ಅಂಜನಾದ್ರಿಯ ಅಭಿವೃದ್ಧಿ ಕಾರ್ಯವನ್ನು ಕರ್ನಾಟಕದ ಸ್ವಾಭಿಮಾನಿ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕೌಶಲ್ಯದಿಂದ ನಿರ್ವಹಿಸಬೇಕು

ಮೂರನೇ ಕಣ್ಣು : ಅಂಜನಾದ್ರಿಯ ಅಭಿವೃದ್ಧಿ ಕಾರ್ಯವನ್ನು ಕರ್ನಾಟಕದ ಸ್ವಾಭಿಮಾನಿ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕೌಶಲ್ಯದಿಂದ ನಿರ್ವಹಿಸಬೇಕು : ಮುಕ್ಕಣ್ಣ ಕರಿಗಾರ

‌ಭಾರತೀಯ ಜನತಾ ಪಕ್ಷವು ಅಯೋಧ್ಯೆಯಲ್ಲಿ ರಾಮಮಂದಿರವನ್ನು ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ಅಸ್ತ್ರವಾಗಿ ಉದ್ಘಾಟಿಸಿದಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕರ್ನಾಟಕದಲ್ಲಿ ನೂರು ರಾಮಮಂದಿರಗಳ ನಿರ್ಮಾಣ,ಪುನರುಜ್ಜೀವನಕ್ಕೆ ಪ್ರಯತ್ನಿಸುತ್ತಿರುವುದರ ಜೊತೆಗೆ ಕೊಪ್ಪಳ ಜಿಲ್ಲೆಯ ಅಂಜನಾದ್ರಿಯ ಅಭಿವೃದ್ಧಿಯ ಬಗೆಗೆ ವಿಶೇಷ ಆಸಕ್ತಿವಹಿಸಿರುವುದು ತಿಳಿದು ಬಂದಿದೆ.ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಅಂಜನಾದ್ರಿಯ ಬಗ್ಗೆ ವಿಶೇಷ ಆಸಕ್ತಿ ತಳೆದು ಒಂದು ನೂರು ಕೋಟಿಗಳ ರೂಪಾಯಿಗಳಲ್ಲಿ ಅಂಜನಾದ್ರಿಯನ್ನು ಅಭಿವೃದ್ಧಿಪಡಿಸುವ ಘೋಷಣೆ ಮಾಡಿದ್ದರಾದರೂ ಅವರು ತಮ್ಮ ಅವಧಿಯಲ್ಲಿ ಅಂಜನಾದ್ರಿ ಅಭಿವೃದ್ಧಿಗೆ ₹10 ಕೋಟಿಗಳ ಅನುದಾನ ಒದಗಿಸಿದ್ದನ್ನು ಬಿಟ್ಟರೆ ಹೆಚ್ಚಿನ ಕೆಲಸವನ್ನೇನೂ ಮಾಡಲಿಲ್ಲ.ಅದನ್ನೇ ಅಸ್ತ್ರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಲೋಕಸಭಾ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಫೆಬುವರಿ 16 ರಂದು ಮಂಡಿಸಲಿರುವ ತಮ್ಮ ಬಜೆಟಿನಲ್ಲಿ ಅಂಜನಾದ್ರಿಗೆ ಹೆಚ್ಚಿನ ಅನುದಾನ ನೀಡಿ ತಮ್ಮ ಸರಕಾರವು ಹಿಂದೂಗಳ ಪರವಾಗಿದೆ ಎನ್ನುವುದನ್ನು ತೋರಿಸಹೊರಟಿರುವ ಹುಮ್ಮಸ್ಸಿನಲ್ಲಿರುವುದಾಗಿ ಗೊತ್ತಾಗಿದೆ.ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಅಂಜನಾದ್ರಿ ಹನುಮ ಕ್ಷೇತ್ರ ಅಭಿವೃದ್ಧಿಗೆ ಮಹತ್ವ ನೀಡುವುದೇನೋ ಸರಿ.ಆದರೆ ಅಂಜನಾದ್ರಿ ಹನುಮ ಕ್ಷೇತ್ರವನ್ನು ಕರ್ನಾಟಕದ ಸ್ವಾಭಿಮಾನದ ಪ್ರತೀಕವಾಗಿ ಬೆಳೆಸುವತ್ತ ಅವರು ಲಕ್ಷಿಸಬೇಕಿದೆ.

ಈ ಹಿಂದೆ 2021 ರ ಎಪ್ರಿಲ್ 21 ರ ರಾಮನವಮಿಯಂದು ತಿರುಮಲ ತಿರುಪತಿ ದೇವಸ್ಥಾನ( ಟಿಟಿಡಿ) ದ ವಿದ್ವನ್ಮಣಿಗಳು ತಿರಮಲ ಬೆಟ್ಟದ ಅಂಜನಾದ್ರಿಯೇ ಆಂಜನೇಯನ ಜನ್ಮಸ್ಥಳ ಎನ್ನುವ ಸುಳ್ಳು,ವಿತಂಡವಾದವನ್ನು ಸಾರಿದ್ದಲ್ಲದೆ ತಮ್ಮ ಸುಳ್ಳಿನ ಸಮರ್ಥನೆಗಾಗಿ 24 ಪುಟಗಳ ಪುಸ್ತಕ ಒಂದನ್ನು ಪ್ರಕಟಿಸಿದ್ದರು.ಟಿಟಿಡಿಯ ಹುಸಿಸಾಹಸಗಾಥೆಯನ್ನು ಖಂಡಿಸಿ ನಾನು 2021 ರ ಮೇ 21 ರಂದು ವಾಲ್ಮೀಕಿ ರಾಮಾಯಣ, ಸ್ಕಂದ ಮಹಾಪುರಾಣ, ಬ್ರಹ್ಮಾಂಡ ಪುರಾಣ,ಸಂಕ್ಷಿಪ್ತ ವಾಲ್ಮೀಕಿ ರಾಮಾಯಣ,ಭಾರತೀಯ ಸಂಸ್ಕೃತಿ,ಪುರಾಣನಾಮ ಚೂಡಾಮಣಿ,ಪುರಾಣ ಭಾರತ ಕೋಶ ಮತ್ತು ಕನ್ನಡ ಶಾಸನ ಸಾಹಿತ್ಯ ಮೊದಲಾದ ಕೃತಿಗಳನ್ನು ಆಧರಿಸಿ ” ಆನೆಗುಂದಿಯೇ ಆಂಜನೇಯನ ಜನ್ಮಸ್ಥಳ” ಎನ್ನುವ 50 ಪುಟಗಳ ಪುಸ್ತಕವನ್ನು ಬರೆದು ಪ್ರಕಟಿಸಿದ್ದೆ.ಟಿಟಿಡಿಯ ವಾದ ಪ್ರಚಂಡ ಸುಳ್ಳು ಎನ್ನುವುದನ್ನು ನಾನು ಮೇಲೆ ಹೇಳಿದ ಗ್ರಂಥಗಳ ಸಾಕ್ಷ್ಯಾಧಾರಗಳ ಸಮೇತ ನಿರೂಪಿಸಿದ್ದೆನಲ್ಲದೆ ಆ ಪುಸ್ತಕವನ್ನು ಅಂದಿನ ಮುಖ್ಯಮಂತ್ರಿಗಳಾಗಿದ್ದ ಬಸವರಾಜ ಬೊಮ್ಮಾಯಿಯವರಿಗೂ ಕೊಪ್ಪಳ ಜಿಲ್ಲಾಧಿಕಾರಿಗಳಿಗೂ ಕಳಿಸಿದ್ದೆ.ಈ ಪುಸ್ತಕದ ಬಗ್ಗೆ ವ್ಯಾಪಕ ಪ್ರಚಾರ ದೊರೆಯಿತಲ್ಲದೆ ಈ ಪುಸ್ತಕವನ್ನು ಉಲ್ಲೇಖಿಸಿ ಕೆಲವರು ಪತ್ರಿಕೆಗಳಿಗೆ ಲೇಖನವನ್ನು ಕೂಡ ಬರೆದರು.ಬೆಂಗಳೂರಿನ ಒಬ್ಬ ಮಹಾನುಭಾವರು ನನ್ನ ಪುಸ್ತಕದ ಮುಖಪುಟ ರಕ್ಷಾಪುಟಗಳನ್ನು ತೆಗೆದು ತಮ್ಮ ಹೆಸರಿನಲ್ಲಿ ಈ ಪುಸ್ತಕವನ್ನು ಪ್ರಕಟಿಸಿಕೊಂಡರು ! ಸರಕಾರವು ಅಂಜನಾದ್ರಿಯ ಅಭಿವೃದ್ಧಿ ಕುರಿತು ಕರೆದ ವಿದ್ವಾಂಸರು,ಸಂಶೋಧಕರು ಮತ್ತು ಸಾಹಿತಿಗಳ ಸಭೆಗೆ ‘ ಆನೆಗುಂದಿಯೇ ಆಂಜನೇಯನ ಜನ್ಮಸ್ಥಳ’ ಎಂದು ನಾನೇ ಮೊದಲು ಪುಸ್ತಕ ಬರೆದವನಾಗಿದ್ದರೂ ಸೌಜನ್ಯಕ್ಕಾಗಿಯಾದರೂ ನನ್ನನ್ನು ಸಭೆಗೆ ಆಹ್ವಾನಿಸಲಿಲ್ಲ ! ಅದರರ್ಥ ಈಗಿನ ಸರಕಾರದವರು ನನ್ನನ್ನು ಸಭೆಗೆ ಆಹ್ವಾನಿಸಬೇಕು ಎಂದಲ್ಲ.ಬುದ್ಧಿವಂತರಲ್ಲದ ರಾಜಕಾರಣಿಗಳನ್ನು ಅವರ ಸುತ್ತ ಇರುವ ಬಹುಪರಾಕ್ ಪಡೆ ಮತ್ತು ಅಧಿಕಾರಿಶಾಹಿ ವ್ಯವಸ್ಥೆ ಹೇಗೆ ದಾರಿತಪ್ಪಿಸುತ್ತಾರೆ ಎಂಬುದನ್ನು ನಾನು ಚೆನ್ನಾಗಿ ಬಲ್ಲೆ.ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಎಲ್ಲ ಮುಖ್ಯಮಂತ್ರಿಗಳಿಗಿಂತ ಹೆಚ್ಚಿನ ಸಂಖ್ಯೆಯ’ ವಂಧಿಮಾಗದಿರ ಪಡೆ’ ಯನ್ನು ತಮ್ಮ ಬಳಿ ಇಟ್ಟುಕೊಂಡಿರುವುದರಿಂದ ಅವರಿಂದ ನಾನು ಏನನ್ನೂ ನಿರೀಕ್ಷಿಸದೆ ಅಂಜನಾದ್ರಿಯ ಅಭಿವೃದ್ಧಿಯನ್ನು ಹೇಗೆ ಸಾಧಿಸಬೇಕು ಎನ್ನುವುದನ್ನಷ್ಟೇ ಇಲ್ಲಿ ಪ್ರಸ್ತಾಪಿಸಿದ್ದೇನೆ.

ಅಂಜನಾದ್ರಿಯನ್ನು ಕನ್ನಡಸಂಸ್ಕೃತಿಯ ಪ್ರಾತಿನಿಧಿಕ ಕೇಂದ್ರವನ್ನಾಗಿ ಬೆಳೆಸಬೇಕೇ ಹೊರತು ರಾಮಾಯಣದ ಒಂದು ಪಾತ್ರಮಾತ್ರವಾದ ಹನುಮನ ಜನ್ಮಸ್ಥಳವನ್ನಾಗಿ ಅಭಿವೃದ್ಧಿಪಡಿಸಬಾರದು.ಅಧಿಕಾರಿಗಳಿಗೆ ಕನ್ನಡ ಸಂಸ್ಕೃತಿ ,ಅದರ ಸತ್ತ್ವ ತತ್ತ್ವದ ವಿಶೇಷತೆಯ ಅರಿವು ಇರುವುದಿಲ್ಲವಾದ್ದರಿಂದ ಅಂಜನಾದ್ರಿ ಅಭಿವೃದ್ಧಿ ಪ್ರಾಧಿಕಾರವನ್ನು ಅಧಿಕಾರಿಗಳನ್ನು ಹೊರತುಪಡಿಸಿದ ಸಾಹಿತಿಗಳು,ಸಂಶೋಧಕರುಗಳು,ವಿದ್ವಾಂಸರುಗಳನ್ನು ಒಳಗೊಂಡಂತೆ ಪುನರ್ ರಚಿಸಬೇಕಾದದ್ದು ಮೊದಲ ಅಗತ್ಯ.ಸರಕಾರಿ ಅಧಿಕಾರಿಗಳು ಸರ್ವಜ್ಞರುಗಳೇನಲ್ಲ ಮತ್ತು ಎಲ್ಲ ಕ್ಷೇತ್ರಗಳಲ್ಲಿ ಅವರ ಅಗತ್ಯವೂ ಇರುವುದಿಲ್ಲ.ಇಂತಹ ವಿಶೇಷ ಅಭಿವೃದ್ಧಿ ವಿಷಯಗಳಲ್ಲಿ ಸರಕಾರವು ಕನ್ನಡ ಸಂಸ್ಕೃತಿಯನ್ನು ಬಲಪಡಿಸುವ ಗಟ್ಟಿ ನಿರ್ಧಾರ ತೆಗೆದುಕೊಳ್ಳುವ ಅಗತ್ಯವಿದೆ.ಸರಕಾರಿ ಅಧಿಕಾರಿಗಳು ಅಯೋಧ್ಯೆಯ ವೈಭವೀಕರಣಕ್ಕೆ ಒತ್ತುನೀಡುವ ಅಂದರೆ ರಾಮಭಕ್ತ ಹನುಮಂತನನ್ನು ಸೃಷ್ಟಿಸುವ ಯೋಜನೆಗಳನ್ನು ರೂಪಿಸುತ್ತಾರೆಯೇ ಹೊರತು ಕನ್ನಡಿಗರಸ್ವಾಭಿಮಾನದ ಪ್ರತೀಕನಾದ,ಕನ್ನಡಿಗ ಹನುಮನನ್ನು ಗುರುತಿಸುವ ಕೆಲಸ ಮಾಡುವುದಿಲ್ಲ.

ಅಂಜನಾದ್ರಿಯನ್ನು ಹನುಮನ ಜನ್ಮಸ್ಥಳವಾಗಿ,ಹನುಮ ಸಂಸ್ಕೃತಿಯನ್ನು ಬಿಂಬಿಸುವ ಕ್ಷೇತ್ರವನ್ನಾಗಿ ಅಭಿವೃದ್ಧಿ ಪಡಿಸಬೇಕು.ಅಂದರೆ ಆಂಜನೇಯ ಮತ್ತು ಇತರ ಕಪಿವೀರರುಗಳು ಕಪಿಗಳಲ್ಲ,ಅವರು ಭಾರತದ ಬಹುಪುರಾತನ ಬುಡಕಟ್ಟುಗಳಲ್ಲಿ ಒಂದಾದ ‘ ವಾನರ’ ಬುಡಕಟ್ಟಿನ ಜನಾಂಗ ಎಂದರಿತು ಬುಡಕಟ್ಟು ಜನಾಂಗದ ಇತಿಹಾಸವನ್ನು ಸಾರುವ,ಶೂದ್ರಸಂಸ್ಕೃತಿಯ ಸತ್ತ್ವವನ್ನು ಎತ್ತಿಹಿಡಿಯುವ ಕಾರ್ಯಕ್ಷೇತ್ರವನ್ನಾಗಿ ರೂಪಿಸಬೇಕು.

ಆಂಜನೇಯನು ಮಾತೃಪ್ರಧಾನ ಕುಟುಂಬ ವ್ಯವಸ್ಥೆಗೆ ಸೇರಿದ್ದ ಮಹಾವೀರನಾದ್ದರಿಂದ ಹನುಮನ ಶಕ್ತಿ ಸತ್ತ್ವವಿಶೇಷಗಳನ್ನು ಭಾರತೀಯ ಮೂಲ ಸಂಸ್ಕೃತಿಯಾದ ಶೂದ್ರ ಸಂಸ್ಕೃತಿಯ ಆಧಾರದಲ್ಲಿಯೇ ರೂಪಿಸಬೇಕಲ್ಲದೆ ಉತ್ತರಭಾರತದ ರಾಮನ ಸಂಸ್ಕೃತಿಯ ಆಧಾರದಲ್ಲಿ ರೂಪಿಸಬಾರದು.ಜನಸಾಮಾನ್ಯರ,ಜನಪದರ ಮಹಾನ್ ನಾಯಕನನ್ನಾಗಿ ಹನುಮನ ಚರಿತ್ರೆಯನ್ನು ಪುನರ್ ರಚಿಸಬೇಕು.

ಹನುಮನು ನೆಲಮೂಲ ಸಂಸ್ಕೃತಿಯಾದ ಶೈವಸಂಸ್ಕೃತಿಯ ವೀರೋತ್ತಮನೇ ಹೊರತು ವೈಷ್ಣವಸಂಸ್ಕೃತಿಯ ದಾಸನಲ್ಲ.ಹಾಗಾಗಿ ಹನುಮನನ್ನು ರಾಮಭಕ್ತನಾಗಿ,ರಾಮದಾಸನನ್ನಾಗಿ ಚಿತ್ರಿಸದೆ ಸುಗ್ರೀವನ ಸಚಿವೋತ್ತಮನನ್ನಾಗಿ,ರಾಮಕಾರ್ಯಾರ್ಥಿಯಾಗಿ ಸಮುದ್ರವನ್ನು ಲಂಘಿಸಿದ ರಾಮದೂತನಾದ ಮಹಾವೀರ ಆಂಜನೇಯನನ್ನಾಗಿ ರೂಪಿಸುವ ಸಾಂಸ್ಕೃತಿಕ ಇತಿಹಾಸಕ್ಕೆ ಮಹತ್ವನೀಡಬೇಕು.

ಆಂಜನೇಯನಿಂದಾಗಿಯೇ ರಾಮಾಯಣಕ್ಕೆ ಶಕ್ತಿ ಸತ್ತ್ವಗಳು ಒದಗುತ್ತವೆ ,ಹನುಮನಿಲ್ಲದೆ ಹನುಮನ ವಿರಾಟ್ ವ್ಯಕ್ತಿತ್ವದ ನೆರಳು ಇಲ್ಲದೆ ರಾಮಾಯಣವು ಅಪೂರ್ಣಕಾವ್ಯವಾಗುತ್ತಿತ್ತು ಎನ್ನುವುದನ್ನರಿತು ಹನುಮನ ಭವ್ಯೋಜ್ವಲ ವ್ಯಕ್ತಿತ್ವವನ್ನು ಪರಿಚಯಿಸುವ ಹನುಮಸಂಸ್ಕೃತಿಯ ಕೇಂದ್ರವಾಗಿ ಇದನ್ನು ರೂಪಿಸಬೇಕು.

ಕೆಲವು ಇತಿಹಾಸಕಾರರು ಕಿಷ್ಕಿಂದೆ ಮತ್ತು ಅಂಜನಾದ್ರಿಯನ್ನು ದೇಶದ ಇತರೆಡೆಗಳಲ್ಲಿ ತೋರಿಸುವ ಪ್ರಯತ್ನ ಮಾಡಿರುವುದರಿಂದ ಆನೆಗುಂದಿಯೇ ಹನುಮನ ಜನ್ಮಸ್ಥಳ ಎಂಬುದನ್ನು ನಿರೂಪಿಸುವ ಇತಿಹಾಸವನ್ನು ಹೆಕ್ಕಿ ತೆಗೆಯುವ ಕಾರ್ಯವೂ ಆಗಬೇಕಿದೆ.

ಹನುಮಮಹಿಮೆಯನ್ನು ಬೆಳಕಿಗೆ ತರುವ ಇಂತಹ ಕೆಲಸ ಕಾರ್ಯಗಳನ್ನು ಮಾಡಿದರೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಶಾಶ್ವತ ಕೀರ್ತಿ ದೊರೆಯುತ್ತದೆ.ಅದನ್ನು ಬಿಟ್ಟು ಬಿಜೆಪಿಯವರ ರಾಜಕೀಯ ಅಸ್ತ್ರಕ್ಕೆ ಪ್ರತ್ಯಸ್ತ್ರ ಎನ್ನುವಂತೆ ರಾಜಕೀಯ ಲಾಭಕ್ಕೋಸ್ಕರ ಅವರು ಅಂಜನಾದ್ರಿಯನ್ನು ಅಭಿವೃದ್ಧಿಪಡಿಸಹೊರಟರೆ ಏನನ್ನೂ ಸಾಧಿಸಲಾರರು.

೦೩.೦೨.೨೦೨೪

About The Author