ಶಿವನಾಮಸ್ಮರಣೆಯಿಂದ ಪಂಚಮಹಾಪಾತಕಗಳಿಂದ ಮುಕ್ತರಾಗಬಹುದು

ಬಸವೋಪನಿಷತ್ತ ೩೬ : ಶಿವನಾಮಸ್ಮರಣೆಯಿಂದ ಪಂಚಮಹಾಪಾತಕಗಳಿಂದ ಮುಕ್ತರಾಗಬಹುದು : ಮುಕ್ಕಣ್ಣ ಕರಿಗಾರ
    ಕರಿಯಂಜುವುದಂಕುಶಕ್ಕಯ್ಯಾ ; ಗಿರಿಯಂಜುವುದು ಕುಲಿಶಕ್ಕಯ್ಯಾ ;
   ತಮಂಧವಂಜುವುದು ಜ್ಯೋತಿಗಯ್ಯಾ ;
  ಕಾನನವಂಜುವುದು ಬೇಗೆಗಯ್ಯಾ ;
  ಪಂಚಮಹಾಪಾತಕವಂಜುವುದು
  ಕೂಡಲ ಸಂಗನ ನಾಮಕ್ಕಯ್ಯಾ.
        ಬಸವಣ್ಣನವರು ಈ ವಚನದಲ್ಲಿ ಪಾಪಭೀತಿಗೊಳಗಾಗಿ ಬಳಲುತ್ತಿರುವವರು ಶಿವನಾಮಸ್ಮರಣೆಯಿಂದ ಪಾಪ ಮುಕ್ತರಾಗಬಹುದು ಎಂದು ಉಪದೇಶಿಸಿ  ಭಕ್ತಜನಕೋಟಿಯನ್ನು ಶಿಪಪಥದಲ್ಲಿ,ಸತ್ ಪಥದಲ್ಲಿ ನಡೆಯಲು ಪ್ರೇರೇಪಿಸಿದ್ದಾರೆ.ದೊಡ್ಡದಾದ ಆನೆಯು ಚಿಕ್ಕದಾಗಿದ್ದರೂ ಮಾವುತನ ಕೈಯ ಅಂಕುಶಕ್ಕೆ ಹೆದರುತ್ತದೆ.ಬೆಟ್ಟವು ಎಷ್ಟೇ ದೊಡ್ಡದಾಗಿದ್ದರೂ ಸಿಡಿಲಿಗೆ ನಡಗುತ್ತದೆ.ಕಾಡು ಎಷ್ಟೇ ದಟ್ಟವಾಗಿದ್ದರೂ ಬೆಂಕಿಗೆ ಅಂಜುತ್ತದೆ.ಹಾಗೆಯೇ ಬ್ರಹ್ಮಹತ್ಯೆ,ಸುರಾಪಾನ,ಸ್ತೇಯ( ಕಳ್ಳತನ) ಗುರುಪತ್ನೀಗಮನ ಮತ್ತು ಅಂಥಪಾಪಿಗಳ ಸಹವಾಸ ಈ ಐದು ಪರಿಹರಿಸಲಾಗದ ಪಂಚಮಹಾಪಾತಗಳು ಎನ್ನಿಸಿಕೊಂಡಿದ್ದು ಶಿವನಾಮಸ್ಮರಣೆಯಿಂದ ಇಂತಹ ಘೋರಪಾಪಗಳೂ ನಿವಾರಣೆಯಾಗುತ್ತವೆಯಾದ್ದರಿಂದ ಭಕ್ತರು ಶಿವನಲ್ಲಿ ಶರಣುಬಂದು,ಅನವರತವೂ ಶಿವನಾಮಸ್ಮರಣೆ ಮಾಡುತ್ತಿರಬೇಕು ಎಂದು ಉಪದೇಶಿಸಿದ್ದಾರೆ  ಬಸವಣ್ಣನವರು.
       ಆನೆಯು ದೊಡ್ಡಪ್ರಾಣಿಯು,ದೊಡ್ಡದೊಡ್ಡ ಮರಗಳನ್ನು ಬುಡಸಮೇತ ಕಿತ್ತುಹಾಕಬಲ್ಲ ಪ್ರಾಣಿಯು.ಮದವೇರಿದ ಆನೆಯ ಆರ್ಭಟವಂತೂ ಹೇಳತೀರದು.ಇಂತಹ ಆನೆಯನ್ನು ಪಳಗಿಸಿ,ಹಿಡಿತದಲ್ಲಿಟ್ಟುಕೊಳ್ಳುತ್ತದೆ ಮಾವುತನ ಕೈಯ ಅಂಕುಶವು.ಮಾವುತನು ಆನೆಯ ತಲೆಯ ಮರ್ಮಸ್ಥಾನದಲ್ಲಿ ಅಂಕುಶವನ್ನು ತಿವಿಯುವ ಮೂಲಕ ಅದನ್ನು ಪಳಗಿಸುವನು.ಬೆಟ್ಟವು ಎಷ್ಟೇ ದೊಡ್ಡದಾಗಿದ್ದರೂ ಗಟ್ಟಿಯಾಗಿದ್ದರೂ ಸಿಡಿಲ ಹೊಡೆತಕ್ಕೆ ತತ್ತರಿಸುತ್ತದೆ.ಸಿಡಿಲು ಬೆಟ್ಟದ ಬೃಹತ್ ಬಂಡೆಗಳನ್ನು ಒಡೆದು ಪುಡಿ ಮಾಡಬಲ್ಲದು.ರಾತ್ರಿಯಲ್ಲಿ ಕವಿದ ಕತ್ತಲೆಯು ಎಷ್ಟೇ ಗಾಢವಿದ್ದರೂ ಪುಟ್ಟ ದೀಪವು ಕತ್ತಲೆಯನ್ನು ಕಳೆದು ಬೆಳಕನ್ನುಂಟು ಮಾಡುತ್ತದೆ.ದೊಡ್ಡಕಾಡು,ದಟ್ಟಾರಣ್ಯವು ಬೆಂಕಿಗೆ ಹೆದರುತ್ತದೆ.ಬೆಂಕಿಯ ಒಂದು ಕಿಡಿಯು ಘೋರಾರಣ್ಯವನ್ನು ಸುಟ್ಟು ಬೂದಿಮಾಡಬಲ್ಲದು.ಹಾಗೆಯೇ ಶಿವನಾಮ ಸ್ಮರಣೆಯಿಂದ ಘೋರವಾದ ಬ್ರಹ್ಮಹತ್ಯೆ,ಸುರಾಪಾನ,ಸ್ತೇಯ,ಗುರುಪತ್ನೀಗಮನ ಮತ್ತು ಅಂಥ ಪಾಪಿಗಳ ಸಹವಾಸದಲ್ಲಿರುವುದು ಎನ್ನುವ ಮಹಾಪಾಪಗಳು ಸುಟ್ಟು ಬೂದಿಯಾಗುತ್ತವೆ.ಕಾಡು ಎಷ್ಟೇ ದಟ್ಟವಾಗಿದ್ದರೂ ಬೆಂಕಿಯು ಆ ದಟ್ಟಕಾಡನ್ನು ಸುಟ್ಟು ಬೂದಿ ಮಾಡುತ್ತದೆ.ಹುಲ್ಲಿನ ಬಣವೆಯನ್ನು ಒಂದು ಸಣ್ಣಬೆಂಕಿಯ ಕಡ್ಡಿಯು ಸುಡಬಲ್ಲುದು.ಅಂಕುಶ,ಸಿಡಿಲು,ಜ್ಯೋತಿ,ಬೆಂಕಿ,ಮತ್ತು ಓಂ ನಮಃ ಶಿವಾಯ ಎನ್ನುವ ಶಿವಮಂತ್ರಗಳು ಸಾಮಾನ್ಯವಾದವುಗಳಲ್ಲ; ಲೋಕೋತ್ತರ ಸಾಮರ್ಥ್ಯ ಇದೆ ಅವುಗಳಲ್ಲಿ.ಶಿವನಾಮವು ಸರ್ವವಿಧ ಪಾಪಗಳನ್ನು ನಾಶಮಾಡಬಲ್ಲದು.ಶಿವನಾಮಸ್ಮರಣೆಯಿಂದ ಸಕಲಪಾಪಗಳು,ಪಾತಕಗಳು ನಾಶವಾಗುತ್ತವೆ ಎನ್ನುವುದಕ್ಕೆ ಪ್ರಮಾಣಭೂತವಾದ ಶಿವಮಹಾಪುರಾಣದ ವಾಕ್ಯ ;
  ” ಶಿವೇತಿ ನಾಮದಾವಾಗದನೇರ್ಮಹಾಪಾತಕ ಪರ್ವತಾಃ /
ಭಸ್ಮೀಭವಂತ್ಯನಾಯಸಾತ್ಸತ್ಯಂ ನ ಸಂಶಯಃ //
  ಅಂದರೆ  ” ಶಿವ” ಎಂಬ ನಾಮವೇ ಕಾಡುಕಿಚ್ಚು.ಆ ಕಾಡುಕಿಚ್ಚಿನಿಂದ ಮಹಾಪಾಪವೆಂಬ ಪರ್ವತಗಳು ಅನಾಯಾಸವಾಗಿ ಸುಟ್ಟುಹೋಗುವುವು.ಈ ವಿಷಯವು ಸತ್ಯವು,ಸಂಶಯವಿಲ್ಲ.ಶಿವನಾಮಕ್ಕೆ ಎಷ್ಟು ಪಾಪಗಳನ್ನು ನಾಶಮಾಡುವ ಶಕ್ತಿ ಇರುವುದೋ ಅಷ್ಟು ಪಾಪಗಳನ್ನು ಮನುಷ್ಯರು ಮಾಡಲಾರರು ಎಂದು ಘೋಷಿಸುತ್ತದೆ ಶಿವಮಹಾಪುರಾಣ ;
 ಪಾತಕಾನಿ ವಿನಶ್ಯಂತಿ ಯಾವಂತಿ ಶಿವನಾಮತಃ /
 ಭುವಿ ತಾವಂತಿ ಪಾಪಾನ್ತಿ ಕ್ರಿಯಂತೇ ನ ನರೈರ್ಮುನೇ //
ಮನುಷ್ಯರು ಮಾಡಬಹುದಾದ ಪಾಪಗಳನ್ನೆಲ್ಲಾ ನಾಶಮಾಡುವ ಶಕ್ತಿ ಶಿವನಾಮಕ್ಕೆ ಇದೆ ಎಂದ ಬಳಿಕ ಜನರು ಪಾಪಭೀತಿಗಳಿಗೊಳಗಾಗಿ ಬಳಲುವುದಕ್ಕಿಂತ ಶಿವನಾಮಸ್ಮರಿಸಬಾರದೆ ?
          ಭಾರತೀಯ ಸಮಾಜದಲ್ಲಿ ತಮ್ಮ ಅಧಿಪತ್ಯಸ್ಥಾಪಿಸಿದ್ದ ಬ್ರಾಹ್ಮಣರು ಸುಳ್ಳು ಶಾಸ್ತ್ರ ಪುರಾಣಗಳನ್ನು ಬರೆದು ಜನರನ್ನು ಭಯಭ್ರಾಂತರನ್ನಾಗಿಸಿ ತಮ್ಮ ಅಂಕೆಯಲ್ಲಿರಿಸಿಕೊಂಡಿದ್ದರು.ಪಾಪ ಭೀತಿ,ನರಕಭಯವನ್ನುಂಟು ಮಾಡಿ ಸಮಾಜದ ಶೂದ್ರರು ದಲಿತರು ಭಯದಿಂದ ನಡುಗುವಂತೆ ಮಾಡಿದ್ದರು.ಪಾಪಭೀತಿಯು ಮನುಷ್ಯರ ಸೃಷ್ಟಿಯೇ ಹೊರತು ಪರಮಾತ್ಮನ ಸಂಕಲ್ಪವಲ್ಲ.ಅದಕ್ಕೆ ಪಂಚಮಹಾಪಾತಕಗಳ ಪಟ್ಟಿಯೇ ಒಂದು ಉತ್ತಮ ನಿದರ್ಶನ.ಇತ್ತೀಚಿನ ದಿನಗಳಲ್ಲಿ ಗೋಹತ್ಯೆಯು ಮಹಾಪಾಪಕಾರ್ಯ ಎಂದು ಸಾರುತ್ತ ಜನರಲ್ಲಿ ಭಯವನ್ನುಂಟು ಮಾಡಲಾಗಿದೆ.ಆದರೆ ಗೋಹತ್ಯೆಯು ಪಂಚಮಹಾಪಾತಕಗಳಲ್ಲಿ ಒಂದು ಆಗಿಲ್ಲ ! ಬ್ರಹ್ಮಹತ್ಯೆ ಅಂದರೆ ಬ್ರಾಹ್ಮಣರನ್ನು ಕೊಲ್ಲುವುದು ಪಂಚಮಹಾಪಾತಕಗಳಲ್ಲಿ ಮೊದಲನೆಯದು ಮತ್ತು ಬಲುದೊಡ್ಡಪಾಪವಂತೆ.ಗೋಹತ್ಯೆಯು ಮಹಾಪಾಪಕರವೆನ್ನುವ ಬ್ರಾಹ್ಮಣರು ಅದನ್ನೇಕೆ ಪಂಚಮಹಾಪಾತಕಗಳಲ್ಲಿ ಸೇರಿಸಿಲ್ಲ ? ಬ್ರಾಹ್ಮಣರೆ ತಾನೆ ಶಾಸ್ತ್ರ ಪುರಾಣ ಸಂಹಿತೆ ಸ್ಮೃತಿಗಳನ್ನು ರಚಿಸಿದವರು ? ಅವರೇ ತಮ್ಮ ಭಾಷೆ ,ಭಾವನೆಗೆ ತಕ್ಕ ಅರ್ಥಕೋಶಗಳನ್ನೂ ರಚಿಸಿದ್ದಾರೆ.ವೇದಕಾಲದಿಂದಲೂ ಗೋವು ಪವಿತ್ರಪ್ರಾಣಿಯಾಗಿದ್ದರೂ ಪಂಚಮಹಾಪಾತಕಗಳಲ್ಲಿ ಗೋಹತ್ಯೆಯನ್ನು ಯಾಕೆ ಸೇರಿಸಿಲ್ಲ ? ಗೋವಿಗಿಂತ ಬ್ರಾಹ್ಮಣರನ್ನು ಕೊಲ್ಲುವುದೇ ಮಹಾಪಾಪವಂತೆ.ಅಂದರೆ ಹಿಂದಿನ ರಾಜಪ್ರಭುತ್ವದ ಕಾಲದಲ್ಲಿ ಬ್ರಾಹ್ಮಣರು ಅರಸರ ದಂಡನೆಯಿಂದ ಮುಕ್ತರಾಗಿದ್ದರು,ಅವರನ್ನು ಸಮಾಜದ ಯಾರೂ ಹಿಂಸಿಸುವಂತಿರಲಿಲ್ಲ,ಬ್ರಾಹ್ಮಣರು ಏನೇ ಮಾಡಿದರೂ ಅದು ಅಪರಾಧವಲ್ಲ ಎನ್ನುವ ಭಾವನೆಯನ್ನುಂಟು ಮಾಡಲು ಬ್ರಹ್ಮಹತ್ಯೆಯನ್ನು ಪಂಚಮಹಾಪಾತಗಳ ಸಾಲಿನಲ್ಲಿ ಮೊದಲನೆಯ ಮಹಾಪಾತಕವನ್ನಾಗಿ ಸೇರಿಸಿದ್ದಾರೆ.ಸುರಾಪಾನವು ಬಡವರ ಅಧಃಪತನಕ್ಕೆ ಕಾರಣವಾಗುವುದರಿಂದ ಅದನ್ನು ಪಾಪವೆಂದು ಪರಿಗಣಿಸಬಹುದು. ಕಳ್ಳತನವು ಸಮಾಜಘಾತುಕ ಕ್ರಿಯೆಯಾದ್ದರಿಂದ ಅದನ್ನು  ಒಂದು ಪಾಪವೆಂದು ಪರಿಗಣಿಸಬಹುದು.ಗುರುಪತ್ನಿಯು ಮಾತೃಸ್ವರೂಪಳಾದ ಪೂಜ್ಯಳಾದ್ದರಿಂದ ಅವಳನ್ನು ಕೂಡುವುದು ಮಹಾ ಅಪರಾಧ ಎಂದರೆ ಒಪ್ಪಬಹುದು.ಆದರೆ ತಪ್ಪು ಮಾಡಿದರೂ ಬ್ರಾಹ್ಮಣರು ತಮ್ಮ ಜಾತಿಯ ಬಲದಿಂದ ಶಿಕ್ಷಾರ್ಹರಲ್ಲ,ವಧಾರ್ಹರಲ್ಲ ಎನ್ನುವುದು ಯಾವ ಸೀಮೆಯ ನ್ಯಾಯ?ಇಂತಹವುಗಳು ವಿಕೃತಿಗಳು ಎನ್ನುವುದನ್ನು ಶಿವಮಹಾಪುರಾಣದ ಕರ್ತೃಗಳಾದ ಮಹರ್ಷಿ ವೇದವಾಸ್ಯರೇ ಅಲ್ಲಗಳೆದು ಶಿವನಾಮಸ್ಮರಣೆಯ ಮಹತ್ವವನ್ನು‌ ಒತ್ತಿ ಹೇಳಿದ್ದಾರೆ.ಜನರು ಅಜ್ಞಾನ ಅಂಧಕಾರದಲ್ಲಿದ್ದುದರಿಂದ ವೇದವ್ಯಾಸರು ಹೇಳಿದ್ದ ಸತ್ಯವನ್ನು ಸಹ ತಿಳಿದುಕೊಂಡಿರಲಿಲ್ಲ.ಈ ಸತ್ಯವನ್ನು ಎತ್ತಿಹೇಳಲು ಬಸವಣ್ಣನವರೇ ಬರಬೇಕಾಯಿತು.ಕೆಲವು ಕೋಶಗಳಲ್ಲಿ ಶಿಶುಹತ್ಯೆಯು ಪಂಚಮಹಾಪಾತಗಳಲ್ಲಿ ಒಂದು ಎಂದು ಸೇರಿಸಲಾಗಿದೆಯಾದರೂ ಅದು ಕೂಡ ಇತ್ತೀಚಿನವರ ಸೇರ್ಪಡೆ ಇರಬೇಕು ಎನ್ನಿಸುತ್ತದೆ.ಯಾಕೆಂದರೆ ನಾನು ಸಂಸ್ಕೃತಶಬ್ದಗಳ ಅರ್ಥಗಳಿಗೆ ಅನ್ವಯಿಸುತ್ತಿರುವ ಜಿ.ಎನ್ ಚಕ್ರವರ್ತಿ ಅವರ ಸಂಸ್ಕೃತ – ಕನ್ನಡ ನಿಘಂಟುವಿನಲ್ಲಿ  ಬ್ರಹ್ಮಹತ್ಯೆ,ಸುರಾಪಾನ,ಸ್ತೇಯ,ಗುರುಪತ್ನೀಗಮನ ಮತ್ತು ಅಂಥ ಪಾಪಿಗಳ ಸಹವಾಸವೇ ಪಂಚಮಹಾಪಾತಕಗಳು ಎನ್ನಲಾಗಿದೆ.ವಿಶೇಷವೆಂದರೆ ಕೋಶಕರ್ತರಾದ ಜಿ.ಎನ್.ಚಕ್ರವರ್ತಿ ಅವರು ಸಂಸ್ಕೃತದ ಹಳೆಯ ಕೋಶಗಳಾದ  ‘ ಶಬ್ದೌಘ ಕಲ್ಪದ್ರುಮ’ , ‘ ಸಂಸ್ಕೃತ ಕನ್ನಡ ಶಬ್ದಕೋಶ ‘ ಮತ್ತು  ‘ ಶಬ್ದ ಸಂಕುಳ’ ಎನ್ನುವ ಕೋಶಗಳನ್ನು ಆಧರಿಸಿಯೇ   ಸಂಸ್ಕೃತ- ಕನ್ನಡ ನಿಘಂಟನ್ನು ರಚಿಸಿದ್ದಾರೆ.ಅಂದರೆ ಆ ಕೋಶಗಳಲ್ಲಿಯೂ ಭ್ರೂಣಹತ್ಯೆಯು ಒಂದು ಪಾತಕವಾಗಿರಲಿಲ್ಲ ಎನ್ನುವುದು ಸ್ಪಷ್ಟ.ಇತ್ತೀಚಿನ ಕೋಶಕರ್ತರುಗಳು ಹೆಚ್ಚುತ್ತಿರುವ ಭ್ರೂಣಹತ್ಯೆ,ಶಿಶುಹತ್ಯೆಯ ಕಾರಣದಿಂದ ಅದನ್ನು ಪಂಚಮಹಾಪಾತಕಗಳಲ್ಲಿ ಒಂದನ್ನಾಗಿ ಸೇರಿಸಿರಬೇಕು ಎನ್ನಿಸುತ್ತದೆ.ಇಂತಹ ಮನುಷ್ಯಸೃಷ್ಟಿಯಾದ ಪಾಪ- ಶಾಪಗಳ ಭೀತಿಯಿಂದ ಸಮಾಜದಲ್ಲಿ  ತಮ್ಮದಲ್ಲದ ತಪ್ಪಿನಿಂದ ನಿಕೃಷ್ಟಜೀವನ ಸಾಗಿಸುತ್ತಿದ್ದ ಪದದುಳಿತರನ್ನು ಮೇಲಕ್ಕೆತ್ತಲು ಬಸವಣ್ಣನವರು ಶಿವನಾಮ ಸ್ಮರಣೆಯಿಂದ ಸರ್ವಪಾಪಗಳಿಂದ ಮುಕ್ತರಾಗಬಹುದಾದ್ದರಿಂದ ಎಲ್ಲರೂ ಶಿವನಾಮವನ್ನು ಸ್ಮರಿಸಿ,ಉದ್ಧಾರವಾಗಿ ಎಂದು ಉಪದೇಶಿಸಿ ಮನುಕುಲದ ಬಗೆಗಿನ ತಮ್ಮ ಅಂತಃಕರಣಪೂರಿತ ಉದ್ಧಾರದ ಬದ್ಧತೆಯನ್ನು ಮೆರೆದಿದ್ದಾರೆ ಈ ವಚನದಲ್ಲಿ.

About The Author