ಶಿವಭಕ್ತರಿಗೆ ಹಣೆಯ ವಿಭೂತಿಯೇ ಶೃಂಗಾರ

ಬಸವೋಪನಿಷತ್ತು ೩೦ : ಶಿವಭಕ್ತರಿಗೆ ಹಣೆಯ ವಿಭೂತಿಯೇ ಶೃಂಗಾರ : ಮುಕ್ಕಣ್ಣ ಕರಿಗಾರ

ನೀರಿಂಗೆ ನೆಯ್ದಿಲೆ ಶೃಂಗಾರ ; ಸಮುದ್ರಕ್ಕೆ ತೆರೆಯೇ ಶೃಂಗಾರ ;
ನಾರಿಗೆ ಗುಣವೇ ಶೃಂಗಾರ ; ಗಗನಕ್ಕೆ ಚಂದ್ರಮನೇ ಶೃಂಗಾರ ;
ನಮ್ಮ ಕೂಡಲ ಸಂಗನ ಶರಣರಿಗೆ ನೊಸಲ ವಿಭೂತಿಯೇ ಶೃಂಗಾರ

ಬಸವಣ್ಣನವರು ಶಿವಶಭಕ್ತರಾದವರಿಗೆ ವಿಭೂತಿಯೇ ಶೃಂಗಾರ,ಸೊಗಸು,ಸೊಬಗು ಎನ್ನುವುದನ್ನು ಹೃದಯಸ್ಪರ್ಶಿಯಾಗಿ ವಿವರಿಸಿದ್ದಾರೆ‌.ರಾತ್ರಿಯ ಹೊತ್ತಿನಲ್ಲಿ ನೀರಲ್ಲಿ ಅರಳುವ ಕರಿಯಕಮಲ ಅಥವಾ ರಾತ್ರಿಯ ಕಮಲದಿಂದ ನೀರಿನ ಸೊಗಸು ಹೆಚ್ಚುತ್ತದೆ.ಸಮುದ್ರವು ತನ್ನಲ್ಲಿ ಏಳುತ್ತಿರುವ ತೆರೆಗಳಿಂದ ಚೆಲುವಾಗಿ ಕಂಗೊಳಿಸುತ್ತದೆ. ಹೆಣ್ಣಿಗೆ ಅವಳ ಶೀಲ ಸದ್ಗುಣಸಂಪತ್ತೇ ಚೆಲುವು.ರಾತ್ರಿಯ ಹೊತ್ತಿನಲ್ಲಿ ಬೆಳದಿಂಗಳನ್ನುಂಟು ಮಾಡುವ ಚಂದ್ರನೇ ಆಕಾಶದ ಸೌಂದರ್ಯ.ಇದರಂತೆ ಶಿವಭಕ್ತರಿಗೆ,ಶಿವಶರಣರುಗಳಿಗೆ ಅವರ ಹಣೆಯ ವಿಭೂತಿಯೇ ಶೃಂಗಾರವು ಎನ್ನುವ ಬಸವಣ್ಣನವರು ಶಿವಭಕ್ತರ ಹಣೆಯಲ್ಲಿ ಸದಾ ವಿಭೂತಿಯು ವಿರಾಜಮಾನವಾಗಿರಬೇಕು ಎನ್ನುವ ಕಟ್ಟಳೆಯೊಂದನ್ನು ವಿಧಿಸಿದ್ದಾರೆ.

ಪ್ರಕೃತಿಯಲ್ಲಿ ಚೆಲುವಿದೆ,ಸತ್ತ್ವವಿದೆ.ಪ್ರಕೃತಿಯಲ್ಲಿನ ಒಂದೊಂದು ವಸ್ತು,ಒಂದೊಂದು ತತ್ತ್ವವು ಮತ್ತೊಂದು ವಸ್ತು,ತತ್ತ್ವದಿಂದ ಚೆಲುವನ್ನು ಪಡೆಯುತ್ತದೆ,ಕಳೆಗಟ್ಟುತ್ತದೆ. ಬಿಳಿಯ ಕಮಲವು ನೀರಿನಲ್ಲಿ ಹಗಲುಹೊತ್ತಿನಲ್ಲಿ ಮಾತ್ರ ಅರಳಿ,ಸೂರ್ಯಾಸ್ತವಾದೊಡನೆ ಮುದುಡಿಹೋಗುತ್ತದೆ.ಆದರೆ ನೈದಿಲೆ ಎನ್ನುವ ಕರಿಯ ಕಮಲವು ರಾತ್ರಿಯ ಹೊತ್ತಿನಲ್ಲಿ ಅರಳುತ್ತದೆ.ಹುಣ್ಣಿಮೆಯ ಚಂದ್ರನ ಬೆಳದಿಂಗಳಲ್ಲಿ ನೀರಲ್ಲಿ ಅರಳಿದ ನೈದಿಲೆಯ ಸೊಬಗು,ಸೌಂದರ್ಯವನ್ನು ನೋಡಿಯೇ ಆನಂದಿಸಬೇಕು.ಅಷ್ಟು ಮನೋಹರವಾಗಿರುತ್ತದೆ ಅರಳ್ದ ನೈದಿಲೆ.ಸಮುದ್ರದಲ್ಲಿ ಉಕ್ಕೇರಿ ನರ್ತಿಸುವ ತೆರೆಗಳಿಂದ ಘನವಾರಿಧಿಯು ಸೊಬಗನ್ನು ಪಡೆಯುತ್ತದೆ.ಸಮುದ್ರಕ್ಕೆ ತೆರೆಗಳೇ ಶೃಂಗಾರವನ್ನುಂಟು ಮಾಡುತ್ತವೆ.ಅಲೆಗಳ ಉಬ್ಬರವಿಳಿತದ ಕಾರಣದಿಂದಾಗಿಯೇ ಸಮುದ್ರವು ಚೈತನ್ಯಶೀಲವಾಗಿದೆ,ಚೆಲುವನ್ನು ಪಡೆದಿದೆ.ಹೆಣ್ಣಿಗೆ ಬಣ್ಣವಲ್ಲ,ಅವಳ ಗುಣವೇ ಶೃಂಗಾರ.ಸದ್ಗುಣ ಸಂಪನ್ನೆಯಾದ ಹೆಣ್ಣು ಸರ್ವಜನಾದರಣೀಯಳು, ಕುಟುಂಬ,ಸಮಾಜಕ್ಕೆ ಶೋಭೆಯನ್ನುಂಟು ಮಾಡುವಳು.ಕತ್ತಲರಾತ್ರಿಯಲ್ಲಿ ಬೆಂದಿಂಗಳನ್ನುಂಟು ಮಾಡುವ ಚಂದ್ರನೇ ಆಕಾಶಕ್ಕೆ ಕಳೆ,ಚೆಂದ.ಶಿವಭಕ್ತರಾದವರ ಹಣೆಯಲ್ಲಿರುವ ವಿಭೂತಿಯಿಂದಾಗಿ ಅವರ ವ್ಯಕ್ತಿತ್ವವು ಶೋಭೆಗೊಳ್ಳುತ್ತದೆ,ಚೆಲುವುಗೊಳ್ಳುತ್ತದೆ.

ಬಸವಣ್ಣನವರು ಶಿವಭಕ್ತರಿಗೆ ವಿಭೂತಿಯೇ ನಿಜಸೌಂದರ್ಯ ಎನ್ನುವುದನ್ನು ಒತ್ತಿಹೇಳಿದ್ದಾರೆ ಈ ವಚನದಲ್ಲಿ.ಆದರೆ ಫೇರ್ ಅಂಡ್ ಲವ್ ಲಿ,ಬಗೆಬಗೆಯ ಪೌಡರ್ ಗಳಂತಹ ಸೌಂದರ್ಯವರ್ಧಕಗಳಿಗೆ ಮಾರುಹೋಗಿರುವ ನಮನಿಮಗೆ ವಿಭೂತಿಯ ಸತ್ತ್ವ ತತ್ತ್ವ ಅರ್ಥವಾಗದು,ವಿಭೂತಿಯು ಆಗಿ ಬಾರದು.ನಿತ್ಯ ನಾವು ಬಳಸುವ ಸೌಂದರ್ಯವರ್ಧಕಗಳು ರಾಸಾಯನಿಕಗಳಾಗಿದ್ದು ಅವುಗಳ ಬಳಕೆಯು ಮುಂದೆ ಚರ್ಮದ ಮೇಲೆ ದುಷ್ಪರಿಣಾಮವನ್ನುಂಟು ಮಾಡುತ್ತದೆ.ಆದರೆ ವಿಭೂತಿಯು ಹಾಗಲ್ಲ.ಹಣೆಯಲ್ಲಿ ತ್ರಿಂಪುಂಡ್ರ ಅಥವಾ ಮೂರುಬೆರಳಿನ ವಿಭೂತಿ ಧರಿಸಿದರೆ ಆ ಹಣೆಯ ಸೊಬಗೇಬೇರೆ,ವಿಭೂತಿ ಧರಿಸಿದವನ ಮುಖದ ಚೆಲುವೇ ಬೇರೆ.ಹಣೆಯಲ್ಲಿರುವ ವಿಭೂತಿಯು ನಮ್ಮ ವ್ಯಕ್ತಿತ್ವಕ್ಕೆ ಪ್ರಸನ್ನತೆಯನ್ನು,ದಿವ್ಯಚೆಲುವನ್ನು ನೀಡುತ್ತದೆ ಮಾತ್ರವಲ್ಲ ,ನಮ್ಮ ಬಳಿ ಬರುವ ವ್ಯಕ್ತಿಗಳು ನಮ್ಮತ್ತ ಆಕರ್ಷಿತರಾಗಲು,ನಮ್ಮ ಬಗ್ಗೆ ಗೌರವಾದರಗಳನ್ನು ತಳೆಯಲು ಕಾರಣವಾಗುತ್ತದೆ.ವಿಭೂತಿಯು ಶಿವನಿಗೆ ಪ್ರಿಯವಾದುದರಿಂದ ವಿಭೂತಿ ಧರಿಸಿದರೆ ಅಶುಭನಿವಾರಣೆಯಾಗುತ್ತದೆ ಅಂದರೆ ವಿಭೂತಿ ಧರಿಸುವವರನ್ನು ಅನಿಷ್ಟ ಅಪಮೃತ್ಯುಗಳು ಕಾಡಲಾರವು.ವಿಶ್ವನಿಯಾಮಕನಾಗಿರುವ ವಿಶ್ವೇಶ್ವರ ಶಿವನ ಲಾಂಛನವಾಗಿರುವ ವಿಭೂತಿಯನ್ನು ಕಂಡಾಕ್ಷಣವೇ ದುಷ್ಟಶಕ್ತಿಗಳು ಓಡಿಹೋಗುತ್ತವೆ,ದುರಿತಗಳು ಇಲ್ಲವಾಗುತ್ತವೆ.ನಿತ್ಯನಿರಂತರವಾಗಿ ಹಣೆಯಲ್ಲಿ ವಿಭೂತಿಯನ್ನು ಧರಿಸುವುದರಿಂದ ಬ್ರಹ್ಮನು ಬರೆದ ಕೆಟ್ಟ ಹಣೆಬರಹವು ಅಳಿದು ವಿಭೂತಿಧಾರಕನು ತನ್ನ ಇಷ್ಟದಂತೆ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಂಡು ಯಶಸ್ವಿವ್ಯಕ್ತಿಯಾಗಬಲ್ಲನು.ವಿಧಿಲಿಖಿತವನ್ನು ಅಳಿಸುವ ಸಾಮರ್ಥ್ಯವಿರುವ ವಿಭೂತಿಯು ಧಾರಕರಿಗೆ ಸಕಲವಿಧ ಸೌಖ್ಯ ಸನ್ಮಂಗಳಗಳನ್ನುಂಟು ಮಾಡುತ್ತದೆ.’ಯಾರ ಹಣೆಯಲ್ಲಿ ವಿಭೂತಿಯು ಶೋಭಿಸುವುದೋ ಅವರನ್ನು ನೀನು ಮುಟ್ಟುವಂತಿಲ್ಲ’ ಎಂದು ಪರಶಿವನು ಯಮನಿಗೆ ಆಜ್ಞೆಯನ್ನಿತ್ತಿರುವುದರಿಂದ ವಿಭೂತಿ ಧರಿಸುವವರ ಬಳಿ ಬಾರನು ಯಮ ಅಂದರೆ ಅವರ ಬಳಿ ಅಪಮೃತ್ಯು,ಅಕಾಲಮೃತ್ಯು ಸುಳಿಯದು.ವಿಭೂತಿಧಾರಣೆ ಮಾತ್ರದಿಂದಲೇ ಶಿವಾನುಗ್ರಹ ಉಂಟಾಗಿ ಮೋಕ್ಷಸಂಪಾದಿಸಬಹುದಾದ್ದರಿಂದ ವಿಭೂತಿಗಿಂತ ಮಿಗಿಲಾದ ವಸ್ತು ಮತ್ತೊಂದುಂಟೆ ?

೦೧.೦೨.೨೦೨೪

About The Author