ಗುರುಮಾರ್ಗವನ್ನು ಹೊರತು ಪಡೆಸಿದ ವ್ರತ ನಿಯಮಗಳು ಅರ್ಥಹೀನ

ಬಸವೋಪನಿಷತ್ತು ೨೭ : ಗುರುಮಾರ್ಗವನ್ನು ಹೊರತು ಪಡೆಸಿದ ವ್ರತ ನಿಯಮಗಳು ಅರ್ಥಹೀನ : ಮುಕ್ಕಣ್ಣ ಕರಿಗಾರ

ನೋಡಿ ನೋಡಿ ಮಾಡುವ ನೇಮ,ಸಲ್ಲವು ! ಸಲ್ಲವು !!
ತನುವುದ್ದೇಶ,ಮನವುದ್ದೇಶವಾಗಿ ಮಾಡುವ ನೇಮ,ಸಲ್ಲವು ! ಸಲ್ಲವು !!
ಗುರುಪಥವ ಮೀರಿ ಮಾಡುವ ನೇಮ,ಸಲ್ಲವು ! ಸಲ್ಲವು !!
ಕೂಡಲ ಸಂಗಮದೇವಯ್ಯಾ,
ಇವು ನಿಮ್ಮ ನಿಜದೊಳಗೆ ನಿಲ್ಲವು ! ನಿಲ್ಲವು !!

ಶಿಷ್ಯನಿಗೆ ಶ್ರೀಗುರುವೇ ಪಥ ಮತ್ತು ಪರಮಾದರ್ಶ ಎನ್ನುವುದನ್ನು ಬಸವಣ್ಣನವರು ಈ ವಚನದ ಮೂಲಕ ಲೋಕಸಮಸ್ತರಿಗೆ ಸ್ಪಷ್ಟವಾಗಿ ಉಪದೇಶಿಸಿದ್ದಾರೆ.ಗುರುವು ಇದ್ದಾಗಲೂ ಜನರನ್ನು ನೋಡಿ, ಅವರು ಮಾಡಿದರು,ಇವರು ಮಾಡಿದರು ಎಂದು ಮಂದಿಯನ್ನು ಅನುಕರಿಸಿ ಮಾಡುವ ವ್ರತ- ನಿಯಮಗಳು ಸಲ್ಲವು.ದೇಹದಂಡನೆ,ಮನಸಾರೆ ಮಾಡಿದೆನೆಂದು ಉಬ್ಬಿ ಮಾಡುವ ಗುರುಮಾರ್ಗದ ಹೊರತಾದ ಇತರ ಪೂಜೋಪಚಾರಗಳು ಸಲ್ಲದ ಕ್ರಿಯೆಗಳು.ಗುರುವು ಅರುಹಿದ ಮಾರ್ಗವನ್ನು ಬಿಟ್ಟು ನಡೆಯುವ ಎಲ್ಲ ಪೂಜೆ ಪುರಸ್ಕಾರಗಳೂ ವ್ಯರ್ಥಕ್ರಿಯೆಗಳಲ್ಲದೆ ಅವುಗಳಿಂದ ಯಾವ ಪ್ರಯೋಜನವೂ ಇಲ್ಲ ಎನ್ನುವ ಬಸವಣ್ಣನವರು ಗುರುಮಾರ್ಗವನ್ನು ಬಿಟ್ಟು ಅನ್ಯಮಾರ್ಗದಲ್ಲಿ ನಡೆದವರು ಶಿವಾನುಗ್ರಹಕ್ಕೆ ಪಾತ್ರರಾಗಲಾರರು ಎಂದಿದ್ದಾರೆ.

ಅಧ್ಯಾತ್ಮಪಥದಲ್ಲಿ,ಯೋಗಸಾಧನೆಯಲ್ಲಿ ಗುರುವಿಗೆ ಪ್ರಥಮಪ್ರಾಶಸ್ತ್ಯ,ಅಗ್ರಮನ್ನಣೆ.ಒಬ್ಬರಲ್ಲಿ ಶಿಷ್ಯತ್ವವನ್ನು ವಹಿಸಿ,ಅವರನ್ನು ಗುರುವಾಗಿ ಪಡೆದವನು ಆ ಗುರುವರುಹಿದ ಮಾರ್ಗದಲ್ಲಿಯೇ ನಡೆಯಬೇಕು. ತನ್ನ ಗುರುವಿನಲ್ಲಿ ನಿಜನಿಷ್ಠೆಯುಳ್ಳ ಶಿಷ್ಯನಿಗೆ ಲೋಕದ ದೇವರುಗಳಾಗಲಿ,ಇತರ ಮಠ ಪೀಠಗಳ ಸ್ವಾಮಿ ಸಂತರುಗಳಾಗಲಿ,ಶಾಸ್ತ್ರಿ ಪುರೋಹಿತರುಗಳಾಗಲಿ ದೊಡ್ಡವರಲ್ಲ.ತನ್ನ ಗುರು ಏನು ಹೇಳುತ್ತಾನೆಯೋ ಅದೇ ಪ್ರಮಾಣ ಶಿಷ್ಯನಿಗೆ.ಗುರುವಾಕ್ಯವೇ ಮಂತ್ರ,ಗುರುವಿನ ನಡೆಯೇ ಶಿವನನ್ನು ಪಡೆಯಬಹುದಾದ ಮಾರ್ಗ.ಗುರುವಿದ್ದಲ್ಲಿ ಹರನಿರುವುದರಿಂದ ಶಿಷ್ಯನು ಗುರುವನ್ನಾಶ್ರಯಿಸಬೇಕು.ಗುರುವೇ ಹರಸ್ವರೂಪನಿರುವುದರಿಂದ ತನ್ನ ಗುರುವಿನಲ್ಲಿ ಅನನ್ಯ ನಿಷ್ಠೆಯನ್ನಿಡಬೇಕು,ಪೂರ್ಣಶ್ರದ್ಧೆಯಿಂದ ಶರಣಾಗಬೇಕು.

ಲೋಕದ ರಂಜನೆಯ ಗುರುಗಳು, ಜ್ಯೋತಿಷಿಗಳು ಶಾಸ್ತ್ರಿ ಪುರೋಹಿತ ಪುರಾಣಿಕರುಗಳು ನಾನಾ ಬಗೆಯ ವ್ರತ ಆಚರಣೆಗಳು,ಹತ್ತು ಹಲವು ದೈವಗಳ ಪೂಜೆ- ಅರ್ಚನೆಗಳನ್ನು ಹೇಳುತ್ತಾರೆ ಅವರ ಬಳಿ ಪರಿಹಾರ ಕೇಳಹೋದಾಗ.ತನ್ನ ಗುರುವಿನಲ್ಲಿ ಶಿವದೀಕ್ಷೆಯನ್ನು ಪಡೆದವನು,ಲಿಂಗದೀಕ್ಷೆಯನ್ನು ಪಡೆದವನು ಯಾರೋ ಜ್ಯೋತಿಷಿ ಹೇಳಿದನೆಂದು ಸತ್ಯನಾರಾಯಣ ಪೂಜೆ ಮಾಡುವುದು ದುರ್ಗತಿಗೆ ಕಾರಣವಾಗುವ ಶಿವದ್ರೋಹ ! ಗುರುವು ಶಿವಮಂತ್ರೋಪದೇಶ ನೀಡಿ,ಇಷ್ಟಲಿಂಗ ದೀಕ್ಷೆಯನ್ನು ನೀಡಿರಲು ಗುರು ಮತ್ತು ಲಿಂಗದಲ್ಲಿ ನಿಷ್ಠೆ ಇಲ್ಲದೆ ತಿರುಪತಿ, ಮಂತ್ರಾಲಯ, ಶಿರಡಿ ತೀರ್ಥಕ್ಷೇತ್ರಗಳೆಂದು ಸುತ್ತುವುದು ನರಕಕ್ಕೆ ಕಾರಣವಾಗುವ ಶಿವದ್ರೋಹ.ವೈಷ್ಣವರಾಗಿದ್ದರೆ ವೈಷ್ಣವದೀಕ್ಷೆ ಪಡೆದ ವೈಷ್ಣವರು,ಮಾಧ್ವರುಗಳು ಮಂತ್ರಾಲಯ,ತಿರುಪತಿಗಳಿಗೆ ಹೋಗಬಹುದು.ಆದರೆ ಶಿವಮಂತ್ರೋಪದೇಶಪಡೆದವರು,ಇಷ್ಟಲಿಂಗ ಪೂಜಕರು,ಶೈವಬ್ರಾಹ್ಮಣರುಗಳು ಮಂತ್ರಾಲಯ,ತಿರುಪತಿ,ಶಿರಡಿಗಳಿಗೆ ನಡೆದುಕೊಳ್ಳುವುದು ಮಹಾಪಾಪ! ಶಿವದ್ರೋಹ ! ಬಸವಣ್ಣನವರು ಮತ್ತೊಂದು ವಚನದಲ್ಲಿ ಹೇಳಿದ್ದಾರೆ ‘ ಪರಮಪತಿವ್ರತೆಗೆ ಒಬ್ಬನೇ ಗಂಡನಿರುವಂತೆ ಶಿವಭಕ್ತನಿಗೆ ಶಿವನೊಬ್ಬನೇ ದೇವರಲ್ಲದೆ ಮತ್ತೊಬ್ಬ ದೇವರು ಇಲ್ಲ’ ಎಂದು.ಆದರೆ ಲೋಕದ ಮರುಳಮಾನವರುಗಳು ಶಿವಭಕ್ತರಾಗಿಯೂ ಅನ್ಯದೈವಗಳನ್ನು ಭಜಿಸಿ,ಪೂಜಿಸಿ ನರಕ ಸೇರುತ್ತಿದ್ದಾರೆ.ವೀರಶೈವರು,ಲಿಂಗಾಯತರು ಎಂದು ಕೊಬ್ಬಿ ಉಬ್ಬುವವರು ಶಿವನಲ್ಲಿ,ಇಷ್ಟಲಿಂಗದಲ್ಲಿ ಮಾತ್ರ ನಿಷ್ಠೆಯನ್ನಿಡಬೇಕು.ನಾವು ವೀರಶೈವರು,ಲಿಂಗಾಯತರು ಇಷ್ಟಲಿಂಗ ಧರಿಸಿದ್ದೇವೆ,ಇಷ್ಟಲಿಂಗ ಪೂಜೆ ಮಾಡುತ್ತೇವೆ ಎಂದು ಮಂದಿಯೆದುರು ಹೇಳಿಕೊಂಡು,ದೊಡ್ಡಸ್ತಿಕೆ ಪ್ರದರ್ಶಿಸುತ್ತ ಮಂತ್ರಾಲಯ,ತಿರುಪತಿ,ಶಿರಡಿಯಂತಹ ಕ್ಷೇತ್ರಗಳಿಗೆ ನಡೆದುಕೊಳ್ಳುವ ಆ ದೇವರುಗಳನ್ನು ಪೂಜಿಸುವ ಪಥಭ್ರಷ್ಟರುಗಳು ನಿಜವಾದ ವೀರಶೈವರಲ್ಲ,ನಿಜವಾದ ಲಿಂಗಾಯತರಲ್ಲ ! ‘ ಅಕ್ಕಿಯ ಮೇಲೆ ಆಸೆ,ನೆಂಟರ ಮೇಲಿನ ಪ್ರೀತಿಯುಳ್ಳ’ ಆಸೆಬಡುಕ ಜೀವಿಗಳು ಸತ್ಪಥಕ್ಕೆ ಸಲ್ಲುವುದಿಲ್ಲ.ಶಿವಭಕ್ತರು ಶಿವಕ್ಷೇತ್ರಗಳಿಗೆ ಮಾತ್ರ ನಡೆದುಕೊಳ್ಳಬೇಕು,ಅನ್ಯಕ್ಷೇತ್ರಗಳು ಎಷ್ಟೇ ವೈಭವಯುಕ್ತವಾಗಿದ್ದರೂ ಮಹಿಮಾಯುಕ್ತವಾಗಿದ್ದರೂ ಅತ್ತ ಕಾಲಿಡಬಾರದು.ಶಿವಮಂತ್ರೋಪದೇಶ ಪಡೆದವರು ಶಿವ ಮತ್ತು ಶಿವನ ಪರಿವಾರ ದೇವತೆಗಳಾದ ಪಾರ್ವತಿ, ಗಣಪತಿ,ಷಣ್ಮುಖ,ವೀರಭದ್ರ,ಭೈರವ ದೇವಸ್ಥಾನಗಳಿಗೆ ನಡೆದುಕೊಳ್ಳಬಹುದು ; ಇಷ್ಟಲಿಂಗಪೂಜಕರು ಇಷ್ಟಲಿಂಗ ಸ್ವರೂಪವಾದ ಕಾಶಿ,ಶ್ರೀಶೈಲ ಸೇರಿದಂತೆ ದ್ವಾದಶ ಜ್ಯೋತಿರ್ಲಿಂಗ ಕ್ಷೇತ್ರಗಳ ದರ್ಶನ ಪಡೆಯಬಹುದು.ಇದು ಶಿವಸಮ್ಮತ.ಇದರ ಹೊರತಾಗಿ ಅನ್ಯದೇವರು- ದೈವಗಳಿಗೆ ನಡೆದುಕೊಳ್ಳುವುದು ಪೂಜಿಸುವುದು ನೀಚಕಾರ್ಯ,ಪಾಪಕಾರ್ಯ ಮತ್ತು ಶಿವದ್ರೋಹ.ಮನೆಯಲ್ಲಿ ಶುಭಶೋಭನಾದಿ ಕಾರ್ಯಗಳಿದ್ದರೆ ತನ್ನ ಗುರುವನ್ನು ಮನೆಗೆ ಆಹ್ವಾನಿಸಿ ಅವರನ್ನು ಪೂಜಿಸಿ,ಸತ್ಕರಿಸಿದರೆ ಆ ಕಾರ್ಯಗಳು ಮಂಗಲಮಯವಾಗಿ ಮುಗಿಯುತ್ತವೆ ; ತನ್ನ ಮನೆಯಲ್ಲಿ ಸೂತಕ,ಅಶೌಚ ಉಂಟಾದಾಗ ಶ್ರೀಗುರುವಿನ ಪಾದಪೂಜೆ ಮಾಡಿ ಶ್ರೀಗುರು ಪಾದೋದಕವನ್ನು ಸಂಪ್ರೋಕ್ಷಿಸಿದರೆ ಸರ್ವದೋಷವೂ ಪರಿಹಾರವಾಗುತ್ತದೆ.ಶ್ರೀಗುರುವಿನ ಪಾದದಲ್ಲಿ ಸಕಲ ತೀರ್ಥಗಳಿರುವಾಗ ದೋಷಪರಿಹಾರಕ್ಕೆಂದು ಆ ಕ್ಷೇತ್ರ ಈ ಕ್ಷೇತ್ರಗಳನ್ನು ತಿರುಗುವುದು ಮೂರ್ಖತನ. ಇಲ್ಲಿ ಗುರುವೆಂದರೆ ತನಗೆ ಮಂತ್ರೋಪದೇಶ ಮಾಡಿದ,ಇಷ್ಟಲಿಂಗದೀಕ್ಷೆ,ಶೈವದೀಕ್ಷೆ ನೀಡಿದ ಗುರು ಎಂದರ್ಥ.ಜಾತಿಗುರುಗಳು,ಕುಲಗುರುಗಳಲ್ಲ ನಿಜವಾದ ಗುರುಗಳಲ್ಲ.ಶಿವಮಹಾಪುರಾಣ,ಸ್ಕಂದ ಮಹಾಪುರಾಣ,ಶಿವಾಗಮಗಳಲ್ಲಿ ದೀಕ್ಷೆ ನೀಡಿದ ಗುರುವೇ ನಿಜಗುರುವೆಂದು ಸ್ಪಷ್ಟಪಡಿಸಿರುವುದರಿಂದ ಶಿವಭಕ್ತರು ಕುಲಗುರುಗಳು,ಮನೆಗುರುಗಳು ಎಂದು ಅಧ್ಯಾತ್ಮಸಾಧಕರಲ್ಲದ,ಯೋಗಸಾಧಕರಲ್ಲದ ಭವಿಗಳನ್ನು ಮನೆಗಳಿಗೆ ಕರೆತಂದು ಪೂಜಿಸಬಾರದು,ಅವರ ಪಾದಪೂಜೆ ಮಾಡುಬಾರದು.ಲೋಕದ ಭವಿಗಳನ್ನು ಗುರುಗಳೆಂದು ಭ್ರಮಿಸುವುದು ಕೂಡ ಶಿವಾಪಚಾರವೆ.ಶಿವನಾಮ ಸ್ಮರಿಸುವಲ್ಲಿ ,ಜಪಿಸುವಲ್ಲಿ ಸ್ವಯಂ ಶಿವನೇ ಇರುವುದರಿಂದ ಶಿವನನ್ನು ಬಿಟ್ಟು ಅನ್ಯದೈವಗಳಿಗೆ ನಡೆದುಕೊಳ್ಳುವುದು ಆತ್ಮಘಾತುಕ ಸಂಗತಿಯು.ಶಿವನಲ್ಲಿ ನಿಜನಿಷ್ಠೆಯಿಲ್ಲದ ಲೋಕದ ರಂಜನೆಯ ದೇವರುಗಳಿಗೆ ನಡೆದುಕೊಳ್ಳುವವರು ಶಿವನ ಆಗ್ರಹಕ್ಕೆ ಪಾತ್ರರಾಗಿ ಇಹಪರದೂರರಾಗುತ್ತಾರಲ್ಲದೆ ಶಿವನ ಅನುಗ್ರಹಕ್ಕೆ ಪಾತ್ರರಾಗಿ ಉದ್ಧಾರವಾಗುವುದಿಲ್ಲ ಎನ್ನುವುದು ‘ ಇವು ನಿಮ್ಮ ನಿಜದೊಳಗೆ ನಿಲ್ಲವು’ ಎನ್ನುವ ವಚನವಾಕ್ಯಕ್ಕರ್ಥ.

೨೯.೦೧.೨೦೨೪

About The Author