ಶಿವಭಕ್ತನ ಭಕ್ತ್ಯಾತಿಶಯವು ಶಿವನ ಮನಮುಟ್ಟುವಂತಿರಬೇಕು !

ಬಸವೋಪನಿಷತ್ತು ೪೦ : ಶಿವಭಕ್ತನ ಭಕ್ತ್ಯಾತಿಶಯವು ಶಿವನ ಮನಮುಟ್ಟುವಂತಿರಬೇಕು ! –ಮುಕ್ಕಣ್ಣ ಕರಿಗಾರ

ಎನ್ನ ಮನದಲ್ಲಿ ಮತ್ತೊಂದರೆಯನಯ್ಯಾ —
‘ ಓಂ ನಮಃ ಶಿವಾಯ — ಓಂ ನಮಃ ಶಿವಾಯ ‘ ಎನುತಿರ್ದೇನೆ.
ಎನಗಿದೇ ಮಂತ್ರ ; ಎನಗಿದೇ ಜಪ ;
‘ ಕೂಡಲ ಸಂಗಮದೇವಾ,ನೀನೇ ಬಲ್ಲೆ,ಎಲೆ ಲಿಂಗವೇ’.

ಶಿವಭಕ್ತರಾದವರು ಅನುಗಾಲವು ಶಿವನಾಮಸ್ಮರಣೆಯಲ್ಲಿರಬೇಕು,ಶಿವನಾಮಸ್ಮರಣೆಯಲ್ಲದೆ ಮತ್ತೊಂದನ್ನರಿಯದಂತಹ ಮುಗ್ಧಭಕ್ತಿಯನ್ನಾಚರಿಸಬೇಕು ಎನ್ನುತ್ತಾರೆ ಬಸವಣ್ಣನವರು ಈ ವಚನದಲ್ಲಿ.ಶಿವಭಕ್ತನು ತನ್ನ ಮನಸ್ಸಿನಲ್ಲಿ ಮತ್ತೊಂದನ್ನು ಯೋಚಿಸಬಾರದು.ಸದಾಕಾಲವು ‘ಓಂ ನಮಃ ಶಿವಾಯ’ ಎನ್ನುವ ಶಿವಮಂತ್ರವನ್ನು ಸ್ಮರಿಸುತ್ತಿರಬೇಕು,ಜಪಿಸುತ್ತಿರಬೇಕು.’ಓಂ ನಮಃ ಶಿವಾಯ’ ಎನ್ನುವುದೇ ಮಹಾಮಂತ್ರವು,ಈ ಮಂತ್ರವನ್ನೇ ಜಪಿಸುತ್ತಿರಬೇಕು .ಶಿವಭಕ್ತನ ಭಕ್ತಿಯನ್ನು ಶಿವನು ಅರಿತು ಆನಂದಿಸುವಂತಿರಬೇಕು ಎನ್ನುವ ಬಸವಣ್ಣನವರು ಈ ವಚನವನ್ನು ಇಷ್ಟಲಿಂಗರೂಪಿ ಪರಶಿವನನ್ನು ಸಂಬೋಧಿಸಿ ಹೇಳಿದ್ದಾರೆ.

ಭಕ್ತನ ಮನಸ್ಸಿನಲ್ಲಿ ಸದಾ ಮಹಾದೇವಶಿವನೇ ತುಂಬಿರಬೇಕು.’ಮತ್ತೊಂದನ್ನರಿಯುವುದು’ ಎಂದರೆ ಶಿವನಿಂದ ಭಿನ್ನವಾದ ಪ್ರಪಂಚ ಒಂದಿದೆ ಎಂದು ಭಾವಿಸುವುದು,ಶಿವನಿಂದ ಹೊರತಾದ ಅನ್ಯದೈವಗಳಿವೆ ಎಂದು ಭ್ರಮಿಸುವುದು.ಈ ಭಾವಭ್ರಮೆಯಿಂದ ಬಳಲಿಕೆಯಲ್ಲದೆ ಸತ್ಯಾರ್ಥವು ಪ್ರಕಟಗೊಳ್ಳದು.ಶಿವಭಕ್ತನಿಗೆ ಶಿವನೇ ಪ್ರಪಂಚವು,ಶಿವನೇ ಸರ್ವಸ್ವವು.ಶಿವಭಕ್ತನು ಪರಶಿವನಿಂದ ಸೃಷ್ಟಿಗೊಂಡ ಈ ಪ್ರಪಂಚದಲ್ಲಿ ಎಲ್ಲೆಲ್ಲಿಯೂ ಶಿವನನ್ನೇ ಕಾಣಬೇಕು,ಎಲ್ಲದರ ಹಿಂದೆಯೂ ಶಿವನನ್ನೇ ಗುರುತಿಸಬೇಕು.ಇದು ಶಿವಾದ್ವೈತಭಾವವು.ಪರಶಿವನ ಹೊರತಾಗಿ ಮತ್ತೊಂದು ವಸ್ತುವಿಲ್ಲ,ವ್ಯಕ್ತಿಯಿಲ್ಲ ,ಶಕ್ತಿಯಿಲ್ಲ,ಇರುವುದೆಲ್ಲವೂ ಶಿವಮಯವು ಎಂದು ತಿಳಿದು ‘ಸರ್ವಂಶಿವಮಯಂ’ ಎಂದರಿತು,ಆಚರಿಸುವ ಭಾವವೇ ಶಿವಾದ್ವೈತಭಾವವು.ಭಕ್ತನು ಇಂತಹ ಭಾವವನ್ನಳವಡಿಸಿಕೊಳ್ಳಬೇಕು,ಅಂಗವಿಸಿಕೊಳ್ಳಬೇಕು ಎನ್ನುತ್ತಾರೆ ಬಸವಣ್ಣನವರು.

‘ ಓಂ ನಮಃ ಶಿವಾಯ’ ಶಿವಮಂತ್ರವೇ ನನ್ನ ನಿತ್ಯೋಪಾಸನೆಯ ಜಪಮಂತ್ರ ಎನ್ನುತ್ತಾರೆ ಬಸವಣ್ಣನವರು.ಸದಾಕಾಲ ಮಂತ್ರವನ್ನು ಸ್ಮರಿಸುವುದೇ ಜಪವು.ಆಧುನಿಕಯುಗದಲ್ಲಿ ಸಾಧಕರು ಹಿಂದಿನಕಾಲದ ಋಷಿ ಮುನಿಗಳಂತೆ ದಟ್ಟವಾದ ಕಾಡು,ಬೆಟ್ಟಗಳ ಗುಹೆಗಳಲ್ಲಿ ಕುಳಿತು ದೀರ್ಘಕಾಲದ ತಪಸ್ಸನ್ನಾಚರಿಸಲು ಸಾಧ್ಯವಿಲ್ಲವಾದ್ದರಿಂದ ‘ಓಂ ನಮಃ ಶಿವಾಯ’ ಎನ್ನುವ ಮಂತ್ರವನ್ನು ಸದಾಕಾಲವು ಜಪಿಸುತ್ತಿರುವುದೇ ತಪಸ್ಸು ಎನ್ನಿಸಿಕೊಳ್ಳುತ್ತದೆ.ಜಪವೂ ಯೋಗವೆ,ಜಪವೂ ಯಜ್ಞವೆ.ಸಾಧಕನು ತನ್ನ ಗುರುವು ಅನುಗ್ರಹಿಸಿದ ‘ ನಮಃ ಶಿವಾಯ’ ಎನ್ನುವ ಮಂತ್ರವನ್ನಾಗಲಿ ಅಥವಾ ‘ ಓಂ ನಮಃ ಶಿವಾಯ ‘ ಎನ್ನುವ ಮಂತ್ರವನ್ನಾಗಲಿ ಸದಾಕಾಲವು ಜಪಿಸುತ್ತಿರಬೇಕು.ನಿಂತಾಗ ಕುಳಿತಾಗ,ಉಡುವಾಗ ತೊಡುವಾಗ,ಮಾತನಾಡುವಾಗ ವ್ಯವ್ಯಹಾರದೊಳಿರುವಾಗ’ ಓಂ ನಮಃ ಶಿವಾಯ’ ಎನ್ನುತ್ತಿರಬೇಕು.ಮಂತ್ರವನ್ನು ಮಾನಸಿಕವಾಗಿ ಜಪಿಸುತ್ತಿರಬೇಕು.ಬಹಿರಂಗಜಪವನ್ನು ಜನರು ಆಡಿಕೊಳ್ಳಬಹುದು,ಛೇಡಿಸಬಹುದು.ಆದ್ದರಿಂದ ಶಿವಮಂತ್ರವನ್ನು ತನ್ನ ಅಂತರಂಗದಲ್ಲಿ ಯಾರಿಗೂ ಗೊತ್ತಾಗದಂತೆ ಮಾನಸಿಕವಾಗಿ ಜಪಿಸುತ್ತಿರಬೇಕು.ಜಪದಲ್ಲಿ ವಾಚಿಕ,ಉಪಾಂಶು ಮತ್ತು ಮಾನಸ ಜಪ ಎನ್ನುವ ಮೂರು ವಿಧಗಳಿವೆ.ಇತರರಿಗೆ ಕೇಳುವಂತೆ ಗಟ್ಟಿಯಾಗಿ ಮಂತ್ರವನ್ನು ಉಚ್ಚರಿಸುವುದು ವಾಚಿಕಜಪವಾಗುತ್ತದೆ.ತನ್ನ ತುಟಿಗಳೆರಡು ಅಲುಗಾಡುವಂತೆ ಮಂದಸ್ವರದಲ್ಲಿ ಉಚ್ಚರಿಸುವ ಮಂತ್ರೋಚ್ಚಾರಣೆಯು ಉಪಾಂಶು ಜಪವಾಗುತ್ತದೆ.ಯಾರಿಗೂ ಕೇಳಿಸದಂತೆ ಮೌನವಾಗಿ,ಮನಸ್ಸಿನಲ್ಲಿ ಉಚ್ಚರಿಸುವ ಮಂತ್ರವೇ ಮಾನಸಜಪ ಎನ್ನಿಸಿಕೊಳ್ಳುತ್ತದೆ.ಇಂತಹ ಮಾನಸಜಪವೇ ಶ್ರೇಷ್ಠವಾದುದು.ಬಸವಣ್ಣನವರು ಈ ವಚನದಲ್ಲಿ ಮಾನಸಜಪದ ಮಹಿಮೆಯನ್ನೇ ಪ್ರಸ್ತಾಪಿಸಿದ್ದಾರೆ.’ ಕೂಡಲ ಸಂಗಮದೇವಾ,ನೀನೇ ಬಲ್ಲೆ,ಎಲೆ ಲಿಂಗವೇ’ ಎನ್ನುವ ವಚನವಾಕ್ಯವು ಭಕ್ತನು ಸದಾ ಮಾನಸಜಪದ ಮೂಲಕ ಶಿವಮಂತ್ರವನ್ನು ಜಪಿಸುತ್ತಿರಬೇಕು.ಭಕ್ತನ ಭಕ್ತಿಯು ಮಹಾದೇವಶಿವನನ್ನು ಮೆಚ್ಚಿಸುವಂತಿರಬೇಕೇ ಹೊರತು ಮಂದಿಯನ್ನು ಮೆಚ್ಚಿಸಲು ಭಕ್ತಿಯನ್ನಾಚರಿಸಬಾರದು.ಮಂದಿಯನ್ನು ಮೆಚ್ಚಿಸಲು ಆಚರಿಸುವ ಬಹಿರಾಡಂಬರದ ಪೂಜೆಯಿಂದ ಫಲವಿಲ್ಲ,ಮಹಾದೇವನಾದ ಶಿವನನ್ನು ಮೆಚ್ಚಿಸುವ ಅಂತರಂಗದ ಮಂತ್ರಜಪ,ಅರಳ್ದಯೋಗವೇ ಶ್ರೇಷ್ಠ ಎನ್ನುತ್ತಾರೆ ಬಸವಣ್ಣನವರು.

೧೨.೦೨.೨೦೨೪

About The Author