರಿಸಿ ಮೆರೆಯುವ ಶಿವಪಥಕ್ಕೆ ಸಲ್ಲದ ಪ್ರವೃತ್ತಿಯನ್ನು ಸಮರ್ಥಿಸಿ.ಹಾಗಿದ್ದರೆ ಬಸವಣ್ಣನವರು ಅವರು ‘ವೇಷದ ಶರಣರು’ ಎಂದೇಕೆ ಸಂಬೋಧಿಸುತ್ತಿದ್ದರು ? ನಿಜ ಶರಣರು ಎಂದೇ ಹೇಳುತ್ತಿದ್ದರಲ್ಲ.ಈ ವಚನವನ್ನು ‘ ಶಿವ ಲಾಂಛನಧಾರಿಗಳನ್ನು ಶಿವನೆಂಬೆ’ ಎಂಬಿತ್ಯಾದಿ ಬಸವಣ್ಣನವರ ವಚನಗಳ ಜೊತೆಗೆ ಓದಿ ಅರ್ಥೈಸಬೇಕೇ ಹೊರತು ವಿಪರೀತಾರ್ಥ ಕಲ್ಪಿಸಬಾರದು.ಇಲ್ಲಿ ವೇಷಧಾರಿಗಳು ಎಂದರೆ ವಿರಕ್ತರು ಎಂದುಕೊಳ್ಳುತ್ತ ಕಾವಿ ಕಾಷಾಯಗಳನ್ನು ಧರಿಸಿದ ಬೆಳ್ಳಿಯ ದಂಡ,ಕಿರೀಟ ಮುಡಿಯುವ ವೇಷಧಾರಿಗಳು ಎಂದರ್ಥ.ವೇಷವು ನಿಜವಲ್ಲ,ಆತ್ಮಜ್ಞಾನಿಯ ಲಕ್ಷಣವಲ್ಲ.ಶಿವಶರಣರನು ಸಹಜ ಶಿವಭಕ್ತಿಯನ್ನಾಚರಿಸಬೇಕೇ ಹೊರತು ಆಡಂಬರದ ಭೋಗಜೀವನವನ್ನು ನಡೆಸಬಾರದು ಎನ್ನುವ ಬಸವಣ್ಣನವರು ವೇಷಧಾರಿಯಾಗಿದ್ದರೂ ವಿಭೂತಿ ಧರಿಸಿದ ಕಾರಣದಿಂದ ಡಾಂಭಿಕ ಭಕ್ತರನ್ನು ನಂಬುವೆ,ನಚ್ಚುವೆ ಎನ್ನುತ್ತಾರಲ್ಲದೆ ವಿಭೂತಿಯನ್ನು ಧರಿಸದವರು ಅವರು ಯಾರೇ ಆಗಿರಲಿ ಅವರನ್ನು ಗೌರವಿಸಲಾರೆ ಎನ್ನುತ್ತಾರೆ.ಬಸವಣ್ಣನವರ ಈ ಶಿವಭಕ್ತಿಯೇನೋ ಆದರ್ಶವಾದುದು,ಅಪೂರ್ವವಾದುದು.ಆದರೆ ಬಸವಣ್ಣನವರನ್ನು ಅನುಸರಿಸುವ ಮುಗ್ಧಭಕ್ತರುಗಳನ್ನು ಬಸವಣ್ಣನವರಂತೆಯೇ ವೇಷಲಾಂಛನಧಾರಿಗಳನ್ನು ನಂಬಿ ಕೆಡುತ್ತಿದ್ದಾರೆ.ಸತ್ಯಕ್ಕೆ ಬೆಲೆಕೊಡಬೇಕು,ಅಸತ್ಯವನ್ನು ಆದರಿಸಬಾರದು,ಸತ್ತ್ವವನ್ನು ಆದರಿಸಬೇಕು,ಸತ್ತ್ವಹೀನರನ್ನು ಗೌರವಿಸಬಾರದು.ರಾತ್ರಿಯಲ್ಲಿ ಮೇಣದ ಬತ್ತಿಯೂ ಬೆಳಕನ್ನುಂಟು ಮಾಡುತ್ತದೆ,ಆದರೆ ಮೇಣದ ಬತ್ತಿಯು ಚಂದ್ರನಾಗಲಾರದು.ಮಿಣುಕುಹುಳು ( ಮಿಂಚುಹುಳು) ಕೂಡ ಬೆಳಕನ್ನು ಹೊರಗೆಡಹುತ್ತದೆ ಆದರೆ ಅದು ಚಂದ್ರನಾಗಲಾರದು.ಬಸವಣ್ಣನವರ ಮುಗ್ಧ ಶಿವಭಕ್ತಿ,ಅವರ ಮೇರು ವ್ಯಕ್ತಿತ್ವವನ್ನು ಗೌರವಿಸುತ್ತಲೂ ನಾವು ವೈಚಾರಿಕತೆಯನ್ನು ಮೈಗೂಡಿಸಿಕೊಳ್ಳಬೇಕು,ಶಿವನ ಹೆಸರಿನಲ್ಲಿ ಹೊಟ್ಟೆಹೊರೆವ ಕೆಟ್ಟಜೀವರುಗಳನ್ನು ಗೌರವಿಸಬಾರದು,ವ್ಯಕ್ತಿಪೂಜೆಯನ್ನು ಒಪ್ಪಬಾರದು.

೧೮.೦೨.೨೦೨೪

About The Author