ಕಾರ್ಪೋರೇಟ್ ಜಗತ್ತಿನ ಗುರುಗಳು ಆಧ್ಯಾತ್ಮಿಕ ಗುರುಗಳಲ್ಲ !

ಮೂರನೇ ಕಣ್ಣು

ಕಾರ್ಪೋರೇಟ್ ಜಗತ್ತಿನ ಗುರುಗಳು ಆಧ್ಯಾತ್ಮಿಕ ಗುರುಗಳಲ್ಲ !–ಮುಕ್ಕಣ್ಣ ಕರಿಗಾರ

ಮಹಾಶೈವ ಧರ್ಮಪೀಠದೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಗಬ್ಬೂರಿನ ಗಾಯತ್ರಿ ಪೀಠದ ಅಧ್ಯಕ್ಷರಾದ ಆತ್ಮೀಯರಾಗಿರುವ ಉದಯಕುಮಾರ ಪಂಚಾಳ ಅವರು ಮೊನ್ನೆ ಬೆಂಗಳೂರಿಗೆ ಹೋದಾಗ ತಮಗಾದ ಎರಡು ಅನುಭವಗಳನ್ನು ಹಂಚಿಕೊಂಡಿದ್ದಾರೆ ಇಂದು ವಾಟ್ಸಾಪ್ ಮೂಲಕ.ಅವರ ಮಗಳು ಕುಮಾರಿ ಗಾಯತ್ರಿ ಬೆಂಗಳೂರಿನ ಹೈಕೋರ್ಟಿನಲ್ಲಿ ವಕೀಲರಾಗಿದ್ದಾರೆ.ತುಂಬ ಪ್ರತಿಭಾವಂತೆಯಾಗಿರುವ ಗಾಯತ್ರಿ ವೈಚಾರಿಕ ಮನೋಭಾವವನ್ನು ಮೈಗೂಡಿಸಿಕೊಂಡಿರುವ,ಯಾವುದನ್ನೂ ಪ್ರಶ್ನಿಸದೆ ಒಪ್ಪಬಾರದು ಎನ್ನುವ ಪ್ರಗತಿಪರ ನಿಲುವಿನವರು.ಮಗಳು ಗಾಯತ್ರಿಯೊಂದಿಗೆ ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಗೆ ಭೇಟಿ‌ ಕೊಟ್ಟಿದ್ದರಂತೆ ಉದಯಕುಮಾರ ಅವರು.ರವಿಶಂಕರ ಗುರೂಜಿಯವರನ್ನು ನೋಡುವ ಬಯಕೆ ಇತ್ತಂತೆ ಅವರಲ್ಲಿ.ಸೆಕ್ಯೂರಿಟಿ ಗಾರ್ಡ್ ತಂದೆ ಮಗಳನ್ನು ತಡೆದು ‘ನೀವು ಈಗ ಅವರನ್ನು ನೋಡಲು ಆಗುವುದಿಲ್ಲ,ಫಾರಿನ್ ವಿ ಐ ಪಿ ಗಳೊಂದಿಗೆ ಚರ್ಚಿಸುತ್ತಿದ್ದಾರೆ’ ಎಂದನಂತೆ ! ಅಲ್ಲಿಯ ಧ್ಯಾನ ಮಂದಿರ ನೋಡಹೋದರಂತೆ,’ ಈ ಜನಜಂಗುಳಿಯಲ್ಲಿ ಧ್ಯಾನ ಮಾಡಲು ಸಾಧ್ಯವೆ ಅಪ್ಪ ?’ ಎಂದು ಪ್ರಶ್ನಿಸಿದ ಯುವ ವಕೀಲೆ ಗಾಯತ್ರಿ ‘ ಇದು ಆರ್ಟ್ ಆಫ್ ಲಿವಿಂಗ್ ಅಲ್ಲ,ಆರ್ಟ್ ಆಫ್ ಅರ್ನಿಂಗ್’ ಎಂದರಂತೆ ! ಆಧ್ಯಾತ್ಮಿಕ ಮನಸ್ಸಿನ ಉದಯಕುಮಾರ ಅವರ ಮನಸ್ಸು ಕಸಿವಿಸಿಗೊಂಡು ‘ ಹಾಗೆಲ್ಲ ಅನ್ನಬಾರದಮ್ಮ’ ಎಂದು ಸಮಾಧಾನ ಪಡಿಸಿದರಂತೆ ಮಗಳನ್ನು ತಮ್ಮ ಸಾಂಪ್ರಾದಾಯಿಕ ಧಾರ್ಮಿಕ ದೃಷ್ಟಿಕೋನದಿಂದ.’ ಅಪ್ಪಾ,ಇಂಥವರನ್ನೆಲ್ಲ ನಂಬಿಕೊಂಡು ಆರ್ಟ್ ಆಫ್ ಲಿವಿಂಗ್ ಕಲಿಯಲು ಸಾಧ್ಯವೆ ? ಇವರೆಲ್ಲ ದೊಡ್ಡ ವ್ಯಾಪಾರಿಗಳು.ಇಲ್ಲಿಗೆ ಬಂದಿದ್ದಕ್ಕೆ ಸುಮ್ಮನೆ ಹೋಗಬಾರದು’ ಎಂದು ಒಂದು ಸಾವಿರ ರೂಪಾಯಿಗಳ ಮೊತ್ತದ ಪುಸ್ತಕ ಖರೀದಿಸಿ ಬನಶಂಕರಿ ದೇವಸ್ಥಾನಕ್ಕೆ ಕರೆದುಕೊಂಡು ಹೋದರಂತೆ ಗಾಯತ್ರಿ.ಇವರು ಬನಶಂಕರಿ ದೇವಸ್ಥಾನಕ್ಕೆ ಹೋದಾಗ ಸಂಜೆ ನಾಲ್ಕು ಘಂಟೆಯ ಸಮಯ.ದೇವಿಯ ದರ್ಶನ ಸಮಯ ಸಂಜೆ ಐದು ಘಂಟೆ ಎಂದು ಬೋರ್ಡ ಹಾಕಲಾಗಿತ್ತಂತೆ.ಸಮಯ ಇದೆಯಲ್ಲ ಕಾಫಿ ಕುಡಿಯೋಣ ಎಂದು ಉದಯಕುಮಾರ ಅವರು ಆಲೋಚಿಸುತ್ತಿರುವಷ್ಟರಲ್ಲೇ ದೇವಸ್ಥಾನದ ಬಾಗಿಲು ತೆರೆಯಲ್ಪಟ್ಟು ಸರತಿ ಸಾಲಿನಲ್ಲಿ ದರ್ಶನ ಪಡೆದು ಆನಂದಿತರಾದ ಉದಯಕುಮಾರ ಅವರು ತಾಯಿ ಬನಶಂಕರಿಯ ಕಾರುಣ್ಯಾನುಗ್ರಹ ಪ್ರಸಂಗವನ್ನು ಕೊಂಡಾಡುತ್ತ ‘ ಆರ್ಟ್ ಆಫ್ ಲಿವಿಂಗ್ ನಲ್ಲಿ ರವಿಶಂಕರ ಗುರೂಜಿಯವರು ವಿಐಪಿಯವರಿಗೆ ದರ್ಶನ ಕೊಟ್ಟರೆ ಇಲ್ಲಿ ತಾಯಿ ಬನಶಂಕರಿಯು ಸಾಮಾನ್ಯರು,ವಿಐಪಿಗಳು ಎನ್ನುವ ಭೇದ ಮಾಡದೆ ಎಲ್ಲರನ್ನೂ ಸಮಾನವಾಗಿ ಕಂಡು,ಆಶೀರ್ವದಿಸುತ್ತಿದ್ದಳು’ ಎನ್ನುವ ಅನುಭವ ಹಂಚಿಕೊಂಡಿದ್ದಾರೆ.

ಇದು ಉದಯಕುಮಾರ ಪಂಚಾಳ ಅವರೊಬ್ಬರ ಅನುಭವವಲ್ಲ, ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಸೆಂಟರ್ ಗೆ ಹೋದ ಸಾವಿರಾರು ಜನರ ಅನುಭವ.ಅಲ್ಲಿ ದೊಡ್ಡ ದೊಡ್ಡ ರಾಜಕಾರಣಿಗಳು,ವ್ಯಾಪಾರೋದ್ಯಮಿಗಳು,ಬಿಲಿಯನೇರ್ ಗಳು,ಮಿಲಿಯನೇರುಗಳಿಗೆ ರವಿಶಂಕರ್ ಅವರ ಭೇಟಿಯ ( ದರ್ಶನವಲ್ಲ,ಭೇಟಿ !)ಭಾಗ್ಯ ಸುಲಭವಾಗಿ ಲಭಿಸುತ್ತದೆಯೇ ಹೊರತು ಜನಸಾಮಾನ್ಯರಿಗೆ ಅವರ ಭೇಟಿ ಸಾಧ್ಯವಿಲ್ಲ.ರವಿಶಂಕರ ಅವರು ಆಧ್ಯಾತ್ಮಿಕತೆಯ ಹೆಸರಿನಲ್ಲಿ ಅಲ್ಲಿ ತಮ್ಮದೇ ಸಾಮ್ರಾಜ್ಯ ಕಟ್ಟಿಕೊಂಡಿದ್ದಾರೆ.ಅಲ್ಲಿ ವ್ಯಾಪಾರವಿದೆ,ವ್ಯವಹಾರವಿದೆ ಎಲ್ಲವೂ ಇದೆ ನಿಜವಾದ ಆಧ್ಯಾತ್ಮಿಕಸುಖದ ಹೊರತಾಗಿ.ಅಲ್ಲಿ ಯೋಗಶಿಬಿರಗಳ ಹೆಸರಿನಲ್ಲಿ ನೀಡುತ್ತಿರುವ ಸಾತ್ತ್ವಿಕ ಊಟ ಮಾತ್ರ ಸಾತ್ತ್ವಿಕವಾದುದು,ಉಳಿದುದೆಲ್ಲವೂ ವ್ಯಾಪರವೆ !ನಾನು ಹಿಂದೆ ಬೆಂಗಳೂರಿನಲ್ಲಿದ್ದಾಗ ಒಂದೆರಡು ಬಾರಿ ರವಿಶಂಕರ ಅವರ ಆರ್ಟ್ ಆಫ್ ಲಿವಿಂಗ್ ಕೇಂದ್ರಕ್ಕೆ ಭೇಟಿ ನೀಡಿದ್ದೆ.

ಬೆಂಗಳೂರಿನಲ್ಲಿ ರವಿಶಂಕರ ಅವರಂತೆಯೇ ಮತ್ತೊಬ್ಬ ಸ್ವಯಂಘೋಷಿತ ಗುರುವಿದ್ದಾರೆ ಸದ್ಗುರು ಬಿರುದಿನ ಜಗ್ಗಿವಾಸುದೇವ.ಈಶ ಫೌಂಡೇಶನ್ ಅಂತ ಒಂದು ಸಂಸ್ಥೆ ಕಟ್ಟಿಕೊಂಡು ಅಲ್ಲೊಂದು ಶಿವಲಿಂಗ ಸ್ಥಾಪಿಸಿ ಏನೇನೋ ಕಥೆ ಹೇಳುತ್ತಿರುತ್ತಾರೆ ಈ ಜಗ್ಗಿ ವಾಸುದೇವ.ಜಗ್ಗಿ ವಾಸುದೇವ ಯೋಗಿಯಲ್ಲ,ಆಧ್ಯಾತ್ಮಿಕ ಗುರುವೂ ಅಲ್ಲ.ತಾವು ಓದಿದ ಕೆಲವು ಗ್ರಂಥಗಳ ಆಧಾರದ ಮೇಲೆ ಸೊಗಸಾದ ಇಂಗ್ಲಿಷಿನಲ್ಲಿ ಮಾತನಾಡುವ,ಜನರನ್ನು ಮರುಳು ಮಾಡುವ ಕಲೆಯನ್ನು ಚೆನ್ನಾಗಿ ಸಿದ್ಧಿಸಿಕೊಂಡಿರುವ ಜಗ್ಗಿ ವಾಸುದೇವ ಯೋಗಪ್ರಪಂಚದಿಂದ ಹೊರಗೆಯೇ ಇರುವ ಒಬ್ಬ ವ್ಯಕ್ತಿ.ರವಿಶಂಕರ ಮತ್ತು ಜಗ್ಗಿ ವಾಸುದೇವ ಅವರಿಬ್ಬರೂ ಮೊದಲು ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡಿದವರು,ಹಣವನ್ನು ಹೇಗೆ ಸಂಪಾದಿಸಬಹುದು ಎಂಬುದನ್ನು ಚೆನ್ನಾಗಿ ಬಲ್ಲವರು.ರವಿಶಂಕರ ಮತ್ತು ಜಗ್ಗಿ ವಾಸುದೇವ ಅವರ ಬಳಿ ಬರುವವರೆಲ್ಲ ಇಂಗ್ಲಿಷ ನಾಗರಿಕತೆಯ ಮೋಹಕ್ಕೆ ಸಿಕ್ಕು ಬಳಲಿ ಬೆಂಡಾದವರು.ಮಲ್ಟಿನ್ಯಾಶನಲ್ ಕಂಪನಿಗಳ ಡೇಟಿಂಗ್ ಕಲ್ಚರ್ ಮತ್ತು ಲಿವಿಂಗ್ ಟುಗೇದರನ ವಿಕೃತ ಜೀವನವನ್ನು ಅನುಭವಿಸಿ,ಹತಾಶರಾಗಿ ಅಪಾರಾಧಿಪ್ರಜ್ಞೆಗೆ ಒಳಗಾದ ಆರಂಕಿ ಸಂಬಳ ಪಡೆಯುವ ಉದ್ಯೋಗಿಗಳು,ಸುಲಿಗೆಯನ್ನೇ ದಂಧೆ ಮಾಡಿಕೊಂಡ ಕುಬೇರರುಗಳು ಮಾತ್ರ ರವಿಶಂಕರ ಮತ್ತು ಜಗ್ಗಿವಾಸುದೇವ ಅವರ ಬಳಿ ಹೋಗುತ್ತಾರೆಯೇ ಹೊರತು ನಿಜವಾದ ಆಧ್ಯಾತ್ಮಿಕ ಪಿಪಾಸೆಯುಳ್ಳವರು ಅವರ ಬಳಿ ಹೋಗುವುದಿಲ್ಲ.ಸ್ವತಃ ತಾವೇ ಅನುಭವಿಸದ ಪರಮಾನಂದವನ್ನು ರವಿಶಂಕರ ಅವರಾಗಲಿ,ಜಗ್ಗಿ ವಾಸುದೇವ್ ಅವರಾಗಲಿ ಇತರರಿಗೆ ಹೇಗೆ ಅನುಗ್ರಹಿಸಬಲ್ಲರು? ರವಿಶಂಕರ ಅವರು ಹೇಳುವ ಸುದರ್ಶನ ಪ್ರಾಣಾಯಾಮವು ಯೌಗಿಕ ಪ್ರಾಣಾಯಾಮವಲ್ಲ,ಉಸಿರಾಟ ಕ್ರಿಯೆಯನ್ನು ಸುಲಭವಾಗಿಸಬಲ್ಲ ಒಂದು ಸಾಮಾನ್ಯ ಪ್ರಾಣಾಯಾಮ ಕ್ರಿಯೆಯಷ್ಟೆ.ರವಿಶಂಕರ ಅವರಿಗೆ ಸಮಾಧಿಯ ಅನುಭವವಾಗಿಲ್ಲ,ಲಿಂಗ ಮೂರ್ತಿಗಳನ್ನು ಹಿಡಿದುಕೊಂಡು ವ್ಯವಹರಿಸುವ ಜಗ್ಗಿ ವಾಸುದೇವ ಅವರಂತೂ ಯೋಗಿಗಳಲ್ಲ,ಶಿವಯೋಗಸಾಧಕರಲ್ಲ.ಬರಿ ಓದಿನ ಅನುಭವವನ್ನೇ ಹಂಚಿಕೊಳ್ಳುವ ವಾಗ್ಮಿ ಅಷ್ಟೆ ಜಗ್ಗಿ ವಾಸುದೇವ.

ಉದಯಕುಮಾರ ಅವರು ಹೋದಾಗ ರವಿಶಂಕರ ಅವರು ಫಾರಿನ್ ವಿ ಐ ಪಿ ಗಳೊಂದಿಗೆ ಮಾತನಾಡುತ್ತಿದ್ದರಲ್ಲ, ಆಧ್ಯಾತ್ಮ,ಯೋಗದ ಬಗ್ಗೆ ಏನೇನೂ ಅರಿವಿಲ್ಲದ ದುಡ್ಡುಳ್ಳ ದಡ್ಡ ಪಾಶ್ಚಿಮಾತ್ಯರೇ ರವಿಶಂಕರ ಮತ್ತು ಜಗ್ಗಿ ವಾಸುದೇವ ಅವರ ಗಿರಾಕಿಗಳು,ಗ್ರಾಹಕರುಗಳು.ಇಂಗ್ಲಿಷ್ ನಾಗರಿಕತೆಯ ಭೋಗಜೀವನದ ವಿಕೃತಿಯ ಅನುಭವವನ್ನುಂಡ ಪಾಶ್ಚಿಮಾತ್ಯರು ಆಧ್ಯಾತ್ಮದ ಆನಂದವನ್ನು ಸವಿಯಲು ಭಾರತಕ್ಕೆ ಬರುತ್ತಾರೆ.ಆದರೆ ಭಾರತದಲ್ಲಿ ನಿಜವಾದ ಯೋಗಿಗಳು,ಸಾಧಕರುಗಳು ಜಾಹೀರಾತು ಹಾಕಿಕೊಂಡು ಬದುಕುವುದಿಲ್ಲವಾದ್ದರಿಂದ ರವಿಶಂಕರ,ಜಗ್ಗಿ ವಾಸುದೇವ ಅವರಂತಹ ರಂಜನೀಯ ವ್ಯಕ್ತಿತ್ವ ಉಳ್ಳವರನ್ನೇ ಮಹಾಗುರುಗಳು ಎಂದು ಭ್ರಮಿಸಿ ಅವರ ಬಳಿ ಹೋಗುತ್ತಾರೆ.ಇವರಿಬ್ಬರು ಬೋಧಿಸುವುದೂ ಅಷ್ಟೆ,ಪಾಶ್ಚಿಮಾತ್ಯರೂ ಸಾಧಿಸುವುದೂ ಅಷ್ಟೆ.ಜನರಿಗೆ ಆಧ್ಯಾತ್ಮ ಎಂದರೆ ಏನು ? ಯೋಗಿಗಳ ಸ್ವರೂಪ ಎಂತಹದ್ದು ಎಂದು ಗೊತ್ತಿರುವುದಿಲ್ಲವಾಗಿ ರವಿಶಂಕರ ಮತ್ತು ಜಗ್ಗಿ ವಾಸುದೇವ ಅಂಥವರನ್ನು ಯೋಗಿಗಳು ಎಂದು ಭ್ರಮಿಸುತ್ತಾರೆ.

ಇಂತಹ ಕಪಟ ಯೋಗಿಗಳ ವಿರುದ್ಧ ಸೆಡ್ಡು ಹೊಡೆದ ಬುದ್ಧ ಜನಸಾಮಾನ್ಯರ ಗುರುವಾದ,ಜಗದ್ಗುರುವಾದ.ಇಂತಹ ಕಪಟಿಗಳಿಂದ ಜನಸಾಮಾನ್ಯರನ್ನು ಮೇಲಕ್ಕೆತ್ತಿ ಉದ್ಧರಿಸಿದ ಬಸವಣ್ಣನವರು ‘ಎರಡನೆಯ ಶಿವ’ ಎನ್ನಿಸಿಕೊಂಡು ವಿಶ್ವಗುರುವಾದರು. ಪದದುಳಿತರನ್ನು ‘ ನಿತ್ಯನಾರಕಿಗಳು’ ಎಂದು ದೂರವಿಟ್ಟ ನಿಜನಾರಕಿಗಳ ಅಂತರಂಗದ ಕಾಪಟ್ಯ,ಕಲ್ಮಶವನ್ನು ತೊಳೆಯುತ್ತ ಜನಸಾಮಾನ್ಯರನ್ನು ಉದ್ಧರಿಸಿ ಲೋಕಗುರುವಾದರು ಕನಕದಾಸರು.ತಂಬೂರಿನಾದ ಮೀಟುತ್ತ ಜನರ ನಡುವೆ ಸಂಚರಿಸಿ ಜನರ ಕುಂದುಕೊರತೆಗಳನ್ನು ತಿದ್ದಿ,ಉದ್ಧರಿಸುತ್ತ ಜನಸಾಮಾನ್ಯರ ಜಗದ್ಗುರುವಾದರು ಶಿಶುನಾಳ ಶರೀಫರು.ಉಟ್ಟ ಪಂಚೆಯೊಂದನ್ನು ಬಿಟ್ಟರೆ ಮೈಮೇಲೆ ಮತ್ತೊಂದು ಬಟ್ಟೆ ಇರದ ರಾಮಕೃಷ್ಣ ಪರಮಹಂಸರು ಸದಾ ಮಹಾಕಾಳಿಯ ಚಿದ್ಮನವಿಹಾರಿಗಳಾಗಿ ಲೋಕಪೂಜಿತರಾದರು.’ ನಾನಾರು ಎಂದು ವಿಚಾರಿಸಿ’ ಎಂದು ಹೇಳುತ್ತಲೇ ತಮ್ಮ ಬಳಿ ಬಂದವರಲ್ಲಿ ಆಧ್ಯಾತ್ಮಿಕ ಪರಮಾನಂದದ ದಿವ್ಯ ಅನುಭವವನ್ನುಂಟು ಮಾಡುತ್ತಿದ್ದರು ರಮಣಮಹರ್ಷಿಗಳು.ಇಂಥಹ ಮಹಾನ್ ಯೋಗಿಗಳು,ಮಹರ್ಷಿಗಳನ್ನು ಕಂಡ ಭರತಭೂಮಿಯಲ್ಲೀಗ ರವಿಶಂಕರ ಮತ್ತು ಜಗ್ಗಿವಾಸುದೇವ ಅವರಂತಹ ಆಧ್ಯಾತಿಕತೆಯ ಹೆಸರಿನಲ್ಲಿ ವ್ಯವಹಾರಮಾಡುತ್ತಿರುವ ವ್ಯಾಪಾರಿಗಳು ಎದ್ದು ಕುಳಿತಿದ್ದಾರೆ.

ಆತ್ಮಜ್ಞಾನವನ್ನು ಹತ್ತಿಪ್ಪತ್ತು ದಿನಗಳ ಶಿಬಿರಗಳಿಂದಾಗಲಿ ಅಥವಾ ಸರ್ಟಿಫಿಕೇಟ್ ಗಳಿಂದಾಗಲಿ ಸಂಪಾದಿಸಲು ಸಾಧ್ಯವಿಲ್ಲ.ಒಬ್ಬ ಗುರುವಿನ ಸಾನ್ನಿಧ್ಯದಲ್ಲಿದ್ದು ಹತ್ತೆರಡು ವರ್ಷಗಳ ನಿರಂತರ ಸಾಧನೆಯಿಂದ ಪರಮಾತ್ಮನ ಸಾಕ್ಷಾತ್ಕಾರವನ್ನು ಪಡೆಯಬಹುದೇ ಹೊರತು ಸೊಗಸಾದ ಇಂಗ್ಲಿಷಿನಲ್ಲಿ ಭಾಷಣ ಮಾಡುವವರಿಂದ ಪರಮಾತ್ಮನ ಪಥ ದೊರಕದು.ದೇವರು- ಧರ್ಮ – ಆಧ್ಯಾತ್ಮಗಳ ಹೆಸರಿನಲ್ಲಿ ವ್ಯಾಪಾರ ಮಾಡುವ ಬುದ್ಧಿವಂತರು ಕಾರ್ಪೋರೇಟ್ ಜಗತ್ತಿನ ನೆಮ್ಮದಿ ಕಾಣದ ಜನರಿಗೆ ಗುರುವಾಗಬಹುದೇ ಹೊರತು ಆಧ್ಯಾತ್ಮಿಕ ಪ್ರಪಂಚಕ್ಕೆ ಅವರು ಗುರುಗಳಲ್ಲ.

ಇನ್ನು ಬನಶಂಕರಿಯ ಅನುಗ್ರಹ ಪ್ರಸಂಗದ ಬಗ್ಗೆ ಹೇಳುವುದಾದರೆ ತಾಯಿ ಬನಶಂಕರಿಯು ಸರ್ವಜ್ಞಳೂ ಸರ್ವಶಕ್ತಳೂ ಸರ್ವಾಂತರ್ಯಾಮಿಯೂ ಆಗಿರುವ ಜಗನ್ಮಾತೆಯು.ಲೋಕದ ಸಿರಿವಂತರು,ವಿಐಪಿಗಳ ಬಗ್ಗೆ ಆಸಕ್ತಿ ಇಲ್ಲದ ಆಕೆಯು ತನ್ನ ಭಕ್ತರುಗಳ ಉದ್ಧಾರದಲ್ಲಿ ಸದಾ ಆಸಕ್ತಳು.ದೇವಿ ಉಪಾಸಕರುಗಳಿಗೆ ದೇವಿಯ ದೇವಸ್ಥಾನಗಳಲ್ಲಿ ಪವಾಡವೆನ್ನುವಂತಹ ಪ್ರಸಂಗಗಳು ಘಟಿಸುವುದು ಸಹಜ.ಉದಯಕುಮಾರ ಪಂಚಾಳ ಅವರು ನಿತ್ಯ ಶ್ರೀದೇವಿ ಪುರಾಣ ಪಾರಾಯಣ ವ್ರತಿಗಳಾಗಿದ್ದರಿಂದ ತಾಯಿ ಬನಶಂಕರಿಯು ಯಾವುದೋ ಒಂದು ಲೀಲೆಯನ್ನುಂಟು ಮಾಡಿ ಒಂದು ಘಂಟೆ ಮುಂಚಿತವಾಗಿ ದೇವಸ್ಥಾನದ ಬಾಗಿಲು ತೆರೆಯಿಸಿರಬೇಕು.ಬನಶಂಕರಿಯು ತನ್ನ ಭಕ್ತನನ್ನು ಕಂಡಳು,ರವಿಶಂಕರ ವಿದೇಶಿ ವಿಐಪಿಗಳಿಗೆ ಮಾತ್ರ ಭೇಟಿ ಆದರು.ದೇವರು ಮತ್ತು ಮನುಷ್ಯರಿಗೆ ಇರುವ ವ್ಯತ್ಯಾಸವೇ ಇದು.ಮನುಷ್ಯರು ಹಣದ ಗಂಟು ನೋಡುತ್ತಾರೆ,ದೇವರು ಭಕ್ತಿಯ ನಂಟು ನೋಡುತ್ತಾರೆ.ನೋಡುವವರಿಗೆ ಬನಶಂಕರಿಯು ಕಲ್ಲಿನ ಮೂರ್ತಿಯೇ ಆಗಿರಬಹುದು ಆದರೆ ಕಲ್ಲಿನ ಒಡಲಲ್ಲಿ ಪರಾಶಕ್ತಿಯ ಚೈತನ್ಯವಡಗಿದೆ.ಪರಾಶಕ್ತಿಯು ಎಲ್ಲವನ್ನೂ ಅರಿಯಬಲ್ಲಳು.ಆದರೆ ರವಿಶಂಕರ ಅವರು ಮುಂಚಿತವಾಗಿ ಅಪಾಯಿಟ್ ಮೆಂಟ್ ತೆಗೆದುಕೊಂಡವರನ್ನಷ್ಟೇ ಭೇಟಿ ಆಗಬಲ್ಲರು.ಭಕ್ತರುಗಳು ಶಕ್ತಿ ಜಾಗ್ರತವಾಗಿರುವ ಬನಶಂಕರಿದೇವಿಯಂತಹ ದೇವಸ್ಥಾನಗಳಿಗೆ ಹೋಗಿ ಉದ್ಧಾರವಾಗಬೇಕೇ ಹೊರತು ರವಿಶಂಕರ,ಜಗ್ಗಿ ವಾಸುದೇವ ಅವರುಗಳಂತಹ ಕಾರ್ಪೋರೇಟ್ ಜಗತ್ತಿನ ಸ್ವಯಂಘೋಷಿತ ದೇವಮಾನವರುಗಳ ವೈಭವೋಪೇತ ಸಾಮ್ರಾಜ್ಯದ ಕಟ್ಟಡಗಳೆದುರು ಮಂಡಿಯೂರಿ ಕುಳಿತುಕೊಳ್ಳಬಾರದು.

೧೮.೦೨.೨೦೨೪

About The Author