ದೃಢಭಕ್ತಿ ಇಲ್ಲದವರನ್ನು ಮೃಡಮಹಾದೇವ ಒಪ್ಪಲಾರ

ಬಸವೋಪನಿಷತ್ತು ೪೭ : ದೃಢಭಕ್ತಿ ಇಲ್ಲದವರನ್ನು ಮೃಡಮಹಾದೇವ ಒಪ್ಪಲಾರ : ಮುಕ್ಕಣ್ಣ ಕರಿಗಾರ

ಎನಿಸುಕಾಲ ಕಲ್ಲು ನೀರೊಳಗಿರ್ದರೇನು,
ನೆನೆದು ಮೃದುವಾಗಬಲ್ಲುದೆ ?
ಎನಿಸುಕಾಲ ನಿಮ್ಮ ಪೂಜಿಸಿ ಏವೆನಯ್ಯಾ,
ಮನದಲ್ಲಿ ದೃಢವಿಲ್ಲದನ್ನಕ್ಕ ?
ನಿಧಾನವ ಕಾಯ್ದಿರ್ದ ಬೆಂತರನಂತೆ !–
ಅದರ ವಿಧಿಯೆನಗಾಯಿತ್ತು,ಕೂಡಲ ಸಂಗಮದೇವಾ.

ಬಸವಣ್ಣನವರು ದೃಢಭಕ್ತಿಯಿಂದ ಮಾತ್ರ ಮೃಡಮಹಾದೇವನನ್ನು‌ ಒಲಿಸಲು ಸಾಧ್ಯ ಎನ್ನುವ ಶಿವನೊಲುಮೆಯ ಸರಳಸೂತ್ರವನ್ನು ಲೋಕಸಮಸ್ತರಿಗೆ ಉಪದೇಶಿಸಿದ್ದಾರೆ.ಕಲ್ಲುಬಂಡೆ ನೂರು,ಸಾವಿರವರ್ಷಗಳ ಕಾಲ ನೀರಿನಲ್ಲಿದ್ದರೂ ಅದು ತನ್ನ ಕಾಠಿಣ್ಯಗುಣವನ್ನು ಕಳೆದು ಮೆತ್ತಗೆ ಆಗುವುದಿಲ್ಲ.ಹಾಗೆಯೇ ಮನಸ್ಸಿನಲ್ಲಿ ದೃಢವಿಲ್ಲದೆ ಶಿವನನ್ನು ಪೂಜಿಸಿದರೆ ಫಲವಿಲ್ಲ.ನೆಲದಲ್ಲಿ ಹುದುಗಿಟ್ಟ ನಿಧಿಯನ್ನು ಕಾವಲಿಟ್ಟ ಭೂತವು ಕಾಯುತ್ತದೆ,ಆದರೆ ಆ ಭೂತವು ಆ ನಿಧಿಯನ್ನು ಉಪಯೋಗಿಸಲಾಗದು.ಉಣಲಿಲ್ಲದೆ ಬರಿ ನಿಧಿಕಾಯ್ದುಕೊಂಡ ಬಿದ್ದ ಪಿಶಾಚಿಯಂತೆ ದೃಢಮನಸ್ಕರಲ್ಲದವರ ಶಿವಭಕ್ತಿ ಎನ್ನುತ್ತಾರೆ ಬಸವಣ್ಣನವರು.

ಹರಿವ ನದಿಯಲ್ಲಿ ಕಲ್ಲುಬಂಡೆಗಳಿರುತ್ತವೆ.ನದಿಯ ನೀರು ಆ ಬಂಡೆಗಳ ಮೇಲೆ ಸದಾ ಪ್ರವಹಿಸುತ್ತಿರುತ್ತದೆ,ಆ ಬಂಡೆಗಳು ನದಿಯ ನೀರಿನಲ್ಲಿಯೇ ಮುಳುಗಿರುತ್ತವೆ.ನೂರು,ಸಾವಿರ ವರ್ಷಗಳಿಂದಲೂ ಆ ಬಂಡೆಗಳು ನದಿಯ ನೀರಿನಲ್ಲಿವೆ.ಅಷ್ಟು ವರ್ಷಗಳಾಗಿಯೂ ನದಿಯ ನೀರೊಳಗಣ ಬಂಡೆಗಳು ತಮ್ಮ ಕಠಿಣಗುಣವನ್ನು ಕಳೆದುಕೊಂಡು ಮೃದುವಾಗಿಲ್ಲ,ನಯಗೊಂಡಿಲ್ಲ,ನುಣುಪು ಆಗಿಲ್ಲ.ಆಗುವುದೂ ಇಲ್ಲ !ಕೃಷ್ಣಾ,ತುಂಗಭದ್ರಾ,ಕಾವೇರಿನದಿಗಳಷ್ಟೇ ಏಕೆ ದೇವನದಿ ಎಂದು ಹೆಸರಾದ ಗಂಗೆಯ ಒಡಲಲ್ಲಿದ್ದರೂ ಕಲ್ಲುಬಂಡೆ ಮೆತ್ತಗೆ ಆಗುವುದಿಲ್ಲ,ತನ್ನ ಕಾಠಿಣ್ಯಗುಣವನ್ನು ಕಳೆದುಕೊಳ್ಳುವುದಿಲ್ಲ.ನೀರಿನ ಸೆಳೆತ ಎಳೆತ,ಮಾರ್ದ್ರವ ಮಾಧುರ್ಯತೆಗಳಿಗೆ ಕರಗದ ತನ್ನೆದೆ ಕಾಠಿಣ್ಯಗುಣವನ್ನು ಕಲ್ಲುಬಂಡೆ ಹಾಗೆಯೇ ಉಳಿಸಿಕೊಂಡಿದೆ.ಆಡಂಬರದ ಶಿವಪೂಜೆಯನ್ನಾಚರಿಸುತ್ತ ಮನಸ್ಸಿನಲ್ಲಿ ಶಿವನಲ್ಲಿ ದೃಢಭಕ್ತಿ ಇಲ್ಲದವರ ಪಾಡು ಸಾವಿರಾರು ವರ್ಷಗಳಿಂದ ನದಿಯಲ್ಲಿದ್ದರೂ ಮೆದುವಾಗದ ಕಲ್ಲುಬಂಡೆಯಂತೆ.ಮನಸ್ಸಿನಲ್ಲಿ ಶಿವನನ್ನು ಗಟ್ಟಿಯಾಗಿ ನಂಬಿದರೆ ಮಾತ್ರ ಶಿವನು ಒಲಿಯುತ್ತಾನೆ.ಶಿವನೇ ಗತಿಮತಿಯು,ಶಿವನಲ್ಲದೆ ಮತ್ತೊಬ್ಬ ದೇವರಿಲ್ಲ,ಕಾಯಲಿ,ಕೊಲ್ಲಲಿ ನಾನು ಶಿವನನ್ನಲ್ಲದೆ ಮತ್ತೊಂದು ದೈವಕ್ಕೆ ಎರಗಲಾರೆ ಎನ್ನುವ ಗಟ್ಟಿಮನಸ್ಸೇ ದೃಢಭಕ್ತಿಯಾಗಿದ್ದು ಇಂತಹ ದೃಢಭಕ್ತಿಯನ್ನುಳ್ಳವರನ್ನು ಮಾತ್ರ ಶಿವನು ತನ್ನ ಭಕ್ತರು ಎಂದು ಒಪ್ಪಿ,ಒಲಿದು ಉದ್ಧರಿಸುವನು.ಬಾಯುಪಚಾರಕ್ಕೆ ಶಿವಭಕ್ತರು,ಲಿಂಗಪೂಜಕರು ಎಂದು ಹೇಳಿಕೊಂಡು ಹಾದಿಬೀದಿಯ ದೈವಗಳಿಗೆಲ್ಲ ನಡೆದುಕೊಳ್ಳುವವನ್ನು ಶಿವನು ಒಲಿಯಲಾರನು.ಮಾರಿ ಮಸಣಿ,ಅಂತರ ಬೆಂತರ,ಆ ದೇವರು ಈ ದೇವರು ಎಂದು ಪೂಜಿಸುವವರು ಹಾದಿತಪ್ಪಿ ಹಾಳಾಗುತ್ತಾರೆಯೇ ಹೊರತು ಅವರಿಗೆ ಸದ್ಗತಿ ಇಲ್ಲ.ಶಿವಸಂಪ್ರದಾಯದ,ಲಿಂಗೋಪಾಸನೆಯ ಪರಿಸರದಲ್ಲಿ ಹುಟ್ಟಿದ ಬಳಿಕ ಶಿವನನ್ನೇ ಪೂಜಿಸಬೇಕು,ಲಿಂಗರೂಪಿ ಪರಶಿವನನ್ನೇ ಆರಾಧಿಸಬೇಕಲ್ಲದೆ ಅನ್ಯ ಕ್ಷುದ್ರ- ಕುನ್ನಿ ದೈವಗಳಿಗೆ ಎರಗಿ ನಮಿಸಬಾರದು.ಹಿಂದಿನ ಕಾಲದಲ್ಲಿ ಜನರು ಕಳ್ಳಕಾಕರ ಭಯದಿಂದ ಕಾಪಾಡಲು ನಿಧಿಯನ್ನು ಭೂಮಿಯಲ್ಲಿ ಹೂಳಿಡುತ್ತಿದ್ದರು.ನಿಧಿಯ ಮೇಲಣ ಆಸೆಯಿಂದ ಸತ್ತಮೇಲೆ ಸದ್ಗತಿ ಕಾಣದೆ ಆ ನಿಧಿಯ ಸುತ್ತಲೇ ಸುಳಿದಾಡುವ ದೆವ್ವಗಳಾಗುತ್ತಿದ್ದರು.ಬದುಕಿದ್ದಾಗಲೂ ಆ ನಿಧಿಯನ್ನು ಅನುಭವಿಸದೆ ನೆಲದಲ್ಲಿ ಹೂತಿಟ್ಟರು,ನಿಧಿಯ ಆಸೆಯಿಂದ ಪಿಶಾಚಿಜನ್ಮ ತಳೆದರು.ಪಿಶಾಚಿಯಾಗಿಯೂ ಆ ನಿಧಿಯನ್ನು ಕಾಯುವ ಕರ್ಮವಲ್ಲದೆ ಅದನ್ನು ಅನುಭೋಗಿಸಲಾಗಲಿಲ್ಲ.ನಿಧಿಯಾಸೆಗಾಗಿ ಪಿಶಾಚಜನ್ಮತಳೆದ ಮನುಷ್ಯರಂತೆ ಶಿವನಲ್ಲಿ ದೃಢಭಕ್ತಿ ಇಲ್ಲದವರ ಪಾಡು ದುರ್ಗತಿಗೀಡಾಗುವುದೇ ಹೊರತು ಸದ್ಗತಿಕಾಣದು,ಶಿವ ಕಾರುಣ್ಯವನ್ನುಣ್ಣದು ಎಂದಿದ್ದಾರೆ ಬಸವಣ್ಣನವರು.

೧೯.೦೨.೨೦೨೪

About The Author