ಬಸವೋಪನಿಷತ್ತು : ೨೩.ನಡೆ- ನುಡಿಗಳು ಒಂದಾಗಿದ್ದರೆ ಮಾತ್ರ ಪೊಡವಿಪತಿ ಶಿವನ ಅನುಗ್ರಹ ಸಾಧ್ಯ :ಮುಕ್ಕಣ್ಣ ಕರಿಗಾರ
ಒಳಗೆ ಕುಟಿಲ : ಹೊರಗೆ ವಿನಯವಾಗಿ ಭಕ್ತರೆನಿಸಿಕೊಂಬವರ
ಬಲ್ಲನೊಲ್ಲನಯ್ಯಾ ಲಿಂಗವು !
ಅವರು ಸತ್ ಪಥಕ್ಕೆ ಸಲ್ಲರು,ಸಲ್ಲರಯ್ಯಾ.
ಒಳಹೊರಗೊಂದಾಗದವರಿಗೆ ಅಳಿಯಾಸೆದೋರಿ
ಬೀಸಾಡುವನವರ ಜಗದೀಶ ಕೂಡಲ ಸಂಗಮದೇವ !
ಶಿವನ ಅನುಗ್ರಹಕ್ಕೆ ಪಾತ್ರರಾಗಲು ಶಿವಭಕ್ತರು ಒಳ ಹೊರಗೆ ಒಂದಾಗಿರಬೇಕು ಅಂದರೆ ನಡೆನುಡಿಗಳು ಒಂದಾಗಿರಬೇಕು.ಒಳಗೆ ಕುಟಿಲಮನಸ್ಕರಾಗಿ ಹೊರಗೆ ವಿನಯ ನಟಿಸುವವರ ಅಂತರಂಗವನ್ನು ಶಿವನುಬಲ್ಲನಾದ್ದರಿಂದ ಅಂತಹ ಕುಟಿಲಭಕ್ತರಲ್ಲಿ ಪ್ರಸನ್ನನಾಗನು.ಕುಟಿಲಮನಸ್ಕರು ಸತ್ ಪಥಕ್ಕೆ ಸಲ್ಲರು ಅಂದರೆ ಅವರಿಗೆ ಸದ್ಗತಿ ದೊರಕದು. ಜಗದೀಶ್ವರನಾದ ಶಿವನು ಒಳಹೊರಗೆ ಒಂದಾಗದವರಿಗೆ ಕೀಳು ಆಸೆಯನ್ನು ತೋರಿ ಆ ಆಶಾಪಾಶದಲ್ಲಿ ಕೆಡಹಿ ಬೀಸಾಡುವನು.
ಬಸವಣ್ಣನವರು ಅಂತರಂಗ ಬಹಿರಂಗ ಶುದ್ಧಿಯುಳ್ಳ ಭಕ್ತರನ್ನು ಮಾತ್ರ ಪರಮೇಶ್ವರನಾದ ಶಿವನು ಒಲಿದು ಅನುಗ್ರಹಿಸುವನು, ಒಳಗೆ ಕುಟಿಲವನ್ನಿಟ್ಟುಕೊಂಡು ಹೊರಗೆ ಸದ್ಭಕ್ತರಂತೆ ನಟಿಸುವ ನಟಮಹಾಶಯರುಗಳನ್ನು ಶಿವನು ಒಪ್ಪಲಾರ ಎನ್ನುತ್ತಾರೆ.ದುರಾಚಾರಿಗಳು,ದುರ್ಮಾರ್ಗಿಗಳು ಆದವರು ಜನರೆದುರು ಸಜ್ಜನರಂತೆ ನಟಿಸಬಹುದು,ಜನರನ್ನು ವಂಚಿಸಬಹುದು.ಆದರೆ ಜಗದೀಶ್ವರನಾದ ,ಸರ್ವರ ಅಂತರಾತ್ಮನಾದ ಶಿವನಿಗೆ ವಂಚಕ ಭಕ್ತರ ಠಕ್ಕುತನ ತಿಳಿಯದೆ ಇರುತ್ತದೆಯೆ ? ಬಹಿರಂಗದಲ್ಲಿ ವಿನಯವನ್ನು ನಟಿಸುತ್ತ ಅಂತರಂಗದಲ್ಲಿ ಕಪಟ- ಕುತ್ಸಿತ- ಕುಟಿಲಗಳನ್ನುಳ್ಳವರಿಗೆ ಶಿವನು ಲೌಕಿಕ ಪ್ರಲೋಭನೆಯನ್ನು ಒಡ್ಡಿ ಅವರನ್ನು ಹಾಳುಮಾಡುತ್ತಾನೆ.ಕುಟಿಲ ಭಕ್ತರುಗಳಿಗೆ ಸಿರಿ ಸಂಪತ್ತು,ಧನ ಕನಕಗಳಲ್ಲಿಯೇ ನೆಟ್ಟಮನಸ್ಸಿರುತ್ತದೆ,ಆದರೆ ಆಶಾಮುಕ್ತರಾದ ವಿರಕ್ತರಂತೆ ನಟಿಸುತ್ತಾರೆ.ಪರಸ್ತ್ರೀಯರನ್ನು ಮನದಲ್ಲಿ ಬಯಸುತ್ತ,ಕಾಮಿಸುತ್ತ ಜನರೆದುರು ಪರಮವಿರಕ್ತನ ಸೋಗುಹಾಕಿ ನಟಿಸುತ್ತಾರೆ.ಅರ್ಧಘಂಟೆಯೂ ಶಿವಧ್ಯಾನ- ಶಿವಪೂಜೆ ಮಾಡದೆ ಜನರೆದುರು ಘಂಟೆಗಟ್ಟಲೆ ಪೂಜಿಸುವುದಾಗಿ ಸುಳ್ಳನ್ನು ಕೊಚ್ಚುತ್ತಾರೆ.ಮಠ ಪೀಠಗಳಲ್ಲಿ ಎ.ಸಿ ರೂಮುಗಳಲ್ಲಿ ವಿಲಾಸಜೀವನವನ್ನು ಅನುಭವಿಸುತ್ತ ಹೊರಗೆ ದರ್ಶನಕ್ಕೆ ಕಾದಿರುವ ಭಕ್ತರುಗಳಿಗೆ ‘ಅಪ್ಪನವರು ಪೂಜೆಯಲ್ಲಿದ್ದಾರೆ,ಶಿವಯೋಗಸಾಧನೆಯಲ್ಲಿದ್ದಾರೆ ‘ಎಂದು ಸುಳ್ಳು ಹೇಳಿಸುತ್ತಾರೆ.ಕುಟಿಲ ಅಪ್ಪಗಳ ಮುಖನೋಡಿದರೆ ಗೊತ್ತಾಗುತ್ತದೆ ಅಪ್ಪನವರು ಎಂತಹ ಉಗ್ರತಪಸ್ವಿಗಳು ಎಂದು.ತಮ್ಮ ಮಠಮಂದಿರದ ಆಸರೆಯಲ್ಲಿ ಒಡಲು ಹೊರೆವ ಕ್ಷುದ್ರಜೀವಿಗಳನ್ನು ಬಳಿಯಲ್ಲಿಟ್ಟುಕೊಂಡು ಆ ಕೆಟ್ಟಜೀವಿಗಳ ಮೂಲಕ ತಾವು ಗಟ್ಟಿಯೋಗಸಾಧಕರು ಎಂಬಂತೆ ಕೊಚ್ಚಿಕೊಳ್ಳುತ್ತಾರೆ.ಪಾಪ,ಮುಗ್ಧಜನರೇನೋ ನಂಬಬಹುದು.ಆದರೆ ಜಗದೀಶ್ವರನಾದ ಶಿವನಿಗೆ ಈ ಕಪಟಿಗಳ ನಾಟಕ ತಿಳಿಯುವುದಿಲ್ಲವೆ ? ಸರಿಯಾಗಿ ಶಿವಮಂತ್ರವನ್ನು ಉಚ್ಚರಿಸಲು ಬಾರದ ತುಚ್ಛಜೀವಿಗಳು ಕೆಚ್ಚೆದೆಯ ಯೋಗಿಗಳಾಗಿ ಘಂಟೆಗಳಗಟ್ಟಲೆ ಧ್ಯಾನಾಸಕ್ತರಾಗಿರಲು ಸಾಧ್ಯವೆ ? ಶಿವನೇನು ಅಂತಹ ಉಗ್ರತಪೋನುಷ್ಠಾನ,ಶಿವಯೋಗಸಾಧನೆ ಬಯಸಲಾರನಾದರೂ ಈ ಅಲ್ಪ ಜೀವಿಗಳು ತಾವು ಮುಗ್ಧಜನರನ್ನು ವಂಚಿಸಿ,ಅವರ ಕಣ್ಣುಗಳಲ್ಲಿ ದೊಡ್ಡವರಾಗಲು ಸುಳ್ಳು ನಟಿಸುತ್ತಾರೆ.ಇಂತಹ ಕಪಟಿಗಳನ್ನು ಒದ್ದು ನರಕಕ್ಕೆ ತಳ್ಳಲು ಶಿವನು ಕಾಂಚನ,ಕಾಮಿನಿಯರ ಮಾಯೆಯನ್ನೊಡ್ಡಿ ಕಾಡುತ್ತಾನೆ,ಕೆಡಹುತ್ತಾನೆ.
ನಡೆ ನುಡಿಗಳು ಶುದ್ಧವಾಗಿದ್ದವರು ಮಾತ್ರ ಮೃಡಮಹಾದೇವನ ಅನುಗ್ರಹವನ್ನು ಪಡೆಯುತ್ತಾರೆ.ನಡೆನುಡಿಗಳು ಏಕವಾಗಿದ್ದರೆ ಮಾತ್ರ ಲೋಕನಾಥ ಶಿವನ ಅನುಗ್ರಹ ಪಡೆಯಬಹುದು.ನುಡಿ ಒಂದು ನಡೆ ಮತ್ತೊಂದಾದರೆ ಅದು ಶಿವನಿಗೆ ಪ್ರಿಯವೆನ್ನಿಸದು.ಸತ್ಯವನ್ನು ನುಡಿಯಬೇಕು,ತತ್ತ್ವದ ಪಥದಲ್ಲಿ ನಡೆಯಬೇಕು.ತಾನು ಜನರಿಗೆ ಏನನ್ನು ಉಪದೇಶಿಸುವನೋ ಅದನ್ನು ಮೊದಲು ತನ್ನ ಬದುಕಿನಲ್ಲಿ ಅಳವಡಿಸಿಕೊಂಡಿರಬೇಕು.ಸ್ವಯಂ ತಾನು ನೆಟ್ಟಗಿರದೆ ಜನರಿಗೆ ನೆಟ್ಟಗಿರಿ ಎಂದು ಉಪದೇಶ ಮಾಡಿದರೆ ಆ ಉಪದೇಶವು ಫಲಿಸುವುದಿಲ್ಲ.ರಾಮಕೃಷ್ಣ ಪರಮಹಂಸರ ಬದುಕಿನ ಒಂದು ಘಟನೆಯನ್ನಿಲ್ಲಿ ಸ್ಮರಿಸಬಹುದು.ಒಬ್ಬ ತಾಯಿ ತನ್ನಮಗನನ್ನು ಕರೆದುಕೊಂಡು ರಾಮಕೃಷ್ಣ ಪರಮಹಂಸರ ಬಳಿ ಬರುತ್ತಾಳೆ, ‘ ಪೂಜ್ಯರೆ ಈ ನನ್ನ ಮಗನಿಗೆ ಬೆಲ್ಲ ತಿನ್ನುವ ಚಟವಿದೆ.ಎಷ್ಟು ಹೇಳಿದರೂ ಬಿಡುತ್ತಿಲ್ಲ.ವೈದ್ಯರು,ಅಲ್ಲಿ- ಇಲ್ಲಿ ಎಲ್ಲಾ ಕಡೆ ತೋರಿಸಿದರೂ ಇವನು ಬೆಲ್ಲತಿನ್ನುವ ಚಟ ಬಿಡುತ್ತಿಲ್ಲ.ಆದ್ದರಿಂದ ತಾವು ನನ್ನ ಮಗನನ್ನು ಬೆಲ್ಲ ತಿನ್ನದಂತೆ ಆಶೀರ್ವದಿಸಬೇಕು’ ಎಂದು ಬೇಡುತ್ತಾಳೆ.ರಾಮಕೃಷ್ಣ ಪರಮಹಂಸರು ‘ ಹೌದೇನಮ್ಮ? ಸರಿ ಹಾಗಿದ್ದರೆ ನಾಲ್ಕುದಿನಗಳು ಬಿಟ್ಟುಬನ್ನಿ’ ಎನ್ನುತ್ತಾರೆ.ಆಗಲೆಂದ ಆ ತಾಯಿ ನಾಲ್ಕುದಿನಗಳ ಬಳಿಕ ಮತ್ತೆ ಪರಮಹಂಸರ ಬಳಿ ಬರುತ್ತಾಳೆ ಮಗನೊಂದಿಗೆ.ರಾಮಕೃಷ್ಣರು ಆ ಮಗುವನ್ನು ಬಳಿ ಕೂಡಿಸಿಕೊಂಡು ‘ ಮಗು,ಅತಿಯಾಗಿ ಬೆಲ್ಲ ತಿನ್ನಬಾರದಪ್ಪ.ಬೆಲ್ಲ ತಿನ್ನುವುದರಿಂದ ಹಲ್ಲುಗಳು ಹುಳುಕಾಗುತ್ತವೆ, ಹೊಟ್ಟೆಯಲ್ಲಿ ಜಂತುಗಳುಂಟಾಗುತ್ತವೆ,ಆರೋಗ್ಯಕೆಡುತ್ತದೆ.ಆದ್ದರಿಂದ ನೀನು ಬೆಲ್ಲ ತಿನ್ನುವುದನ್ನು ಬಿಡಬೇಕು’ ಎಂದು ಮಗುವಿಗೆ ಉಪದೇಶಿಸುತ್ತಾರೆ.ಮಗು ಆಗಲಿ ಎಂದು ಒಪ್ಪಿಕೊಂಡು ಬೆಲ್ಲತಿನ್ನುವುದನ್ನು ನಿಲ್ಲಿಸುತ್ತದೆ.ಆ ಮಗುವಿನ ತಾಯಿಗೆ ಆಶ್ಚರ್ಯ,ಇದೇ ಮಾತುಗಳನ್ನು ನಾಲ್ಕುದಿನಗಳ ಹಿಂದೆಯೇ ಹೇಳಬಹುದಿತ್ತಲ್ಲ! ರಾಮಕೃಷ್ಣ ಪರಮಹಂಸರು ನಾಲ್ಕುದಿನಗಳ ನಂತರ ಬರಲು ಹೇಳಿದ್ದರಿಂದ ಆಕೆಯು ಪರಮಹಂಸರು ತನ್ನ ಮಗನಿಗೆ ಯಾವುದೋ ಯಂತ್ರ ಮಂತ್ರ ಪ್ರಯೋಗಮಾಡಬಹುದು,ತಾಯತ ಕಟ್ಟಿ ಬೆಲ್ಲ ತಿನ್ನುವ ಚಟ ಬಿಡಿಸಬಹುದು ,ಅದಕ್ಕಾಗಿ ಸಮಯಾವಕಾಶ ಕೇಳಿದ್ದಾರೆ ಎಂದು ಭಾವಿಸಿದ್ದಳು.ತನ್ನ ಸಂದೇಹವನ್ನು ಪರಮಹಂಸರ ಮುಂದೆ ನಿವೇದಿಸಿದಳು ‘ ಪೂಜ್ಯರೆ ಇದೇ ಉಪದೇಶದ ಮಾತುಗಳನ್ನು ನಾಲ್ಕುದಿನಗಳ ಹಿಂದೆಯೇ ಹೇಳಬಹುದಿತ್ತಲ್ಲ ?. ರಾಮಕೃಷ್ಣ ಪರಮಹಂಸರು ಪ್ರಸನ್ನಚಿತ್ತರಾಗಿ ಆಕೆಗೆ ಉತ್ತರಿಸುತ್ತಾರೆ –‘ ಅಮ್ಮಾ ತಾಯಿ,ನಾಲ್ಕುದಿನಗಳ ಹಿಂದೆಯೇ ನಾನು ನಿನ್ನ ಮಗನಿಗೆ ಬೆಲ್ಲತಿನ್ನಬೇಡ ಎಂದು ಹೇಳಬಹುದಿತ್ತು.ಆದರೆ ನನಗೆ ಸ್ವಯಂ ಬೆಲ್ಲತಿನ್ನುವ ಚಟ ಇತ್ತು.ನೀನು ನಿನ್ನ ಮಗನನ್ನು ಕರೆದುಕೊಂಡು ಬಂದಾಗ ನಾನೂ ಬೆಲ್ಲ ತಿನ್ನುತ್ತಿದ್ದೆ.ನಾನೇ ಬೆಲ್ಲ ತಿನ್ನುತ್ತ ನಿನ್ನ ಮಗನಿಗೆ ಬೆಲ್ಲ ತಿನ್ನಬೇಡ ಎಂದು ಉಪದೇಶಿಸಿದ್ದರೆ ಅದು ನಿನ್ನ ಮಗನ ಮೇಲೆ ಪರಿಣಾಮ ಬೀರುತ್ತಿರಲಿಲ್ಲ.ನಾನು ಈಗ ಬೆಲ್ಲ ತಿನ್ನುವ ಅಭ್ಯಾಸವನ್ನು ಬಿಟ್ಟಿದ್ದೇನೆ.ಆದ್ದರಿಂದಲೇ ನಿನ್ನ ಮಗನಿಗೆ ಬೆಲ್ಲ ತಿನ್ನುವುದು ಬೇಡ ಎಂದು ಉಪದೇಶಿಸಿದ್ದೇನೆ’.ಮಗುವಿನ ತಾಯಿಗೆ ರಾಮಕೃಷ್ಣಪರಮಹಂಸರ ಉನ್ನತವ್ಯಕ್ತಿತ್ವ ಅರ್ಥವಾಗಿ ಭಕ್ತಿಯಿಂದ ರಾಮಕೃಷ್ಣ ಪರಮಹಂಸರನ್ನು ನಮಸ್ಕರಿಸುತ್ತಾಳೆ.ರಾಮಕೃಷ್ಣ ಪರಮಹಂಸರು ದೊಡ್ಡವರಾದದ್ದು,ಮಹಾತ್ಮರಾದದ್ದು,ಪರಮಹಂಸರಾದದ್ದು ಹೀಗೆ.ಅವರು ತಾವು ಹೇಳಿದಂತೆ ನಡೆಯುತ್ತಿದ್ದರು.ಅವರ ಬದುಕು ಮತ್ತು ಉಪದೇಶ ಬೇರೆ ಬೇರೆ ಆಗಿರಲಿಲ್ಲ,ಏನನ್ನು ನುಡಿಯುತ್ತಿದ್ದರೋ ಅದರಂತೆ ನಡೆದುಕೊಳ್ಳುತ್ತಿದ್ದರು.ನಡೆ ನುಡಿಗಳು ಒಂದಾದ ನಿಷ್ಕಂಳಕ ಪರಮಶುದ್ಧಿಯ ನಿರಂಜನ ಸಿದ್ಧವ್ಯಕ್ತಿತ್ವವನ್ನು ಹೊಂದಿದ್ದರೆಂದೇ ಲೋಕಮಾತೆ ಮಹಾಕಾಳಿಯು ಒಲಿದಿದ್ದಳು ರಾಮಕೃಷ್ಣ ಪರಮಹಂಸರಿಗೆ.ಪರಮಹಂಸರು ಕರೆದಾಗ ಬಂದು ಮಾತನಾಡುತ್ತಿದ್ದಳು ಮಹಾಕಾಳಿ.ಬೇಕೆಂದಾಗ ಭಾವಸಮಾಧಿಯನ್ನೈದು ಮಹಾಕಾಳಿಯಲ್ಲಿ ಒಂದಾಗುತ್ತಿದ್ದರು ರಾಮಕೃಷ್ಣ ಪರಮಹಂಸರು.ಶಿವನ ಅನುಗ್ರಹವನ್ನು ಸಂಪಾದಿಸಬೇಕು ಎಂದರೆ ರಾಮಕೃಷ್ಣ ಪರಮಹಂಸರಂತೆ ನಿತ್ಯಶುದ್ಧರಾಗಬೇಕು,ನಡೆನುಡಿಗಳು ಒಂದಾಗಿರಬೆಕು,ಕಾಪಟ್ಯರಹಿತ ನಿಷ್ಕಪಟ,ನಿರಂಜನ ವ್ಯಕ್ತಿತ್ವವನ್ನು ಹೊಂದಿರಬೇಕು.
೨೬.೦೧.೨೦೨೪