ವಿಕೃತಮನಸ್ಕರ ದುರ್ವಿಚಾರಗಳನ್ನು ಒಪ್ಪಲಾಗದು !

ಮೂರನೇ ಕಣ್ಣು : ವಿಕೃತಮನಸ್ಕರ ದುರ್ವಿಚಾರಗಳನ್ನು ಒಪ್ಪಲಾಗದು ! : ಮುಕ್ಕಣ್ಣ ಕರಿಗಾರ

ನಾನು ಈ ಹಿಂದೆ ಬಳ್ಳಾರಿ ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ನಾನು ಸಂಪಾದಿಸಿದ ಉತ್ತಮ ಶಿಷ್ಯರಲ್ಲೊಬ್ಬರು ಪಿಡಿಒ ಉಮೇಶ ತಲೆಕಟ್ಟು.ಪ್ರಗತಿಪರನಿಲುವಿನ,ವಿಚಾರಕ್ರಾಂತಿಯನ್ನು ಬೆಂಬಲಿಸುವ ಹಿಂದೆ ಲಕ್ಷ್ಮೀಪುರ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಯಾಗಿದ್ದ ಉಮೇಶ ಈಗ ಯಾವ ಪಂಚಾಯತಿಯಲ್ಲಿದ್ದಾರೋ ನಾನರಿಯೆ.ಆದರೆ ಒಬ್ಬ ಅಧಿಕಾರಿ ವರ್ಗಾವಣೆ ಆದೊಡನೆ ಮರೆಯುವ ಬಹುತೇಕ ಸರಕಾರಿ ನೌಕರರಂತಲ್ಲದ ಉಮೇಶ ತಲೆಕಟ್ಟು ಇಂದಿಗೂ ನನ್ನ ಸಂಪರ್ಕದಲ್ಲಿದ್ದು ನನ್ನ ಸಾಹಿತ್ಯವನ್ನು ಓದಿ,ಆನಂದಿಸುವ ಇತರ ಗುಂಪುಗಳಲ್ಲಿ ಶೇರ್ ಮಾಡುವ ಅಪರೂಪದ ಶಿಷ್ಯ,ನಿಷ್ಠಾವಂತ ಅನುಯಾಯಿ,ಪ್ರಾಮಾಣಿಕ ಅಭಿಮಾನಿ. ” ಶ್ರೀ ಕನಕ ನೌಕರ ಸ್ವಯಂಸೇವಕರ ಬಳಗ” ಎನ್ನುವ ರಾಜ್ಯ ಮಟ್ಟದ ಕುರುಬ ಸಮುದಾಯದ ಅಧಿಕಾರಿಗಳು,ವಿಚಾರವಾದಿಗಳಿರುವ ಒಂದು ವಾಟ್ಸಾಪ್ ಗುಂಪನ್ನು ರಚಿಸಿ ಅದರಲ್ಲಿ ನನ್ನನ್ನೂ ಸದಸ್ಯನನ್ನಾಗಿ ಸೇರಿಸಿದ್ದಾರೆ.ಫೆಬ್ರುವರಿ ೧೯ ರ ಈ ದಿನ ಬೆಳಿಗ್ಗೆ ಅವರು ನನಗೆ “ಘಂಟೆ”ಯ ಬಗ್ಗೆ ಒಂದು ಪುಟ್ಟಲೇಖನ ಕಳುಹಿಸಿದ್ದರು.ಬೇರೆಯವರು ಬರೆದ ಲೇಖನವನ್ನು ಉಮೇಶ ಇಷ್ಟಪಟ್ಟು ನನಗೂ ಇಷ್ಟವಾಗಬಹುದೆಂದು ಕಳುಹಿಸಿದ್ದರು ನಾನು ಪ್ರಗತಿಪರ ಚಿಂತಕನಾಗಿರುವುದರಿಂದ.ನಾನು ಪ್ರಗತಿಪರ ಚಿಂತಕ,ವಿಚಾರವಾದಿ ನಿಜ,ಆದರೆ ಇತರ ಪ್ರಗತಿಪರರಂತೆ ಭಾರತೀಯ ಸಂಸ್ಕೃತಿಯನ್ನು ಟೀಕಿಸುವುದೇ ಜೀವನದ ಸಾರ್ಥಕತೆ ಎಂದು ಭಾವಿಸಿರುವ ಸಿನಿಕತನದ ಪ್ರಗತಿಪರನಲ್ಲ ! ಎಲ್ಲ ನಂಬಿಕೆಗಳೂ ಮೂಢ ನಂಬಿಕೆಗಳಲ್ಲ,ಎಲ್ಲ ಆಚರಣೆಗಳು ಅಂಧ ಆಚರಣೆಗಳಲ್ಲ.ಹಿಂದೊಂದು ಕಾಲದಲ್ಲಿ ನನ್ನ ತುಂಬುಜವ್ವನದ ಕಾಲದಲ್ಲಿ ಬಂಡಾಯಕವಿಯಾಗಿ,ದೇವರು ದಿಂಡಿರುಗಳನ್ನು ಬಯ್ಯುತ್ತಿದ್ದ,ಖಂಡಿಸುತ್ತಿದ್ದ ನಾನೇ ಇಂದು ‘ಮಹಾಶೈವ ಧರ್ಮಪೀಠ’ ಎನ್ನುವ ಧರ್ಮಪೀಠ ಒಂದನ್ನು ಕಟ್ಟಿ ಅಲ್ಲಿ ಪ್ರತಿ ರವಿವಾರ ಜನರನ್ನು ನೋಡುತ್ತಿದ್ದೇನೆ! ಶಿವಯೋಗಿಯಾಗಿದ್ದ ನಮ್ಮ ತಂದೆ ನಾಗಪ್ಪ ಕರಿಗಾರ ಅವರು ಜನರಿಗೆ ವಿಭೂತಿ ಮಂತ್ರಿಸಿಕೊಡುವುದು,ದಾರಕಟ್ಟುವುದನ್ನು ಮೂಢನಂಬಿಕೆ ಎಂದು ಬೈಯುತ್ತಿದ್ದ ನಾನೇ ಇಂದು ಶ್ರೀಕ್ಷೇತ್ರ ಕೈಲಾಸದ ಕ್ಷೇತ್ರೇಶ್ವರ ವಿಶ್ವೇಶ್ವರನ ಸನ್ನಿಧಿಯಲ್ಲಿ ಜನರ ಸಮಸ್ಯೆಗಳ ಪರಿಹಾರಕ್ಕಾಗಿ ವಿಭೂತಿ ಮಂತ್ರಿಸಿಕೊಡುತ್ತಿದ್ದೇನೆ,ದಾರ ಕಟ್ಟುತ್ತಿದ್ದೇನೆ !ಮಂತ್ರಕ್ಕೆ ‘ಮಾವಿನ ಕಾಯಿ ಉದುರುವುದಿಲ್ಲ’ ಎಂದು ಬೊಗಳೆ ಹೊಡೆಯುತ್ತಿದ್ದ ನಾನೇ ವಿಶ್ವೇಶ್ವರ ಶಿವನ ಮಂತ್ರದಿಂದ ಮಕ್ಕಳಾಗದವರಿಗೆ ಕಾಯಿಮಂತ್ರಿಸಿ ಪೂಜಿಸಲು ಕೊಡುತ್ತಿದ್ದೇನೆ.ನಾನು ‘ ಶಿವೋಪಶಮನ’ ಎಂದು ಕರೆಯುತ್ತಿರುವ ಈ ಕಾರ್ಯಕ್ರಮವು ಪ್ರಾರಂಭವಾಗಿ ಎಂಬತ್ತು ವಾರಗಳಾಗಿದ್ದು ಈ ಎಂಬತ್ತು ವಾರಗಳಲ್ಲಿ ಇಪ್ಪತ್ತೆಂಟು ಜನ ದಂಪತಿಗಳು ಸಂತಾನ ಭಾಗ್ಯ ಕಂಡಿದ್ದಾರೆ ! ಮದುವೆಯಾಗಿ ಇಪ್ಪತ್ತು ವರ್ಷಗಳಾಗಿ ಮಕ್ಕಳಾಗದೆ ಇದ್ದವರು,ಡಾಕ್ಟರ್ ಗಳು ಗರ್ಭಕೋಶ ಸರಿಯಿಲ್ಲ,ಗರ್ಭಜಾರುತ್ತದೆ,ಥೈರಾಯಿಡ್ ಸಮಸ್ಯೆ ಇದೆ ಎಂದೆಲ್ಲ ಹೇಳಿ ಮಕ್ಕಳಾಗುವುದಿಲ್ಲ ಎಂದು ಕಳುಹಿಸಲ್ಪಟ್ಟವರು ನಮ್ಮ ಮಠಕ್ಕೆ ಬಂದು ವಿಶ್ವೇಶ್ವರ ಶಿವನ ಅನುಗ್ರಹದಿಂದ ಸಂತಾನ ಪಡೆದಿದ್ದಾರೆ. ವೈದ್ಯರಿಂದ ವಾಸಿಯಾದ ಭಯಂಕರ ರೋಗಗಳು ವಿಶ್ವೇಶ್ವರನ ಅನುಗ್ರಹದಿಂದ ವಾಸಿಯಾಗಿವೆ.ಕೆಲವು ಜನ ವೈದ್ಯರುಗಳು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ವಿಶ್ವೇಶ್ವರ ಶಿವನ ಸನ್ನಿಧಿಯನ್ನರಸಿ ಬರುತ್ತಿದ್ದಾರೆ !ಇದು ಮೂಢ ನಂಬಿಕೆಯೆ ? ನಮ್ಮಲ್ಲಿ ಕೆಲವರು ಭಾರತೀಯ ಧರ್ಮ,ಆಧ್ಯಾತ್ಮ,ನಂಬಿಕೆಗಳನ್ನು ” ಮೂಢನಂಬಿಕೆಗಳು” ಎಂದು ವ್ಯವಸ್ಥಿತವಾಗಿ ಹರಡುವ ಸಂಚು ಮಾಡುತ್ತಿದ್ದಾರೆ ಎನ್ನುವ ಸತ್ಯ ನನಗೆ ಕೆಲವು ವರ್ಷಗಳ ಹಿಂದೆ ಅರ್ಥವಾಗಿದೆ.ಕ್ರೈಸ್ತಮಿಶನರಿಗಳು ಮತ್ತು ಕೆಲವು ಜನ ಮತಾಂಧ ಮುಸ್ಲಿಮರು ಇಂತಹ‌ ಕುಕೃತ್ಯಗಳ ಹಿಂದೆ ಇದ್ದಾರೆ ಎನ್ನುವುದನ್ನು ಹೇಳಲು ನನಗೇನೂ ಹಿಂಜರಿಕೆಯಿಲ್ಲ.ಕ್ರಿಶ್ಚಿಯನ್ ಮತಪ್ರಭಾವಕ್ಕೆ ಒಳಗಾದ ಕೆಲವರು ಭಾರತೀಯರ ನಂಬಿಕೆಯ ದೇವ ದೇವಿಯರ ಬಗ್ಗೆ ಅಪಹಾಸ್ಯ ಮಾಡುತ್ತಾರೆ.ಬುದ್ಧನ ಹೆಸರಿನಲ್ಲಿ ಕೆಲವರು ಭಾರತೀಯರ ನಂಬಿಕೆಗಳನ್ನು ಪ್ರಶ್ನಿಸುತ್ತಿದ್ದಾರೆ.ಬುದ್ಧ ದೇವರ ಬಗ್ಗೆ ಯಾರಾದರೂ ಪ್ರಶ್ನಿಸಿದರೆ ಯಾವ ಉತ್ತರವನ್ನೂ ನೀಡದೆ ಮೌನಿಯಾಗಿರುತ್ತಿದ್ದ.’ ಅದು ನಿಮ್ಮೊಳಗೆ ನೀವು ಕಂಡುಕೊಳ್ಳಬೇಕಾದ ಬೆಳಕು,ಸತ್ಯ’ ಎನ್ನುವುದು ಬುದ್ಧನ ಮೌನದ ರಹಸ್ಯವಾಗಿತ್ತು.ಬುದ್ಧ ತನ್ನ ವಿಚಾರವನ್ನು ಯಾರ ಮೇಲೆಯೂ ಹೇರಲು ಇಷ್ಟಪಡುತ್ತಿರಲಿಲ್ಲವಾಗಿ ದೇವರ ಅಸ್ತಿತ್ವದ ಕುರಿತಾದ ಪ್ರಶ್ನೆಗಳಿಗೆ ಉತ್ತರಿಸದೆ ಮೌನಿಯಾಗಿರುತ್ತಿದ್ದ.ಬುದ್ಧನ ಕಾಲದ ಸಾಮಾಜಿಕ ಧಾರ್ಮಿಕ ಪರಿಸ್ಥಿತಿಯನ್ನು ಅವಲೋಕಿಸಿದರೆ ಬುದ್ಧನ ಮೌನದ ಗುಟ್ಟು ಅರ್ಥವಾಗುತ್ತದೆ.ದೇವರು ಧರ್ಮಗಳ ಬಗೆಗಿನ ಉಪದೇಶಕ್ಕಿಂತ ಜನರ ಜೀವನ ಮಟ್ಟವನ್ನು ಸುಧಾರಿಸುವುದೇ ಉತ್ತಮ ಧರ್ಮಮಾರ್ಗ ಎಂದು ಬುದ್ಧ ಭಾವಿಸಿದ್ದ.ಆದರೆ ಇಂದು ಬುದ್ಧನೇ ದೇವರಾಗಿದ್ದಾನಲ್ಲ ? ಬುದ್ಧನನ್ನು ಬ್ರಾಹ್ಮಣರು ದಶಾವತಾರಗಳಲ್ಲಿ ಒಂದು ಅವತಾರಮಾಡಿಕೊಂಡರು ಎನ್ನುವ ಜನರು ಅಲ್ಲಲ್ಲಿ ಬೌದ್ಧವಿಹಾರಗಳನ್ನು ಕಟ್ಟಿಸಿ ಬುದ್ಧನನ್ನು ಪೂಜಿಸುವ ಜನರ ಬಗ್ಗೆ ಯಾಕೆ ಪ್ರಸ್ತಾಪಿಸುವುದಿಲ್ಲ?ಬುದ್ಧ ತನ್ನ ಬದುಕಿನುದ್ದಕ್ಕೂ ತಾನು ದೇವರು,ದೇವರ ಅವತಾರ ಎಂದು ಹೇಳಿಕೊಳ್ಳಲಿಲ್ಲ.ಆದರೆ ಇಂದು ಬುದ್ಧನ ಅನುಯಾಯಿಗಳೇ ಬುದ್ಧನನ್ನು ದೇವರು ಎಂದು ಭಾವಿಸಿ ಬೌದ್ಧಧರ್ಮದ ಸಿದ್ಧಾಂತಗಳನ್ನು ಪ್ರಚುರ ಪಡಿಸುತ್ತಿದ್ದಾರಲ್ಲ ? ಬೌದ್ಧರಲ್ಲಿಯೂ ಮಂತ್ರ- ತಂತ್ರವಿದ್ಯೆಗಳಿವೆಯಲ್ಲ ?

ಬಸವಣ್ಣನವರು ಸಾಮಾಜಿಕ,ಧಾರ್ಮಿಕ ಮತ್ತು ಆರ್ಥಿಕ ಶೋಷಣೆಗಳ ವಿರುದ್ಧ ಬಂಡೆದ್ದೂ ಎಲ್ಲರ ಕೈಯ್ಗಳಿಗೆ ಇಷ್ಟಲಿಂಗ ಕೊಟ್ಟರಲ್ಲ ? ಮೂಢನಂಬಿಕೆ,ಕಂದಾಚಾರಗಳ ವಿರುದ್ಧ ರಣಕಹಳೆ ಮೊಳಗಿಸಿದ್ದ ಬಸವಣ್ಣನವರು ಜನಸಮಸ್ತರ ಕೈಯಲ್ಲಿ ಇಷ್ಟಲಿಂಗವನ್ನು ಇಟ್ಟಿದ್ದಾರೂ ಏಕೆ ? ಜಗನ್ನಿಯಾಮಕನಾಗಿ ಒಬ್ಬ ಪರಶಿವನಿದ್ದಾನೆ ಅವನನ್ನು ಪೂಜಿಸಿ,ಅನ್ಯರಿಗೆ ಶರಣಾಗಬೇಡಿ ಎನ್ನುವ ಸಂದೇಶದೊಂದಿಗೆ ಬಸವಣ್ಣನವರು ಇಷ್ಟಲಿಂಗಪೂಜೆಯನ್ನು ಸಾರ್ವತ್ರೀಕರಣಗೊಳಿಸಿದರು,ಖಾಸಗಿ ಸೊತ್ತಾಗಿದ್ದ ಶಿವನನ್ನು ಸಾರ್ವಜನಿಕ ಸೊತ್ತನ್ನಾಗಿ ಪರಿವರ್ತಿಸಿದರು.ಆದರೆ ಇಂದು ಕೆಲವರು ಇಷ್ಟಲಿಂಗವನ್ನು ಒಂದು ಲಾಂಛನ ಎಂದು ಟೀಕಿಸುತ್ತಿದ್ದಾರಲ್ಲ !

ಡಾ.ಬಿ.ಆರ್.ಅಂಬೇಡ್ಕರ ಅವರು ಎಲ್ಲ ಧರ್ಮಗ್ರಂಥಗಳನ್ನು,ಧಾರ್ಮಿಕ ಪುರುಷರುಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡಿ,ಹತ್ತಾರು ವರ್ಷಗಳ ಕಾಲ ಮೌನವಾಗಿ ಚಿಂತಿಸಿ ಕೊನೆಗೆ ಬೌದ್ಧಧರ್ಮವನ್ನು ಸ್ವೀಕರಿಸಿದರು.ಬೌದ್ಧಧರ್ಮವನ್ನು ಸ್ವೀಕರಿಸಿಯೂ ಅಂಬೇಡ್ಕರ ಅವರು ಜನರ ಧಾರ್ಮಿಕ ಸ್ವಾತಂತ್ರ್ಯಕ್ಕೆ ಮಹತ್ವ ನೀಡಿದ್ದರು.ಹಾಗಾಗಿಯೇ ನಮ್ಮ ಸಂವಿಧಾನದಲ್ಲಿ ಧಾರ್ಮಿಕ ಸ್ವಾತಂತ್ರ್ಯ ,ಉಪಾಸನಾ ಸ್ವಾತಂತ್ರ್ಯಗಳಿಗೆ ಅವಕಾಶ ಕಲ್ಪಿಸಿದರು.ಇದು ಪ್ರಗತಿಪರರಾದವರು ತಿಳಿದುಕೊಳ್ಳಬೇಕಾದ ಸಂಗತಿ.ಇನ್ನೊಬ್ಬರ ಧಾರ್ಮಿಕ ಭಾವನೆ ನಮಗೆ ಒಪ್ಪಿಗೆಯಾಗಲಿ ಅಥವಾ ಒಪ್ಪಿಗೆ ಆಗದೆ ಇರಲಿ ನಾವು ಮತ್ತೊಬ್ಬರ ಧಾರ್ಮಿಕ ಭಾವನೆಗಳನ್ನು ಕೆಣಕಬಾರದು,ಕೆಡೆ ನುಡಿಯಬಾರದು.ಇಷ್ಟು ಹಿನ್ನೆಲೆಯ ಮಾತುಗಳನ್ನು ಹೇಳಿ ಈಗ ವಿಷಯಕ್ಕೆ ಬರುವೆ.

ನಮ್ಮ ಉಮೇಶ ಕಳಿಸಿರುವ ವಿಚಾರದಲ್ಲಿ ದೇವಸ್ಥಾನಗಳಲ್ಲಿ ಕಟ್ಟುವ ಘಂಟೆಗಳ ಬಗ್ಗೆ ಕಟ್ಟಿದ ವಿಕೃತ ಮನಸ್ಕರ ಒಂದು ಕಥೆ ಇದೆ.ದೇವಸ್ಥಾನಗಳಲ್ಲಿ ಕಟ್ಟುವ ಘಂಟೆಗಳಿಗೂ ದೇವದಾಸಿ ಪದ್ಧತಿಗೂ ನಂಟು ಹಾಕಿದ ಅಪಕ್ವ,ಅವಾಸ್ತವ ಕಥೆಯದು.’ಘಂಟೆಗಳ ಬಗ್ಗೆ ಎಲ್ಲೆಯೂ ಉಲ್ಲೇಖವಿಲ್ಲ.ಹಿಂದೆ ದೇವಸ್ಥಾನಗಳಲ್ಲಿ ಪೂಜಾರಿಗಳು ದೇವದಾಸಿ ಮಹಿಳೆಯರೊಂದಿಗೆ ಸಂಭೋಗ ಮಾಡುತ್ತಿದ್ದರು.ತಾವು ದೇವಸ್ಥಾನದಲ್ಲಿ ರತಿಕ್ರೀಡೆಯಾಡುತ್ತಿರುವುದನ್ನು ಯಾರಾದರೂ ನೋಡಿದರೆ ಹೇಗೆ ಎನ್ನುವ ಭಯದಿಂದ ಜನರು ಬಂದದ್ದು ಗೊತ್ತಾಗಲಿ ಎಂದು ಘಂಟೆಕಟ್ಟುತ್ತಿದ್ದರು.ಘಂಟೆ ಬಾರಿಸಿದೊಡನೆ ಮೈಥುನಕ್ರಿಯೆ ನಿಲ್ಲಿಸಿ ಪಂಚೆ ಸರಿಪಡಿಸಿಕೊಂಡು ದೇವರ ಬಳಿ ಬಂದು ನಿಲ್ಲುತ್ತಿದ್ದರು’ ಎನ್ನುವ ವಿವರಗಳಿವೆ ಉಮೇಶ ಕಳಿಸಿದ ಸಣ್ಣಲೇಖನದಲ್ಲಿ.ಇದು ಮೂರ್ಖತನದ ಮಾತು ಮಾತ್ರವಲ್ಲ,ದೇವಸ್ಥಾನ ಸಂಸ್ಕೃತಿಯ ಬಗ್ಗೆ ಅರಿವಿಲ್ಲದ ಅಜ್ಞಾನಿಗಳು ಆಡಿದ ಮಾತು.ಎಂತಹ ಪಾಪಿ ಪೂಜಾರಿ,ಅರ್ಚಕನೂ ದೇವರ ಗರ್ಭಗುಡಿಯಲ್ಲಿ ಸಂಭೋಗಮಾಡಲಾರ.ಅಲ್ಲದೆ ದೇವರ ಗರ್ಭಗುಡಿಗಳಲ್ಲಿ ಕೆಲವು ದೇವಸ್ಥಾನಗಳಲ್ಲಿ ಮಾತ್ರ ಒಳಭಾಗದಲ್ಲಿ ಪ್ರದಕ್ಷಿಣೆ ಹಾಕಲು ದೇವರನ್ನು ಗರ್ಭಗುಡಿಯ ಮಧ್ಯಭಾಗದಲ್ಲಿ ಪ್ರತಿಷ್ಠಾಪಿಸಿರುತ್ತಾರೆ ಎನ್ನುವುದನ್ನು ಬಿಟ್ಟರೆ ಮಿಕ್ಕೆಲ್ಲ ದೇವಸ್ಥಾನಗಳಲ್ಲಿ ದೇವರುಗಳನ್ನು ಗರ್ಭಗುಡಿಯ ಗೋಡೆಗೆ ಆನಿಸಿಯೋ,ಗೋಡೆಗಿಂತ ಸ್ವಲ್ಪ ದೂರದಲ್ಲಿಯೋ ಇರುವಂತೆ ಪ್ರತಿಷ್ಠಾಪಿಸುತ್ತಿದ್ದರು.ಅಲ್ಲದೆ ದೇವಸ್ಥಾನಗಳ ಗರ್ಭಗುಡಿಗಳು ತೀರ ಸಣ್ಣವಾಗಿರುತ್ತವೆ.ಅಲ್ಲಿ ಪೂಜಾರಿ ದೇವದಾಸಿಯೊಂದಿಗೆ ಸಂಭೋಗ ಮಾಡುವಷ್ಟು ರಹಸ್ಯ ಸ್ಥಳವಂತೂ ಇರುತ್ತಿರಲಿಲ್ಲ.ಪೂಜಾರಿ,ಅರ್ಚಕರು,ಊರ ಪ್ರಮುಖರು ದೇವದಾಸಿಯರನ್ನು ಅನುಭೋಗಿಸುತ್ತಿದ್ದರು ಎನ್ನುವ ಸತ್ಯವನ್ನು ನಾನೂ ಒಪ್ಪುತ್ತೇನೆ ಆದರೆ ದೇವಸ್ಥಾನಗಳ ಗರ್ಭಗುಡಿಯಲ್ಲಿ ಖಂಡಿತ ಸಂಭೋಗ ಮಾಡುತ್ತಿರಲಿಲ್ಲ.ದೇವಸ್ಥಾನಗಳಿಗೆ ಹೊಂದಿಕೊಂಡಂತೆ ಇರುವ ದೇವಸ್ಥಾನಗಳ ಉಗ್ರಾಣಕೋಣೆ,ವಸ್ತ್ರವಸನಗಳ ಕೋಣೆ ,ಶಯನಕೋಣೆ ಮೊದಲಾದ ಕೋಣೆಗಳಲ್ಲಿ ರತಿಕ್ರಿಯೆಯನ್ನಾಡುತ್ತಿದ್ದರು.ಈಗಲೂ ಕೆಲವು ಜನ ಲಂಪಟ ಸ್ವಾಮಿಗಳು ತಮ್ಮ ಮಠಗಳಲ್ಲಿ ಸ್ತ್ರೀಯರುಗಳೊಂದಿಗೆ ಕಾಮಕ್ರೀಡೆಯನ್ನಾಡುತ್ತಾರೆ ಆದರೆ ಅದು ಆ ಮಠ ದೇವಸ್ಥಾನಗಳ ಅವರ ಖಾಸಗಿ ಶಯನಗೃಹಗಳಲ್ಲೇ ಹೊರತು ಗರ್ಭಗುಡಿಯಲ್ಲಿ ಅಲ್ಲ.ಗರ್ಭಗುಡಿಯಲ್ಲಿ ಪರಸ್ತ್ರೀಯರೊಂದಿಗೆ ಸಂಭೋಗಮಾಡುವ ಪಾಮರ ಪೂಜಾರಿ,ಸ್ವಾಮಿಗಳ ಬಗ್ಗೆ ಊಹೆ ಮಾಡಲು ಕೂಡ ಆಗದು.

ದಲಿತರನ್ನು ‘ ಹರಿಜನ’ ಎಂದು ಕರೆದವರು ಮಹಾತ್ಮ ಗಾಂಧೀಜಿಯವರೇ ಹೊರತು ಅದಕ್ಕಿಂತ ಮೊದಲು ಆ ಪದದ ಬಳಕೆ ಇರಲಿಲ್ಲ.ಗಾಂಧೀಜಿಯವರು ರಾಮಭಕ್ತರಾಗಿದ್ದುದರಿಂದ ದಲಿತರನ್ನು ವಿಷ್ಣುವಿನ ಪ್ರಿಯ ಮಕ್ಕಳು ಎನ್ನುವ ಭಾವನೆಯಿಂದ ‘ ಹರಿಜನರು’ ಎಂದು ಕರೆದರು.ಗಾಂಧೀಜಿಯವರ ದಲಿತೋದ್ಧಾರ ನೀತಿಯೊಂದಿಗೆ ಅವರು ಠಂಕಿಸಿದ ಪದ ‘ ಹರಿಜನ’ ಎನ್ನುವುದು.

ಘಂಟೆಯ ಬಗ್ಗೆ ಶಾಸ್ತ್ರ,ಪುರಾಣಗಳಲ್ಲಿ ಉಲ್ಲೇಖವಿದೆ.ಈ ದೇಶದಲ್ಲಿ ದೇವಸ್ಥಾನಗಳ ನಿರ್ಮಾಣ ಕಾರ್ಯ ಪ್ರಾರಂಭವಾದದ್ದು ಗುಪ್ತದೊರೆಗಳಿಂದ.ಆ ಕಾಲದಿಂದಲೂ ದೇವಸ್ಥಾನ ರಚನೆ ಮತ್ತು ದೇವಸ್ಥಾನಗಳ ಪೂಜಾ ಸಾಮಗ್ರಿಗಳ ವಿವರಗಳನ್ನು ಬರೆದಿಡಲಾಗಿದೆ.ದೇವಸ್ಥಾನ ನಿರ್ಮಾಣದ ಕುರಿತು ಆಗಮಗಳಲ್ಲಿ ಪ್ರಸ್ತಾಪಿಸಲಾಗಿದೆ.ಆಗಮಗಳ ಕಾಲದಿಂದಲೂ ದೇವಸ್ಥಾನಗಳಲ್ಲಿ,ದೇವರ ಗರ್ಭಗುಡಿಗಳಲ್ಲಿ ಘಂಟೆಗಳನ್ನು ಕಟ್ಟುವ ಪದ್ಧತಿ ಇದೆ.ಆಧ್ಯಾತ್ಮಿಕವಾಗಿ ಯೋಗಸಾಧಕನು ಅನುಭವಿಸುವ ದಶವಿದನಾದಗಳೇ ದೇವಸ್ಥಾನಗಳಲ್ಲಿನ ದಶವಿದ ಮಂಗಳವಾದ್ಯಗಳಾಗಿದ್ದು ಅವುಗಳಲ್ಲಿ ಘಂಟಾನಾದವೂ ಒಂದು.ಶ್ರೀಶೈಲ ಮಲ್ಲಿಕಾರ್ಜುನನ ಕ್ಷೇತ್ರದ ಹಿಂದೆಯೂ ಘಂಟಾಕರ್ಣ ಎನ್ನುವ ಒಬ್ಬ ಶಿವಭಕ್ತ ಇದ್ದಾನೆ.ಘಂಟಾಕರ್ಣನು ಅತ್ಯುಗ್ರನಿಷ್ಠೆಯ ಶಿವಭಕ್ತನಾಗಿದ್ದು ಆತ ವಿಷ್ಣುವಿನ ನಾಮ ತನ್ನ ಕಿವಿಗೆ ಬೀಳಬಾರದು ಎಂದು ಬಾಯಿಂದ ಶಿವನಾಮವನ್ನುಚ್ಚರಿಸುತ್ತ ಕಿವಿಗಳಿಗೆ ಘಂಟಾನಾದ ಕೇಳುವಂತೆ ಮಾಡಿಕೊಂಡಿದ್ದನಂತೆ !ಕ್ರಿಶಪೂರ್ವದ ಸಾವಿರಾರು ವರ್ಷಗಳಿಂದಲೂ ಅಸ್ತಿತ್ವದಲ್ಲಿದೆ ಶ್ರೀಶೈಲ ಕ್ಷೇತ್ರ.ಆ ಶ್ರೀಶೈಲ ಕ್ಷೇತ್ರದ ಹಿನ್ನೆಲೆಯಾಗಿ ಅನಾದಿ ಕಾಲದಿಂದಲೂ ಇದ್ದಾನೆ ಘಂಟಾಕರ್ಣ ಎನ್ನುವ ಶಿವಭಕ್ತ.ಈ ಲೇಖನವನ್ನು ಬರೆದವರ ಅಜ್ಞಾನವನ್ನು ನಾವು ಸಮರ್ಥಿಸಬಾರದು.

ಕೊನೆಯದಾಗಿ ಪ್ರಿಯ ಶಿಷ್ಯ ಉಮೇಶ ತಲೆಕಟ್ಟು ಅವರಿಗೆ ಒಂದು ಆತ್ಮೀಯ ಸಲಹೆ ; ಹಾಲುಮತಸ್ಥರಾದ ನೀವು ಈ ದೇಶದ ಮೂಲನಿವಾಸಿಗಳು.ನಿಮಗೆ ನಿಮ್ಮದೆ ಆದ ಭವ್ಯ ಸಂಸ್ಕೃತಿ ಇದೆ.ಶಿವ ಮಲ್ಲಯ್ಯನೇ ಹಾಲುಮತದ ಮೂಲದೇವರು.ವೀರಭದ್ರನೇ ಹಾಲುಮತದ ಬೀರಪ್ಪನು. ಸಿದ್ಧಕುಲ ಚಕ್ರವರ್ತಿ ಜಗದಾದಿ ಜಗದ್ಗುರು ರೇವಣಸಿದ್ಧರೇ ಹಾಲುಮತದ ಮೂಲಗುರುಗಳು.ಹಾಲುಮತಕ್ಕೆ ಪ್ರತ್ಯೇಕ ಧಾರ್ಮಿಕ ನಂಬಿಕೆ,ಸಿದ್ಧಾಂತ ಮತ್ತು ಆಚರಣೆಗಳಿವೆ.ಮೂಲತಃ ಶಿವಭಕ್ತರಾದ ಹಾಲುಮತಸ್ಥರು ತಮ್ಮ ಪದ್ಧತಿಯಂತೆ ಶಿವನನ್ನು ಪೂಜಿಸುತ್ತಿದ್ದಾರೆ.ಹಾಲುಮತದ ಪೂಜಾಪದ್ಧತಿಯಲ್ಲಿ ಡೊಳ್ಳು ಇರುವಂತೆ ಘಂಟೆಯೂ ಇದೆ.’ಹಾಗಾಗಿ ಉಮೇಶ ಅವರೆ ನಿಮ್ಮ ನೆಲಮೂಲ ಸಂಸ್ಕೃತಿಯನ್ನು ಕೆಡೆನುಡಿಯುವ ದುರ್ಮತಿಗಳ ದುರ್ವಿಚಾರಗಳಿಗೆ ಮನಸೋಲಬೇಡಿ.ನಾವು ನಮ್ಮ ಸಂಸ್ಕೃತಿಯ ಅಂತಃ ಸತ್ತ್ವದಲ್ಲಿ ಬೆಳೆಯಬೇಕಲ್ಲದೆ ಹೆರವರ ನಂಜಿನ ಸಂಸ್ಕೃತಿಯ ರಂಜನೆಯ ಮೋಹಪೀಡಿತರಾಗಬಾರದು.

೧೯.೦೨.೨೦೨೪

About The Author