ಹಾಲುಮತ ದೇಶದ ಮೂಲಮತ ; ವೀರಶೈವಕ್ಕಿಂತ ಬಹುಪೂರ್ವದ ಮತ : ಮುಕ್ಕಣ್ಣ ಕರಿಗಾರ

ಸಂಸ್ಕೃತಿ : ಹಾಲುಮತ ದೇಶದ ಮೂಲಮತ ; ವೀರಶೈವಕ್ಕಿಂತ ಬಹುಪೂರ್ವದ ಮತ : ಮುಕ್ಕಣ್ಣ ಕರಿಗಾರ

ಆತ್ಮೀಯರೂ ಸಾಹಿತಿ ಮಿತ್ರರೂ ಆಗಿರುವ ಸಿಂಧನೂರಿನ ಬೀರಪ್ಪ ಶಂಭೋಜಿಯವರು ಇದೇ ತಿಂಗಳು 15 ನೇ ತಾರೀಖಿನಂದು ನಡೆಯಲಿರುವ ಅವರ ಮಗಳ ಮದುವೆಯ ಆಮಂತ್ರಣ ಪತ್ರದೊಂದಿಗೆ‌ ಜಿಲ್ಲೆಯ ಹಿರಿಯ ಸಾಹಿತಿ ಶಾಶ್ವತಸ್ವಾಮಿ ಮುಕ್ಕುಂದಿಮಠ ಅವರ ‘ ಮುನ್ನುಡಿ ಮಣಿ ತೋರಣ’ ಎನ್ನುವ ಪುಸ್ತಕವನ್ನು ಕಾಣಿಕೆಯನ್ನಾಗಿ ಕೊಟ್ಟಿದ್ದಾರೆ ಇಂದು ಗಬ್ಬೂರಿನ ಮಹಾಶೈವ ಧರ್ಮಪೀಠಕ್ಕೆ ಆಗಮಿಸಿ.ಶಾಶ್ವತಸ್ವಾಮಿ ಮುಕ್ಕುಂದಿ ಮಠ ಅವರು ನಮ್ಮ ಮಹಾಶೈವ ಧರ್ಮಪೀಠದೊಂದಿಗೆ ಅವಿನಾಭಾವ ,ಆತ್ಮೀಯ ಸಂಬಂಧ ಹೊಂದಿರುವ ಹಿರಿಯರು.ಮಹಾಶೈವ ಧರ್ಮಪೀಠದಲ್ಲಿ ನಡೆಯುವ ರಾಜ್ಯಮಟ್ಟದ ಸಾಹಿತ್ಯಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸ್ಫೂರ್ತಿ ತುಂಬುವ ಮಾತುಗಳನ್ನಾಡುವ ಹೃದಯ ಸಂಪನ್ನ ಹಿರಿಯರು.ಶಾಶ್ವತಸ್ವಾಮಿ ಮುಕ್ಕುಂದಿ ಮಠ ಅವರ ಸಾಹಿತ್ಯದ ಅನನ್ಯತೆಯನ್ನು ಗುರುತಿಸಿ ಮಹಾಶೈವ ಧರ್ಮಪೀಠವು ‘ ಮಹಾತಪಸ್ವಿ ಶ್ರೀಕುಮಾರಸ್ವಾಮಿ ಸಾಹಿತ್ಯಭೂಷಣ ಪ್ರಶಸ್ತಿ’ ಯನ್ನಿತ್ತು ಅವರನ್ನು ಗೌರವಿಸಿದೆ.ಮುಕ್ಕುಂದಿಮಠ ಅವರು ವಿವಿಧ ಲೇಖಕರುಗಳ ಪುಸ್ತಕಗಳಿಗೆ ಬರೆದ ಮುನ್ನುಡಿಗಳ ಸಂಕಲನ ಇದಾಗಿದ್ದು ,ಮಣಿ ತೋರಣ ಪುಸ್ತಕದಲ್ಲಿ ರಾಯಚೂರು ಜಿಲ್ಲೆ ಮತ್ತು ರಾಜ್ಯದ ವಿವಿಧೆಡೆಗಳ ಲೇಖಕರುಗಳ ಪುಸ್ತಕಗಳಿಗೆ ಬರೆದ 42 ಮುನ್ನುಡಿಗಳಿವೆ.ಇದೊಂದು ವಿಶಿಷ್ಟಕೃತಿ.ಶಾಶ್ವತಸ್ವಾಮಿ ಮುಕ್ಕುಂದಿ ಮಠ ಅವರು ಕವಿ ಸಾಹಿತಿಗಳ ಬಂಧುವಾಗಿ,ಯುವಸಾಹಿತಿಗಳನ್ನು ಬೆಳೆಸುವ ಸಹೃದಯಹಿರಿಯರಾಗಿ ಪ್ರಸಿದ್ಧಲೇಖಕರುಗಳ ವೈಶಿಷ್ಟ್ಯವನ್ನು ಪರಿಚಯಿಸುವ ವಿಶಿಷ್ಟಕಣ್ಣೋಟದ ಹಿರಿಯರಾಗಿ ಕಾಣಿಸಿಕೊಂಡಿದ್ದಾರೆ ಈ ಕೃತಿಯಲ್ಲಿ.ಈ ಕೃತಿಯ ಬಗ್ಗೆ ಪ್ರತ್ಯೇಕವಾದ ವಿಮರ್ಶೆಯನ್ನು ಮುಂದಿನ ದಿನಗಳಲ್ಲಿ ಬರೆಯುವೆ.ಬೀರಪ್ಪ ಶಂಭೋಜಿಯವರೇ ಈ ಕೃತಿಯ ಪ್ರಕಾಶಕರು ಎನ್ನುವುದೊಂದು ವಿಶೇಷ.ಸಿಂಧನೂರಿನಂತಹ ಪ್ರದೇಶದಲ್ಲಿ ‘ ಶ್ರೀನಿಧಿ’ ಎನ್ನುವ ಹೆಸರಿನ ಪ್ರಕಾಶನ ಸಂಸ್ಥೆಯನ್ನು ಪ್ರಾರಂಭಿಸಿ ಆ ಸಂಸ್ಥೆಯ ಮೂಲಕ 25 ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿರುವ ಅವರ ಸಾಹಸವು ಮೆಚ್ಚುವಂತಹದ್ದು,ಅಭಿನಂದನಾರ್ಹವಾದುದು.

ನಾನೀಗ ಪ್ರಸ್ತಾಪಿಸಹೊರಟಿರುವುದು ಮುನ್ನುಡಿ ಮಣಿ ತೋರಣ ಪುಸ್ತಕದ ಕೊನೆಯ ಲೇಖನ ‘ ಪರೋಪಕಾರಿ ಹಾಲುಮತ ಧರ್ಮ’ ಕೃತಿಗೆ ಶಾಶ್ವತಸ್ವಾಮಿ ಮುಕ್ಕುಂದಿ ಮಠ ಅವರು ಬರೆದ ಮುನ್ನುಡಿಯ ಕುರಿತು.ಗೋನಾಳಿನ ಮಲ್ಲಯ್ಯ ಪಟ್ಟದೊಡೆಯರ ಅವರು ‘ ಪರೋಪಕಾರಿ ಹಾಲುಮತ’ ಕೃತಿಯ ಲೇಖಕರು.ಅವರ ಪರಿಚಯ ನನಗಿಲ್ಲ.ಈ ಲೇಖನ ಬರೆಯುವ ಹೊತ್ತಿನಲ್ಲೇ ಸಹೋದರ,ಸಾಹಿತಿ ಸಾಂಸ್ಕೃತಿಕ ಚಿಂತಕ ಚಿದಾನಂದ ಗುರುವಿನ ಅವರು ನನ್ನ ಮೊಬೈಲ್ಗೆ ಕರೆಮಾಡಿದ್ದರಿಂದ ಮಲ್ಲಯ್ಯ ಪಟ್ಟದೊಡೆಯರ ಬಗ್ಗೆ ಒಂದಿಷ್ಟು ವಿಷಯ ತಿಳಿದುಕೊಂಡೆ.ಶಾಶ್ವತಸ್ವಾಮಿ ಮುಕ್ಕುಂದಿ ಮಠ ಅವರು ಈ ಕೃತಿಗೆ ಬರೆದ ಮುನ್ನುಡಿಯ ಕೆಲವು ಮಾತುಗಳನ್ನು ನಾನು ಒಪ್ಪುವುದಿಲ್ಲವಾದ್ದರಿಂದ ನನ್ನ ವಾದಮಂಡನೆಗಾಗಿ ಈ ಲೇಖನ ಬರೆಯಬೇಕಾಯಿತು.ಶಾಶ್ವತಸ್ವಾಮಿ ಮುಕ್ಕುಂದಿಮಠ ಅವರು ಪುಸ್ತಕಕ್ಕೆ ಬರೆದ ಮುನ್ನುಡಿಯಲ್ಲಿ
೧ ಪ್ರಾಚೀನ ಕರ್ನಾಟಕದ ಮೂಲಜನಾಂಗಗಳು ಗೊಲ್ಲರು ಮತ್ತು ಕುರುಬರು ಎಂದು ಅಭಿಪ್ರಾಯಿಸಿದ್ದಾರೆ.
೨.ಹಾಲುಮತದ ಮೇಲೆ ವೀರಶೈವಮತದ ಪ್ರಭಾವ ಆಗಿದೆ ಎಂದು ಭಾವಿಸುವ ಶಾಶ್ವತಸ್ವಾಮಿ ಮುಕ್ಕುಂದಿಮಠ ಅವರು ” ..‌.ಹಾಲುಮತ ಕುರುಬ ಜನಾಂಗ ಶಿವನ ಆರಾಧಕರು,ಶಿವೋಪಾಸಕರು” ಎನ್ನುತ್ತ ” ಅಂತೆಯೇ ಶರಣ ಧರ್ಮದ ಅಷ್ಟಾವರಣಗಳಾದ ೧. ಗುರು ೨ ಲಿಂಗ ೩. ಜಂಗಮ ೪ ಪ್ರಸಾದ ೫ ಪಾದೋದಕ ೬ ವಿಭೂತಿ ೭ ರುದ್ರಾಕ್ಷಿ ೮ ಪಂಚಾಕ್ಷರಿ ಮಂತ್ರಗಳ ವೀರಶೈವ ತತ್ವಗಳು ಹಾಲುಮತದ ಮೇಲೆ ಪ್ರಭಾವವಾಗಿದೆ.ಅಷ್ಟಾವರಣಗಳಲ್ಲಿ ಪ್ರಸಾದ ಮತ್ತು ಪಾದೋದಕ ತತ್ತ್ವಗಳು ಕಾಣಿಸದೆ ಇರುವುದಕ್ಕೆ ಈ ಜನಾಂಗ ಒಂದುಕಡೆಯಿಂದ ಇನ್ನೊಂದು ಕಡೆಗೆ ಸಂಚರಿಸುವ ಕಾರಣವಿರಬೇಕು.
೩. “ಅಷ್ಟಾವರಣದಲ್ಲಿರುವ ಗುರು,ಲಿಂಗ,ಜಂಗಮ ಮತ್ತು ಮಂತ್ರಗಳುಹಾಲುಮತದಲ್ಲಿ ಕಂಬಳಿ,ಭಂಡಾರ,ಡೊಳ್ಳು,ಕುರಿಗಳು,ಸ್ಥಳವನ್ನು ಹೊಂದಿವೆ”.

ಶಾಶ್ವತಸ್ವಾಮಿ ಮುಕ್ಕುಂದಿ ಮಠ ಅವರ ಈ ಮೂರು ಅಭಿಪ್ರಾಯಗಳು ಭಾರತದ ಮೂಲಧರ್ಮವಾದ ಹಾಲುಮತಧರ್ಮಕ್ಕೆ ಮತ್ತು ನೆಲಮೂಲ ಸಂಸ್ಕೃತಿಯಾದ ಹಾಲುಮತಸಂಸ್ಕೃತಿಯ ಬಗ್ಗೆ ತಪ್ಪು ತಿಳಿವಳಿಕೆಗೆ ಕಾರಣವಾಗುವುದರಿಂದ ನಾನೀ ಲೇಖನವನ್ನು ಬರೆಯಬೇಕಿದೆ.

ಮೊದಲನೆಯದಾಗಿ ,ಗೊಲ್ಲರು ಈ ದೇಶದ ಪ್ರತ್ಯೇಕ ಮೂಲನಿವಾಸಿಗಳಲ್ಲ.ಗೊಲ್ಲರು ಮೂಲತಃ ಕುರುಬರೆ.ಕುರುಬರಿಂದ ಪ್ರತ್ಯೇಕಗೊಂಡ ,ಕುರುಬರ ಸಹೋದರರ ಒಂದು ಪಂಗಡ ಮುಂದೆ ಗೊಲ್ಲರು ಎಂದಾದರೇ ಹೊರತು ಗೊಲ್ಲರು ಮೂಲಪಂಗಡವಲ್ಲ.ಗೋವಿನಿಂದ ಗೊಲ್ಲ ಪದದ ವ್ಯುತ್ಪತ್ತಿಯಲ್ಲ,ಪ್ರಾಕೃತದ ಗೋರ – ಗೋರಲ ಪದವೇ ಗೊಲ್ಲ ಪದದ ಮೂಲ.ಗೋರ ಗೋರಲ ಎಂದರೆ ಕುರಿ ಎಂದರ್ಥ.ಮಹಾಭಾರತ ಕೃಷ್ಣ ಕುರುಬನೇ ಹೊರತು ಗೊಲ್ಲ ಕೃಷ್ಣನಲ್ಲ.ಮಹಾಭಾರತದ ಮೂಲಕೃತಿಯಲ್ಲಿ ಯಾದವ ಶಬ್ದದ ಪ್ರಸ್ತಾಪ ಇಲ್ಲ.ಅಲ್ಲಿ ಗೊಲ್ಲಕೃಷ್ಣನೇ ಇದ್ದಾನೆ.ಇತ್ತೀಚಿನವರ ಅನುವಾದಗಳಲ್ಲಿ ಗೊಲ್ಲ ಪದವು ಯಾದವ ಆಗಿದೆ.ಭಾರತದ ಗೆಜೆಟಿಯರ್ ನಲ್ಲಿ ಯಾದವರು ಪುರಾತನ ಜನಾಂಗವಾಗಿ ಕಾಣಿಸಿಕೊಳ್ಳುವುದಿಲ್ಲ.ಇಂದು ಹಂಡೆ ವಜೀರರು,ನೊಣಬರು ಮತ್ತು ಒಕ್ಕಲಿಗರು ಎಂದು ಕರೆಯಿಸಿಕೊಳ್ಳುತ್ತಿರುವವರು ಮೂಲತಃ ಕುರುಬರೆ.ಕುರುಬರಿಂದ ಪ್ರತ್ಯೇಕಗೊಂಡವರಾಗಿದ್ದರಿಂದ ಗೊಲ್ಲರನ್ನು ಕುರುಬರ ಉಪಪಂಗಡವಾಗಿ ಪರಿಗಣಿಸಬೇಕೇ ಹೊರತು ಪ್ರತ್ಯೇಕವಾದ ಮೂಲಜನಾಂಗವಾಗಿಯಲ್ಲ.

ಕನಕದಾಸರು ಕೃಷ್ಣಭಕ್ತರಾಗುವುದಕ್ಕೆ ಕೃಷ್ಣನ ಕುರುಬಕುಲಮೂಲವೇ ಕಾರಣವೇ ಹೊರತು ಅವರಿವರ ವೈಷ್ಣವಮತಪ್ರಭಾವವು ಕಾರಣವಲ್ಲ ! ಯೋಗಸಾಮರ್ಥ್ಯದಿಂದ ಒಳಗಣ್ಣು ಅಂತರ್ ಚಕ್ಷುವನ್ನು ಜಾಗ್ರತಗೊಳಿಸಿಕೊಂಡಿದ್ದ ಕನಕದಾಸರು ತ್ರಿಕಾಲಜ್ಞಾನಿಗಳಾಗಿದ್ದರು.ಕೃಷ್ಣನ ಕುಲಮೂಲವನ್ನು ಅರಿತಕಾರಣದಿಂದಲೇ ಕನಕದಾಸರು ಕೃಷ್ಣನ ಭಕ್ತರಾಗಿ ಪರಿವರ್ತನೆಗೊಂಡರು.ಇದಕ್ಕೆ ಇನ್ನೊಂದು ಉದಾಹರಣೆ ಹೇಳಬಹುದಾದರೆ ಮಹಾರಾಷ್ಟ್ರದ ಪಾಂಡುರಂಗ ವಿಠಲನದು.ಪಾಂಡುರಂಗ ವಿಠಲಮೂಲತಃ ಶಿವಭಕ್ತನಾದ ಕುರುಬರ ಇಟ್ಟಪ್ಪ.ಇಂದು ಆತನ ಸುತ್ತ ನೂರಾರು ಕಥೆಗಳನ್ನು ಕಟ್ಟಿದ್ದಾರೆ.ಹುಲಿಜಂತಿ ಮಾಳಿಂಗರಾಯ ಮತ್ತು ವಿಠಲ ಇಬ್ಬರೂ ಸಮಕಾಲೀನರಾಗಿದ್ದ ಶಿವಭಕ್ತ ಕುರುಬರು.ಹುಲಿಜಂತಿಯಲ್ಲಿ ಹಿಂದೆ ಒಂದು ಬಂಡೆಯ ಮೇಲೆ ವಿಠಲ ಮತ್ತು ಮಾಳಿಂಗರಾಯ ಕುಳಿತು ಚರ್ಚಿಸಿದ್ದರಂತೆ.ಅದರ ಕುರುಹಾಗಿ ಹುಲಿಜಂತಿಯ ಮಾಳಿಂಗರಾಯನ ದೇವಸ್ಥಾನದ ಗೋಡೆಯಲ್ಲಿ ವಿಠಲ ಮಾಳಿಂಗರಾಯರ ಬಣ್ಣದ ಪೇಟಿಂಗ್ ನ ಚಿತ್ರವಿದೆ.ಇದನ್ನಿಲ್ಲಿ ಪ್ರಸ್ತಾಪಿಸುವ ಕಾರಣ ಕೃಷ್ಣನೂ ಕುರುಬನಾಗಿದ್ದ ಎನ್ನುವುದನ್ನು ತೋರಿಸಲು.

ಎರಡನೆಯದಾಗಿ ವೀರಶೈವಮತದ ಮೇಲೆ ಹಾಲುಮತದ ಪ್ರಭಾವವಾಗಿದೆಯೇ ಹೊರತು ಹಾಲುಮತದ ಮೇಲೆ ವೀರಶೈವ ಮತದ ಪ್ರಭಾವವಾಗಿಲ್ಲ.ಕ್ರಿಶ ಎಂಟನೆಯ ಶತಮಾನದಲ್ಲಿ ಭಾರತದಲ್ಲಿ ಕಾಣಿಸಿಕೊಳ್ಳುವ ವೀರಶೈವಮತವು ದೇಶದ ಮೂಲಮತವಾದ ಹಾಲುಮತದ ಮೇಲೆ ಹೇಗೆ ಪ್ರಭಾವ ಬೀರಲು ಸಾಧ್ಯ ? ವೀರಶೈವರ ಪರಮಾರಾಧ್ಯನಾದ ವೀರಭದ್ರನು ಕುರುಬರ ಬೀರಪ್ಪ ಎಂದ ಬಳಿಕ ಯಾವ ಮತದ ಮೇಲೆ ಯಾವ ಮತದ ಪ್ರಭಾವ ಆಗಿರಬಹುದು ? ಮುಕ್ಕುಂದಿ ಮಠ ಅವರು ಅಭಿಪ್ರಾಯ ಪಡುವಂತೆ ವೀರಶೈವರ ಅಷ್ಟಾವರಣಗಳಿಗಾಗಲಿ,ಷಟ್ ಸ್ಥಲಗಳಿಗಾಗಲಿ ಭಾರಿ ಐತಿಹಾಸಿಕ ಹಿನ್ನೆಲೆ ಏನಿಲ್ಲ.ಬಸವಣ್ಣನವರ ಆಗಮನ ಪೂರ್ವದಲ್ಲಿ ಕೇವಲ ತಾಳೆಯೋಲೆ ಗ್ರಂಥಗಳಲ್ಲಿ ಅಸ್ತಿತ್ವದಲ್ಲಿದ್ದ ವೀರಶೈವ ಮತದಲ್ಲಿ ಅಷ್ಟಾವರಣಗಳು ,ಷಟ್ ಸ್ಥಲಗಳು ಇದ್ದವು ಎನ್ನುವುದಕ್ಕೆ ಪ್ರಮಾಣಗ್ರಂಥಗಳಿಲ್ಲ.ಷಟ್ಸ್ಥಲ ಚಕ್ರವರ್ತಿ ಎಂದು ಹೆಸರಾದ ಚೆನ್ನಬಸವಣ್ಣನವರು ವೀರಶೈವಮತದ ಪರಿಭಾಷೆಯನ್ನು ಸೃಷ್ಟಿಸಿದರೇ ಹೊರತು ಅದಕ್ಕಿಂತ ಮುಂಚೆ ಕರ್ನಾಟಕದಲ್ಲಿ ಇಷ್ಟುಸಮೃದ್ಧ ವೀರಶೈವ ಪರಿಭಾಷೆ,ಪಾರಿಭಾಷಿಕ ಪದಕೋಶಗಳು ಇರಲಿಲ್ಲ.’ಸಿದ್ಧಾಂತ ಶಿಖಾಮಣಿ’ಯ ಸಂಸ್ಕೃತವು ಹದಿನಾಲ್ಕು ಹದಿನೆಯ ಶತಮಾನದಲ್ಲಿ ಬಳಕೆಯಲ್ಲಿರುವ ಸಂಸ್ಕೃತ ಭಾಷೆಯಾದ್ದರಿಂದ ಸಿದ್ಧಾಂತಶಿಖಾಮಣಿಯು ಪ್ರಾಚೀನ ಋಷಿಪುಂಗವರ ಕೃತಿ ಎನ್ನಲು ಸಾಧ್ಯವಿಲ್ಲ.ಬಸವಣ್ಣನವರು ಭಾರತದ ಯೋಗಪರಂಪರೆಯ ಷಟ್ ಚಕ್ರಗಳನ್ನು ಷಟ್ ಸ್ಥಲಗಳನ್ನಾಗಿಸಿದರು; ಯೋಗಪರಂಪರೆಯ ಅಷ್ಟಶಕ್ತಿಕೇಂದ್ರಗಳನ್ನು ಅಷ್ಟಾವರಣಗಳನ್ನಾಗಿಸಿದರು.ಬಸವಣ್ಣನವರ ಪೂರ್ವದಲ್ಲಿಯೇ ಇದ್ದ ಕುರಿಹಿಕ್ಕೆಯಲ್ಲಿ ಪರಶಿವನನ್ನು ಕಂಡ ಕುರುಬಗೊಲ್ಲಾಳ.ವೀರಗೊಲ್ಲಾಳನ ಭಕ್ತಿಯನ್ನು,ವೀರಮಾಹೇಶ್ವರ ನಿಷ್ಠೆಯನ್ನು ಬಸವಾದಿ ಪ್ರಮಥರು ಕೊಂಡಾಡಿದ್ದಾರೆ.

‌ ಕುರುಬರೇ ಭಾರತದ ಮೂಲನಿವಾಸಿಗಳು.ಹರಪ್ಪ ನಾಗರಿಕತೆಯು ಕುರುಬರ ನಾಗರಿಕತೆಯು.ಹರಪ್ಪಾದ ಉತ್ಖನನಗಳಲ್ಲಿ ಸಿಕ್ಕ ಪಾಶುಪತಶಿವ ವಿಗ್ರಹವು ಕುರುಬರು ಈದೇಶದ ಮೂಲನಿವಾಸಿಗಳು ಎನ್ನುವದರ ಸಂಕೇತ.ಟಗರುದಲೆಯ ಪಶುಪತಿ ಶಿವನ ಸುತ್ತಲೂ ಕುರಿ ಆಡು ಕೋಣ ಮತ್ತು ಜಿಂಕೆಗಳ ಚಿತ್ರಗಳಿವೆ.ಶೈವಧರ್ಮವು ಭಾರತದ ಮೂಲ ಧರ್ಮವಾದರೆ ಪಾಶುಪತಶೈವವು ಅದರ ಮೂಲಮತವು.ಮೂಲತಃ ನೇಪಾಳದಲ್ಲಿ ಹುಟ್ಟಿದ ಪಾಶುಪತಶೈವವು ನಂತರದ ದಿನಗಳಲ್ಲಿ ಕಾಶ್ಮೀರದಲ್ಲಿ ಪ್ರವರ್ಧಮಾನಕ್ಕೆ ಬಂದಿತು.ನೇಪಾಳದಲ್ಲಿ ಪಶುಪತಿನಾಥನನ್ನು ಸ್ಥಾಪಿಸಿದವರು ಕುರುಬರೆ.ಮತ್ತು ಬಹುಕಾಲದವರೆಗೆ ಪಶುಪತಿನಾಥನ ನಿತ್ಯನೈಮಿತ್ತಿಕ ಪೂಜೆಯನ್ನು ಹಾಲುಮತದ ಪೂಜಾರಿಗಳೇ ನಿರ್ವಹಿಸುತ್ತಿದ್ದರು.ಇತ್ತೀಚಿನ ವರ್ಷಗಳಲ್ಲಿ ಬ್ರಾಹ್ಮಣ ಅರ್ಚಕರು ಪಶುಪತಿನಾಥನನ್ನು ಪೂಜಿಸುತ್ತಿದ್ದಾರಾದರೂ ವಿಶೇಷ ಉತ್ಸವಗಳ ಸಂದರ್ಭದಲ್ಲಿ ಅವರು ಕುರುಬರ ಅನುಮತಿಯನ್ನು ಪಡೆಯುವ ಪದ್ಧತಿ ಇಂದಿಗೂ ನೇಪಾಳದ ಪಶುಪತಿನಾಥ ದೇವಸ್ಥಾನದಲ್ಲಿದೆ.

ಶಿವನು ಜಗತ್ತಿನಲ್ಲಿ ಮೊದಲು ಕುರಿಕಾಯುವ ಕುರುಬನ ರೂಪದಲ್ಲಿ ಕಾಣಿಸಿಕೊಂಡನೆಂಬುದೇ ಪಾಶುಪತ ಶೈವ ಮತದ ದಾರ್ಶನಿಕ ಹಿನ್ನೆಲೆ.ಕುರಿ,ಕುರಿಹಟ್ಟಿ ಮತ್ತು ಕುರಿಕಾಯುವ ಕುರುಬ ಈ ತತ್ತ್ವತ್ರಯಗಳೆ ಪಶು ಪಾಶ ಮತ್ತು ಪತಿ ಎನ್ನುವ ಪಾಶುಪತ ಶೈವದ ಹಿನ್ನೆಲೆ.ಕಾಶ್ಮೀರಕ್ಕೆ ಕಾಲಿಟ್ಟ ಪಾಶುಪತ ಶೈವವು ಮತ್ತಷ್ಟು ಪರಿಷ್ಕರಣಗೊಂಡು ಪ್ರತ್ಯಭಿಜ್ಞ ತತ್ತ್ವವಾಗಿ ಪ್ರಕಟಗೊಂಡಿತು ಅಭಿನವಗುಪ್ತಾಚಾರ್ಯನಿಂದ.ಕಾಶ್ಮೀರ ಶೈವದ ಪ್ರಭಾವವು ಕರ್ನಾಟಕದಲ್ಲಿದ್ದ ಕಾಳಾಮುಖ ಶೈವರ ಮೇಲಾಯಿತು.ಕಾಳಾಮುಖ ಶೈವರ ಪ್ರಭಾವವು ವೀರಶೈವರ ಮೇಲಾಯಿತು.ಹೀಗಾಗಿ ಈ ದೇಶದ ಎಲ್ಲ ಶೈವಪರಂಪರೆಗಳ ಮೇಲೆ ಹಾಲುಮತದ ಪ್ರಭಾವ ಆಗಿದೆಯೇ ಹೊರತು ಇತರ ಮತಗಳ ಪ್ರಭಾವವು ಹಾಲುಮತದ ಮೇಲೆ ಆಗಿಲ್ಲ.

ಹಾಲುಮತ ಸಂಸ್ಕೃತಿಗೆ ಅನನ್ಯ ಕೊಡುಗೆ ನೀಡಿದ ಹಿರಿಯ ವಿದ್ವಾಂಸರಾಗಿದ್ದ ಎಂ ಎಂ ಕಲ್ಬುರ್ಗಿಯವರು ಒಂದೆಡೆ ‘ ಹಾಲುಮತ’ ಶಬ್ದದ ಬಳಕೆ ಇತ್ತೀಚಿನ ದಿನಗಳ ಮತಕಲ್ಪನೆಯಾಗಿದ್ದು ‘ ವೀರಶೈವ ಮತ’ ದ ಪ್ರಭಾವದಿಂದ ಆಗಿರಬೇಕು ಎಂದು ತರ್ಕಿಸಿದ್ದೇ ಶಾಶ್ವತಸ್ವಾಮಿ ಮುಕ್ಕುಂದಿಮಠ ಅವರು ಇಂತಹ ಅಭಿಪ್ರಾಯ ತಳೆಯಲು ಕಾರಣವಾಗಿರಬೇಕು.ನಾನಿಲ್ಲಿ ಒಂದು ಘಟನೆಯನ್ನು ಸ್ಮರಿಸಬಯಸುವೆ.ನಾನು ಈ ಹಿಂದೆ ರಾಯಚೂರು ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಇತಿಹಾಸ ಪ್ರಸಿದ್ಧ ನಮ್ಮೂರು ಗಬ್ಬೂರಿನ ಕುರಿತು ಅಧ್ಯಯನ ಮಾಡಲು ಅವರನ್ನು ಗಬ್ಬೂರಿಗೆ ಕರೆಯಿಸಿದ್ದೆ.ಗಬ್ಬೂರು ಹಿಂದೆ ಕಾಪಾಲಿಕ ಕಾಳಾಮುಖ ಸಿದ್ಧರನೆಲೆಯಾಗಿತ್ತಲ್ಲದೆ ವಚನಕಾರ ಜೇಡರದಾಸಿಮಯ್ಯನ ಹೆಂಡತಿ ದುಗ್ಗಲೆಯ ತವರೂರು ಆಗಿತ್ತು ಎನ್ನುವುದನ್ನು ಎಂ ಎಂ ಕಲ್ಬುರ್ಗಿಯವರ ಗಮನಕ್ಕೆ ತಂದು ಆ ಬಗ್ಗೆ ಅಧ್ಯಯನ ಮಾಡಲು ಅವರನ್ನು ಗಬ್ಬೂರಿಗೆ ಕರೆಯಿಸಿದ್ದೆ.ಕಲ್ಬುರ್ಗಿಯವರು ದುರಂತ ಅಂತ್ಯಕ್ಕೆ ಈಡಾಗುವ ಮೂರು ತಿಂಗಳ ಮುಂಚೆ ಗಬ್ಬೂರಿಗೆ ಬಂದಿದ್ದರು.ರಾಯಚೂರಿನ ನೃತಪತುಂಗ ಹೋಟೆಲಿನಲ್ಲಿ ಉಳಿದುಕೊಂಡಿದ್ದ ಅವರೊಂದಿಗೆ ಗಬ್ಬೂರಿನ ಐತಿಹಾಸಿಕ ಮಹತ್ವದ ಬಗ್ಗೆ ಚರ್ಚಿಸುವ ಸಂದರ್ಭದಲ್ಲಿ ಅವರು ಹಾಲುಮತದ ಬಗ್ಗೆ ವ್ಯಕ್ತಪಡಿಸಿದ್ದ ಅಭಿಪ್ರಾಯಕ್ಕಿಂತ ಭಿನ್ನವಾಗಿರುವ ಕುರುಬರ ಜನಪದ ಹಾಡುಗಳು,ಜನಪದ ಹಾಲುಮತಪುರಾಣಗಳ ಬಗ್ಗೆ ಪ್ರಸ್ತಾಪಿಸಿದ್ದೆನಲ್ಲದೆ ಎಂ ಎಂ ಕಲ್ಬುರ್ಗಿಯವರು ಭಾವಿಸಿದಂತೆ ಕಾಳಿದಾಸನ ವಿಕ್ರಮೋರ್ವಶೀಯ ನಾಟಕದ ಪ್ರೇರಣೆ ಮಹಾಭಾರತದ ಪ್ರಸಂಗವಾದರೂ ಅದರ ಮೂಲ ಋಗ್ವೇದದಲ್ಲಿದೆ ಎನ್ನುವುದನ್ನು ಎತ್ತಿತೋರಿಸಿದ್ದೆ.ತುಂಬ ಖುಷಿ ಪಟ್ಟಿದ್ದ ಎಂ ಎಂ ಕಲ್ಬುರ್ಗಿಯವರು ಮುಂದೆ ಈ ಕುರಿತು ಬರೆಯುವುದಾಗಿ ಹೇಳಿದ್ದರು.ವಿಧಿಯಾಟ ! ಬೇರೆಯದೆ ಕಥೆ ಆಯಿತು.ಬಹುಶಃ ಎಂ ಎಂ ಕಲ್ಬುರ್ಗಿಯವರು ಬದುಕಿದ್ದರೆ ಹಾಲುಮತದ ಪುರಾತನತೆಯ ಬಗ್ಗೆ ಖಂಡಿತವಾಗಿಯೂ ಬರೆಯುತ್ತಿದ್ದರು.ಅವರು ಬದುಕುಳಿಯಲಿಲ್ಲ ; ಆದರೆ ಅವರು ಬಹುಹಿಂದೆ ಬರೆದಿದ್ದ ವೀರಶೈವಮತದ ಕಲ್ಪನೆಯಲ್ಲಿ ಹಾಲುಮತ ರಚನೆಗೊಂಡ ಕಲ್ಪನೆ ಉಳಿದುಕೊಂಡಿತು.ಅದೇ ಕೆಲವರ ತಪ್ಪು ಗ್ರಹಿಕೆಗೆ ಕಾರಣವಾಯಿತು.

ಮೂರನೆಯದಾಗಿ ಹಾಲುಮತಧರ್ವವು ಯಾವ ಮತದ ಪ್ರಭಾವಕ್ಕೂ ಒಳಗಾಗದ ಸ್ವತಂತ್ರಮತ,ಧರ್ಮವಾಗಿದ್ದರಿಂದ ವೀರಶೈವ ಮತದ ಗುರು ಲಿಂಗ ಜಂಗಮ ಕಲ್ಪನೆಗಳೆ ಕುರಿ ಕಂಬಳಿ ಭಂಡಾರವಾಗಿವೆ ಎನ್ನುವುದು ತಪ್ಪುಗ್ರಹಿಕೆ ಎನ್ನುವುದು ನಾನು ಈ ಮೇಲೆ ನೀಡಿದ ವಿವರಣೆಯಿಂದ ಈಗಾಗಲೇ ಸ್ಪಷ್ಟಪಡುವುದರಿಂದ ಅದನ್ನು ಮತ್ತಷ್ಟು ವಿಸ್ತೃತವಾಗಿ ವಿವರಿಸುವ ಅಗತ್ಯವಿಲ್ಲ.

ಭಾರತದ ಮೂಲಧರ್ಮ ಶೈವ ಧರ್ಮ.ಶೈವ ಧರ್ಮದ ಉಪಧರ್ಮವಾಗಿ ಹಾಲು ಮತ,ಹಾಲುಮತ ಸಂಸ್ಕೃತಿ ಹುಟ್ಟಿತು ಎನ್ನುವದಕ್ಕೆ ವೀರಭದ್ರನ ದಕ್ಷಯಜ್ಞಧ್ವಂಸ ಪ್ರಸಂಗವೇ ಸಾಕ್ಷಿ.ದಕ್ಷನ ಪತ್ನಿಯ ಪ್ರಲಾಪ,ದೇವತೆಗಳ ಮೊರೆ ಮತ್ತು ಪರಶಿವನ ಆಜ್ಞೆಯಂತೆ ವೀರಭದ್ರನು ದಕ್ಷನಿಗೆ ಮರುಜೀವ ನೀಡಿ ಉದ್ಧರಿಸುತ್ತಾನೆ.ವೀರಭದ್ರನಿಂದ ತಲೆಕಡಿಸಿಕೊಂಡು ಯಜ್ಞಕುಂಡದಲ್ಲಿ ಬಿಸುಟಲ್ಪಡ ತಲೆಯ ದಕ್ಷನು ಮರುಹುಟ್ಟು ಪಡೆಯುವುದಾದರೂ ಹೇಗೆ ? ವೀರಭದ್ರನು ಕುರಿತಲೆಯನ್ನು ತರಿದು ಅದನ್ನು ದಕ್ಷನ ಮುಂಡಕ್ಕಿಡುವ ಮೂಲಕ ಪ್ರಾಣದಾನ ಮಾಡುತ್ತಾನೆ,ಕುರಿದಲೆಯವನಾಗಿ ಮರುಹುಟ್ಟುಪಡೆಯುತ್ತಾನೆ ದಕ್ಷ ! ಶಿವಸಂಸ್ಕೃತಿಯ ಉಪಸಂಸ್ಕೃತಿಯಾಗಿ,ಶೈವಧರ್ಮದ ಉಪಧರ್ಮವಾಗಿ ಹಾಲುಮತಧರ್ಮ ಕಾಣಿಸಿಕೊಂಡಿದ್ದರ ಪ್ರತೀಕವೇ ದಕ್ಷನು ಟಗರುತಲೆಯವನಾಗಿ ಮರುಹುಟ್ಟು ಪಡೆಯುವ ಪ್ರಸಂಗವು.ಶ್ರೀ ವೀರಭದ್ರನೇ ವೀರಶೈವಮತಸ್ಥಾಪನಾಚಾರ್ಯನಾಗಿದ್ದು ವೀರಭದ್ರನು ಅಹಂ ಅಳಿದುಕೊಂಡ ಶಿವನಲ್ಲಿ ಶರಣಾದ ದಕ್ಷನಿಗೆ ಬೋಧಿಸಿದ ಮತವೇ ವೀರಶೈವಮತವು.ವೀರಭದ್ರನೇ ದಕ್ಷನಿಗೆ ‘ ಓಂ ನಮಃ ಶಿವಾಯ’ ಮಂತ್ರವನ್ನು ಬೋಧಿಸಿ ಶಿವಪಾರಮ್ಯವನ್ನು ಪ್ರತಿಷ್ಠಾಪಿಸಿದ ಹಾಲುಮತದ ಮೂಲಪುರುಷ,ಆದಿಗುರು,ಅನಾದಿನಿರಂಜನ ತತ್ತ್ವದ ಸಂಕೇತ.ಬ್ರಾಹ್ಮಣ್ಯದ ಅಹಂ ಅಳಿದುಕೊಂಡ ದಕ್ಷನು ಕುರುಬರ ದಕ್ಷನಾಗುತ್ತಾನೆ.ಆತನೇ ಕುರುಬರ ಜನಪದ ಪುರಾಣಗಳ ದಕ್ಷಬ್ರಹ್ಮನು.ವಸ್ತುಸ್ಥಿತಿ ಹೀಗಿರುವಾಗ ಹಾಲುಮತದ ಮೇಲೆ ವೀರಶೈವ ಮತದ ಪ್ರಭಾವವಾಗಿದೆ ಎನ್ನುವುದು ಸುಳ್ಳು ಸಂಗತಿಯಲ್ಲವೆ ?

ಮಹಾಕವಿ ಕಾಳಿದಾಸನು ಮಹಾಭಾರತದ ಪ್ರಸಂಗವನ್ನು ಆಧರಿಸಿ ತನ್ನ ವಿಕ್ರಮೋವರ್ಶೀಯ ನಾಟಕವನ್ನು ಬರೆದಿದ್ದಾನೆ ಎಂದು ವಿಮರ್ಶಕರು ಗುರುತಿಸಿದ್ದಾರೆ.ಆದರೆ ಕಾಳಿದಾಸನು ಋಗ್ವೇದದ ಪ್ರಸಂಗವನ್ನು ಆಧರಿಸಿ ವಿಕ್ರಮೋರ್ವಶೀಯ ನಾಟಕವನ್ನು ಬರೆದಿದ್ದಾನೆ ಎನ್ನುವುದಕ್ಕೆ ಕಾಳಿದಾಸನ ಕಾವ್ಯಕ್ಕೂ ಋಗ್ವೇದದ ಪ್ರಸಂಗಕ್ಕೂ ಇರುವ ಸಾಮ್ಯವೇ ಸಾಕ್ಷಿ.ಸಿಂಧೂ ನದಿ ನಾಗರಿಕತೆಯು ಕುರುಬರ ನಾಗರಿಕತೆಯಾಗಿತ್ತು ಎನ್ನುವುದರ ಸೂಚನೆ ಋಗ್ವೇದದಲ್ಲಿದೆ.ಉತ್ತರಭಾರತದ ನದಿತೀರದ ಗಂಧರ್ವರ ಎರಡು ಪಂಗಡಗಳ ನಡುವೆ ವೈಮನಸ್ಸು ಇರುತ್ತದೆ.ಒಂದು ಪಂಗಡದ ಅರಸನಾಗಿದ್ದ ಪುರುರಸ್ಸು ( ವಿಕ್ರಮ)ನು ಊರ್ವಸಿಯನ್ನು ಮೋಹಿಸಿ ತನ್ನ ರಾಜ್ಯಕ್ಕೆ ಕರೆತರುವನು.ಬಹುಕಾಲವಾದರೂ ತಮ್ಮ ಗುಂಪಿಗೆ ಮರಳದ ಊರ್ವಸಿಯ ವರ್ತನೆಯಿಂದ ಬೇಸತ್ತ ಮತ್ತೊಂದು ಪಂಗಡದ ಗಂಧರ್ವರು ಊರ್ವಸಿಗೆ ಕುರಿಯ ಮೇಲೆ ವಿಪರೀತ ಮೋಹವಿದ್ದುದರಿಂದ ಅವಳ ಅಂತಃಪುರದಲ್ಲಿ ಮೊದಲ ದಿನ ಎಳೆಮರಿಸಮೇತ ಒಂದು ಆಡನ್ನು ಕಟ್ಟಿಬರುತ್ತಾರೆ.ಮರುದಿನ ತಾಯಿ ಆಡನ್ನು ಕದ್ದೊಯ್ಯುತ್ತಾರೆ.ಆಡುಮರಿ ಅಂಬಾ ಎಂದು ಅರಚುವುದರಿಂದ ಊರ್ವಸಿಯು ತಾಯಿ ಆಡನ್ನು ಹುಡುಕಿಕೊಂಡು ಹೊರಗೆ ಬಂದೇ ಬರುತ್ತಾಳೆ,ಅವಳನ್ನು ತಮ್ಮಕಡೆಗೆ ಕರೆದುಕೊಂಡು ಹೋಗಬೇಕು ಎನ್ನುವ ಆಲೋಚನೆಯಿಂದ.ಇದು ಋಗ್ವೇದದ ಪ್ರಸಂಗ.ಗಂಧರ್ವರು ಎಂದರೆ ಕುರುಬರು,ಪುರುರಸ್ಸುವೆಂಬುವನು ಭಾರತವನ್ನಾಳಿದ ಪುರಾತನ ಹಾಲುಮತದದೊರೆ.

ಕುರುಬರಿಂದ ಬೋಣಗಿ ಪಡೆಯುವ ಕಾರಣವು ಅವರು ಪರಿಶುದ್ಧರು ಎನ್ನುವುದಕ್ಕಿಂತ ಹೆಚ್ಚಾಗಿ ಅವರು ಭಾರತದ ಮೂಲನಿವಾಸಿಗಳು,ಮೂಲಜನಪದರಿಗೆ ಮೊದಲಗೌರವ ಸಲ್ಲಬೇಕು ಎನ್ನುವ ಸಾಂಸ್ಕೃತಿಕ ಚಿಂತನೆಯ ಹಿನ್ನೆಲೆಯಲ್ಲಿ ವ್ಯಾಪಾರೋದ್ಯೋಗಗಳನ್ನು ಪ್ರಾರಂಭಿಸುವ ಮುಂಚೆ‌ ಕುರುಬರಿಂದ ಬೋಣಿಗೆ ಪಡೆಯುತ್ತಾರೆ.ಕುರುಬರು ಲಕ್ಷ್ಮೀಪುತ್ರರು ಎನ್ನುವ ಭಾವನೆಯ ಹಿಂದೆಯೂ ಹಾಲುಮತಸಂಸ್ಕೃತಿಯ ಹಿನ್ನೆಲೆ ಇದೆ.ಪಾಂಡುರಂಗನಂತೆ‌ ಕೊಲ್ಲಾಪುರದ ಮಹಾಲಕ್ಷ್ಮೀಯೂ ಶಿವಭಕ್ತಳಾದ ಕುರುಬರ ಲಕ್ಕಮ್ಮನೆ ! ಆಕೆಯು ಶಿರೋಲಿಂಗಿಯು.ಕೊಲ್ಲಾಪುರದ ಮಹಾಲಕ್ಷ್ಮೀಯ ತಲೆಯಲ್ಲಿ ಲಿಂಗವಿದೆ.ಕುರುಬರ ಕಂಬಳಿಯು ಶಿವನ ಜಟೆಯಿಂದ ಮಾಡಲ್ಪಟ್ಟಿದೆ.ವೀರಭದ್ರನು ಶಿವನಜಟೆಯಿಂದ ಹುಟ್ಟುತ್ತಾನೆ.ವೀರಭದ್ರನು ಶಿವನ ಜಟೆಯಿಂದ ಹುಟ್ಟುವುದು,ಮಹಾಲಕ್ಷ್ಮೀಯು ತನ್ನ ಜಟೆಯಲ್ಲಿ ಶಿವಲಿಂಗವನ್ನಿಟ್ಟುಕೊಂಡಿರುವುದು,ಕುರುಬರು ಕಂಬಳಿ ಬೀಸಿ ಮಳೆತರುವುದು ಇವೆಲ್ಲ ಅಧ್ಯಯನ ಮಾಡಲೇಬೇಕಾದ ಕುರುಬರು ಭಾರತದ ನಿವಾಸಿಗಳು ಎನ್ನುವುದರ ಸುಳಿವುಗಳು.

೦೯.೦೨.೨೦೨೪

About The Author