ಕೆ.ಎಸ್.ಲತಾಕುಮಾರಿ ಅವರ ‘ ಅತಿರೇಕದ ವರ್ತನೆ’ ಗೆ ಸರಕಾರ ‘ಮೂಗುದಾರ’ ಹಾಕಿದ್ದು ಸರಿ

ಮೂರನೇ ಕಣ್ಣು : ಕೆ.ಎಸ್.ಲತಾಕುಮಾರಿ ಅವರ ‘ ಅತಿರೇಕದ ವರ್ತನೆ’ ಗೆ ಸರಕಾರ ‘ಮೂಗುದಾರ’ ಹಾಕಿದ್ದು ಸರಿ : ಮುಕ್ಕಣ್ಣ ಕರಿಗಾರ

ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿಯಾಗಿದ್ದ ಕೆ.ಎಸ್.ಲತಾಕುಮಾರಿಯವರನ್ನು ಸರಕಾರವು ಗಳಿಕೆಯ ರಜೆಯ ಮೇಲೆ ಕಳಿಸಿದ ಕ್ರಮದ ಔಚಿತ್ಯವನ್ನು ಕೆಲವರು ಪ್ರಶ್ನಿಸಿದ್ದಾರೆ.ಬಿಜೆಪಿಯ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ ಅವರು ಕೆಪಿಎಸ್ಸಿ ಕಾರ್ಯದರ್ಶಿಯವರನ್ನು ರಜೆಯಮೇಲೆ ಕಳಿಸಿದ್ದರಿಂದ ಸರಕಾರವೇ ಭ್ರಷ್ಟಾಚಾರಕ್ಕೆ ಅವಕಾಶ ಕಲ್ಪಿಸಿದಂತೆ ಆಗಿದೆ ಎನ್ನುವ ಅರ್ಥದ ಮಾತುಗಳನ್ನು ಆಡಿದ್ದಾರೆ.ವಿರೋಧಪಕ್ಷದಲ್ಲಿ ಇರುವುದರಿಂದ ಸರಕಾರದ ಪ್ರತಿನಡೆಯಲ್ಲಿ ತಪ್ಪನ್ನು ಹುಡುಕುವುದು ಅವರಿಗೆ ಸಹಜವಾಗಿದ್ದರಿಂದ ಬಸನಗೌಡ ಪಾಟೀಲ್ ಯತ್ನಾಳ ಅವರ ಟೀಕೆಯನ್ನು ‘ರಾಜಕಾರಣದ ಟೀಕೆ’ ಎಂದು ಪರಿಗಣಿಸಬಹುದೇ ಹೊರತು ಅವರ ಮಾತುಗಳು ಕರ್ನಾಟಕ ಲೋಕಸೇವಾ ಆಯೋಗವನ್ನು ಬಲಪಡಿಸಲು ಸಹಾಯಕವಾಗುವುದಿಲ್ಲ.

ಕೆ .ಎಸ್ .ಲತಾಕುಮಾರಿ ಅವರು ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿಯಾಗಿ ಹೆಚ್ಚುಸುದ್ದಿ ಮಾಡಿದ್ದರು.ಅವರ ಹಿಂದಿನ ಕಾರ್ಯದರ್ಶಿಯವರು ಕೂಡ ಕೆಪಿಎಸ್ ಸಿ ಅಧ್ಯಕ್ಷ ಶಿವಶಂಕ್ರಪ್ಪ ಸಾಹುಕಾರ ಅವರೊಂದಿಗೆ ಸಂಘರ್ಷಕ್ಕೆ ಇಳಿದಿದ್ದರಾದರೂ ಕೆ ಎಸ್ ಲತಾಕುಮಾರಿ ಅವರಂತೆ ತಮ್ಮ ಅಧಿಕಾರದ ‘ ಇತಿಮಿತಿ’ ಗಳನ್ನು ಮೀರಿ ವರ್ತಿಸಿರಲಿಲ್ಲ.ಆದರೆ ಕೆ.ಎಸ್.ಲತಾಕುಮಾರಿ ತಾವೊಬ್ಬ ಐಎಎಸ್ ಅಧಿಕಾರಿ ಎನ್ನುವುದನ್ನು ಮರೆತು ರಾಜಕಾರಣಿಗಳಂತೆ ವರ್ತಿಸಿದರು. ಅವರ ಪ್ರಚಾರಪ್ರಿಯತೆಯ ಹುಚ್ಚು ಅವರು ‘ಲಕ್ಷ್ಮಣರೇಖೆ’ಯನ್ನು ದಾಟುವಂತೆ ಮಾಡಿತು.ಭ್ರಷ್ಟಾಚಾರದ ಮೂಲವಾಗಿರುವ,ನಿಜವಾದ ಪ್ರತಿಭಾವಂತರುಗಳಿಗೆ ಅನ್ಯಾಯವೆಸಗುತ್ತಿರುವ ಕರ್ನಾಟಕ ಲೋಕಸೇವಾ ಆಯೋಗವನ್ನು ಶುದ್ಧೀಕರಿಸುವ,ತಿದ್ದಿತೀಡುವ ಅಗತ್ಯವಿದೆ ಎನ್ನುವುದನ್ನು ಸ್ವತಃ ಕರ್ನಾಟಕದ ಹೈಕೋರ್ಟ್ ಎರಡು ಮೂರು ಬಾರಿ ಚಾಟಿಬೀಸಿ ಹೇಳಿದೆ.ಕೆ ಎಸ್ ಲತಾಕುಮಾರಿ ಅವರಾಗಲಿ ಅಥವಾ ಮತ್ತಾರೇ ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿಗಳಾಗಲಿ ಕೆಪಿಎಸ್ಸಿಯನ್ನು ಪ್ರಾಮಾಣಿಕ ಸಂಸ್ಥೆಯನ್ನಾಗಿಸುವ, ಪ್ರತಿಭಾವಂತ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸುವ ಸಂಸ್ಥೆಯನ್ನಾಗಿ ರೂಪಿಸುವ ಸುಧಾರಣಾಕ್ರಮಗಳನ್ನು ತಮ್ಮ ಅಧಿಕಾರದ ಇತಿಮಿತಿಗಳಲ್ಲಿ ಕೈಗೊಳ್ಳಬಹುದು.ಆದರೆ ಸಂವಿಧಾನದ ಚೌಕಟ್ಟನ್ನು ಮೀರಿ ವರ್ತಿಸುವಂತಿಲ್ಲ.ಕರ್ನಾಟಕ ಲೋಕಸೇವಾ ಆಯೋಗವು ಒಂದು ಸಾಂವಿಧಾನಿಕ ಸಂಸ್ಥೆ.ಅದರ ಅಧ್ಯಕ್ಷರು ಮತ್ತು ಸದಸ್ಯರುಗಳಿಗೆ ಸಾಂವಿಧಾನಿಕ ಹೊಣೆಗಾರಿಕೆಗಳಿವೆ.ಆರುವರ್ಷದ ಅವಧಿಗೆ ನೇಮಕಗೊಳ್ಳುವ ಕೆಪಿಎಸ್ಸಿಯ ಅಧ್ಯಕ್ಷರು ಮತ್ತು ಸದಸ್ಯರುಗಳು ರಾಜಕೀಯಹಸ್ತಕ್ಷೇಪಕ್ಕೆ ಅವಕಾಶನೀಡದಂತೆ ಕಾರ್ಯನಿರ್ವಹಿಸಬೇಕು.ಆದರೆ ರಾಜಕಾರಣಿಗಳೇ ಕೆಪಿಎಸ್ಸಿಯ ಅಧ್ಯಕ್ಷರು,ಸದಸ್ಯರುಗಳನ್ನು ನೇಮಿಸುತ್ತಿರುವಾಗ ಕೆಪಿಎಸ್ಸಿಯ ಅಧ್ಯಕ್ಷರು ಮತ್ತು ಸದಸ್ಯರು ರಾಜಕೀಯಪ್ರಭಾವಮುಕ್ತವಾಗಿ ಕಾರ್ಯನಿರ್ವಹಿಸಲು ಸಾಧ್ಯವೆ ?ಅಲ್ಲದೆ ಆಡಳಿತ, ಶಿಕ್ಷಣ,ಸಾರ್ವಜನಿಕಸೇವೆ,ವಿಜ್ಞಾನ,ವೈದ್ಯಕೀಯಗಳಂತಹ ಕ್ಷೇತ್ರಗಳಲ್ಲಿನ ಸಿದ್ಧವ್ಯಕ್ತಿತ್ವದ ಪ್ರಸಿದ್ಧರುಗಳನ್ನು ಕೆಪಿಎಸ್ಸಿಯ ಅಧ್ಯಕ್ಷರು,ಸದಸ್ಯರುಗಳನ್ನಾಗಿ ನೇಮಿಸಿದರೆ ಅಂಥವರುಗಳಿಂದ ಪ್ರತಿಭಾವಂತ ಅಭ್ಯರ್ಥಿಗಳಿಗೆ ನ್ಯಾಯ ಸಿಗಲು ಸಾಧ್ಯ.ಪಕ್ಷರಾಜಕಾರವೇ ಸರ್ವಸ್ವವಾಗಿ ಆಡಳಿತಾರೂಢ ಪಕ್ಷದ ಕಾರ್ಯಕರ್ತರುಗಳೇ ಕೆಪಿಎಸ್ಸಿಗೆ ನೇಮಕಗೊಳ್ಳುತ್ತಿರುವುದರಿಂದ ಅದು ಪ್ರಬುದ್ಧರ,ಚಿಂತಕರ ವೇದಿಕೆಯಾಗಿ ಉಳಿದಿಲ್ಲ.ಕೆಪಿಎಸ್ಸಿಯ ಈಗಿನ ಅಧ್ಯಕ್ಷ ಶಿವಶಂಕ್ರಪ್ಪ ಸಾಹುಕಾರ ಅವರೇ ಕೆಪಿಎಸ್ಸಿಯ ಇಂದಿನ ಬಹುತೇಕ ಸಮಸ್ಯೆಗಳ ಕಾರಣ.ಕೆಪಿಎಸ್ಸಿಯ ಅಧ್ಯಕ್ಷರಾಗಲು ಅರ್ಹರಲ್ಲದ ಅವರು ರಾಜ್ಯಬಿಜೆಪಿಯ ಅಧ್ಯಕ್ಷರಾದ ಬಿ.ಎಸ್.ವಿಜಯೇಂದ್ರ ಅವರ ‘ಕೃಪಾಕಟಾಕ್ಷ’ ದಿಂದ ಕೆಪಿಎಸ್ಸಿಯ ಅಧ್ಯಕ್ಷಗಿರಿಯನ್ನು ಪಡೆದು ‘ಕೊಂಡ’ವರು.ಸಾರ್ವಜನಿಕ ಆಡಳಿತದ ಅನುಭವವಾಗಲಿ,ಸಾರ್ವಜನಿಕ ಕ್ಷೇತ್ರಕ್ಕೆ ಗಣನೀಯ ಕೊಡುಗೆಯನ್ನಾಗಲಿ ಸಲ್ಲಿಸದ ಶಿವಶಂಕ್ರಪ್ಪ ಸಾಹುಕಾರ ಅವರನ್ನು ಕೆಪಿಎಸ್ಸಿಯ ಅಧ್ಯಕ್ಷರನ್ನಾಗಿ ನೇಮಿಸಿದ ಸರಕಾರದ ಕ್ರಮವೇ ಸರಿಯಲ್ಲ ! ಶಿವಶಂಕ್ರಪ್ಪ ಸಾಹುಕಾರ ಅವರ ಬಗ್ಗೆ ಹಲವು ಆರೋಪಗಳಿವೆ.ಅವರು ಈ ಹಿಂದೆ ಕರ್ತವ್ಯ ನಿರ್ವಹಿಸಿದ್ದರು ಎನ್ನಲಾದ ಸಹಕಾರ ಇಲಾಖೆಯ ಅವರ ಕಾರ್ಯವೈಖರಿ,ಕಾರ್ಯಾನುಭವವೇ ಪ್ರಶ್ನಾರ್ಹವಾಗಿತ್ತು.ಆದರೂ ಅವರು ಕೆಪಿಎಸ್ಸಿಯ ಸದಸ್ಯರಾಗಿ,ಅಧ್ಯಕ್ಷರಾಗಿ ನೇಮಕಗೊಂಡರು.ಐಎಎಸ್ ಅಧಿಕಾರಿಗಳು ಗಟ್ಟಿಗರಾದ ರಾಜಕಾರಣಿಗಳಿಗೆ ಮಾತ್ರ ಹೆದರುತ್ತಾರೆ,ಸತ್ತ್ವ ತತ್ತ್ವಗಳನ್ನುಳ್ಳ ರಾಜಕಾರಣಿಗಳನ್ನು ಗೌರವಿಸುತ್ತಾರೆ.ಕೆಪಿಎಸ್ಸಿಯ ಅಧ್ಯಕ್ಷರಾದ ಶಿವಶಂಕ್ರಪ್ಪ ಸಾಹುಕಾರ ಅವರ ನೆಲೆ ಹಿನ್ನೆಲೆಯನ್ನು ಗಮನಿಸಿದ ಕೆಪಿಎಸ್ಸಿಯ ಕಾರ್ಯದರ್ಶಿಗಳೆಲ್ಲರೂ ಅಧ್ಯಕ್ಷರಾಗಿದ್ದ ಶಿವಶಂಕ್ರಪ್ಪ ಸಾಹುಕಾರ ಅವರನ್ನು ಕಡೆಗಣಿಸುತ್ತಲೇ ಬಂದರು.ಇದರ ಕಾರಣ ಏನು ಎಂದು ಶಿವಶಂಕ್ರಪ್ಪ ಸಾಹುಕಾರ ಆತ್ಮಾವಲೋಕನ ಮಾಡಿಕೊಳ್ಳಬೇಕಿತ್ತು.ಬದಲಿಗೆ ಅವರು ಕೆಪಿಎಸ್ಸಿಯ ಸದಸ್ಯರುಗಳಲ್ಲಿಯೇ ತಮಗೆ ‘ ನಿಷ್ಠರಾದವರು’ ಮತ್ತು ‘ ನಿಷ್ಠರಲ್ಲದವರು’ ಎಂದು ಎರಡುವರ್ಗಗಳನ್ನಾಗಿ ವಿಭಜಿಸಿದರು.ಕೆಪಿಎಸ್ಸಿಯ ಅಧ್ಯಕ್ಷರಾಗುವುದು ತಮ್ಮಜೀವನದ ಸೌಭಾಗ್ಯ ಎಂದು ತಿಳಿದು ಶಿವಶಂಕ್ರಪ್ಪ ಸಾಹುಕಾರ ಕೆಪಿಎಸ್ಸಿಯ ಕಾರ್ಯದರ್ಶಿಗಳೊಂದಿಗೆ ಸಹಕರಿಸಿ,ಕಾನೂನು ನಿಯಮಗಳಂತೆ ವರ್ತಿಸಬೇಕಿತ್ತು.ಬದಲಿಗೆ ಸರ್ವಾಧಿಕಾರಿ ಧೋರಣೆಯಿಂದ ವರ್ತಿಸಿದರು,ಪ್ರತಿಯೊಂದರಲ್ಲಿ ತಮ್ಮದೆ ನಡೆಯಬೇಕು ಎನ್ನುವ ಹಠಕ್ಕೆ ಬಿದ್ದರು.ತಾವು ನೇಮಿಸಿದ‌ಅಧಿಕಾರಿಗೆ ನೇಮಕಾತಿ ಆದೇಶ ನೀಡದ ಹೊರತು ಕೆಪಿಎಸ್ಸಿಯ ಸಭೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ಹಠಹಿಡಿದದ್ದು,ತಾವು ನೇಮಿಸಿದ ಅಧಿಕಾರಿಯನ್ನೇ ಕಾನೂನು ಕೋಶದ ಮುಖ್ಯಸ್ಥರು ಎಂದು ಆದೇಶಹೊರಡಿಸಲು ಪಟ್ಟುಹಿಡಿದದ್ದು ಶಿವಶಂಕ್ರಪ್ಪ ಸಾಹುಕಾರ ಅವರ ಪ್ರಬುದ್ಧ ವರ್ತನೆಯೇನಲ್ಲ.ಕಾನೂನು ತೊಡಕುಗಳ ಬಗ್ಗೆ ಅವರು ಕಾರ್ಯದರ್ಶಿ ಅವರೊಂದಿಗೆ ಸಮಾಲೋಚಿಸಿ,ಜಾಣತನದ ಪರಿಹಾರ ಕಂಡುಕೊಳ್ಳಬಹುದಿತ್ತು.

ಇನ್ನು ಕೆಪಿಎಸ್ಸಿ ಕಾರ್ಯದರ್ಶಿಯಾಗಿದ್ದ ಕೆ.ಎಸ್.ಲತಾಕುಮಾರಿಯವರ ಬಗ್ಗೆ ಹೇಳುವುದಾದರೆ ಅವರು ಕೆಪಿಎಸ್ಸಿ ಕಾರ್ಯದರ್ಶಿ ಹುದ್ದೆಯ ಸಾಂವಿಧಾನಿಕ ಚೌಕಟ್ಟನ್ನು ಮೀರಿ ವರ್ತಿಸಿದರು.ಐಎಎಸ್ ಅಧಿಕಾರಿ ಆದ ಮಾತ್ರಕ್ಕೆ ಸಂವಿಧಾನಕ್ಕಿಂತ ದೊಡ್ಡವರಲ್ಲ,ಕಾನೂನಿಗಿಂತ ದೊಡ್ಡವರಲ್ಲ.ಕೆ ಪಿ ಎಸ್ ಸಿ ಯು ಒಂದು ಸಾಂವಿಧಾನಿಕ ಸ್ವಾಯತ್ತ ಸಂಸ್ಥೆ ಎನ್ನುವುದನ್ನು ಮೊದಲು ಅರ್ಥಮಾಡಿಕೊಳ್ಳಬೇಕಿತ್ತು ಕೆ ಎಸ್ ಲತಾಕುಮಾರಿ ಅವರು.ಕೆ ಪಿ ಎಸ್ ಸಿ ಗೆ ಅದರದ್ದೇ ಆದ ಘನತೆಗೌರವ ಇದೆ,ಸ್ವಾಯತ್ತ ಸ್ಥಾನಮಾನವಿದೆ.ಕೆಪಿಎಸ್ಸಿಯ ಕಾರ್ಯದರ್ಶಿ ಆಗಿ ಆ ಸಂಸ್ಥೆಯು ಕಾನೂನಿಗನುಗುಣವಾಗಿ ಕಾರ್ಯನಿರ್ವಹಿಸುತ್ತಿದೆ,ಪ್ರಾಮಾಣಿಕತೆಯನ್ನು ಕಾಯ್ದುಕೊಂಡಿದೆ,ಪಾರದರ್ಶಕ ಕಾರ್ಯವಿಧಾನವನ್ನಳವಡಿಸಿಕೊಂಡಿದೆ ಎಂಬುದನ್ನಷ್ಟೇ ಖಚಿತಪಡಿಸಿಕೊಂಡರೆ ಸಾಕಿತ್ತು.ಆದರೆ ಕೆ ಎಸ್ ಲತಾಕುಮಾರಿಯವರು’ ಕೆ ಪಿ ಎಸ್ ಸಿ ಯು ಸರಿಯಿಲ್ಲ,ಇದನ್ನು ಉದ್ಧರಿಸಲೆಂದೇ ನಾನು ಬಂದಿದ್ದೇನೆ’ ಎನ್ನುವ ಪೂರ್ವಗ್ರಹಪೀಡಿತ ಮನೋಭಾವನೆಯಿಂದ ಕಾರ್ಯನಿರ್ವಹಿಸಿದರು.ಕೆಪಿಎಸ್ಸಿಯ ಕಾರ್ಯದರ್ಶಿಯು ಅದರ ಅಧ್ಯಕ್ಷ ಮತ್ತು ಸದಸ್ಯರು ಕಾನೂನುಬಾಹಿರವಾಗಿ ವರ್ತಿಸಿದಾಗ ಆ ವರ್ತನೆ ಕಾನೂನಿಗೆ ವಿರುದ್ಧವಾದ,ಸಂವಿಧಾನದ ಆಶಯಗಳನ್ನು ಗಾಳಿಗೆ ತೂರುವ ನಿರ್ಧಾರ ಎನ್ನುವುದನ್ನು ಅವರಗಮನಕ್ಕೆ ತರುವ ಕಾರ್ಯಮಾಡಬೇಕಿತ್ತೇ ಹೊರತು ಕೆಪಿಎಸ್ಸಿಯ ಮೇಲೆ ‘ ಸವಾರಿ’ ಮಾಡುವ ಅಗತ್ಯವಿರಲಿಲ್ಲ; ಐಎಎಸ್ ಅಧಿಕಾರಿಯಾಗಿದ್ದರೂ ಅವರಿಗೆ ಆ ಅಧಿಕಾರ ಇಲ್ಲ.ಕೆಪಿಎಸ್ಸಿಯ ಆಡಳಿತ ಮಂಡಳಿಯು ಕಾನೂನು ನಿಯಮಗಳಿಗೆ ವಿರುದ್ಧವಾಗಿ ವರ್ತಿಸುತ್ತಿದೆ ಎನ್ನಿಸಿದರೆ ಅಧ್ಯಕ್ಷರಿಗೆ ಲಿಖಿತ ಟಿಪ್ಪಣಿ ನೀಡಿ ತಟಸ್ಥರಾಗಿರಬೇಕಿತ್ತು.ಆದರೆ ಲತಾಕುಮಾರಿಯವರು ಡಿಪಿಆರ್ ನ ಕಾರ್ಯದರ್ಶಿಗಳಿಗೆ,ಸರಕಾರದ ಮುಖ್ಯಕಾರ್ಯದರ್ಶಿಗಳಿಗೆ ಕೆಪಿಎಸ್ಸಿಯ ಅಧ್ಯಕ್ಷರು ಮತ್ತು ಕೆಲಸದಸ್ಯರಗಳ ಬಗ್ಗೆ ಲಿಖಿತ ದೂರು ನೀಡಿದರು.ಇಷ್ಟಕ್ಕೆ ಸುಮ್ಮನಿದ್ದರೆ ಅವರನ್ನು ಸಮರ್ಥಿಸಬಹುದಿತ್ತು.ಕೆ ಪಿ ಎಸ್ ಸಿಯ ಅಧ್ಯಕ್ಷರು ಮತ್ತು ಕೆಲ ಸದಸ್ಯರುಗಳನ್ನು ಹುದ್ದೆಯಿಂದ ತೆಗೆದುಹಾಕುವಂತೆ ರಾಜ್ಯಪಾಲರಿಗೆ ಪತ್ರ ಬರೆದರು.ಇದು ಅವರ ಉದ್ಧಟತನದ ಪರಮಾವಧಿ ! ರಾಜ್ಯದ ಮುಖ್ಯಕಾರ್ಯದರ್ಶಿಗಳ ಮೂಲಕವೇ ರಾಜ್ಯಪಾಲರಿಗೆ ದೂರು ನೀಡಿದ್ದಾರಾದರೂ ಅದು ಅವರ ಅಧಿಕಾರವ್ಯಾಪ್ತಿಯನ್ನು ಮೀರಿದ,ಅತಿರೇಕದ ನಡೆ.ಕೆಪಿಎಸ್ಸಿಯ ಅಧ್ಯಕ್ಷರು ಸ್ವಾಯತ್ತ ಸಂಸ್ಥೆಯ ಮುಖ್ಯಸ್ಥರು ಆಗಿರುವುದರಿಂದ ಅವರು ರಾಜ್ಯಸರಕಾರದ ಮುಖ್ಯಕಾರ್ಯದರ್ಶಿಯವರ ಅಧಿಕಾರವ್ಯಾಪ್ತಿಗೆ ಒಳಪಡುವುದಿಲ್ಲ.ಆದರೆ ಕೆಪಿಎಸ್ಸಿಯ ಕಾರ್ಯದರ್ಶಿಯಾದರೂ ಐಎಎಸ್ ಅಧಿಕಾರಿಯಾಗಿರುವ ಲತಾಕುಮಾರಿಯವರು ಮುಖ್ಯಕಾರ್ಯದರ್ಶಿಯವರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸಬೇಕಾದ ಅಧಿಕಾರಿ.ಅವರು ತಮ್ಮ ದೂರು ದುಮ್ಮಾನಗಳನ್ನು ಮುಖ್ಯಕಾರ್ಯದರ್ಶಿಯವರಿಗೆ ಸಲ್ಲಿಸಬೇಕಿತ್ತೇ ಹೊರತು ರಾಜ್ಯಪಾಲರಿಗಲ್ಲ.ಕೆಪಿಎಸ್ಸಿ ಅಧ್ಯಕ್ಷ ಮತ್ತು ಕೆಲವು ಜನ ಸದಸ್ಯರುಗಳನ್ನು ಅಧಿಕಾರದಿಂದ ಕೆಳಗಿಳಿಸಲು ರಾಜ್ಯಪಾಲರಿಗೆ ಶಿಫಾರಸ್ಸು ಮಾಡಿದ ಲತಾಕುಮಾರಿಯವರ ವರ್ತನೆಯು ಅವರ ಪ್ರಚಾರಪ್ರಿಯತೆಯ ತೆವಳು ಅಲ್ಲದೆ ಸಮರ್ಥನೀಯ ಕಾರ್ಯವಲ್ಲ.ಕೆಪಿಎಸ್ಸಿಯ ನಿಯಮಗಳಲ್ಲಿ ಇದಕ್ಕೆ ಅವಕಾಶವೂ ಇಲ್ಲ.

ಇದಲ್ಲದೆ ಕೆಪಿಎಸ್ಸಿ ಅಧ್ಯಕ್ಷರು ಅಭ್ಯರ್ಥಿಗಳ ಆಯ್ಕೆ ಸಮಿತಿಯ ಸಭೆಗೆ ಹಾಜರಾಗಿ ತಮ್ಮ ಅಸಮ್ಮತಿ ಪತ್ರವನ್ನು ಕಾರ್ಯದರ್ಶಿಯವರ ಮೂಲಕ ಓದಿಸಿ ಸಭೆಯಿಂದ ಎದ್ದುಹೋದ ಬಳಿಕ ಲತಾಕುಮಾರಿಯವರು ಉಳಿದ ಸದಸ್ಯರುಗಳನ್ನಿಟ್ಟುಕೊಂಡು,ಆ ಸದಸ್ಯರಲ್ಲಿ ಹಿರಿಯರಾದವದನ್ನು ಸಭಾಧ್ಯಕ್ಷರನ್ನಾಗಿ ಮಾಡಿ ಆಯ್ಕೆಪಟ್ಟಿಯನ್ನು ಅಂತಿಮಗೊಳಿಸಿದ್ದು ಸರಿಯಲ್ಲ.ಅದಕ್ಕೆ ಕೆಪಿಎಸ್ಸಿ ನಿಯಮಾವಳಿಗಳಲ್ಲಿ ಅವಕಾಶವಿಲ್ಲ.ಕೆಪಿಎಸ್ಸಿಯ ಅಧ್ಯಕ್ಷರು ಅನಾರೋಗ್ಯ ಅಥವಾ ಮತ್ತಾವುದೋ ಬಲವಾದ ಕಾರಣಗಳಿಂದ ಗೈರುಹಾಜರಾಗಿದ್ದರೆ ಮತ್ತು ಸನ್ನಿವೇಶವು ತೀರ ಅನಿವಾರ್ಯ ಎನ್ನುವಂತಿದ್ದರೆ ಮಾತ್ರ ಕೆಪಿಎಸ್ಸಿಯ ಕಾರ್ಯದರ್ಶಿಯವರು ಲೋಕಸೇವಾ ಆಯೋಗದ ಹಿರಿಯ ಸದಸ್ಯರನ್ನು ಸಭೆಯ ಅಧ್ಯಕ್ಷರನ್ನಾಗಿಸಿ ನಿರ್ಣಯಗಳನ್ನು ಅಂಗೀಕರಿಸಬಹುದು.ಆದರೆ ಲತಾಕುಮಾರಿಯವರು ಕೆಪಿಎಸ್ಸಿ ಅಧ್ಯಕ್ಷರ ಅಸಮ್ಮತಿಯ ಲಿಖಿತ ಪತ್ರವನ್ನು ತಾವೇ ಸಭೆಯಲ್ಲಿ ಓದಿಯೂ ಸಭೆ ನಡೆಸಿದ್ದು ನಿಯಮಬಾಹಿರವಾಗಿದೆ.ನಾಳೆ ಶಿವಶಂಕ್ರಪ್ಪ ಸಾಹುಕಾರ ಅವರು ಆಯ್ಕೆಪಟ್ಟಿಗೆ ಹೈಕೋರ್ಟಿನಿಂದ ತಡೆಯನ್ನು ತಂದರೆ ತೊಂದರೆಗೊಳಗಾಗಬೇಕಾದವರು ಅಭ್ಯರ್ಥಿಗಳು ತಾನೆ ? ಈ ಪ್ರತಿಷ್ಠೆಯನ್ನು ಪ್ರದರ್ಶಿಸುವ ಅಗತ್ಯವಿತ್ತೆ ಲತಾಕುಮಾರಿಯವರಿಗೆ ?

ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಈಗ ಕರ್ನಾಟಕ ಲೋಕಸೇವಾ ಆಯೋಗದ ಬಗ್ಗೆ ಸಕಾರಾತ್ಮವಾಗಿ ಪ್ರತಿಕ್ರಿಯಿಸಿ ಅದನ್ನು ಸರಿದಾರಿಗೆ ತರುವ ಪ್ರಯತ್ನ ಮಾಡಬೇಕಿದೆ.ಕೆಪಿಎಸ್ಸಿಯ ಅಧ್ಯಕ್ಷರು,ಸದಸ್ಯರುಗಳನ್ನು ಯಾರೇ ನೇಮಿಸಿರಲಿ ಕರ್ನಾಟಕ ಲೋಕಸೇವಾ ಆಯೋಗವು ಸಾಂವಿಧಾನಿಕ ಸ್ವತಂತ್ರಸಂಸ್ಥೆಯಾಗಿರುವದರಿಂದ ಆಯೋಗದ ಘನತೆ ಗೌರವಗಳನ್ನು ಎತ್ತಿಹಿಡಿಯಲು ಈಗಿರುವ ಆಡಳಿತ ಮಂಡಳಿಯೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸಬಲ್ಲ ಆದರೆ ನಿಯಮನಿಷ್ಠ ಅಧಿಕಾರಿ ಒಬ್ಬರನ್ನು ಕೆಪಿಎಸ್ಸಿಯ ಕಾರ್ಯದರ್ಶಿಯನ್ನಾಗಿ ನೇಮಿಸಬೇಕು.ಕೆಪಿಎಸ್ಸಿಯ ಕಾರ್ಯದರ್ಶಿಯಾಗಲು ಐಎಎಸ್ ಅಧಿಕಾರಿಗಳೇಬೇಕಿಲ್ಲ.ನಿಯಮಾವಳಿಗೆ ತಿದ್ದುಪಡಿ ಮಾಡಿ ಕೆ ಎ ಎಸ್ ಅಥವಾ ಸಾಮಾನ್ಯ ಆಡಳಿತದ ಇಲ್ಲವೆ ಸಾರ್ವಜನಿಕ ಸೇವೆಯಲ್ಲಿ ಪರಿಣತಿಗೆ ಹೆಸರಾಗಿರುವ ಯಾವುದೇ ಇಲಾಖೆಯ ಹಿರಿಯ ಅಧಿಕಾರಿಯನ್ನು ಕೆಪಿಎಸ್ಸಿಯ ಕಾರ್ಯದರ್ಶಿಯನ್ನಾಗಿ ನೇಮಿಸಿ ಅದರ ಸುಗಮಕಾರ್ಯನಿರ್ವಹಣೆಗೆ ಅವಕಾಶ ಮಾಡಿಕೊಡಬೇಕು.

೦೯.೦೨.೨೦೨೪

About The Author