ಮರೆಯಬೇಕಾದ ಸಂಗತಿಗಳ ಬಗ್ಗೆ ಬರೆಯಬಾರದು !

ಸ್ವಗತ

ಮರೆಯಬೇಕಾದ ಸಂಗತಿಗಳ ಬಗ್ಗೆ ಬರೆಯಬಾರದು !ಮುಕ್ಕಣ್ಣ ಕರಿಗಾರ

ನನ್ನ ಶಿಷ್ಯ ಷಣ್ಮುಖ ಹೂಗಾರ ಇಂದು ಬೆಳಿಗ್ಗೆ ಇಪ್ಪತ್ತೈದು ವರ್ಷಗಳ ಹಿಂದೆ ನಾನು ಬರೆದ ಒಂದು ಪುಸ್ತಕದ ಬಗ್ಗೆ ಮುಕ್ತಕಂಠದ ಹೊಗಳಿಕೆಯ ಮಾತುಗಳನ್ನಾಡಿ ಬರೆದಿದ್ದರು.ಬೇರೆಯ ವಿಷಯದ ಬಗ್ಗೆ ಆಗಿದ್ದರೆ ನಾನು ಖಂಡಿತ ಶಿಷ್ಯೋತ್ತಮನ ಮಾತುಗಳ ಬಗ್ಗೆ ಪ್ರತಿಕ್ರಿಯಿಸಿ,ಗುಂಪುಗಳಲ್ಲಿ ಹಂಚಿಕೊಳ್ಳುತ್ತಿದ್ದೆ.ಆದರೆ ನನಗೆ ಇಷ್ಟವಿಲ್ಲದ ವಿಷಯದ ಬಗ್ಗೆ ನಾನು ಬರೆಯುವುದನ್ನಾಗಲಿ,ಮಾತನಾಡುವುದನ್ನಾಗಲಿ ಮಾಡುವುದಿಲ್ಲ.ಮತ್ತೋರ್ವ ಶಿಷ್ಯ ಮಂಜುನಾಥ ಕರಿಗಾರ ನಿನ್ನೆಯಿಂದಲೂ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಬಜೆಟ್ ಬಗ್ಗೆ ನನ್ನ ಪ್ರತಿಕ್ರಿಯೆ ಕೇಳುತ್ತ ನನ್ನ ಲೇಖನದ ನಿರೀಕ್ಷೆಯಲ್ಲಿದ್ದರೂ ನಾನು ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಬಜೆಟ್ ಬಗ್ಗೆ ಲೇಖನ ಬರೆಯಲಿಲ್ಲ !ಇಂದಿನ ಬಸವ ಚಿಂತನೆಯಲ್ಲಿ ಪ್ರಾಸಂಗಿಕವಾಗಿ ಪ್ರಸ್ತಾಪಿಸಿದ್ದನ್ನು ಬಿಟ್ಟರೆ ಬಜೆಟ್ ನ ಬಗ್ಗೆ ಲೇಖನ ಬರೆಯಲಿಲ್ಲ.

ಮಂಜುನಾಥ ಕರಿಗಾರ,ರಘುನಂದನ್ ಪೂಜಾರಿ ಅವರಂತಹ ನನ್ನ ಅನೇಕ ಶಿಷ್ಯರುಗಳು ಸಿದ್ಧರಾಮಯ್ಯನವರನ್ನೇ ದೇವರು,ಸರ್ವಸ್ವ ಎಂದು ತಿಳಿದಿದ್ದಾರೆ.ಇಂತಹ ಲಕ್ಷಾಂತರ ಅಭಿಮಾನಿಗಳಿಂದಲೇ ದೊಡ್ಡವರಾಗಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಎಷ್ಟು ಜನ ಅವರ ಅಭಿಮಾನಿಗಳು,ಹಿತೈಷಿಗಳಿಗೆ ಒಳ್ಳೆಯದು ಮಾಡಿದ್ದಾರೆ ?ತಮ್ಮ ಸುತ್ತ ಮುತ್ತ ಸಲಾಂಹೊಡೆಯುತ್ತ ತಿರುಗಾಡುವವರನ್ನು ಬಿಟ್ಟರೆ ಸಿದ್ಧರಾಮಯ್ಯನವರಿಗೆ ಅವರ ಮುಗ್ಧ ಅನುಯಾಯಿಗಳ ನೆನಪೇ ಆಗುವುದಿಲ್ಲ.ಇಂದಿನ ಬಜೆಟ್ಟಿನ ವಿಷಯವಾಗಿಯೇ ಹೇಳುವುದಾದರೆ ರಾಜ್ಯದ ಕುರುಬರ ಬಲ,ಬೆಂಬಲ ಮತ್ತು ಆಶೀರ್ವಾದದ ಮೂಲಕ ಮುಖ್ಯಮಂತ್ರಿಯಾಗಿರುವ ಸಿದ್ಧರಾಮಯ್ಯನವರು ಕುರಿಗಾಹಿಗಳ ಮೇಲಿನ ದೌರ್ಜನ್ಯ ನಿಯಂತ್ರಣಕ್ಕೆ ಕಾನೂನು ತರುವ ಪ್ರಸ್ತಾಪ ಮಾಡಿದ್ದನ್ನು ಬಿಟ್ಟರೆ ಕುರುಬರ ಹಿತಕ್ಕಾಗಿ ಯಾವ ಯೋಜನೆಯನ್ನೂ ಘೋಷಿಸಿಲ್ಲ.ಕುರಿಗಳು ಸತ್ತಾಗ ಪರಿಹಾರ ನೀಡಬೇಕಿದ್ದ ‘ ಅನುಗ್ರಹ’ ಯೋಜನೆಯನ್ನೇ ಮುಖ್ಯಮಂತ್ರಿಯವರು ಮರೆತಿದ್ದಾರೆ.ಒಂದು ವರ್ಷಕ್ಕೆ ಹೆಚ್ಚೆಂದರೆ ನೂರಿನ್ನೂರು ಕೋಟಿಗಳಷ್ಟೆ ಬೇಕಿತ್ತು ಅನುಗ್ರಹ ಯೋಜನೆಗೆ.ಇತರ ಜನಾಂಗ,ಸಮುದಾಯಗಳಿಗೆ ಬೇಕಾದಷ್ಟು ಅನುದಾನ ಒದಗಿಸಿರುವ ಸಿದ್ಧರಾಮಯ್ಯನವರಿಗೆ ಅನುಗ್ರಹಯೋಜನೆಗೆ ನೂರಿನ್ನೂರು ಕೋಟಿ ಅನುದಾನ ಒದಗಿಸಲು ಆಗಿಲ್ಲ.ಜನೆವರಿ ತಿಂಗಳಲ್ಲಿ ಕನಕಗುರುಪೀಠದ ತಿಂಥಣಿ ಶಾಖೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿಯ ಸ್ವಾಮಿಗಳು ಎಂಟುಕೋಟಿ ಅನುದಾನ ಕೋರಿದ್ದನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸುತ್ತ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಗ್ಯಾರಂಟಿ ಯೋಜನೆಗಳ ಕಾರಣದಿಂದ ಎಂಟುಕೋಟಿಗಳ ಅನುದಾನ ಕೊಡಲು ಆಗುವುದಿಲ್ಲ,ಈ ಬಜೆಟ್ಟಿನಲ್ಲಿ ಒಂದು ಕೋಟಿ ಕೊಡುವೆ ಎಂದಿದ್ದರು.ನಿನ್ನೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮಂಡಿಸಿದ ಬಜೆಟ್ಟಿನಲ್ಲಿ ಆ ಪ್ರಸ್ತಾಪವೇ ಇಲ್ಲ ! ನಾನು ಯಾಕೆ ಈ ಮಾತುಗಳನ್ನು ಹೇಳುತ್ತಿದ್ದೇನೆಂದರೆ ರಾಜ್ಯದ ಕುರುಬರು ಎಷ್ಟೇ ಪ್ರಾಮಾಣಿಕ ಪ್ರೀತಿ,ಅಭಿಮಾನಗಳ ಮಹಾಪೂರವನ್ನೇ ಸಿದ್ಧರಾಮಯ್ಯನವರಿಗೆ ಹರಿಸಿದರೂ ಅಂತಹ ಮುಗ್ಧಕುರುಬರಿಗೆ ಏನನ್ನಾದರೂ ಮಾಡಬೇಕು ಎನ್ನುವ ಪ್ರಾಮಾಣಿಕ ಇಚ್ಛಾಶಕ್ತಿ ಸಿದ್ಧರಾಮಯ್ಯನವರಲ್ಲಿ ಇಲ್ಲ.ಸಿದ್ಧರಾಮಯ್ಯನವರ ಅಭಿಮಾನಿಗಳು ಸಿದ್ಧರಾಮಯ್ಯನವರ ವ್ಯಕ್ತಿತ್ವದ ಬಗ್ಗೆ ರಮ್ಯಾದ್ಭುತ ಕಥೆಗಳನ್ನು ಕಟ್ಟಿ ಹೇಳಬಹುದು,ಆದರೆ ವಾಸ್ತವ ಬೇರೆಯೇ ಇದೆ. ಸಿದ್ಧರಾಮಯ್ಯನವರನ್ನು ನಂಬಿದ ಕರ್ನಾಟಕದ ಕುರುಬರ ಪರಿಸ್ಥಿತಿ ‘ ಅಭಿಮಾನಕ್ಕೆ ಬಿದ್ದ ಕೂಸು ಬೆಣ್ಣೆ ಕಾಣದೆ ಸತ್ತ’ ಗಾದೆಯನ್ನು ಅಕ್ಷರಶಃ ಸತ್ಯವಾಗಿಸಿದೆ.ಹಾಗಾಗಿ ಸಿದ್ಧರಾಮಯ್ಯನವರ ಬಜೆಟ್ಟಿನ ಬಗ್ಗೆ ಬರೆಯಲು ಮನಸ್ಸು ಆಗಲಿಲ್ಲ.ನಾನೊಬ್ಬ ಬರೆಯದಿದ್ದರೆ ಸಿದ್ಧರಾಮಯ್ಯನವರಿಗೆ ನಷ್ಟವೇನಿಲ್ಲ ಎನ್ನುವುದು ಸತ್ಯವಾದರೂ ನನ್ನಂಥವರು ಬರೆದು ಸಿದ್ಧರಾಮಯ್ಯನವರನ್ನು ಮತ್ತಷ್ಟು ದೊಡ್ಡವರನ್ನಾಗಿ ಯಾಕೆ ಮಾಡಬೇಕು ?

ಶಿಷ್ಯ ಷಣ್ಮುಖ ಹೂಗಾರ ನಮ್ಮೂರಿನ ಬಗ್ಗೆ ನಾನು ಈ ಹಿಂದೆ ಬರೆದಿದ್ದ ಒಂದು ಪುಸ್ತಕದ ಬಗ್ಗೆ ಪ್ರಸ್ತಾಪಿಸಿದ್ದು ಮತ್ತು ಮಂಜುನಾಥ ಕರಿಗಾರ ಬಜೆಟ್ ಬಗ್ಗೆ ಬರೆಯಲು‌ಒತ್ತಾಯಿಸಿದ್ದು ನನಗೆ ಇಷ್ಟವಿಲ್ಲದ ಸಂಗತಿಗಳ ಬಗೆಗೆ ಆದ್ದರಿಂದ ನಾನು ಬರೆಯಲಿಲ್ಲ.ನಮಗೆ ಕೆಟ್ಟ ಅನುಭವ ಉಂಟು ಮಾಡಿದ ಪ್ರಸಂಗಗಳು ಮತ್ತು ನಮಗೆ ಕೆಟ್ಟದನ್ನು ಮಾಡಿದ ವ್ಯಕ್ತಿಗಳನ್ನು ನಾವು ಮರೆಯಬೇಕು.ಅಂದಾಗ ಮಾತ್ರ ನಾವು ಮಹತ್ವದ ಸಾಧನೆ ಮಾಡಲು ಸಾಧ್ಯ.ಮಂಜುನಾಥ ಕರಿಗಾರ ಮತ್ತಿತರರಿಗೆ ನಾನು ಆಗಾಗ ಹೇಳುತ್ತಿರುವ ಮಾತಿನೊಂದಿಗೆ ಈ ಕಿರುಟಿಪ್ಪಣಿ ಮುಗಿಸುವೆ –‘ ನೀವು ಸಿದ್ಧರಾಮಯ್ಯನವರ ಅಭಿಮಾನಿಗಳೋ ಅನುಯಾಯಿಗಳೊ ಆಗುವುದೇ ಜೀವನದ ಸಾರ್ಥಕತೆ ಎಂದು ಭಾವಿಸಬೇಡಿ.ಸಿದ್ಧರಾಮಯ್ಯನವರನ್ನು ಮೀರಿಸಿ,ಬೆಳೆದ ನಾಯಕರಾಗಿ ಬೆಳೆಯಿರಿ.’ ನಾನಂತೂ ಆ ಪ್ರಯತ್ನ ಮಾಡುತ್ತಿದ್ದೇನೆ.ಇತರರ ಬಗ್ಗೆ ನಾನು ಹೇಗೆ ಹೇಳುವುದು ?

೧೭.೦೨.೨೦೨೪

About The Author