ಶಿವನಾಮಸ್ಮರಣೆಯಿಂದ ಶತಕೋಟಿ ಪಾಪಮುಕ್ತರಾಗಬಹುದು

ಬಸವೋಪನಿಷತ್ತು ೪೪ : ಶಿವನಾಮಸ್ಮರಣೆಯಿಂದ ಶತಕೋಟಿ ಪಾಪಮುಕ್ತರಾಗಬಹುದು : ಮುಕ್ಕಣ್ಣ ಕರಿಗಾರ

ಪಾತಕಶತಕೋಟಿಯನೊರಸಲು ಸಾಲದೆ ಒಂದು ಶಿವನ ನಾಮ ?
ಸಾಲದೆ ಒಂದು ಹರನ ನಾಮ ?
ಕೂಡಲ ಸಂಗಮದೇವಾ,
ನಿಮ್ಮ ಉಂಡಿಗೆಯ ಪಶುವ ಮಾಡಿದೆಯಾಗಿ ?

ಬಸವಣ್ಣನವರು ಶಿವಭಕ್ತರು ಶಿವನಾಮ ಸ್ಮರಣೆಯಿಂದ ಎಂತಹ ಘೋರಪಾಪಗಳಿಂದಲೂ ಮುಕ್ತರಾಗಬಹುದು ಎಂದು ಭಕ್ತಜನಕೋಟಿಗೆ ಶಿವಾಭಯ ಕರುಣಿಸಿದ್ದಾರೆ.ಒಂದು ಸಾರೆ ಶಿವ ಎನ್ನಲು ಶತಕೋಟಿಯಷ್ಟಿದ್ದ ಪಾಪಗಳೂ ಪರಿಹಾರವಾಗುತ್ತವೆ.ಒಂದು ಸಾರೆ ಹರ ಎನ್ನಲು ಅಸಂಖ್ಯಾತ ಪಾಪಗಳು ಪರಿಹಾರವಾಗುತ್ತವೆ.ಶಿವನ ಲಾಂಛನಗಳಿದ್ದವರ ಬಳಿ ಯಾವ ಪಾಪವೂ ಸುಳಿಯದು.

ಪಟ್ಟಭದ್ರರು ಮತ್ತು ಪುರೋಹಿತರುಗಳ ದುಷ್ಟಕೂಟವು ಜನಸಮುದಾಯವನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ದೇವರು ಧರ್ಮಗಳ ಅಸ್ತ್ರಬಳಸಿ ಜನಸಾಮಾನ್ಯರ ಬದುಕುಗಳನ್ನು ಬೆಂಗಾಡಾಗಿಸಿದ್ದರು.ಅರ್ಥವಿಲ್ಲದ ಶಾಪ ಪಾಪಗಳ ಭೀತಿಯನ್ನು ಜನಮಾನಸದಲ್ಲಿ ಬಿತ್ತಿ ತಮ್ಮ ಹಿತರಕ್ಷಣೆ ಮಾಡಿಕೊಳ್ಳುತ್ತಿದ್ದರು.ಪರರಿಗೆ ಹಿಂಸೆಕೊಡುವುದು,ಪರರ ದ್ರವ್ಯ ಅಪಹರಣ ಮಾಡುವುದು,ಪರಸ್ತ್ರೀಯರನ್ನು ಮೋಹಿಸುವುದು ಇಂತಹವುಗಳು ಪಾಪಕೃತ್ಯಗಳು ಎಂದರೆ ಒಪ್ಪಬಹುದು.ಆದರೆ ಕಪಟಿಗಳು ಮೇಲ್ವರ್ಗದವರಾದ ತಮ್ಮ ಸೇವೆ ಮಾಡದಿದ್ದರೆ ಪಾಪ ಬರುತ್ತದೆ,ತಮ್ಮ ಮಠಮಾನ್ಯಮಂದಿರಗಳಿಗೆ ನಡೆದುಕೊಳ್ಳದಿದ್ದರೆ ಪಾಪ ಬರುತ್ತದೆ,ತಮ್ಮ ಶಾಸ್ತ್ರ ಪುರಾಣಗಳನ್ನು ಕೇಳದಿದ್ದರೆ ಪಾಪ ಬರುತ್ತದೆ,ತಮ್ಮ ಮಠ ಮಂದಿರಗಳಿಗೆ ದೇಣಿಗೆ ಕಾಣಿಕೆ ಕೊಡದಿದ್ದರೆ ಪಾಪ ಬರುತ್ತದೆ,ಸರ್ವಮಾನ್ಯರಾದ ತಮ್ಮನ್ನು ನಿಂದಿಸಿದರೆ ಪಾಪ ಬರುತ್ತದೆ ಎನ್ನುವಂತಹ ಇವೇ ಮೊದಲಾದ ಹಸಿಸುಳ್ಳುಗಳನ್ನು ಬಿತ್ತಿ ಜನರನ್ನು ಭಯಭ್ರಾಂತರನ್ನಾಗಿಸಿ ತಮ್ಮ ಅಧಿಪತ್ಯ ಸ್ಥಾಪಿಸಿದ್ದರು.ಪರಮಾತ್ಮನು ಎಲ್ಲ ಜೀವರುಗಳಂತೆ ಮನುಷ್ಯರನ್ನು ಹುಟ್ಟಿಸಿದನೇ ಹೊರತು ಶಾಸ್ತ್ರ ಸಂಹಿತೆಗಳನ್ನು ಬರೆಯಲಿಲ್ಲ,ಪಾಪ ಕರ್ಮಗಳನ್ನು ವಿಧಿಸಲಿಲ್ಲ.ಅವೆಲ್ಲ ಮನುಷ್ಯರ ರಚನೆಗಳು,ನರರ ದುರಾಲೋಚನೆಯ ಕೃತ್ಯಗಳು.ಸಮಾಜದ ಶೂದ್ರರು ದಲಿತರ ಮುಗ್ಧತೆಯನ್ನು ಬಂಡವಾಳಮಾಡಿಕೊಂಡ ಪುರೋಹಿತಶಾಹಿ ವ್ಯವಸ್ಥೆ ಮತ್ತು ಪಟ್ಟಭದ್ರರ ದುಷ್ಟಕೂಟವು ಸುಳ್ಳು ಶಾಸ್ತ್ರ ಪುರಾಣ ಸಂಹಿತೆಗಳನ್ನು ರಚಿಸಿ ಪಾಪ,ನರಕ ಇತ್ಯಾದಿಗಳನ್ನು ಸೃಷ್ಟಿಸಿ ಜನಸಾಮಾನ್ಯರಲ್ಲಿ ಭಯವನ್ನುಂಟು ಮಾಡಿದರು.ದಿಕ್ಕುಗಾಣದೆ ಜನತೆ ಇಂತಹ ಪಾಮರರನ್ನೇ ಆಶ್ರಯಿಸುವಂತಾಯಿತು.ವ್ಯಕ್ತಿಪೂಜೆಯು ವೈಭವೀಕರಿಸಲ್ಪಟ್ಟಿತು.ಅರಸನು ‘ಪ್ರತ್ಯಕ್ಷದೇವ’ರಾದರೆ ಬ್ರಾಹ್ಮಣರು ‘ಭೂಸುರರು’ ಅಂದರೆ ಭೂಮಿಯ ಮೇಲಿನ ದೇವತೆಗಳಾದರು.ಅರಸರು ಮತ್ತು ಬ್ರಾಹ್ಮಣರು ಪ್ರಶ್ನಾತೀತರಾದರು.ಪ್ರಭುತ್ವವು ಯಾವತ್ತೂ ಹಸಿಹುಸಿಯ ವಿಷಯ ವಿಷಬೀಜಗಳನ್ನು ಬಿತ್ತುತ್ತಲೇ ತನ್ನ ಅಧಿಪತ್ಯ ಸ್ಥಾಪಿಸುತ್ತದೆ ; ಪುರೋಹಿತಶಾಹಿ ವ್ಯವಸ್ಥೆಯು ಅಧ್ಯಾತ್ಮವನ್ನು ಧಿಕ್ಕರಿಸಿ ಧರ್ಮದ ಹೆಸರಿನಲ್ಲಿ ಮೌಢ್ಯವು ಮೆರೆಯುವಂತೆ ಮಾಡುತ್ತದೆ.

ದೇವರು,ಧರ್ಮಗಳ ಹೆಸರಿನಲ್ಲಿ ಜನಸಾಮಾನ್ಯರನ್ನು ವಂಚಿಸುತ್ತಿದ್ದ ಠಕ್ಕರ ಧೂರ್ತ ನಡೆಯನ್ನು ಕಂಡ ಬಸವಣ್ಣನವರು ಜನರಲ್ಲಿ ಅಭಯ ತುಂಬುತ್ತಾರೆ,ಕಳೆಗುಂದಿದ ಜನಕೋಟಿಯ ಮುಖದಲ್ಲಿ ಭರವಸೆಯ ನಗೆ ಮೂಡಿಸುತ್ತಾರೆ.’ ಓ ನನ್ನ ಬಂಧುಗಳೆ,ಪಾಪಭೀತಿಗೊಳಗಾಗಿ ಬಳಲಬೇಡಿ,ಹೆದರಬೇಡಿ.ಶಿವನಾಮದ ಮುಂದೆ ಯಾವ ಪಾಪವು ಏನೂ ಮಾಡದು.ಹರನಾಮದ ಮುಂದೆ ಯಾವ ಅನಿಷ್ಟವೂ ಏನನ್ನೂ ಮಾಡದು.ನೀವು ಮಠ ಮಂದಿರ ದೇವಸ್ಥಾನಗಳಿಗೆ ಸುತ್ತಿ ಪಾಪಾತ್ಮರುಗಳ ಸಂಚಿಗೆ ಬಲಿಪಶುಗಳಾಗದೆ ಶಿವನನ್ನು ಆಶ್ರಯಿಸಿ,ಶಿವನಾಮವನ್ನು ಸ್ಮರಿಸುತ್ತ ಉದ್ಧಾರವಾಗಿರಿ’ ಎಂದು ಅಭಯನೀಡುತ್ತಾರೆ.ಶತಕೋಟಿ ಪಾಪ ಮಾಡಿದ್ದರೂ ಒಂದು ಸಾರೆ ಶಿವ ಎಂದರೆ ಸಾಕು ಆ ಎಲ್ಲ ಪಾಪವು ತೊಡೆದು ಹೋಗುತ್ತದೆ.ಹುಲ್ಲಿನ ಬಣವೆಯು ದೊಡ್ಡದಾಗಿರಬಹುದು ಆದರೆ ಸಣ್ಣಬೆಂಕಿಯ ಕಡ್ಡಿಯು ಹುಲ್ಲಿನ ಬಣವೆಯನ್ನು ಸುಟ್ಟು ಬೂದಿ ಮಾಡುತ್ತದೆ.ಅದರಂತೆ ಶಿವನಾಮ ಸ್ಮರಣೆಯಿಂದ ಪಾತಕಗಳ ರಾಶಿಯು ಸುಟ್ಟುಬೂದಿಯಾಗುತ್ತದೆ.ಶಿವನಾಮವೆಂಬ ಬೆಂಕಿಯ ಕಡ್ಡಿಯನ್ನು ಬಳಸಿ ಶಿವಭಕ್ತರು ತಮ್ಮ ಪಾಪಗಳನ್ನು ಸುಟ್ಟುಕೊಂಡು ಪಾತಕಮುಕ್ತರಾಗಬಹುದು.ಹರನಾಮವನ್ನು ಜಪಿಸುತ್ತ ಭಕ್ತರು ಸರ್ವ ಅನಿಷ್ಟಗಳಿಂದ ಮುಕ್ತರಾಗಬಹುದು.ಪರಶಿವನು ಪ್ರಪಂಚದ ನಿರ್ಮಾತೃ ಮತ್ತು ನಿಯಾಮಕನಾಗಿರಲು ಅವನಿಗಿಂತ ಮಿಗಿಲಾದ ತತ್ತ್ವ ಶಕ್ತಿಗಳಿರಲು ಸಾಧ್ಯವೆ ? ವಿಶ್ವನಿಯಾಮಕನಾದ ವಿಶ್ವೇಶ್ವರ ಶಿವನ ಸನ್ನಿಧಿಗೆ ಶರಣುಹೋಗಲು ಸಕಲಪಾಪಗಳು ಪರಿಹಾರವಾಗುತ್ತವೆ,ಸರ್ವದೋಷಗಳು ತೊಲಗುತ್ತವೆ.ಲಿಂಗಮುದ್ರೆಯ ಎತ್ತು ಅಲ್ಲಲ್ಲಿ ಸಂಚರಿಸಿ ಜನರನ್ನು ಉದ್ಧರಿಸುವ ಉದಾಹರಣೆಯನ್ನು ಬಸವಣ್ಣನವರು ಈ ವಚನದಲ್ಲಿ ನೀಡಿದ್ದಾರೆ.ಶಿವಭಕ್ತರ ಮನೆಯಲ್ಲಿ ಯಾವುದೇ ಸೂತಕ ಪಾತಗಳುಂಟಾದ ಸಂದರ್ಭದಲ್ಲಿ ಲಿಂಗಮುದ್ರೆಯ ಬಸವನನ್ನು ಮನೆಗೆ ಕರೆತಂದು ಪೂಜಿಸುವ ಪದ್ಧತಿ ಹಿಂದೆ ಹಳ್ಳಿಗಳಲ್ಲಿತ್ತು.ಅಲ್ಲಲ್ಲಿ ಕೆಲವು ಕಡೆ ಇಂದಿಗೂ ಪವಾಡಬಸವರ ಬಗ್ಗೆ ಕೇಳುತ್ತಿರುತ್ತೇವಲ್ಲ ಅದು ಲಿಂಗಮುದ್ರೆಯ ಬಸವನ ಬೆಡಗು.ಪರಶಿವನು ಹುಟ್ಟು ಸಾವುಗಳಿಗತೀತ ಪರಬ್ರಹ್ಮನಾದುದರಿಂದ ಅವನು ನರರಾಗಿ ಅವತಾರ ಎತ್ತುವುದಿಲ್ಲ.ತನ್ನ ಭಕ್ತರ ತಾಪ ಸಂತಾಪಗಳನ್ನು ಕಳೆಯಲು ತನ್ನ ವಾಹನ ನಂದಿಯನ್ನು ಕಳುಹಿಸುವನೆಂದೂ ಆ ನಂದಿಯ ಮುಖ ಮತ್ತು ಮೈಯಲ್ಲಿ ಶಿವಲಿಂಗದ ಗುರುತು ಇದ್ದು ಲಿಂಗಮುದ್ರೆಯ ಬಸವನನ್ನು ಪೂಜಿಸುವ ಮೂಲಕ ಭಕ್ತರು ಸಂಕಷ್ಟಮುಕ್ತರಾಗಬಹುದು ಎನ್ನುವ ನಂಬಿಕೆ ಒಂದಿತ್ತು ಹಿಂದೆ.’ಗಂಗೆತ್ತಿನವರು’ ಎನ್ನುವ ಒಂದು ಜನಾಂಗ ಹಿಂದೆ ಹಳ್ಳಿಗಳಲ್ಲಿ ಎತ್ತಿನೊಂದಿಗೆ ಭಿಕ್ಷೆ ಬೇಡಲು ಬರುತ್ತಿದ್ದರು.ಲಿಂಗದೆತ್ತೇ ಗಂಗೆತ್ತು,ಗಂಗಾಧರ ಶಿವನ ಎತ್ತು.ಶಿವನು ಪುರೋಹಿತರ ಮಂದಿರಗಳಲ್ಲಿ ಕಟ್ಟುಬಿದ್ದ ಸ್ಥಾವರವಾಗಿದ್ದರೆ ಶಿವನ ವಾಹನ ಲಿಂಗಮುದ್ರೆಯ ಎತ್ತು ಜಂಗಮನಾಗಿ ಜನರ ನಡುವೆ ಸಂಚರಿಸಿ ಭಕ್ತರ ಸಂಕಷ್ಟಕಳೆಯುತ್ತಿದ್ದ.

೧೬.೦೨.೨೦೨೪

About The Author