ದೇವದುರ್ಗದ ಶಾಸಕಿ ಕರಿಯಮ್ಮ ನಾಯಕ ಅವರ ಪುತ್ರ ಪೋಲಿಸರ ಮೇಲೆ ಹಲ್ಲೆ ಮಾಡಿದ್ದು ಸರಿಯಲ್ಲ.

ಮೂರನೇ ಕಣ್ಣು : ದೇವದುರ್ಗದ ಶಾಸಕಿ ಕರಿಯಮ್ಮ ನಾಯಕ ಅವರ ಪುತ್ರ ಪೋಲಿಸರ ಮೇಲೆ ಹಲ್ಲೆ ಮಾಡಿದ್ದು ಸರಿಯಲ್ಲ : ಮುಕ್ಕಣ್ಣ ಕರಿಗಾರ

ದೇವದುರ್ಗದ ಶಾಸಕಿ ಶ್ರೀಮತಿ ಕರಿಯಮ್ಮ ನಾಯಕ್ ಅವರ ಪುತ್ರ ದೇವದುರ್ಗ ಪಟ್ಟಣದ ಪೋಲಿಸ್ ಠಾಣೆಯ ಕರ್ತವ್ಯ ನಿರತ ಪೋಲಿಸ್ ಹೆಡ್ ಕಾನ್ ಸ್ಟೇಬಲ್ ಒಬ್ಬರ ಮೇಲೆ ಹಲ್ಲೆ ಮಾಡಿದ ಸಂಗತಿ ವರದಿಯಾಗಿದೆ ( ಪ್ರಜಾವಾಣಿ ,ಫೆಬ್ರುವರಿ 12 ರ ಪುಟ 3 ರ ರಾಯಚೂರು ಸುದ್ದಿವಿಭಾಗದಲ್ಲಿ).ಶಾಸಕಿ ಕರಿಯಮ್ಮ ನಾಯಕ ಅವರ ಪುತ್ರ ಸಂತೋಷ,ಸಹೋದರ ತಿಮ್ಮರೆಡ್ಡಿ ಹಾಗೂ ಪಿಎ ಇಲಿಯಾಸ್ ಸೇರಿ ಹದಿನೈದಕ್ಕು ಹೆಚ್ಚುಜನ ಜೆಡಿಎಸ್ ಕಾರ್ಯಕರ್ತರು ದೇವದುರ್ಗದ ಪ್ರವಾಸಿಮಂದಿರದಲ್ಲಿ ತಮ್ಮ ಮೇಲೆ ಹಲ್ಲೆ ನಡೆಸಿರುವುದಾಗಿ ಹಲ್ಲೆಗೊಳಗಾದ ಪೋಲೀಸ್ ಮುಖ್ಯಪೇದೆ ಹನುಮಂತರಾಯ ಆರೋಪಿಸಿದ್ದನ್ನು ಪ್ರಜಾವಾಣಿಯ ವರದಿ ಪ್ರಸ್ತಾಪಿಸಿದೆ.ಇದು ನಿಜಕ್ಕೂ ಬೇಸರದ,ಸಾರ್ವಜನಿಜಕರು ಗಂಭೀರವಾಗಿ ಆಲೋಚಿಸಬೇಕಾದ ಸಂಗತಿ.ಅಕ್ರಮಮರುಳು ಸಾಗಣಿಕೆ ನಿಲ್ಲಿಸುವೆ ಎಂದು ಸಾರ್ವಜನಿಕ ವೇದಿಕೆಗಳಲ್ಲಿ ಅಬ್ಬರದ ಭಾಷಣ ಮಾಡುತ್ತಿದ್ದ ಹಾಗೂ ಇದೇ ವಿಷಯವನ್ನು ಅಧಿವೇಶನದ ಸಂದರ್ಭದಲ್ಲಿ ಪ್ರಸ್ತಾಪಿಸಿ ತಮಗೆ ರಕ್ಷಣೆ ಬೇಕೆಂದು ಕೋರಿದ್ದ ಶಾಸಕಿ ಕರಿಯಮ್ಮನಾಯಕ ಅವರ ಪುತ್ರ ಮತ್ತು ಬಂಟರುಗಳೆ ಕರ್ತವ್ಯನಿರತ ಪೋಲಿಸ್ ಹೆಡ್ ಕಾನ್ಸ್ ಟೇಬಲ್ ಹನುಮಂತರಾಯ ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನುವ ಪ್ರಕರಣವು ಶಾಸಕಿ ಕರಿಯಮ್ಮ ನಾಯಕ್ ಅವರ ‘ವಚನಬದ್ಧತೆ’ ಮತ್ತು ತಾಲೂಕಿನ ಅಭಿವೃದ್ಧಿಯ ಪ್ರಾಮಾಣಿಕ ಬದ್ಧತೆಯನ್ನು ಪ್ರಶ್ನಿಸುವಂತಿದೆ.ಹಿಂದಿನ ರಾಜಕಾರಣಿಗಳು ಅಕ್ರಮಮರಳು ಸಾಗಣೆ ಮಾಡುತ್ತಿದ್ದರು ಎಂದು ಆರೋಪಿಸುತ್ತದ್ದ ಕರಿಯಮ್ಮ ನಾಯಕ್ ಅವರ ಅನುಯಾಯಿಗಳಾಗಿರುವ ಜೆಡಿಎಸ್ ಕಾರ್ಯಕರ್ತರ ಅಕ್ರಮಮರಳು ಸಾಗಣೆ ವ್ಯವಹಾರವನ್ನು ಪೋಲೀಸರು ಪ್ರಶ್ನಿಸಿದ್ದರಿಂದ ರೊಚ್ಚಿಗೆದ್ದ ಜೆಡಿಎಸ್ ಕಾರ್ಯಕರ್ತರು ಈ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದ್ದನ್ನು ಗಮನಿಸಿದರೆ ಅಕ್ರಮಮರಳು ಸಾಗಾಣಿಕೆಯು ಎಲ್ಲ ರಾಜಕೀಯ ಪಕ್ಷಗಳ ನಾಯಕರುಗಳು,ಕಾರ್ಯಕರ್ತರುಗಳಿಗೆ ದುಡ್ಡುಮಾಡಿಕೊಳ್ಳುವ ಸುಲಭೋಪಾಯ ಎನ್ನುವ ಬಹಿರಂಗಸತ್ಯದತ್ತ ಗಮನಸೆಳೆಯುತ್ತದೆ.ಇಲ್ಲಿ ಪೋಲೀಸರ ವೈಫಲ್ಯವೂ ಇದೆ ಎಂಬುದೇನೂ ಸುಳ್ಳಲ್ಲ.ಹೆಡ್ ಕಾನ್ಸ್ ಟೇಬಲ್ ಹನುಮಂತರಾಯಪ್ಪನವರನ್ನು ಪ್ರವಾಸಿಮಂದಿರಕ್ಕೆ ಕರೆಯಿಸಿಕೊಳ್ಳುವ ಅಧಿಕಾರ ಕರಿಯಮ್ಮ ನಾಯಕ ಅವರ ಪುತ್ರ ಸಂತೋಷ ಅವರಿಗೆ ಯಾರು ಕೊಟ್ಟಿದ್ದಾರೆ ? ತಾವು ಶಾಸಕಿಯಾಗಿ ಆಯ್ಕೆಯಾದಾಗ ಗಬ್ಬೂರು ಮತ್ತು ದೇವದುರ್ಗ ಪೋಲೀಸ್ ಠಾಣೆಗಳ ಪಿಎಸ್ ಐ ಗಳು ತಮ್ಮನ್ನು ಶಿಷ್ಟಾಚಾರಕ್ಕಾಗಿಯಾದರೂ ಭೇಟಿ ಮಾಡಲಿಲ್ಲ ಎಂದು ದೊಡ್ಡಧ್ವನಿಯಲ್ಲಿ ಆಕ್ಷೇಪಿಸಿದ ಕರಿಯಮ್ಮ ನಾಯಕ್ ಅವರಿಗೆ ತಮ್ಮಪುತ್ರ ಪೋಲೀಸರನ್ನು ಐಬಿಗೆ ಕರೆಸುವುದು ತಪ್ಪು ಅಂತ ಅನ್ನಿಸುವುದಿಲ್ಲವೆ ? ಇಲಿಯಾಸ ಎನ್ನುವ ಈ ಪಿ ಎ ಯಾರು ? ಕರಿಯಮ್ಮನಾಯಕ ಅವರಿಗೆ ಸರಕಾರಿ ಪಿ ಎ ಇಲ್ಲವೆ ? ಖಾಸಗಿ ವ್ಯಕ್ತಿಯೊಬ್ಬನಿಂದ ಕರ್ತವ್ಯನಿರತ ಪೋಲಿಸ್ ಹೆಡ್ ಕಾನ್ ಸ್ಟೇಬಲ್ ಮೇಲೆ ಹಲ್ಲೆ ಮಾಡಿಸಿದ ಈ ಕ್ರಮವು ತಾಲೂಕಿನಲ್ಲಿ ಸರಕಾರಿ ನೌಕರರು ಭಯಮುಕ್ತರಾಗಿ ಕೆಲಸ ಮಾಡದಂತಹ ವಾತಾವರಣವನ್ನು ಸೃಷ್ಟಿಸುತ್ತಿದೆ ಎನ್ನುವುದನ್ನು ಕರಿಯಮ್ಮ ನಾಯಕ್ ಅವರು ಅರ್ಥಮಾಡಿಕೊಳ್ಳಬೇಕು.ಈ ಇಲಿಯಾಸ್ ಎನ್ನುವ ಮಹಾನುಭಾವ ಕರಿಯಮ್ಮ ನಾಯಕ್ ಅವರನ್ನು ಭೇಟಿ ಮಾಡಲು ಅವರ ಮನೆಗೆ ಹೋಗುವ ಮತದಾರರೊಂದಿಗೆ ಅಸಡ್ಡೆಯಿಂದ,ಅನುಚಿತವಾಗಿ ವರ್ತಿಸುತ್ತಿರುವ ದೂರುಗಳು ನನ್ನ ಕಿವಿಗೂ ಬಿದ್ದಿವೆ.ಶಾಸಕರಾದವರು ಸಾರ್ವಜನಿಕ ಕ್ಷೇತ್ರದ ಸರಕಾರಿ ಅಧಿಕಾರಿಗಳೊಂದಿಗೆ ವ್ಯವಹರಿಸಲು ಸರಕಾರಿ ಪಿಎಗಳನ್ನು ಇಟ್ಟುಕೊಳ್ಳಬೇಕೇ ಹೊರತು ಖಾಸಗಿ,ಅನಧಿಕೃತ ವ್ಯಕ್ತಿಗಳ ಕೈಯಲ್ಲಿ ಅಧಿಕಾರ ಕೊಡಬಾರದು.ಕರಿಯಮ್ಮ ನಾಯಕ ಅವರು ಒಂದು ಸಂಗತಿಯನ್ನು ಮರೆಯಬಾರದು.ದೇವದುರ್ಗದ ಮತದಾರರು ಕಾರ್ಯಕರ್ತರು ಮತ್ತು ಮತದಾರರೊಂದಿಗೆ ಅಸಡ್ಡೆ ಮತ್ತು ಅಹಂಕಾರದಿಂದ ವರ್ತಿಸಿದರು ಎನ್ನುವ ಕಾರಣದಿಂದಲೇ ಮಾಜಿ ಸಚಿವ ಕೆ.ಶಿವನಗೌಡ ನಾಯಕ್ ಅವರನ್ನು ಸೋಲಿಸಿದ್ದಾರೆ.ಪ್ರಭುಲಿಂಗ ಪಾಟೀಲ್ ಎನ್ನುವ ಮಹಾನುಭಾವ ಪಿಎಯ ಕಾರಣದಿಂದಲೇ ಶಿವನಗೌಡ ನಾಯಕ ಅವರು ಕಾರ್ಯಕರ್ತರು,ಮತದಾರರಿಂದ ದೂರವಾದರು.ಶಾಸಕರಾಗಿ ಒಂದು ವರ್ಷವೂ ಮುಗಿಯದ ಅವಧಿಯಲ್ಲಿ ಕರಿಯಮ್ಮ ನಾಯಕ್ ಅವರು ಖಾಸಗಿ ಪಿಎಗಳಿಂದ ಮತದಾರರ ಬೇಸರಕ್ಕೆ ಕಾರಣರಾಗಿದ್ದಾರೆ.ಕರಿಯಮ್ಮ ನಾಯಕ್ ಅವರು ಶಾಸಕರಾಗಿದ್ದರಿಂದ ಬ್ಯುಸಿ ಆಗಿದ್ದೇನೆ ಎಂದು ಭಾವಿಸಬಹುದು,ತಮ್ಮನ್ನು ತಾವು ಸಮರ್ಥಿಸಿಕೊಳ್ಳಬಹುದು.ಆದರೆ ಅವರು ಬಿಡುವಾಗಿ ಕುಳಿತಾಗ ಒಂದು ಸಂಗತಿಯನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು– ಕರಿಯಮ್ಮ ನಾಯಕ್ ಅವರು ಎರಡು ಬಾರಿ ಸೋತರೂ ಜನಸಂಪರ್ಕ ಬಿಡದೆ ಸಾರ್ವಜನಿಕರ ಮದುವೆ ಕಾರ್ಯಗಳಿಗೆ ಹಾಜರಾಗಿದ್ದಾರೆ,ಸತ್ತವರ ಮನೆಗಳಿಗೆ ಹೋಗಿದ್ದಾರೆ,ಅಪಘಾತಕ್ಕೀಡಾಗಿ ಚಿಕಿತ್ಸೆಪಡೆಯುವವರನ್ನು ಕಂಡು ಮಾತನಾಡಿಸಿದ್ದಾರೆ ಎನ್ನುವ ಪ್ರೀತಿ,ಅನುಕಂಪದಿಂದ ಚುನಾವಣಾ ಪ್ರಚಾರದಲ್ಲಿ ಹಳ್ಳಿಗಳಿಗೆ ತೆರಳಿದ ಸಂದರ್ಭದಲ್ಲಿ ಗ್ರಾಮಸ್ಥರು ಅವರನ್ನು ಮನೆಮನೆಗೆ ಕರೆಯಿಸಿ ಸೀರೆಉಡಿಸಿ ತಮ್ಮ ಕೈಲಾದಷ್ಟು ಧನಸಹಾಯ ಮಾಡಿದ್ದಾರೆ.ಅಂತಹ ಜನರು ನಿಮ್ಮ ಬಳಿ ಸಮಸ್ಯೆ ಹೇಳಿಕೊಳ್ಳಲು ಬಂದಾಗ ಅವರೊಂದಿಗೆ ಮಾತನಾಡುವ ಸೌಜನ್ಯ ಇರಬೇಕಿತ್ತು ನಿಮ್ಮಲ್ಲಿ ಕರಿಯಮ್ಮ ನಾಯಕ್ ಅವರೆ.ಇಲಿಯಾಸ್ ಮತ್ತು ಇತರ ಪಿಎಗಳು ಜನರೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವ ಬಗ್ಗೆ ನಿಮ್ಮನ್ನು ಮನೆಗೆ ಕರೆಯಿಸಿ ಸೀರೆಉಡಿಸಿ ಒಂದು ಸಾವಿರ ರೂಪಾಯಿ ಯಶೋಕಾಣಿಕೆ ಕೊಟ್ಟು ನಿಮ್ಮನ್ನು ಹರಸಿದ ಅಮರಾಪುರದ ಒಬ್ಬ ಮಹಿಳೆ ನನ್ನೆದುರು ಕಣ್ಣೀರು ಕರೆಯುತ್ತ ಹೇಳಿದರು ಎಂದು ತಿಳಿಸಲು ನನಗೆ ಬೇಸರವಾಗುತ್ತಿದೆ.ಇಂತಹ ಮುಗ್ಧ ಹೆಣ್ಣು ಮಕ್ಕಳ ಕಣ್ಣೀರು ಖಂಡಿತವಾಗಿಯೂ ನಿಮಗೆ‌ ಒಳ್ಳೆಯದಲ್ಲ ಕರಿಯಮ್ಮ ನಾಯಕ್ ಅವರೆ.ನೀವು ಈಗ ಶಾಸಕರಾಗಿರಬಹುದು ಯಾರನ್ನು ಬೇಕಾದರೂ ಡೋಂಟ್ ಕೇರ್ ಎನ್ನಬಹುದು,ಆದರೆ ನೆನಪಿರಲಿ ನಿಮಗೆ ರಾಜಕೀಯ ಭವಿಷ್ಯ ಬೇಕು ಎಂದರೆ ದೇವದುರ್ಗದ ಮುಗ್ಧಮತದಾರರ ಮನಸ್ಸುಗಳಿಗೆ ನೋವನ್ನುಂಟು ಮಾಡಬಾರದು.’ಹೇಗೂ ಶಾಸಕಿಯಾಗಿದ್ದೇನೆ.ಮುಂದೆ ಏನಾಗುವುದೋ ಯಾರಿಗೆ ಗೊತ್ತು?’ ಎನ್ನುವ ಭಾವನೆ ನಿಮಗಿದ್ದರೆ ಮನಸ್ಸು ಬಂದಂತೆ ವರ್ತಿಸುವ ಸ್ವಾತಂತ್ರ್ಯವು ನಿಮಗಿದೆ. ನಾನು ಮಹಿಳಾಶಾಸಕಿಯರಾದ ನಿಮ್ಮ ಬಗ್ಗೆ ಬಹಳಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದೆ,ನಿಮ್ಮಿಂದ ದೇವದುರ್ಗ ತಾಲೂಕು ಬಹಳಷ್ಟು ಅಭಿವೃದ್ಧಿ ಹೊಂದಬಹುದು ಎಂದು ನಿರೀಕ್ಷಿಸಿದ್ದೆ.ಶಿವನಗೌಡ ನಾಯಕರು ಅವರ ಶಾಸಕತ್ವದ ಮೂರನೇ ಅವಧಿಯಲ್ಲಿ ಜನರಲ್ಲಿ ಬೇಸರವನ್ನುಂಟು ಮಾಡಿದರು ಆದರೆ ನೀವು ಶಾಸಕರಾದ ಮೊದಲ ಅವಧಿಯಲ್ಲಿ ಅದೂ ಒಂದು ವರ್ಷದ ಅವಧಿಯಲ್ಲೇ ಜನರಿಂದ ದೂರವಾಗುತ್ತಿದ್ದೀರಿ ಎನ್ನುವುದನ್ನು ಆಲೋಚಿಸಿ ಮುಂದಿನ ನಿಮ್ಮ ಕಾರ್ಯಕ್ರಮ,ಕಾರ್ಯತಂತ್ರ ರೂಪಿಸಿಕೊಳ್ಳಿ.ಈಗ ಪ್ರತಿಷ್ಠೆ ಮಾಡದೆ ಪೋಲೀಸ್ ಮುಖ್ಯಪೇದೆಯನ್ನು ಕರೆಯಿಸಿ ನಿಮ್ಮ ಮಗ,ಅಳಿಯ ಮತ್ತು ಅನಧಿಕೃತ ಪಿಎ ಈ ಮೂವರು ಹನುಮಂತ್ರಾಯಪ್ಪನಲ್ಲಿ ಕ್ಷಮೆ ಕೇಳಿಸಿ.

೧೨.೦೨.೨೦೨೪

About The Author