ರುದ್ರಾಕ್ಷಿ ಧರಿಸಿದವನು ರುದ್ರಸ್ವರೂಪನೇ ಆಗುವನು

ಬಸವೋಪನಿಷತ್ತು ೩೩ : ರುದ್ರಾಕ್ಷಿ ಧರಿಸಿದವನು ರುದ್ರಸ್ವರೂಪನೇ ಆಗುವನು : ಮುಕ್ಕಣ್ಣ ಕರಿಗಾರ

ಶ್ರೀ ರುದ್ರಾಕ್ಷಿಯ ಧರಿಸಿದಾತನೆ ಲಿಂಗವೆಂಬೆ ;
ಶ್ರೀ ರುದ್ರಾಕ್ಷಿಯ ಧರಿಸದ ಅಧಮರನೆ ಭವಿಯೆಂಬೆ !
ಕೂಡಲ ಸಂಗಮದೇವಯ್ಯಾ,
ಶ್ರೀರುದ್ರಾಕ್ಷಿಯ ಧರಿಸುವ ಭಕ್ತರ ನೀನೆಂಬೆ !

ಬಸವಣ್ಣನವರು ರುದ್ರಾಕ್ಷಿಯ ಮಹಿಮಾಧಿಕ್ಯವನ್ನು ವಿವರಿಸುತ್ತ ಶಿವಲಾಂಛನವಾದ ಶ್ರೀರುದ್ರಾಕ್ಷಿ ಧರಿಸಿದವರನ್ನು ತಾವು ಲಿಂಗವೆಂದೂ ಸಾಕ್ಷಾತ್ ಪರಶಿವನೆಂದು ಭಾವಿಸುವುದಾಗಿಯೂ ತಿಳಿಸಿದ್ದಾರೆ ಈ ವಚನದಲ್ಲಿ.ಯಾರು ರುದ್ರಾಕ್ಷಿಯನ್ನು ಧರಿಸುತ್ತಾರೋ ಅವರೇ ಲಿಂಗಸ್ವರೂಪಿಗಳು.ರುದ್ರಾಕ್ಷಿಯನ್ನು ಧರಿಸದವರು ಹುಟ್ಟುಸಾವಿಗೆ ಒಳಗಾಗುವ ಭವಜೀವಿಗಳಾದ ಭವಿಗಳು‌.ಶ್ರೀರುದ್ರಾಕ್ಷಿಯನ್ನು ಧರಿಸುವ ಭಕ್ತರು ಸಾಕ್ಷಾತ್ ಪರಶಿವಸ್ವರೂಪರು ಎಂದು ತಾವು ಭಾವಿಸುವುದಾಗಿ ಹೇಳುತ್ತಾ ಬಸವಣ್ಣನವರು ಶ್ರೀರುದ್ರಾಕ್ಷಿಯ ಮಹಿಮೆಯನ್ನು ಪ್ರತಿಪಾದಿಸಿದ್ದಾರೆ.

ಈ ಮೊದಲ ವಚನದಲ್ಲಿ ಬರಿ ರುದ್ರಾಕ್ಷಿ ಎಂದು ಕರೆದಿದ್ದ ಬಸವಣ್ಣನವರು ಈ ವಚನದಲ್ಲಿ ಶ್ರೀರುದ್ರಾಕ್ಷಿ ಎಂದು ಕರೆದಿದ್ದಾರೆ ಎನ್ನುವುದನ್ನು ಗಮನಿಸಬೇಕು.’ ಶ್ರೀ’ ಎಂದರೆ ಸಿರಿ,ಸಂಪತ್ತು ಎಂದರ್ಥವಿದ್ದು ಇಲ್ಲಿ ರುದ್ರಾಕ್ಷಿಯು ಸಂಪತ್ಪ್ರದಾಯಕವಾಗಿದೆ.ರುದ್ರಾಕ್ಷಿಯು ಶಿವಾನುಗ್ರಹವಾದ ಮೋಕ್ಷವನ್ನು ಒದಗಿಸಿಕೊಡುವುದರಿಂದ ಅದು ಇಲ್ಲಿ ಶ್ರೀ ಎನ್ನುವ ಸಂಪದ್ ವಿಶೇಷಣಯುಕ್ತವಾಗಿ ಮೋಕ್ಷಸಂಪತ್ತು ಆಗಿದೆ .ಶ್ರೀಗುರುವು ಮೋಕ್ಷವನ್ನು ಕರುಣಿಸಬಲ್ಲನಾದ್ದರಿಂದ ರುದ್ರಾಕ್ಷಿಯನ್ನು ಶ್ರೀಗುರುವಿನ ವರದಹಸ್ತದ ಮೂಲಕವೇ ಪಡೆಯಬೇಕು.ತಾನಾಗಿ ಧರಿಸಿದ ರುದ್ರಾಕ್ಷವು ಅಷ್ಟುಫಲನೀಡದು.ತನಗೆ ಮಂತ್ರೋಪದೇಶ ನೀಡಿದ ಗುರು ಅಥವಾ ಶಿವಯೋಗಿಯು ಅಭಿಮಂತ್ರಿಸಿಕೊಟ್ಟ ರುದ್ರಾಕ್ಷವು ಶಕ್ತಿ,ಚೈತನ್ಯಭರಿತವಾಗುವುದರಿಂದ ಅಂತಹ ರುದ್ರಾಕ್ಷವು ಶ್ರೀರುದ್ರಾಕ್ಷಿ ಎಂದೆನ್ನಿಸಿಕೊಳ್ಳುತ್ತದೆ.ಶ್ರೀಗುರು ಹಸ್ತದಿಂದ ಅನುಗ್ರಹಿಸಲ್ಪಟ್ಟ ರುದ್ರಾಕ್ಷಿಯು ಲಿಂಗವಾಗುತ್ತದೆ,ಶಿವಸ್ವರೂಪವಾಗುತ್ತದೆ.

ಎಲ್ಲ ಜೀವರುಗಳಲ್ಲಿ ಶಿವನನ್ನೇ ಕಾಣುವ ಬಸವಣ್ಣನವರು ಶಿವಲಾಂಛನಗಳನ್ನೂ ಶಿವಸ್ವರೂಪವೇ ಎಂದು ಭಾವಿಸುವ ಶಿವ ಭಕ್ತ್ಯಾಧಿಕ್ಯ ಉಳ್ಳವರಾಗಿದ್ದುದರಿಂದ ಶಿವಸ್ವರೂಪವಾದ ರುದ್ರಾಕ್ಷವನ್ನು ಧರಿಸದವನನ್ನೇ ನೀಚ,ಕೆಟ್ಟಮನುಷ್ಯ ಎಂದು ಬಯ್ಯುತ್ತಾರಲ್ಲದೆ ಅವನನ್ನೇ ಭವಿ ಎನ್ನುತ್ತಾರೆ.ಶೈವ ವೀರಶೈವ ಪರಿಭಾಷೆಯಲ್ಲಿ ಶಿವದೀಕ್ಷೆಯನ್ನು‌ಪಡೆದವನು ‘ ಭಕ್ತ’ ಎನ್ನಿಸಿಕೊಂಡರೆ ದೀಕ್ಷೆ ಪಡೆಯದವನು ‘ ಭವಿ’ ಎನ್ನಿಸಿಕೊಳ್ಳುತ್ತಾನೆ.ಭವಿಯು ಶಿವಾನುಗ್ರಹಕ್ಕೆ ಅರ್ಹನಲ್ಲನಾದ್ದರಿಂದ ಅವನಿಗೆ ಗೌರವಾದರಗಳು ದೊರೆಯವು.ಭವಿಯು ಭಕ್ತರ ಸಂಗದಲ್ಲಿರಲಾರ,ಭಕ್ತರೊಂದಿಗೆ ಸಹಭೋಜನ ಮಾಡಲಾರ,ಭಕ್ತರ ಸಮ ಆಸನದಲ್ಲಿ ಕುಳ್ಳಿರಲಾರ.ಇಂತಹ ಹಲವು ನಿರ್ಬಂಧಗಳಿವೆ ಭವಿಗೆ.ಭವ ಎಂದರೆ ಪ್ರಪಂಚವಾಗಿದ್ದು ಈ ಮರ್ತ್ಯದ ಗುಣಸ್ವಭಾವಕ್ಕೆ ಅಂಟಿಕೊಂಡು ಮಡದಿ ಮಕ್ಕಳ ಸಂಸಾರದಲ್ಲಿ ಬಿದ್ದು ಒದ್ದಾಡುವವನೇ ಭವಿಯು.ಆದರೆ ಭಕ್ತನು ಶಿವದೀಕ್ಷೆಯನ್ನು ಪಡೆದು ಶಿವಕಾರುಣ್ಯವನ್ನುಣ್ಣುವನಾದ್ದರಿಂದ ಅವನು ವಿಶೇಷನು,ಪೂಜ್ಯನು.ಭಕ್ತನಲ್ಲದವನಿಗೆ ರುದ್ರಾಕ್ಷಿಧಾರಣೆಯಲ್ಲಿ ಆಸಕ್ತಿ ಹುಟ್ಟದು.ಆದ್ದರಿಂದ ಅವನು ಅಧಮನು.ಗುರುವಾನುಗ್ರಹದಿಂದ ಚೈತನ್ಯಗೊಂಡ ರುದ್ರಾಕ್ಷಿಯನ್ನು ಧರಿಸಿದವನ ಮುಖದಲ್ಲಿ ಶಿವಕಳೆಯು ಬೆಳಗುತ್ತಿದ್ದು ಅವನ ದೇಹದಲ್ಲಿ ಶಿವಕಾಂತಿಯು ಮಿರುಗುತ್ತಿರುವುದರಿಂದ ಅಂತಹ ಸದ್ಭಕ್ತನನ್ನು ಸಾಕ್ಷಾತ್ ಪರಶಿವನೇ ಎಂದು ಭಾವಿಸಿ,ಗೌರವಿಸುವೆ ಎನ್ನುತ್ತಾರೆ ಬಸವಣ್ಣನವರು.

೦೩.೦೨.೨೦೨೪

About The Author