ಬಜೆಟ್ ಅಧಿವೇಶನದಲ್ಲಿ ಭಾಷಣ ,ಇಬ್ಬರು ರಾಜ್ಯಪಾಲರ ವಿಭಿನ್ನ ನಿಲುವು !

ಮೂರನೇ ಕಣ್ಣು : ಬಜೆಟ್ ಅಧಿವೇಶನದಲ್ಲಿ ಭಾಷಣ ,ಇಬ್ಬರು ರಾಜ್ಯಪಾಲರ ವಿಭಿನ್ನ ನಿಲುವು ! –ಮುಕ್ಕಣ್ಣ ಕರಿಗಾರ

ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಬಜೆಟ್ ಅಧಿವೇಶನಗಳಲ್ಲಿ ಸಾಂವಿಧಾನಿಕ ವಿಧಿನಿಯಮಗಳಂತೆ ರಾಜ್ಯಸರಕಾರದ ಭಾಷಣವನ್ನು ಓದಿದ ಇಬ್ಬರು ರಾಜ್ಯಪಾಲರು ತಮ್ಮ ವಿಭಿನ್ನ ನಿಲುವಿನಿಂದ ಸುದ್ದಿಯಾಗಿದ್ದಾರೆ.ಕರ್ನಾಟಕದ ರಾಜ್ಯಪಲರಾದ ಥಾವರಚಂದ್ ಗೆಹಲೋತ್ ಅವರು ಕರ್ನಾಟಕ ಸರಕಾರವು ಸಿದ್ಧಪಡಿಸಿದ್ದ ಲಿಖಿತ ಭಾಷಣವನ್ನು ಯಥಾವತ್ತಾಗಿ ಓದಿ ತಮ್ಮ ಹುದ್ದೆಯ ಘನತೆ ಗೌರವಗಳನ್ನು ಎತ್ತಿಹಿಡಿದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಸತ್ತ್ವವನ್ನು ತುಂಬಿದ್ದಾರೆ.ರಾಜ್ಯಸರಕಾರವು ಸಿದ್ಧಪಡಿಸಿದ್ದ ರಾಜ್ಯಪಾಲರ ಭಾಷಣದಲ್ಲಿದ್ದ ‘ಎಲ್ಲ ಜನಪರ ಯೋಜನೆಗಳನ್ನು ಜಾರಿ ಮಾಡಲು ಸರ್ಕಾರ ಸಿದ್ಧವಿದೆ.ಆದರೆ,ವಿವಿಧ ಮೂಲಗಳಿಂದ ಸಿಗಬೇಕಾದಷ್ಟು ಸಂಪನ್ಮೂಲಗಳು ಸಿಗುತ್ತಿಲ್ಲ.ದೇಶದಲ್ಲಿಯೇ ಅತಿಹೆಚ್ಚು ತೆರಿಗೆ ಸಂಗ್ರಹಿಸಿಕೊಡುವ ರಾಜ್ಯಗಳಲ್ಲಿ ಕರ್ನಾಟಕವು ಎರಡನೇ ಸ್ಥಾನದಲ್ಲಿದೆ.ಆದರೆ,ತೆರಿಗೆ ಪಾಲು ಪಡೆಯುವ ವಿಚಾರದಲ್ಲಿ ಹತ್ತನೇ ಸ್ಥಾನದಲ್ಲಿದೆ’ ಎನ್ನುವ ಸಾಲುಗಳನ್ನು ಯಥಾವತ್ತಾಗಿ ಓದಿದ್ದಾರೆ.ಕೇಂದ್ರ ಸರಕಾರವು ಕರ್ನಾಟಕ ಸರಕಾರಕ್ಕೆ ನ್ಯಾಯಯುತವಾಗಿ ನೀಡಬೇಕಿರುವ ಪಾಲನ್ನು ನೀಡುತ್ತಿಲ್ಲ ಎನ್ನುವ ರಾಜ್ಯ ಕಾಂಗ್ರೆಸ್ ಸರಕಾರದ ಧೋರಣೆಯೇ ರಾಜ್ಯಪಾಲರ ಭಾಷಣದ ಈ ಮಾತುಗಳಲ್ಲಿ ಪ್ರತಿಬಿಂಬಿತವಾಗಿದೆ.ಆದರೂ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಈ ಸಾಲುಗಳನ್ನು ಓದುವ ಮೂಲಕ ತಮ್ಮ ಗಟ್ಟಿತನವನ್ನು ಪ್ರದರ್ಶಿಸಿ,ತಾವು ಒಬ್ಬ ವಿಭಿನ್ನ ವ್ಯಕ್ತಿತ್ವದ ರಾಜ್ಯಪಾಲರು ಎಂದು ಸಾಬೀತುಮಾಡಿದ್ದಾರೆ.

ಆದರೆ ತಮಿಳುನಾಡು ರಾಜ್ಯಪಾಲರಾದ ಆರ್ ಎನ್ ರವಿಯವರು ತಮ್ಮ ಎಂದಿನ ಹವ್ಯಾಸವನ್ನೇ ಮುಂದುವರೆಸಿ ತಮಿಳುನಾಡು ಸರಕಾರವು ಸಿದ್ಧಪಡಿಸಿದ್ದ ಭಾಷಣದಲ್ಲಿ ಕೇಂದ್ರಸರಕಾರದ ವಿರುದ್ಧ ಟೀಕಾಸ್ತ್ರಗಳ ಪರಿಚ್ಛೇದಗಳನ್ನು ಓದದೆ ಕೈಬಿಟ್ಟಿದ್ದಾರೆ.ತಮಿಳುನಾಡು ರಾಜ್ಯಪಾಲರು ತಮಿಳುನಾಡು ಸರಕಾರವು ಸಿದ್ಧಪಡಿಸಿದ್ದ 46 ಪುಟಗಳ ಭಾಷಣದ ಪ್ರತಿಯಲ್ಲಿನ ಮೊದಲಪುಟವನ್ನು ಮಾತ್ರ ಓದಿದ್ದಾರೆ.ಅವರು ಓದಲು ನಿರಾಕರಿಸಿದ ಭಾಷಣದ ಭಾಗದಲ್ಲಿ ಜಿಎಸ್ಟಿ ಹಂಚಿಕೆಯಲ್ಲಿ ಕೇಂದ್ರಸರಕಾರವು ತಮಿಳುನಾಡಿಗೆ ಅನ್ಯಾಯಮಾಡುತ್ತಿದೆ ಎನ್ನುವ ಆಕ್ರೋಶಭರಿತ ವಾಕ್ಯಗಳಿದ್ದವು.’ಜಿಎಸ್ಟಿ ಪರಿಹಾರ ವ್ಯವಸ್ಥೆಯನ್ನು ಕೊನೆಗೊಳಿಸುವ ಮೂಲಕ ಕೇಂದ್ರವು ರಾಜ್ಯಕ್ಕೆ ವಾರ್ಷಿಕ ₹20 ಸಾವಿರಕೋಟಿ ನಷ್ಟ ಉಂಟು ಮಾಡಿದೆ” ಎಂಬ ವಾಕ್ಯ ಮತ್ತು ” ಪೌರತ್ವ ತಿದ್ದುಪಡಿ ಕಾಯ್ದೆಯನ್ನು ತಮಿಳುನಾಡಿನಲ್ಲಿ ಜಾರಿಗೆ ತರುವುದಿಲ್ಲ” ಎನ್ನುವ ವಾಕ್ಯಗಳು ತಮಿಳುನಾಡು ಸರಕಾರವು ಸಿದ್ಧಪಡಿಸಿದ್ದ ಭಾಷಣದಲ್ಲಿದ್ದವು.ಆರ್.ಎನ್.ರವಿಯವರು ಆ ಭಾಗಗಳನ್ನು ಓದಿಲ್ಲವಲ್ಲದೆ ರಾಜ್ಯಸರಕಾರದ ವಿರುದ್ಧ ಎಂದಿನಂತೆ ಮತ್ತೆ ಹರಿಹಾಯ್ದಿದ್ದಾರೆ.’ ಆ ಭಾಷಣದಲ್ಲಿ ತಪ್ಪುದಾರಿಗೆ ಎಳೆಯುವ ಅಂಶಗಳಿವೆ’ ಎಂದು ತಮ್ಮ ಸ್ಪಷ್ಟನೆ ನೀಡಿರುವ ತಮಿಳುನಾಡು ರಾಜ್ಯಪಾಲ ಆರ್ ಎನ್ ರವಿ ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆಗೆ ತಕ್ಕುದಲ್ಲದ ರೀತಿಯಲ್ಲಿ ನಡೆದುಕೊಂಡಿದ್ದಾರೆ.ಭಾರತದ ಸರ್ವೋಚ್ಛ ನ್ಯಾಯಲಯ ಅವರ ಬಗ್ಗೆ ತೀವ್ರಕಟೂಕ್ತಿಗಳ ಛಾಟಿ ಬೀಸಿದ್ದರೂ ಆರ್ ಎನ್ ರವಿಯವರು ತಮಿಳುನಾಡು ರಾಜ್ಯಸರಕಾರದೊಂದಿಗಿನ ತಮ್ಮ ಅನಪೇಕ್ಷಿಯ ಸಂಘರ್ಷವನ್ನು ಮುಂದುವರೆಸಿದ್ದಾರೆ.ಕೇಂದ್ರದ ಬಿಜೆಪಿ ಸರಕಾರದಿಂದ ಭವಿಷ್ಯತ್ತಿನ ಉನ್ನತ ಸ್ಥಾನಮಾನದ ನಿರೀಕ್ಷೆಯಲ್ಲಿರುವ ಎನ್ ಆರ್ ರವಿಯವರು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ.

ರಾಜ್ಯಗಳ ಅಧಿವೇಶನದ ಪ್ರಾರಂಭದ ದಿನದಂದು ಆಯಾ ರಾಜ್ಯಪಾಲರು ರಾಜ್ಯಸರಕಾರಗಳು ಸಿದ್ಧಪಡಿಸಿರುವ ಲಿಖಿತಭಾಷಣವನ್ನು ಓದಬೇಕಾದದ್ದು ಅವರ ಸಂವಿಧಾನದ ಬದ್ಧ ಕರ್ತವ್ಯ.ಭಾರತದ ಸಂವಿಧಾನದ 174 ನೆಯ ಅನುಚ್ಛೇದದಂತೆ ರಾಜ್ಯಪಾಲರು ರಾಜ್ಯದ ವಿಧಾನಮಂಡಲದ ಅಧಿವೇಶವನ್ನು ಕರೆಯುವ ಹಕ್ಕುಳ್ಳವರಾಗಿದ್ದಾರೆ.ಸಂವಿಧಾನದ ಅನುಚ್ಛೇದ 175 ರಂತೆ ಸದನವನ್ನು ಉದ್ದೇಶಿಸಿ ಮಾತನಾಡುವ ಹಕ್ಕು ಹೊಂದಿದ್ದಾರೆ.ಸಂವಿಧಾನದ ಅನುಚ್ಛೇದ 176 ರಂತೆ ರಾಜ್ಯದಲ್ಲಿ ಸಾರ್ವತ್ರಿಕ ಚುನಾವಣೆಯ ನಂತರ ರಾಜ್ಯಪಾಲರ ಭಾಷಣದಿಂದಲೇ ಸರಕಾರದ ಕಾರ್ಯಚಟುವಟಿಕೆಗಳು ಪ್ರಾರಂಭವಾಗುತ್ತವೆ.ಆದರೆ ಸಂವಿಧಾನದ ಈ ಮೂರು ಅನುಚ್ಛೇದಗಳಲ್ಲಿ ಅನುಚ್ಛೇದ 175 ರಲ್ಲಿ ಸದನವನ್ನು ಅಥವಾ ಸದನಗಳನ್ನು ಉದ್ದೇಶಿಸಿ ” ಭಾಷಣ ಮಾಡಬಹುದು” ಎಂದಿರುವ ಪದಗಳನ್ನು ಗಮನಿಸಿಯೇ ತಮಿಳುನಾಡು ರಾಜ್ಯಪಾಲರು ಆ ರಾಜ್ಯಸರಕಾರವು ಸಿದ್ಧಪಡಿಸಿದ ಭಾಷಣದಲ್ಲಿ ತಮ್ಮ ವಿವೇಚನಾಧಿಕಾರ ಬಳಸುತ್ತಿದ್ದಾರೆ.ಇಂಗ್ಲಿಷನ Shall ಮತ್ತು May ಪದಗಳು ಹೊರಹೊಮ್ಮಿಸುವ ಅರ್ಥವು ನಮ್ಮ ಒಕ್ಕೂಟವ್ಯವಸ್ಥೆಯ ಹಣೆಬರಹವನ್ನು ನಿರ್ಧರಿಸುತ್ತಿದೆ ಎನ್ನುವುದಕ್ಕೆ ಕೇಂದ್ರಸರಕಾರದ ಪರವಾಗಿ ವರ್ತಿಸುತ್ತಿರುವ ತಮಿಳುನಾಡು ರಾಜ್ಯಪಾಲ ಆರ್ ಎನ್ ರವಿ ಅವರ ವರ್ತನೆಯೇ ನಿದರ್ಶನ.ಸಂವಿಧಾನದಲ್ಲಿ ಎಲ್ಲೆಲ್ಲಿ Shall ಅಥವಾ ಮಾಡತಕ್ಕದ್ದು ಎನ್ನುವ ಪದಗಳಿರುತ್ತವೆಯೋ ಅದನ್ನು ಎಲ್ಲರೂ ಪಾಲಿಸುತ್ತಾರೆ; ಆದರೆ ಎಲ್ಲೆಲ್ಲಿ may ಅಥವಾ ಮಾಡಬಹುದು ಎನ್ನುವ ಪದಗಳಿವೆಯೋ ಅಲ್ಲಲ್ಲಿ ರಾಜ್ಯಸರಕಾರಗಳು ಮತ್ತು ರಾಜ್ಯಪಾಲರುಗಳು ತಮ್ಮ ಮನಸ್ಸಿಗೆ ಬಂದಂತೆ ನಡೆದುಕೊಳ್ಳುವ ರಾಜಕೀಯಪ್ರಹಸನ ನಡೆಯುತ್ತಿದೆ.

ರಾಜ್ಯಪಾಲರಾದವರು ಆಯಾ ರಾಜ್ಯಸರಕಾರವು ಸಿದ್ಧಪಡಿಸಿದ ಭಾಷಣವನ್ನು ಸದನ ಅಥವಾ ಉಭಯಸದನಗಳಲ್ಲಿ ಅಥವಾ ಜಂಟಿ ಅಧಿವೇಶನದಲ್ಲಿ ಓದುವುದು ತಮ್ಮ ಸಾಂವಿಧಾನಿಕ ಹೊಣೆಗಾರಿಕೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು.ರಾಜ್ಯಸರಕಾರವು ಸಿದ್ಧಪಡಿಸಿದ ಲಿಖಿತ ಭಾಷಣವು ಆ ರಾಜ್ಯಸರಕಾರದ ಅಭಿಪ್ರಾಯವೇ ಹೊರತು ರಾಜ್ಯಪಾಲರ ಅಭಿಪ್ರಾಯವಲ್ಲ.ರಾಜ್ಯಸರಕಾರದ ಸಂವಿಧಾನಬದ್ಧ ಮುಖ್ಯಸ್ಥರಾಗಿ ರಾಜ್ಯಪಾಲರು ರಾಜ್ಯಸರಕಾರದ ಭಾಷಣವನ್ನು ಓದಬೇಕು.ಬೇಕಿದ್ದರೆ ತಮಗೆ ಸರಿಕಾಣಿಸದ ಪದಗಳು,ವಾಕ್ಯಗಳು,ಪರಿಚ್ಛೇದಗಳನ್ನು ಮಾರ್ಪಡಿಸಲು ರಾಜ್ಯಸರಕಾರಕ್ಕೆ ಸೂಚಿಸಬಹುದು.ಅದರ ಹೊರತು ರಾಜ್ಯಪಾಲರಿಗೆ ಪರ್ಯಾಯ ಮಾರ್ಗವಿಲ್ಲ.ರಾಜ್ಯಸರಕಾರವು ಸಿದ್ಧಪಡಿಸಿದ ಭಾಷಣವನ್ನು ಓದದೆ ಇರುವುದು,ರಾಜ್ಯಸರಕಾರದ ಭಾಷಣದ ಕೆಲವು ಭಾಗಗಳನ್ನು ಕೈಬಿಟ್ಟು ಓದುವುದು ಇಲ್ಲವೆ ತಮ್ಮದೆ ಸಾಲುಗಳನ್ನು ಸೇರಿಸುವುದು ಇವೇ ಮೊದಲಾದ ಕಾರ್ಯಗಳನ್ನೆಸಗುವ ರಾಜ್ಯಪಾಲ ನಡೆಯು ಸಂವಿಧಾನ ವಿರೋಧಿಯಾದ ನಡೆಯು.

ಕರ್ನಾಟಕದ ರಾಜ್ಯಪಾಲರಾದ ಥಾವರಚಂದ್ ಗೆಹ್ಲೋತ್ ಅವರು ಕರ್ನಾಟಕ ಸರಕಾರದ 2024 ನೇ ಸಾಲಿನ ಬಜೆಟ್ ಭಾಷಣವನ್ನು‌ ಓದುತ್ತ ಕರ್ನಾಟಕ ಸರಕಾರದ ಗ್ಯಾರಂಟಿ ಯೋಜನೆಗಳು ಇತರ ರಾಜ್ಯಗಳಿಗೆ ಮಾದರಿಯಾದ ರಾಷ್ಟ್ರದ ಗಮನವನ್ನು ಕರ್ನಾಟಕದತ್ತ ಸೆಳೆದ ಬಡವರ ಪರ ಯೋಜನೆಗಳು ಎಂದು ಶ್ಲಾಘಿಸಿದ ಮತ್ತು ಕರ್ನಾಟಕಕ್ಕೆ ಜಿಎಸ್ಟಿ ಹಂಚಿಕೆಯಲ್ಲಿ ಅನ್ಯಾಯವಾಗುತ್ತಿದೆ ಎನ್ನುವ ವಾಕ್ಯಗಳನ್ನು ಓದಿದ ಕಾರಣದಿಂದ ಕೇಂದ್ರ ಬಿಜೆಪಿ ಸರಕಾರದ ವರಿಷ್ಠರ ಕೆಂಗೆಣ್ಣಿಗೆ ಗುರಿಯಾಗಬಹುದು.ಲೋಕಸಭಾ ಚುನಾವಣೆಯ ಹೊತ್ತಿನಲ್ಲಿ ಸಂವಿಧಾನ ಬದ್ಧ,ನಿರ್ಲಿಪ್ತ ನಿಲುವಿನ ಇಂತಹ ರಾಜ್ಯಪಾಲರು ಇದ್ದರೆ ಕಷ್ಟ ಎಂದು ಕೇಂದ್ರ ಸರಕಾರವು ಅವರನ್ನು ಹಿಂದಕ್ಕೆ ಕರೆಯಿಸಿಕೊಳ್ಳಬಹುದು ಅಥವಾ ಲೋಕಸಭಾಚುನಾವಣೆಯ ನಂತರ ಥಾವರಚಂದ್ ಗೆಹ್ಲೋತ್ ಅವರಿಗೆ ಯಾವುದೇ ಸ್ಥಾನಮಾನ ನೀಡದೆ ಅವರನ್ನು ನಿರ್ಲಕ್ಷಿಸಬಹುದು ( 2024 ರ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಮತ್ತೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರಕಾರವೇ ಅಸ್ತಿತ್ವಕ್ಕೆ ಬರಲಿರುವುದರಿಂದ ಈ ಮಾತು). ಆದರೆ ಥಾವರಚಂದ್ ಗೆಹ್ಲೋತ್ ಅವರು ಪ್ರಜಾಪ್ರಭುತ್ವ ಭಾರತದಲ್ಲಿ ತಮ್ಮನ್ನು ನೇಮಿಸಿದ ಕೇಂದ್ರಸರಕಾರದ ಕೈಗೊಂಬೆಯಾಗಿ ವರ್ತಿಸದೆ,ಜನಬೆಂಬಲವನ್ನು ಪಡೆದ ಕರ್ನಾಟಕದ ಕಾಂಗ್ರೆಸ್ ಸರಕಾರದೊಂದಿಗೆ ಅನಗತ್ಯವಾಗಿ ಸಂಘರ್ಷಕ್ಕೆ ಇಳಿಯದೆ,ಸಂವಿಧಾನದ ಇತಿಮಿತಿಯಲ್ಲಿ ರಾಜ್ಯಸರಕಾರವನ್ನು ನಿರ್ದೇಶಿಸಿ ಮುನ್ನಡೆಸಿದ,ರಾಜ್ಯಸರಕಾರದ ಉತ್ತಮಜನಪರ ಯೋಜನೆಗಳನ್ನು ಬೆಂಬಲಿಸಿದ ಪ್ರಜಾಪ್ರಭುತ್ವವಾದಿ,ಸಂವಿಧಾನ ಬದ್ಧ ರಾಜ್ಯಪಾಲರು ಎಂದು ಕೀರ್ತಿಶಾಲಿಗಳಾಗುತ್ತಾರೆ,ಅನನ್ಯ ವ್ಯಕ್ತಿತ್ವದ ರಾಜ್ಯಪಾಲರಾಗಿ ರಾಜ್ಯಶಾಸ್ತ್ರ,ರಾಜನೀತಿ ಕುರಿತಾದ ಪಠ್ಯಪುಸ್ತಕ,ಅನ್ವಯಿಕ ಪುಸ್ತಕಗಳಲ್ಲಿ ಸೇರ್ಪಡೆಯಾಗುತ್ತಾರೆ.

೧೩.೦೨.೨೦೨೪

About The Author