ಬೀದರ : ಬಸವಣ್ಣನವರು ಹನ್ನೆರಡನೆಯ ಶತಮಾನದಲ್ಲಿ ಶೋಷಿತರು,ಪದದುಳಿತರ ಉದ್ಧಾರಕ್ಕೆಂದೇ ಅವತರಿಸಿದ ಮಹಾಪುರುಷರಾಗಿದ್ದು ಅವರು ಸತ್ಯಶುದ್ಧ ಕಾಯಕದಿಂದ ಸರ್ವಜನಾದರಣೀಯರಾಗಿ,ವಿಶ್ವಮಾನ್ಯರಾಗಿದ್ದಾರೆ.ಬಸವಣ್ಣನವರ ವಿಶ್ವವಿಭೂತಿ ವ್ಯಕ್ತಿತ್ವ ಮತ್ತು ಅವರ ವಚನಗಳ ಸಾರ್ವತ್ರಿಕ, ಸಾರ್ವಕಾಲಿಕ ಸಂದೇಶವನ್ನು ಪರಿಚಯಿಸುವ ಕೃತಿಯಾಗಿದೆ ಮುಕ್ಕಣ್ಣ ಕರಿಗಾರ ಅವರ ‘ ಬಸವೋಪನಿಷತ್ತು’. ನಮ್ಮ ಉಪಕಾರ್ಯದರ್ಶಿಗಳಾದ ಮುಕ್ಕಣ್ಣ ಕರಿಗಾರ ಅವರು ಬಸವಣ್ಣನವರ ಮನುಕುಲೋದ್ಧಾರ ಬದ್ಧತೆಯ ವಚನಗಳನ್ನು ಆಯ್ದು ಸರಳ ಸುಂದರ ವ್ಯಾಖ್ಯಾನದ ಮೂಲಕ ‘ ಬಸವೋಪನಿಷತ್ತು’ ಕೃತಿಯನ್ನು ರಚಿಸಿದ್ದು ಇದು ಅವರ ಐವತ್ಮೂರನೆಯ ಪುಸ್ತಕವಾಗಿದ್ದು ಬಸವಣ್ಣನವರ ವಚನಾರ್ಥ ವಿಶ್ಲೇಷಣೆಯಾಗಿರುವುದರಿಂದ ಮಹತ್ವದ ಕೃತಿಯಾಗಿದೆ’ ಎಂದರು ಬೀದರ ಜಿಲ್ಲಾ ಪಂಚಾಯತಿಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾಕ್ಟರ್ ಗಿರೀಶ ದಿಲೀಪ್ ಬದೋಲೆಯವರು. ಅವರಿಂದು ಬಸವ ಜಯಂತಿಯ ಪ್ರಯುಕ್ತ ಬೀದರ ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಬಸವ ಜಯಂತಿ ಮತ್ತು ಮುಕ್ಕಣ್ಣ ಕರಿಗಾರ ಅವರ ಕೃತಿಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು,ಬಸವೋಪನಿಷತ್ತು ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡುತ್ತಿದ್ದರು.
ತಮ್ಮ ಮಾತುಗಳನ್ನು ಮುಂದುವರಿಸುತ್ತಾ ಡಾಕ್ಟರ್ ಗಿರೀಶ ದಿಲೀಪ್ ಬದೋಲೆಯವರು ‘ ಜಾಗತಿಕ ಇತಿಹಾಸದಲ್ಲಿ, ಸಮಾಜೋ ಧಾರ್ಮಿಕ ಸುಧಾರಕರ ಸಾಲಿನಲ್ಲಿ ಬಸವಣ್ಣನವರಿಗೆ ಅಗ್ರಮನ್ನಣೆಯ ವಿಶಿಷ್ಟಸ್ಥಾನವಿದೆ.ಪರಿಶುದ್ಧ ವ್ಯಕ್ತಿತ್ವದ,ದಯಾರ್ದ ಹೃದಯರಾಗಿದ್ದ ಬಸವಣ್ಣನವರು ಕಲ್ಯಾಣದಲ್ಲಿ ಅನುಭವ ಮಂಟಪವನ್ನು ಸ್ಥಾಪಿಸುವ ಮೂಲಕ ಜಗತ್ತಿನ ಪ್ರಜಾಪ್ರಭುತ್ವ ರಾಷ್ಟ್ರಗಳಿಗೆ ಮಾದರಿ ಸಂಸತ್ತನ್ನು ನೀಡಿದ್ದಾರೆ. ನಮ್ಮ ಪಾರ್ಲಿಮೆಂಟಿನ ಇಂದಿನ ಅಧಿವೇಶನದ ಸಂದರ್ಭದಲ್ಲಿ ಬಸವಣ್ಣನವರು ಹಾಕಿಕೊಟ್ಟ ಮಾದರಿಯಲ್ಲಿ ಸದನಗಳ ಕಾರ್ಯಕಲಾಪ ನಡೆಯುತ್ತಿದೆ.ಬಸವಣ್ಣನವರು ಮಹಾತ್ಮಗಾಂಧೀಜಿ, ಬಾಬಾಸಾಹೇಬ ಡಾಕ್ಟರ್ ಬಿ.ಆರ್.ಅಂಬೇಡ್ಕರ್ ಅವರಂತಹ ಧೀಮಂತ ನಾಯಕರುಗಳ ಮೇಲೆ ದಟ್ಟ ಪ್ರಭಾವ ಬೀರಿದ್ದರಿಂದ ನಮ್ಮ ಸಂವಿಧಾನದ ಹಲವು ಅನುಚ್ಛೇದಗಳಲ್ಲಿ ಬಸವಪ್ರಭಾವ,ಬಸವ ಸ್ಫೂರ್ತಿಯನ್ನು ಗುರುತಿಸಬಹುದು.ಬಸವಣ್ಣನವರ ಮಹಾನ್ ವ್ಯಕ್ತಿತ್ವವನ್ನು ಅನುಸರಿಸುವ ಮೂಲಕ,ಅವರ ತತ್ತ್ವಾದರ್ಶಗಳನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ನಾವು ಅವರಿಗೆ ಗೌರವಸಲ್ಲಿಸಬೇಕು” ಎಂದರು.
ಬೀದರ ಜಿಲ್ಲೆಯ ಹಿರಿಯ ಸಾಹಿತಿಗಳು, ಖಾದಿ ಮತ್ತು ಗ್ರಾಮೀಣ ಕೈಗಾರಿಕಾ ಇಲಾಖೆಯ ನಿವೃತ್ತ ಉಪನಿರ್ದೇಶಕರಾದ ರಮೇಶ ಮಠಪತಿಯವರು ಮುಕ್ಕಣ್ಣ ಕರಿಗಾರ ಅವರ ” ಬಸವೋಪನಿಷತ್ತು ” ಕೃತಿಯನ್ನು ಪರಿಚಯಿಸಿದರು.” ಬಸವ ಜಯಂತಿಯ ದಿನದಂದು ಬೀದರ ಜಿಲ್ಲಾ ಪಂಚಾಯತಿಯಲ್ಲಿ ‘ ಬಸವೋಪನಿಷತ್ತು’ ಎನ್ನುವ ವಿಶಿಷ್ಟ ಕೃತಿ ಲೋಕಾರ್ಪಣೆ ಗೈಯುವ ಮೂಲಕ ಜಿಲ್ಲಾ ಪಂಚಾಯತಿಯಲ್ಲಿ ಅರ್ಥಪೂರ್ಣವಾಗಿ ಬಸವಜಯಂತಿಯನ್ನು ಆಚರಿಸಲಾಗುತ್ತಿದೆ’ ಎಂದು ತಮ್ಮ ಮಾತುಗಳನ್ನಾರಂಭಿಸಿದ ಈಶ್ವರ ಮಠಪತಿಯವರು ” ಮುಕ್ಕಣ್ಣಕರಿಗಾರ ಅವರು ಬಸವಣ್ಣನವರ ಸಮಗ್ರ ವಚನಗಳಿಂದ ಆಯ್ದ ವಿಶ್ವದ ಎಲ್ಲರಿಗೂ ಅನ್ವಯವಾಗಬಹುದಾದ ನಲವತ್ತೆಂಟು ವಚನಗಳನ್ನು ಆಯ್ದು ಅವುಗಳಿಗೆ ಭಾಷ್ಯರೂಪದ ವ್ಯಾಖ್ಯಾನ ಬರೆಯುವ ಮೂಲಕ ಬಸವೋಪನಿಷತ್ತು ಎನ್ನುವ ಮಹತ್ವದ ಕೃತಿಯನ್ನು ರಚಿಸಿದ್ದಾರೆ.ಬಸವ ಸಾಹಿತ್ಯಾಸಕ್ತರಿಗೆಲ್ಲ ಅತ್ಯುಪಯುಕ್ತವಾದ ಈ ಕೃತಿಯಲ್ಲಿ ಸಾರ್ವತ್ರಿಕ ಸಂದೇಶ ಸಾರುವ ಬಸವಣ್ಣನವರ ವಚನಗಳನ್ನು ಆಯ್ದುಕೊಂಡಿದ್ದು ಆ ವಚನಗಳ ಆಯ್ಕೆಯಲ್ಲಿಯೂ ಕೂಡ ವೈಶಿಷ್ಟ್ಯ ಇದೆ.ಇಲ್ಲಿ ವ್ಯಾಖ್ಯಾನಕ್ಕೆ ಆಯ್ದುಕೊಂಡಿರುವ ವಚನಗಳು ಪ್ರಪಂಚ ತತ್ತ್ವ ಮತ್ತು ಪರಮಾರ್ಥ ತತ್ತ್ವ ಎನ್ನುವ ಎರಡು ವಿಧದ ವಿಂಗಡಣೆಗೆ ಒಳಪಟ್ಟಿದ್ದು ಪ್ರಪಂಚದಲ್ಲಿ ಅರ್ಥಪೂರ್ಣವಾಗಿ ಬದುಕುವ ಮೂಲಕ ಪರಮಾತ್ಮನ ಒಲವನ್ನು ಪಡೆಯಬಹುದು ಎನ್ನುವ ಪ್ರಪಂಚ ತತ್ತ್ವಕ್ಕೆ ಕೃತಿಯಲ್ಲಿ ಒತ್ತು ನೀಡಲಾಗಿದೆ.ಇಲ್ಲಿಯ ಪ್ರತಿ ವಚನಾರ್ಥ ವಿವರಣೆಗೆ ಸೊಗಸಾದ ,ಮೌಲಿಕವಾದ ಶೀರ್ಷಿಕೆಗಳನ್ನು ಇಟ್ಟಿರುವುದು ಕೃತಿಯ ಸತ್ತ್ವ ಮತ್ತು ಸೌಂದರ್ಯವನ್ನು ಹೆಚ್ಚಿಸಿದೆ.ಬಸವತತ್ತ್ವದ ಸರಳ ಸುಂದರ ನಿರೂಪಣೆಯಾದ ” ಬಸವೋಪನಿಷತ್ತು ” ಕೃತಿಯನ್ನು ಎಲ್ಲರೂ ಓದಬೇಕು” ಎಂದು ಈಶ್ವರ ಮಠಪತಿಯವರು ಅಭಿಪ್ರಾಯಿಸಿದರು.
ಬಸವೋಪನಿಷತ್ತು ಕೃತಿ ಬಿಡುಗಡೆಯ ಸುದ್ದಿ ತಿಳಿದು ದೇವದುರ್ಗದಿಂದ ಬಂದಿದ್ದ ದೇವದುರ್ಗ ತಾಲೂಕಾ ಸಾಹಿತ್ಯಪರಿಷತ್ತಿನ ಹಿಂದಿನ ಅಧ್ಯಕ್ಷ, ಮತ್ತು ಕವಿ ಸಾಹಿತಿ,ಪತ್ರಕರ್ತ,ಸಂವಿಧಾನಪ್ರಜ್ಞೆಯನ್ನು ವಿಸ್ತರಿಸುವಲ್ಲಿ ವಿಶೇಷ ಪರಿಶ್ರಮವಹಿಸುತ್ತಿರುವ ಬಸವರಾಜ ಬ್ಯಾಗವಾಟ್ ಅವರು ಕೃತಿಕಾರ ಮುಕ್ಕಣ್ಣ ಕರಿಗಾರ ಅವರನ್ನು ಪ್ರೀತಿ,ಗೌರವಪೂರ್ವಕವಾಗಿ ಸನ್ಮಾನಿಸಿದರು.
ಕೃತಿಯ ಲೇಖಕ ಮತ್ತು ಬೀದರ ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ,ಮುಖ್ಯ ಯೋಜನಾಧಿಕಾರಿ ಕಿಶೋರಕುಮಾರ ದುಬೆ, ಡಿ ಆರ್ ಡಿ ಎ ಯ ಯೋಜನಾನಿರ್ದೇಶಕ ಜಗನ್ನಾಥ ಮೂರ್ತಿ, ಶರಣಸಾಹಿತಿ ಈಶ್ವರ ಮಠಪತಿ,ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರ ರಾಮಲಿಂಗ ಬಿರಾದರ,ಪಂಚಾಯತ ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರಾದ ಶಿವಾಜಿ ಡೋಣಿ, ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ ಬಿ ಪಾಟೀಲ್,ಜಿಪಂಯ ಸಹಾಯಕ ಕಾರ್ಯದರ್ಶಿ ಬೀರೇಂದ್ರಸಿಂಗ್ ಸೇರಿದಂತೆ ಜಿಲ್ಲಾ ಪಂಚಾಯತಿಯ ಅಧಿಕಾರಿಗಳು, ಸಿಬ್ಬಂದಿಯವರು ಉಪಸ್ಥಿತರಿದ್ದರು.ಜಿಲ್ಲಾ ಪಂಚಾಯತಿಯ ಪ್ರವೀಣಸ್ವಾಮಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.