ಭಕ್ತರಿಗೆ ಶಿವನಾಮವೇ ಕಾಮಧೇನು !

 ಬಸವೋಪನಿಷತ್ತು ೩೭ : ಭಕ್ತರಿಗೆ ಶಿವನಾಮವೇ ಕಾಮಧೇನು ! : ಮುಕ್ಕಣ್ಣ ಕರಿಗಾರ

ಜಪ– ತಪ– ನಿತ್ಯನೇಮವೆನುಗುಪದೇಶ ;
ನಿಮ್ಮ ನಾಮವೆನಗೆ ಮಂತ್ರ,
ಶಿವನಾಮವೆನಗೆ ತಂತ್ರ,
ಕೂಡಲ ಸಂಗಮದೇವಯ್ಯಾ,ನಿಮ್ಮ ನಾಮ ಕಾಮಧೇನುವೆನಗೆ.

ಶಿವನಾಮವನ್ನು ಸ್ಮರಿಸುತ್ತ,ಜಪಿಸುತ್ತ ಭಕ್ತರು ಬೇಕಾದುದೆಲ್ಲವನ್ನು ಪಡೆಯಬಹುದೆಂದು ಉಪದೇಶಿಸಿದ್ದಾರೆ ಬಸವಣ್ಣನವರು ಈ ವಚನದಲ್ಲಿ.ಗುರುದೀಕ್ಷೆಯನ್ನು ಪಡೆಯುವ ಸಂದರ್ಭದಲ್ಲಿ ಶ್ರೀಗುರುವು ಶಿವನಾಮವನ್ನು ಅನುಗಾಲವು ಜಪಿಸುತ್ತಿರಬೇಕು,ಶಿವನನ್ನು ಕುರಿತು ಧ್ಯಾನಿಸುತ್ತಿರಬೇಕು ಎಂದು ನನಗೆ ಉಪದೇಶಿಸಿದ್ದಾನೆ ಎನ್ನುವ ಬಸವಣ್ಣನವರು ಶಿವಭಕ್ತರು ನಿತ್ಯನಿರಂತರ ಶಿವಸ್ಮರಣೆಯೊಳಿರಬೇಕು ಎನ್ನುತ್ತಾರೆ.ಶಿವನಾಮವೆ ಮಂತ್ರವು.ಭಕ್ತನಿಗೆ ಶಿವನಾಮವೇ ತಂತ್ರವು.ಶಿವನಾಮವು ಭಕ್ತರ ಇಷ್ಟಾರ್ಥಗಳನ್ನೆಲ್ಲ ಈಡೇರಿಸುವ ದೇವಲೋಕದ ಹಸುವಾದ ಕಾಮಧೇನುವಿನಂತೆ ಎಂದಿದ್ದಾರೆ ಬಸವಣ್ಣನವರು.

ಬಸವಣ್ಣನವರು ಈ ವಚನದಲ್ಲಿ ಶಿವಧ್ಯಾನ– ಪೂಜೆಗಳನ್ನು ಅನುದಿನವೂ ನಿತ್ಯನಿರಂತರವಾಗಿ ಮಾಡುತ್ತಿರಬೇಕು ಎನ್ನುತ್ತಾರೆ.ಶ್ರೀಗುರುವು ಶಿಷ್ಯನಿಗೆ ಶಿವಮಂತ್ರೋಪದೇಶವನ್ನು ಕರುಣಿಸುವಾಗ ನಿತ್ಯಶಿವಾರ್ಚನೆ,ಲಿಂಗಾರ್ಚನೆ ಮಾಡಬೇಕು ಎಂದು ಉಪದೇಶಿಸುತ್ತಾನೆ.ಶಿವದೀಕ್ಷೆಯನ್ನು ಪಡೆದವನು ಶಿವಸಾಕ್ಷಾತ್ಕಾರವನ್ನು ಪಡೆಯಬೇಕಾದರೆ,ಪರಶಿವನನ್ನು ಪ್ರತ್ಯಕ್ಷವಾಗಿ ಕಾಣಬೇಕಾದರೆ ನಿತ್ಯವೂ ಶಿವಪೂಜೆ,ಶಿವಧ್ಯಾನ ಮಾಡುತ್ತಿರಬೇಕು.ಶಿವನಾಮವೇ ಭಕ್ತನಿಗೆ ಮಹಾಮಂತ್ರವು.ಲೋಕದಲ್ಲಿ ಲಕ್ಷಾಂತರ ಮಂತ್ರಗಳಿರಬಹುದು ಆದರೆ ಆ ಯಾವ ಮಂತ್ರಗಳು ಶಿವನಾಮಕ್ಕೆ ಸಾಟಿಯಾಗಲಾರವು.ಆದ್ದರಿಂದ ಶಿವನಾಮವು ಮಹಾಮಂತ್ರವು.ಶಿವನಲ್ಲಿ ನಿಜನಿಷ್ಠೆಯನ್ನುಳ್ಳ ಭಕ್ತರಿಗೆ ಶಿವನಾಮವೇ ತಂತ್ರವು.ತಂತ್ರ ಎಂದರೆ ಕೆಲವು ನಿರ್ದಿಷ್ಟ ವಿಧಾನಗಳ ಮೂಲಕ ಇಷ್ಟಾಪೂರ್ತಿಮಾಡಿಕೊಳ್ಳುವ ಸಾಧನವು.ಸಾಕ್ಷಾತ್ಕರವು ದೀರ್ಘಕಾಲದ ಧ್ಯಾನ ತಪಸ್ಸಿನ ಫಲವಾದರೆ ತಂತ್ರಸಾಧನೆಯಿಂದ ಸಾಧಕನು ತನ್ನ ಇಷ್ಟಾರ್ಥಗಳನ್ನು ಬೇಗನೆ ಈಡೇರಿಸಿಕೊಳ್ಳಬಲ್ಲನು.ಶಿವಭಕ್ತರಿಗೆ ಶಿವನಾಮವೇ ಕಾಮಧೇನುಸ್ವರೂಪವಾಗಿ ಅವರ ಇಷ್ಟಾರ್ಥಗಳನ್ನೆಲ್ಲ ಈಡೇರಿಸುತ್ತದೆ.ಕಾಮಧೇನುವು ದೇವಲೋಕದ ಹಸುವಾಗಿದ್ದು ದೇವತೆಗಳು ಮನುಷ್ಯರಂತೆ ಅಟ್ಟುಣ್ಣಲಾರರಾದ್ದರಿಂದ ಅಭೌತಿಕಕಾಯರಾದ,ಅತಿಕಾಯರಾದ ದೇವತೆಗಳ ಬಯಕೆಗಳನ್ನು ಕಾಮಧೇನುವು ಈಡೇರಿಸುತ್ತದೆ.ಕಾಮಧೇನುವಿನ ಮುಂದೆ ಯಾರು ತಮಗೇನು ಬೇಕು ಎಂದು ಕೇಳುತ್ತಾರೋ ತಕ್ಷಣ ಆ ವಸ್ತು,ಪಡಿಪದಾರ್ಥವು ಅಲ್ಲಿ ಉಂಟಾಗುತ್ತದೆ.ಜಮದಗ್ನಿಋಷಿಯು ಕಾಮಧೇನುವಿನ ಸಹಾಯದಿಂದ ಅರಸ ಕಾರ್ತವೀರ್ಯನ ಸಹಸ್ರಾರು ಸೈನಿಕರುಗಳಿಗೆ ಅವರು ಬಯಸಿದ ಭಕ್ಷ್ಯಭೋಜ್ಯಗಳನ್ನಿತ್ತು ಉಣಬಡಿಸಿ,ಸತ್ಕರಿಸಿದ ಕಥೆಯನ್ನು ಬಲ್ಲೆವಷ್ಟೆ.ಆ ಕಾಮಧೇನು ಜಮದಗ್ನಿಯ ದುರಂತಕ್ಕೂ ಮತ್ತು ಮಹಾನ್ ಶಿವಭಕ್ತನಾದ ಪರಶುರಾಮನಿಂದ ಭೂಮಂಡಲದಲ್ಲಿ ಕ್ಷತ್ರಿಯ ಕುಲನಾಶಕ್ಕೂ ಕಾರಣವಾಯಿತು.ಋಷಿಗಳಾದವರಿಗೆ ಅವರ ಉಗ್ರತಪೋನುಷ್ಠಾನದ ಫಲಸಿದ್ಧಿಯಾಗಿ ದೊರಕುವ ಕಾಮಧೇನು ಅವಶ್ಯಕವೇ ಹೊರತು ಕ್ಷತ್ರಿಯನಾದ ಕಾರ್ತವೀರ್ಯನಿಗಾಗಲಿ ಅಥವಾ ಲೋಕದ ಜನರಿಗಾಗಿ ಅವಶ್ಯಕವಿಲ್ಲವು.ಕಾಯಕ, ವೃತ್ತಿಯನ್ನು ನೆಚ್ಚಿ ಬಾಳಬೇಕಾದ ಲೋಕಜನತೆಗೆ ಕಾಮಧೇನುವಿನ ಅಗತ್ಯವಿಲ್ಲ,ಸದೃಢವಾದ ಶರೀರ, ಬಲವಾದ ಬಾಹುಗಳು ಮತ್ತು ಸ್ವಸ್ಥಚಿತ್ತವಿದ್ದರೆ ಸಾಕು.

ಶಿವನಾಮವು ಭಕ್ತರ ಮನೋಬಯಕೆಗಳೆಲ್ಲವನ್ನೂ ಈಡೇರಿಸುವುದರಿಂದ ಶಿವಭಕ್ತರು ಅನ್ಯ ಮಂತ್ರ ತಂತ್ರಗಳಿಗಾಗಿ ಆಶಿಸದೆ,ದುಷ್ಟವಿದ್ಯೆ,ತಂತ್ರಗಳ ಹಂಗಿಗೆ ಒಳಗಾಗದೆ ಶಿವನಾಮವನ್ನೇ ಆಶ್ರಯಿಸಿ ಶಿವನಾಮದ ಆಸರೆಯಲ್ಲಿಯೆ ತಮ್ಮ ಬದುಕುಗಳನ್ನು ರೂಪಿಸಿಕೊಳ್ಳಬೇಕು ಎನ್ನುತ್ತಾರೆ ಬಸವಣ್ಣನವರು.ನಿತ್ಯನಿರಂತರವಾಗಿ ಶಿವನಾಮ ಜಪಿಸುತ್ತಿದ್ದರೆ ಆಗದ ಕೆಲಸ ಕಾರ್ಯಗಳು ಆವವು ? ಶಿವಮಂತ್ರವನ್ನು ಸ್ಮರಿಸುತ್ತ ಭಕ್ತರು ಅಸಾಧ್ಯವಾದ ಕೆಲಸ ಕಾರ್ಯಗಳನ್ನು ಸುಲಭವಾಗಿ ಮಾಡಬಹುದು.ಓಂ ನಮಃ ಶಿವಾಯ ಎನ್ನುವ ಶಿವಮಂತ್ರಸಾಧನೆಯಿಂದ ಅಸಂಭವವು ಸಂಭವಿಸುತ್ತದೆ,ಅಘಟಿತವು ಘಟಿಸುತ್ತದೆ.ಈ ವಚನದಲ್ಲಿ ಬಸವಣ್ಣನವರು ‘ ಶಿವನಾಮ’ ಮತ್ತು ‘ ಶಿವಮಂತ್ರ’ ಗಳೆರಡರ ಪ್ರಸ್ತಾಪ ಮಾಡಿದ್ದಾರೆ.ನಾಮವು ಶಿವನ ಹೆಸರು. ಶಿವ,ಶಂಭು,ಶಂಕರ,ಹರ,ಮಹಾದೇವ ಮೊದಲಾದವುಗಳು ಶಿವನ ಹೆಸರುಗಳು.ಶಿವನಿಗೆ ಸಹಸ್ರ ಅಂದರೆ ಸಾವಿರ ಹೆಸರುಗಳಿವೆ.ಭಕ್ತರುಗಳು ಶಿವಸಹಸ್ರನಾಮದಿಂದ ಶಿವನನ್ನು ಪೂಜಿಸುತ್ತಾರೆ.ಶಿವಪುರಾಣ,ಸ್ಕಂದಪುರಾಣ,ವಾಯುಪುರಾಣ ಮತ್ತು ಲಿಂಗಪುರಾಣಗಳಲ್ಲಿ ಬೇರೆ ಬೇರೆ ಶಿವಸಹಸ್ರನಾಮಗಳಿವೆ.ಆದರೆ ಮಹಾಭಾರತಾಂತರ್ಗತವಾದ ಶಿವಸಹಸ್ರನಾಮವೇ ವ್ಯಾಪಕ ಬಳಕೆಯಲ್ಲಿರುವ,ಶಿವೋಪಾಸನೆಯ ಶಿವಸಹಸ್ರನಾಮವಾಗಿದೆ.ಮೂಲತಃ ನಿರಾಕಾರ ಪರಶಿವನಾಗಿರುವ ಲೋಕನಿಯಾಮಕ ಶಿವನನ್ನು ಸಾಕ್ಷಾತ್ಕರಿಸಿಕೊಳ್ಳಲು,ಶಿವನ ಅನುಗ್ರಹವನ್ನು ಪಡೆಯಲು ಭಕ್ತರು ಪರಶಿವನಿಗೆ ಒಂದು ಆಕಾರವನ್ನು ಕಲ್ಪಿಸಿ ಕಲ್ಪಿತ ಆಕಾರಕ್ಕೆ ನಾಮ,ರೂಪ,ಕ್ರಿಯೆ ಮತ್ತು ಕಳಾಪಗಳೆಂಬ ಉಪಾಧಿಗಳನ್ನು ಆರೋಪಿಸಿದರು.ಉಪಾಧಿಗಳಿಗೊಳಗಾದ ಶಿವನು ಭಕ್ತರ ಭಾವಕ್ಕನುಗುಣವಾಗಿ ವರ್ತಿಸುವನು.ಭಕ್ತರ ಮನೋಬಯಕೆಗಳನ್ನು ಈಡೇರಿಸುವನು.ಪರಶಿವ ಮತ್ತು ಶಿವ ಬೇರೆ ಬೇರೆ.ಪರಶಿವನು ವಿಶ್ವಸೃಷ್ಟಿಯನ್ನು ಸಂಕಲ್ಪಿಸಿ ಶಿವನಾಗುತ್ತಾನೆ,ಗೌರೀವಲ್ಲಭನಾಗುತ್ತಾನೆ,ಗಣಪತಿ- ಷಣ್ಮುಖರ ತಂದೆಯಾಗುತ್ತಾನೆ ; ಕೈಲಾಸವಾಸಿಯಾಗಿ ತನ್ನ ಗಣಸಮೇತ ವಿರಾಜಮಾನನಾಗುತ್ತಾನೆ.ಆದರೆ ನಿರಾಕಾರ ಪರಶಿವನಿಗೆ ಈ ಉಪಾಧಿಗಳಾಗಲಿ ಅವಸ್ಥೆಗಳಾಗಲಿ ಇಲ್ಲವು.ಬಸವಣ್ಣನವರ ಇಷ್ಟದೈವ,ವಚನಾಂಕಿತವಾದ ಕೂಡಲಸಂಗಮದೇವನು ಸಾಕಾರಶಿವನಾದರೆ ಅವರ ಇಷ್ಟಲಿಂಗವು ನಿರಾಕಾರ ಪರಶಿವನ ಪ್ರತೀಕವು.ಸಾಧನೆಯ ಆರಂಭದ ದಿನಗಳಲ್ಲಿ ಸಾಕಾರದ ಅವಶ್ಯಕತೆ ಇದೆಯಾದರೂ ಎತ್ತರದ ಯೋಗಸಾಧಕರುಗಳಿಗೆ ಸಾಕಾರದ ಅವಲಂಬನೆಯ ಅಗತ್ಯ ಇರುವುದಿಲ್ಲವು.ಯೋಗಿಗಳು ಮಂತ್ರವನ್ನಾಶ್ರಯಿಸಿ ಶಿವನ ಅಣು– ಮಹತ್ ತತ್ತ್ವವನ್ನು ಅನುಸಂಧಾನ ಮಾಡಿಕೊಳ್ಳುತ್ತಾರೆ.ನಾಮವು ಭಕ್ತರ ‘ ಕ್ಷೇಮ’ ವನ್ನು ಸಾಧಿಸಿದರೆ ನಾಮಾತೀತ ಸೀಮಾತೀತ,ವ್ಯೋಮಾತೀತ,ಸರ್ವಕ್ಕತೀತ ಪರಶಿವನು ಮೋಕ್ಷವನ್ನು ಅನುಗ್ರಹಿಸುವನು.ಇಲ್ಲಿಯ ವಿವರಣೆಯನ್ನು ಓದಿ ಶಿವಭಕ್ತರು ಶಿವನು ಬೇರೆ,ಪರಶಿವನು ಬೇರೆ ಎಂಬ ಗೊಂದಲಕ್ಕೆ ಒಳಗಾಗಬಾರದು.ಶಿವನೇ ಪರಶಿವನು; ಪರಶಿವನೇ ಶಿವನು.

೦೮.೦೨.೨೦೨೪

About The Author