ಭವರೋಗವೈದ್ಯಶಿವನ ನಾಮಸ್ಮರಣೆಯಿಂದ ಭವಬಂಧನದಿಂದ ಮುಕ್ತರಾಗಬಹುದು

ಬಸವೋಪನಿಷತ್ತು ೨೫ : ಭವರೋಗವೈದ್ಯಶಿವನ ನಾಮಸ್ಮರಣೆಯಿಂದ ಭವಬಂಧನದಿಂದ ಮುಕ್ತರಾಗಬಹುದು.

ಮುಕ್ಕಣ್ಣ ಕರಿಗಾರ

ಭವಭವದಲ್ಲೆನ್ನ ಮನವು ನೀವಲ್ಲದೆ —
ಭವದಲ್ಲೆನ್ನ ಮನವು ಸಿಲುಕದೆ ?
ಭವರಾಟದೊಳು ತುಂಬದೆ ? ಕೆಡಹದೆ ?
ಭವರೋಗವೈದ್ಯನೀನು,ಭವವಿರಹಿತನೀನು —
ಅವಧಾರು,ಕರುಣಿಸುವುದು, ಕೂಡಲಸಂಗಮದೇವಾ.

ಶಿವಭಕ್ತರು ಪ್ರತಿಬಾರಿಯೂ ಮರ್ತ್ಯದಲ್ಲಿ ಹುಟ್ಟಿದಾಗ ಮರ್ತ್ಯದ ಸಹಜಗುಣವಾದ ಅಲ್ಪತ್ವವನ್ನು ಅಳವಡಿಸಿಕೊಂಡು ತಮ್ಮ ಭೂಮತ್ವ ಅಥವಾ ದಿವ್ಯತ್ವಮರೆಯುತ್ತಾರೆ.ಹಿಂದಣ ಜನ್ಮದ ಶಿವಸಂಸ್ಕಾರಬಲವಿದ್ದಾಗಲೂ ಮನುಷ್ಯರನ್ನು ಮಾಯೆಕಾಡುತ್ತದೆ,ಮರೆವು ಆವರಿಸುತ್ತದೆ.ನಾನು ಶಿವ ಎನ್ನುವುದನ್ನು ಮರೆತು ನಾನು ಭವಿ ಎಂಬ ಭ್ರಮೆಗೆ ಒಳಗಾಗುತ್ತಾನೆ ಜೀವನು.ಬಂಧನಕಾರಿಯಾದ ಈ ಭವ ಮತ್ತು ಅಧಃಪತನಕಾರಿಯಾದ ಭವಗುಣದಿಂದ ಮುಕ್ತರಾಗಲು ಭಕ್ತರು ಭವರೋಗ್ಯವೈದ್ಯನಾದ ಶಿವನನ್ನು ಆಶ್ರಯಿಸಬೇಕು.ಶಿವನಾಮವನ್ನು ಆಶ್ರಯಿಸಿದರೆ ಭವದ ಆಶೆ ಮೋಹಗಳಿಗೆ ಒಳಗಾಗಿಯೂ ಮನಸ್ಸು ಶಿವಪಥದತ್ತ ತುಡಿಯುವುದು.ಹುಟ್ಟುಸಾವುಗಳೆಂಬ ಭವಚಕ್ರದಲ್ಲಿ ಬಿದ್ದು ಒದ್ದಾಡುತ್ತಿರುವ ಜೀವರುಗಳಿಗೆ ಶಿವನಾಮವೆಂಬ ದಿವ್ಯ ಸಂಜೀವಿನಿಯು ಅವರ ಭವಬಂಧನವನ್ನು ಕಳೆದು ಉದ್ಧರಿಸುತ್ತದೆ,ಭವಮುಕ್ತರನ್ನಾಗಿಸುತ್ತದೆ.ಭವರೋಗವೈದ್ಯನೂ ಹುಟ್ಟು ಸಾವುಗಳಿಲ್ಲದ ನಿತ್ಯ ನಿರಂಜನನೂ ಆಗಿರುವ ಪರಶಿವನಲ್ಲಿ ‘ ಓ ನನ್ನ ತಂದೆಯೆ ! ಕರುಣಾಸಾಗರನೆ,ಕೃಪೆತೋರು,ಹೀನನಾದ ನನ್ನತ್ತ ನಿನ್ನ ದಯಾಘನದೃಷ್ಟಿಯನ್ನು ಬೀರು,ನನ್ನನ್ನು ಉದ್ಧರಿಸು’ ಎಂದು ನಿತ್ಯವೂ ಪ್ರಾರ್ಥಿಸುತ್ತಿದ್ದರೆ ಭಕ್ತರಲ್ಲಿ ಪ್ರಸನನ್ನನಾಗಿ ಶಿವನು ಅವರನ್ನು ಉದ್ಧರಿಸುವನು.

ಬಸವಣ್ಣನವರು ಈ ವಚನದಲ್ಲಿ ಶಿವನನ್ನು ‘ ಭವರೋಗವೈದ್ಯ’ ಮತ್ತು ‘ ಭವವಿರಹಿತ’ ಎನ್ನುವ ಎರಡು ವಿಶೇಷಣಗಳಿಂದ ಗುರುತಿಸಿದ್ದಾರೆ.ಮನುಷ್ಯರು ತಾವು ಅನಾರೋಗ್ಯಪೀಡಿತರಾದಾಗ,ರೋಗಕ್ಕೆ ತುತ್ತಾದಾಗ ವೈದ್ಯರಬಳಿ ತೆರಳಿ ತೋರಿಸಿಕೊಳ್ಳುತ್ತಾರೆ.ವೈದ್ಯರ ಚಿಕಿತ್ಸೆಯಿಂದ ರೋಗವು ಗುಣಮುಖವಾಗುತ್ತದೆ.ಭವವೂ ಒಂದು ರೋಗವೆ ! ಆ ರೋಗವನ್ನು ಭವಿವೈದ್ಯರುಗಳು ಕಳೆಯಲಾರರು.ಶ್ರೀಗುರುವೆಂಬ ಮಹಾವೈದ್ಯನು ಶಿವಮಂತ್ರೋಪೋಪದೇಶ ಎನ್ನುವ ಮಹಾಮದ್ದನ್ನು ನೀಡಿ ತನ್ನ ಶಿಷ್ಯನನ್ನು ಭವರೋಗದಿಂದ ಮುಕ್ತನನ್ನಾಗಿಸುತ್ತಾನೆ ಅಂದರೆ ಶಿಷ್ಯನನ್ನು ಹುಟ್ಟುಸಾವುಗಳ ಪರಿಭ್ರಮಣಚಕ್ರದಿಂದ ಪಾರುಮಾಡುತ್ತಾನೆ.’ಪುನರಪಿ ಜನನಂ,ಪುನರಪಿ ಮರಣಂ’ ಎನ್ನುವ ಹುಟ್ಟುವುದು- ಸಾಯುವುದು ಎನ್ನುವ ಅನಂತ ಕಾಲದಿಂದ ಕಾಡುವ ಈ ರೋಗದಿಂದ ಮುಕ್ತರಾಗಬೇಕಾದರೆ ಶ್ರೀಗುರುವೆಂಬ ಮಂತ್ರವೈದ್ಯನಿರಬೇಕು.ಶಿವಸಂಸ್ಕಾರವೆಂಬ ಶಸ್ತ್ರಚಿಕಿತ್ಸೆಯ ಮೂಲಕ ಗುರುವು ಶಿಷ್ಯನ’ಭವರೋಗ’ ವನ್ನು ಕಳೆದು ಶಿವಮಂತ್ರೋಪದೇಶ ಎನ್ನುವ ಮುಕ್ತಿಯ ಕಾಷಾಯವನ್ನಿತ್ತು ಅವನ ರೋಗನಿವಾರಿಸುವನು.ಶಿವನು ಅನಾದಿ ಸಂಸಿದ್ಧನಿರುವ ಸ್ವಯಂಪರಿಪೂರ್ಣ ಪರಬ್ರಹ್ಮನಿರುವುದರಿಂದ ಅವನಿಗೆ ಹುಟ್ಟುಸಾವುಗಳ ಭವಬಂಧನವಿರುವುದಿಲ್ಲವಾದ್ದರಿಂದ ಶಿವನು ‘ ಭವವಿರಹಿತನು’.ಭವಕ್ಕೆ ಬಾರದವನು,ಭವಕ್ಕೆ ಅಂಟದವನು ಎನ್ನುವ ಅರ್ಥಗಳಿವೆ ಭವವಿರಹಿತನಿಗೆ.ಭವದ ಗುಣಸ್ವಭಾವಗಳಿಗೆ ಶಿವನು ಅತೀತನಾಗಿರುವುದರಿಂದ ಅವನು ತೂರ್ಯಾತೀತ ಪರವಸ್ತುವು.

ಭವವೇನೋ ಕೆಟ್ಟದ್ದೇ.ಆದರೆ ಭವವು ಕೆಟ್ಟದ್ದು,ಹುಟ್ಟುಸಾವುಗಳ ಚಕ್ರದಲ್ಲಿ ಕೆಡಹಿ ಕಾಡುತ್ತದೆ ಎಂದು ತಲೆಯಮೇಲೆ ಕೈಹೊತ್ತು ಕುಳಿತರೆ ಆಗುತ್ತದೆಯೆ? ಭವದಲ್ಲಿ ಬುದ್ಧಿವಂತನಾದ ಮನುಷ್ಯಜನ್ಮವನ್ನು ಪಡೆದು ಹುಟ್ಟಿದಬಳಿಕ ಭವಮುಕ್ತರಾಗಲು ಪ್ರಯತ್ನಿಸಬೇಕು.ಗುರುವೆಂಬ ವೈದ್ಯನನ್ನು ಆಶ್ರಯಿಸಿ ಶಿವನಾಮವೆಂಬ ಸಂಜೀವನಿಯನ್ನು ಸೇವಿಸುವ ಮೂಲಕ ಭವರೋಗಮುಕ್ತರಾಗಬಹುದು.ಭಕ್ತರು ಆರ್ತರಾಗಿ ಪ್ರಾರ್ಥಿಸೆ ಒಡಲಿಲ್ಲದ ಶಿವನ ಮಹಾಒಡಲು ಕರಗುತ್ತದೆ,ಕಂಪಿಸುತ್ತದೆ.ಭಕ್ತರು ಶಿವನನ್ನು ಮೊರೆಯಬೇಕು,ಪ್ರಾರ್ಥಿಸಬೇಕು.ಪ್ರಾರ್ಥನೆಯೂ ಯೋಗವೆ! ನಿತ್ಯ ಶಿವನನ್ನು ಮೊರೆದು ಪ್ರಾರ್ಥಿಸುವ ಮೂಲಕ ಭಕ್ತರ ಭಾವನೆಗಳು ಶಿವಯೋಗವಾಗಿ,ಮೊರೆವ ಮಾತುಗಳೇ ಮಂತ್ರಗಳಾಗಿ ಶಿವನ ಅನುಗ್ರಹಪ್ರವಾಹವು ಹರಿದುಬರುತ್ತದೆ ಭಕ್ತನೆಡೆಗೆ.

೨೭.೦೧.೨೦೨೪

About The Author