ವಿಭೂತಿ ಧಾರಣೆಯಿಂದ ಸರ್ವಪಾಪ ಪರಿಹಾರ

ಬಸವೋಪನಿಷತ್ತು ೨೯ : ವಿಭೂತಿ ಧಾರಣೆಯಿಂದ ಸರ್ವಪಾಪ ಪರಿಹಾರ : ಮುಕ್ಕಣ್ಣ ಕರಿಗಾರ

ಮುನ್ನ ಮಾಡಿದ ಪಾಪವೆಂತು ಹೋಹುದೆಂದು ಚಿಂತಿಸಬೇಡ ;
ಕಹಿಸೋರೆಯ ಕಾಯ ತಂದು ವಿಭೂತಿಯ ತುಂಬಿದೊಡೆ
ಸಿಹಿಯಾಗದೆ ಮೂರು ದಿವಸಕ್ಕೆ ?
ಹಲವು ಕಾಲ ಕೊಂದ ಸೊನೆಗಾರನ ಕತ್ತಿಯಾದರೇನು,
ಪರುಷಮುಟ್ಟಲಿಕೆ ಹೊನ್ನಾಗದೆ,ಅಯ್ಯಾ ?
ಲಲಾಟದಲ್ಲಿ ವಿಭೂತಿ ಬರಲಿಕೆ
ಪಾಪ ಪಲ್ಲಟವಾಗದೆ,ಕೂಡಲ ಸಂಗಮದೇವಾ ?

ಬಸವಣ್ಣನವರು ಈ ವಚನದಲ್ಲಿ ವಿಭೂತಿಯ ಮಹಿಮೆಯನ್ನು ವಿವರಿಸಿದ್ದಾರೆ.ಈ ಮೊದಲು ಮಾಡಿದ ಪಾಪದಿಂದ ಎಂತು ಮುಕ್ತನಾಗಬೇಕೆಂದು ಮನುಷ್ಯರು ಚಿಂತಿಸಬೇಕಿಲ್ಲ.ಕಹಿಸೋರೆಕಾಯಿ ಅಥವಾ ವಿಷಗುಂಬಳ ಕಾಯಿಯನ್ನು ತಂದು ಅದರಲ್ಲಿ ವಿಭೂತಿಯನ್ನು ತುಂಬಿಡಲು ಮೂರುದಿನಗಳಲ್ಲಿ ಕಹಿಸೋರೆಕಾಯಿಯು ಸಿಹಿಯಾಗುತ್ತದೆ.ಬಹಳ ವರ್ಷಗಳಿಂದ ಪ್ರಾಣಿಗಳನ್ನು ವಧಿಸುತ್ತ ಬಂದ ಕಟುಕನ ಕಬ್ಬಿಣದ ಕತ್ತಿ ಎಷ್ಟೇ ಹರಿತವಾಗಿದ್ದರೇನು ಸ್ಪರ್ಶಮಣಿಯು ಅದನ್ನು ಮುಟ್ಟಲು ಆ ಕತ್ತಿಯು ಬಂಗಾರದ ಕತ್ತಿಯಾಗಿ ಮಾರ್ಪಡುತ್ತದೆ.ಹಾಗೆಯೇ ಹಣೆಯಲ್ಲಿ ವಿಭೂತಿಯನ್ನು ಧರಿಸಿದೊಡನೆ ಪಾಪವು ಕ್ಷಯವಾಗುತ್ತದೆ,ಅಳಿದು ಹೋಗುತ್ತದೆ.

ಬಸವಣ್ಣನವರು ಈ ವಚನದ ಮೂಲಕ ಪಾಪಭೀತಿಯಲ್ಲಿ ಬಳಲುತ್ತಿರುವ ಜನಕೋಟಿಯನ್ನು ಉದ್ಧರಿಸುವ ಭವಬಂಧುವಾಗಿ,ಬಹುಜನರಬಂಧುವಾಗಿ ತಮ್ಮ ಲೋಕೋದ್ಧರಾದ ಕಾರ್ಯವನ್ನು ಬಹುಸಮರ್ಥವಾಗಿ ನಿರ್ವಹಿಸಿದ್ದಾರೆ.ಮುಗ್ಧ ಜನರನ್ನು ಪಟ್ಟಭದ್ರರು ಮತ್ತು ಪುರೋಹಿತ ವರ್ಗದವರು ಪಾಪ,ಕರ್ಮಗಳ ಹೆಸರಿನಲ್ಲಿ ಭಯಭೀತರನ್ನಾಗಿಸಿ ಜನಸಾಮಾನ್ಯರು ಭಯ ಭೀತಿಯಲ್ಲೇ ಬದುಕುವಂತೆ ಮಾಡಿದ್ದರು.ಯಾವುದು ಪಾಪ,ಯಾವುದು ಪುಣ್ಯ ಎಂದು ತಿಳಿಸದೆ ಉಂಡರೂ ಪಾಪ,ಉಟ್ಟರೂ ಪಾಪ,ನಡೆದಾಡಿದರೂ ಪಾಪ,ಮಲಗಿದರೂ ಪಾಪ ಎನ್ನುತ್ತ ಕ್ಷಣಕ್ಷಣಕ್ಕೂ ಜನಸಾಮಾನ್ಯರಲ್ಲಿ ಪಾಪದ ಭೀತಿಯನ್ನುಂಟು ಮಾಡಿದ್ದರು.ಪಂಚಮಹಾಪಾತಕಗಳ ಹೆಸರಿನಲ್ಲಿ ಜನರ ಬದುಕನ್ನು ಸಂಕಷ್ಟಮಯವನ್ನಾಗಿಸಿದ್ದರು.ಸಂಚಿತ,ಆಗಮಿ ಮತ್ತು ಪ್ರಾರಬ್ಧ ಎನ್ನುವ ಕರ್ಮತ್ರಯಗಳ ಬಗ್ಗೆ ಎಲ್ಲಿಲ್ಲದ ಭಯವನ್ನುಂಟು ಮಾಡಿದ್ದರು.ಇದು ಎಷ್ಟು ಅತಿರೇಕಕ್ಕೆ ಹೋಗಿತ್ತು ಎಂದರೆ ಸಂಚಿತ ಮತ್ತು ಆಗಮಿ ಕರ್ಮಗಳನ್ನು ತೊಡೆದುಕೊಳ್ಳಬಹುದಂತೆ ; ಆದರೆ ಪ್ರಾರಬ್ಧಕರ್ಮವನ್ನು ಕಳೆಯಲು ಬ್ರಹ್ಮ ವಿಷ್ಣು ಮಹೇಶ್ವರರಿಂದಲೂ ಸಾಧ್ಯವಿಲ್ಲವಂತೆ ! ಪರಮಾತ್ಮನೂ ಪ್ರಾರಬ್ಧಕರ್ಮವನ್ನು ಅಳಿಸಲಾರನಂತೆ ! ಇಂತಹ ಘನಘೋರವಾಕ್ಯಗಳನ್ನು ಕೇಳಿ ಜನಸಾಮಾನ್ಯರ ಆತ್ಮಚೈತನ್ಯವು ಮುದುಡಿಹೋಗಿತ್ತು.ಕರ್ಮಭಯಗ್ರಸ್ತ ಜನರಲ್ಲಿ,ಪಾಪಭೀತಿಗೊಳಗಾಗಿ ಪರಿತಪಿಸುತ್ತಿದ್ದವರಲ್ಲಿ ಭರವಸೆ ತುಂಬುವ ಮಾತುಗಳನ್ನಾಡಿ ಅವರನ್ನು ಉದ್ಧರಿಸಿದ್ದಾರೆ ಬಸವಣ್ಣನವರು.ಪ್ರಾರಬ್ಧಕರ್ಮದ ಬಗ್ಗೆ ಚಿಂತಿಸಬೇಡಿ,ನಿಮ್ಮ ಹಣೆಯಲ್ಲಿ ವಿಭೂತಿ ಧರಿಸಿಕೊಳ್ಳಿ.ನಿಮ್ಮ ಪಾಪವೇ ಸುಟ್ಟು ಬೂದಿಯಾಗುತ್ತದೆ, ಪುಣ್ಯ ಸಂಚಯವಾಗುತ್ತದೆ ಎನ್ನುವುದನ್ನು ಬಸವಣ್ಣನವರು ಜನರಿಗೆ ಮನದಟ್ಟಾಗುವಂತೆ ಸರಳ ಸುಂದರ ಉಪಮೆ- ರೂಪಕಗಳ ಮೂಲಕ ವಿವರಿಸಿದ್ದಾರೆ.ಕಹಿಸೋರೆಕಾಯಿಯನ್ನು ತಂದು ಅದರಲ್ಲಿ ವಿಭೂತಿಯನ್ನು ತುಂಬಿ ಇಟ್ಟರೆ ಮೂರುದಿನಗಳಲ್ಲಿ ಕಹಿಸೋರೆಕಾಯಿಯು ತನ್ನ ಕಹಿಗುಣವನ್ನು ಕಳೆದುಕೊಂಡು ಸಿಹಿಯಾಗುತ್ತದೆ.ಸಾವಿರಾರು ಪ್ರಾಣಿಗಳನ್ನು ಹತ್ಯೆಗೈದ ಬಲುಬಿರುಸಾದ ಬಲು ಹರಿತವಾಗಿರುವ ಕಟುಕನ ಕೈಯ ಕತ್ತಿಯು ಸ್ಪರ್ಶಮಣಿಯು ಅದನ್ನು ಮುಟ್ಟಿದೊಡನೆ ತನ್ನ ಕಬ್ಬಿಣದ ಗುಣಕಳೆದುಕೊಂಡು ಬಂಗಾರವಾಗಿ ಮಾರ್ಪಡುತ್ತದೆ.ಹಾಗೆಯೇ ಹಣೆಯಲ್ಲಿ ವಿಭೂತಿ ಧರಿಸಲು ಎಲ್ಲ ಬಗೆಯ ಪಾಪ ಕರ್ಮಗಳು ಸುಟ್ಟುಬೂದಿಯಾಗುತ್ತವೆಯಾದ್ದರಿಂದ ನಾನು ಹಿಂದಿನ ಜನ್ಮದಲ್ಲಿ ಆ ಪಾಪ ಮಾಡಿದ್ದೇನೆ,ಈ ಕರ್ಮ ಮಾಡಿದ್ದೇನೆ ಅದಕ್ಕಾಗಿ ಈ ಜನ್ಮದಲ್ಲಿ ಈ ಕೆಟ್ಟಸ್ಥಿತಿ ಬಂದೊದಗಿದೆ ಎಂದು ಚಿಂತಿಸದೆ ವಿಭೂತಿಯನ್ನು ಧರಿಸಿ ಪಾಪಮುಕ್ತರಾಗಿ ಎನ್ನುತ್ತಾರೆ ಬಸವಣ್ಣನವರು.

ಸಮಾಜೋಧಾರ್ಮಿಕ ಸುಧಾರಕರ ಕೆಲಸ ಭಯ- ಅಜ್ಞಾನದಲ್ಲಿ ಬಳಲುತ್ತಿರುವ ಜನರನ್ನು ಭಯಮುಕ್ತರನ್ನಾಗಿಸುವುದು,ಸತ್ಯದ ಸ್ವರೂಪದರ್ಶನ ಮಾಡಿಸುವುದು.ಜಗತ್ತಿನ ಇತಿಹಾಸದಲ್ಲೇ’ ನ ಭೂತೋ ನ ಭವಿಷತ್ ‘ ವಾಕ್ಯಕ್ಕೆ ನಿದರ್ಶನಚೇತನರಾಗಿರುವ,ಮಹಾನ್ ಸಮಾಜೋಧಾರ್ಮಿಕ ಸುಧಾರಕರಾಗಿರುವ ಬಸವಣ್ಣನವರು ಈ ವಚನದಲ್ಲಿ ಪಾಪಭೀತಿಗೊಳಗಾದ ಜನಸಮುದಾಯವನ್ನು ಹಿಡಿದೆತ್ತುವ ಕಾರ್ಯ ಮಾಡಿದ್ದಾರೆ.ಸಾಮಾಜಿಕ ಅಸಮಾನತೆಯು ಮನುಷ್ಯರ ಸೃಷ್ಟಿಯಲ್ಲದೆ ಪರಮಾತ್ಮನ ಎಣಿಕೆಯಲ್ಲ.ಸಮಾಜ, ರಾಷ್ಟ್ರಜೀವನದಲ್ಲಿ ತಮ್ಮ ಅಧಿಪತ್ಯಮೆರೆಯಬಯಸುವ ಕಪಟಿಗಳು ಸಮಾಜದ ಶೂದ್ರರು,ದೀನದುರ್ಬಲರು ಮತ್ತು ದಲಿತಸಮುದಾಯವನ್ನು ತಮ್ಮ ಅಂಕಿತದಲ್ಲಿಟ್ಟುಕೊಳ್ಳಲು ಪಾಪ ಕರ್ಮಗಳ ಭೀತಿಯನ್ನುಂಟು ಮಾಡುವ ಭಯಾನಕ ಶಾಸ್ತ್ರ ಸಂಹಿತೆಗಳನ್ನು ರಚಿಸಿದ್ದಾರೆ.ಪುಣ್ಯಮಾಡಿದವರು ಬ್ರಾಹ್ಮಣರಾಗಿ ಹುಟ್ಟಿದರೆ ಪಾಪ ಮಾಡಿದವರು ದಲಿತ -ಅಂತ್ಯಜರಾಗಿ ಹುಟ್ಟುತ್ತಾರೆ ಎನ್ನುವ ಹಸಿಹಸಿ ಸುಳ್ಳನ್ನು ಪ್ರತಿಷ್ಠಾಪಿಸಿ ತಮ್ಮ ಮೆಯ್ಮೆ ಮೆರೆದಿದ್ದಾರೆ.ಪುಣ್ಯಾತ್ಮರಾದವರಿಗೆ ಮಾತ್ರ ಆಳುವ ಹಕ್ಕು ಬರುತ್ತದೆ ಎಂದು ದುರ್ಬಲರನ್ನು ಅಧಿಕಾರಕ್ಷೇತ್ರದಿಂದ ಹೊರಗೆ ಇಟ್ಟಿದ್ದಾರೆ.ಹಿಂದಿನ ಜನ್ಮಗಳ ಫಲವಾಗಿ ಶ್ರೀಮಂತಿಕೆ ಬಂದಿದೆ ಎಂದುಕೊಚ್ಚಿಕೊಳ್ಳುತ್ತ ಬಡವರ ಹೊಲ ಮನೆಗಳನ್ನು ನುಂಗಿ ನೊಣೆಯುತ್ತಿದ್ದಾರೆ.ಬಡತನ ದಾರಿದ್ರ್ಯಗಳಿಗೆ ಯಾವ ಪಾಪ- ಕರ್ಮವೂ ಕಾರಣವಲ್ಲ ; ಬದಲಿಗೆ ಅದು ಉಳ್ಳವರು ಪುರೋಹಿತರ ಕುಟಿಲಕೂಟದ ಕ್ರೌರ್ಯ.ಇದನ್ನು ಅರ್ಥಮಾಡಿಕೊಳ್ಳದ ಸಮಾಜದ ಶೋಷಿತರು ಪದದುಳಿತರು ತಾವು ಪಾಪಿಗಳು ಎಂದೇ ಭಾವಿಸಿಕೊಂಡಿದ್ದರು.ಬಸವಣ್ಣನವರು ದುರ್ಮತಿಗಳ ಈ ಕಾಪಟ್ಯವನ್ನು ಅಲ್ಲಗಳೆದು ‘ ನೀವು ಯಾರೂ ಪಾಪಾತ್ಮರಲ್ಲ,ನಿಮ್ಮೆಲ್ಲರಲ್ಲಿಯೂ ಶಿವನಿದ್ದಾನೆ.ವಿಭೂತಿಯನ್ನು ಧರಿಸಿ ಪಾಪಭೀತಿಯಿಂದ ಮುಕ್ತರಾಗಿ,ಶಿವಕಾರುಣ್ಯವನ್ನು ಅನುಭವಿಸಿ’ ಎಂದು ಅಭಯನೀಡಿದ್ದಾರೆ,ನೊಂದು ಬೆಂದ ಬಾಳುಗಳಿಗೆ ಬೆಳಕಾಗಿದ್ದಾರೆ,ಭರವಸೆಯಾಗಿದ್ದಾರೆ.ಪಾಪಮುಕ್ತರಾಗಲು ತೀರ್ಥಕ್ಷೇತ್ರಗಳನ್ನು ಸುತ್ತಮುತ್ತಬೇಕು,ಮನುಷ್ಯರಲ್ಲಿ ಶ್ರೇಷ್ಠರೆನ್ನಿಸಿಕೊಂಡವರ ಸೇವೆ ಮಾಡಬೇಕು ಎಂಬಿತ್ಯಾದಿ ಆತ್ಮಘಾತುಕ ಸಂಗತಿಗಳನ್ನು ಅಲ್ಲಗಳೆದು ಬಸವಣ್ಣನವರು ‘ ಎಲ್ಲಿಗೂ ಹೋಗಬೇಡಿ,ಯಾರ ಪದತಲಗಳಲ್ಲಿಯೂ ಅಡ್ಡ ಉದ್ದ ಬಿದ್ದು ಶರಣಾಗಬೇಡಿ,ಪರಮಾತ್ಮನಾದ ಶಿವನಿಗೆ ಶರಣಾಗಿ ,ಶಿವಲಾಂಛನವಾದ ವಿಭೂತಿಯನ್ನು ಧರಿಸಿ ಮುಕ್ತರಾಗಿ’ ಎಂದು ಭಯಭ್ರಾಂತರಲ್ಲಿ ಭರವಸೆಯ ಹೊಸಬೆಳಕು ಮೂಡಿಸಿದ್ದಾರೆ.ಕಹಿಸೋರೆಕಾಯಿಯು ವಿಭೂತಿಯನ್ನು ತನ್ನ ಒಡಲಲ್ಲಿಟ್ಟ ಮಾತ್ರಕ್ಕೆ ಮೂರು ದಿನಗಳಲ್ಲಿಯೇ ತನ್ನ ಕಹಿಸ್ವಭಾವವನ್ನು ಕಳೆದುಕೊಂಡು ಸಿಹಿಯಾಗುತ್ತದೆ.ಕಹಿಸೋರೆ ಕಾಯಿಯ ಹುಟ್ಟುಗುಣವೇ ವಿಷವಾಗಿದೆ.ಹಾಗಿದ್ದರೂ ವಿಭೂತಿಯ ಸಂಪರ್ಕದಿಂದ ಕಹಿಕುಂಬಳವು ಸಿಹಿಕುಂಬಳವಾಗಿ ಮಾರ್ಪಡುತ್ತದೆ ಅಂದರೆ ತನ್ನ ಸ್ವಭಾವವನ್ನೇ ಮಾರ್ಪಡಿಸಿಕೊಂಡು ಹೊಸ ಗುಣ ಸ್ವಭಾವವನ್ನು ಹೊಂದುತ್ತದೆ.ಕಟುಕನೊಬ್ಬನ ಕೈಯಲ್ಲಿರುವ ಕತ್ತಿಯು ಎಷ್ಟೇ ಬಲಿಷ್ಠವಾಗಿರಲಿ,ಹರಿತವಾಗಿರಲಿ ಸ್ಪರ್ಶಮಣಿಯು ಅದನ್ನು ತಾಕಿದೊಡನೆ ಕಟುಕನ ಕೈಯ ಕಬ್ಬಿಣದ ಕತ್ತಿ ಬಂಗಾರದ ಕತ್ತಿಯಾಗಿ ಮಾರ್ಪಡುತ್ತದೆ.ಸ್ಪರ್ಶಮಣಿಯ ಸತ್ತ್ವ- ಸಾಮರ್ಥ್ಯವೇ ಅಂತಹದು.ಈ ಕತ್ತಿಯು ಸಾವಿರಾರು ಮೂಕಪ್ರಾಣಿಗಳ ಶಿರಹರಿದಿದೆ,ಹಸುಗಳನ್ನು ಕೊಂದು ಬ್ರಹ್ಮಹತ್ಯಾದೋಷಕ್ಕೆ ಗುರಿಯಾಗಿದೆ ಎಂದು ಎಣಿಸದೆ ತನ್ನನ್ನು ಕತ್ತಿಗೆ ತಾಗಿಸಿದೊಡನೆ ಅದನ್ನು ಬಂಗಾರವನ್ನಾಗಿ ಪರಿವರ್ತಿಸುತ್ತದೆ ಸ್ಪರ್ಶಮಣಿಯು.ಒಂದು ಸಾಮಾನ್ಯ ಸ್ಪರ್ಶಮಣಿಯು ಕಟುಕನ ಕೈಯಲ್ಲಿ ಕ್ರೂರಕೃತ್ಯಗಳನ್ನೆಸಗಿದ ಕತ್ತಿಯನ್ನು ಬಂಗಾರವನ್ನಾಗಿ ಪರಿವರ್ತಿಸಬೇಕಾದರೆ ವಿಶ್ವನಿಯಾಮಕನಾಗಿರುವ ವಿಶ್ವೇಶ್ವರ ಶಿವನ ಲಾಂಛನವಾಗಿರುವ ವಿಭೂತಿಯು ಪಾಪ ಕರ್ಮಗಳನ್ನು ಕಳೆಯದೆ ? ಖಂಡಿತ ಕಳೆಯುತ್ತದೆ ಎನ್ನುವ ಬಸವಣ್ಣನವರು ‘ ಪಾಪ ಪಲ್ಲಟವಾಗದೆ ?’ ಎಂದು ಪ್ರಶ್ನಿಸಿದ್ದಾರೆ.’ ಪಲ್ಲಟ’ ಎಂದರೆ ತಿರುವು ಮುರುವು ಆಗುವುದು,ಮೇಲೆ ಕೆಳಗೆ ಆಗುವುದು,ವ್ಯತ್ಯಾಸವಾಗುವುದು ಎಂದು ಅರ್ಥ.ವಿಭೂತಿಯನ್ನು ಧರಿಸಿದೊಡನೆ ಪಾಪವೇ ಪುಣ್ಯವಾಗಿ ಪರಿವರ್ತನೆಯಾಗುತ್ತದೆ.ವಿಭೂತಿಯನ್ನು ಧರಿಸಲು ಕರ್ಮವೇ ಧರ್ಮವಾಗಿ ಮಾರ್ಪಡುತ್ತದೆ.ನೊಸಲಲ್ಲಿ ಅಂದರೆ ಹಣೆಯಲ್ಲಿ ತ್ರಿಪುಂಡ್ರಧಾರಣೆ ಮಾಡಲು ಬ್ರಹ್ಮನು ಬರೆದ ಹಣೆಬರಹವೇ ಬದಲಾಗುತ್ತದೆ.ಶಿವ ಭಕ್ತರು ಹಣೆಯಲ್ಲಿ ವಿಭೂತಿಯನ್ನು ಧರಿಸುವ ಮೂಲಕ ಬ್ರಹ್ಮನು ಬರೆದ ವಿಧಿಲಿಖಿತವನ್ನು ಕೂಡ ಅಳಿಸಿಕೊಳ್ಳಬಲ್ಲರು.ಶಿವಭಕ್ತರು ಪಾಪ ಕರ್ಮಗಳಿಗೆ ಹೆದರದೆ,ಬ್ರಹ್ಮ ವಿಷ್ಣುಗಳಿಗೆ ಕುಗ್ಗಿ ತಗ್ಗದೆ,ದೇವತೆಗಳೆನ್ನಿಸಿಕೊಂಡವರಿಗೆ ಬಾಗದೆ,ಲೋಕದ ತಿರಿದುಣ್ಣುವ ದೈವಗಳಿಗೆ ಶರಣೆನ್ನದೆ ‘ ಶಿವ ಶರಣು ‘ ಎನ್ನುತ್ತಾ ಹಣೆಯಲ್ಲಿ ವಿಭೂತಿಯನ್ನು ಧರಿಸುತ್ತ ಭಯಮುಕ್ತರಾಗಬಹುದು,ಭವಮುಕ್ತರಾಗಬಹುದು.

೩೧.೦೧.೨೦೨೪

About The Author