ಶಿವಮಂತ್ರವು ವೇದ ಪುರಾಣ ಶಾಸ್ತ್ರಗಳಿಗೂ ಮಿಗಿಲಾದುದು

ಬಸವೋಪನಿಷತ್ತು ೪೧ : ಶಿವಮಂತ್ರವು ವೇದ ಪುರಾಣ ಶಾಸ್ತ್ರಗಳಿಗೂ ಮಿಗಿಲಾದುದು –ಮುಕ್ಕಣ್ಣ ಕರಿಗಾರ

‘ ಓಂ ನಮಃ ಶಿವಾಯ’
‌ ಎಂಬ ಮಂತ್ರವ ಮೀರಲಮ್ಮದೆ ನಿಂದುದು ವೇದ !
‘ ಓಂ ನಮಃ ಶಿವಾಯ’
ಎಂಬ ಮಂತ್ರವ ಮೀರಲಮ್ಮದೆ ನಿಂದುದು ಶಾಸ್ತ್ರ !
ಓಂ ನಮಃ ಶಿವಾಯ ‘
ಎಂಬ ಮಂತ್ರವ ಮೀರಲಮ್ಮದೆ ನಿಂದುದು ತರ್ಕ !
ಭಯಂಕರ ಭ್ರಮೆಗೊಂಡಿತ್ತು ಮಂತ್ರ – ತಂತ್ರ !
ಶಿವನಂತುವನರಿಯದೆ ಚಿಂತಿಸುತ್ತಿದ್ದಿತು ಲೋಕ !
ಕೂಡಲ ಸಂಗಮದೇವ ಶ್ವಪಚನ ಮೆರೆದೊಡೆ
ಜಾತಿಭೇದವ ಮಾಡಲಮ್ಮವು !

ಪರಶಿವನು ವೇದಕ್ಕತೀತ ಪರವಸ್ತುವು,ಪರಬ್ರಹ್ಮನು ,ಶಿವನಾಮವು ವೇದ ಶಾಸ್ತ್ರ ಪುರಾಣ ತರ್ಕಗಳಿಗೆ ನಿಲುಕದ ಮಹಾಮಂತ್ರವು ಎನ್ನುವುದನ್ನು ಬಸವಣ್ಣನವರು ಈ ವಚನದಲ್ಲಿ ವಿವರಿಸಿದ್ದಾರೆ.ಓಂ ನಮಃ ಶಿವಾಯ ಎನ್ನುವ ಮಂತ್ರವನ್ನು ಮೀರಲರಿಯದೆ ನಿಂತಿತು ವೇದ.ಓಂ ನಮಃ ಶಿವಾಯ ಎನ್ನುವ ಮಂತ್ರವನ್ನು ಮೀರಲರಿಯದೆ ನಿಂತವು ಸಕಲಶಾಸ್ತ್ರಗಳು.ಓಂ ನಮಃ ಶಿವಾಯ ಎನ್ನುವ ಮಹಾಮಂತ್ರವನ್ನು ಮೀರಲರಿಯದೆ ನಿಂತವು ಸರ್ವತರ್ಕಗಳು.ಬಹುವಿಧವಾದ ಭಯಂಕರ ಮಂತ್ರ ತಂತ್ರಗಳು ಓಂ ನಮಃ ಶಿವಾಯ ಮಹಾಮಂತ್ರದೆದುರು ನಿಲ್ಲದೆ ಶರಣಾದವು.ಶಿವನ ಸ್ವರೂಪವೆಂತಹದು,ಬೆಡಗು ಎಂತಹದು ಎನ್ನುವುದನ್ನು ಅರ್ಥೈಸಿಕೊಳ್ಳದೆ ಲೋಕವು ಚಿಂತೆಗೊಳಗಾಗಿದೆ.ಶಿವನು ಚಾಂಡಾಲನನ್ನು ತನ್ನ ಮಹಾಭಕ್ತನೆಂಬ ಲೀಲೆ ಮೆರೆದಿರುವುನಾದ್ದರಿಂದ ಶಿವಭಕ್ತರಲ್ಲಿ ಕುಲವನ್ನೆಣಿಸಬಾರದು ಎನ್ನುತ್ತಾರೆ ಬಸವಣ್ಣನವರು.

ಬಸವಣ್ಣನವರು ಈ ವಚನದಲ್ಲಿ ಓಂ ನಮಃ ಶಿವಾಯ ಎನ್ನುವ ಷಡಕ್ಷರಿ ಮಹಾಮಂತ್ರದ ಮಹತ್ವವನ್ನು‌ ಒತ್ತಿಹೇಳುತ್ತ ಶಿವಮಂತ್ರದ ಮಹಿಮಾಧಿಕ್ಯವನ್ನು ಪ್ರತಿಪಾದಿಸಿದ್ದಾರೆ.ವೇದ ಶಾಸ್ತ್ರ‌ಪುರಾಣ ತರ್ಕಗಳು ಶಿವಮಂತ್ರಕ್ಕೆ ಸಮನಾಗಲಾರವು ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ.ವೇದವು ‘ ಓಂ ನಮಃ ಶಿವಾಯ’ ಎನ್ನುವ ಶಿವಮಹಾಮಂತ್ರವನ್ನು ಮೀರಲರಿಯದೆ ಶಿವಮಂತ್ರಕ್ಕೆ ಶರಣಾಯಿತು.’ ವಿದ್’ ಧಾತುವಿನಿಂದ ನಿಷ್ಪನ್ನವಾಗುವ ವೇದಕ್ಕೆ ‘ ಜ್ಞಾನ’ ಎಂದರ್ಥ.ಪರಮಾತ್ಮನ ಮತ್ತು ದೇವತೆಗಳ ವಿಷಯಕವಾದ ಅಲೌಕಿಕ ಜ್ಞಾನವೇ ವೇದವಾದ್ದರಿಂದ ಅದಕ್ಕೆ ಎಲ್ಲಿಲ್ಲದ ಪ್ರಾಶಸ್ತ್ಯವಿದೆ.ಋಷಿಗಳು ವೇದದ ಋಕ್ಕುಗಳನ್ನು,ಮಂತ್ರಗಳನ್ನು ಸಾಕ್ಷಾತ್ಕರಿಸಿಕೊಂಡಿದ್ದರಿಂದ ವೇದಮಂತ್ರಗಳು ಅದಾಗಲೇ ಬೃಹದಾಕಾಶದಲ್ಲಿದ್ದ ಪರಮಾತ್ಮನಸೂತ್ರಗಳಾಗಿದ್ದರಿಂದ ಅವು ಅಪೌರುಷೇಯ.ವೇದವು ಮನುಷ್ಯರಿಂದ ಬರೆಯಲ್ಪಟ್ಟಿಲ್ಲ ಎನ್ನುವ ಅರ್ಥದಲ್ಲಿ ಅದು ಅಪೌರುಷೇಯ.ವೇದವು ಮೊದಲು ಒಂದೇ ಇತ್ತು.ವ್ಯಾಸ ಮಹರ್ಷಿಗಳು ವೇದದ ಋಕ್ಕು,ಛಂದಸ್ಸು,ಋಷಿ ಮತ್ತು ಗೇಯಗುಣವನ್ನನುಸರಿಸಿ ಋಗ್ವೇದ,ಯಜುರ್ವೇದ,ಸಾಮವೇದ ಮತ್ತು ಅಥರ್ವಣವೇದ ಎನ್ನುವ ನಾಲ್ಕು ಸಂಹಿತೆಗಳನ್ನಾಗಿ ವಿಂಗಡಿಸಿ ವೇದವ್ಯಾಸರೆನ್ನಿಸಿಕೊಂಡರು.ಮೊದಲಲ್ಲಿ ವೇದಸಂಹಿತೆ ಮೂರುಭಾಗಗಳಲ್ಲಿತ್ತು ,ನಂತರ ಅಥರ್ವಣವೇದವು ನಾಲ್ಕನೆಯ ವೇದವಾಗಿ ಸೇರಿಕೊಂಡಿತು.ವೈದಿಕ ಸಾಹಿತ್ಯದಲ್ಲಿ ಬರುವ’ ತ್ರಯೀ’ ತ್ರಯೀವಿದ್ಯೆ’ ಮತ್ತು ‘ ವೇದತ್ರಯ’ ಎನ್ನುವ ಪದವಿಶೇಷಗಳು ಇದಕ್ಕೆ ನಿದರ್ಶನ.ಅದೇನೇ ಇರಲಿ ದೇಶದಲ್ಲಿ ವೇದಕ್ಕೆ ಅತಿಶಯ ಪ್ರಾಮುಖ್ಯತೆ ನೀಡಿ ಅವುಗಳನ್ನು ಪ್ರಮಾಣ ಎಂದು ಸ್ವೀಕರಿಸಿದ್ದಾರೆ.ವೇದಪ್ರಾಮಾಣ್ಯವು ಭಾರತೀಯರ ಜನಜೀವನದ ಭಾಗವೇ ಆಗಿದ್ದ ಕಾಲ,ದಿನಗಳಿದ್ದವು.ವೇದವು ಪ್ರಶ್ನಾತೀತ ಪರಮಾತ್ಮನ ವಾಕ್ಕು ಎನ್ನುವ ಭಾವನೆಯೂ ಪ್ರಚಲಿತವಾಗಿತ್ತು ಹಿಂದೆ.ಬಸವಣ್ಣನವರು ವೇದವು ಪ್ರಮಾಣವಲ್ಲ,ಶಿವಷಡಕ್ಷರಿ ಮಂತ್ರದೆದುರು ವೇದವು ಏನೇನೂ ಅಲ್ಲ ಎನ್ನುತ್ತಾರೆ.ಯಾಕೆಂದರೆ ವೇದವು ಬಹುದೇವತೆಗಳ ಉಪಾಸನೆಯನ್ನು ಬೋಧಿಸುವುದಲ್ಲದೆ ಕರ್ಮಕ್ಕೆ ಒತ್ತು ನೀಡುತ್ತದೆ.ಯಜ್ಞಕ್ಕೆ ಪ್ರಾಧಾನ್ಯನೀಡುವ ವೇದಸಂಸ್ಕೃತಿಯು ಕರ್ಮಪ್ರಧಾನವಾದುದು ಮತ್ತು ಬಲಿಯನ್ನು ಬೇಡುವಂತಹದ್ದು.ಆದ್ದರಿಂದ ಭಕ್ತರಿಂದ ಏನನ್ನೂ ಬೇಡದೆ ಎಲ್ಲವನ್ನೂ ನೀಡುವ ಶಿವಮಹಾಮಂತ್ರವು ಸರ್ವಶ್ರೇಷ್ಠವಾದುದು ಎನ್ನುವ ಅಭಿಪ್ರಾಯ ಬಸವಣ್ಣನವರದು.’ಶಾಸ್ತ್ರ ‘ಎಂದರೆ ಸಾಧು ಮತ್ತು ಅಸಾಧು,ಕರ್ತವ್ಯ ಮತ್ತು ಅಕರ್ತವ್ಯ,ವಿಹಿತ ಮತ್ತು ನಿಷಿದ್ಧ ವಿಷಯಗಳನ್ನು ಮತ್ತು ತತ್ತ್ವಗಳನ್ನು ತಿಳಿಸುವ ಗ್ರಂಥ ಎನ್ನುವ ಅರ್ಥವಿದ್ದು ಶಾಸ್ತ್ರಗಳು ಜನಸಮುದಾಯದ ಸಾಮಾಜಿಕ ಮತ್ತು ಧಾರ್ಮಿಕ ಕಟ್ಟುಕಟ್ಟಲೆಗಳ ಗ್ರಂಥಗಳಾಗಿದ್ದು ಇಂತಹ ಶಾಸ್ತ್ರಗ್ರಂಥಗಳ ಅಧ್ಯಯನ,ಶಾಸ್ತ್ರಾನುಷ್ಠಾನದಿಂದ ಮೋಕ್ಷವು ದೊರೆಯದಾದ್ದರಿಂದ ಬಸವಣ್ಣನವರು ಮೋಕ್ಷಪ್ರದಾಯಕವಾದ ಓಂ ನಮಃ ಶಿವಾಯ ಮಂತ್ರದೆದುರು ಶಾಸ್ತ್ರಗ್ರಂಥಗಳು ನಿರುಪಯುಕ್ತವಾದವು ಎನ್ನುತ್ತಾರೆ.ಧಾರ್ಮಿಕ ವಿಧಿವಿಧಾನ,ಕ್ರಿಯಾನುಷ್ಠಾನಗಳ ವಿಷಯಕ ಗ್ರಂಥಗಳು ತಂತ್ರಗ್ರಂಥಗಳಾಗಿದ್ದು ಇಂತಹ ತಂತ್ರಗಳ ಸಾಧನೆ- ಅನುಷ್ಠಾನ ಮತ್ತು ಸಿದ್ಧಿಗಳಿಂದಲೂ ಶಿವನ ಸಾಕ್ಷಾತ್ಕಾರ ಅಥವಾ ಮೋಕ್ಷವು ಲಭಿಸುವುದಿಲ್ಲವಾದ್ದರಿಂದ ತರ್ಕಗಳಿಂದಲೂ ಪ್ರಯೋಜನವಿಲ್ಲ ಎನ್ನುತ್ತಾರೆ ಬಸವಣ್ಣನವರು.ಮಂತ್ರ ತಂತ್ರಗಳು ಕ್ಷುದ್ರವಿದ್ಯೆಗಳಾಗಿದ್ದು ಅವು ಸಾಮಾನ್ಯಜನರ ಮೇಲೆ ಪ್ರಭಾವ ಇಲ್ಲವೆ ಪರಿಣಾಮ ಬೀರಬಹುದಲ್ಲದೆ ಯೋಗಿಗಳು,ಆಧ್ಯಾತ್ಮಿಕ ಸಾಧಕರುಗಳ ಮೇಲೆ ಯಾವ ಪರಿಣಾಮವನ್ನು ಉಂಟು ಮಾಡಲಾರವು .ಅಲ್ಲದೆ ಓಂ ನಮಃ ಶಿವಾಯ ಎನ್ನುವ ಮಂತ್ರಜಪಿಸುವ ಶಿವಭಕ್ತ,ಶಿವಶರಣನ ಬಳಿ ಯಾವ ದುಷ್ಟಶಕ್ತಿ,ಕ್ಷುದ್ರವಿದ್ಯೆಗಳು ಸುಳಿಯವಾದ್ದರಿಂದ ಎಲ್ಲ ಮಂತ್ರ ತಂತ್ರಗಳಿಗೂ ಶಿವಮಹಾಮಂತ್ರವು ಶ್ರೇಷ್ಠವಾದುದು.ಲೋಕವು ಶಿವನ ಸ್ವರೂಪ ಎಂತುಂಟು ಎಂದು ನಿರ್ಧರಿಸಲರಿಯದೆ ಚಿಂತೆಗೊಳಗಾಗಿದೆ.ಶಿವನು ಮನುಷ್ಯರ ಊಹೆ ಕಲ್ಪನೆಗಳಿಗೆ ಒಳಗಾಗದ ಅಂಚಿತ್ಯನೂ ಅದ್ವಿತೀಯನೂ ಅಗಮ್ಯನೂ ಅಗೋಚರನೂ ಅಪ್ರಮಾಣನೂ ಆಗಿರುವುದರಿಂದ ಲೋಕದ ಜನತೆ ಶಿವನಸ್ವರೂಪವನ್ನು,ಶಿವನ ರಹಸ್ಯವನ್ನು ಅರಿಯಲಾರರು.

ಶಿವಷಡಕ್ಷರಿ ಮಂತ್ರದ ಅಗ್ಗಳಿಕೆಯನ್ನು ವಚನದ ಪೂರ್ವಾರ್ಧದಲ್ಲಿ ವಿವರಿಸಿದ ಬಸವಣ್ಣನವರು ವಚನದ ಉತ್ತರಾರ್ಧ ಮತ್ತು ಕೊನೆಯಭಾಗದಲ್ಲಿ ಶಿವನು ಭಕ್ತವತ್ಸಲನು,ಭಕ್ತಜನೋದ್ಧಾರನು ಎನ್ನುವ ಶಿವಸ್ವರೂಪ,ಶಿವರಹಸ್ಯವನ್ನು ವಿವರಿಸಿದ್ದಾರೆ –‘ ಕೂಡಲ ಸಂಗಮದೇವ ಶ್ವಪಚನ ಮೆರೆದಡೆ ಜಾತಿಭೇದವ ಮಾಡಲಮ್ಮವು !’ಶಿವನು ಮಾದಾರ ಚೆನ್ನಯ್ಯನ ಮನೆಯಲ್ಲಿ ಅಂಬಲಿಯನ್ನು ಉಂಡು ಚೆನ್ನಯ್ಯನ ಭಕ್ತಿವಿಶೇಷತೆಯನ್ನು‌ಜಗತ್ತಿಗೆ ಸಾರಿದನು.ಮಾದಾರ ಚೆನ್ನಯ್ಯನು ಚೋಳ ಅರಸ ಕರಿಕಾಲಚೋಳನ ಸೇವೆಯೊಳಿದ್ದ,ಅರಸನ ಆನೆಗಳಿಗೆ ಹುಲ್ಲು ತಂದು ಹಾಕುತ್ತಿದ್ದ ಗುಪ್ತಶಿವಭಕ್ತನು.ದಲಿತಸಮುದಾಯಕ್ಕೆ ಸೇರಿರುವ ತಾನು ಶಿವಭಕ್ತಿಯನ್ನಾಚರಿಸುವುದು ಯಾರಿಗೂ ಗೊತ್ತಾಗಬಾರದೆಂದು ಗುಪ್ತವಾಗಿ ಶಿವಭಕ್ತಿಯನ್ನು ಆಚರಿಸುತ್ತಿದ್ದ.ಬಡವನಾಗಿದ್ದ ಚೆನ್ನಯ್ಯನು ಪ್ರತಿದಿನ ತನ್ನ ಶಿವಪೂಜೆಯ ಸಮಯದಲ್ಲಿ ತನ್ನ ಮನೆಯಲ್ಲಿದ್ದ ರೊಟ್ಟಿ,ನುಚ್ಚು,ಅಂಬಲಿಯನ್ನೇ ಶಿವನಿಗೆ ನೈವೇದ್ಯವಾಗಿ ಸಮರ್ಪಿಸುತ್ತಿದ್ದನು.ಅರಸ ಕರಿಕಾಲ ಚೋಳನು ಪ್ರತಿದಿನ ಅರಮನೆಯ ಆವರಣದಲ್ಲಿದ್ದ ಶಿವಾಲಯಕ್ಕೆ ತೆರಳಿ ಶಿವನಿಗೆ ಷಡ್ರಸೋಪೇತ ಬಗೆಬಗೆಯ ಭಕ್ಷ್ಯಭೋಜ್ಯಗಳಿಂದ ಉಣಬಡಿಸುತ್ತಿದ್ದನು.ಕರಿಕಾಳಚೋಳನ ಭಕ್ತಿಗೆ ಮೆಚ್ಚಿ ಸ್ವತಃ ಶಿವನೇ ಲಿಂಗದಿಂದೆದ್ದು ಬಂದು ಕರಿಕಾಲಚೋಳನ ಕೈಯಾರೆ ಉಣ್ಣುತ್ತಿದ್ದನಂತೆ.ಇದರಿಂದ ಸಹಜವಾಗಿಯೆ ಅಹಂ ಮೂಡಿತು ಅರಸ ಕರಿಕಾಲಚೋಳನಿಗೆ.’ ಸ್ವಯಂ ಶಿವನಿಗೆ ಉಣಬಡಿಸುವ ನನಗಿಂತ ಹಿರಿಯ ಶಿವಭಕ್ತರುಂಟೆ?’ ಎಂದುಕೊಂಡನಂತೆ ಮನಸ್ಸಿನಲ್ಲಿ.ತನ್ನ ಭಕ್ತರಲ್ಲಿ ಲವಲೇಶವೂ ಅಹಮಿಕೆ ಇರಬಾರದು ಎಂದು ನಿರೀಕ್ಷಿಸುವ ಶಿವನು ಒಂದು ಲೀಲೆಯನ್ನು ಎಸಗಿಯೇ ಬಿಟ್ಟನು ಕರಿಕಾಲಚೋಳನೆಂಬ ಶಿವಜ್ಯೋತಿಗೆ ಅಂಟಿದ ಕಂದು,ಕರಕನ್ನು ನಿವಾರಿಸಲು. ಒಂದು ದಿನ ಬೆಳಿಗ್ಗೆ ಎಂದಿನಂತೆ ನಿತ್ಯ ಶಿವಪೂಜೆ ಮುಗಿಸಿ ಪ್ರಸಾದಕ್ಕೆ ಅಣಿಯಾಗುತ್ತಿದ್ದ ಮಾದಾರ ಚೆನ್ನಯ್ಯನ ಮನೆಯಂಗಳದಲ್ಲಿ ಒಬ್ಬ ಸಾಧುವಿನ ರೂಪದಲ್ಲಿ ಕಾಣಿಸಿಕೊಂಡು ‘ಭವತಿ ಭಿಕ್ಷಾಂದೇಹಿ’ ಎನ್ನುವನು.ಮಾದಾರ ಚೆನ್ನಯ್ಯನು ದಡಬಡಿಸಿ ಎದ್ದು ಸಾಧುವಿನ ಬಳಿಬಂದು ಅವನ ಪಾದಪೂಜೆ ಮಾಡಿ ಸತ್ಕರಿಸಿ ಹಸಿವು ಹಸಿವು ಎನ್ನುತ್ತಿದ್ದ ಸಾಧುವಿಗೆ ತಾನು ಮತ್ತು ತನ್ನ ಹೆಂಡತಿಗಾಗಿ ಮಾಡಿದ್ದ ಗಂಜಿಯನ್ನೆಲ್ಲ ಉಣಬಡಿಸಿ ಗಂಡ ಹೆಂಡತಿಯರು ಉಪವಾಸದಿಂದಿರುವರು.’ ತೃಪ್ತಿಯಾಯಿತು’ ಎಂದು ಎದ್ದುಹೋದ ಶಿವಸಾಧು,ಸಾಧುಶಿವ.ಇತ್ತ ಅರಸ ಕರಿಕಾಲ ಚೋಳನು ಎಂದಿನಂತೆ ಬಗೆಬಗೆಯ ಭಕ್ಷ್ಯಭೋಜ್ಯಗಳನ್ನು ತಂದು ಶಿವಲಿಂಗದ ಮುಂದಿಟ್ಟು ‘ ಆರೋಗಿಸು ಪ್ರಭುವೆ’ ಎಂದು ಬೇಡಿದರೆ ಶಿವನು ಮಾತನಾಡಲಿಲ್ಲವಂತೆ,ಲಿಂಗದಿಂದ ಎದ್ದು ಬರಲಿಲ್ಲವಂತೆ.ತನ್ನಿಂದ ಏನಾದರೂ ಅಪಚಾರವಾಗಿರಬಹುದೆಂದೆಣಿಸಿ ಅರಸ ಕರಿಕಾಲಚೋಳನು ಒರೆಯ ಕತ್ತಿಯನ್ನು ತೆಗೆದು ತನ್ನ ಶಿರವ ಹರಿದುಕೊಳ್ಳಲು ಉರವಣಿಸುವನು.ಆಗ ಶಿವನು‌ ಲಿಂಗದಲ್ಲಿದ್ದುಕೊಂಡೇ ಮಾತನಾಡಿದನಂತೆ ‘ ದುಡುಕದಿರು ಅರಸ.ನಾನು ಇಂದು ಚೆನ್ನಯ್ಯನ ಮನೆಯ ಸ್ವಾದಿಷ್ಟಗಂಜಿಯನ್ನು ಉಂಡೆನಾದ್ದರಿಂದ ಹಸಿವು ಅಡಗಿದೆ’. ಕರಿಕಾಲಚೋಳನಿಗೆ ತನ್ನ ಊಳಿಗದ ಆಳು ಚೆನ್ನಯ್ಯ ತನಗಿಂತ ಮಹಾನ್ ಶಿವಭಕ್ತನೆಂದು ತಿಳಿದು ಅರಸುಪರಿವಾರಸಮೇತ ಚೆನ್ನಯ್ಯನ ಮನೆಗೆ ನಡೆದು ಚೆನ್ನಯ್ಯನ ಪಾದಗಳಲ್ಲಿ ದಿಂಡುಕಡೆದು ನಮಸ್ಕರಿಸಿ ಚೆನ್ನಯ್ಯನ ಶಿವಭಕ್ತಿಯ ಮಹಿಮೆಯನ್ನು ಕೊಂಡಾಡುವನು.ಇದಲ್ಲವೆ ಶಿವಲೀಲೆ ! ಇದಲ್ಲವೆ ಶಿವನ ಭಕ್ತೋದ್ಧಾರ ಲೀಲಾವಿಶೇಷ ! ಬಸವಣ್ಣನವರು ಶಿವನು ಮಾದಾರ ಚೆನ್ನಯ್ಯನ ಮನೆಯ ಅಂಬಲಿಯನ್ನು ಉಂಡನಾದ್ದರಿಂದ ಶಿವಭಕ್ತರು ಶಿವಶರಣರ ಕುಲ ಗೋತ್ರಗಳನ್ನು ಎಣಿಸಬಾರದು ಎನ್ನುತ್ತಾರೆ.ಅರಸನ ಅಹಂಕಾರ ನಿರಸನಗೊಳಿಸಿ ಅವನನ್ನು ತಿದ್ದಿದ ಶಿವನು ಮಾದಾರಚೆನ್ನಯ್ಯನ ಮುಂದೆ ಅರಸ ಕರಿಕಾಲಚೋಳನು ಶರಣಾಗುವಂತೆ ಮಾಡುವ ಮೂಲಕ ತನ್ನ ಭಕ್ತರು ಜಾತಿ,ಹಣ ಅಧಿಕಾರದ ಪ್ರತಿಷ್ಠೆ ಮೆರೆಯಬಾರದು ಎನ್ನುವ ಸಂದೇಶ ಸಾರಿದ್ದಾನೆ,ಶಿವನಿಯತಿಯನ್ನು ವಿಧಿಸಿದ್ದಾನೆ.ಬಸವಣ್ಣನವರು ಇಲ್ಲಿ ಒಂದು ಮಹತ್ವದ ಸಾಮಾಜಿಕ ಸಂದೇಶವನ್ನು ಸಾರಿದ್ದಾರೆ.ವಚನದ ಮೊದಲ ಸಾಲುಗಳಲ್ಲಿ ಅವರು ಪ್ರಸ್ತಾಪಿಸಿದ ವೇದ,ಶಾಸ್ತ್ರ,ತರ್ಕಗಳು ಜಾತಿಭೇದವನ್ನು ಕಲ್ಪಿಸುತ್ತವೆ,ಬ್ರಾಹ್ಮಣರ ಶ್ರೇಷ್ಠತೆಯನ್ನು ಸಾರಿ ಶೂದ್ರರು,ದಲಿತರನ್ನು ನಿಕೃಷ್ಟವಾಗಿ ಕಾಣುತ್ತವೆಯಾದ್ದರಿಂದ ಅವು ಸರ್ವಗತನಾದ,ಸರ್ವಾತ್ಮರಂತರ್ಜ್ಯೋತಿಯಾದ ಶಿವನನ್ನು ಗುರುತಿಸವು,ಕಾಣವು.ಆದರೆ ಓಂ ನಮಃ ಶಿವಾಯ ಎನ್ನುವ ಮಂತ್ರ ಜಪದಿಂದ ಜಾತಿಯಿಂದ ಹೀನನಾಗಿದ್ದರೂ ಮಾದಾರ ಚೆನ್ನಯ್ಯನು ಶಿವಜ್ಯೋತಿಯಾಗಿ ಜಗತ್ಪೂಜ್ಯನಾದನು,ಜಗದ್ವಂದ್ಯನಾದನು ಎನ್ನುವ ಬಸವಣ್ಣನವರು ಶಿವಜ್ಯೋತಿಗಳಾದ,ಶಿವಸ್ವರೂಪರಾದ ಶಿವಶರಣರ ಕುಲಗೋತ್ರವನ್ನರಸದೆ ಅವರಲ್ಲಿ ಶಿವನನ್ನೇ ಕಾಣಬೇಕು,ಶಿವನಂತೆಯೇ ಶಿವಶರಣರನ್ನು ಪೂಜಿಸಿ,ಗೌರವಿಸಬೇಕು ಎನ್ನುವ ಶಿವಾಚಾರವನ್ನು ಪ್ರತಿಪಾದಿಸಿದ್ದಾರೆ ಈ ವಚನದಲ್ಲಿ.

೧೩.೦೨.೨೦೨೪.

About The Author