ಕಲ್ಯಾಣ ಕಾವ್ಯ : ಸೀತೆಯ ತೀರ್ಪು ! : ಮುಕ್ಕಣ್ಣ ಕರಿಗಾರ

ಕಲ್ಯಾಣ ಕಾವ್ಯ : ಸೀತೆಯ ತೀರ್ಪು ! : ಮುಕ್ಕಣ್ಣ ಕರಿಗಾರ

ಅಮರಾವತಿಯಲ್ಲಿ ನಡೆದಿತ್ತು
ಇಂದ್ರನ ಸಭೆ,ದೇವಪ್ರಮುಖನ
ಬಲು ಮಹತ್ವದ ಮೀಟಿಂಗ್
ಅಟೆಂಡೆನ್ಸ್ ಗೆ ಸಹಿಮಾಡುವ ಅಗತ್ಯ ಇರಲಿಲ್ಲ.
ಅವರು ದೇವತೆಗಳಲ್ಲವೆ?
ಹಾಜರಾಗಿದ್ದರು ಎಲ್ಲ ದೇವತೆಗಳು.
ಆಸೀನರಾಗಿದ್ದರು ಅವರವರ ಸೀಟು ಸಿಂಹಾಸನಗಳಲ್ಲಿ.
ಇಂದ್ರನೇ ಹೇಳಿದ ಎಲ್ಲರನ್ನು ಉದ್ದೇಶಿಸಿ ;
ಇಂದು ನಾವು ನಿರ್ಣಯಿಸಬೇಕಾಗಿದೆ
ಒಂದು ಮಹತ್ವದ ಸಂಗತಿಯನ್ನು
ಧಾರ್ಮಿಕ ವಿಚಾರವನ್ನು
ಆದರೆ ನಿರ್ಣಯ ಹೇಳುವವನು ನಾನಲ್ಲ
ಈಕೆ ಸೀತೆ!
ಎಲ್ಲರ ಹುಬ್ಬುಗಳು ಕುಣಿದವು
ಇಂದ್ರನ ಸಭೆಯಲ್ಲಿ
ಲೋಕದಲ್ಲಿ ಹೆಣ್ಣಾಗಿದ್ದ ಸೀತೆಯ ನ್ಯಾಯವೆ?
ಎಲ್ಲವನ್ನೂ ಬಲ್ಲವನಾಗಿದ್ದ ಸಹಸ್ರಾಕ್ಷ
ಹೇಳಿದ ‘ ಹೌದು,ಸೀತೆಯೇ ನಿರ್ಣಯಿಸಬೇಕು
ಈ ಧರ್ಮಸಂದಿಗ್ಧವನ್ನು.
‘ ಹೇಳು ತಾಯಿ,ನಿನ್ನೆದುರು ನಿಂತಿರುವ
ಈ ಇಬ್ಬರಲ್ಲಿ ಯಾರು ಧರ್ಮಾತ್ಮರು?’
ರಾಮ ಮತ್ತು ರಾವಣರಿಬ್ಬರನ್ನು
ತೋರಿಸುತ್ತ ಕೇಳಿದ ಇಂದ್ರ.
ಮುಖ ಮುಲಾಜು ನೋಡದೆ
ಹೇಳಿಯೇ ಬಿಟ್ಟಳು ಜಾನಕಿ
ಈ ಇಬ್ಬರಲ್ಲಿ ರಾವಣನೇ ಧರ್ಮಾತ್ಮ!
ಸಚ್ಚರಿತ ! ಪುಣ್ಯಪುರುಷ !
ರಾಮ ಹೇಳಿದ ‘ ಜಾನಕಿ,ದುಡುಕದಿರು’
ಇಂದ್ರನ ಸಭೆಯಲ್ಲಿ ಗೊಂದಲ-ಗದ್ದಲ
ಉಂಟಾಯಿತು.
ಸದ್ದು ಸದ್ದು! ಎನ್ನುತ್ತ ಇಂದ್ರ
ನಿಶ್ಯಬ್ದವಾಗಿರಲು ಸೂಚಿಸಿ
ಮತ್ತೆ ಕೇಳಿದ ಸೀತೆಯನ್ನು
ಇದಕ್ಕೇನು ಸಮರ್ಥನೆ ?
ಕೊಂಚವೂ ವಿಚಲಿತಳಾಗದೆ ನುಡಿದಳು
ಸೀತೆ
‘ ಶೃತಿ ಸ್ಮೃತಿ ಪುರಾಣೇತಿಹಾಸಗಳಲ್ಲಿ
ಹುಡುಕಬೇಕಿಲ್ಲ ಇದರ ತತ್ತ್ವಾರ್ಥ
ಸಾಕ್ಷಿಯಾಗಿ ಬಾಳಿಹೆನು ನಾನೆ.
ರಾಮ ಧರ್ಮಪತ್ನಿಯಲ್ಲಿ ಸಂಶಯಿಸಿ
ಪರಿಶುದ್ಧಳಾಗಿದ್ದ ನನ್ನಲ್ಲಿ ದೋಷವೆಣಿಸಿದ.
ರಾವಣ ನನ್ನನ್ನು ಹೊತ್ತು‌ಒಯ್ದಿದ್ದು
ಲೋಕದೃಷ್ಟಿಯಲ್ಲಿ ಅಧರ್ಮವಾಗಿದ್ದರೂ
ಆತ ಎಂದೂ ಬಲಾತ್ಕರಿಸಲಿಲ್ಲ ನನ್ನನ್ನು
ದಿನದಿನವೂ ಅಶೋಕವನಕ್ಕೆ ಬರುತ್ತಿದ್ದನಾದರೂ
ಪ್ರೇಮಭಿಕ್ಷೆಗೆ
ಎಂದೂ ವರ್ತಿಸಲಿಲ್ಲ ಆತ ಮೃಗವಾಗಿ.
ಸ್ತಬ್ಧವಾಯಿತು ದೇವಸಭೆ
ಮಾತು ಬಾರಲಿಲ್ಲ ರಾಮನ ಬಾಯಿಂದ
ಇಂದ್ರನು ಎದ್ದುಬಂದು
ರಾವಣನನ್ನು ಬಿಗಿದಪ್ಪಿ
ತನ್ನ ಅರ್ಧಸಿಂಹಾಸನದಲ್ಲಿ ಕೂಡಿಸಿಕೊಂಡನು !

೨೬.೦೧.೨೦೨೪

About The Author