ಅಧಿಕಾರಿಗಳ ನಿರ್ಲಕ್ಷ : ಮೂಲ ಸೌಕರ್ಯಗಳಿಂದ ವಂಚಿತ ಕುಟುಂಬ : ಇರಲು ಮನೆಯೂ ಕೂಡ ಇಲ್ಲ : ಕೂಲಿ ಮಾಡಿ ಜೀವನ ಸಾಗಿಸಬೇಕಿದೆ

ಬಸವರಾಜ ಕರೇಗಾರ basavarajkaregar@gmail.com

ವಡಗೇರಾ : ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಯಕ್ಷಂತಿ ಗ್ರಾಮ ಇಂದಿಗೂ ಒಂದು ಕುಗ್ರಾಮವಾಗಿ ಕಾಣುತ್ತಿದೆ. ಸರ್ಕಾರದ ಮೂಲಭೂತ ಸೌಕರ್ಯಗಳಿಲ್ಲದೆ ಹಲವು ಕುಟುಂಬಗಳು ತತ್ತರಿಸುತ್ತಿವೆ. 2024ನೇ ಇಸ್ವಿ ಆಧುನಿಕ ಜಗತ್ತಿನಲ್ಲಿ ಭಾರತ ಶಕ್ತಿಶಾಲಿ ರಾಷ್ಟ್ರ. ಎಲ್ಲ ರಂಗಗಳನ್ನು ಮುಂದುವರೆಯುತ್ತಿದ್ದೇವೆ. ಆದರೆ ದೇಶ ಮೂಲಭೂತ ಸೌಲಭ್ಯಗಳ ಕೊರತೆ ಅನುಭವಿಸುತ್ತಿದೆ ಎಂದು ಜನನಾಯಕರು,ಸರಕಾರಿ ಅಧಿಕಾರಿಗಳಿಗೆ ಗೊತ್ತಿಲ್ಲವೇನೋ. ಎಲ್ಲ ರಂಗಗಳಲ್ಲೂ ಯಾದಗಿರಿ ಜಿಲ್ಲೆ ಹಿಂದುಳಿದಿದೆ ಎನ್ನುವುದಕ್ಕೆ ಯಕ್ಷಿಂತಿ ಗ್ರಾಮವೇ ಸಾಕ್ಷಿ. ಸರ್ಕಾರದ ಸೌಲಭ್ಯಗಳನ್ನು ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಜನರಿಗೆ ಮುಟ್ಟಿಸುತ್ತಿಲ್ಲ ಎನ್ನುವುದಕ್ಕೆ ಗ್ರಾಮದ ಈ ಬಸ್ಸಮ್ಮನ ಕುಟುಂಬವೇ ಸಾಕ್ಷಿ.

ಪಿಡಿಓ ರವರ ಭರವಸೆ ಮೇರೆಗೆ ಶೆಡ್ಡಿನ ಮನೆಯನ್ನು ತೆರವುಗೊಳಿಸಿದ ಬಸ್ಸಮ್ಮನ ಕುಟುಂಬ

**********

ಯಕ್ಷಿಂತಿ ಗ್ರಾಮ ಹಯ್ಯಳ ಬಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯೊಳಗೆ ಬರುತ್ತದೆ. ಬಸ್ಸಮ್ಮನ ಕುಟುಂಬದಲ್ಲಿ ಮೊಮ್ಮಗ,ಸೊಸೆ ಮೂರು ಜನರಿದ್ದು ಮಗ ತೀರಿಕೊಂಡಿದ್ದಾನೆ.ಸೊಸೆ ಮಾನಸಿಕ ಅಸ್ವಸ್ತೆ.ಬಸ್ಸಮ್ಮನಿಗೆ 80 ವರ್ಷ. ಕುಟುಂಬದ ಜವಾಬ್ದಾರಿ ಮೊಮ್ಮಗ ರಾಮಯ್ಯನ ಮೇಲಿದೆ. 14 ವರ್ಷದ ರಾಮಯ್ಯ ವಿದ್ಯೆ ಕಲಿಯಬೇಕೆಂಬ ಆಸೆ. ಆದರೆ ಮನೆಯ ಸ್ಥಿತಿ ದುರಾವಸ್ಥೆಯಲ್ಲಿದೆ. ಸಾಲ ಮಾಡಿ ತೀರಿಕೊಂಡ ತಂದೆ ಇರುವ ಸ್ವಲ್ಪ ಜಮೀನನ್ನು ಸಾಲ ಮಾಡಿದವರಿಗೆ ಅಡವಿಟ್ಟು ಇಂತಿಷ್ಟು ವರ್ಷಗಳ ಕಾಲ ಉಳುಮೆ ಮಾಡುವಂತೆ ಹೇಳಿ ಸ್ವರ್ಗಸ್ತನಾಗಿದ್ದಾನೆ. ಕುಟುಂಬಕ್ಕೆ ಮನೆ ಇಲ್ಲ. ಸ್ಥಳವಿದೆ. ಹಳೆಯ ಕಾಲದ ಮಣ್ಣಿನಿಂದ ಕಟ್ಟಿದ ಮನೆ. ಗೋಡೆ ಕುಸಿದಿದೆ. ಕೆಲವೇ ಕಲ್ಲುಗಳ ಮೇಲೆ ಟಿನ್ನುಗಳನ್ನು ಹಾಕಿಕೊಂಡು ಮೊಮ್ಮಗ ರಾಮಯ್ಯ ಮತ್ತು ಅಜ್ಜಿ ಬಸ್ಸಮ್ಮ ಜೀವನ ನಡೆಸುತ್ತಿದ್ದಾರೆ. 80 ವರ್ಷದ ಅಜ್ಜಿ ಬಸ್ಸಮ್ಮಳಿಗೆ ಸ್ನಾನ, ಅಡುಗೆ ಮಾಡಿ ಊಟ ಮಾಡಿಸಿ ಮೊಮ್ಮಗ ರಾಮಯ್ಯ ಕೂಲಿ ಕೆಲಸಕ್ಕೆ ಹೋಗಬೇಕು. ಕೂಲಿ ಕೆಲಸದಿಂದ ಬಂದ ರಾತ್ರಿ ಸಮಯದಲ್ಲಿ ಮತ್ತೆ ಅಜ್ಜಿಯ ಉಪಚಾರ ಮಾಡಬೇಕು.ಬಂದ ಕೂಲಿಯ ಹಣದಿಂದಲೇ ಜೀವನ ನಡೆಸಬೇಕು ಇನ್ನು ಮನೆಯ ಸ್ಥಿತಿಯಂತೂ ಹೇಳುತೀರದು.ಮಳೆ ಬಂದರೆ ಇರಲು ಸ್ಥಳವಿಲ್ಲ. ಮಳೆಯಿಂದ ಇಡೀ ಮನೆ ಸೋರುತ್ತಿದೆ. ಮನೆಯಲ್ಲಿ ನಿದ್ದೆ ಮಾಡುವಂತಿಲ್ಲ. ಇಂತಹ ಸ್ಥಿತಿಯಲ್ಲಿ ಈ ಕುಟುಂಬ ಜೀವನ ನಡೆಸುತ್ತಿದೆ ಎಂದರೆ ಆಶ್ಚರ್ಯಕರ.

ಪ್ರಸ್ತುತ ವಾಸ ಮಾಡುತ್ತಿರುವ ಬಸ್ಸಮ್ಮನ ಮನೆ

*********

ಅಧಿಕಾರಿಗಳ ನಿರ್ಲಕ್ಷದಿಂದ ಮೂಲಭೂತ ಸೌಕರ್ಯಗಳು ಸಿಗುತ್ತಿಲ್ಲ.

ಸರಕಾರ ಪ್ರತಿಯೊಬ್ಬರಿಗೂ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಬಾರದು ಎನ್ನುವ ದೃಷ್ಟಿಯಿಂದ ಉಚಿತವಾಗಿ ಜನತಾ ಮನೆಗಳನ್ನು ಸೂರಿಲ್ಲದವರಿಗೆ ಗ್ರಾಮ ಪಂಚಾಯಿತಿ ವತಿಯಿಂದ ನೀಡಲಾಗುತ್ತದೆ.ಗ್ರಾಮೀಣ ತಾಲೂಕು ಮತ್ತು ಜಿಲ್ಲಾಡಳಿತದ ಅಧಿಕಾರಿಗಳ ನಿರ್ಲಕ್ಷದಿಂದ ಇದುವರೆಗೂ ಈ ಕುಟುಂಬಕ್ಕೆ ಮನೆ ಒದಗಿಸಿ ಕೊಟ್ಟಿಲ್ಲ.ಗ್ರಾಮೀಣ ಆಡಳಿತದ ಕಣ್ಣಿಗೆ ಕಾಣಲಿಲ್ಲವೆಂದರೆ ಇವರೆಂತಹ ಆಡಳಿತ ನಡೆಸುತ್ತಾರೆ ಎನ್ನುವುದು ತಿಳಿಯುತ್ತಿಲ್ಲ.

ಕಳೆದ ಆರು ತಿಂಗಳ ಹಿಂದೆಯೇ ಮಾಧ್ಯಮದಲ್ಲಿ ಸುದ್ದಿ ಮಾಡಿದರೂ ಕ್ಯಾರೆ ಎನ್ನದ ತಾಲೂಕು ಮತ್ತು ಗ್ರಾಮೀಣ ಆಡಳಿತದ ವ್ಯವಸ್ಥೆ ಎಷ್ಟು ಅದಗೆಟ್ಟಿದೆ ಎನ್ನುವುದಕ್ಕೆ ಇದೇ ಸಾಕ್ಷಿ.

80 ವರ್ಷ ದಾಟಿದ ಬಸ್ಸಮ್ಮನ ಆಧಾರ್ ಕಾರ್ಡ್ 

********

80 ವರ್ಷದ ಅಜ್ಜಿಗೆ ಇಲ್ಲ ಸಂಧ್ಯಾ ಸುರಕ್ಷಾ ಯೋಜನೆ

ವಯಸ್ಸಾದಂತೆ ಮನುಷ್ಯನ ಶಕ್ತಿ ಕುಗ್ಗುತ್ತದೆ.ಮಕ್ಕಳು ಕೂಡ ನೋಡದೇ ಇರಬಹುದು ಎನ್ನುವ ಕಾರಣಕ್ಕೆ ಸರ್ಕಾರ 60 ವರ್ಷ ಮೇಲ್ಪಟ್ಟವರಿಗೆ ಸಂಧ್ಯಾ ಸುರಕ್ಷಾ ಯೋಜನೆಯನ್ನು ತಿಂಗಳಿಗೆ ಸಾವಿರದ ನಾಲ್ಕುನೂರು ರೂಪಾಯಿಯಂತೆ ಒದಗಿಸಲು ಅನುಕೂಲ ಮಾಡಿದೆ. ರಾಮಯ್ಯನ ಅಜ್ಜಿ ಬಸ್ಸಮ್ಮಗೆ 80 ವರ್ಷವಾದರೂ ಇನ್ನೂ ಕೂಡ ಸಂಧ್ಯಾ ಸುರಕ್ಷಾ ಯೋಜನೆ ಮಾಡಿಸದೆ ಇರುವುದು ತಾಲೂಕು ತಹಶೀಲ್ದಾರ ಆಡಳಿತದ ನಿರ್ಲಕ್ಷ ಮತ್ತು ಬೇಜವಾಬ್ದಾರಿತನ ಎಂದು ತಿಳಿದುಬರುತ್ತದೆ.

ಯಕ್ಷಿಂತಿ ಗ್ರಾಮದಲ್ಲಿ ವಸತಿ ಮನೆಗಳಿಲ್ಲದೆ ಇನ್ನೂ ಹಲವಾರು ಕುಟುಂಬಗಳು ದುಸ್ಥಿತಿಯಲ್ಲಿವೆ. ಇದ್ದವರಿಗೆ ವಸತಿ ಸೌಲಭ್ಯ ಒದಗಿಸಿಕೊಡುತ್ತಿದೆ ಗ್ರಾಮೀಣ ಆಡಳಿತ. ಆದರೆ ಮನೆಗಳಿಲ್ಲದ ಹಲವಾರು ಬಡ ಕುಟುಂಬಗಳು ಶೆಡ್ಡುಗಳಲ್ಲಿ ವಾಸಿಸುತ್ತಿದ್ದಾರೆ ಎನ್ನುವುದಕ್ಕೆ ಅಲ್ಲಿನ ಮನೆಗಳನ್ನು ನೋಡಿದರೆ ಗೊತ್ತಾಗುತ್ತದೆ.

ಯಕ್ಷಿಂತಿ ಗ್ರಾಮದ ಒರ್ವ ವಯಸ್ಸಾದ ಮಹಿಳೆ ಸ್ವಂತ‌ ಸೂರಿಲ್ಲ ಹಾಗೂ ಅಂಗವಿಕಲತೆಯಿಂದ ಬಳಲುತ್ತಿದ್ದಾಳೆ.

ಹಯ್ಯಳ ಬಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು‌ ನೀವು ಸ್ವತಃ ಮನೆ ಕಟ್ಟಿಕೊಂಡರೆ  1,50,000 ರೂ.ಗಳನ್ನು ಕೊಡುತ್ತೇನೆ.ಮನೆ ಕಟ್ಟಿಕೊಳ್ಳಿ ಎಂದು ಹೇಳಿದ್ದರಂತೆ.ಅದೇ ರೀತಿಯಾಗಿ ಇದ್ದ ಶೆಡ್ಡಿನ ಮನೆಯನ್ನು ಕೆಡವಿ ಸ್ಥಳವನ್ನು ಸ್ವಚ್ಛಗೊಳಿಸಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ವಿಷಯ ತಿಳಿಸಿದಾಗ ನೀವೇ ಮನೆ ಕಟ್ಟಿಕೊಳ್ಳಿ ನಂತರ ದುಡ್ಡು ಕೊಡುತ್ತೇನೆ ಎಂದು ಹೇಳುತ್ತಾನೆ ಎನ್ನುತ್ತಾರೆ ಅಜ್ಜಿಯ ಮೊಮ್ಮಗ ರಾಮಯ್ಯ ಹಾಗೂ ಗ್ರಾಮ ಪಂಚಾಯಿತಿಯ ಸದಸ್ಯರಾದ ಹನುಮಂತಪ್ಪ ಎನ್ನುವವರು ಗಮನಕ್ಕೆ ತಂದರೂ ಕೂಡ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸದೆ ಇರುವುದು ದುರದೃಷ್ಟಕರದ ಸಂಗತಿ. ಈ ಮೊದಲು ಹೇಳಿದ ಹಾಗೆ ಹಣ ಕೊಡುತ್ತೇನೆ ಎಂದಿದ್ದ ಪಿಡಿಓ ಈಗ ಮೀನಾ ಮೇಷ ಎಣಿಸುತ್ತಿದ್ದಾರೆ ಎಂದು ರಾಮಯ್ಯ ಮತ್ತು ಗ್ರಾಮ ಪಂಚಾಯಿತಿ ಸದಸ್ಯರಾದ ಹನುಮಂತಪ್ಪ ಹೇಳುತ್ತಿದ್ದಾರೆ.

About The Author