ಸರ್ವಗುಣಸಂಪನ್ನನಾದ ಶಿವನು ತನ್ನ ಭಕ್ತರಲ್ಲಿ ದೋಷವನ್ನೆಣಿಸಲಾರ

ಬಸವೋಪನಿಷತ್ತು ೨೪ : ಸರ್ವಗುಣಸಂಪನ್ನನಾದ ಶಿವನು ತನ್ನ ಭಕ್ತರಲ್ಲಿ ದೋಷವನ್ನೆಣಿಸಲಾರ

ಮುಕ್ಕಣ್ಣ ಕರಿಗಾರ

ಮೇರುಗುಣವನರಸುವುದೆ ಕಾಗೆಯಲ್ಲಿ ?
ಪರುಷಗುಣವನರಸುವುದೆ ಕಬ್ಬುನದಲ್ಲಿ ?
ಸಾಧುಗುಣವನರಸುವುದೆ ಅವಗುಣಿಯಲ್ಲಿ ?
ಚಂದನಗುಣವನರಸುವುದೆ ತರುಗಳಲ್ಲಿ ?
ಸರ್ವಗುಣಸಂಪನ್ನ ಲಿಂಗವೆ,ನೀನೆನ್ನಲ್ಲಿ ಅವಗುಣವನರಸುವುದೆ,
ಕೂಡಲಸಂಗಮದೇವಾ ?

ಶಿವನು ತನ್ನಲ್ಲಿ ಸಂಪೂರ್ಣವಾಗಿ ಶರಣಾಗತರಾದ ಭಕ್ತರ ಗುಣ ದೋಷಗಳನ್ನು ಲೆಕ್ಕಿಸದೆ ಅವರನ್ನು ಒಲಿದು ಉದ್ಧರಿಸುತ್ತಾನೆ ಎನ್ನುವ ಬಸವಣ್ಣನವರು ಭಕ್ತರು ಗತಿಮತಿಯು ನೀನೇ ಎಂದು ಶಿವನಲ್ಲಿ ಅನನ್ಯಭಾವದಿಂದ ಶರಣಾಗಬೇಕು ಎನ್ನುತ್ತಾರೆ.ಮೇರು ಪರ್ವತವು ಅತ್ಯಂತ ಎತ್ತರವಾದ ಪರ್ವತಶಿಖರವು,ಕಾಗೆಯಲ್ಲಿ ಮೇರುಪರ್ವತದ ಎತ್ತರದ ಗುಣವನ್ನರಸಬಹುದೆ ? ಅರಸಲಾಗದು.ಸ್ಪರ್ಶಮಣಿಯ ಗುಣವನ್ನು ಕಬ್ಬಿಣದಲ್ಲಿ ಹುಡುಕಬಹುದೆ ? ಆಗದು.ಸ್ಪರ್ಶಮಣಿಯು ತಾನು ಸ್ಪರ್ಶಿಸಿದ ಕಬ್ಬಿಣವನ್ನು ಬಂಗಾರವನ್ನಾಗಿ ಪರಿವರ್ತಿಸುತ್ತದೆ.ಆ ಸಾಮರ್ಥ್ಯವು ಕಬ್ಬಿಣಕ್ಕೆ ಎಲ್ಲಿಂದ ಬರಬೇಕು ? ಕೆಟ್ಟಮನುಷ್ಯನಲ್ಲಿ ಸದ್ಗುಣಗಳನ್ನು ಹುಡುಕಬಹುದೆ ? ಸಾಧ್ಯವಿಲ್ಲ.ಸಾಧುವಿನ ಗುಣನಡತೆಗಳೇ ಬೇರೆ,ದುರ್ಮಾರ್ಗಿಯ ಸ್ವಭಾವವೇ ಬೇರೆ.ಶ್ರೀಗಂಧದ ಸುವಾಸನೆಯುಕ್ತ ಗುಣವನ್ನು ಇತರ ಗಿಡಗಳಲ್ಲಿ ಹುಡುಕಬಹುದೆ ? ಇಲ್ಲ.ಶ್ರೀಗಂಧವು ಮರವೇ ಆದರೂ ಅದು ಸುಗಂಧವನ್ನು ಬೀರುತ್ತದೆ,ಇತರ ಮರಗಳಲ್ಲಿ ಶ್ರೀಗಂಧದ ಸುವಾಸನೆಯು ಇರದು ಅವುಗಳು ಕೂಡ ಮರಗಳೇ ಆಗಿದ್ದರೂ.ಸಕಲಗುಣಪರಿಪೂರ್ಣನಾದ ಶಿವಸ್ವರೂಪಿ ಲಿಂಗವೆ ಅವಗುಣಿಯಾದ,ದುರ್ಗುಣಿಯಾದ ನಿನ್ನ ಭಕ್ತನಲ್ಲಿ ಶೀಲ ಸಂಸ್ಕೃತಿ,ಸೌಜನ್ಯ ಸದುವಿನಯಗಳನ್ನರಸಬಹುದೆ ? ಬಾರದು.ಯಾಕೆಂದರೆ ರಕ್ತಮಾಂಸಗಳ ಮುದ್ದೆಯಾದ ಮನುಷ್ಯರು ಹುಟ್ಟುಸಹಜ ರಾಗ- ದ್ವೇಷ,ಮೋಹ -ಮಮಕಾರಗಳ ಸುಳಿಯಲ್ಲಿ ಸಿಲುಕಿದ್ದಾರೆ.

ಬಸವಣ್ಣನವರು ಈ ವಚನದಲ್ಲಿ ಒಂದು ಉತ್ತಮವಸ್ತುವಿನೊಂದಿಗೆ ಒಂದು ಅಧಮವಸ್ತುವನ್ನು ತುಲನೆ ಮಾಡುತ್ತ ಉತ್ತಮವಸ್ತುವಿನ ಗುಣವು ಹೇಗೆ ಅಧಮವಸ್ತುವಿನಲ್ಲಿ ಇರದೋ ಹಾಗೆಯೇ ಸಕಲಕಳಾಪರಿಪೂರ್ಣನಾದ ಶಿವನಗುಣವು ಭಕ್ತನಲ್ಲಿ ಇರಲು ಸಾಧ್ಯವಿಲ್ಲ.ಹಾಗೆಂದು ಭಕ್ತನು ನಿರಾಶನಾಗಿ ಕುಳಿತುಕೊಳ್ಳದೆ ಸರ್ವಗುಣಪರಿಪೂರ್ಣನಾದ ಶಿವನಲ್ಲಿ ಏಕೋಭಾವದಿಂದ ಶರಣುಹೋಗಬೇಕು.ತನ್ನಲ್ಲಿ ಶರಣುಬಂದವರ ಗುಣದೋಷಗಳನ್ನು ಲೆಕ್ಕಿಸದೆ ಪೊರೆದು ಉದ್ಧರಿಸುತ್ತಾನೆ ಮುಕ್ಕಣ್ಣಶಿವನು.ಶಿವನು‌ ‘ ಮುಕ್ಕಣ್ಣ’ ನಾದುದರಿಂದಲೇ ಅವನು ತನ್ನ ಭಕ್ತರಲ್ಲಿ ದೋಷವೆಣಿಸದೆ ಅವರಲ್ಲಿ ಪರಿಪೂರ್ಣತೆಯನ್ನೇ ಕಾಣುತ್ತಾನೆ.ಅಗ್ನಿತತ್ತ್ವದಸೂಚಕವಾಗಿರುವ ಶಿವನ ಮೂರನೇ ಕಣ್ಣು ಸಮತೆ,ಪರಿಪೂರ್ಣತೆಯ ಕುರುಹೂ ಹೌದು.ಅಗ್ನಿಯು ಎಲ್ಲವನ್ನು ಸುಟ್ಟುಬೂದಿ ಮಾಡುವಂತೆ ಶಿವನು ತನ್ನ ಭಕ್ತರನ್ನು ಮಹೋದಾರಭಾವದಿಂದ ನೋಡುವನು.ಭಕ್ತರ ಓರೆಕೋರೆಗಳು,ದೋಷ ದೌರ್ಬಲ್ಯಗಳನ್ನು ಲೆಕ್ಕಿಸದೆ ತನ್ನ ಈಶಸಹಜಭಾವದಿಂದ ನೋಡಿ ಅವರನ್ನು ಉದ್ಧರಿಸುವನು.

ಈ ವಚನದಲ್ಲಿ ಬಸವಣ್ಣನವರು ಶಿವನು ಸರ್ವಗುಣಸಂಪನ್ನನು ಮತ್ತು ಭಕ್ತನು ಅವಗುಣಿಯು ಎನ್ನುವ ಎರಡು ಪರಸ್ಪರವಿರುದ್ಧ ಗುಣ- ಸ್ವಭಾವಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ.ಮನುಷ್ಯರು ಹುಟ್ಟುಸಾವುಗಳ ಭವಬಂಧನಕ್ಕೆ ಒಳಗಾಗಿರುವುದರಿಂದ ಅವರಲ್ಲಿ ಮರ್ತ್ಯದ ಮಣ್ಣಿನ ಸಹಜಗುಣವಾದ ದೋಷದೌರ್ಬಲ್ಯಗಳಿರುತ್ತವೆ.ಶಿವನು ಹುಟ್ಟು ಸಾವುಗಳಿಗತೀತನಾದ ಪರವಸ್ತು,ಪರಬ್ರಹ್ಮನಾದುದರಿಂದ ಅವನು ಸದಾಕಾಲವೂ ಆನಂದದಿಂದಿರುವ ನಿತ್ಯಾನಂದನು,ಸದಾನಂದನು.ಸ್ವಯಂಪರಿಪೂರ್ಣನಾಗಿರುವ ಶಿವನು ತನ್ನಭಕ್ತರಲ್ಲಿಯೂ ಪೂರ್ಣತೆಯನ್ನೇ ಕಾಣುತ್ತಾನೆ.’ ಶಿವ’ ಎನ್ನುವ ಶಬ್ದಕ್ಕೆ ಶುಭ,ಮಂಗಳ,ಕಲ್ಯಾಣ ಎನ್ನುವ ಅರ್ಥಗಳಿದ್ದು ಶಿವನಾಮಸ್ಮರಣೆಯಿಂದ ಭವದ ಅಶುಭವು ಶುಭವಾಗಿ ಪರಿವರ್ತನೆಯಾಗುತ್ತದೆ,ಅಮಂಗಳವು ಮಂಗಳವಾಗಿ ಪರಿವರ್ತನೆಯಾಗುತ್ತದೆ,ದುರ್ಗತಿ- ದುಸ್ಥಿತಿಗಳು ಕಲ್ಯಾಣವಾಗಿ ಪರಿವರ್ತನೆಯಾಗುತ್ತದೆ.ಇಂತಹ ಪರಮಪವಿತ್ರವಾದ ಶಿವನಾಮದ ಆಸರೆಪಡೆಯುವ ಮಾತ್ರದಿಂದಲೇ ಭಕ್ತನ ಅವಗುಣಗಳು ಅಳಿದು ಅವನಲ್ಲಿ ಶಿವಗುಣಗಳು ಮೊಳೆಯುತ್ತವೆ.ಆದ್ದರಿಂದ ಶಿವಭಕ್ತರು ತಾವು ಪಾಪಿಗಳು,ಹೀನರು ಎಂದು ಭಾವಿಸದೆ ಅಘಹರನೂ ನಿತ್ಯಪರಿಶುದ್ಧನೂ ನಿರಂಜನನೂ ಆಗಿರುವ ಪರಶಿವನಲ್ಲಿ ಪರಮಶರಣಾಗತಿಯನ್ನು ಹೊಂದಿ ಶಿವಾನುಗ್ರಹಕ್ಕೆ ಪಾತ್ರರಾಗಬಹುದು ಎಂದಿದ್ದಾರೆ ಬಸವಣ್ಣನವರು.

೨೭.೦೧.೨೦೨೪

About The Author