ಗುರುವಚನವೇ ಸಾಕ್ಷಾತ್ಕಾರದ ಸಿದ್ಧ ಸೂತ್ರ

ಬಸವೋಪನಿಷತ್ತು ೨೮ : ಗುರುವಚನವೇ ಸಾಕ್ಷಾತ್ಕಾರದ ಸಿದ್ಧ ಸೂತ್ರ : ಮುಕ್ಕಣ್ಣ ಕರಿಗಾರ

ಗುರುವಚನವಲ್ಲದೆ ಲಿಂಗವೆಂದೆನಿಸದು ;
ಗುರುವಚನವಲ್ಲದೆ ನಿತ್ಯವೆಂದೆನಿಸದು ;
ಗುರುವಚನವಲ್ಲದೆ ನೇಮವೆಂದೆನಿಸದು.
ತಲೆಯಿಲ್ಲದಟ್ಟೆಗೆ ಪಟ್ಟವ ಕಟ್ಟುವ
ಉಭಯಭ್ರಷ್ಟರ ಮೆಚ್ಚುವನೆ ನಮ್ಮ ಕೂಡಲ ಸಂಗಮದೇವ ?

ಬಸವಣ್ಣನವರು ಈ ವಚನದಲ್ಲಿ ಗುರೂಪದೇಶದ ಮಹತ್ವವನ್ನು ಒತ್ತಿಹೇಳಿದ್ದಾರೆ.ಗುರುವಿನ ಅನುಗ್ರಹ,ಉಪದೇಶ ಪಡೆಯದೆ ಮಾಡುವ ಲಿಂಗಪೂಜೆಯು ಫಲನೀಡುವುದಿಲ್ಲ.ಗುರುವಿನ ಉಪದೇಶವಿಲ್ಲದೆ ಪರಶಿವನ ಸಾಕ್ಷಾತ್ಕಾರ ಲಭಿಸದು.ಗುರುವಾನುಗ್ರಹವಿಲ್ಲದೆ ವ್ರತ ಅನುಷ್ಠಾನಾದಿಗಳು ಸಿದ್ಧಿಸಲಾರವು.ಶ್ರೀಗುರುವಾನುಗ್ರಹವಿಲ್ಲದವರಿಗೆ ಮಠ ಪೀಠ ಮಂದಿರಗಳ ಸ್ವಾಮಿ,ಶರಣರ ಪಟ್ಟದಲ್ಲಿ ಕೂಡಿಸುವುದು ತಲೆಯಿಲ್ಲದ ದೇಹಕ್ಕೆ ಅಂದರೆ ಬರಿಯ ಡಿಂಬಕ್ಕೆ ಅರ್ಥಾತ್ ರುಂಡವಿಲ್ಲದ ಮುಂಡಕ್ಕೆ ಸಿಂಗಾರ ಮಾಡಿದಂತೆ.ಗುರುದೀಕ್ಷೆ ಇಲ್ಲದೆ ಮಠ ಪೀಠಗಳ ಗದ್ದುಗೆಯ ಮೇಲೆ ಕೂಡುವವರು ಇತ್ತ ಇಹಕ್ಕೂ ಸಲ್ಲರು, ಅತ್ತ ಪರಕ್ಕೂ ಸಲ್ಲರಲ್ಲದೆ ಗುರುವಾನುಗ್ರವಿಲ್ಲದವನನ್ನು ಪೀಠದ ಮೇಲೆ ಕೂಡಿಸಿದವನು ಸಹ ಇಹಪರಗಳಿಗೆ ಎರವಾಗುತ್ತಾನೆ ಎನ್ನುತ್ತಾರೆ ಬಸವಣ್ಣನವರು.

ಬಸವಣ್ಣನವರು ಸಮಾಜದಲ್ಲಿ ರೂಢಿಯಲ್ಲಿದ್ದ ಧಾರ್ಮಿಕ ಅರ್ಥಹೀನ ಸಂಗತಿ ಒಂದರತ್ತ ಈ ವಚನದಲ್ಲಿ ಲೋಕದ ಗಮನಸೆಳೆದು ಶ್ರೀಗುರುವಿನ ಅನುಗ್ರಹದ ಪಾರಮ್ಯವನ್ನು ಪ್ರತಿಪಾದಿಸಿದ್ದಾರೆ.ಶೈವ ಮತ್ತು ವೀರಶೈವ ಪರಂಪರೆಯ ಮಠಗಳ ನಿತ್ಯನೈಮಿತ್ತಿಕ ಧಾರ್ಮಿಕ ಆಚರಣೆಗಳು ಸಾಂಗವಾಗಿ ನಡೆಯಲೆಂದು ಶಿಷ್ಯರನ್ನು ನೇಮಿಸಿಕೊಳ್ಳುವ ಪರಂಪರೆ ಇದೆ.ಪೀಠಾಧಿಪತಿಯಾದವನು ತನ್ನ ನಂತರ ಮಠದ ಪರಂಪರೆ ಮುಂದುವರೆಯಲಿ ಎಂದು ಯೋಗ್ಯನಾದ ಇಲ್ಲವೆ ತನಗೆ ಸರಿಕಂಡ ಒಬ್ಬನನ್ನು ಉತ್ತರಾಧಿಕಾರಿ ಎಂದು ನೇಮಿಸಿಕೊಳ್ಳುವನು.ಪೀಠಾಧಿಕಾರಿಯ ನಂತರ ಅಧಿಕಾರವು ಅವನು ನೇಮಿಸಲ್ಪಟ್ಟ ವ್ಯಕ್ತಿಗೆ ಹಸ್ತಾಂತರವಾಗುವುದರಿಂದ ಅವನು ಉತ್ತರಾಧಿಕಾರಿ ಎನ್ನಿಸಿಕೊಳ್ಳುವನು.ಆದರೆ ಈ ಉತ್ತರಾಧಿಕಾರಿ ಯಾರು ಆಗಬೇಕು ? ಹೇಗೆ ಇರಬೇಕು ಎನ್ನುವುದು ಆಯಾ ಮಠ ಪೀಠಗಳ ಪರಂಪರೆಯನ್ನು ಅವಲಂಬಿಸಿರುತ್ತದೆ.ಪೀಠಾಧಿಪತಿಯು ತನ್ನ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಿಕೊಳ್ಳಲು ಸ್ವತಂತ್ರನಿರುವನಾದರೂ ಸಂಸ್ಕಾರಹೀನ,ಗುರೂಪದೇಶ ಪಡೆಯದ ವ್ಯಕ್ತಿಯನ್ನು ಉತ್ತರಾಧಿಕಾರಿಯನ್ನಾಗಿ ನೇಮಿಸಿಕೊಳ್ಳುವಂತಿಲ್ಲ.ಶೈವ ಪರಂಪರೆಯ ಮಠಗಳಲ್ಲಿ ಉತ್ತರಾಧಿಕಾರಿ ಆಯ್ಕೆಯ ಕುರಿತು ಶಿವಾಗಮಗಳಲ್ಲಿ ವಿವರವಾದ ಸೂಚನೆಗಳಿವೆ.ಮಠಗಳಲ್ಲಿ ತನ್ನ ನಂತರದ ವ್ಯಕ್ತಿಗೆ ಅಧಿಕಾರ ನೀಡುವ ಹಿರಿಯ ಪೀಠಾಧಿಪತಿ ಉತ್ತರಾಧಿಕಾರಿಗೆ ಪೂಜ್ಯನಾಗಬಹುದು ಆದರೆ ಗುರುವಾಗಲಾರ ! ಗುರುವಿಗೆ ಇರುವ ಸ್ಥಾನ ತನಗೆ ಪೀಠಾಧಿಕಾರವನ್ನು ನೀಡಿದ ಪೀಠಾಧಿಪತಿಗೆ ನೀಡಲಾಗದು.ಉತ್ತರಾಧಿಕಾರಿಯಾಗುವವನಿಗೆ ಒಬ್ಬ ಸಮರ್ಥಗುರುವಿನಿಂದ ಶಿವದೀಕ್ಷೆ ಇಲ್ಲವೆ ಲಿಂಗದೀಕ್ಷೆ ಕೊಡಿಸಿ,ಅವನನ್ನು ಹಲವುಕಾಲ ಗುರುಸನ್ನಿಧಿಯಲ್ಲಿ ಬಿಟ್ಟು ಲಿಂಗಾಂಗಸಾಮರಸ್ಯಸಾಧಿಸಿದ ಬಳಿಕ,ಶಿವಯೋಗಸಾಧನೆಯಲ್ಲಿ ಪಳಗಿದ ಬಳಿಕ ಪೀಠಕ್ಕೆ ಕರೆತಂದು ಅಧಿಕಾರ ಹಸ್ತಾಂತರಿಸಬೇಕು.ಇದಕ್ಕೆ ವ್ಯತಿರಿಕ್ತವಾಗಿ ಶಾಸ್ತ್ರೋಪಚಾರದ ಪೂಜೆಯ ಅಯ್ಯಾಚಾರವಾಗಿದೆ ಎಂದಾಗಲಿ ಇಲ್ಲವೆ ಮೂರ್ನಾಲ್ಕು ತಿಂಗಳುಗಳ ವೈದಿಕಶಿಕ್ಷಣ ಪಡೆದಿದ್ದಾರೆಂದಾಗಲಿ ಗುರುದೀಕ್ಷೆಪಡೆಯದ ವ್ಯಕ್ತಿಗೆ ಉತ್ತರಾಧಿಕಾರಿ ಪಟ್ಟವನ್ನು ಕಟ್ಟಲಾಗದು.ಧಾರ್ಮಿಕ ಕ್ಷೇತ್ರಗಳಲ್ಲಿ ಸ್ವಾಮಿಗಳು,ಪೀಠಾಧಿಪತಿಗಳಾಗಿ ಕುಳಿತುಕೊಳ್ಳುವವರು ಸಮಾಜದ ಗುರುವೆಂದು ಗೌರವಾರ್ಹರಾಗುವುದರಿಂದ ಮೊದಲು ಗುರುತ್ವವನ್ನು ಅಳವಡಿಸಿಕೊಳ್ಳಬೇಕು.ತಾನೇ ಗುರುವಾಗದವನು ಸಮಾಜಕ್ಕೆ ಏನನ್ನು ಬೋಧಿಸಬಲ್ಲ ?

ಬಸವಣ್ಣನವರು ಮಠಪರಂಪರೆಗೆ ಗುರುಪರಂಪರೆ ಒಂದಿರಬೇಕು ಎಂದು ಸಾರಿರುವ ಈ ವಚನದಲ್ಲಿ ಒಂದು ಆಧ್ಯಾತ್ಮಿಕ ರಹಸ್ಯವನ್ನು,ಸೂತ್ರವನ್ನು ತೆರೆದು ತೋರಿಸಿದ್ದಾರೆ.ಲಿಂಗ,ಪರಮಾತ್ಮ ಮತ್ತು ಸಿದ್ಧಿಗಳು ಇರಬಹುದು ಈ ಮೊದಲೆ. ಆದರೆ ಅವು ಗುರುವಿನ ಅನುಗ್ರಹವಾಗದೆ ಪ್ರಕಟಗೊಳ್ಳುವುದಿಲ್ಲ.ಲಿಂಗ ಅಥವಾ ಶಿವನ ಮೂರ್ತಿ ಇರಬಹುದು ಪ್ರಸಿದ್ಧಿಯನ್ನು ಹೊಂದಿ.ಸ್ಥಾವರಲಿಂಗ,ಮೂರ್ತಿಯನ್ನು ಯಾರೋ ಪ್ರತಿಷ್ಠೆಮಾಡಿರಬಹುದು,ಇಷ್ಟಲಿಂಗವನ್ನು ಯಾರೋ’ ಸಿದ್ಧ’ ಪಡಿಸಿರಬಹುದು ಆದರೆ ಶ್ರೀಗುರುವು ಶಿಷ್ಯನಿಗೆ ಶಿವನ ಲಿಂಗ- ಮೂರ್ತಿಯ ಬಗ್ಗೆ ವಿವರಿಸದ ಹೊರತು ಶಿಷ್ಯನಲ್ಲಿ ಆ ಮೂರ್ತಿ,ಲಿಂಗತತ್ತ್ವವು ಪ್ರಕಟಗೊಳ್ಳುವುದಿಲ್ಲ.ದೇವಸ್ಥಾನಗಳ ಲಿಂಗ ಮೂರ್ತಿಗಳ ‘ಪ್ರಾಣಪ್ರತಿಷ್ಠೆ’ ಯು ಒಂದು ಶುಷ್ಕ ಧಾರ್ಮಿಕ ಕ್ರಿಯೆಯಷ್ಟೆ.ಪ್ರಾಣಪ್ರತಿಷ್ಠೆಗೊಂಡ ಲಿಂಗ- ಮೂರ್ತಿಗಳು ಲೋಕದ ಜನರಿಂದ ಪೂಜೆಗೊಳ್ಳಲು ಅರ್ಹವಾಗುತ್ತವೆಯೇ ಹೊರತು ಅವುಗಳಲ್ಲಿ ‘ ಅನುಗ್ರಹಶಕ್ತಿ’ ಪ್ರಕಟಗೊಳ್ಳುವುದಿಲ್ಲ.ಅನುಗ್ರಹಶಕ್ತಿಯು ಕೇವಲ ಗುರುವಚನದಿಂದ ಮಾತ್ರ ಸಾಧ್ಯ.ಪರಶಿವನು ಸೃಷ್ಟಿ,ಸ್ಥಿತಿ,ಲಯ,ತಿರೋಭಾವ ಮತ್ತು ಅನುಗ್ರಹ ಎನ್ನುವ ಪಂಚಕಾರ್ಯಗಳನ್ನುಳ್ಳ ಪಂಚಮುಖಪರಮೇಶ್ವರನಾಗಿದ್ದು ಸೃಷ್ಟಿಕಾರ್ಯವನ್ನು ಬ್ರಹ್ಮನಿಗೆ,ಸ್ಥಿತಿ ಕಾರ್ಯವನ್ನು ವಿಷ್ಣುವಿಗೆ,ಪ್ರಳಯಕಾರ್ಯವನ್ನು ರುದ್ರನಿಗೆ,ಮಹತ್ ತತ್ತ್ವದ ಅಧಿಕಾರವಾದ ತಿರೋಭಾವ ಕಾರ್ಯವನ್ನು ಮಹೇಶ್ವರನಿಗೆ ವಹಿಸಿಕೊಟ್ಟಿರುವನಾದರೂ ತನ್ನ ವಿಶೇಷಸಾಮರ್ಥ್ಯವಾದ ‘ ಅನುಗ್ರಹಕಾರ್ಯ’ ವನ್ನು ಬೇರೆ ಯಾರಿಗೂ ವಹಿಸಿಕೊಡದೆ ತನ್ನ ಬಳಿಯೇ ಇರಿಸಿಕೊಂಡಿರುವನು.ಅನುಗ್ರಹಕಾರ್ಯವೆಂದರೆ ಮೋಕ್ಷದ ಅಧಿಕಾರವು.ಶಿವನಲ್ಲದೆ ಬೇರೆ ಯಾರೂ ಮೋಕ್ಷವನ್ನು ಕೊಡಲಾರರು.ಪರಶಿವನು ಮೋಕ್ಷವಿದ್ಯೆಯು ಲೋಕದಲ್ಲಿ ಪ್ರಕಟಗೊಳ್ಳಲಿ ಎನ್ನುವ ಉದ್ದೇಶದಿಂದ ದಕ್ಷಿಣಾಮೂರ್ತಿಯ ರೂಪದಲ್ಲಿ ಪ್ರಕಟಗೊಂಡು ಸನಕ,ಸಾನಂದಾದಿ ಋಷಿಗಳಿಗೆ ತನ್ನ ಪರಶಿವತತ್ತ್ವವನ್ನು ಬೋಧಿಸಿದನು ಮೌನವ್ಯಾಖ್ಯಾನದ ಮೂಲಕ.ಸನಕ ಸಾನಂದಾದಿ ಋಷಿಗಳು ಲೋಕದಲ್ಲಿ ಪರಶಿವತತ್ತ್ವವನ್ನು ಪ್ರಚಾರಮಾಡಿ ಗುರುಪರಂಪರೆಯನ್ನು ಪ್ರತಿಷ್ಠಾಪಿಸಿದರು.ಶಿವದಕ್ಷಿಣಾಮೂರ್ತಿಯಿಂದ ಉಪದೇಶಿಸಲ್ಪಟ್ಟು ಸನಕ ಸಾನಂದಾದಿ ಋಷಿಗಳಿಂದ ಅನುಷ್ಠಾನಿಸಲ್ಪಟ್ಟು ಅವರ ಶಿಷ್ಯ ಪ್ರಶಿಷ್ಯರುಗಳ ಮೂಲಕ ಲೋಕದಲ್ಲಿ ಪ್ರವರ್ತಿಸಲ್ಪಟ್ಟ ಗುರುದೀಕ್ಷಾ ಪರಂಪರೆಯ ಗುರುಮಾರ್ಗವನ್ನು ಹಿಡಿದು ನಡೆದವರಿಗೆ ಮಾತ್ರ ಶಿವನ ಅನುಗ್ರಹಶಕ್ತಿಯನ್ನು,ಮೋಕ್ಷವನ್ನು ಪಡೆಯಲು ಸಾಧ್ಯ.ಬಸವಣ್ಣನವರು ‘ ಗುರುವಚನ’ ಎನ್ನುವ ಪದಕ್ಕೆ ಇಲ್ಲಿ ಒತ್ತು ನೀಡಿದ್ದಾರೆ.ವೇದ ಉಪನಿಷತ್ತು ಶಾಸ್ತ್ರ ಪುರಾಣಗಳು ಶಿವನ ಅನುಗ್ರಹವನ್ನು ಒದಗಿಸಿಕೊಡಲಾರವು ; ಆದರೆ ಗುರುವಚನ,ಗುರುವಾಕ್ಯವು ಮೋಕ್ಷವನ್ನು ಕೊಡುತ್ತದೆ.ಗುರುವಚನವು ಲೋಕದ ಶಾಸ್ತ್ರಮಿತಿಯನ್ನು ಅಲ್ಲಗಳೆದ,ಅತಿಗಳೆದ ಶಿವಸೂತ್ರವು.ಗುರುವು ತನ್ನ ಶಿಷ್ಯನಿಗೆ ಲಿಂಗದೀಕ್ಷೆ ಇಲ್ಲವೆ ಶಿವದೀಕ್ಷೆಯನ್ನು ನೀಡುವಾಗ ಲಿಂಗತತ್ತ್ವ,ಶಿವತತ್ತ್ವವನ್ನು ವಿವರಿಸಿ ಆ ತತ್ತ್ವದ ಸಾಕ್ಷಾತ್ಕಾರಕ್ಕೆ ತೊರೆಯಬೇಕಾದ ದೇಹಾದಿದೋಷಗಳು,ಬೆರೆದು ಒಂದುಗೂಡಬೇಕಾದ ಆತ್ಮಭಾವದ ಶಿವಾನುಭೂತಿಯನ್ನುಂಟು ಮಾಡಿ ಮಂತ್ರೋಪದೇಶ ನೀಡುವನಾದ್ದರಿಂದ ಗುರುವಚನೋಪದೇಶವು ಬರಿಯ ಶಬ್ದಜಾಲವಾಗಿರದೆ ಪರಶಿವತತ್ತ್ವದ ಅನುಭಾವ ಮಾಲೆಯಾಗಿರುತ್ತದೆ.ಇಂತಪ್ಪ ಗುರುವಚನೋಪದೇಶದಿಂದ ಶಿಷ್ಯನು ಗುರುಪಥದಲ್ಲಿ ನಡೆದು ಗುರುವಾಗಬಲ್ಲನು,ಲೋಕಗುರುವಾಗಬಲ್ಲನು ,ಲೋಕಾನುಗ್ರಹಶಕ್ತಿಯನ್ನು ಸಂಪಾದಿಸಬಲ್ಲನು.

೩೦.೦೧.೨೦೨೪

About The Author