ಬಸವಣ್ಣನವರ ‘ ಶಿವಪುರ’ಗಳ ನಿರ್ಮಾಣ ಕನಸು ಮತ್ತು ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಬಜೆಟಿ‌ನ ಬಸವ ಆಶಯಗಳು

ಬಸವೋಪನಿಷತ್ತು ೪೫ : ಬಸವಣ್ಣನವರ ‘ ಶಿವಪುರ’ಗಳ ನಿರ್ಮಾಣ ಕನಸು ಮತ್ತು ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಬಜೆಟಿ‌ನ ಬಸವ ಆಶಯಗಳು ! –ಮುಕ್ಕಣ್ಣ ಕರಿಗಾರ

ಅಡ್ಡ ವಿಭೂತಿಯಿಲ್ಲದವರ ಮುಖ ಹೊಲ್ಲ ; ನೋಡಲಾಗದು.
ಲಿಂಗದೇವರಿಲ್ಲದ ಠಾವು ನರವಿಂಧ್ಯ ; ಹೋಗಲಾಗದು.
ದೇವಭಕ್ತರಿಲ್ಲದೂರು ಸಿನೆ,ಹಾಳು ! ಕೂಡಲ ಸಂಗಮದೇವಾ.

ಬಸವಣ್ಣನವರು ಈ ವಚನದಲ್ಲಿ ಶಿವಭಕ್ತರಿದ್ದ ಊರೇ ಭೂ ಕೈಲಾಸವಾಗುತ್ತದೆ,ಶಿವಭಕ್ತರಿಲ್ಲದ ಊರೇ ನರಕವಾಗುತ್ತದೆಯಾದ್ದರಿಂದ ಶಿವಭಕ್ತರಿಲ್ಲದ ಊರು,ಗ್ರಾಮಗಳತ್ತ ಶಿವಭಕ್ತರು ಹೋಗಬಾರದು ಎನ್ನುತ್ತಾರೆ.ಹಣೆಗೆ ತ್ರಿಂಪುಂಡ್ರ ಧರಿಸದವರ ಮುಖವನ್ನು ನೋಡಲಾಗದು.ಲಿಂಗೋಪಾಸಕರಿಲ್ಲದ ಊರೇ ದಟ್ಟಕಾಡಿನಂತೆ,ಅಲ್ಲಿಗೆ ಹೋಗಬಾರದು.ಶಿವಭಕ್ತರಿಲ್ಲದ ಊರೇ ಹಾಳುಕೊಂಪೆಯು ಎನ್ನುತ್ತಾರೆ ಬಸವಣ್ಣನವರು.

ಮನುಷ್ಯ ಜೀವನದಲ್ಲಿ ಸಂಸ್ಕಾರಕ್ಕೆ ಮಹತ್ವವಿದೆ.ಸಂಸ್ಕಾರದಿಂದ ಮನುಷ್ಯ ಸುಸಂಸ್ಕೃತ ಎನ್ನಿಸಿಕೊಳ್ಳಬಲ್ಲ.ಸಂಸ್ಕಾರವಂತರು,ಸುಸಂಸ್ಕೃತರು ಆದವರ ಬಳಿ ಹೋದರೆ ಹೋದವರಿಗೂ ಆ ಸಂಸ್ಕಾರದ ಲಾಭವಾಗುತ್ತದೆ.ಶಿವಭಕ್ತರಾದವರಲ್ಲಿ ಶಿವಸಂಸ್ಕಾರ ಇರಲೇಬೇಕು.ಹಣೆಗೆ ವಿಭೂತಿ ಧರಿಸುವುದು ಮತ್ತು ಕೊರಳಲ್ಲಿ ಇಷ್ಟಲಿಂಗವನ್ನು ಧರಿಸುವುದು ಹಾಗೂ ನಿತ್ಯಶಿವಾರ್ಚನೆ ಮಾಡುವುದು ಶಿವಸಂಸ್ಕಾರ,ಶಿವಭಕ್ತರ ಲಕ್ಷಣ.ಇಂತಹ ಶಿವಸಂಸ್ಕಾರವುಳ್ಳ ಊರುಗಳತ್ತ ಹೋದರೆ ಹಣೆಗೆ ವಿಭೂತಿಧರಿಸಿದವರ,ಕೊರಳಲ್ಲಿ ಲಿಂಗ ಉಳ್ಳವರ ಮತ್ತು ಶಿವೋಪಾಸನೆ ಮಾಡುತ್ತಿರುವವರನ್ನು ಕಂಡವರಲ್ಲಿಯೂ ಶಿವಭಕ್ತಿ ಹುಟ್ಟುವುದಾದ್ದರಿಂದ ಅಂತಹ ಗ್ರಾಮಗಳತ್ತ ಹೋಗಬೇಕು.ಶಿವಭಕ್ತರಿರದ ಊರುಗಳತ್ತ ಕಾಲಿಡಬಾರದು ಎನ್ನುವ ಬಸವಣ್ಣನವರು ಶಿವಸಂಸ್ಕಾರದಿಂದಲೇ ಭಕ್ತರಿಗೆ ಸದ್ಗತಿಯುಂಟಾಗುವುದರಿಂದ ಭಕ್ತರಾದವರು ಶಿವಸಂಸ್ಕಾರವಿರುವ,ಶಿವಪರಿಸರದಲ್ಲಿರಬೇಕು ಎನ್ನುತ್ತಾರೆ.

ಹಿಂದೆ ಹಳ್ಳಿಗಳಲ್ಲಿ ಪ್ರತಿಮನೆಯಲ್ಲಿಯೂ ಜನರು ಎದ್ದು ಮುಖ ತೊಳೆದುಕೊಂಡೊಡನೆ ಹಣೆಗೆ ವಿಭೂತಿಯನ್ನು ಧರಿಸುತ್ತಿದ್ದರು.ಕೆಲವರು ಇಷ್ಟಲಿಂಗೋಪಾಸನೆ,ಶಿವೋಪಾಸನೆ ಮಾಡದ ಹೊರತು ನೀರನ್ನು ಸಹ ಕುಡಿಯುತ್ತಿರಲಿಲ್ಲ.ಬಸವಣ್ಣನವರ ಪ್ರಭಾವಕ್ಕೊಳಗಾಗಿದ್ದ ಕರುನಾಡಿನ ಗ್ರಾಮಗಳು ಶಿವಸಂಸ್ಕಾರವನ್ನುಳ್ಳ ಶಿವಭಕ್ತರುಗಳಿಂದಾಗಿ ಶಿವನನೆಲೆಮನೆಗಳಾಗಿದ್ದವು,ಭೂಕೈಲಾಸವಾಗಿದ್ದವು.ಆದರೆ ಈಗ ಕಾಲವಿಪರೀತ ಎನ್ನುವಂತೆ ವಿಭೂತಿ ಧರಿಸುವವರನ್ನೇ ಅಪಹಾಸ್ಯಮಾಡಿ ನಗುವ,ಹಳ್ಳಿಯ ಗೊಡ್ಡು ಎನ್ನುವ ಅವಿವೇಕತನ ಕಂಡು ಬರುತ್ತಿದೆ.ಹಳ್ಳಿಗಳಲ್ಲಿಯೂ ಕೂಡ ಹಳೆಯ ತಲೆಮಾರಿನ ಜನರು ಮಾತ್ರ ವಿಭೂತಿ ಧರಿಸುತ್ತಾರಲ್ಲದೆ ಹೊಸಪೀಳಿಗೆಯವರಲ್ಲಿ ವಿಭೂತಿ ಧಾರಣೆಯ ಬಗ್ಗೆ ಅಸಸ್ಡೆ ಮನೋಭಾವನೆ ಉಂಟಾಗಿದೆ.ವೀರಶೈವರು,ಲಿಂಗಾಯತರ ಮನೆಗಳಲ್ಲಿಯೇ ಮಕ್ಕಳು,ಯುವಕ ಯುವತಿಯರು ವಿಭೂತಿ ಧರಿಸುತ್ತಿಲ್ಲ ಎಂದ ಬಳಕ ಇತರರ ಪಾಡೇನು ? ಬಗೆಬಗೆಯ ಪೌಡರ್,ಸುಗಂಧ ದ್ರವ್ಯಗಳಿಗೆ ಮಾರುಹೋಗಿರುವ ಯುವಜನತೆಗೆ ವಿಭೂತಿಧಾರಣೆಯ ಮಹತ್ವ ತಿಳಿಯದು.ಕರ್ನಾಟಕ ಸರಕಾರವು ಬಸವಣ್ಣನವರನ್ನು’ ಕರ್ನಾಟಕದ ಸಾಂಸ್ಕೃತಿಕ ನಾಯಕರು’ ಎಂದು ಘೋಷಿಸಿದೆಯಲ್ಲದೆ ೨೦೨೪ ರ ಫೆಬ್ರವರಿ ೧೬ ರಂದು ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮಂಡಿಸಿದ ೨೦೨೪ ನೇ ಸಾಲಿನ ಬಜೆಟಿನಲ್ಲಿ ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕರು ಎಂದು ಘೋಷಿಸಿದ್ದನ್ನು ಪ್ರಸ್ತಾಪಿಸಿ ಆ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳುವುದಾಗಿ ಘೋಷಿಸಿದ್ದಾರೆ.ಶಾಲೆ- ಕಾಲೇಜು,ಸರಕಾರಿ ಕಛೇರಿಗಳಲ್ಲಿ ‘ ಬಸವಣ್ಣನವರು ಕರ್ನಾಟಕದ ಸಾಂಸ್ಕೃತಿಕ ನಾಯಕರು’ ಎಂದು ಬೋರ್ಡ್ ಗಳನ್ನು ಬರೆಯಿಸುವ,ಸರಕಾರಿ ಕಛೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಅಳವಡಿಸುವ ಇವೇ ಮುಂತಾದ ಬಸವಪರಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿದ್ದಾರೆ.ಇವೆಲ್ಲ ಉತ್ತಮ ಕ್ರಮಗಳೇ ನಿಜ.ಆದರೆ ಬಸವಣ್ಣನವರು ಈ ವಚನದಲ್ಲಿ ಹೇಳಿದಂತೆ ಗ್ರಾಮಗಳನ್ನು ಶಿವಸಂಸ್ಕೃತಿಯ ತಾಣಗಳನ್ನಾಗಿ ಪರಿವರ್ತಿಸಿದರೆ ಅದು ಬಹುದೊಡ್ಡಕಾರ್ಯವೆನ್ನಿಸುತ್ತದೆ.ಹಳ್ಳಿಗಳಲ್ಲಿ ವಿಭೂತಿಧಾರಣೆ,ಲಿಂಗೋಪಾಸನೆ ಮತ್ತು ಶಿವೋಪಾಸನೆಯನ್ನು ಬೆಂಬಲಿಸುವಂತಹ ಸ್ಫೂರ್ತಿ,ಪ್ರೇರಣೆಗಳನ್ನು ನೀಡುವ ಹಲಕೆಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದು.ಶಿವಸಂಸ್ಕಾರ ಉಳ್ಳ ಓಣಿ,ವಾರ್ಡ್,ಬಡಾವಣೆಗಳನ್ನು ‘ಬಸವವಾರ್ಡ್ ‘ಎಂದು ಕರೆಯಬಹುದು.ಶಿವಸಂಸ್ಕಾರವುಳ್ಳ ಗ್ರಾಮಗಳನ್ನು ‘ಬಸವಗ್ರಾಮ ‘ಎಂದು ಕರೆಯಬಹುದು.ಹಳ್ಳಿಗಳಲ್ಲಿ ಯುವಕರು ಒಂದೆಡೆ ಕಲೆತು ಕೂಡಲು ಕಟ್ಟೆಗಳನ್ನು ನಿರ್ಮಿಸಿ ಅವುಗಳಿಗೆ ‘ ಬಸವಕಟ್ಟೆ’ ಎಂದು ಹೆಸರಿಡಬಹುದು.ಮಹಾಪುರುಷರುಗಳನ್ನು ತಮ್ಮ ತಮ್ಮ ಜಾತಿಗಳಿಗೆ ಸೀಮಿತಗೊಳಿಸಿಕೊಂಡು ಮಹಾಪುರುಷರಗಳ ತತ್ತ್ವ ಸಂದೇಶಗಳನ್ನು ಮರೆತದ್ದರಿಂದ ಫೋಟೋ ಮತ್ತು ಕಟ್ಟೆಗಳ ಸ್ಥಾಪನೆಯ ಕಾರಣದಿಂದ ಹಳ್ಳಿಗಳಲ್ಲಿ ಸಂಘರ್ಷವೇರ್ಪಡುತ್ತಿದೆ.ಇಂತಹ ಸಂಘರ್ಷದ ವಾತಾವರಣವನ್ನು ಕಡಿಮೆಮಾಡಲು ‘ ಬಸವಕಟ್ಟೆ’ ಗಳನ್ನು ನಿರ್ಮಿಸಿ ಯುವಕರಲ್ಲಿ ಶಿವಸಂಸ್ಕೃತಿ,ಬಸವ ಸಂಸ್ಕೃತಿಯನ್ನು ಬೆಳೆಸಬಹುದು.ಶಿವಸಂಸ್ಕೃತಿ ,ಬಸವ ಭಕ್ತಿಯನ್ನು ಬೆಳೆಸಲು ಪೂರಕವಾಗುವಂತೆ ಗೌರವಧನದ ಆಧಾರದ ಮೇಲೆ ಕೀರ್ತನಕಾರರು,ಪ್ರವಚನಕಾರರುಗಳನ್ನು ನೇಮಿಸಿಕೊಂಡು ಅವರುಗಳನ್ನು ಹಳ್ಳಿ ಹಳ್ಳಿಗೆ ಕಳುಹಿಸಿ ಶಿವಸಂಸ್ಕಾರವನ್ನುಂಟು ಮಾಡುವ ಕ್ರಮಗಳನ್ನು ಕೈಗೊಳ್ಳಬಹುದು.ಪ್ರತಿ ಗ್ರಾಮಪಂಚಾಯತಿಯಲ್ಲಿ ಒಂದು ‘ಬಸವಭವನ’ ಇಲ್ಲವೆ ‘ ಬಸವ ಸಾಂಸ್ಕೃತಿಕ ಭವನ’ ವನ್ನು ನಿರ್ಮಿಸಿ ಅಲ್ಲಿ ಬಸವಸಂಸ್ಕೃತಿ,ಶಿವಸಂಸ್ಕೃತಿಯು ಪಸರಿಸುವಂತೆ ನೋಡಿಕೊಳ್ಳಬೇಕು.ಇದಕ್ಕೆ ಸರಕಾರದ ಅನುದಾನವೇ ಬೇಕಿಲ್ಲ.ಗ್ರಾಮಗಳಲ್ಲಿ ಜನರ ದೇಣಿಗೆ ಪಡೆಯಬಹುದು,ಬಸವಭಕ್ತರಾದ ವ್ಯಾಪಾರಸ್ಥರು,ಉದ್ಯಮಿಗಳಿಂದ ದೇಣಿಗೆ ಪಡೆದು ನಿರ್ಮಿಸಬಹುದು.ಸಾಮ್ರಾಟ ಅಶೋಕ ಬೌದ್ಧಧರ್ಮದ ಪ್ರಸಾರಕ್ಕಾಗಿ ತನ್ನ ಮಕ್ಕಳನ್ನು ಸಿಲೋನ್ ಅಥವಾ ಇಂದಿನ ಶ್ರೀಲಂಕಾಕ್ಕೆ ಕಳುಹಿಸಿದ್ದನಂತೆ.ಬಸವಣ್ಣನವರ ಅನುಯಾಯಿಗಳಾಗಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಹಳ್ಳಿಗಳು ಶಿವಪುರವಾಗಬೇಕು ಎನ್ನುವ ಬಸವಣ್ಣನವರ ಕನಸನ್ನು ಕೆಲವು ಗ್ರಾಮಗಳಲ್ಲಿಯಾದರೂ ಅನುಷ್ಠಾನಕ್ಕೆ ತರಬಹುದಲ್ಲ ! ಮುಖ್ಯಮಂತ್ರಿ ಸಿದ್ಧರಾಮಯ್ಯನವರು ನಿನ್ನೆ ಅಂದರೆ ಫೆಬ್ರುವರಿ ೧೬ ರಂದು ಅವರ ೧೫ ನೆಯ ಬಜೆಟ್ ಮಂಡಿಸುವುದಕ್ಕೂ ಇಂದು ಬಸವಣ್ಣನವರ ಶಿವಸಂಸ್ಕೃತಿಗ್ರಾಮ,ಶಿವಸಂಸ್ಕೃತಿ ಪರಿಸರ ನಿರ್ಮಾಣದ ಪರ ಇರುವ ವಚನವು ಬಸವೋಪನಿಷತ್ತಿನ ೪೫ ನೆಯ ವಚನವಾಗಿ ಬರುವುದಕ್ಕೂ ಏನೋ ವಿಶೇಷಕಾರಣ ಇರಬೇಕು ಎನ್ನಿಸುತ್ತದೆ ನನಗೆ.ಇದು ಶಿವ ಸಂಕಲ್ಪ,ಬಸವಪ್ರೇರಣೆ ಇದ್ದರೂ ಇರಬಹುದು.

೧೭.೦೨.೨೦೨೪

About The Author