ಮಡಿವಾಳ ಮಾಚಿದೇವ

ಶರಣವ್ಯಕ್ತಿಚಿತ್ರಣ : ಮಡಿವಾಳ ಮಾಚಿದೇವ 

ಮುಕ್ಕಣ್ಣ ಕರಿಗಾರ

ಬಸವಣ್ಣನೇ ಗುರು,ಪ್ರಭುದೇವರೇ ಲಿಂಗ,
ಸಿದ್ಧರಾಮಯ್ಯನೇ ಜಂಗಮ !
ಮಡಿವಾಳಯ್ಯನೇ ತಂದೆ,ಚೆನ್ನಬಸವಣ್ಣನೇ ಎನ್ನ ಪರಮಾರಾಧ್ಯರು !
ಇನ್ನು ಶುದ್ಧವಾದೆನು ಕಾಣಾ ಚೆನ್ನಮಲ್ಲಿಕಾರ್ಜುನಯ್ಯ.

ಬಸವಣ್ಣನ ಭಕ್ತಿ, ಚೆನ್ನಬಸವಣ್ಣನ ಜ್ಞಾನ,
ಮಡಿವಾಳಯ್ಯನ ನಿಷ್ಠೆ,ಪ್ರಭುದೇವರ ಜಂಗಮಸ್ಥಲ,
ಅಜಗಣ್ಣನ ಐಕ್ಯಸ್ಥಲ,ನಿಜಗುಣನ ಆರೂಢಸ್ಥಲ
ಸಿದ್ಧರಾಮಯ್ಯನ ಸಮಾಧಿಸ್ಥಲ —
ಇಂತಿವರ ಕರುಣ ಪ್ರಸಾದ ಎನಗಾಯಿತ್ತು ಚೆನ್ನಮಲ್ಲಿಕಾರ್ಜುನಯ್ಯ !

ಬಸವಣ್ಣನ ಮನೆಯ ಮಗಳಾಗಿ ಬದುಕಿದೆನಾಗಿ
ತನ್ನ ಕರುಣ ಪ್ರಸಾದವ ಕೊಟ್ಟನು !
ಚೆನ್ನಬಸವಣ್ಣನ ತೊತ್ತಿನ ಮಗಳಾದ ಕಾರಣ
ಒಕ್ಕ ಪ್ರಸಾದವ ಕೊಟ್ಟನು!
ಪ್ರಭುದೇವರ ತೊತ್ತಿನ ತೊತ್ತಿನ ಮರುದೊತ್ತಿನ
ಮಗಳಾದ ಕಾರಣ
ಜ್ಞಾನಪ್ರಸಾದವ ಕೊಟ್ಟನು !
ಸಿದ್ಧರಾಮಯ್ಯನ ಶಿಶು ಮಗಳಾದ ಕಾರಣ
ಪ್ರಾಣಪ್ರಸಾದವ ಸಿದ್ಧಿಸಿ ಕೊಟ್ಟನು
ಮಡಿವಾಳಯ್ಯನ ಮನೆ ಮಗಳಾದ ಕಾರಣ
ನಿರ್ಮಳ ಪ್ರಸಾದವ ನಿಶ್ಚಯಿಸಿ ಕೊಟ್ಟನು !
ಇಂತೀ ಅಸಂಖ್ಯಾತಗಣಂಗಳೆಲ್ಲರೂ
ತಮ್ಮ ಕರುಣದ ಕಂದಳೆಂದು ತಲೆವಿಡಿದ ಕಾರಣ
ಚೆನ್ನಮಲ್ಲಿಕಾರ್ಜುನಯ್ಯನ ಶ್ರೀಪಾದಕ್ಕೆ ಯೋಗ್ಯಳಾದೆನು !

ಅಕ್ಕಮಹಾದೇವಿಯು ಬಸವಣ್ಣ,ಅಲ್ಲಮಪ್ರಭು,ಚೆನ್ನಬಸವಣ್ಣ ಮತ್ತು ಸಿದ್ಧರಾಮರ ಜೊತೆಗೆ ಮಡಿವಾಳ ಮಾಚಿದೇವಯ್ಯನನ್ನು ತನ್ನ ತಂದೆ,ಪರಮಾರಾಧ್ಯರೆಂದು ನುತಿಸಿ,ಕೊಂಡಾಡಬೇಕಾದರೆ ಮಡಿವಾಳ ಮಾಚಿದೇವನ ವ್ಯಕ್ತಿತ್ವ ವಿಶಿಷ್ಟಮಹತ್ತಿನ ವ್ಯಕ್ತಿತ್ವವೆ ಆಗಿರಬೇಕಲ್ಲವೆ ? ಹೌದು,ಮಡಿವಾಳ ಮಾಚಿದೇವ ಕನ್ನಡದ ಬಹುಮಹತ್ವದ ವಚನಕಾರರಲ್ಲೊಬ್ಬರು,ಶರಣಗಣ ತಿಂಥಿಣಿಯ ವೀರಸೇನಾನಿ,ಕೆಚ್ಚು ನೆಚ್ಚುಗಳಿಗೆ ಹೆಸರಾದ ಬಸವಣ್ಣನವರ ಅಚ್ಚುಮೆಚ್ಚಿನ,ಪ್ರಭುದೇವರ ಇಷ್ಟದ,ಚೆನ್ನಬಸವಣ್ಣನವರ ಗೌರವಾದರಗಳಿಗೆ ಪಾತ್ರನಾದ ಶರಣ.ವೀರಭದ್ರನ ಅವತಾರವೆಂದು ನಂಬಲಾಗಿರುವ ಮಾಚಿದೇವ ಇಂದಿನ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿಯ ಮಡಿವಾಳ ವೃತ್ತಿಯ ಪರ್ವತಯ್ಯನ ಮಗ.ಮಲ್ಲಿಕಾರ್ಜುನ ದೀಕ್ಷಾಗುರು.ಹಿಪ್ಪರಗಿಯ ಕಲ್ಲಿನಾಥ ಇಷ್ಟದೈವ.ಕಲಿದೇವರದೇವ ವಚನಾಂಕಿಂತದಲ್ಲಿ ವಚನಗಳನ್ನು ರಚಿಸಿರುವ ಮಡಿವಾಳ ಮಾಚಯ್ಯನವರ 346 ವಚನಗಳು ದೊರಕಿವೆ.

ಮಡಿವಾಳ ಮಾಚಿದೇವರ ಬದುಕಿನ ಸುತ್ತ ಹತ್ತಾರು ಪವಾಡಪ್ರಸಂಗಗಳಿವೆ.ಬಸವಣ್ಣನವರ ಕೀರ್ತಿಯನ್ನು ಕೇಳಿ ಹಿಪ್ಪರಗಿಯಿಂದ ಕಲ್ಯಾಣಕ್ಕೆ ಬರುತ್ತಿರುವ ವೇಳೆ ದಾರಿಗೆ ಅಡ್ಡಬಂದ ತುಂಬಿಹರಿಯುತ್ತಿದ್ದ ಭೀಮರಥಿ ನದಿಯು ಹೋಳಾಗಿ ದಾರಿಮಾಡಿಕೊಟ್ಟಿತಂತೆ.
ಶಿವಕೋಶವೆಂಬ ಊರಿನಲ್ಲಿದ್ದ ಮಾಚಯ್ಯನು ಭವಿಗಳು ತನ್ನ ಬಳಿ ಬರಕೂಡದೆಂದು ಜಾಗಟೆ ಬಾರಿಸುತ್ತಿದ್ದನು.ಅದನ್ನು ನಿರ್ಲಕ್ಷಿಸಿ ಬಳಿ ಬಂದ ಭವಿಗಳನ್ನು ಇರಿದು ಕೊಲ್ಲುತ್ತಿದ್ದನು.ತಾನು ತೊಳೆದು ಮಡಿಮಾಡಿದ ಬಟ್ಟೆಯಲ್ಲಿ ಜಂಗಮರು ಬಟ್ಟೆ ಬೇಡಲು ಅವರು ಬೇಡಿದ ಬಟ್ಟೆಯನ್ನು ದಾನಮಾಡಿ,ಬಟ್ಟೆಯ ಒಡೆಯರಿಗೆ ಹೊಸಬಟ್ಟೆಗಳನ್ನು ಸೃಷ್ಟಿಸಿ ಕೊಡುತ್ತಿದ್ದನು.

ಬಸವಣ್ಣನ ಬಟ್ಟೆಗಳು ಮುತ್ತಿನಂತೆ ಥಳಥಳನೆ ಹೊಳೆಯುತ್ತಿರಲು ಅರಸ ಬಿಜ್ಜಳನು ಆತನ ಅಗಸನಾರೆಂದು ಕೇಳಿದನು.ಬಸವಣ್ಣನು ಮಡಿವಾಳ ಮಾಚಿದೇವರ ಹೆಸರನ್ನು ಹೇಳಲು ಬಿಜ್ಜಳನು ತನಗೂ ಆತನ ಸೇವೆ ಬೇಕು ಎಂದನು.ಬಸವಣ್ಣನು ಮಡಿವಾಳ ಮಾಚಿದೇವನು ಪರಮಶಿವಭಕ್ತನಿದ್ದು ಆತನನ್ನು ಲೋಕದ ಅಗಸರಂತೆ ಭಾವಿಸಬಾರದು ಎಂದು ಪರಿಪರಿಯಾಗಿ ವಿವರಿಸಿ ಹೇಳಿದರೂ ಕೇಳದೆ ಮದಾಂಧ ಬಿಜ್ಜಳನು ತನ್ನ ಮಾಸಿದ ಬಟ್ಟೆಗಳನ್ನು ಶುಚಿ ಮಾಡಲೆಂದು ಮಾಚಿದೇವನ ಬಳಿ ಕಳಿಸಿದ.ಮಡಿವಾಳಯ್ಯನು ಕೋಪದಿಂದ ನೋಡಲು ಬಿಜ್ಜಳನ ಬಟ್ಟೆಗಳೆಲ್ಲವು ಸುಟ್ಟುಹೋದವು.ಸಿಟ್ಟಿಗೆದ್ದ ಬಿಜ್ಜಳನು ಮಡಿವಾಳಯ್ಯನನ್ನು ಹಿಡಿತರಲು ಕುಂಟ ಕುರುಡರ ಪಡೆಯನ್ನು ಕಳುಹಿಸಿದ.ಮಾಚಿದೇವನು ನೀರನ್ನು ಸಂಪ್ರೋಕ್ಷಿಸಿ ಕುಂಟ ಕುರುಡರನ್ನೆಲ್ಲ ಅಂಗಸೌಷ್ಠವವುಳ್ಳವರನ್ನಾಗಿ ಮಾಡಿದ.ಕೋಪದಿಂದ ಬಿಜ್ಜಳನು ಮಾಚಿದೇವರನ್ನು ಹಿಡಿತರಲು ತನ್ನ ಸೈನ್ಯವನ್ನೇ ಕಳಿಸಿದ.ಮಡಿವಾಳಯ್ಯನು ಬಿಜ್ಜಳನ ಸೈನ್ಯವನು ಒದ್ದೋಡಿಸಿದ .ಬಿಜ್ಜಳನು ಹೆದರಿ ಬಸವಣ್ಣನ ಮೊರೆ ಹೊಕ್ಕ.ಬಸವಣ್ಣ ಮಡಿವಾಳ ಮಾಚಿದೇವರನ್ನು ಸಮಾಧಾನ ಪಡಿಸಿದ.

ಬಸವಣ್ಣನವರಿಗೆ ಮಾಯೆಯ ಪ್ರಭಾವವೋ ಎಂಬಂತೆ ತುಸು ಅಹಮಿಕೆ ಕವಿದು ‘ ಬೇಡುವವರಿಲ್ಲದೆ ಬಡವನಾದೆ ‘ ಎಂಬ ವಚನವನ್ನು ಹಾಡಲು ಮಾಚಯ್ಯನು’ ಭಕ್ತರು ಬೇಡಬೇಕೆ ?’ ಎನ್ನುತ್ತಾ ಹೊಳೆಯ ನೀರನ್ನು ಪಾದದಿಂದ ಒದ್ದು,ಹಾರಿದ ನೀರ ಹನಿಗಳನ್ನು ಮುತ್ತುರತ್ನಗಳನ್ನಾಗಿ ಮಾಡಿ,ವಿಟ ಜಂಗಮರಿಗೆ ಕೊಡಲು ,ಅವರು ಅವನ್ನು ವೇಶ್ಯೆಯರಿಗೆ ಕೊಡುತ್ತಿದ್ದರು.ಆ ವೇಶ್ಯಾಂಗನೆಯರು ರತ್ನಖಚಿತ ಉಪ್ಪರಿಗೆಗಳನ್ನು ಕಟ್ಟಿಸಿಕೊಂಡು ಸುಖದಿಂದ ಇರುತ್ತಿದ್ದರು.

ಭವಿಯೊಬ್ಬನನ್ನು ಕೊಂದ ಅಪರಾಧಕ್ಕಾಗಿ ಮಾಚಯ್ಯನನ್ನು ಆನೆಯಿಂದ ತುಳಿಸಿಕೊಲ್ಲಬೇಕೆಂದು ಬಿಜ್ಜಳನು ಆಜ್ಞಾಪಿಸಲು,ಮಡಿವಾಳಯ್ಯನು ಆ ಆನೆಯನ್ನು ಹೊಡೆದು ಆಕಾಶಕ್ಕೆ ಎಸೆದನು.ಮಾವುತನು ಆನೆಯಿಂದ ಸತ್ತನು.ಬಿಜ್ಜಳನು ನಾಚಿದನು.
ಸತ್ತ ಬಿಜ್ಜಳ ಆನೆಗೂ ಬಾಹೂರ ಬೊಮ್ಮಯ್ಯನೆಂಬ ಶರಣರನನ್ನೂ ಮಾಚಯ್ಯನು ವಿಭೂತಿ ತಳೆದು ಬದುಕಿಸಿದನು.
ಮೇದಾರ ಕೇತಯ್ಯನ ಹರಣವನ್ನು ಹರನು ಕೊಂಡೊಯ್ಯಲು ಸಭೆಯಲ್ಲಿ ಕುಳಿತಿದ್ದ ಬಸವಣ್ಣನನ್ನು ಮಾಚಿದೇವನು ನಿಂದಿಸಿದನು.ಒಡನೆ ಬಸವಣ್ಣನು ಪ್ರಾಣತೊರೆಯಲು ಮಾಚಿದೇವನು ಮೇದಾರ ಕೇತಯ್ಯ ಮತ್ತು ಬಸವಣ್ಣನವರನ್ನು ಬದುಕಿಸಿದನು.

ಬಸವಣ್ಣನು ಜಂಗಮನೆಂಬುದನ್ನು ಜಗತ್ತಿಗೆ ಸಾರಲು ಶಿವನು ಕಿನ್ನರಯ್ಯನನ್ನು ತನ್ನೊಳಗು ಮಾಡಿಕೊಂಡನು.ಒಡನೆ ಅಸು ನೀಗಿದನು ಬಸವಣ್ಣ.ಭಕ್ತರ ಕೋರಿಕೆಯಂತೆ ಮಾಚಯ್ಯನು ಇಬ್ಬರ ಪ್ರಾಣಗಳನ್ನೂ ಪಡೆದನು.

ಇವು ಮುಂತಾದವು ಮಡಿವಾಳ ಮಾಚಿದೇವನ ಬದುಕಿನ ಪವಾಡ ಪ್ರಸಂಗಗಳು.ಈತನ ಕಾಲ ಕ್ರಿಶ ೧೧೬೦. ಮಾಚಿದೇವನು ‘ ಕಾಲಜ್ಞಾನ’ ವನ್ನೂ ಬರೆದಿರುವುದಾಗಿ ತಿಳಿದು ಬರುತ್ತದೆಯಾದರೂ ಆತನ ಕಾಲಜ್ಞಾನ ಕೃತಿಯು ಲಭ್ಯವಾಗಿಲ್ಲ.ಕಲ್ಯಾಣ ಕ್ರಾಂತಿಯ ಬಳಿಕ ಚೆನ್ನಬಸವಣ್ಣನನ್ನು ಮುಂದುಮಾಡಿಕೊಂಡು ಕೈಯಲ್ಲಿ ಕತ್ತಿಯನ್ನಿಡಿದುಕೊಂಡು ಬಿಜ್ಜಳನ ಪಡೆಯಿಂದ ಚೆನ್ನಬಸವಣ್ಣನವರನ್ನು ಮತ್ತು ಶರಣಗಣವನ್ನು ರಕ್ಷಿಸುತ್ತ ನಡೆದ ಮಡಿವಾಳ ಮಾಚಿದೇವನು ಬಿಜ್ಜಳನ ಸೇನೆಯೊಡನೆ ಹೋರಾಡುತ್ತ ತೋರಗಲ್ಲು ನಾಡಿನಲ್ಲಿ ಮರಣವನ್ನು ಹೊಂದುವನು.ಕಾರಿಮನೆಯಲ್ಲಿ ಮಡಿವಾಳ ಮಾಚಿದೇವನ ಸಮಾಧಿ ಇದೆ.ಗೊಡಚಿಯ ವೀರಭದ್ರದೇವರ ದೇವಸ್ಥಾನದ ಹಿಂಬದಿಯಲ್ಲಿರುವ ಪೂರ್ವದ ಮುದಿವೀರಣ್ಣದೇವಸ್ಥಾನವು ಮಡಿವಾಳ ಮಾಚಿದೇವರ ಸಮಾಧಿ ಎನ್ನುವ ಪ್ರತೀತಿ ಇದೆ.ಜಾನಪದರು ಮಡಿವಾಳ ಮಾಚಿದೇವ ಕಲ್ಯಾಣಕ್ರಾಂತಿಯ ಬಳಿಕ ಪುನಃ ಹಿಪ್ಪರಿಗೆಗೆ ಬಂದು ಕಲ್ಲಿನಾಥನೊಳು ಒಂದಾದನು ಎನ್ನುವ ಕಥೆಯೊಂದನ್ನು ಕಟ್ಟಿದ್ದಾರೆ.

ಮಡಿವಾಳ ಮಾಚಿದೇವನಿಗೆ ಬಸವಣ್ಣನವರ ಬಗ್ಗೆ ಎಲ್ಲಿಲ್ಲದ ಭಕ್ತಿ,ಶ್ರದ್ಧೆ,ನಿಷ್ಠೆಗಳು.ಬಸವಣ್ಣನ ಹೊರತು ಮತ್ತೊಬ್ಬ ದೇವರಿಲ್ಲ ಎನ್ನುವ ಅನನ್ಯ ನಿಷ್ಠೆ ;

ನೆಲದೈವವಲ್ಲ ಜಲದೈವವಲ್ಲ,
ಅಗ್ನಿ ದೈವವಲ್ಲ,ವಾಯು ದೈವವಲ್ಲ,
ಆಕಾಶ ದೈವವಲ್ಲ,ಚಂದ್ರ ಸೂರ್ಯ ಆತ್ಮರೂ ದೈವವಲ್ಲ,
ಕಲಿದೇವಾ,ನಿಮ್ಮ ಶರಣ ಬಸವಣ್ಣನೊಬ್ಬನೆ ದೈವವೆಂದ ಮಡಿವಾಳನು.

ಮತ್ತೊಂದೆಡೆ

ಎತ್ತೆತ್ತ ನೋಡಿದಡೆ ಅತ್ತತ್ತ ಬಸವನೆಂಬ ಬಳ್ಳಿ
ಎತ್ತೆತ್ತ ನೋಡಿದಡೆ ಲಿಂಗವೆಂಬ ಗೊಂಚಲು
ಒತ್ತಿ ಹಿಂಡಿದಡೆ ಭಕ್ತಿಯೆಂಬ ರಸವಯ್ಯ
ಆಯತ ಬಸವಣ್ಣನಿಂದ,ಸ್ವಾಯತ ಬಸವಣ್ಣನಿಂದ
ಜಂಗಮ ಬಸವಣ್ಣನಿಂದ,
ಪಾದೋದಕ ಬಸವಣ್ಣನಿಂದ,ಪ್ರಸಾದ ಬಸವಣ್ಣನಿಂದ
ಅತ್ತ ಬಲ್ಲಡೆ ನೀವು ಕೇಳಿರೆ,ಇತ್ತ ಬಲ್ಲಡೆ ನೀವು ಕೇಳಿರಿ
ಬಸವಾ ಬಸವಾ ಬಸವಾ ಎಂದು ಮಜ್ಜನಕ್ಕೆರೆಯದವನ ಭಕ್ತಿ,
ಶೂನ್ಯ ಕಾಣಾ,ಕಲಿದೇವರದೇವಾ.

ಬಸವಣ್ಣನವರ ಮೇಲೆ ಭಕ್ತಿ,ಗೌರವಗಳಿದ್ದರೇನಂತೆ ಲಿಂಗಧಾರಿಗಳಾಗಿ ಮನವು ಮಹತ್ತಿನಲ್ಲಿ ಒಡಗೂಡದವರನ್ನು ಖಂಡಿಸದೆ ಬಿಡದ ಖಂಡಿತವಾದಿ ಮಡಿವಾಳ ಮಾಚಿದೇವ ;

ಅಂಗ ಲಿಂಗ ಸಂಬಂಧವಾಗಬೇಕೆಂಬ
ಭಂಗಿತರ ಮಾತ ಕೇಳಲಾಗದು.
ಅಂಗ ಲಿಂಗ ಸಂಬಂಧ ಕಾರಣವೇನು
ಮನ ಲಿಂಗಸಂಬಂಧವಾಗದನ್ನಕ್ಕ ?
ಮನವು ಮಹದಲ್ಲಿ ನಿಂದ ಬಳಿಕ
ಲಿಂಗಸಂಬಂಧವೇನು ಹೇಳಾ,ಕಲಿದೇವರ ದೇವ

ಎಂದು ಬರಿ ಇಷ್ಟಲಿಂಗಧಾರಣೆ ಮಾಡಿದರೆ ಸಾಲದು; ಇಷ್ಟಲಿಂಗದ ಬೆಡಗು ಆಗಿಹ ಪರಶಿವ ತತ್ತ್ವವನ್ನು ಅರಿತು ಆ ಪರಶಿವ ತತ್ತ್ವದಲ್ಲಿ ಒಂದುಗೂಡುವುದೇ ನಿಜವಾದ ಲಿಂಗಾಂಗ ಸಾಮರಸ್ಯ ಎನ್ನುತ್ತಾರೆ ಮಾಚಿದೇವ.

ಜಗತ್ತಿನಲ್ಲಿ ನಾನಾ ಚಿತ್ತವೃತ್ತಿಯ ಜನರಿದ್ದಾರೆ.ಶಿವಪಥದಲ್ಲಿ ನಡೆಯುವವರನ್ನು ಆಡಿಸಿ ಕೇಡನುಡಿಯುವುದುಂಟು.ಅಂತಹ ಕುಮತಿಗಳ ಮಾತುಗಳಿಗೆ ಬೆಲೆಕೊಡದೆ ಶಿವಶರಣನು ತಾನು ನಡೆಹಿಡಿದ ಶಿವ ಪಥದಲ್ಲಿ ಮುನ್ನಡೆಯಬೇಕು ಎನ್ನುವುದನ್ನು ಮಾಚಿದೇವರು ಹೇಳುವ ಪರಿ ;

ಅಂಧಕಾರದ ದೆಸೆಯಿಂದ ಚಂದ್ರನ ಪ್ರಭೆಯಾಯಿತು.
ನಿಂದಕರ ನುಡಿಯ ಏಡಿಸಲ್ಕೆ ಶಿವಭಕ್ತಿಯ ಪ್ರಭೆಯಾಯಿತು.
ಅಹುದೆಂದಡೆ ಅಲ್ಲವೆಂದತಿಗಳೆವರ ಕುತರ್ಕ ಶಾಸ್ತ್ರದಿಂದ
ಯಮಗತಿಗರ ಕೂಡಿ ನಾನಾ ಜನ್ಮಕ್ಕೇರದೆ,
ಶಿವಾಚಾರದ ಪಥವ ತೋರಿಸಯ್ಯಾ
ಕಲಿದೇವರ ದೇವ.

ಜನರು ಯಾವುದನ್ನೂ ಸಹಿಸರು,ಯಾವುದನ್ನು ಒಪ್ಪರು.ಎಲ್ಲದರಲ್ಲಿಯೂ ಏನನ್ನಾದರೂ ಕುಂದನ್ನು ಅರಸುವವರೆ ! ಕಂದನ್ನು ಆರೋಪಿಸುವವರೆ !

ಉಂಡರೆ ಭೂತವೆಂಬರು,
ಉಣ್ಣದಿರ್ದಡೆ ಚಕೋರಿಯೆಂಬರು.
ಊರೊಳಗಿರ್ದಡೆ ಸಂಸಾರಿಕನೆಂಬರು,
ಅಡವಿಯೊಳಗಿದ್ದರೆ ಮರ್ಕಟವೆಂಬರು.
ಮಾತನಾಡಿದಡೆ ಪಾಪಕರ್ಮಿಯೆಂಬರು,
ಮಾತನಾಡದಿರ್ದಡೆ ಮುಸುಕರ್ಮಿಯೆಂಬರು.
ಮಲಗದಿರ್ದೊಡೆ ಚೋರನೆಂಬರು,
ಮಲಗಿರ್ದಡೆ ಜಡದೇಹಿಯೆಂಬರು.
ಇಂತೀ ವಸುಧೆಯೊಳಗೆ ಎಂಟುವಿಧ ಕಳೆಯಲು ವಶವಲ್ಲ ಕಾಣಾ
ಕಲಿದೇವರ ದೇವ.

ದೇವರನ್ನು ಹುಡಕಿಕೊಂಡು ತಪಸ್ಸಾಧನೆಗೆಂದು ಗಿರಿ ಗಹ್ವರಗಳ ತಿರುಗಿ ಬಳಲುವ ಅಗತ್ಯವಿಲ್ಲ,ಭೂತಾನುಕಂಪೆಯಿಂದ ಬದುಕಿದರೆ ಭೂತನಾಥನಾದ ಶಿವನ ಒಲುಮೆಯನ್ನು ಪಡೆಯಬಹುದು.ಅಲ್ಲದುದನ್ನು ಬಿಟ್ಟರೆ ಎಲ್ಲೆಲ್ಲಿಯೂ ಶಿವನನ್ನು ಕಾಣಬಹುದು ಎಂದು ಸೊಗಸಾಗಿ ವಿವರಿಸಿದ್ದಾರೆ ;

ಎಲ್ಲೆಲ್ಲಿಯು ಪ್ರಾಣಿಯ ಕೊಲ್ಲದಿಹುದೆ ಧರ್ಮ,
ಒಲ್ಲದಿಪ್ಪುದೇ ತಪ.
ಪರವಧುವಿನ ಆಸೆ,ತನ್ನ ಮನದಲ್ಲಿ ಇಲ್ಲದಿರ್ದಡೆ,
ದೇವ ತಾನಲ್ಲಿಯೇ ಎಂದ,ಕಲಿದೇವಯ್ಯ.

ನರಜನ್ಮ ಶ್ರೇಷ್ಠವಾದುದು.ಆದುದರಿಂದ ಈ ನರಜನ್ಮದಲ್ಲಿ ಬಂದ ಬಳಿಕ ಶಿವಪಥವನ್ನರಿತು ಶಿವಜ್ಞಾನಿಗಳಾಗಬೇಕು.ಶಿವಪಥದಲ್ಲಿ ನಡೆಯದವರ ಬಾಳು ಕಾಗೆ ಕೋಳಿಗಳಿಗಿಂತ ಹೀನವಾದುದು ಎನ್ನುತ್ತಾರೆ ಮಡಿವಾಳ ಮಾಚಿದೇವರು ;

ಮಧುರಗುಣವ ಇರುಹೆ ಬಲ್ಲದು,
ವಾಯುಗುಣವ ಸರ್ಪ ಬಲ್ಲುದು
ಗೋತ್ರದ ಗುಣವ ಕಾಗೆ ಬಲ್ಲುದು.
ಇದು ಕಾರಣ ಮನುಷ್ಯ ಜನ್ಮದಲ್ಲಿ ಬಂದು
ಶಿವಜ್ಞಾನವನರಿಯದಿರ್ದಡೆ ಆ ಕಾಗೆ — ಕೋಳಿಗಳಿಗಿಂತ
ಕರಕಷ್ಟಕಾಣಾ ಕಲಿದೇವರ ದೇವಾ.

ಹರಗುರುಚರಮೂರ್ತಿಗಳೆನ್ನಿಸಿಕೊಂಡು ಜನರಿಂದ ವಂದನೆ- ಪೂಜೆಗಳನ್ನು ಸ್ವೀಕರಿಸುವ ಜನರು ತಾವಿದ್ದ ಎಡೆಯಲ್ಲಿಯೇ ಯೋಗ- ಶಿವಯೋಗ ಸಾಧಿಸಿ ಪರಶಿವನ ಅನುಗ್ರಹವನ್ನು ಪಡೆಯಬೇಕಲ್ಲದೆ ಹಣದ ಆಸೆಗೆ ಪಿಶಾಚಿಯಂತೆ ಊರೂರು ತಿರುಗಿ ಹಾಳಾಗಬಾರದು ಎನ್ನುವುದನ್ನು ಮಡಿವಾಳ ಮಾಚಿದೇವರು ಬಹುಮಾರ್ಮಿಕವಾಗಿ ಹೇಳಿದ್ದಾರೆ ;

ನಾವು ಹರಗುರು ಚರ ಷಟ್ ಸ್ಥಳದ ವಿರಕ್ತರೆಂದು
ಚೆನ್ನಾಗಿ ನುಡಿದುಕೊಂಡು
ಕಾವಿ ಕಾಷಾಯಾಂಬರವ ಹೊದ್ದು,
ಶಂಖ,ಗಿಳಿಲು,ದಂಡಾಗ್ರಹವ ಹೊತ್ತು,
ಕೂಳಿಗಾಗಿ ನಾನಾ ದೇಶವ ತಿರುಗಿ
ಕಾಂಚನಕ್ಕೆ ಕೈಯೊಡ್ಡುವ ಪಂಚಮಹಾಪಾತಕರನು
ಕಾಗೆಯ ಗರ್ಭದಲ್ಲಿ ಹುಟ್ಟಿಸಿ ಕಾಕಾ
ಎಂದು ಕೂಗಿಸುತಿರ್ಪನು ಕಾಣಾ ಕಲಿದೇವರದೇವಾ.

ನಾವು ಸ್ವಾಮಿಗಳು,ಮಠ ಪೀಠಾಧೀಶರುಗಳು,ಪರಮವಿರಕ್ತರುಗಳು ಎಂದು ಹೇಳಿಕೊಳ್ಳುತ್ತ ಮಠ ಕಟ್ಟಿಸುತ್ತೇವೆ,ಮಂದಿರ ಕಟ್ಟಿಸುತ್ತೇವೆ,ಸಾಮೂಹಿಕ ವಿವಾಹ ಮಾಡಿಸುತ್ತೇವೆ ಅದು ಮಾಡಿಸುತ್ತೇವೆ,ಇದು ಮಾಡಿಸುತ್ತೇವೆ ಎಂದು ಹೊಟ್ಟೆಹೊರೆಯುವ ಅಲ್ಪಜೀವರುಗಳು ವೀರಭದ್ರನ ಅವತಾರವೇ ಆದ ಮಡಿವಾಳ ಮಾಚಿದೇವರು ಹೇಳಿದ ಈ ವಚನವನ್ನು ಅರ್ಥೈಸಿಕೊಂಡು ಬೂಟಾಟಿಕೆ,ಬಡಿವಾರಗಳನ್ನು ಬಿಟ್ಟು ತಮ್ಮ ಪಾಡಿಗೆ ತಾವು ಸಾಧನೆ ಮಾಡಿಕೊಂಡಿರುವುದು ಶ್ರೇಯಸ್ಕರ.ಇಲ್ಲದಿರ್ದಡೆ ಮಡಿವಾಳ ಮಾಚಿದೇವರು ಹೇಳಿದಂತೆ ಕಾಗೆಯಾಗಿ ಹುಟ್ಟಿ ಕರ್ಮಫಲವನ್ನು ಅನುಭವಿಸಬೇಕಾಗುತ್ತದೆ !

ಲಿಂಗಪೂಜಕರು ತನು ಮನ ಧನಗಳಲ್ಲಿ ಶುಚಿಯಾಗಿರಬೇಕು.ಪರಧನ- ಪರವಧುವನ್ನು ಆಶಿಸಬಾರದು.ಮಾಡಬಾರದ್ದನ್ನು ಮಾಡಿದರೆ ಆಗಬಾರದ್ದು ಆಗುತ್ತದೆ ಎನ್ನುವುದನ್ನು ಘಂಟಾಘೋಷವಾಗಿ ಸಾರಿದ್ದಾರೆ ಮಡಿವಾಳ ಮಾಚಿದೇವರು ;

ಪರಸ್ತ್ರೀಯರ ನೋಡುವ ಕಣ್ಣಲ್ಲಿ
ಲಿಂಗವ ನೋಡಿದರೆ ಅವರಿಗೆ ಲಿಂಗವಿಲ್ಲ.
ಪರಬ್ರಹ್ಮವ ನುಡಿವ ನಾಲಗೆಯಲ್ಲಿ
ಪರಸ್ತ್ರೀಯರ ಅಧರಪಾನವ ಕೊಂಡಡೆ
ಪ್ರಸಾದಕ್ಕೆ ದೂರ.
ಘನಲಿಂಗವ ಪೂಜಿಸುವ ಕೈಯಲ್ಲಿ
ಪರಸ್ತ್ರೀಯರ ತೋಳು ಕುಚವ ಮುಟ್ಟಿದಡೆ
ತಾ ಮಾಡುವ ಪೂಜೆ ನಿಷ್ಫಲ.
ಇದನರಿದಡೆ ವ್ರತ.
ಅಲ್ಲದಿರ್ದಡೆ,ಸುರೆಯ ಒಳಗೆ ತುಂಬಿ,
ಹೊರಗೆ ಬೂದಿಯ ಪೂಸಿದಂತಾಯಿತ್ತು,ಕಲಿದೇವಾ.

ಲಿಂಗವನ್ನು ಕಟ್ಟಿಕೊಂಡು,ಲಿಂಗವನ್ನು ಪೂಜಿಸುತ್ತ,ಲಿಂಗಾಯತರು ಎನ್ನಿಸಿಕೊಂಡ ಬಳಿಕ ಇಷ್ಟಲಿಂಗವನ್ನಷ್ಟೇ ಪೂಜಿಸಬೇಕು,ಶಿವನನ್ನಷ್ಟೇ ಪೂಜಿಸಬೇಕಲ್ಲದೆ ಕಂಡ ಕಂಡವರು ಸ್ಥಾಪಿಸಿದ ಆ ದೇವರು ಈ ದೇವರುಗಳ ಪೂಜೆ ಮಾಡಬಾರದು ಎನ್ನುವುದನ್ನು ಲಿಂಗಭಕ್ತರಿಗೆ ಮಾಚಿದೇವ ಉಪದೇಶಿಸುವುದು ;

ಭಕ್ತ ಭಕ್ತರೆಂದು ನುಡಿವಿರಿ,
ಭಕ್ತರೆಂತಾದಿರೊ ನೀವು ?
ನಿತ್ಯ ನಿರಂಜನಲಿಂಗ ಹಸ್ತದೊಳಗಿದ್ದು,
ಪೃಥ್ವಿಯ ಮೇಲಣ ಪ್ರತಿಷ್ಠೆಗೆರಗುವ
ವ್ಯರ್ಥರನೇನೆಂಬೆನಯ್ಯಾ,ಕಲಿದೇವಯ್ಯ ?

ತನ್ನ ಸ್ವಾನುಭಾವದಿ ತಾನುಕಂಡ ಅಂತರಂಗದ ಬೆಳಕೇ ಘನವಹುದಲ್ಲದೆ ವೇದ,ಶಾಸ್ತ್ರ- ಪುರಾಣಗಳು ಘನವಲ್ಲ,ಪ್ರಮಾಣವಲ್ಲ ಎನ್ನುವುದನ್ನು ಸಾರಿದ ಮಡಿವಾಳಯ್ಯನವರ ವಚನ ;

ವೇದ ವಿಪ್ರರ ಬೋಧೆ,
ಶಾಸ್ತ್ರ ಸಂತೆಯ ಮಾತು,
ಪುರಾಣ ಪುಂಡರ ಗೋಷ್ಠಿ,
ಆಗಮ ಅನೃತದ ನುಡಿ,
ತರ್ಕ ವ್ಯಾಕರಣ ಕವಿತ್ವ ಪ್ರೌಢಿ,
ಇಂತಿವರಂಗದ ಮೇಲೆ ಲಿಂಗವಿಲ್ಲದ ಭಾಷೆ.
ಇದು ಕಾರಣ,
ತನ್ನೊಳಗನರಿದ ಅನುಭಾವಿಯಿಂದ ಘನವಿಲ್ಲೆಂದ,
ಕಲಿದೇವ.

ಜನರು ಮುಕ್ತಿ ಮುಕ್ತಿ ಎನ್ನುತ್ತಾರೆ ಆದರೆ ಮುಕ್ತರಾಗುವ ಪರಿಯಾವುದು,ಮುಕ್ತಿಯನ್ನು ಸಂಪಾದಿಸುವ ಬಗೆಯಾವುದು ಎಂಬುದನ್ನರಿಯರು.ಅರಿತರೂ ಶಿವನಲ್ಲಿ,ಲಿಂಗದಲ್ಲಿ ಏಕನಿಷ್ಠೆಯನ್ನಿಡದೆ,ಹೆಣ್ಣು ಹೊನ್ನು ಮಣ್ಣಿನಾಸೆ ಮಾಡುತ್ತ,ದೇಹದ ದೌರ್ಬಲ್ಯವಶರಾಗಿ ಹಾಳಾಗುತ್ತಿದ್ದಾರೆ.ಶಿವನಲ್ಲಿ ಅಚಲ ನಿಷ್ಠೆಯನ್ನಿಟ್ಟು,ತನ್ನ ಕರದೊಳಗಣ ಇಷ್ಟಲಿಂಗವು ಪರಶಿವಸ್ವರೂಪ ಎಂದರಿತು ಶಿವಾಚಾರ ಸಂಪನ್ನನಾಗಿ ಬದುಕುವುದೇ ಮೋಕ್ಷ ಎಂದು ಸಾರುವ ಮಡಿವಾಳ ಮಾಚಿದೇವರ ವಚನ ಒಂದನ್ನು ಉದ್ಧರಿಸಿ ಅವರ ಕುರಿತ ಈ ಕಿರು ವ್ಯಕ್ತಿಚಿತ್ರಣವನ್ನು ಪರಿಸಮಾಪ್ತಿಗೊಳಿಸುವೆ ;

ಹೆಣ್ಣಿಗಾಗಿ ಸತ್ತಡೆ ಜನನ ಮರಣ.
ಹೊನ್ನಿಗಾಗಿ ಸತ್ತಡೆ ಜನನ ಮರಣ.
ಮಣ್ಣಿಗಾಗಿ ಸತ್ತಡೆ ಜನನ ಮರಣ.
ಪರಧನ ಪರಸತಿಗಾಗಿ ಸತ್ತಡೆ ಜನನ ಮರಣ.
ಶಿವಭಕ್ತನಾಗಿ ಏಕಲಿಂಗನಿಷ್ಠಾ ಸಂಪನ್ನನಾಗಿ,
ಶಿವಾಚಾರಕ್ಕಾಗಿ ಸತ್ತಡೆ ಮುಕ್ತಿಯೆಂದ ಕಲಿದೇವಯ್ಯ.

೩೧.೦೧.೨೦೨೪

About The Author