ಬಸವರಾಜ ಭೋಗಾವತಿಯವರ ಅಭಿಮಾನ ಮತ್ತು ಪ್ರಚಾರಪ್ರಿಯತೆಯನ್ನೊಲ್ಲದ ‘ನನ್ನತನ’

ಬಸವರಾಜ ಭೋಗಾವತಿಯವರ ಅಭಿಮಾನ ಮತ್ತು ಪ್ರಚಾರಪ್ರಿಯತೆಯನ್ನೊಲ್ಲದ ‘ನನ್ನತನ’ : ಮುಕ್ಕಣ್ಣ ಕರಿಗಾರ
     ಜನೆವರಿ ೦೧,೨೦೨೪ ರಿಂದ ಬಸವಣ್ಣನವರ ವಚನಗಳಿಗೆ ನಿಜ ವ್ಯಾಖ್ಯಾನವಾಗಿ ನಾನು ಬರೆಯುತ್ತಿರುವ ‘ ಬಸವೋಪನಿಷತ್ತು’ ಲೇಖನ ಮಾಲೆಯನ್ನು ಓದುತ್ತಿರುವ ಅನೇಕ ಜನರು ಇದನ್ನು ಆದಷ್ಟು ಬೇಗನೆ ಪುಸ್ತಕರೂಪದಲ್ಲಿ ಹೊರತರಲು ಒತ್ತಾಯಿಸುತ್ತಿದ್ದಾರೆ.ನಾನು ಸಂಕಲ್ಪಿಸಿದ್ದು ಬಸವಣ್ಣನವರ ಏಳುನೂರು ವಚನಗಳಿಗೆ ವ್ಯಾಖ್ಯಾನ ಬರೆಯಲು.ದಿನಕ್ಕೆ ಒಂದರಂತೆ ಬರೆಯುತ್ತಿರುವ ಈ ಬಸವೋಪನಿಷತ್ತು ಪೂರ್ಣಗೊಳ್ಳಲು ಎರಡುವರ್ಷಗಳೇ ಬೇಕು ! ಹಾಗಾಗಿ ನನಗೂ ಬಸವೋಪನಿಷತ್ತನ್ನು ಸಂಪುಟ ಸಂಪುಟವಾಗಿ ಪ್ರಕಟಿಸಿ ಕೊನೆಗೆ ಏಳುನೂರು ವಚನಗಳ ಸಮಗ್ರಗ್ರಂಥವನ್ನು ” ಶ್ರೀ ಬಸವ ಮಹಾದರ್ಶನಂ” ಎನ್ನುವ ಹೆಸರಿನಲ್ಲಿ ಪ್ರಕಟಿಸುವುದು ಸೂಕ್ತ ಎನ್ನಿಸಿ ಇದೇ ಮಾರ್ಚ್ ೦೮ ರ ಮಹಾಶಿವರಾತ್ರಿಯಂದು ಬಸವೋಪನಿಷತ್ತಿನ ಮೊದಲ ಸಂಪುಟವನ್ನು ಪ್ರಕಟಿಸಲು ನಿರ್ಧರಿಸಿದೆ.ಸಾಮಾನ್ಯವಾಗಿ ನಾನು ನನ್ನ ಕೃತಿಗಳ ಬಿಡುಗಡೆಗಾಗಿ ಖ್ಯಾತಸಾಹಿತಿಗಳನ್ನು ಆಹ್ವಾನಿಸುವುದಿಲ್ಲ ಮತ್ತು ನನ್ನ ಪುಸ್ತಕಗಳಿಗೆ‌ ಇತರ  ಸಾಹಿತಿಗಳಿಂದ ಮುನ್ನುಡಿಯನ್ನೂ ಬರೆಸುವುದಿಲ್ಲ.ಆದರೆ ಬಸವೋಪನಿಷತ್ತು ಒಂದು ವಿಶಿಷ್ಟಸಂದರ್ಭದಲ್ಲಿ ಹೊರಬರುತ್ತಿರುವುದರಿಂದ, ಜಗದ್ಗುರು ಪರಂಪರೆಯವರು ಒಪ್ಪದ, ಲಿಂಗಾಯತ ಧರ್ಮಸ್ಥಾಪಕರುಗಳಿಗೆ ಅರ್ಥವಾಗದ ಬಸವಣ್ಣನವರ ನಿಜವಾದ ಲೋಕಗುರುವಿನ ವ್ಯಕ್ತಿತ್ವವನ್ನು ಪ್ರಕಟಗೊಳಿಸುತ್ತಿರುವ ಬಸವ ಸಾಹಿತ್ಯದಲ್ಲೇ ಮಹತ್ವದ್ದಾಗಬಹುದಾದ ಕೃತಿ ಇದಾದ್ದರಿಂದ ರಾಜ್ಯದ ಖ್ಯಾತಸಾಹಿತಿಯೊಬ್ಬರಿಂದ ಈ ಪುಸ್ತಕವನ್ನು ಬಿಡುಗಡೆ ಮಾಡಿಸಿದರೆ ಪುಸ್ತಕಕ್ಕೆ ಪ್ರಚಾರವು ದೊರೆಯಬಹುದು ಎಂದುಕೊಂಡೆ.ನನ್ನ ಸಾಹಿತ್ಯ ಮತ್ತು ಮಹಾಶೈವ ಧರ್ಮಪೀಠದ ಸಾಹಿತ್ಯಕ ಸಾಂಸ್ಕೃತಿಕ ಹೊಣೆಯನ್ನು ಸಮರ್ಥವಾಗಿ ನಿರ್ವಹಿಸುತ್ತಿರುವ ಸ್ನೇಹಿತರುಗಳಾದ   ಶಹಾಪುರದ ಬಸವರಾಜ ಸಿನ್ನೂರು ಮತ್ತು ಮಾನ್ವಿಯ ಬಸವರಾಜ ಭೋಗಾವತಿ ಅವರಿಬ್ಬರಲ್ಲಿ ವಿಷಯ ಪ್ರಸ್ತಾಪಿಸಿದೆ.ಫೋನ್ ಮಾಡಿದ ಹತ್ತು ನಿಮಿಷಗಳಲ್ಲಿಯೇ ಬಸವರಾಜ ಸಿನ್ನೂರು ಅವರು ಗಿರೀಶ ಕಾಸರವಳ್ಳಿ ಅವರಿಗೆ ಮಾತನಾಡಿಯೇ ಬಿಟ್ಟರು ! ಗಿರೀಶ ಕಾಸರವಳ್ಳಿ,ಕೆ.ವಿ.ನಾರಾಯಣ,ಎಚ್ ಎಸ್ ವೆಂಕಟೇಶಮೂರ್ತಿ ಈ ಮೂವರಲ್ಲಿ ಯಾರನ್ನಾದರೂ ಕರೆಯುವುದು ಸೂಕ್ತ ಎನ್ನುವುದು ನನ್ನ ಅನಿಸಿಕೆ.ಜಯಂತ ಕಾಯ್ಕಿಣಿ ಅವರಿಗೆ ಈ ವರ್ಷದ ‘ ಮಹಾತಪಸ್ವಿ ಶ್ರೀಕುಮಾರಸ್ವಾಮಿ ಕಾವ್ಯರ್ಷಿ’ ಪ್ರಶಸ್ತಿಯನ್ನು ನೀಡಲು ಉದ್ದೇಶಿಸಿರುವುದರಿಂದ ಅವರನ್ನು ಪುಸ್ತಕ ಬಿಡುಗಡೆಗೆ ಕರೆಯುವುದು ಬೇಡ ಎಂದು ಸಿನ್ನೂರು ಮತ್ತು ಭೋಗಾವತಿ ಅವರಿಗೆ ತಿಳಿಸಿದ್ದೆ.
        ಪುಸ್ತಕಬಿಡುಗಡೆ ಕಾರ್ಯಕ್ರಮದ ಬಗ್ಗೆ ತಮ್ಮದೆ ಕನಸು- ಕಲ್ಪನೆಗಳನ್ನು ಹೊಂದಿರುವ ಬಸವರಾಜ ಭೋಗಾವತಿಯವರು ರಾಜ್ಯದ ವಿಶ್ವವಿದ್ಯಾಲಯಗಳ ಪಂಡಿತರುಗಳಲ್ಲಿ ಕೆಲವರು ಆಹ್ವಾನಿಸೋಣ ಎಂದರು.ನಾನು ಬೇಡವೆಂದರೂ ಬಿಡದೆ ‘ ನಿಮಗೆ ಗೊತ್ತಿಲ್ಲ ಸರ್.ನೀವು ಸುಮ್ಮನಿರಿ.ಒಂದೋ ಎರಡೋ ಪುಸ್ತಕಗಳನ್ನು ಬರೆದು ದೊಡ್ಡ ಸಾಹಿತಿಗಳು ಎಂದು ಬಿಂಬಿಸಿಕೊಳ್ಳುತ್ತಿರುವವರಿದ್ದಾರೆ,ನಿಮ್ಮ ಮುಂದೆ ಏನೇನೂ ಅಲ್ಲದವರು ಮಹಾನ್ ಸಾಹಿತಿಗಳಂತೆ ಪೋಸ್ ಕೊಡುತ್ತಿದ್ದಾರೆ.ಐವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿರುವ ಅನನ್ಯಪ್ರತಿಭೆಯ ನಿಮ್ಮ ವ್ಯಕ್ತಿತ್ವವು ವಿಶ್ವವಿದ್ಯಾಲಯಗಳಲ್ಲಿ ಪರಿಚಯವಾಗುವ ಅಗತ್ಯವಿದೆ.ನಿಮ್ಮ ಕೃತಿಗಳನ್ನು ಆಧರಿಸಿ ಪಿಎಚ್ಡಿಗಳು ಬರಬೇಕು’ ಎಂದೆಲ್ಲ ಮಾತನಾಡಿದರು.ಬಸವರಾಜ ಭೋಗಾವತಿಯವರಿಗೆ ನನ್ನಲ್ಲಿ ಗುರುಭಾವವಿದೆ,ಪೂಜ್ಯಭಾವನೆಯಿಂದ ನೋಡುತ್ತಾರೆ.ನನ್ನ ಬಗ್ಗೆ ಅವರಲ್ಲಿ ಪ್ರಾಮಾಣಿಕ ಅಭಿಮಾನ,ನಿಜ ನಿಷ್ಠೆಗಳಿವೆ.ಆದರೆ ನನಗೆ ಯಾಕೋ ಇಂತಹ ಪ್ರಚಾರಪ್ರಿಯತೆ ಆಗಿಬಾರದು.ನನ್ನ ಸಾಹಿತ್ಯದ ಬಗ್ಗೆಯೇ ನಾನು ಹೇಳಿಕೊಳ್ಳುವುದಿಲ್ಲ.ಬಸವರಾಜ ಭೋಗಾವತಿಯವರ ಅಭಿಪ್ರಾಯದಂತೆ  ಪ್ರಚಾರಪ್ರಿಯತೆಯನ್ನು ಒಲ್ಲದ ನನ್ನ ವ್ಯಕ್ತಿತ್ವವು ಸಾಹಿತ್ಯಕ್ಷೇತ್ರದಲ್ಲಿ ನನ್ನ ಸತ್ತ್ವ ಸಿದ್ಧಿಯು ಪ್ರಚಾರಗೊಳ್ಳದೆ ಇರಲು,ನನಗೆ ಸಿಗಬೇಕಾದ ಸ್ಥಾನಮಾನಗಳು ದೊರೆಯದೆ ಇರಲು ಕಾರಣ ಎನ್ನುವುದನ್ನೂ ನಾನು ಒಪ್ಪುತ್ತೇನಾದರೂ ನನಗೆ ‘ ಲಾಬಿಮಾಡಿ ಬೆಳೆಯುವ’ ಪದವಿ – ಪ್ರಶಸ್ತಿಗಳಿಗಾಗಿ ಕಂಡವರ ಕಾಲುಹಿಡಿಯುವ ಪ್ರವೃತ್ತಿ ಆಗಿಬಾರದು.
       ನಾನು ಯುಗಸಂತ,ಶತಮಾನದ ಮಹಾಯೋಗಿ ಧಾರವಾಡದ ತಪೋವನದ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳ ಶಿಷ್ಯನಾಗಿದ್ದುದರಿಂದ ಅವರ ಪ್ರಭಾವವು ನನ್ನ ಮೇಲೆ ದಟ್ಟವಾಗಿದೆ.ನಾನು ಗುರುದೇವ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳವರನ್ನು ಮೂರುವರ್ಷಗಳ ಕಾಲ ಹತ್ತಿರದಿಂದ ಕಂಡು ಬಲ್ಲೆನಾದ್ದರಿಂದ ಅವರ ಅದ್ಭುತಯೋಗಸಿದ್ಧನ ವ್ಯಕ್ತಿತ್ವದ ಪರಿಚಯವಿದೆ.ಅಂತಹ ಅತ್ಯುಗ್ರನಿಲುವಿನ,ತಪಸ್ಸೇ ಜೀವನವಾದ,ಲೋಕಕಲ್ಯಾಣವೇ ಜೀವನದ ಗುರಿಯಾಗಿದ್ದ ಯೋಗಿಗಳು,ಯೋಗಸಾಧಕರುಗಳು ವಿರಳಾತಿವಿರಳ.ಜಾನ್ ಪೋಪ್ ಪಾಲ್,ದಲೈಲಾಮಾ,ಹೃಷಿಕೇಶದ ಶಿವಾನಂದರಂತಹ ಹಿರಿಯಚೇತನಗಳ ಗೌರವಾರಕ್ಕೆ ಪಾತ್ರರಾಗಬೇಕಿದ್ದರೆ ಗುರುದೇವನ ವ್ಯಕ್ತಿತ್ವ ಎಷ್ಟು ಭವ್ಯೋಜ್ವಲವಾಗಿರಲಿಕ್ಕಿಲ್ಲ ? ಇಷ್ಟಾಗಿಯೂ ಅವರು ಎಂದೂ ತಮ್ಮ ಬಗ್ಗೆ ಹೇಳಿಕೊಂಡವರಲ್ಲ.ಅವರನ್ನು ಹತ್ತಿರದಿಂದ ಕಂಡ ನನ್ನಂತಹ ನಾಲ್ಕಾರು ಜನರಿಗಷ್ಟೇ ಅವರ ಹೈಮಾಚಲೋಪಮವ್ಯಕ್ತಿತ್ವದ ಯೋಗಿಯ ದರ್ಶನವಾಗಿದೆ.ತಮ್ಮ ಬಗ್ಗೆ ಒಂದು ಪುಸ್ತಕ ಬರೆಯಲು ನಾಲ್ಕಾರು ವರ್ಷಗಳಿಂದ ದುಂಬಾಲು ಬಿದ್ದಿದ್ದ ಈಶ್ವರಚಂದ್ರ ಚಿಂತಾಮಣಿಯವರಿಗೆ‌ ಕೊನೆಗೆ ಜೀವನ ಚರಿತ್ರೆ ಬರೆಯಲು ಅನುಮತಿ ನೀಡಿದ್ದರು.’ ನಮ್ಮ ಚರಿತ್ರೆಗಿಂತ ಚಾರಿತ್ರ್ಯದೊಡ್ಡದಾಗಿರಬೇಕು; ನಮ್ಮ ಜೀವನಕ್ಕಿಂತ ನಮ್ಮ ಸಾಧನೆ ದೊಡ್ಡದಾಗಿರಬೇಕು.ನಾವು ಸೂರ್ಯನಂತೆ ಲೋಕವನ್ನು ಬೆಳಗಬೇಕಲ್ಲದೆ ಎಣ್ಣೆಯಿರುವಷ್ಟೇ ಕಾಲ ಉರಿವ ಸೀಮೆ ಎಣ್ಣೆಯ ಕಂದಿಲು ಆಗಬಾರದು ‘ ಎನ್ನುತ್ತಿದ್ದರು ಗುರುದೇವ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳು.ಅವರ ದಿವ್ಯೋಜ್ವಲ ವ್ಯಕ್ತಿತ್ವವನ್ನು ಇಡಿಯಾಗಿ ಅನುಕರಿಸುವುದು ಸರಕಾರಿ ಅಧಿಕಾರಿಯಾಗಿದ್ದ,ಸಂಸಾರಿಯಾದ ನನ್ನಿಂದ ಸಾಧ್ಯವಿಲ್ಲದೆ ಇದ್ದರೂ ನನ್ನಿಂದ ಸಾಧ್ಯವಾದಷ್ಟು ಅವರ ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದೇನೆ.ಬಸವಣ್ಣನವರು ಮೇಲಿಂದ ಮೇಲೆ ಉದಾಹರಿಸಿದಂತೆ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳೆನ್ನುವ ಅಪೂರ್ವ ಅಧ್ಯಾತ್ಮಸಿದ್ಧಿಯ ಸ್ಪರ್ಶಮಣಿಯಿಂದ ಪರಿವರ್ತನೆಗೊಂಡ ,ಪಲ್ಲಟಗೊಂಡ ಕಬ್ಬಿಣದ ತುಂಡುನಾನು.ಅಂತಹ ದಾರ್ಶನಿಕ ಗುರುವಿನ ಶಿಷ್ಯನಾದ್ದರಿಂದ ನಾನು ಪ್ರಚಾರವನ್ನು ಇಷ್ಟಪಡುವುದಿಲ್ಲ,ಅವರಿವರ ಮುಂದೆ ಅಡ್ಡ ಉದ್ದ ಬೀಳುವುದಿಲ್ಲ.
         ಆದರೆ ಈಗ ಜಗತ್ತು ಬಹಳ ಬದಲಾಗಿದೆ.ಸೋಶಿಯಲ್ ಮೀಡಿಯಾಗಳ ಈ ಯುಗದಲ್ಲಂತೂ ನಾವು ಕೆಲಸ ಮಾಡಿದರೆ ಸಾಲದು,ಕೆಲಸ ಮಾಡುತ್ತಿದ್ದೇವೆ ಎನ್ನುವುದನ್ನು ತೋರಿಸಿಕೊಳ್ಳುವ ಅಗತ್ಯವೂ ಇದೆಯಾದ್ದರಿಂದ ಸ್ವಲ್ಪಮಟ್ಟಿನ ಪ್ರಚಾರಪ್ರಿಯತೆಯ ಅಗತ್ಯವೂ ಇದೆ.
         ನಾನು ನನ್ನ ಬಾಲ್ಯದಲ್ಲಿಯೇ ಯುಗಕವಿ ಮಹಾಕವಿ ಕುವೆಂಪು ಅವರನ್ನು ಕಂಡು ಅವರ ಪ್ರಭಾವಕ್ಕೆ ಒಳಗಾಗಿದ್ದರಿಂದ ಕುವೆಂಪು ಅವರಂತೆಯೇ ಲೋಕಾಂತವನ್ನೊಲ್ಲದ ಏಕಾಂತಪ್ರಿಯತೆ ನನಗೆ ಬಹಳ ಪ್ರಿಯವೆನ್ನಿಸಿದೆ.ನಾನು ಸರಕಾರದ ಉನ್ನತ ಹುದ್ದೆಗಳಲ್ಲಿದ್ದಾಗಲೂ ಬೇರೆಯ ಅಧಿಕಾರಿಗಳಿಗೆ‌ ಪ್ರಶಸ್ತಿ ಕೊಡಿಸಿದೆನೇ ಹೊರತು ನಾನು ಪ್ರಶಸ್ತಿಪಡೆಯಲು ಬಯಸಲಿಲ್ಲ.’ಸರ್ವೋತ್ತಮ ಅಧಿಕಾರಿ’ ಪ್ರಶಸ್ತಿಪಡೆಯುವ ಅವಕಾಶವನ್ನು ಎರಡುಸಾರೆಯೂ ನಾನೇ ನಿರಾಕರಿಸಿದ್ದೆ.ಇನ್ನೊಬ್ಬರನ್ನು ಗುರುತಿಸಿ ಗೌರವಿಸುವುದರಲ್ಲೇ ಸಂತೃಪ್ತಿಕಾಣುವುದು ನನ್ನ ಸ್ವಭಾವ.ನನ್ನ ಶಿಷ್ಯ ಷಣ್ಮುಖ ಹೂಗಾರ ಹಾಗೂ ಆತ್ಮೀಯರಾದ ಡಾ. ಎನ್ ಹೆಚ್ ಪೂಜಾರ್ ಅವರು ಕೂಡ ಕಾಲಕ್ಕೆ ತಕ್ಕಂತೆ ತಾಳ ಹಾಕದ,ಅರಸಿ ಬಂದ ಅವಕಾಶಗಳನ್ನು ಕೈಚೆಲ್ಲುವ ನನ್ನ ಸ್ವಭಾವದ ಬಗ್ಗೆ ಆಗಾಗ ಆಕ್ಷೇಪ ಎತ್ತುತ್ತಾರೆ.ಆದರೇನು ‘ ಹುಟ್ಟುಗುಣ ಸುಟ್ಟರೂ ಹೋಗದಲ್ಲ’!
      ರಾಯಚೂರಿನ ಕೆಲವು ಜನ ಕವಿ ಸಾಹಿತಿಗಳ ತೆವಲು,ಪ್ರಚಾರಪ್ರಿಯತೆಯ ಬಗ್ಗೆ ಬಸವರಾಜ ಭೋಗಾವತಿಯವರು ಆಗಾಗ ಪ್ರಸ್ತಾಪಿಸುತ್ತಾರೆ.ಏನೂ ಇಲ್ಲದವರಿಗೆ,ಸತ್ತ್ವಹೀನರಿಗೆ ಪ್ರಚಾರವೇ ದೊಡ್ಡ ಅಸ್ತ್ರ,ಬಂಡವಾಳ.ಆದರೆ ಅತ್ಯಂತ ಕಿರಿಯ ವಯಸ್ಸಿನಲ್ಲೇ ತಾಲೂಕಾ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಯಂತಹ ದೊಡ್ಡ ಹುದ್ದೆಯನ್ನು ಅಲಂಕರಿಸಿ ಎಂ ವೈ ಘೊರ್ಪಡೆ,ಎಂ ಪಿ ಪ್ರಕಾಶ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯನವರಂತಹ ( ಸಿದ್ಧರಾಮಯ್ಯನವರ ಸಂಪರ್ಕದಲ್ಲಿದ್ದುದು ಹಿಂದೆ,ಈಗಲ್ಲ !) ಮಹಾನ್ ರಾಜಕಾರಣಿಗಳ ಜೊತೆ ಗುರುತಿಸಿಕೊಂಡು ಕೆಲಸ ಮಾಡಿದ,ರಾಜ್ಯದ ಹಲವು ಜಿಲ್ಲೆಗಳ ಜಿಲ್ಲಾಪಂಚಾಯತಿಗಳ ಉಪಕಾರ್ಯದರ್ಶಿ ಹುದ್ದೆಯಲ್ಲಿದ್ದು ಜನಸಾಮಾನ್ಯರ ಅಧಿಕಾರಿ ಎನ್ನಿಸಿಕೊಂಡಿದ್ದ ,ಸರಕಾರದ ಹಿರಿಯ ಅಧಿಕಾರಿಯಾಗಿ ಹತ್ತು ಹಲವು ಉನ್ನತ ಹುದ್ದೆಗಳನ್ನು ಅನುಭವಿಸಿ,ಆನಂದಿಸಿದ ನನಗೆ ಭಗವಂತನು ಎಲ್ಲವನ್ನೂ ಕರುಣಿಸಿದ್ದರಿಂದ ಪ್ರಚಾರಪ್ರಿಯತೆಯ ತೆವಲು ಅಂಟಿಕೊಳ್ಳಲಿಲ್ಲ.ಹೊಟ್ಟೆಪಾಡಿಗಾಗಿ ಪಿ ಎಚ್ ಡಿ ಪಡೆದು ಬದುಕುವವರ ಸಾಹಿತ್ಯದ ಸತ್ತ್ವ ಸಾಮರ್ಥ್ಯಗಳ ಅರಿವೂ ನನಗಿದೆ.ಪತ್ರಿಕೆಗಳಲ್ಲಿ ಕಥೆ ಕವನಗಳನ್ನು ಬರೆದು ಮಹಾನ್ ಕಥೆಗಾರರು, ಕವಿಗಳು ಎಂದು ಪೋಸ್ ಕೊಡುತ್ತಿರುವವರನ್ನೂ ನಾನು ಬಲ್ಲೆ.ಲಾಬಿಮಾಡಿ,ರಾಜಕಾರಣಿಗಳ ಕೈಕಾಲು ಹಿಡಿದು ಸಾಹಿತ್ಯದ ಸತ್ತ್ವ ಇಲ್ಲದೆ ಇದ್ದರೂ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದು ದೊಡ್ಡಸ್ತಿಕೆ ಬೀಗುತ್ತಿರುವ ‘ ಅನುಕಂಪಸಾಹಿತಿಗಳ’ ಬಗ್ಗೆ ನನ್ನಲ್ಲಿ ಪ್ರಾಮಾಣಿಕ ಅನುಕಂಪವೂ ಇದೆ ! ಕನ್ನಡದ ಪತ್ರಿಕಾಲೋಕವೂ ಪಥಭ್ರಷ್ಟವಾಗಿದೆ,ಮೌಲ್ಯಭ್ರಷ್ಟವಾಗಿದೆ ಎಂದು ಬೇರೆ ಹೇಳಬೇಕಿಲ್ಲ.ಪ್ರತಿಯೊಂದು ಪತ್ರಿಕೆಗೆ ಅದರದ್ದೇ ಆದ ಧೋರಣೆ ಇದೆ.ಆ ಧೋರಣೆಯನ್ನು ಒಪ್ಪಿ ಬರೆಯುವ ಬರಹಗಾರರನ್ನೇ ಅವರು ಪ್ರೋತ್ಸಾಹಿಸುತ್ತಾರೆ.ಹಾಗಾಗಿ ನಾನು ಕನ್ನಡದ ಪ್ರಸಿದ್ಧ ಪತ್ರಿಕೆಗಳಲ್ಲಿ ಬಹುಮಾನ ಪಡೆಯುವ ಕಥೆಗಾರರನ್ನಾಗಲಿ,ಕವಿಗಳನ್ನಾಗಿ ಶ್ರೇಷ್ಠರು ಎಂದು ಪರಿಗಣಿಸುವುದಿಲ್ಲ.ಒಬ್ಬ ಸಾಹಿತಿಯ ಶ್ರೇಷ್ಠತೆಯ ನಿರ್ಣಯವು ಅವನು ಬರೆಯುವ ಯಾವುದೋ ಒಂದು ಕಥೆ ಇಲ್ಲವೆ ಒಂದು ಕವನದಿಂದ ನಿರ್ಣಯವಾಗುವುದಿಲ್ಲ.ಸಾಹಿತಿಯು ಶ್ರೇಷ್ಠನಾಗುವುದು ಅವನ ಜೀವನಮೌಲ್ಯಗಳಿಂದ,ಅಖಂಡಮೌಲ್ಯನಿಷ್ಠ ಜೀವನದಿಂದ.ಬದುಕು ಮತ್ತು ಬರಹ ಎರಡೂ ಒಂದೇ ಆಗಿದ್ದವನು ಮಾತ್ರ ಶ್ರೇಷ್ಠ ಸಾಹಿತಿ.ಕುವೆಂಪು ಮತ್ತು ಕಾರಂತರು ಮಾತ್ರ ಅಂತಹ ನಡೆನುಡಿಗಳು ಒಂದಾಗಿದ್ದ ಕನ್ನಡದ ಹಿರಿಯ ಚೇತನರುಗಳಾಗಿದ್ದರಿಂದ ಅವರಿಬ್ಬರನ್ನು ನಾನು ನನ್ನ ಸಾಹಿತ್ಯದ ಆದರ್ಶವೆಂದು ಸ್ವೀಕರಿಸಿದ್ದೇನೆ.ಪದವಿ ಪ್ರಶಸ್ತಿಗಳನ್ನು ಪಡೆಯುವುದರಿಂದ ಸಾಹಿತಿ ದೊಡ್ಡವನಾಗುವುದಿಲ್ಲ.ಕನ್ನಡದಲ್ಲಿ ಎಂಟು ಜನ ಜ್ಞಾನಪೀಠ ಪ್ರಶಸ್ತಿ ಪಡೆದಿದ್ದಾರೆ ಎಂದು ಸಂಭ್ರಮಿಸಬಹುದಾದರೂ ಆ ಎಂಟೂ ಜನರು ಜ್ಞಾನಪೀಠಪ್ರಶಸ್ತಿಗೆ ಅರ್ಹರಾದವರು ಎಂದು ಭಾವಿಸುವಂತಿಲ್ಲ.ನನ್ನ ಪ್ರಕಾರ ಕುವೆಂಪು,ಕಾರಂತ ಮತ್ತು ಬೇಂದ್ರೆಯವರು ಮಾತ್ರ ಜ್ಞಾನಪೀಠಪ್ರಶಸ್ತಿಗೆ ನಿಜವಾದ ಅರ್ಹತೆ,ಸತ್ತ್ವವುಳ್ಳ ಸಾಹಿತಿಗಳು.ಪ್ರಶಸ್ತಿಗಳನ್ನು ಹೊಡೆಯುವುದೋ ಪಡೆಯುವುದೋ ಒಂದು ಕಲೆಯಾಗಿರುವುದರಿಂದ ಜ್ಞಾನಪೀಠಪ್ರಶಸ್ತಿ ಪಡೆದವರನ್ನು ಪ್ರಶಸ್ತಿಪುರಸ್ಕೃತರು ಎಂದು ಗೌರವಿಸಬಹುದಷ್ಟೆ.ಹಾಗೆ ನೋಡಿದರೆ ಡಿವಿಜಿಯವರದು ಸಾಹಿತ್ಯದ ದೈತ್ಯ ಪ್ರತಿಭೆ.ಅವರಿಗೆ ಎಷ್ಟು ಪ್ರಶಸ್ತಿಗಳು ಬಂದವು ? ಶಂಬಾಜೋಶಿಯವರು ಅದ್ಭುತವೆನ್ನಬಹುದಾದ ಕನ್ನಡದ ಮಹಾನ್ ಪ್ರತಿಭಾವಂತರು,ಸಂಶೋಧಕರು.ಅವರಿಗೆ ಎಷ್ಟು ಪ್ರಶಸ್ತಿಗಳು ಬಂದಿವೆ? ಎಸ್ ಎಲ್ ಭೈರಪ್ಪನವರು ಜ್ಞಾನಪೀಠಪ್ರಶಸ್ತಿಯನ್ನು ಪಡೆಯಲು ಎಲ್ಲ ರೀತಿಯಿಂದಲೂ ಅರ್ಹರು.ಆದರೂ ಅವರಿಗೇಕೆ ಜ್ಞಾನಪೀಠ ಪ್ರಶಸ್ತಿ ನೀಡಿಲ್ಲ ? ನಮ್ಮಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಒಬ್ಬ ಸಾಹಿತಿ ‘ ಇಂತಿಂಥವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿಲ್ಲ,ನನಗೆ ಬಂದಿದೆ’ ಎಂದು ಮಾತನಾಡಿದ್ದನ್ನು ನಾನು ಕೇಳಿದ್ದೇನೆ.ಆ ಸಾಹಿತಿ ಪ್ರಸ್ತಾಪಿಸಿದ ಸಾಹಿತಿಗಳು ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆಯಲು ನಿಜಕ್ಕೂ ಅರ್ಹರೆ ! ಈ ‘ಬಡಾಯಿ ‘ಸಾಹಿತಿಗಿಂತಲೂ ಹೆಚ್ಚಿನ ಸೃಷ್ಟಿಶೀಲ ಸಾಮರ್ಥ್ಯದ ಪ್ರತಿಭಾವಂತರೆ.ಆದರೂ ಅವರಿಗೆ ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಿಗಲಿಲ್ಲ.ಹಾಗಂತ ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದವರೆಲ್ಲ ಹಿರಿಯರೂ ಎನ್ನಲಾಗದು.ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಪಡೆದ ಬಹುತೇಕ ಕೃತಿಗಳನ್ನು ನಾನು ಓದಿದ್ದೇನೆ.ಕೆಲವು ಕೃತಿಗಳಿಗೆ ಹೇಗಾದರೂ ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿದರೋ ಎಂದು ಆಶ್ಚರ್ಯಗೊಂಡಿದ್ದೇನೆ.ವಿಶ್ವವಿದ್ಯಾಲಯಗಳ ಬೋಧಕರುಗಳು,ಪ್ರಾಧ್ಯಾಪಕರುಗಳು,ಕನ್ನಡದಲ್ಲಿ ಮಹಾನ್ ಸಾಹಿತಿಗಳು ಎನ್ನುವವರೇ ಕೇಂದ್ರಸಾಹಿತ್ಯ ಅಕಾಡೆಮಿಯ ಪುಸ್ತಕ ಆಯ್ಕೆ ಸಮಿತಿಯ ಸದಸ್ಯರುಗಳಾಗುತ್ತಿರುವುದರಿಂದ ಅಲ್ಲಿಯೂ ಅನರ್ಹರಿಗೆ ಮನ್ನಣೆ ನೀಡಲಾಗಿದೆ.ಹಾಗೆ ನೋಡಿದರೆ ಕೇಂದ್ರಸಾಹಿತ್ಯ ಅಕಾಡೆಮಿ,ರಾಜ್ಯಸಾಹಿತ್ಯ ಅಕಾಡೆಮಿ ಮತ್ತು ಪಂಪಪ್ರಶಸ್ತಿಯಂತಹ ಹಿರಿಯ ಪ್ರಶಸ್ತಿಗಳ ಮಾನದಂಡಗಳು,ಆಯ್ಕೆ ಸಮಿತಿಯ ಸದಸ್ಯರುಗಳ ಆಯ್ಕೆಯ ಮಾನದಂಡಗಳನ್ನೇ ಬದಲಿಸುವ ಅಗತ್ಯವಿದೆ ! ಆಳುವ ಸರಕಾರಗಳು ತಮ್ಮ ಪಕ್ಷದ ನಿಲುವನ್ನು ಬೆಂಬಲಿಸುವ ಕವಿ ಸಾಹಿತಿ ಕಲಾವಿದರುಗಳಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ದಯಪಾಲಿಸುತ್ತಿವೆ.ರಾಜ್ಯದ ಮುಖ್ಯಮಂತ್ರಿಯಾದವರ ಸಂಬಂಧಿಕರೋ,ಪಕ್ಷನಿಷ್ಠರೋ ಅಥವಾ ಮತ್ತಾವುದೋ ‘ ತೂಕ’ ದ ಬಲದಿಂದ ವಿಶ್ವವಿದ್ಯಾಲಯಗಳ ಕುಲಪತಿಗಳು ಆಗುವವರಿಂದ ಎಂತಹ ಅದ್ಭುತ ಕಾರ್ಯಗಳನ್ನು ನಿರೀಕ್ಷಿಸಲು ಸಾಧ್ಯ ?ರಾಜಕಾರಣಿಗಳ ಕೈಕಾಲುಗಳನ್ನು ಹಿಡಿದು ಸಾಹಿತ್ಯ ಅಕಾಡೆಮಿಯಂತಹ ಅಕಾಡೆಮಿಗಳ ಅಧ್ಯಕ್ಷರು,ಸದಸ್ಯರುಗಳು ಆಗುವವರು ಗುಣಮೌಲ್ಯನಿಷ್ಠರಾಗಿರಲು ಸಾಧ್ಯವೆ ?

About The Author