ಬಿಡಿ’ ಕವನಗಳು

ಕಲ್ಯಾಣ ಕಾವ್ಯ : ಕೆಲವು ‘ ಬಿಡಿ’ ಕವನಗಳು : ಮುಕ್ಕಣ್ಣ ಕರಿಗಾರ

೦೧ ಮುತ್ತು

ಮುತ್ತು
ಇತ್ತು
ಚಿಪ್ಪಿನೊಳಗೆ
ಗೊತ್ತು
ಇರಲಿಲ್ಲ ಯಾರಿಗು
ಒಡೆದು ಹೊರಬರುವತನಕ
ಸೃಷ್ಟಿತತ್ತ್ವದ
ನಿನ್ನ ವ್ಯಕ್ತಿತ್ವ ಪ್ರಕಟಗೊಳ್ಳಲು
ಕಾಯಬೇಕು ನೀನು ‘ತಿರುವು’ ಬರುವತನಕ.

**************************

೦೨ . ಹನುಮಶಕ್ತಿ

ಇತ್ತು
ಆ ಮಹಾಶಕ್ತಿ ಹನುಮನಲ್ಲಿ
ಗೊತ್ತು
ಇರಲಿಲ್ಲ ಅವನಿಗೆ.
ಮತ್ತೆ
ಜಾಂಬುವಂತ ಬರುವವರೆಗೆ ಹನುಮ
ಕಾಯಬೇಕಿತ್ತು
ಋಷಿಗಳ ಶಾಪ ಇತ್ತಂತೆ ಹನುಮನಿಗೆ
ಶಾಪವೊ ಪಾಪವೊ
ಸಂದರ್ಭ ಒದಗಿ ಬಂದಲ್ಲದೆ ಪ್ರಕಟಗೊಳ್ಳದು
ಧೀಃಶಕ್ತಿ

**************************

೦೩. ವಾಲ್ಮೀಕಿ

ಕಾಡುಮೃಗದಂತಿದ್ದ ಪೂರ್ವವಾಲ್ಮೀಕಿಯ
ಎದೆಯಲ್ಲಿ ಸುಪ್ತವಾಗಿದ್ದ
ಋಷಿ
ಬೇಡನ ಬಾಣಕ್ಕೆ ಸಿಕ್ಕು ಗಂಡುಕ್ರೌಂಚ
ಅಸು
ಕಳಕೊಳ್ಳೆ ಈ ಬೇಡನ ಎದೆಯಲ್ಲಿ
ಚಿಮ್ಮಿತ್ತು ಅಮೃತದ ಸೆಲೆ
ಮೂಡಿ ಬಂದಿತ್ತು ಮನುಷ್ಯತ್ವದ
ಮಹಾಕಾವ್ಯ ರಾಮಾಯಣ.
ಬೀಜದಲ್ಲಿ ಸತ್ತ್ವ ಇಲ್ಲದಿರೆ ಹೊರಬರದು
ಸಸಿ.
ವಾಲ್ಮೀಕಿಯ ಅಂತಃಸತ್ತ್ವವನು
ಒಪ್ಪದ ಜನ ಕಟ್ಟಿದ್ದಾರೆ ಕಟ್ಟುಕಥೆ
ಬೆಳೆದಿತ್ತೆ ವಾಲ್ಮೀಕಿಯ ಸುತ್ತ
ಹುತ್ತ ?
ಕಟ್ಟಿದ್ದಾರೆ ಋಷಿಕವಿ ವಾಲ್ಮೀಕಿಯ
ಸುತ್ತ
ಹುತ್ತದ ಕಥೆ !
ಕಣ್ಣು’ತೆರೆದು ‘ನೋಡಿದರೆ ಕಾಣಿಸುವುದು
‌ ಸತ್ಯ !
ಹುತ್ತದೊಳಗೆ ವಾಲ್ಮೀಕಿಯನ್ನು ಬಂಧಿಸಿಡುವ
ಕೃತ್ಯ
ಬೆಳಕನ್ನು ಬಂಧಿಸಿಡುವ ಪ್ರಯತ್ನ.

******************************

೦೪. ಏಕಲವ್ಯ

ದ್ರೋಣಾಚಾರ್ಯರ ಮಣ್ಣಿನ
ಮೂರ್ತಿ
ಎಲ್ಲವೂ ಆಗಿ ಏಕಲವ್ಯ ಪಡೆಯುತ್ತಿದ್ದ
ಸ್ಫೂರ್ತಿ
ಇರಲಿಲ್ಲ ಮಣ್ಣಮೂರ್ತಿಯಲ್ಲಿ
ಜೀವ- ಸತ್ತ್ವ
ಇತ್ತು ಏಕಲವ್ಯನ ಒಳಗೆ ತನ್ನ
ಶಕ್ತಿ– ಸತ್ತ್ವ
ಆದರೂ ಹೆಸರಿಟ್ಟು ಕರೆದ ಆತ
ಗುರುಕಾರುಣ್ಯಶಕ್ತಿ !
ತನ್ನಾತ್ಮಶಕ್ತಿಗೆ ಏಕಲವ್ಯಕೊಟ್ಟ ಹೆಸರು
ಗುರುಶಕ್ತಿ
ಪರಿಣಾಮ ಕಳೆದುಕೊಂಡ ತನ್ನ
ಹೆಬ್ಬೆರಳು !
ಹೀಗೆ ಕೊಯ್ಯುತ್ತಲೇ ಇದ್ದಾರೆ
ಧರ್ಮದ ಪೋಷಾಕು ಧರಿಸಿದ ಸೋಗಿನ
ಶಾಸ್ತ್ರಿ ಪುರೋಹಿತರುಗಳು ಶೂದ್ರರ
ಕೊರಳು !

****************************

೦೫ .ಬಸವಣ್ಣ

ಬಸವಣ್ಣ ತೊಳೆದುಕೊಳ್ಳುತ್ತ ತೊಳೆಯುತ್ತ
ಕತ್ತಲೆಯ ಕಳೆದುಕೊಳ್ಳುತ್ತ ಕಳೆಯುತ್ತ
ಆದ ಸದಾಕಾಲವೂ ವಿಶ್ವವನು ಬೆಳಗುವ
ಜ್ಯೋತಿ
ಆದರೀಗ ಬಸವಣ್ಣನವರಿಗೆ
ಸಿಕ್ಕಿದೆ ಒಂದು ಸರ್ಟಿಫಿಕೇಟಿನ
ಜಾತಿ !
***************************

ಬಸವಣ್ಣನವರು ಇತ್ತರು
ಎಲ್ಲರ ಕರಸ್ಥಳದಲ್ಲಿ ಚುಳುಕಾಗುವ
ಲಿಂಗ
ಆದರೆ ಈಗ ಬಸವನನ್ನು ಗುತ್ತಿಗೆಪಡೆದವರು
ಕೇಳುತ್ತಿದ್ದಾರೆ ನೀವು ಲಿಂಗಾಯತರೆ?
ಹೆಂಗ ?

****************************

 ೦೬ ಬಸವಣ್ಣ

‘ಆಸ್ತಿಮಾಡಿಕೊಳ್ಳ’ ಹೊರಟವರಿಗೆ ಬಸವಣ್ಣ
ಗುರು
ಅಸ್ತಿತ್ವವೇ ಇಲ್ಲದ ಜಾರುಉಸುಕಿನಲ್ಲಿ
ನಿಂದವರಿಗೆ ಬಸವಣ್ಣ
ಶಿಷ್ಯ
ಆದರೆ ನಮನಿಮಗೆಲ್ಲ ಬಸವಣ್ಣ
ಗುರುವೂ ಅಲ್ಲದ ಶಿಷ್ಯನೂ ಅಲ್ಲದ
ಏನೇನೂ ಅಲ್ಲದ
ಯಾವುದೂ ಇಲ್ಲದ
ಬೆಳಕು
ಬರಿಯ ಬೆಳಕು,ಭುವಿಯ ಬೆಳಕು

******************************

೨೬.೦೧.೨೦೨೪

About The Author