ರುದ್ರಾಕ್ಷ ಮಹಿಮಾ ನಿರೂಪಣಂ

ಬಸವೋಪನಿಷತ್ತ ೩೫ : ರುದ್ರಾಕ್ಷ ಮಹಿಮಾ ನಿರೂಪಣಂ : ಮುಕ್ಕಣ್ಣ ಕರಿಗಾರ
    ರುದ್ರಾಕ್ಷಿಯನ್ನು ಧರಿಸಿದವರು ಸ್ವಯಂ ಶಿವಸ್ವರೂಪರಾಗುತ್ತಾರೆ ಎನ್ನುವ ಅರ್ಥವನ್ನು ಹೊರಹೊಮ್ಮಿಸುವ ಬಸವಣ್ಣನವರ ಮೂರು ವಚನಗಳನ್ನು ಅರ್ಥೈಸಿಕೊಂಡಾದ ಬಳಿಕ ಈಗ ರುದ್ರಾಕ್ಷದ ಮಹಿಮೆಯನ್ನು ತಿಳಿದುಕೊಳ್ಳೋಣ.ವೇದವ್ಯಾಸರಿಂದ ರಚಿಸಲ್ಪಟ್ಟ ಶಿವಮಹಾಪುರಾಣದ ಮೊದಲನೆಯ ಭಾಗವಾದ ವಿದ್ಯೇಶ್ವರ ಸಂಹಿತೆಯ ಸಾಧ್ಯಸಾಧನ ಖಂಡದಲ್ಲಿ ‘ ರುದ್ರಾಕ್ಷ ಮಾಹಾತ್ಮವರ್ಣನೆ’ ಎನ್ನುವ  ಇಪ್ಪತ್ತೈದನೆಯ ಅಧ್ಯಾಯವು ರುದ್ರಾಕ್ಷಿಯ ಮಹಿಮೆಯನ್ನು ವಿವರಿಸುತ್ತಿದ್ದು ಅದರ ಸಂಗ್ರಹಾನುವಾದವನ್ನು‌ ಇಲ್ಲಿ ನೀಡುತ್ತಿದ್ದೇನೆ.
     ರುದ್ರಾಕ್ಷ ಅಥವಾ ರುದ್ರಾಕ್ಷಿಯ ಮಹಿಮೆಯನ್ನು ಸ್ವಯಂ ಪರಶಿವನೇ ತನ್ನ ಪತ್ನಿಯಾದ ಪಾರ್ವತಿ ದೇವಿಗೆ ಹೇಳಿದಂತೆ ನಿರೂಪಿಸಲ್ಪಟ್ಟಿರುವ ‘ ರುದ್ರಾಕ್ಷ ಮಾಹಾತ್ಮ್ಯ  ವರ್ಣನೆ’ ಯು ರುದ್ರಾಕ್ಷದ ಮಹತ್ವವನ್ನು ವಿವರಿಸುವುದರ ಜೊತೆಗೆ ಶಿವಭಕ್ತರು ಅವಶ್ಯವಾಗಿ ರುದ್ರಾಕ್ಷವನ್ನು ಧರಿಸಬೇಕೆಂದು ವಿಧಿಸಿ ರುದ್ರಾಕ್ಷಿಯ ಪ್ರಕಾರಗಳು ಮತ್ತು ಅವುಗಳನ್ನು ಧರಿಸಬೇಕಾದ ಅವಯವ,ಸಂಖ್ಯೆ,ಮಂತ್ರ ಮೊದಲಾದವುಗಳನ್ನು ವಿವರವಾಗಿ ವಿವರಿಸಿದೆ.
  ” ಶಿವಪ್ರಿಯತಮೋ ಜ್ಞೇಯೋ ರುದ್ರಾಕ್ಷಃ ಪರಪಾವನಃ/
  ದರ್ಶನಾತ್ಸ್ಪರ್ಶನಾಜ್ಜಾಪ್ಯಾತ್ಸರ್ವಪಾಪಹರಃ ಸ್ಮೃತಃ //
     ಪರಮಪವಿತ್ರವಾದ ರುದ್ರಾಕ್ಷವು ಶಿವನಿಗೆ ತುಂಬಾ ಪ್ರಿಯವಾದುದು.ಅದನ್ನು ದರ್ಶನ ಮಾಡಿದರೂ,ಸ್ಪರ್ಶಿಸಿದರೂ,ಧರಿಸಿ ಜಪಿಸಿದರೂ ಸಹ ಸಕಲ ಪಾಪಗಳು ನಾಶವಾಗುವವು.
     ಹಿಂದೆ ಪರಮಾತ್ಮನಾದ ಶಿವನು ಲೋಕಕ್ಷೇಮಕ್ಕಾಗಿ ಈ ರುದ್ರಾಕ್ಷ ಮಹಿಮೆಯನ್ನು ಪಾರ್ವತೀ ದೇವಿಯ ಎದುರಿನಲ್ಲಿ ಹೀಗೆ ಹೇಳಿದನು ; ” ಎಲೌ ಮಹೇಶ್ವರಿಯಾದ ಪಾರ್ವತಿ ! ಭಕ್ತರಿಗೆ ಹಿತವನ್ನು ಮಾಡಲಪೇಕ್ಷೆಯಿಂದ ರುದ್ರಾಕ್ಷ ಮಹಿಮೆಯನ್ನು ನಿನಗೆ ಪ್ರೀತಿಪೂರ್ವಕವಾಗಿ ಹೇಳುವೆನು,ಕೇಳು.ಪಾರ್ವತಿಯೆ,ಹಿಂದೆ ನಾನು ದೇವಮಾನ ರೀತಿಯಿಂದ ಒಂದು ಸಾವಿರ ವರ್ಷ ತಪಸ್ಸಾನ್ನಾಚರಿಸಿದೆನು.ಸ್ವತಂತ್ರನೂ ಪರಮೇಶ್ವರನೂ,ಲೋಕೋಪಕಾರವನ್ನು ಮಾಡುವವನೂ ಆದಂತಹ ನಾನು ಲೀಲಾರ್ಥವಾಗಿ ಸ್ವಲ್ಪ ಕಣ್ಣನ್ನು ತೆರೆದೆನು.ಆಗ ಸುಂದರವಾದ ನನ್ನ ನೇತ್ರಪುಟಗಳಿಂದ ಜಲಬಿಂದು ( ಕಣ್ಣೀರು )ಗಳು ಬಿದ್ದವು.ಆ ಕಣ್ಣೀರಿನಿಂದ ರುದ್ರಾಕ್ಷಗಳೆಂಬ ಮರಗಳು ಜನಿಸಿದವು.ಹೀಗೆ ಭಕ್ತರನ್ನನುಗ್ರಹಿಸಲು ಕಣ್ಣು ನೀರನ್ನು ವೃಕ್ಷವಾಗಿ ನಿರ್ಮಿಸಿ ವಿಷ್ಣುಭಕ್ತರೇ ಮೊದಲಾದ ನಾಲ್ಕುವರ್ಣದವರಿಗೆ ಕೊಟ್ಟೆನು.ಮತ್ತು ಗೌಡದೇಶ,ಮಧುರೆ,ಅಯೋಧ್ಯೆ,ಲಂಕೆ,ಮಲಯದ್ವೀಪ,ಸಹ್ಯಾದ್ರಿ,ಕಾಶೀ ಮುಂತಾದ ಸ್ಥಳಗಳಲ್ಲಿ ಮಹಾಪಾಪಗಳನ್ನು ಹೋಗಲಾಡಿಸುವವೂ,ನನಗೆ ಪ್ರಿಯವಾದವುಗಳು ಆದ ಆ ರುದ್ರಾಕ್ಷಿಗಳನ್ನು ಬೆಳೆಯುವಂತೆ ಮಾಡಿದೆನು.ಭೋಗ ಮತ್ತು ಮೋಕ್ಷಗಳನ್ನು  ಅಪೇಕ್ಷಿಸುವ ಶಿವಭಕ್ತರೂ,ಮಿಕ್ಕವರೂ ಸಹ ಶಿವಪಾರ್ವತಿಯರ ಪ್ರೀತಿಗಾಗಿ ರುದ್ರಾಕ್ಷಿಗಳನ್ನು ಧರಿಸಬೇಕು.ನೆಲ್ಲಿಕಾಯಿಯಷ್ಟು ಪ್ರಮಾಣದ ರುದ್ರಾಕ್ಷಿಯು ಉತ್ತಮವಾದುದು.ಬದರೀಫಲ ಪ್ರಮಾಣವಾಗಿರುವುದು ಮಧ್ಯಮವು.ಕಡಲೆಯ ಪ್ರಮಾಣವಾಗಿರುವುದು ಅಧಮವು.ಅಂದರೆ ಭಕ್ತರು ನೆಲ್ಲಿಕಾಯಿ ಪ್ರಮಾಣದ ರುದ್ರಾಕ್ಷಿಯನ್ನು ಧರಿಸುವುದು ಪ್ರಯೋಜನಕಾರಿಯು.
     ವಿವಿಧಪ್ರಮಾಣದ ರುದ್ರಾಕ್ಷಿಗಳನ್ನು ಧರಿಸುವುದರಿಂದ ಸಿಗುವ ಫಲಗಳನ್ನು ಶಿವನು ಪಾರ್ವತಿಗೆ ಹೇಳಿದ್ದಾನೆ.ಬದರೀಪ್ರಮಾಣದ ರುದ್ರಾಕ್ಷಿಯು ಇಹಲೋಕದಲ್ಲಿ ಸುಖಸೌಭಾಗ್ಯವೃದ್ಧಿಯನ್ನುಂಟು ಮಾಡುವುದು.ನೆಲ್ಲಿಕಾಯಿ ಪ್ರಮಾಣದ ರುದ್ರಾಕ್ಷಿಯು ಸಕಲ ಅರಿಷ್ಟಗಳನ್ನೂ ನಾಶಮಾಡುವುದು.ಗುಲಗುಂಜಿ ಅಥವಾ ಕಡಲೆಕಾಳು ಪ್ರಮಾಣದ ರುದ್ರಾಕ್ಷಿಯು ಸಕಲ ಇಷ್ಟಾರ್ಥಗಳನ್ನುಂಟು ಮಾಡುವುದು.ರುದ್ರಾಕ್ಷಿಯು ಎಷ್ಟೆಷ್ಟು ಚಿಕ್ಕವಾಗಿರುವುದೋ ಅಷ್ಟಷ್ಟು ಹೆಚ್ಚು ಫಲಗಳನ್ನು ಒಂದಕ್ಕಿಂತ ಮತ್ತೊಂದು ಹತ್ತರಷ್ಟು ಹೆಚ್ಚಾಗಿ ಕೊಡುವುದು.ರುದ್ರಾಕ್ಷಿ ಧಾರಣೆಯಿಂದ ಗೈದಪಾಪಗಳೆಲ್ಲವೂ ನಾಶವಾಗುತ್ತವೆ.ಸರ್ವಾರ್ಥಸಾಧಕವಾದ ರುದ್ರಾಕ್ಷಿ ಮಾಲೆಯಂತೆ ಫಲಪ್ರದವೂ ಶುಭವೂ ಪವಿತ್ರವೂ ಆದಂತಹ ಮತ್ತೊಂದು ಮಾಲೆಯು ಇಲ್ಲ.
      ಒಂದೇ ಆಕಾರವಾಗಿರುವವೂ,ಮನೋಹರವೂ,ಗಟ್ಟಿಯಾದವುಗಳೂ,ಮುಳ್ಳುಗಳಿರುವಂತಹೂ ಆದ ರುದ್ರಾಕ್ಷಿಗಳು ಶುಭವಾದವುಗಳಾಗಿದ್ದು ಭೋಗ ಮತ್ತು ಮೋಕ್ಷವನ್ನುಂಟು ಮಾಡುತ್ತವೆ.ಹುಳು ಕೊರೆದಿರುವಂತಹವುಗಳೂ,ಚೂರಾಗಿರುವುದು,ಭಿನ್ನವಾಗಿರುವುದು,ಮುಳ್ಳುಗಳಿಲ್ಲದಿರುವುದು,ದುಂಡಗಿಲ್ಲದಿರುವುದು– ಇಂತಹ ರುದ್ರಾಕ್ಷಿಗಳನ್ನು ಧರಿಸಬಾರದು,ತ್ಯಜಿಸಬೇಕು.ಮಾಲೆಯನ್ನು ಪೋಣಿಸುವಂತೆ ತಾನಾಗಿಯೇ ಮಧ್ಯದಲ್ಲಿ ರಂಧ್ರವುಳ್ಳ ರುದ್ರಾಕ್ಷವು ಉತ್ತಮವಾದುದು,ಪುರುಷಪ್ರಯತ್ನದಿಂದಾದ ರಂಧ್ರವುಳ್ಳದ್ದು ಮಧ್ಯಮವು.
       ರುದ್ರಾಕ್ಷಧಾರಣೆಯು ಮಹಾಪಾಪಗಳನ್ನು ನಾಶಮಾಡುವುದು.ನೂರು ರುದ್ರಾಕ್ಷಿಗಳನ್ನು ಧರಿಸಿದವನು ರುದ್ರಸ್ವರೂಪವನ್ನು ಪಡೆಯುವನು.ಹನ್ನೊಂದು ಸಾವಿರ ರುದ್ರಾಕ್ಷಿಗಳನ್ನು ಧರಿಸಿದರೆ ಲಭಿಸುವ ಫಲಗಳನ್ನು ವರ್ಣಿಸಲಾಗದು‌.ಐದು ಸಾವಿರದ ಐದುನೂರು ರುದ್ರಾಕ್ಷಗಳಿಂದ ಕಿರೀಟವನ್ನು ಭಕ್ತಿಪೂರ್ವಕವಾಗಿ ನಿರ್ಮಿಸಿ ಧರಿಸಬೇಕು.ಮುನ್ನೂರ ಅರವತ್ತು ರುದ್ರಾಕ್ಷಿಗಳಿಂದ ಒಂದೊಂದು ಎಳೆಯಂತೆ ಮೂರು ಎಳೆಯುಳ್ಳ ಯಜ್ಞೋಪವೀತವನ್ನು ( ಜನಿವಾರ,ಶೈವ ಬ್ರಾಹ್ಮಣರಿಗಾಗಿ) ರುದ್ರಾಕ್ಷಿಗಳಿಂದ ಭಕ್ತಿಪೂರ್ವಕವಾಗಿ ನಿರ್ಮಿಸಬೇಕು.ಶಿಖೆಯಲ್ಲಿ ಮೂರು ರುದ್ರಾಕ್ಷಿಗಳನ್ನು ಧರಿಸಬೇಕು.ಕಿವಿಗಳಲ್ಲಿ ಆರು ರುದ್ರಾಕ್ಷಿಗಳನ್ನು ಧರಿಸಬೇಕು‌.ಕತ್ತಿನಲ್ಲಿ ನೂರೊಂದು ರುದ್ರಾಕ್ಷಗಳನ್ನು ಧರಿಸಬೇಕು.ಬಾಹುಗಳಲ್ಲಿ ಹನ್ನೊಂದು ಹನ್ನೊಂದು ರುದ್ರಾಕ್ಷಗಳನ್ನು ಧರಿಸಬೇಕು.ತೋಳುಗಳ ಮಧ್ಯ ಸಂಧಿಗಳಲ್ಲಿಯೂ,ಮಣಿಕಟ್ಟಿನಲ್ಲಿಯೂ,ಉಪವೀತದಲ್ಲೂ ಸಹ ಮೂರು ಮೂರು ರುದ್ರಾಕ್ಷಿಗಳನ್ನು ಧರಿಸಬೇಕು.ಮಿಕ್ಕ ಕಂಟಕವುಳ್ಳ,ಒಂದೇ ಆಕಾರದ ಐದು ರುದ್ರಾಕ್ಷಗಳನ್ನು ಸೊಂಟದಲ್ಲಿ ಧರಿಸಬೇಕು‌.ಇಷ್ಟು ಸಂಖ್ಯೆಯ ರುದ್ರಾಕ್ಷಗಳನ್ನು ಧರಿಸಿದವನನ್ನು ಶಿವಭಕ್ತರುಗಳು ಮಹೇಶ್ವರನಂತೆ ನಮಸ್ಕರಿಸಿ,ಸ್ತುತಿಸಬೇಕು.ಹೀಗೆ ರುದ್ರಾಕ್ಷಿಗಳನ್ನು ಧರಿಸಿ ಆಸನದಲ್ಲಿ ಕುಳಿತು ಶಿವಧ್ಯಾನಮಾಡುತ್ತಿರುವ ಶಿವಭಕ್ತನ ದರ್ಶನ ಮಾಡಿದರೆ ಸಕಲ ಪಾಪಗಳು ಪರಿಹಾರವಾಗುತ್ತವೆ.
       ಹೆಚ್ಚಿನ ಪ್ರಮಾಣದಲ್ಲಿ ರುದ್ರಾಕ್ಷಿಗಳು ಸಿಗದೆ ಇದ್ದ ಪಕ್ಷದಲ್ಲಿ ರುದ್ರಾಕ್ಷಿಗಳನ್ನು ಧರಿಸುವ ಮತ್ತೊಂದು ಕ್ರಮ ಉಂಟು.ಶಿಖೆಯಲ್ಲಿ ಒಂದು ರುದ್ರಾಕ್ಷವನ್ನು,ಶಿರಸ್ಸಿನಲ್ಲಿ ಮುವ್ವತ್ತು ರುದ್ರಾಕ್ಷಗಳನ್ನು ಧರಿಸಬೇಕು.ಕತ್ತಿನಲ್ಲಿ ಐವತ್ತು ರುದ್ರಾಕ್ಷಗಳನ್ನು,ಬಾಹುಗಳಲ್ಲಿ ಹದಿನಾರು ಹದಿನಾರು ರುದ್ರಾಕ್ಷಗಳನ್ನು ಧರಿಸಬೇಕು.ಮಣಿಕಟ್ಟಿನಲ್ಲಿ ಹನ್ನೆರಡು ಹನ್ನೆರಡು,ಭುಜಶಿರಸ್ಸಿನಲ್ಲಿ ಐನೂರು ರುದ್ರಾಕ್ಷಿಗಳನ್ನು ಧರಿಸಬೇಕು.ನೂರೆಂಟು ರುದ್ರಾಕ್ಷಿಗಳಿಂದ ಉಪವೀತವನ್ನು ನಿರ್ಮಿಸಬೇಕು.ಈ ರೀತಿಯಾಗಿ ಸಾವಿರ ರುದ್ರಾಕ್ಷಿಗಳನ್ನು ದೃಢಭಕ್ತಿಯಿಂದ ಧರಿಸುವನನ್ನು ದೇವತೆಗಳೆಲ್ಲರೂ ರುದ್ರನಂತೆಯೇ ನಮಸ್ಕರಿಸುವರು.
     ಶಿಖೆಯಲ್ಲಿ ಒಂದು ರುದ್ರಾಕ್ಷವನ್ನೂ,ಶಿರಸ್ಸಿನಲ್ಲಿ ನಲವತ್ತು ರುದ್ರಾಕ್ಷಗಳನ್ನೂ ಕಂಠದಲ್ಲಿ ಮುವ್ವತ್ತೆರಡು ರುದ್ರಾಕ್ಷಗಳನ್ನು ,ಎದೆಯಲ್ಲಿ ನೂರೆಂಟು ರುದ್ರಾಕ್ಷಗಳನ್ನು,ಕೈಗಳೆರಡರಲ್ಲಿ ಹದಿನಾರು ಹದಿನಾರು ರುದ್ರಾಕ್ಷಗಳನ್ನೂ ಕಿವಿಯಲ್ಲಿ ಒಂದೊಂದು,ಬಾಹುಗಳಲ್ಲಿ ಆರು ಆರು ರುದ್ರಾಕ್ಷಿಗಳನ್ನು ಧರಿಸುವ ಶಿವಯೋಗಿಯನ್ನು ಎಲ್ಲರೂ ಶಿವನಂತೆಯೇ ಪೂಜಿಸಿ,ನಮಸ್ಕರಿಸಬೇಕು.
       ಶಿರಸ್ಸಿನಲ್ಲಿ ಈಶಾನ ಮಂತ್ರದಿಂದಲೂ,ಕಿವಿಗಳಲ್ಲಿ ತತ್ಪುರುಷ ಮಂತ್ರದಿಂದಲೂ,ಕತ್ತು ಹೃದಯದಲ್ಲಿ ಅಘೋರ ಮಂತ್ರದಿಂದಲೂ ರುದ್ರಾಕ್ಷಗಳನ್ನು ಧರಿಸಬೇಕು.ಅಘೋರಬೀಜಮಂತ್ರದಿಂದ ಕೈಯ್ಗಳಲ್ಲಿ ರುದ್ರಾಕ್ಷಗಳನ್ನು ಧರಿಸಬೇಕು.ರುದ್ರಾಕ್ಷಗಳಿಂದ ಪೋಣಿಸಿರುವ ಮಾಲಿಕೆಯನ್ನು ವಾಮದೇವ ಮಂತ್ರದಿಂದ ಉದರದಲ್ಲಿ ಧರಿಸಬೇಕು.ಪಂಚಬ್ರಹ್ಮ ಮಂತ್ರಗಳಿಂದ ಯಜ್ಞೋಪವೀತವನ್ನೂ ಮತ್ತು ಹನ್ನೆರಡು ರುದ್ರಾಕ್ಷಗಳನ್ನು ಧರಿಸಬೇಕು ಅಥವಾ ಶಿವಮೂಲಮಂತ್ರದಿಂದ ಎಲ್ಲಾ ರುದ್ರಾಕ್ಷಗಳನ್ನು ಧರಿಸಬಹುದು.ರುದ್ರಾಕ್ಷಿಯನ್ನು ಧರಿಸುವವರು ಹೆಂಡ,ಸಾರಾಯಿ,ಮಾಂಸ,ಬೆಳ್ಳುಳ್ಳಿ,ಈರುಳ್ಳಿ,ನುಗ್ಗೇಕಾಯಿ,ಚಳ್ಳೆಹಣ್ಣುಗಳನ್ನು ಹಾಗೂ ಹಂದಿಮಾಂಸವನ್ನು ತಿನ್ನಬಾರದು.
       ಬ್ರಹ್ಮಚಾರಿ,ವಾನಪ್ರಸ್ಥ,ಗೃಹಸ್ಥ,ಯತಿ ಇವರುಗಳೆಲ್ಲ ಪರಮರಹಸ್ಯವಾದ ಈ ರುದ್ರಾಕ್ಷವನ್ನು ಅವಶ್ಯವಾಗಿ ಧರಿಸಬೇಕು.ರುದ್ರಾಕ್ಷ ಧಾರಣೆ ಮಾತ್ರದಿಂದಲೆ ಪುಣ್ಯ ಮತ್ತು ಮೋಕ್ಷ ಲಭಿಸುವುದು.ಎಲ್ಲಾ ಆಶ್ರಮದವರೂ,ಸ್ತ್ರೀಯರೂ,ಬ್ರಾಹ್ಮಣ,ಕ್ಷತ್ರಿಯ,ವೈಶ್ಯ ಮತ್ತು ಶೂದ್ರ ಎನ್ನುವ ವರ್ಣಭೇದವಿಲ್ಲದೆ ಎಲ್ಲರೂ ಪವಿತ್ರವಾದ ರುದ್ರಾಕ್ಷವನ್ನು ಧರಿಸಬೇಕು.
       ಯಾವನು ರುದ್ರಾಕ್ಷವೊಂದನ್ನಾದರೂ ಶಿರಸ್ಸಿನಲ್ಲಿ ಧರಿಸುವನೋ,ಭಸ್ಮತ್ರಿಪುಂಡ್ರವನ್ನು ಧರಿಸುವನೋ,ಶಿವಪಂಚಾಕ್ಷರ ಮಂತ್ರವನ್ನು ಜಪಿಸುವನೋ ಅವನೇ ಸಾಧುವು,ಅವನೇ ಸತ್ಪುರುಷನು.
     ಯಮನು ತನ್ನ ದೂತರಿಗೆ ಆಜ್ಞಾಪಿಸಿರುವುದು –” ಯಾವನ ಶರೀರದಲ್ಲಿ ರುದ್ರಾಕ್ಷವಿಲ್ಲವೋ,ಹಣೆಯಲ್ಲಿ ವಿಭೂತಿ ಇಲ್ಲವೋ,ಮುಖದಲ್ಲಿ ಶಿವಪಂಚಾಕ್ಷರಿ ಮಂತ್ರವಿಲ್ಲವೋ ಅವನನ್ನು ಯಮಲೋಕಕ್ಕೆ ಎಳೆದುಕೊಂಡು ಬನ್ನಿ.ಭಸ್ಮರುದ್ರಾಕ್ಷಗಳ ಮಹಿಮೆಯನ್ನು ತಿಳಿದು ಭಸ್ಮರುದ್ರಾಕ್ಷಧಾರಿಗಳಾದವರನ್ನು ಸದಾ ನಾವು ಪೂಜಿಸಬೇಕು.ಅವರನ್ನು ಯಮಲೋಕಕ್ಕೆ ಕರೆತರಕೂಡದು ” ಯಮದೂತರು ಯಮನ ಆಜ್ಞೆಯಂತೆ ನಡೆದುಕೊಳ್ಳುತ್ತಿದ್ದು ಭಸ್ಮರುದ್ರಾಕ್ಷಿಗಳನ್ನು ಧರಿಸಿದವರು ಯಮಲೋಕಕ್ಕೆ ಹೋಗುವುದಿಲ್ಲ.
     ಪರಮಪವಿತ್ರವಾದ ರುದ್ರಾಕ್ಷಿಯಲ್ಲಿ ಅನೇಕ ವಿಧಗಳಿರುವವು . ಅವುಗಳಲ್ಲಿ ಹದಿನಾಲ್ಕು ಮುಖಗಳವರೆಗೆ ರುದ್ರಾಕ್ಷಿಗಳಿದ್ದು ಅವುಗಳ ಸ್ವರೂಪ,ಧರಿಸುವುದರಿಂದ ದೊರಕುವ ಫಲಗಳನ್ನು ಮುಂದೆ ವಿವರಿಸಲಾಗಿದೆ.
     ಒಂದು ಮುಖವುಳ್ಳ ರುದ್ರಾಕ್ಷಿಯು ಸಾಕ್ಷಾತ್ ಶಿವಸ್ವರೂಪವಾದುದು.ಭೋಗ ಮೋಕ್ಷಗಳನ್ನು ಕೊಡುವುದು.ಏಕಮುಖಿರುದ್ರಾಕ್ಷಿ ಧಾರಣೆಯಿಂದ ಬ್ರಹ್ಮಹತ್ಯಾಪಾಪ ನಿವಾರಣೆಯಾಗುವುದು.ಏಕಮುಖದ ರುದ್ರಾಕ್ಷವನ್ನು ಧರಿಸಿ,ಪೂಜಿಸುವ ಸ್ಥಳದಲ್ಲಿ ಲಕ್ಷ್ಮಿಯು ನೆಲೆಸಿರುವಳು.ಸಕಲೋಪದ್ರವಗಳು ನಾಶವಾಗುವವು.ಏಕಮುಖದ ರುದ್ರಾಕ್ಷಿಯನ್ನು ಧರಿಸುವವನ ಇಷ್ಟಾರ್ಥಗಳೆಲ್ಲವೂ ಸಿದ್ಧಿಸುವವು.
     ಎರಡು ಮುಖದ ರುದ್ರಾಕ್ಷಿಯು ಈಶ್ವರನ ಸ್ವರೂಪವು.ಸಕಲ ಇಷ್ಟಾರ್ಥಗಳನ್ನು ಈಡೇರಿಸುವ ಎರಡುಮುಖದ ರುದ್ರಾಕ್ಷಿಯು ಗೋಹತ್ಯಾ ಪಾಪವನ್ನು ಹೋಗಲಾಡಿಸುವುದು.
    ಮೂರು ಮುಖದ ರುದ್ರಾಕ್ಷವು ಮುಕ್ತಿಸಾಧನೆಯನ್ನುಂಟು ಮಾಡುವುದು.ಅದರ ಧಾರಣೆಯಿಂದ ಸಕಲವಿದ್ಯೆಗಳು ಲಭಿಸುವವು.
      ನಾಲ್ಕುಮುಖವುಳ್ಳ ರುದ್ರಾಕ್ಷವು ಚತುರ್ಮುಖ ಬ್ರಹ್ಮನ ಸ್ವರೂಪವಾದುದು.ಅದು ನರಹತ್ಯಾದೋಷವನ್ನು ಪರಿಹರಿಸುವುದು.ನಾಲ್ಕುಮುಖದ ರುದ್ರಾಕ್ಷಿ ಧಾರಣೆಯಿಂದ ಚತುರ್ವಿಧ ಪುರುಷಾರ್ಥಗಳು ಸಿದ್ಧಿಸುವವು.
    ಐದು ಮುಖವುಳ್ಳ ರುದ್ರಾಕ್ಷಿಯು ಕಾಲಾಗ್ನಿ ಎನ್ನುವ ಹೆಸರನ್ನುಳ್ಳ ರುದ್ರನ ಸ್ವರೂಪವು.ಅದು ಮುಕ್ತಿಯನ್ನೂ ಸಕಲ ಇಷ್ಟಾರ್ಥಗಳನ್ನೂ ಈಡೇರಿಸುವುದು.ಪಂಚಮುಖಿ ರುದ್ರಾಕ್ಷಿ ಧಾರಣೆಯಿಂದ ಅಗಮ್ಯಗಮನ ( ಕೂಡಬಾರದ ಸ್ತ್ರೀಯರನ್ನು ಕೂಡುವುದು ) ಅಭಕ್ಷ್ಯಭೋಜನ( ತಿನ್ನಬಾರದ್ದನ್ನು ತಿನ್ನುವುದು) ಸೇರಿದಂತೆ ಸಕಲ ಪಾಪಗಳನ್ನು ಹೋಗಲಾಡಿಸುವುದು.
     ಆರು ಮುಖವುಳ್ಳ ರುದ್ರಾಕ್ಷವು ಷಣ್ಮುಖ ಸ್ವರೂಪವಾದುದು.ಅದನ್ನು ಬಲಭುಜದಲ್ಲಿ ಧರಿಸಿದರೆ ಬ್ರಹ್ಮಹತ್ಯೆ ಮೊದಲಾದ ಪಾಪಗಳು ನಾಶವಾಗುವವು.
   ಏಳು ಮುಖವುಳ್ಳ ರುದ್ರಾಕ್ಷಿಯು ಅನಂಗವೆಂದು ಹೆಸರುಳ್ಳ ರುದ್ರಾಕ್ಷಿಯಾಗಿದ್ದು ಅದನ್ನು ಧರಿಸಿದವನ ದಾರಿದ್ರ್ಯನಿವಾರಣೆಯಾಗಿ ಐಶ್ವರ್ಯವು ಒದಗಿ ಬರುವುದು.
  ಎಂಟು ಮುಖಗಳನ್ನುಳ್ಳ ರುದ್ರಾಕ್ಷವು  ಅಷ್ಟವಸುಗಳ ಸ್ವರೂಪವೂ,ಅಷ್ಟಭೈರವ ಸ್ವರೂಪವೂ ಆಗಿರುವುದು.ಅದನ್ನು ಧರಿಸುವವನು ದೀರ್ಘಕಾಲ ಜೀವಿಸುವನಲ್ಲದೆ ಮರಣಾನಂತರ ಶಿವಸ್ವರೂಪವನ್ನು ಹೊಂದುವನು.
    ಒಂಬತ್ತು ಮುಖಗಳನ್ನುಳ್ಳ ರುದ್ರಾಕ್ಷಿಯು ಭೈರವ ಮತ್ತು ನವದುರ್ಗಾ ಸ್ವರೂಪವಾದುದು.ಇಂತಹ ರುದ್ರಾಕ್ಷಿಯನ್ನು ಎಡಗೈಯಲ್ಲಿ ಭಕ್ತಿಯಿಂದ ಧರಿಸಿದರೆ ಅವನು ಶಿವನಂತೆಯೇ ಸರ್ವೇಶ್ವರನಾಗುವನು.
   ಹತ್ತುಮುಖವುಳ್ಳ ರುದ್ರಾಕ್ಷವು ವಿಷ್ಣು ಸ್ವರೂಪವಾದುದು.ಅದನ್ನು ಧರಿಸಿದರೆ ಸಕಲ ಇಷ್ಟಗಳು ಲಭಿಸುವವು.
   ಹನ್ನೊಂದು ಮುಖವುಳ್ಳ ರುದ್ರಾಕ್ಷವು ಏಕಾದಶರುದ್ರ ಸ್ವರೂಪವಾದುದು.ಅದನ್ನು ಧರಿಸಿದರೆ ಎಲ್ಲೆಡೆಯೂ ಜಯಪ್ರಾಪ್ತಿಯು.
     ಹನ್ನೆರಡು ಮುಖವುಳ್ಳ ರುದ್ರಾಕ್ಷವು ದ್ವಾದಶಾದಿತ್ಯ ಸ್ವರೂಪವಾದುದು.ಅದನ್ನು ಶಿಖೆಯಲ್ಲಿ ಧರಿಸಬೇಕು.
    ಹದಿಮೂರು ಮುಖವುಳ್ಳ ರುದ್ರಾಕ್ಷವು ವಿಶ್ವೇದೇವಸ್ವರೂಪವಾದುದು.ಅದನ್ನು ಧರಿಸಿದರೆ ಸಕಲ ಇಷ್ಟಾರ್ಥಗಳು,ಸಕಲ ಸೌಭಾಗ್ಯ, ಮಂಗಳಗಳುಂಟಾಗುವವು.
     ಹದಿನಾಲ್ಕು ಮುಖವುಳ್ಳ ರುದ್ರಾಕ್ಷವು ಪರಶಿವ ಸ್ವರೂಪವಾದುದು.ಅದನ್ನು ಶಿರಸ್ಸಿನಲ್ಲಿ ಧರಿಸಿದರೆ ಸಕಲ ಪಾಪಗಳು ನಾಶವಾಗುವವು.
     ಈ ಹದಿನಾಲ್ಕು ವಿಧದ ರುದ್ರಾಕ್ಷಿಗಳ ಧಾರಣೆ ಮತ್ತು ಪೂಜೆಗೆ ಹದಿನಾಲ್ಕು ಬೇರೆ ಬೇರೆ ಮಂತ್ರಗಳಿರುವವು.(೧) ಓಂ ಹ್ರೀಂ ನಮಃ (೨) ಓಂ ನಮಃ (೩) ಓಂ ಕ್ಲೀಂ ನಮಃ (೪) ಓಂ ಹ್ರೀಂ ನಮಃ (೫)  ಓಂ ಹ್ರೀಂ ನಮಃ (೬) ಓಂ ಹ್ರೀಂ ಹುಂ ನಮಃ (೭) ಓಂ ಹಂ ನಮಃ (೮) ಓಂ ಹುಂ ನಮಃ (೯) ಓಂ ಹ್ರೀಂ ಹುಂ ನಮಃ (೧೦) ಓಂ ಹ್ರೀಂ ನಮಃ (೧೧) ಓಂ ಹ್ರೀಂ ಹುಂ ನಮಃ (೧೨) ಓಂ ಕ್ರೋಂ ಕ್ಷೌಂ ರೌಂ ನಮಃ (೧೩) ಓಂ ಹ್ರೀಂ ನಮಃ (೧೪) ಓಂ ನಮಃ
   ಸರ್ವ ಇಷ್ಟಾರ್ಥಗಳ ಸಿದ್ಧಿಗಾಗಿ ಮೇಲಿನ ಮಂತ್ರಗಳನ್ನು ಭಕ್ತಿ,ಶ್ರದ್ಧೆಗಳನ್ನು ಜಪಿಸಿ ಆಯಾಯಾ ರುದ್ರಾಕ್ಷಗಳನ್ನು ಧರಿಸಬೇಕು.
      ರುದ್ರಾಕ್ಷ ಮಾಲೆಯನ್ನು ಧರಿಸಿದವನನ್ನು ನೋಡಿ ಭೂತ,ಪ್ರೇತ,ಪಿಶಾಚಿಗಳೂ,ಡಾಕಿನೀ ಶಾಕಿನೀ ಮೊದಲಾದ ಅನಿಷ್ಟವನ್ನುಂಟು ಮಾಡುವ ಗ್ರಹಗಳೂ,ಮಾಟ ಮುಂತಾದ ಕೃತ್ರಿಮಗಳು ಸಹ ದೂರ ಓಡಿಹೋಗುವವು.ರುದ್ರಾಕ್ಷಿ ಧರಿಸಿದವನನ್ನು ಕಂಡರೆ ಶಿವ,ವಿಷ್ಣು,ದೇವಿ,ಗಣಪತಿ,ಸೂರ್ಯ ಮತ್ತು ಮಿಕ್ಕುಳಿದ ದೇವತೆಗಳು ಸಹ ಪ್ರಸನ್ನರಾಗುವರು.
     ಪದ್ಮಪುರಾಣದಲ್ಲಿ ರುದ್ರಾಕ್ಷೋತ್ಪತ್ತಿಯ ಬಗೆಗೆ ಬೇರೊಂದು ಕಥೆಯಿದೆ.ಪದ್ಮಪುರಾಣದ ಮೊದಲ ಖಂಡವಾದ ಸೃಷ್ಟಿಖಂಡದ 43 ನೆಯ ಅಧ್ಯಾಯವು ರುದ್ರಾಕ್ಷದ ಉತ್ಪತ್ತಿ ಹಾಗೂ ಮಹಿಮೆಯನ್ನು ವಿವರಿಸುತ್ತಿದೆ.ಕೃತಯುಗದಲ್ಲಿ ತ್ರಿಪುರನೆಂಬ ರಾಕ್ಷಸನು ದೇವತೆಗಳನ್ನು ಸಂಹರಿಸುತ್ತ ಅಂತರಿಕ್ಷದಲ್ಲಿ ಚಲಿಸುವ ನಗರದಲ್ಲಿ ಅಡಗಿಕೊಳ್ಳುತ್ತಿದ್ದನು.ಬ್ರಹ್ಮನ ವರದಿಂದ ಮದಿಸಿದ ತ್ರಿಪುರನು ಸರ್ವಲೋಕಗಳಿಗೂ ಕಂಟಕನಾಗಿದ್ದನು.ಎಲ್ಲ ದೇವತೆಗಳು ಪರಮೇಶ್ವರನ ಮೊರೆಹೋಗಲು ದಯಾಳುವಾದ ಶಿವನು ಕೋಪೋದ್ರಿಕ್ತನಾಗಿ ತ್ರಿಪುರನೊಂದಿಗೆ ಯುದ್ಧಮಾಡಿ,ಭೀಕರಾಸ್ತ್ರವನ್ನು ಪ್ರಯೋಗಿಸಿ ಆ ರಾಕ್ಷಸನನ್ನು ಕೊಂದನು.ಶಿವನು ತ್ರಿಪುರನೊಂದಿಗೆ ಯುದ್ಧಮಾಡುವಾಗ ಶಿವನಶರೀರದಿಂದ ಬೆವರ ಹನಿಗಳು ಬಿದ್ದವು.ಆ ಬೆವರ ಹನಿಗಳೆ ರುದ್ರಾಕ್ಷಿ ವೃಕ್ಷವಾಗಿ ಹುಟ್ಟಿತು.
        ರುದ್ರಾಕ್ಷದ ಹಣ್ಣು ಬಹಳ ಗುಪ್ತವಾಗಿದ್ದರಿಂದ ಸಾಧಾರಣ ಮನುಷ್ಯರಿಗೆ ಇದು ತಿಳಿಯಲಿಲ್ಲ.ಒಂದು ದಿನ ಕೈಲಾಸದಲ್ಲಿ ವಿರಾಜಮಾನನಾಗಿದ್ದ ಶಂಕರನಿಗೆ ದೀರ್ಘದಂಡ ಪ್ರಣಾಮಗಳನ್ನು ಸಲ್ಲಿಸಿ ಷಣ್ಮುಖನು ರುದ್ರಾಕ್ಷ ಮಹಿಮೆಯನ್ನು ಕುರಿತು ತನ್ನ ತಂದೆಯಾದ ಲೋಕಪಿತ ಶಿವನನ್ನು ಪ್ರಶ್ನಿಸಿದನು.ಆಗ ಶಿವನು ಹೇಳಿದನು.’ಮಗು! ರುದ್ರಾಕ್ಷದ ಧಾರಣೆಯಿಂದ ಮನುಷ್ಯ ಸಂಪೂರ್ಣ ಪಾಪಗಳಿಂದ ಮುಕ್ತನಾಗಿ ,ನನ್ನ ಸ್ವರೂಪನಾಗುತ್ತಾನೆ.ರುದ್ರಾಕ್ಷ ಧರಿಸಿ,ಪ್ರಾಣತ್ಯಾಗ ಮಾಡಿದವನು ಶಿವಸಾಯುಜ್ಯ ಹೊಂದುವನು’ .
     ಮಹರ್ಷಿ ವೇದವ್ಯಾಸರು ರುದ್ರಾಕ್ಷ ಮಹಿಮೆಯನ್ನು ವಿವರಿಸಿದ್ದಾರೆ ಋಷಿಗಳಿಗೆ ಉಪದೇಶ ರೂಪದಲ್ಲಿ.’ ರುದ್ರಾಕ್ಷ ಮಾಲೆಯನ್ನು ಧರಿಸುವವನು ಎಲ್ಲಾ  ಮನುಷ್ಯರಲ್ಲೇ ಶ್ರೇಷ್ಠನು.ರುದ್ರಾಕ್ಷಿಯ ಸ್ಪರ್ಶದಿಂದ ಹಾಗೂ ಅದರ ಧಾರಣೆಯಿಂದ ಮೋಕ್ಷಪ್ರಾಪ್ತಿಯಾಗುತ್ತದೆ.ಶಿರ,ಕಂಠ ಹಾಗೂ ತೋಳುಗಳಲ್ಲಿ ರುದ್ರಾಕ್ಷ ಧರಿಸುವವನು ಸಾಕ್ಷಾತ್ ಭಗವಾನ್  ಶಂಕರನಿಗೆ ಸಮಾನ.ಬ್ರಹ್ಮಗಂಟಿರುವ ಮಂಗಳಕರವಾದ ರುದ್ರಾಕ್ಷಮಾಲೆ ತೆಗೆದುಕೊಂಡು  ಜಲ– ದಾನ– ಸ್ತೋತ್ರ,ಮಂತ್ರ ದೇವತಾರ್ಚನಾದಿಗಳು ಮಾಡಿದರೆ ಅದು ಅಕ್ಷಯವಾಗುತ್ತದೆ ಹಾಗೂ ಪಾಪಗಳು ನಾಶವಾಗುತ್ತವೆ.ರುದ್ರಾಕ್ಷ ಮಾಲೆಯನ್ನು ಧರಿಸುವಾಗ ಶ್ರೇಷ್ಠತಮವಾದ ರುದ್ರಾಕ್ಷಗಳನ್ನು ಬಲ್ಲವರಿಂದ ಕೇಳಿ,ತಿಳಿದು ಧರಿಸಬೇಕು’.

About The Author