ಶಿವನಲ್ಲಿ ನಿಜನಿಷ್ಠೆ ಇಲ್ಲದ ಡಂಭಕರಿಗೆ ಮನ್ನಣೆಬೇಡ

ಬಸವೋಪನಿಷತ್ತು ೨೨ : ಶಿವನಲ್ಲಿ ನಿಜನಿಷ್ಠೆ ಇಲ್ಲದ ಡಂಭಕರಿಗೆ ಮನ್ನಣೆಬೇಡ : ಮುಕ್ಕಣ್ಣ ಕರಿಗಾರ

ಕಬ್ಬುನದ ಕೋಡಗವ ಪರುಷ ಮುಟ್ಟಲು,
ಹೊನ್ನಾದರೇನು,ಮತ್ತೇನಾದರೇನು,
ತನ್ನ ಮುನ್ನಿನ ರೂಹ ಬಿಡದನ್ನಕ್ಕ —
ಕೂಡಲಸಂಗಮದೇವಾ,
ನಿಮ್ಮ ನಂಬಿಯೂ ನಂಬದ ಡಂಭಕರಿಗಯ್ಯಾ ?

ಬಸವಣ್ಣನವರು ಡಾಂಭಿಕ ಭಕ್ತಿಯಿಂದ ಪರಶಿವನನ್ನು ಒಲಿಸಲು ಸಾಧ್ಯವಿಲ್ಲ ಎನ್ನುವುದನ್ನು ಸುಂದರ ಸಾದೃಶ್ಯದ ಮೂಲಕ ಬಣ್ಣಿಸಿದ್ದಾರೆ ಈ ವಚನದಲ್ಲಿ.ಸ್ಪರ್ಶಮಣಿಯು ಮುಟ್ಟಿದ ಕಬ್ಬಿಣವು ಬಂಗಾರವಾಗುತ್ತದೆ.ಕಬ್ಬಿಣವನ್ನು ಬಂಗಾರವನ್ನಾಗಿಸುವ ಸಾಮರ್ಥ್ಯವನ್ನು ಹೊಂದಿದೆ ಸ್ಪರ್ಶಮಣಿ.ಒಂದು ಕಬ್ಬಿಣದ ಮಂಗದ ಗೊಂಬೆಗೆ ಸ್ಪರ್ಶಮಣಿಯನ್ನು ತಾಕಿಸಲು ಪರುಷಮಣಿಯ ಪ್ರಭಾವದಿಂದ ಆ ಕಬ್ಬಿಣವು ಬಂಗಾರವಾಗುತ್ತದೆಯಾದರೂ ಮಂಗನಗೊಂಬೆ ಮೊದಲು ಕಬ್ಬಿಣದಲ್ಲಿದ್ದಂತೆ ಮಂಗವಾಗಿಯೇ ಇರುತ್ತದಲ್ಲದೆ ಬೇರೆ ಯಾವುದಾದರೂ ರೂಪಧರಿಸುವುದಿಲ್ಲ.ಪರುಷಮಣಿಯು ಕಬ್ಬಿಣದ ಲೋಹಗುಣವನ್ನು ಪರಿವರ್ತಿಸಿತಲ್ಲದೆ ಕಬ್ಬಿಣದ ಲೋಹದಲ್ಲಿ ಮಾಡಲ್ಪಟ್ಟ ಮಂಗನ ರೂಪವನ್ನು ಪರಿವರ್ತನೆ ಮಾಡಲಿಲ್ಲ.ಶಿವಭಕ್ತರಾಗಿಯೂ ಶಿವನಲ್ಲಿ ನಿಜನಿಷ್ಠೆಯನ್ನು ಹೊಂದಿರದ ಡಾಂಭಿಕ ಭಕ್ತರು ಶಿವದೀಕ್ಷೆಯನ್ನು ಪಡೆದೂ ತಮ್ಮ ಕೋಡಗ ಅಂದರೆ ಮಂಗನ ಪ್ರವೃತ್ತಿಯನ್ನು ತೊರೆಯಲರಿಯರು.

ಬಸವಣ್ಣನವರು ಈ ವಚನದಲ್ಲಿ ಶಿವನಲ್ಲಿ ನಿಜನಿಷ್ಠೆಯುಳ್ಳವರು ಹಿರಿಯರಲ್ಲದೆ ಜನರನ್ನು ಮೆಚ್ಚಿಸಲು ತೋರಿಕೆಯ ಪೂಜೆ ಮಾಡುವವರು ಹಿರಿಯರಲ್ಲ ಎನ್ನುವುದನ್ನು ಸುಂದರ ಉದಾಹರಣೆಯ ಮೂಲಕ ವಿವರಿಸಿದ್ದಾರೆ.ಸ್ಪರ್ಶಮಣಿಯು ಮುಟ್ಟಿದ ಕಬ್ಬಿಣವು ಬಂಗಾರವಾಗುವುದರಿಂದ ಸ್ಪರ್ಶಮಣಿಗೆ ಬಹಳ ಬೆಲೆಯಿದೆ.ಯಾರೋ ಒಬ್ಬರು ಸ್ಪರ್ಶಮಣಿಯ ಮಹಿಮೆಯನ್ನರಿತು ತಮ್ಮ ಮನೆಯಲ್ಲಿದ್ದ ಕಬ್ಬಿಣದಲ್ಲಿ ಮಾಡಿದ್ದ ಕೋತಿಯೊಂದನ್ನು ನಂದಿಯನ್ನಾಗಿ ಪರಿವರ್ತಿಸುವ ಆಸೆಯಿಂದ ಪರುಷಮಣಿಯನ್ನು ತಂದು ಆ ಕಬ್ಬಿಣದ ವಿಗ್ರಹಕ್ಕೆ ಮುಟ್ಟಿಸುತ್ತಾರೆ.ಕಬ್ಬಿಣವು ತತ್ ಕ್ಷಣದಲ್ಲೇ ಬಂಗಾರವಾಗುತ್ತದೆ,ಆದರೆ ಮಂಗನಮೂರ್ತಿಯು ಮಂಗವೇ ಆಗಿರುತ್ತದೆ.ಕಬ್ಬಿಣದ ಮಂಗ ಹೋಗಿ ಬಂಗಾರದ ಮಂಗವಾಯಿತ್ತಷ್ಟೆ.ಮಂಗನ ಮುಖ ಬದಲಾಗಲಿಲ್ಲ,ಪರುಷಮಣಿಯ ಸಂಪರ್ಕದಿಂದ ಮಂಗನು ನಂದಿಯಾಗಿಯೋ ಗಣಪತಿಯಾಗಿಯೋ ಪರಿವರ್ತನೆ ಹೊಂದಲಿಲ್ಲ.ಪರುಷಮಣಿಗೆ ಕಬ್ಬಿಣವನ್ನು ಬಂಗಾರವನ್ನಾಗಿ ಮಾಡುವ ಸಾಮರ್ಥ್ಯವಿದೆಯೇ ಹೊರತು ಕಬ್ಬಿಣದಲ್ಲಿ ಕೆತ್ತಿದ್ದ ವಿಗ್ರಹಗಳನ್ನು ಮನುಷ್ಯರು ಇಷ್ಟಪಟ್ಟ ರೂಪ,ಆಕಾರಗಳಿಗೆ ಮಾರ್ಪಡಿಸುವ ಸಾಮರ್ಥ್ಯ ಇಲ್ಲ.ಹಾಗೆಯೇ ಸ್ವಭಾವತಃ ಡಾಂಭಿಕರಾದವರಿಗೆ,ಪ್ರಚಾರಪ್ರಿಯರಿಗೆ ಶಿವದೀಕ್ಷೆಯನ್ನು ನೀಡಿದರೆ ಅವರು ಮಂದಿಗೆ ತೋರಿಸಲು ಶಿವಭಕ್ತಿಯನ್ನು ಆಚರಿಸುವರಲ್ಲದೆ ಆಂತರಿಕವಾಗಿ ಸಾಧನೆ ಮಾಡಲಾರರು.ಶಿವೋಪದೇಶವು ಕಬ್ಬಿಣವನ್ನು ಬಂಗಾರವನ್ನಾಗಿ ಮಾಡುವ ಪರುಷಮಣಿ ಇದ್ದಂತೆ.ಶಿವದೀಕ್ಷೆಯು ದೀಕ್ಷಿತನ ಭವಬಂಧನವನ್ನು ಕಳೆಯುತ್ತದೆ,ನಿಜ.ಆದರೆ ಶಿವನಲ್ಲಿ ನಿಜನಿಷ್ಠೆಯಿಲ್ಲದವರ ಭವಬಂಧನವನ್ನು ಶಿವದೀಕ್ಷೆಯು ಕಳೆಯದು.ತಮ್ಮ ಮುನ್ನಿನ ದುರ್ಗುಣ- ದುರ್ನಡತೆಗಳನ್ನು ಕಳೆದುಕೊಳ್ಳಲರಿಯದವರು ಶಿವದೀಕ್ಷೆಯನ್ನು ಪಡೆದು ಮಂದಿಯೆದುರು ದೊಡ್ಡವರಾಗಬಹುದೇ ಹೊರತು ಮಹಾದೇವ ಶಿವನ ಅನುಗ್ರಹವನ್ನುಣ್ಣಲು ಸಾಧ್ಯವಿಲ್ಲ.

ಕಬ್ಬಿಣದಕೋತಿಯು ಪರುಷಮಣಿಯ ಸಂಪರ್ಕದಿಂದಲೂ ತನ್ನ ರೂಪವನ್ನು ಪರಿವರ್ತಿಸಿಕೊಳ್ಳದೆ ಬಂಗಾರದ ಕೋತಿಯಾದಂತೆ ಅಲ್ಪರು,ಅವಿವೇಕಿಗಳಾದವರಿಗೆ ಶಿವದೀಕ್ಷೆಯನ್ನು ನೀಡಿದರೆ ಅವನ ವೇಷಭೂಷಣಗಳಲ್ಲಿ ಬದಲಾಯಿತೇ ಹೊರತು ಅಂತರಂಗದ ಗುಣ ಸ್ವಭಾವವು ಬದಲಾಗಲಿಲ್ಲ.ಶಿವದೀಕ್ಷೆಯನ್ನು ಪಡೆದು ಪರಿಶುಭ್ರ ವಸ್ತ್ರಗಳನ್ನುಟ್ಟುಕೊಂಡು ಮೈತುಂಬ ವಿಭೂತಿ ಬಳೆದುಕೊಂಡು ಮಂದಿಯ ನಡುವೆ ತಿರುಗುತ್ತ,ತಾನು ಶಿವಭಕ್ತನು ಎಂಬ ಸೋಗುನಟಿಸುವವನು ನಿಜವಾದ ಸಾಧಕನಲ್ಲ.ಒಂದು ಸಂಸ್ಕಾರವಾಗಿದೆಯಲ್ಲದೆ ಸಂಪೂರ್ಣ ಪರಿವರ್ತನೆ ಆಗಿಲ್ಲ.ಗುರುವಾದವನು ದೀಕ್ಷಾಕಾಂಕ್ಷಿಯನ್ನು ಪರೀಕ್ಷಿಸಿ ಇವನಿಗೆ ದೀಕ್ಷೆ ನೀಡಿದರೆ ಸಾಧಕನಾಗಬಲ್ಲನೆ ? ಶಿವಯೋಗ ಸಾಧನೆ ಮಾಡಬಲ್ಲನೆ ? ಎಂಬಿತ್ಯಾದಿ ಸಂಗತಿಗಳನ್ನು ಆರೈದು ಯೋಗ್ಯರಾದವರಿಗೆ ಮಾತ್ರ ಶಿವದೀಕ್ಷೆಯನ್ನು ನೀಡಬೇಕುಅಯೋಗ್ಯರಿಗೆ ,ಅಧಮರಿಗೆ,ಅಪಾತ್ರರಿಗೆ ಶಿವದೀಕ್ಷೆಯನ್ನು ನೀಡಬಾರದು.ದೀಕ್ಷೆಪಡೆದು ಶಿವಭಕ್ತರಾದವರು ಶಿವನನ್ನು ಮಾತ್ರ ಪೂಜಿಸಬೇಕು,ಶಿವನ ಸೇವೆಯನ್ನು ಮಾತ್ರ ಮಾಡಬೇಕು,ಶಿವ ಸಂಕೀರ್ತನೆಯನ್ನು ಮಾತ್ರ ಮಾಡಬೇಕು ಇಲ್ಲವೆ ಕೇಳಬೇಕು.ಇತ್ತ ಶಿವದೀಕ್ಷೆಯನ್ನು ಪಡೆದು ಕಂಡಕಂಡ ದೇವರುಗಳಿಗೆ ನಡೆದುಕೊಳ್ಳುತ್ತ,ಅಡ್ಡ ಉದ್ದ ಬೀಳುತ್ತ ಹೋಗುವುದು ನಿಜವಾದ ಶಿವಭಕ್ತಿಯಲ್ಲ.ಕಂಡಕಂಡಲ್ಲಿ ಭಜನೆ- ಸತ್ಸಂಗಗಳನ್ನಾಚರಿಸುತ್ತ,ಲೋಕದ ದೇವರುಗಳನ್ನು ಹಾಡಿಹೊಗಳುತ್ತ,ನಾಡಾಡಿ ದೈವಗಳ ಪೂಜೆ- ಸೇವೆ ಮಾಡುವವರು ಶಿವಭಕ್ತರಲ್ಲ.ಅಂಥಹ ಬೂಟಾಟಿಕೆಯ ಭಕ್ತರುಗಳಲ್ಲಿ ಶಿವನು ಪ್ರಸನ್ನನಾಗಲಾರನು.ಕಬ್ಬಿಣದ ಕೋತಿ ಬಂಗಾರದ ಕೋತಿ ಆಯಿತಷ್ಟೆ.ಕಬ್ಬಿಣದ್ದಾದರೇನು,ಬಂಗಾರದ್ದಾದರೇನು ಕೋತಿಯು ಕೋತಿಯೆ ! ಅದೇ ಕೋತಿಯು ಆಂಜನೆಯನಾಗಿ ಪರಿವರ್ತನೆಯಾಗಿದ್ದರೆ ಪೂಜಾರ್ಹವಾಗುತ್ತಿತ್ತು.ಲೋಕದ ಮೂಢಮತಿಗಳು ಕೋತಿಯನ್ನು ಆಂಜನೇಯನೆಂದು ತಿಳಿದು ಗೌರವಿಸುವುದರಿಂದ ಕೋತಿಗಳ ‘ಕೋತಿಯಾಟ’ ವಿಪರೀತವಾಗಿದೆ.ಕೋತಿಯು ಆಂಜನೇಯನಲ್ಲ,ಮಾರುತಿಯಲ್ಲ ಎಂದು ಜನರು ತಿಳಿದುಕೊಂಡರೆ ಕೋತಿಯ ಆಟ ನಾಟಕಗಳು ನಿಲ್ಲುತ್ತವೆ.ಆದರೆ ಜನರು ಕೋತಿ ಮತ್ತು ಆಂಜನೇಯನ ನಡುವಿನ ವ್ಯತ್ಯಾಸ ತಿಳಿದುಕೊಳ್ಳುವಷ್ಟು ಬುದ್ಧಿವಂತರಾಗಬೇಕಲ್ಲ ! ಜನರ ಮುಗ್ಧತೆಯನ್ನು ದುರ್ಬಳಕೆ ಮಾಡಿಕೊಂಡು ವಿಪರೀತವನ್ನಾಚರಿಸುತ್ತವೆ ಶಿವಸಂಸ್ಕಾರದ ಹೆಸರಿನ ಬಂಗಾರದ ಕೋತಿಗಳು.

೨೫.೦೧.೨೦೨೪

About The Author