ಶಿವಾತ್ಮರಾದವರಿಗೆ ಮಾತ್ರ ಶಿವದೀಕ್ಷೆ ನೀಡಬೇಕು,ದುರಾತ್ಮರಿಗಲ್ಲ !

ಬಸವೋಪನಿಷತ್ತು ೨೧ : ಶಿವಾತ್ಮರಾದವರಿಗೆ ಮಾತ್ರ ಶಿವದೀಕ್ಷೆ ನೀಡಬೇಕು,ದುರಾತ್ಮರಿಗಲ್ಲ !

ಮುಕ್ಕಣ್ಣ ಕರಿಗಾರ

ಸಗಣೆಯ ಬೆನಕಂಗೆ ಸಂಪಗೆಯರಳಲ್ಲಿ ಪೂಜಿಸಿದರೆ
ರಂಜನೆಯಲ್ಲದೆ ಅದರ ಗಂಜಳ ಬಿಡದಣ್ಣಾ !
ಮಣ್ಣ ಪುತ್ತಳಿಯ ಮಾಣದೆ ಜಲದಲ್ಲಿ ತೊಳೆದರೆ
ನಿಚ್ಚ ನಿಚ್ಚಕ್ಕೆ ಕೆಸರಹುದಲ್ಲದೆ ಅದರಚ್ಚುಗ ಬಿಡದಣ್ಣಾ !
ಲೋಕದ ಮಾನವಂಗೆ ಶಿವದೀಕ್ಷೆಯ‌ ಕೊಟ್ಟರೆ
ಕೆಟ್ಟವನೇಕೆ ಶಿವಭಕ್ತನಹನು,ಕೂಡಲ ಸಂಗಮದೇವಾ ?

ಶಿವದೀಕ್ಷೆಯನ್ನು ಅರ್ಹರಾದವರಿಗೆ ಮಾತ್ರ ಕೊಡಬೇಕು,ಲೋಕದ ಮಾನವರಿಗೆಲ್ಲ ಶಿವದೀಕ್ಷೆಯನ್ನು ನೀಡಬಾರದು ಎನ್ನುವುದನ್ನು ಬಸವಣ್ಣನವರಿಲ್ಲಿ ಸುಂದರ ರೂಪಕ,ಸಾಮಿತಿಯ ಮೂಲಕ ವಿವರಿಸಿದ್ದಾರೆ.ಸಗಣಿಯಿಂದ ಮಾಡಿದ ಗಣಪತಿಯನ್ನು ಸಂಪಿಗೆಯ ಹೂವುಗಳಿಂದ ಪೂಜಿಸಿದರೆ ವಿನೋದವಾಗಬಹುದೇ ಹೊರತು ಸಗಣಿಯ ದುರ್ವಾಸನೆ ತೊಲಗಲಿಲ್ಲ.ಮಣ್ಣಿನ ಬೊಂಬೆಯನ್ನು ಅಭಿಷೇಕ ಮಾಡುತ್ತೇನೆ ಎಂದು ನೀರಿನಲ್ಲಿ ತೊಳೆದರೆ ಕ್ಷಣಕ್ಷಣಕ್ಕೂ ಕೆಸರು ಹೊರಬರುವುದು ಮಣ್ಣಿನ ಸಹಜಗುಣ.ಇದರಂತೆಯೇ ಲೊಕದ ಮಾನವರಿಗೆ ಶಿವದೀಕ್ಷೆಯನ್ನು ನೀಡಿದರೆ ಅವರು ತಮ್ಮ ಮುನ್ನಿನ ಕೆಟ್ಟತನದ ವ್ಯಕ್ತಿತ್ವವನ್ನು ಮಾರ್ಪಡಿಸಿಕೊಂಡು ಸನ್ಮಾರ್ಗದಲ್ಲಿ, ಶಿವಪಥದಲ್ಲಿ ನಡೆಯರು.ಆದ್ದರಿಂದ ಕಂಡಕಂಡ ಮನುಜರಿಗೆಲ್ಲ ಶಿವದೀಕ್ಷೆಯನ್ನು ನೀಡಬಾರದು ಎನ್ನುತ್ತಾರೆ ಬಸವಣ್ಣನವರು.

ಹೊಟ್ಟೆಪಾಡಿಗಾಗಿ ಶಿಷ್ಯರನ್ನು ಮಾಡಿಕೊಳ್ಳುವ ದುಷ್ಟಬುದ್ಧಿಯ ದುರ್ಮಾರ್ಗಿಗಳು ಬಸವಣ್ಣನವರ ಈ ವಚನವನ್ನು ಅರ್ಥೈಸಿಕೊಂಡು ನೂರು,ಸಾವಿರ ಸಂಖ್ಯೆಯಲ್ಲಿ ಶಿಷ್ಯರನ್ನು ಮಾಡಿಕೊಳ್ಳುವ,ಕಂಡಕಂಡವರಿಗೆಲ್ಲ ಗುರುಬೋಧೆ ನೀಡುವ ಅವಿವೇಕತನವನ್ನು,ಅಧರ್ಮವನ್ನು ಕೈಬಿಡಬೇಕು.ಈಗೀಗ ಗುರುಬೋಧೆ ಕೊಡುವ,ದೊಡ್ಡ ಸಂಖ್ಯೆಯ ಶಿಷ್ಯರುಗಳನ್ನು ಮಾಡಿಕೊಳ್ಳುವ ಚಪಲಚಿತ್ತರು ಬಹಳಷ್ಟು ಜನರು ಕಾಣಸಿಗುತ್ತಾರೆ.ತಾನೇ ‘ಗುರು’ ವಾಗದ ಅಯೋಗ್ಯ ನೂರಾರು ಜನ ಶಿಷ್ಯರನ್ನು ಮಾಡಿಕೊಳ್ಳುತ್ತಿದ್ದಾನೆ. ಸಂನ್ಯಾಸಿಯ ವೇಷಧರಿಸಿ ಮಠ ಪೀಠಗಳನ್ನು ಕಟ್ಟಿಕೊಂಡು ಬದುಕುವ ಲಾಂಛನಧಾರಿ ಸಂನ್ಯಾಸಿಗಳು ಹೊಟ್ಟೆ ಹೊರೆಯುವ,ದುಡ್ಡುಮಾಡುವ ದುರಾಸೆಯಿಂದ ಸಂಸಾರಿಗಳಾದವರಿಗೆ ಶಿವದೀಕ್ಷೆಯನ್ನು ನೀಡುತ್ತಿದ್ದಾರೆ.ಸಂನ್ಯಾಸಿಯಾದವನು ವಿರಕ್ತನಾಗಿ ತನ್ನ ಪಾಡಿಗೆ ಆಧ್ಯಾತ್ಮಸಾಧನೆ ಮಾಡಿಕೊಂಡಿರಬೇಕೇ ಹೊರತು ಗುರುವಾಗುವ ಚಪಲಕ್ಕೆ ಸಿಕ್ಕು ಕಂಡ ಕಂಡ ಲೌಕಿಕರನ್ನು ಕರೆದು ಬೋಧಿಸಬಾರದು.ತನಗೇ ಮೋಕ್ಷವಿಲ್ಲದ ಸಂನ್ಯಾಸಿ ಗೃಹಸ್ಥ ಶಿಷ್ಯರಿಗೆ ಮೋಕ್ಷವನ್ನು ಕರುಣಿಸಬಲ್ಲನೆ ? ‘ಜನಮರುಳೊ ಜಾತ್ರೆ ಮರುಳೊ’ ಎಂಬಂತೆ ಮತಿಮೂಢರು ದುರಾತ್ಮನಾದ ಸಂನ್ಯಾಸಿಯ ಶಿಷ್ಯರಾಗಿ ನರಕಕ್ಕೆ ಭಾಜನರಾಗುತ್ತಾರೆ.ಹಣದಾಸೆಗಾಗಿ ಜನರನ್ನು ಗುರುಬೋಧೆಯ ಹೆಸರಿನಲ್ಲಿ ವಂಚಿಸುವ ದುರ್ಮಾರ್ಗಿಗಳು ಸಮಾಜಘಾತುಕ ಕೆಲಸ ಮಾಡುತ್ತಿದ್ದಾರೆ.

ಲೋಕದ ಮಾನವರುಗಳಿಗೆಲ್ಲ ಶಿವದೀಕ್ಷೆಯನ್ನು ನೀಡಬಾರದು ಎನ್ನುವುದನ್ನು ಬಸವಣ್ಣನವರು ಕಣ್ಣಿಗೆ ಕಟ್ಟುವ ರೂಪಕಗಳ ಮೂಲಕ ವಿವರಿಸಿದ್ದಾರೆ.ದನದ ಸಗಣಿಯಿಂದ ಮಾಡಿದ ಗಣಪತಿಯನ್ನು ಸಂಪಿಗೆಯ ಹೂವುಗಳಿಂದ ಪೂಜಿಸುವುದು ವಿನೋದವಲ್ಲದೆ ಅರ್ಥಪೂರ್ಣಕಾರ್ಯವಲ್ಲ.ಸಂಪಿಗೆಯ ಹೂವುಗಳೇನೋ ಸುಗಂಧಭರಿತವಾಗಿವೆ.ಸುಗಂಧಭರಿತ ಹೂವುಗಳ ಮಾಲೆಯನ್ನು,ಹೂವುಗಳನ್ನು ಮೈತುಂಬ ಹಾಕಿಕೊಂಡೂ ಸಗಣೆಯ ಬೆನಕ ತನ್ನ ಸಗಣಿಯ ದುರ್ನಾತ ಬೀರುತ್ತಿದೆ.ಬೆನಕನನ್ನು ಮಾಡಿದ್ದೇ ಸಗಣಿಯಿಂದ.ಸಗಣಿಯು ದುರ್ವಾಸನೆ ಬೀರುವುದು ಅದರ ಸ್ವಭಾವ.ಗಣಪತಿಯು ವಿಘ್ನಕಾರಕನೂ ವಿಘ್ನನಿವಾರಕನೂ ಆಗಿರುವ ಅತಿಶಯಮಹಿಮೆಯ ಆದಿಪೂಜಿತನಾಗಿರಬಹುದು ಆದರೆ ಸಗಣಿಯಲ್ಲಿ ಮಾಡಲ್ಪಟ್ಟ ಗಣಪತಿಯು ತನ್ನ ದುರ್ಗಂಧವನ್ನು ಮಾರ್ಪಡಿಸಿಕೊಂಡು ದಿವ್ಯಸುಗಂಧವನ್ನು ಹೊರಸೂಸುವುದಿಲ್ಲ.ಕಲ್ಲಿನಲ್ಲಿ ಮಾಡಿದ್ದ ಗಣಪತಿಯಾಗಿದ್ದರೆ ಅದರ ಕೊರಳು ಮತ್ತು ಮೈಮೇಲೆ ಹಾಕಿದ ಸಂಪಿಗೆಯ ಹೂವು ಸುಗಂಧಪರಿಮಳವನ್ನು ಪಸರಿಸುತ್ತಿತ್ತು.ಇದೊ ಸಗಣಿಯ ಬೆನಕ,ಸಗಣಿಯ ನಾತವನ್ನು ಹೊರಹೊಮ್ಮಿಸುವ ಬೆನಕನೆ ! ಹಾಗೆಯೇ ಮಣ್ಣಿನ ದೇವರ ಮೂರ್ತಿ ಅಥವಾ ಗೊಂಬೆಗೆ ಜಲಾಭಿಷೇಕ ಮಾಡುತ್ತೇನೆಂದು ಅದನ್ನು ನೀರಲ್ಲಿ ತೊಳೆದರೆ ಕ್ಷಣಕ್ಷಣಕ್ಕೂ ಆ ಗೊಂಬೆಯಿಂದ ಕೆಸರು ಬರುತ್ತದೆ.ಮಣ್ಣಿನಲ್ಲಿ ಮಾಡಿದ ಮೂರ್ತಿ ಅದಾಗಿದ್ದರಿಂದ ನೀರಿನ ಸಂಪರ್ಕಕ್ಕೆ ಬಂದೊಡನೆ ಕೆಸರಾಗುವುದು ಮಣ್ಣಿನ ಮೂಲಗುಣ,ಸಹಜಗುಣ.ಲೋಕದ ಮಾನವರು ಸಗಣಿಯ ಬೆನಕ ಮತ್ತು ಮಣ್ಣಿನ ಗೊಂಬೆಗಳಂತೆ ಇದ್ದಾರಲ್ಲದೆ ಅವರು ಸದ್ಗುಣಿಗಳಲ್ಲ,ಶೀಲ ಸಂಪನ್ನರಲ್ಲ.ಶಿವನ ಅನುಗ್ರಹವನ್ನು ಪಡೆಯುವ ಮಾರ್ಗವಾಗಿರುವ ಶಿವದೀಕ್ಷೆಯನ್ನು ಕಂಡಕಂಡವರಿಗೆಲ್ಲ ಕೊಡುತ್ತಾ ಹೋದರೆ ಕೆಟ್ಟವರೇನು ಒಳ್ಳೆಯವರಾಗುವುದಿಲ್ಲ.ಕೆಟ್ಟವರಿಗೆ ಶಿವದೀಕ್ಷೆ ಕೊಟ್ಟರೆ ಶಿವತತ್ತ್ವಕ್ಕೆ ಧಕ್ಕೆ,ಅದನ್ನು ಕೊಟ್ಟವನಿಗೆ ಅಧೋಗತಿ.ಯಾರಲ್ಲಿ ಶಿವಾತ್ಮವು ಎಚ್ಚೆತ್ತಿದೆಯೋ ಯಾರು ಅವಗುಣಗಳನ್ನು ಕಳೆದುಕೊಂಡು ಶಿವಗುಣಸಂಪನ್ನರಾಗಿದ್ದಾರೋ ಅಂಥವರಿಗೆ ಮಾತ್ರ ಶಿವದೀಕ್ಷೆಯನ್ನು ನೀಡಬೇಕು.ದುರಾತ್ಮರಿಗೆ ಶಿವದೀಕ್ಷೆಯನ್ನು ನೀಡಬಾರದು.

೨೪.೦೧.೨೦೨೪

About The Author