ಶಿವನಾಮಸ್ಮರಣೆಯಿಂದ ಭವ ಮತ್ತು ಬಹುವಿಧ ಸಂಕಷ್ಟಗಳಿಂದ ಮುಕ್ತರಾಗಬಹುದು.

ಬಸವೋಪನಿಷತ್ತು ೩೯: ಶಿವನಾಮಸ್ಮರಣೆಯಿಂದ ಭವ ಮತ್ತು ಬಹುವಿಧ ಸಂಕಷ್ಟಗಳಿಂದ ಮುಕ್ತರಾಗಬಹುದು : ಮುಕ್ಕಣ್ಣ ಕರಿಗಾರ
 ಭವಬಂಧನ– ದುರಿತಂಗಳ ಗೆಲುವೊಡೆ
   ‘ ಓಂ ನಮಃ ಶಿವಾಯ— ಶರಣೆಂ’ದೊಡೆ ಸಾಲದೆ ?
   ‘ ಹರಹರ, ಶಂಕರ,ಶಿವಶಂಕರ,
    ಜಯ ಜಯ ಶಂಕರ ಶರಣೆ’ ನ್ನುತ್ತಿರ್ದೇನೆ ;
  ಎನ್ನ ಪಾತಕ ಪರಿಹಾರ !
‘ ಕೂಡಲ ಸಂಗಮದೇವ ಶರಣೆ’ ನುತಿರ್ದೇನೆ.
       ಶಿವನಾಮ ಸ್ಮರಣೆಯಿಂದ ಭಕ್ತರು ಭವಮುಕ್ತರಾಗಬಹುದು,ಕಾಡುತ್ತಿರುವ ಬಹುವಿಧ ಸಂಕಟಗಳಿಂದ ಮುಕ್ತರಾಗಬಹುದು ಎಂದು ಲೋಕಸಮಸ್ತರಿಗೆ ಉಪದೇಶಿಸಿದ್ದಾರೆ ಬಸವಣ್ಣನವರು ಈ ವಚನದಲ್ಲಿ‌.ಹುಟ್ಟುಸಾವುಗಳ ಸಂಸಾರ ಚಕ್ರದಿಂದ ಬಿಡುಗಡೆ ಹೊಂದಲು ಮತ್ತು ಪಾಪಕರ್ಮಗಳಿಂದ ಮುಕ್ತರಾಗಲು ಶಿವನೆ ನಿನಗೆ ಶರಣುಬಂದಿದ್ದೇನೆ, ‘ಓಂ ನಮಃ ಶಿವಾಯ’ ಎನ್ನುವ ನಿನ್ನ ಮಹಾಮಂತ್ರವನ್ನು ಜಪಿಸುತ್ತಿದ್ದೇನೆ. ಸದಾಕಾಲವು ಹರಹರ ಶಂಕರ,ಶಿವಶಂಕರ ಎನ್ನುವ ಗೆಲುವು,ಮಂಗಳ ಮತ್ತು ಶುಭವನ್ನುಂಟು ಮಾಡುವ ನಿನ್ನ ಪವಿತ್ರನಾಮಗಳನ್ನುಚ್ಚರಿಸುತ್ತ ನಿನ್ನಲ್ಲಿ ಶರಣುಬಂದಿದ್ದೇನೆ.ಅನುಗಾಲವು ಜಯಜಯ ಶಂಕರ ಎಂದು ನಿನ್ನ ನಾಮವನ್ನು ನುತಿಸುತ್ತ ನಿನ್ನಲ್ಲಿ ಶರಣುಬಂದಿದ್ದೇನೆ.ಶಿವನೆ ನಿನಗೆ ಶರಣಾಗಿ,ನಿನ್ನ ನಾಮದ ಆಶ್ರಯವನ್ನು ಪಡೆದಿರುವುದರಿಂದ ನನ್ನ ಪಾಪಗಳೆಲ್ಲ ಸುಟ್ಟುಹೋಗುವವು ಎನ್ನುವ ಅಚಲನಿಷ್ಠೆಯನ್ನು  ಭಕ್ತರು ಹೊಂದಿರಬೇಕು ಶಿವನಲ್ಲಿ ಎನ್ನುತ್ತಾರೆ ಬಸವಣ್ಣನವರು.
        ಬಸವಣ್ಣನವರು ಭಕ್ತರಿಗೆ ಆಶ್ರಯಿಸಲು ಶಿವನಲ್ಲದೆ ಮತ್ತೊಂದು ದೈವವಿಲ್ಲ,ಭಕ್ತರನ್ನು ಉದ್ಧರಿಸಲು ಶಿವನಂತೆ ಸರ್ವ ಸಮರ್ಥರಾದ ಮತ್ತೊಬ್ಬ ದೇವರಿಲ್ಲ ಎನ್ನುವುದನ್ನು ಈ ವಚನದಲ್ಲಿ ಸಾರಿದ್ದಾರೆ.ಪರಶಿವನೊಬ್ಬನೇ ಸ್ವಯಂಭುವೂ,ಸರ್ವಶಕ್ತನೂ ಆಗಿರುವುದರಿಂದ ಅವನು ತನ್ನ ಭಕ್ತರುಗಳು ತಿಳಿದೋ ತಿಳಿಯದೆಯೋ ಮಾಡಿದ ಕೆಟ್ಟಕೆಲಸಗಳಿಂದಾಗಿ ಅಂಟಿಕೊಂಡ ಪಾಪ,ಕರ್ಮವನ್ನು ಕಳೆಯಬಲ್ಲನು.ಬ್ರಹ್ಮನಾಗಲಿ,ವಿಷ್ಣುವಾಗಲಿ ಅಥವಾ ಮತ್ತಾರೇ ದೇವತೆಗಳಾಗಲಿ ಪ್ರಾರಬ್ಧಕರ್ಮವನ್ನು ಕಳೆಯಲಾರರು.ಅವರನ್ನು ಬೇಡಿದರೆ ‘ ನಾನು ಏನನ್ನಾದರೂ ನೀಡಬಲ್ಲೆ,ಆದರೆ ನಿನ್ನ ಪ್ರಾರಬ್ಧಕರ್ಮವನ್ನು ಕಳೆಯಲಾರೆ’ ಎನ್ನುತ್ತಾರೆ.ಅದು ಬ್ರಹ್ಮ ವಿಷ್ಣ್ವಾದಿ ದೈವಗಳ ಮಿತಿಯೂ ಹೌದು. ಮೋಕ್ಷವನ್ನು ಕೊಡುವ ಅನುಗ್ರಹಸಾಮರ್ಥ್ಯವು ಶಿವನೊಬ್ಬನಿಗೆ ಇರುವುದರಿಂದ ಮೋಕ್ಷದಾತನಾದ ಶಿವನು ತನ್ನ ಭಕ್ತರ ಪ್ರಾರಬ್ಧವಾದಿ ಸರ್ವಕರ್ಮಫಲಗಳನ್ನು ಸುಟ್ಟುಬೂದಿ ಮಾಡಿ ಅವರನ್ನು ಉದ್ಧರಿಸುತ್ತಾನೆ.ಹುಟ್ಟುಸಾವುಗಳ ಸಂಸಾರ ಚಕ್ರದಿಂದ ಬಿಡುಗಡೆ ಹೊಂದಬೇಕಾದರೆ ಭಕ್ತರು ಶಿವನಾಮದ ಆಸರೆಯಲ್ಲಿರಬೇಕು.ಅನಿಷ್ಟ – ಆಪತ್ತು,ಸಂಕಷ್ಟಗಳಿಂದ ಮುಕ್ತರಾಗಬೇಕಾದರೆ ಭಕ್ತರು ಶಿವನಲ್ಲಿ ಅನನ್ಯಭಾವದಿಂದ ಶರಣಾಗಬೇಕು.’ಶಿವ ‘ ಎನ್ನುವ ಶಿವನಾಮವು ಸರ್ವವಿಧದ ಅಶುಭಗಳನ್ನು ನಿವಾರಿಸಿ ಸರ್ವಶುಭಗಳನ್ನುಂಟು ಮಾಡುತ್ತದೆ.ಶಿವನ ‘ ಹರ’ ಎನ್ನುವ ನಾಮವು ಭಕ್ತರ ಅಪಜಯ- ಅಪಖ್ಯಾತಿಗಳನ್ನು ದೂರೀಕರಿಸಿ ಅವರಿಗೆ ವಿಜಯವನ್ನು ಕರುಣಿಸುತ್ತದೆ,ವೃದ್ಧಿ – ಸಿದ್ಧಿ- ಪ್ರಸಿದ್ಧಿಗಳನ್ನೊದಗಿಸಿ ಕೊಡುತ್ತದೆ. ‘ ಓಂ ನಮಃ ಶಿವಾಯ’ ಎನ್ನುವ ಶಿವ ಷಡಕ್ಷರಿ ಮಂತ್ರಜಪದಿಂದ ಆಗದೆ ಇರುವ ಕೆಲಸ ಕಾರ್ಯಗಳಿಲ್ಲವಾದ್ದರಿಂದ ಭಕ್ತರು ಸದಾ ಓಂನಮಃ ಶಿವಾಯ ಎನ್ನುವ ಶಿವಮಂತ್ರವನ್ನು ಜಪಿಸುತ್ತಿರಬೇಕು.
        ಬಸವಣ್ಣನವರು ಈ ವಚನದ ಮೂಲಕ ಜನಸಾಮಾನ್ಯರ ಭಯ – ಆತಂಕಗಳನ್ನು ನಿವಾರಿಸಿ ಅವರನ್ನು ಕಲ್ಯಾಣಕರ ಶಿವಪಥದಲ್ಲಿ ಕರೆದೊಯ್ಯುವ ಲೋಕಗುರುವಾಗಿ ಕಾಣಿಸಿಕೊಳ್ಳುತ್ತಾರೆ.ಶಾಸ್ತ್ರ- ಪುರಾಣಗಳ ಮೂಲಕ ಜನಸಾಮಾನ್ಯರಲ್ಲಿ ಪಾಪಭೀತಿಯನ್ನುಂಟು ಮಾಡಿ ಜನಸ್ತೋಮವು ಮುಂದುವರೆಯದಂತೆ ಕಾಲ್ತೊಡರನ್ನೊಡ್ಡಿದ್ದ ಕುತ್ಸಿತಮತಿಗಳ ಕಪಟತನದಿಂದ ಜನಸಾಮಾನ್ಯರನ್ನು ಮೇಲಕ್ಕೆತ್ತಿ ” ಶಿವನಿಗೆ ಶರಣಾಗಿ.’ ಓಂ ನಮಃ ಶಿವಾಯ’ ಎನ್ನುವ ಮಂತ್ರ ಜಪಿಸಿ ಸಂಕಷ್ಟ ಹಾಗೂ ಸಂಸಾರ ಮುಕ್ತರಾಗಿ” ಎನ್ನುವ ಅಭಯನೀಡಿದ್ದಾರೆ ಬಸವಣ್ಣನವರು.ಬಸವಣ್ಣನವರಂತಹ ಲೋಕೋದ್ಧಾರಬದ್ಧ ಶಿವವಿಭೂತಿಗಳಿಗೆ ಮಾತ್ರ ಸಾಧ್ಯವಾಗಬಹುದಾದ ಲೋಕಕಾರುಣ್ಯವಿಶೇಷದ ಉಪದೇಶವಿದು.ಲೋಕಸಮಸ್ತರನ್ನು ಉದ್ಧರಿಸುವ ತಮ್ಮ ನಿಜಬದ್ಧತೆಯಿಂದಲೇ ಬಸವಣ್ಣನವರು ಲೋಕಬಂಧುವಾದರು,ವಿಶ್ವಗುರುವಾದರು.
         ‌  ೧೧.೦೨.೨೦೨೪

About The Author