ಚುನಾವಣಾ ಬಾಂಡ್ ರದ್ಧತಿ — ಸುಪ್ರೀಂ ಕೋರ್ಟಿನ ಅತಿ ಮಹತ್ವದ ತೀರ್ಪು

ಮೂರನೇ ಕಣ್ಣು : ಚುನಾವಣಾ ಬಾಂಡ್ ರದ್ಧತಿ — ಸುಪ್ರೀಂ ಕೋರ್ಟಿನ ಅತಿ ಮಹತ್ವದ ತೀರ್ಪು : ಮುಕ್ಕಣ್ಣ ಕರಿಗಾರ

ಭಾರತದ ಸರ್ವೋಚ್ಛ ನ್ಯಾಯಾಲಯವು ನಿನ್ನೆ ಅಂದರೆ 2024 ರ ಫೆಬ್ರುವರಿ 15 ರಂದು ‘ ಚುನಾವಣಾ ಬಾಂಡ್ಗಳನ್ನು ರದ್ದುಪಡಿಸಿ,ಪಾರದರ್ಶಕವಲ್ಲದ ರೀತಿಯಲ್ಲಿ ರಾಜಕೀಯ ಪಕ್ಷಗಳು ಸಂಪನ್ಮೂಲ ಸಂಗ್ರಹಿಸುವ ಚುನಾವಣಾ ಬಾಂಡ್ ಗಳು ಅಸಾಂವಿಧಾನಿಕ’ ಎಂದು ಬಹುಮಹತ್ವದ ತೀರ್ಪನ್ನು ನೀಡಿದೆ.ಇತ್ತೀಚಿನ ವರ್ಷಗಳಲ್ಲಿ ಸುಪ್ರೀಂಕೋರ್ಟಿನಿಂದ ಹೊರಬಂದ ಅತಿಮಹತ್ವದ ತೀರ್ಪು ಇದಾಗಿದ್ದು ಭಾರತದ ಜನತೆಯು ಸುಪ್ರೀಂಕೋರ್ಟಿನ ಬಗ್ಗೆ ವಿಶ್ವಾಸಹೊಂದಿರುವಂತೆ ಪ್ರೇರೇಪಿಸಬಲ್ಲ ತೀರ್ಪು ಇದು.ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿಗೆ ಮುಖಭಂಗ ಮತ್ತು ಭಾರಿ ಹಿನ್ನಡೆಯಾದ ಸುಪ್ರೀಂಕೋರ್ಟಿನ ಈ ತೀರ್ಪು ಭಾರತದ ಪ್ರಜಾಪ್ರಭುತ್ವವನ್ನು ಬಲಪಡಿಸುವ ತೀರ್ಪು. ರಾಜಕೀಯ ಪಕ್ಷಗಳು ಕಾರ್ಪೋರೇಟ್ ಸಂಸ್ಥೆಗಳು,ವ್ಯಕ್ತಿಗಳಿಂದ ಪಡೆಯುವ ದೇಣಿಗೆಯ ಬಗ್ಗೆ ಮಾಹಿತಿ ಪಡೆಯುವ ಮತದಾರರ ಸಾಂವಿಧಾನಿಕ ಹಕ್ಕು ಮತ್ತು ಮಾಹಿತಿಹಕ್ಕಿನ ಪಾರಮ್ಯವನ್ನು ಎತ್ತಿಹಿಡಿದ ಸರ್ವೋಚ್ಛ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿ ಡಿ.ವೈ .ಚಂದ್ರಚೂಡ್ ಅವರ ಅಧ್ಯಕ್ಷತೆಯಲ್ಲಿನ ಐವರು ನ್ಯಾಯಾಧೀಶರುಗಳ ಸಂವಿಧಾನ ಪೀಠದ ಈ ತೀರ್ಪು ಐತಿಹಾಸಿಕ ತೀರ್ಪು.

‌ ಈ ಹಿಂದೆ ಅರುಣ್ ಜೇಟ್ಲಿ ಅವರು ಕೇಂದ್ರ ಹಣಕಾಸು ಸಚಿವರಾಗಿದ್ದಾಗ 2017 ರಲ್ಲಿ ಬಿಜೆಪಿ ಸರಕಾರವು ಚುನಾವಣಾ ಬಾಂಡುಗಳನ್ನು ಜಾರಿಗೆ ತಂದಿತ್ತು.’ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಚುನಾವಣಾ ಬಾಂಡ್ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ’ ಎಂದು ಕೇಂದ್ರ ಸರಕಾರವು ಸಮರ್ಥಿಸಿಕೊಂಡಿತ್ತಾದರೂ ಚುನಾವಣಾ ಬಾಂಡ್ ಗಳ ಮೂಲಕ ಹೇಗೆ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಲಾಗುತ್ತದೆ ಎನ್ನುವುದನ್ನು ಹೇಳಿರಲಿಲ್ಲ.ಚುನಾವಣಾ ಬಾಂಡ್ ಗಳ ಯೋಜನೆಯು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಪಕ್ಷಕ್ಕೆ ಹೆಚ್ಚು ಅನುಕೂಲವಾಗುವಂತೆ ರೂಪಿಸಿದ ಮುಚ್ಚಿಡುವ ,ಬಚ್ಚಿಡುವ ರಾಜನೀತಿಯ ಪ್ರತೀಕವಾದ ಯೋಜನೆ ಎಂಬುದನ್ನು ಮನಗಂಡೇ ಸುಪ್ರೀಂಕೋರ್ಟಿನ ಮುಖ್ಯನ್ಯಾಯಾಧೀಶರ ನೇತ್ವತ್ವದಲ್ಲಿನ ಐವರು ನ್ಯಾಯಾಧೀಶರುಗಳ ಸಾಂವಿಧಾನಿಕ ಪೀಠವು ‘ ಚುನಾವಣಾ ಬಾಂಡ್ ಗಳ ಯೋಜನೆಯು ಅಸಾಂವಿಧಾನಿಕ ಯೋಜನೆ’ ಎಂದು ಘೋಷಿಸಿದೆ.ಇದಲ್ಲದೆ ಸುಪ್ರೀಂಕೋರ್ಟ್ ಚುನಾವಣಾ ಬಾಂಡುಗಳ ವಿತರಣೆಯ ಹಕ್ಕು ಅಧಿಕಾರ ಪಡೆದಿದ್ದ ಏಕೈಕ ಬ್ಯಾಂಕ್ ಆಗಿದ್ದ ಭಾರತೀಯ ಸ್ಟೇಟ್ ಬ್ಯಾಂಕಿಗೆ 2019 ರ ಎಪ್ರಿಲ್ 12 ರ ನಂತರ ಖರೀದಿಸಲ್ಪಟ್ಟ ಚುನಾವಣಾ ಬಾಂಡುಗಳ ವಿವರಗಳನ್ನು ಕೇಂದ್ರಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು ಮತ್ತು ಕೇಂದ್ರ ಚುನಾವಣಾ ಆಯೋಗವು ಎಸ್ ಬಿ ಐ ನೀಡಿದ ಈ ವಿವರಗಳನ್ನು ಮಾರ್ಚ್ 13 ರ ಒಳಗಾಗಿ ತನ್ನ ಅಧಿಕೃತ ವೆಬ್ ಸೈಟಿನಲ್ಲಿ ಪ್ರಕಟಿಸಬೇಕು ಎಂದು ತಾಕೀತು ಮಾಡಿ,ನಿರ್ದೇಶನ ನೀಡಿರುವುದು ಮಹತ್ವದ ಸಂಗತಿಯಾಗಿದೆ.ಚುನಾವಣಾ ಆಯೊಗವು ಚುನಾವಣಾ ಬಾಂಡ್ ಮೂಲಕ ರಾಜಕೀಯ ಪಕ್ಷಗಳಿಗೆ ಸಲ್ಲಿಸಿದ ದೇಣಿಗೆಯ ವಿವರಗಳನ್ನು ತನ್ನ ವೆಬ್ ಸೈಟಿನಲ್ಲಿ ಪ್ರಕಟಿಸುವುದರಿಂದ ಯಾವ ಯಾವ ಕಾರ್ಪೋರೇಟ್ ಸಂಸ್ಥೆಗಳು ಯಾವ ಯಾವ ರಾಜಕೀಯ ಪಕ್ಷಗಳಿಗೆ ಎಷ್ಟೆಷ್ಟು ದೇಣಿಗೆ ನೀಡಿವೆ ಎನ್ನುವ ವಿವರಗಳನ್ನು ಮತದಾರರ ಸಮುದಾಯ ತಿಳಿದುಕೊಳ್ಳಬಹುದು.

ಚುನಾವಣಾ ಬಾಂಡ್ ಗಳನ್ನು ಯಾರು ಬೇಕಾದರೂ ಖರೀದಿಸಬಹುದಿತ್ತು ಮತ್ತು ಯಾವ ರಾಜಕೀಯ ಪಕ್ಷಗಳಿಗಾದರೂ ದೇಣಿಗೆ ನೀಡಬಹುದಿತ್ತು.ಆದರೆ ಬಾಂಡ್ ಖರೀದಿಸಿ ದೇಣಿಗೆ ನೀಡಿದವರ ವಿವರ ದೇಣಿಗೆ ಸ್ವೀಕರಿಸಿದ ರಾಜಕೀಯ ಪಕ್ಷಕ್ಕೆ ಅಲ್ಲದೆ ಬೇರೆ ಯಾರಿಗೂ ತಿಳಿಯುತ್ತಿರಲಿಲ್ಲ.ಭಾರತೀಯ ಸ್ಟೇಟ್ ಬ್ಯಾಂಕ್ ಸರಕಾರಿ ಸ್ವಾಮ್ಯದ ಬ್ಯಾಂಕ್ ಆಗಿದ್ದುದರಿಂದ ಕೇಂದ್ರಸರಕಾರವು ಚುನಾವಣಾ ಬಾಂಡ್ಗಳ ಬಗ್ಗೆ ಮಾಹಿತಿ ಪಡೆಯಬಹುದಿತ್ತಲ್ಲದೆ ವಿರೋಧ ಪಕ್ಷಗಳಿಗೂ ಈ ಬಗ್ಗೆ ಮಾಹಿತಿ ಸಿಗುತ್ತಿರಲಿಲ್ಲ.ಮಾಹಿತಿ ಹಕ್ಕಿನಡಿ ಚುನಾವಣಾ ಬಾಂಡ್ ನ ಮೂಲಕ ರಾಜಕೀಯ ಪಕ್ಷಗಳು ಸಂಗ್ರಹಿಸಿದ ಹಣದ ವಿವರಗಳನ್ನೂ ಕೇಳುವಂತಿರಲಿಲ್ಲ.ಯಾವ ಮೂಲದಿಂದಲೂ ಚುನಾವಣಾ ಬಾಂಡುಗಳ ಮೂಲಕ ಸಂಗ್ರಹವಾದ ಹಣದ ಬಗ್ಗೆ ಮಾಹಿತಿಸಿಗುತ್ತಿರಲಿಲ್ಲ.ಹೀಗಿರುವಾಗ ಇದು ಹೇಗೆ ಪಾರದರ್ಶಕ ಯೋಜನೆಯಾಗಬಲ್ಲುದು ?ಕೇಂದ್ರ ಸರಕಾರವು ಭಾರತದ ಕೇಂದ್ರೀಯ ಬ್ಯಾಂಕ್ ಆದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಆಕ್ಷೇಪ ಮತ್ತು ಸಲಹೆಯನ್ನು ಬದಿಗೊತ್ತಿ ಚುನಾವಣಾ ಬಾಂಡುಗಳ ಯೋಜನೆಯನ್ನು ಜಾರಿಗೆ ತಂದಿತ್ತು ಎನ್ನುವುದು ಕೇಂದ್ರದ ಬಿಜೆಪಿ ಸರಕಾರದ ಅರ್ಥವ್ಯವಸ್ಥೆಯ ಮೇಲೂ ದಾಳಿಮಾಡಿದ ಸ್ವಾರ್ಥಸಾಧನೆಯ ಸರ್ವಾಧಿಕಾರಿ ಧೋರಣೆಯಾಗಿತ್ತು.ಆರ್ ಬಿ ಐ ನ ಅಂದಿನ ಗವರ್ನರ್ ಉರ್ಜಿತ್ ಪಟೇಲ್ ಅವರು ಕೇಂದ್ರದ ಉದ್ದೇಶಿತ ಚುನಾವಣಾ ಬಾಂಡುಗಳ ಯೋಜನೆಯ ಬಗ್ಗೆ ತಮ್ಮ ತೀವ್ರ ಅಸಮಾಧಾನ ವ್ಯಕ್ತಪಡಿಸಿ,ಪಾರದರ್ಶಕವಲ್ಲದ ಚುನಾವಣಾ ಬಾಂಡುಗಳ ಯೋಜನೆಯನ್ನು ಜಾರಿಗೆ ತರುವ ಅಗತ್ಯವಿಲ್ಲ ಎನ್ನುವ ಆಕ್ಷಪಣೆಯನ್ನುಳ್ಳ ಸಲಹೆಯನ್ನು ನೀಡಿದ್ದರು.’ ಇಂತಹ ಬಾಂಡುಗಳನ್ನು ವಿತರಿಸುವ ಅಧಿಕಾರ ಇರುವುದು ರಿಸರ್ವ್ ಬ್ಯಾಂಕಿಗೆ ಮಾತ್ರ.ಆದರೆ ಸರಕಾರವು ರೂಪಿಸಿದ ಯೋಜನೆಯಲ್ಲಿ ಎಸ್ ಬಿ ಐ ಗೆ ಅಧಿಕಾರ ನೀಡಲಾಗುತ್ತಿದೆ.ಇದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ’ ಎಂದಿದ್ದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗೌರ್ನರ್ ಉರ್ಜಿತ್ ಪಟೇಲ್ ಅವರ ಸಲಹೆಯು ಕೇಂದ್ರ ಸರಕಾರಕ್ಕೆ ರುಚಿಸಲಿಲ್ಲ!ಕೇಂದ್ರದ ಬಿಜೆಪಿ ಸರಕಾರವು ಭಾರತೀಯ ರಿಸರ್ವ್ ಬ್ಯಾಂಕಿನ ಸಾಂವಿಧಾನಿಕ ಅಧಿಕಾರವನ್ನು ಮೊಟಕುಗೊಳಿಸಿ ‘ ಹಣಕಾಸು ಮಸೂದೆ ‘( money bill )ಯ ಹೆಸರಿನಲ್ಲಿ ಸಂಸತ್ತಿನಲ್ಲಿ ಮಂಡಿಸಿ,ಅನುಮೋದನೆ ಪಡೆದುಕೊಂಡಿತು.ಸಂಸತ್ತಿನಲ್ಲಿ ಚರ್ಚೆಯೇ ಇಲ್ಲದೆ ಈ ಮಸೂದೆಯು ಅಂಗೀಕಾರಗೊಂಡಿತು ! ಸಂಸತ್ತಿನ ಅಂಗೀಕಾರ ಪಡೆಯಲಾಗಿದೆ ಎಂದು ‘ ಚುನಾವಣಾ ಬಾಂಡ್ ಯೋಜನೆ — 2018’ ಎಂದು ಗೆಜೆಟಿನಲ್ಲಿ ಪ್ರಕಟಿಸುವ ಮೂಲಕ ಅದನ್ನು ಕಾಯ್ದೆಯಾಗಿ ಜಾರಿಗೊಳಿಸಲಾಯಿತು.ಚುನಾವಣಾ ಬಾಂಡುಗಳಿಗೆ ಸಂಬಂಧಿಸಿದ ಕೇಂದ್ರ ಬಿಜೆಪಿ ಪಕ್ಷದ ಚಟುವಟಿಕೆಗಳನ್ನು ಗಮನಿಸಿದಾಗ ಎಲ್ಲಿಯೂ ಪಾರದರ್ಶಕತೆ ಇರಲಿಲ್ಲ,ದೇಶದ ಆರ್ಥಿಕ ಹಿತವನ್ನು ಕಾಪಾಡುವ ಯಾವ ಉದ್ದೇಶವೂ ಇರಲಿಲ್ಲ ಎನ್ನುವ ಅಂಶಗಳು ಎದ್ದು ಕಾಣಿಸುತ್ತವೆ.

ಚುನಾವಣಾ ಬಾಂಡುಗಳು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಪಕ್ಷಕ್ಕೆ ಹೆಚ್ಚು ಅನುಕೂಲಕರವಾದ ಯೋಜನೆ ಎನ್ನುವುದು ಆ ಪಕ್ಷವು ಚುನಾವಣಾ ಬಾಂಡುಗಳ ಮೂಲಕ ಸಂಗ್ರಹಿಸಿದ ಅತಿಹೆಚ್ಚು ಹಣದಿಂದಲೇ ಗೊತ್ತಾಗುತ್ತಿದೆ.2017-18 ರಿಂದ 2022-23 ರ ಮಾರ್ಚ್ ವರೆಗೆ ಚುನಾವಣಾ ಬಾಂಡುಗಳ ಮೂಲಕ ಒಟ್ಟು ₹ 11,986.63 ಕೋಟಿಗಳ ಹಣ ಸಂಗ್ರಹವಾಗಿದ್ದು ಇದರಲ್ಲಿ ಬಿಜೆಪಿಯ ಪಾಲೇ ₹ 6566.12 ಕೋಟಿಗಳಷ್ಟಿದೆ.ಕಾಂಗ್ರೆಸ್ ಪಕ್ಷವು ₹1123.31 ಕೋಟಿಗಳಷ್ಟು,ಟಿಎಂಸಿಯು ₹1092.98 ಕೋಟಿ,ಬಿಜೆಡಿಯು ₹774 ಕೋಟಿ,ಡಿಎಂಕೆಯು ₹615.50 ಕೋಟಿ,ಬಿಆರ್ಎಸ್ ₹912.68 ಮತ್ತು ವೈಎಸ್ಆರ್ಸಿಯು ₹383.44 ಕೋಟಿಗಳಷ್ಟು ಹಣವನ್ನು ಚುನಾವಣಾ ಬಾಂಡ್ ಗಳ ಮೂಲಕ ಸಂಗ್ರಹಿಸಿವೆ.ಸಿಪಿಎಂ ಪಕ್ಷವು‌ ಒಂದೇ ಚುನಾವಣಾ ಬಾಂಡ್ ಗಳ ಮೂಲಕ ದೇಣಿಗೆ ಸ್ವೀಕರಿಸುವುದಿಲ್ಲ ಎಂದು ಘೋಷಿಸಿ,ಅದರಂತೆ ನಡೆದುಕೊಂಡ ಪಕ್ಷವಾಗಿದೆಯಲ್ಲದೆ ಈ ಬಗ್ಗೆ ಇತರರ ಜೊತೆಗೂಡಿ ಸುಪ್ರೀಂಕೋರ್ಟಿನಲ್ಲಿ ದಾವೆಹೂಡಿದ ಪಕ್ಷವೂ ಆಗಿದೆ.

ಪಾರದರ್ಶಕವಲ್ಲದ ರೀತಿಯಲ್ಲಿ ಚುನಾವಣಾ ಬಾಂಡ್ ಗಳ ಮೂಲಕ ಹಣ ಸಂಗ್ರಹಿಸುವುದು ಪ್ರಜಾಪ್ರಭುತ್ವಕ್ಕೆ ಮಾರಕವಾಗುತ್ತದೆ.ದೊಡ್ಡ ದೊಡ್ಡ ಕಾರ್ಪೋರೇಟ್ ಸಂಸ್ಥೆಗಳು ತಮ್ಮ ಹಿತವನ್ನು ಕಾಪಾಡಿಕೊಳ್ಳಲು ಮತ್ತು ಕೇಂದ್ರ ಹಾಗೂ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ರಾಜಕೀಯ ಪಕ್ಷಗಳಿಗೆ ಬೃಹತ್ ಮೊತ್ತದ ಅನಾಮಧೇಯ ವಂತಿಗೆಯನ್ನು ಸಲ್ಲಿಸಿ ಸರಕಾರಗಳಿಂದ ತಮಗೆ ಅನುಕೂಲವಾದ ಆರ್ಥಿಕ ನೀತಿಗಳು ಜಾರಿಗೆ ಬರುವಂತೆ ನೋಡಿಕೊಳ್ಳುತ್ತವೆ.ಇದು ರಾಷ್ಟ್ರದ ಮತ್ತು ಜನತೆಯ ಹಿತಕ್ಕೆ ವಿರುದ್ಧವಾದ ನಡೆ.ಆದರೂ ಸಂಪನ್ಮೂಲಗಳ ಸಂಗ್ರಹದ ಆಸೆಗಾಗಿ ರಾಜಕೀಯ ಪಕ್ಷಗಳು ಕಾರ್ಪೋರೇಟ್ ಸಂಸ್ಥೆಗಳ ಹಿತಕಾಯುವ ಆರ್ಥಿಕ ನೀತಿಗಳನ್ನು ರೂಪಿಸುತ್ತವೆ.ಪ್ರಜಾಪ್ರಭುತ್ವದಲ್ಲಿ ಪ್ರಭುಗಳಾಗಿರುವ ಮತದಾರರ ಹಿತವನ್ನು ಕಾಪಾಡುವುದು ಸರಕಾರಗಳ ಆದ್ಯಕರ್ತವ್ಯ.ಆದರೆ ಕಾರ್ಪೋರೇಟ್ ವಲಯದ ಹಂಗಿಗೆ ಸಿಕ್ಕ ಸರಕಾರಗಳು ಜನತೆಯ ಹಿತಾಸಕ್ತಿಗೆ ವಿರುದ್ಧವಾದ ನೀತಿನಿಯಮಗಳನ್ನು ರೂಪಿಸುತ್ತವೆ.ಮತದಾರರಿಗೆ ಯಾವ ಕಾರ್ಪೋರೇಟ್ ಸಂಸ್ಥೆಯು ಯಾವ ರಾಜಕೀಯ ಪಕ್ಷಕ್ಕೆ ಹೆಚ್ಚಿನ ದೇಣಿಗೆ ನೀಡಿದೆ ಎನ್ನುವುದನ್ನು ತಿಳಿದುಕೊಳ್ಳುವ ಅಧಿಕಾರ ಅವರ ಮತದಾನದ ಹಕ್ಕಿನಲ್ಲಿಯೇ ಅಂತರ್ಗತವಾಗಿದೆ.ಕಾರ್ಪೊರೇಟ್ ಸಂಸ್ಥೆಗಳು ಚುನಾವಣಾ ಬಾಂಡ್ ಗಳ ರೂಪದಲ್ಲಿ ಸರಕಾರಗಳನ್ನು ಖರೀದಿಸುತ್ತಿರುವ ಸಲ್ಲದ ವಿದ್ಯಮಾನಗಳ ಬಗ್ಗೆ ಮತದಾರರಿಗೆ ಅರಿವು ಇರಬೇಕಾಗುತ್ತದೆ.ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೂಡ ತಾವು ಪಡೆದ ದೇಣಿಗೆಯಿಂದಾಗಿ ಕಾರ್ಪೋರೇಟ್ ಸಂಸ್ಥೆಗಳ ಪರವಾಗಿ ಆರ್ಥಿಕ ನೀತಿ ನಿಯಮಗಳನ್ನು ರೂಪಿಸಿಲ್ಲ ಎನ್ನುವುದನ್ನು ಖಚಿತಪಡಿಸಬೇಕಾಗುತ್ತದೆ.ಇದೆಲ್ಲ ಸಾಧ್ಯವಾಗುವುದು ಚುನಾವಣಾ ಬಾಂಡುಗಳ ಬಗ್ಗೆ ಮತದಾರರಿಗೆ ತಿಳಿದುಕೊಳ್ಳುವ ಹಕ್ಕು ಅವಕಾಶ ಇದ್ದರೆ ಮಾತ್ರ.ಮತದಾರರ ಇಂತಹ ಹಕ್ಕು,ಅವಕಾಶಗಳನ್ನು ಕೇಂದ್ರದ ಬಿಜೆಪಿ ಸರಕಾರವು ಚುನಾವಣಾ ಬಾಂಡುಗಳ ಯೋಜನೆಯ ನೆಪದಲ್ಲಿ ಕಸಿದುಕೊಂಡಿದೆ ಎಂದೇ ಸುಪ್ರೀಂಕೋರ್ಟ್ ಚುನಾವಣಾ ಬಾಂಡುಗಳ ಯೋಜನೆಯನ್ನು ‘ ಅಸಾಂವಿಧಾನಿಕ’ ಎಂದು ಘೋಷಿಸಿ ಚುನಾವಣಾ ಬಾಂಡುಗಳನ್ನು ವಿತರಿಸದಂತೆ ರದ್ದುಪಡಿಸಿದೆ.

೧೬.೦೨.೨೦೨೪

About The Author