ಶಿವಪತಿ ಶರಣಸತಿ ಭಾವದಿಂದ ಶಿವನೊಲುಮೆ ಸುಲಭ ಸಾಧ್ಯ

ಬಸವೋಪನಿಷತ್ತು ೪೨ : ಶಿವಪತಿ ಶರಣಸತಿ ಭಾವದಿಂದ ಶಿವನೊಲುಮೆ ಸುಲಭ ಸಾಧ್ಯ : ಮುಕ್ಕಣ್ಣ ಕರಿಗಾರ

ಬಿಳಿಯ ಕರಿಕೆ,ಕಣಗಿಲೆಯ,ತೊರೆಯ ತಡಿಯ ಮಳಲು ತಂದು —
ಗೌರಿಯ ನೋನುವ ಬನ್ನಿರೇ,ಚಿಕ್ಕಮಕ್ಕಳೆಲ್ಲರೂ ನೆರೆದು —
‘ ಅನುಪಮದಾನಿ ಕೂಡಲ ಸಂಗಮದೇವ ಗಂಡನಾಗಬೇಕೆಂ’ ದು.

ಬಸವಣ್ಣನವರು ಈ ವಚನದಲ್ಲಿ ಶರಣಸತಿ,ಶಿವಪತಿ ( ವೀರಶೈವರು ಇದನ್ನೇ ಶರಣಸತಿ ಲಿಂಗಪತಿ ಎನ್ನುತ್ತಾರೆ) ತತ್ತ್ವದ ಭಕ್ತಿಭಾವವನ್ನಾಚರಿಸುವುದರಿಂದ ಬಹುಬೇಗನೆ ಶಿವಾನುಗ್ರಹವಾಗುತ್ತದೆ ಎನ್ನುವುದರತ್ತ ಭಕ್ತರ ಗಮನಸೆಳೆದಿದ್ದಾರೆ.ಮದುವೆಯಾಗದ ಹೆಣ್ಣುಮಕ್ಕಳು ವರಪ್ರಾಪ್ತಿಗಾಗಿ ಗೌರಿ ವ್ರತವನ್ನು ಆಚರಿಸುತ್ತಾರೆ.ಆ ಗೌರಿ ವ್ರತಾಚಾರಣೆಯ ಸಾಧನ ಸಲಕರಣೆಗಳನ್ನು ಅನುಭಾವಿಕ ನೆಲೆಗೇರಿಸಿ ಬಸವಣ್ಣನವರು ಗೌರಿವ್ರತಮಾಡಬೇಕು ಎನ್ನುತ್ತಾರೆ ಈ ವಚನದಲ್ಲಿ.ಬಿಳಿಯ ಗರಿಕೆ,ಕಣಗಿಲಹೂವುಗಳನ್ನು ತಂದು ಹಳ್ಳ ಅಥವಾ ತೊರೆಯ ಮರುಳಿನಿಂದ ಗೌರಿದೇವಿಯ ವಿಗ್ರಹವನ್ನು ಮಾಡಿ ಗೌರಿಯನ್ನು ಪೂಜಿಸೋಣ ಬನ್ನಿರಿ ಮಕ್ಕಳೆ ಎಂದು ಕರೆಯುವ ಬಸವಣ್ಣನವರು ನಮ್ಮ ಗೌರಿವ್ರತದ ಉದ್ದೇಶವು ಉಪಮಿಸಬಾರದ ಮಹಾದಾನಿಯಾದ ಶಿವನನ್ನೇ ಗಂಡನನ್ನಾಗಿ ಪಡೆಯುವುದಾಗಿರಬೇಕು ಎನ್ನುತ್ತಾರೆ.

ಬಸವಣ್ಣನವರು ತಮ್ಮ ಎಳೆಯ ಪ್ರಾಯದಲ್ಲಿ ಬಾಗೇವಾಡಿಯಲ್ಲಿ ತಾವು ಕಂಡ ಅಥವಾ ಬಾಲಕರಾಗಿದ್ದಾಗ ತಾವು ಆಡಿದ ಮಕ್ಕಳಾಟ ಒಂದನ್ನು ಅನುಭಾವದ ನೆಲೆಗೇರಿಸಿ ಈ ವಚನ ರಚಿಸಿದ್ದಾರೆನ್ನಿಸುತ್ತದೆ.ಅಥವಾ ಕೂಡಲಸಂಗಮದಲ್ಲಿದ್ದ ಪ್ರಾರಂಭದ ದಿನಗಳಲ್ಲಿಯ,ಅವರ ತಾರುಣ್ಯ ಜೀವನದ ರಚನೆಯೂ ಇದಾಗಿರಬಹುದು.ಹೆಣ್ಣುಮಕ್ಕಳು ವಯಸ್ಸಿಗೆ ಬಂದರೂ ವರನು ಬರದೆ ಇದ್ದರೆ,ಸಕಾಲದಲ್ಲಿ ಮದುವೆ ಆಗದೆ ಇದ್ದರೆ ಗೌರೀವ್ರತವನ್ನಾಚರಿಸುತ್ತಾರೆ.ಹರಿವ ನದಿ ಅಥವಾ ತೊರೆಯ ಮರಳನ್ನು ತಂದು ಅದರಲ್ಲಿ ಗೌರಿಯ ಮೂರ್ತಿಯನ್ನು ಮಾಡಿ ಆ ಮೂರ್ತಿಗೆ ಬಿಳಿಯ ಗರಿಕೆ ಮತ್ತು ಕಣಗಿಲೆಯ ಹೂವುಗಳಿಂದ ಪೂಜಿಸಿ ಬೇಗ ಮದುವೆಯಾಗಲು ಪ್ರಾರ್ಥಿಸುತ್ತಾರೆ.ವ್ರತವು ಹೆಚ್ಚಿನ ಆಡಂಬರದ ಪೂಜೆಯಲ್ಲದೆ ಸರಳ ಪೂಜೆ ಎನ್ನುವುದನ್ನು ಗಮನಿಸಬೇಕು.ಬಹುಶಃ ಬೇಸಿಗೆ ಕಾಲದಲ್ಲಿ ಆಚರಿಸಿದ ವ್ರತದ ಪ್ರಸ್ತಾಪವನ್ನು ಬಸವಣ್ಣನವರಿಲ್ಲಿ ಮಾಡಿದ್ದಾರೆನ್ನಿಸುತ್ತದೆ.ಬಿಳಿಯಗರಿಕೆ ಎಂದರೆ ಒಣಗಿದ ಗರಿಕೆ.ಗರಿಕೆಯು ಮಳೆಗಾಲದಲ್ಲಿ ಹಸಿರಾಗಿರುತ್ತದೆ,ಬೇಸಿಗೆಯಲ್ಲಿ ಒಣಗಿ ಬಿಳಿದಾಗುವುದಾದರೂ ಗರಿಕೆಯ ಜೀವಸತ್ತ್ವವು ನಾಶವಾಗಿರದು.ಮತ್ತೆ ನಾಲ್ಕುಹನಿ ಮಳೆ ಬಿದ್ದೊಡನೆ ಚಿಗುರೊಡೆದು ಹಸಿರಾಗುತ್ತದೆ ಬಿಳಿಗರಿಕೆ.ಜನಪದರು ‘ ಕರಕಿಯ ಕುಡಿಯ್ಹಾಂಗ ಹಬ್ಬಲಿ ನನ್ನತವರುಮನೆ ಬಳ್ಳಿ’ ಎಂದು ಹಾಡಿರುವ ಜಾನಪದ ಗೀತೆಯನ್ನು ಗಮನಿಸಿದಾಗ ಕರಿಕೆಯು ಅವಿನಾಶಿಯಾದ ಜೀವಸತ್ತ್ವದ ಹುಲ್ಲಾಗಿದ್ದು ಅದು ಸದಾ ಚಿಗುರುತ್ತಿರುತ್ತದೆ,ಹಾಗೆಯೇ ನನ್ನ ತವರು ಮನೆಯ ವಂಶವು ಬೆಳೆಯುತ್ತಿರಲಿ ಎಂದು ಗರತಿಯು ಆಶಿಸಿರುವುದರಿಂದ ಗೌರಿಯ ಪೂಜೆಯಲ್ಲಿ ಒಣಗಿದರೂ ಮತ್ತೆ ಚಿಗುರಬಹುದೆಂಬ ಭರವಸೆಯಿಂದ ಒಣಗರಿಕೆಯನ್ನು ಪೂಜಾವಸ್ತುವನ್ನಾಗಿ ಬಳಸಿರಬಹುದು.ಕಣಗಿಲೆಹೂವುಗಳು ಗೌರಿಗೆ ಪ್ರಿಯವಾದ ಹೂವುಗಳು.ಗೌರಿವ್ರತವನ್ನು ಆಚರಿಸಿ ಕನ್ಯೆಯರು ತಮಗೆ ಬೇಗ ಗಂಡ ಸಿಗಲಿ,ನನ್ನ ಗಂಡ ಹೀಗೆಯೇ ಇರಬೇಕು ಎಂದು ವರಬೇಡುತ್ತಾರೆ.ಬಸವಣ್ಣನವರು ಇಲ್ಲಿ ‘ ಅನುಪಮದಾನಿ ಕೂಡಲಸಂಗಮದೇವನನ್ನೇ ಗಂಡನನ್ನಾಗಿ ಬೇಡೋಣ’ ಎನ್ನುತ್ತಾರೆ.

ಹಲವು ವಿಧ ಭಕ್ತಿಗಳಲ್ಲಿ ಶಿವನನ್ನು ಪತಿಯಾಗಿ ಭಾವಿಸಿ,ಪೂಜಿಸುವ ಭಕ್ತಿಯೂ ಒಂದು.ಹೆಂಡತಿಯಲ್ಲಿ ಗಂಡನು ಸದಾ ಅನುರಕ್ತನಾಗಿರುವಂತೆ ವಿರಕ್ತನಾದರೂ ಶಿವನು ಪತಿಭಾವದಿಂದ ತನ್ನನ್ನು ಪೂಜಿಸುವ ಭಕ್ತನಲ್ಲಿ ಪ್ರಸನ್ನನಾಗುವನು,ಭಕ್ತನನ್ನು ಅಗಲಿ ಇರಲಾರನು ಎನ್ನುವ ಭಾವಭಕ್ತಿಯ ಪೂಜೆಯೇ ‘ಶರಣಸತಿ ಶಿವಪತಿ’ ಭಾವದ ಪೂಜೆಯು.ಲೌಕಿಕದ ಹೆಣ್ಣು ತನ್ನ ತವರು ಮನೆಯನ್ನು ತೊರೆದು ಗಂಡನ ಮನೆಸೇರಿ ತನ್ನನ್ನು ತಾನು ಗಂಡನಿಗೆ ಸಮರ್ಪಿಸಿಕೊಳ್ಳುವಳು.ಅದರಂತೆ ಭಕ್ತನಾದವನು ತನ್ನದೆಲ್ಲವನ್ನು ಸಮರ್ಪಿಸಿಕೊಂಡು ಶಿವನೇ ಗತಿಮತಿ ಎಂದು ಒಪ್ಪಿ ಪೂಜಿಸಬೇಕು.ಅಂತಹ ಸಮರ್ಪಣಾಭಾವದ ಭಕ್ತಿಯು ಶಿವನಿಗೆ ಪ್ರಿಯವಾಗುತ್ತದೆ.ಬಸವಣ್ಣನವರು ಈ ವಚನದಲ್ಲಿ ಶಿವನನ್ನು ‘ ಅನುಪಮದಾನಿ’ ಎನ್ನುವ ವಿಶೇಷಣದಿಂದ ಸ್ತುತಿಸಿದ್ದಾರೆ.ಇತರ ದೇವತೆಗಳು ಭಕ್ತರಿಗೆ ಅವರು ಕೇಳಿದ ಎಲ್ಲವನ್ನೂ ಕೊಡಲಾರರು.ದಾನಿಗಳೆನ್ನಿಸಿಕೊಂಡ ಮನುಷ್ಯರು‌ಕೂಡ ತಮ್ಮ ಸರ್ವಸ್ವವೆಲ್ಲವನ್ನೂ ದಾನಮಾಡಲಾರರು.ಆದರೆ ಶಿವನು ಹಾಗಲ್ಲ,ತನ್ನ ಭಕ್ತರು ಏನು ಕೇಳಿದರೂ ಇಲ್ಲವೆನ್ನದೆ ಕೊಡುವ ಮುಗ್ಧನು,ಬೋಳೇಶಂಕರನು.ಭಸ್ಮಾಸುರನಿಗೆ ತನ್ನ ಉರಿನೇತ್ರ,ಉರಿಹಸ್ತವನ್ನೇ ನೀಡಿದ್ದ ಶಿವನು ರಾವಣನಿಗೆ ತನ್ನ ಶಕ್ತಿಸ್ವರೂಪವಾದ ಆತ್ಮಲಿಂಗವನ್ನು ಸಹ ನೀಡಿದ್ದ ಮಹೋದಾರಿಯು.ಇಂಥ ಘನ ಔದಾರ್ಯವು ಶಿವನೊಬ್ಬನ ವಿಶೇಷವಾಗಿರುವುದರಿಂದ ಮತ್ತು ಶಿವನಿಗೆ ಸರಿಸಮರೆನ್ನಿಸುವ ದಾನಿಗಳಾರೂ ಇಲ್ಲದ್ದರಿಂದ ಅವನು ಅನುಪಮದಾನಿಯು.

೧೪.೦೨.೨೦೨೪

About The Author