ಶಿವಭಕ್ತರಿಗೆ ರುದ್ರಾಕ್ಷಿಧಾರಣೆಯು ಮೋಕ್ಷ ಸಾಧನವು

ಬಸವೋಪನಿಷತ್ತು ೩೨ : ಶಿವಭಕ್ತರಿಗೆ ರುದ್ರಾಕ್ಷಿಧಾರಣೆಯು ಮೋಕ್ಷ ಸಾಧನವು : ಮುಕ್ಕಣ್ಣ ಕರಿಗಾರ

ಅಯ್ಯಾ, ಎನಗೆ ರುದ್ರಾಕ್ಷಿಯೇ ಸರ್ವಪಾವನ ;
ಅಯ್ಯಾ,ಎನಗೆ ರುದ್ರಾಕ್ಷಿಯೇ ಸರ್ವಸಿದ್ಧಿ.
ಅಯ್ಯಾ,ನಿಮ್ಮ ಪಂಚವಕ್ತ್ರಗಳೇ
ಪಂಚಮುಖದ ರುದ್ರಾಕ್ಷಿಗಳಾದುವಾಗಿ,
ಕೂಡಲ ಸಂಗಮದೇವಾ,
ಎನ್ನ ಮುಕ್ತಿಪಥಕ್ಕೆ ಈ ರುದ್ರಾಕ್ಷಿ ಸಾಧನವಯ್ಯಾ.

ಶಿವಭಕ್ತರಾದವರು ರುದ್ರಾಕ್ಷಿಯನ್ನು ಧರಿಸಲೇಬೇಕು ಎನ್ನುವುದಕ್ಕೆ ಒತ್ತುಕೊಟ್ಟಿರುವ ಬಸವಣ್ಣನವರ ಈ ವಚನವು ರುದ್ರಾಕ್ಷಿಯ ಮಹಿಮೆಯನ್ನು, ಅದರ ಫಲ- ಪ್ರಯೋಜನಗಳನ್ನು ವಿವರಿಸುತ್ತದೆ.ಶಿವಭಕ್ತರಿಗೆ ರುದ್ರಾಕ್ಷಿಯು ಸರ್ವಪಾವನವಾದುದು.ರುದ್ರಾಕ್ಷಿ ಧಾರಣೆಯಿಂದ ಸರ್ವಸಿದ್ಧಿಗಳುಂಟಾಗುತ್ತವೆ.ಪರಶಿವನ ಸದ್ಯೋಜಾತ,ವಾಮದೇವ,ಅಘೋರ,ತತ್ಪುರುಷ ಮತ್ತು ಈಶಾನವೆಂಬ ಐದುಮುಖಗಳೇ ಪಂಚಮುಖಿ ರುದ್ರಾಕ್ಷಿಗಳಾದುದ್ದರಿಂದ ಶಿವಭಕ್ತರು ಪಂಚಮುಖಿ ರುದ್ರಾಕ್ಷಿಯನ್ನು ಧರಿಸಬೇಕು.ರುದ್ರಾಕ್ಷಿ ಧಾರಣೆಯಿಂದ ಮೋಕ್ಷವನ್ನು ಹೊಂದಬಹುದು ಎನ್ನುತ್ತಾರೆ ಬಸವಣ್ಣನವರು.

ರುದ್ರನ ಕಣ್ಣಹನಿಗಳೇ ರುದ್ರಾಕ್ಷವಾಗಿ ಹುಟ್ಟಿದ್ದರಿಂದ ಶಿವಭಕ್ತರಿಗೆ ರುದ್ರಾಕ್ಷಿ ಧಾರಣೆಯು ಅತ್ಯಂತ ಶ್ರೇಷ್ಠವಾದುದು,ಪವಿತ್ರವಾದುದು. ಶಿವಮಹಾಪುರಾಣದಂತೆ ಶಿವನು ಒಮ್ಮೆ ಜಗದೋದ್ಧಾರದ ತನ್ನ ಸಂಕಲ್ಪದಿಂದ ದೇವಮಾನದ ಸಹಸ್ರವರ್ಷಗಳ ಪರಿಯಂತರ ತನ್ನ ಸಹಜಾನಂದದ ಸ್ಥಿತಿಯಾದ ತಪಸ್ಸಿನಲ್ಲಿ ತಲ್ಲೀನನಾಗುವನು.ತಪಸ್ಸು ಮಾಡುತ್ತ ಲೀಲಾರ್ಥವಾಗಿ ಒಂದು ಸಾರೆ ತನ್ನ ಕಣ್ಣುಗಳನ್ನು ತೆರೆಯಲು ಶಿವನ ಕಣ್ಣಿನಿಂದ ನೀರ ಹನಿಗಳು ದಳದಳನೆ ಉದುರಿದವು.ರುದ್ರನ ಕಣ್ಣ ಹನಿಗಳೇ ರುದ್ರಾಕ್ಷಿ ಮರಗಳಾಗಿ ಬೆಳೆದು ಸರ್ವಪಾವನವಾದ ರುದ್ರಾಕ್ಷಿಗಳನ್ನು ಕೊಟ್ಟವು.(ರುದ್ರಾಕ್ಷಿ ತತ್ತ್ವ ನಿರೂಪಣಂ ಅಧ್ಯಾಯದಲ್ಲಿ ರುದ್ರಾಕ್ಷ ತತ್ತ್ವವನ್ನು ವಿವರವಾಗಿ ಬರೆಯುವೆ ) ಇತರ ಪುರಾಣಗಳಲ್ಲಿ ಈ ಪ್ರಸಂಗವು ಮತ್ತೊಂದು ರೀತಿಯಲ್ಲಿ ಚಿತ್ರಿಸಲ್ಪಟ್ಟಿದೆ.ಕೈಲಾಸದಲ್ಲಿ ಪಾರ್ವತಿಯು ಒಮ್ಮೆ ವಿನೋದಾರ್ಥವಾಗಿ ಶಿವನ ಕಣ್ಣುಗಳನ್ನು ಮುಚ್ಚಿದಳಂತೆ.ಆಗ ಇಡೀ ಬ್ರಹಾಂಡವೇ ಘೋರ ಅಂಧಕಾರಕ್ಕೆ ಈಡಾಯಿತು.ಪಾರ್ವತಿಯು ಹೆದರಿ ಕೈಗಳನ್ನು ತೆಗೆಯಲು ಶಿವನ ಕಣ್ಣುಗಳಿಂದ ದಳದಳನೆ ನೀರ ಹನಿಗಳು ಉದುರಿದವಂತೆ.ಆ ನೀರ ಹನಿಗಳು ರುದ್ರಾಕ್ಷ ಮರವಾಗಿ ಬೆಳೆದವು.ಪಾರ್ವತಿಯು ತನ್ನ ವಿನೋದಬುದ್ಧಿಯ ಅಪರಾಧವನ್ನು ಮನ್ನಿಸಲು ಪರಶಿವನನ್ನು ಪ್ರಾರ್ಥಿಸಿದಾಗ ಪ್ರಸನ್ನನಾದ ಪರಶಿವನು ‘ ದೇವಿ,ಈ ಪ್ರಸಂಗವು ಕೂಡ ಜಗದೋದ್ಧಾರದ ನನ್ನ ಸಂಕಲ್ಪ ಲೀಲೆಯೆ ! ನಿನ್ನಿಂದಾಗಿ ನನ್ನ ಭಕ್ತರ ಉದ್ಧಾರಕ್ಕೆ ಅವಕಾಶವಾಯಿತು.ನನ್ನ ಕಣ್ಣನೀರಿನಿಂದ ಹುಟ್ಟಿದ ಈ ಮರಗಳು ರುದ್ರಾಕ್ಷ ಮರಗಳೆಂದೇ ಪ್ರಸಿದ್ಧವಾಗುತ್ತವೆ.ಈ ರುದ್ರಾಕ್ಷಮರದ ಕಾಯಿಗಳಾದ ರುದ್ರಾಕ್ಷಿಗಳನ್ನು ಧರಿಸುವ ಭಕ್ತನು ನನಗೆ ನಿನ್ನಷ್ಟೇ ಪ್ರಿಯನಾಗುವನು’. ಕಥೆಯಲ್ಲಿ ಬದಲಾವಣೆಯಾದರೂ ಶಿವಮಹಾಪುರಾಣ ಮತ್ತು ಇತರ ಪುರಾಣಗಳ ಈ ಪ್ರಸಂಗವು ಪರಶಿವನ ಭಕ್ತವತ್ಸಲ ಸ್ವಭಾವವನ್ನೂ ಲೋಕಕಾರುಣ್ಯಗುಣವನ್ನೂ ಸಂಕೇತಿಸುತ್ತದೆ.ರುದ್ರಾಕ್ಷಿ ಧರಿಸಿದ ಶಿವಭಕ್ತನು ಪಾರ್ವತಿಯಷ್ಟೇ ಪ್ರಿಯನಾಗುತ್ತಾನೆ ಶಿವನಿಗೆ ಎಂದರೆ ಶಿವಭಕ್ತರಾದವರು ರುದ್ರಾಕ್ಷಧಾರಣೆಯಿಂದ ಸುಲಭವಾಗಿ ಶಿವಾನುಗ್ರಹವನ್ನು ಪಡೆಯಬಹುದು.

ರುದ್ರಾಕ್ಷಿ ಧಾರಣೆಯಿಂದ ಶಿವಭಕ್ತರ ಶರೀರವು ಸದೃಢವಾಗುತ್ತದೆ,ಅವರನ್ನು ಕಾಡುವ ರೋಗ ರುಜಿನಗಳು ಇಲ್ಲವಾಗುತ್ತವೆ.ರುದ್ರಾಕ್ಷವನ್ನು ಧರಿಸುವುದರಿಂದ ಶಿವಭಕ್ತನು ಶಿವಪಥದಲ್ಲಿ ಅಡೆತಡೆಗಳಿಲ್ಲದೆ ಮುಂದುವರೆಯುವನು ; ಅವನ ಅಂತರಂಗದ ಕಣ್ಣು ತೆರೆಯುವುದು.ಮುಕ್ಕಣ್ಣ ಶಿವನ ಕಣ್ಣನೀರೇ ರುದ್ರಾಕ್ಷಿಯಾಗಿದ್ದು ಅದು ಪವಿತ್ರಳಾದ ಗಂಗೆಗಿಂತಲೂ ಪಾವನವಾಗಿರುವುದರಿಂದ ಅದನ್ನು ಧರಿಸುವ ಭಕ್ತನಲ್ಲಿ ಅವಗುಣಗಳಳಿದು ಶಿವಗುಣಗಳು ಮೊಳೆದು ಬೆಳೆಯುವುದರಿಂದ ಸಹಜವಾಗಿಯೇ ಅಂತರಂಗದ ಕಣ್ಣಾದ ಅರಿವಿನ ಕಣ್ಣು ತೆರೆಯುತ್ತದೆ.ರುದ್ರಾಕ್ಷಿ ಧರಿಸಿದ ಶಿವಭಕ್ತನ ಭವವು ಅಳಿಯುತ್ತದೆ,ಭಾವವು ಮಹಾಭಾವವಾಗಿ ಮಾರ್ಪಟ್ಟು ಅನುಭಾವವಾಗುತ್ತದೆ.ಅನುಭಾವಿಯಾದ ಶಿವಶರಣನು ಪ್ರಕೃತಿಯ ಮೇಲೆ ಪ್ರಭುತ್ವಪಡೆಯುವುದರಿಂದ ಅವನಿಗೆ ಸರ್ವಸಿದ್ಧಿಗಳು ಕೈವಶವಾಗುತ್ತವೆ.ಪರಶಿವನು ವಿಶ್ವದ ಸೃಷ್ಟಿಕರ್ತನೂ ವಿಶ್ವನಿಯಾಮಕನೂ ಆದ ವಿಶ್ವೇಶ್ವರನಾಗಿದ್ದು ಪಂಚಭೂತಗಳ ಮೂಲಕ ಪ್ರಪಂಚವ್ಯವಹಾರವನ್ನು ನಿರ್ವಹಿಸುತ್ತಿರುವನು.ಪ್ರಪಂಚ ನಿರ್ವಹಣೆಗಾಗಿ ಏಕಮೇವಾದ್ವಿತೀಯ ಪರವಸ್ತುವೂ ಪರಬ್ರಹ್ಮನೂ ಆಗಿದ್ದ ಪರಶಿವನು ಸದ್ಯೋಜಾತ,ವಾಮದೇವ,ಅಘೋರ,ತತ್ಪುರುಷ ಮತ್ತು ಈಶಾನ ಎಂಬ ಐದು ಶಿರಸ್ಸುಗಳು,ಐದು ಮುಖಗಳುಳ್ಳ ಪಂಚಮುಖ ಪರಮೇಶ್ವರನಾಗಿ ಪ್ರಕಟಗೊಳ್ಳುವನು.ಈ ಪಂಚಮುಖಗಳಿಂದ ಆಕಾಶ,ಅಗ್ನಿ,ವಾಯು,ಜಲ ಮತ್ತು ಪೃಥ್ವಿ ಎನ್ನುವ ಪಂಚಭೂತಗಳನ್ನುಂಟುಮಾಡಿ ಪ್ರಕೃತಿ ವ್ಯವಹಾರವನ್ನು ನಿರ್ದಿಷ್ಟಪಡಿಸಿರುವನು,ಪ್ರಪಂಚ ವ್ಯವಹಾರವನ್ನು ನಿರ್ಣಯಿಸಿರುವನು. ಪಂಚಭೂತಗಳ ಒಡೆಯನೂ ನಿಯಾಮಕನೂ ಆಗಿರುವುದರಿಂದ ಶಿವನನ್ನು ‘ಭೂತನಾಥ’, ‘ಭೂತೇಶ್ವರ’ ಎನ್ನುತ್ತಾರೆ.ಸ್ಮಶಾನದಲ್ಲಿರುವ ದೆವ್ವ ಭೂತಗಳ ಒಡೆಯ ಎನ್ನುವುದು ಅಪಕ್ವ ಭಾವನೆ ; ಪಂಚಭೂತಗಳ ನಿಯಾಮಕನು ಎನ್ನುವುದೇ ಶಿವನ ಭೂತೇಶ್ವರ ತತ್ತ್ವದ ಸರಿಯಾದ ವ್ಯಾಖ್ಯಾನ.ಐದು ಮುಖದ ರುದ್ರಾಕ್ಷಿಯು ಶಿವನ ಪಂಚಮುಖಗಳ ಸ್ವರೂಪವಾಗಿರುವುದರಿಂದ ಪಂಚಮುಖಿರುದ್ರಾಕ್ಷಿಯನ್ನು ಧರಿಸುವ ಮೂಲಕ ಶಿವ ಭಕ್ತನೂ ಸಹ ಭೂತನಾಥನಾಗುವನು,ಪ್ರಕೃತಿಯ ಮೇಲೆ ಅಧಿಪತ್ಯಸ್ಥಾಪಿಸುವನು.ಭಕ್ತನು ರುದ್ರಾಕ್ಷಿ ಧರಿಸಿ ತನ್ನ ಕರಣೇಂದ್ರಿಯಗಳ ದೌರ್ಬಲ್ಯವನ್ನು ಕಳೆದುಕೊಂಡು ಪರಶಿವನಲ್ಲಿ ಅನನ್ಯಭಾವದಿಂದ ಶರಣುಹೋಗುವುದರಿಂದ ಅವನು ಮುಕ್ತನಾಗುತ್ತಾನೆ,ಮೋಕ್ಷಪದವಿಯನ್ನು ಹೊಂದುತ್ತಾನೆ‌.

೦೨.೦೨.೨೦೨೪

About The Author