ಬಸವಾಯಣ’ಕ್ಕಿರಲಿ ನಮ್ಮ ನಮನ ; ‘ ಬಸವರಾಜ್ಯ ನಿರ್ಮಾಣ’ ನಮ್ಮ ಆದ್ಯತೆಯಾಗಲಿ

ಮೂರನೇ ಕಣ್ಣು :  ಬಸವಾಯಣ’ಕ್ಕಿರಲಿ ನಮ್ಮ ನಮನ ; ‘ ಬಸವರಾಜ್ಯ ನಿರ್ಮಾಣ’ ನಮ್ಮ ಆದ್ಯತೆಯಾಗಲಿ : ಮುಕ್ಕಣ್ಣ ಕರಿಗಾರ

ಮುಖ್ಯಮಂತ್ರಿ ಸಿದ್ಧರಾಮಯ್ಯನವರು ‘ ಜೈ ಶ್ರೀರಾಮ್’ ಎಂದಿದ್ದಾರಲ್ಲದೆ ಸಭೆಯಲ್ಲಿದ್ದವರನ್ನೂ ಜೈ ಶ್ರೀರಾಮ್ ಎಂದು ಕೂಗಿಸಿದ್ದಾರೆ! ಇದು ನಡೆದಿದ್ದು ಬೆಂಗಳೂರಿನ ಹೊರವಲಯದ ಬಿದರಹಳ್ಳಿ ಹೋಬಳಿಯ ಹಿರಂಡಹಳ್ಳಿ ಶ್ರೀರಾಮ ಟೆಂಪಲ್ ಟ್ರಸ್ಟ್ ನಿರ್ಮಿಸಿರುವ ರಾಮ ಸೀತಾ ಲಕ್ಷ್ಮಣ ದೇವಾಲಯ ಹಾಗೂ 33 ಅಡಿ ಎತ್ತರದ ಏಕಶಿಲಾ ಆಂಜನೇಯಸ್ವಾಮಿ ವಿಗ್ರಹದ ಶಿಲಾ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ.’ಮಹಾತ್ಮಗಾಂಧಿಯವರ ರಾಮ,ರಾಮಾಯಾಣದ ರಾಮ ನಮ್ಮ ರಾಮ’ ಎಂದೂ ಸಭೆಯಲ್ಲಿ ಮುಖ್ಯಮಂತ್ರಿಯವರು ಮಾತನಾಡಿದ್ದಾರೆ.ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆಯಾದುದರಿಂದ ದೇಶದ ಅರ್ಧದಷ್ಟು ಜನ ಸಂಭ್ರಮಾಚರಿಸಿದ ಘಟನೆಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯನವರೂ ಸಂಭ್ರಮಿಸಿರಬಹುದು.ಒಬ್ಬ ರಾಜಕೀಯ ಮುತ್ಸದ್ಧಿಯಾಗಿ ಮುಂಬರುವ ಲೋಕಸಭಾ ಚುನಾವಣೆಯನ್ನು‌ ಲಕ್ಷ್ಯದಲ್ಲಿರಿಸಿಕೊಂಡು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮತದಾರರನ್ನು ಓಲೈಸುವ ರಾಜಕೀಯ ಚಾಕಚಕ್ಯತೆಯನ್ನು ಪ್ರದರ್ಶಿಸುವ ಅನಿವಾರ್ಯತೆ ಇರುತ್ತದೆ,ಇರಲಿ.ಅದಕ್ಕೆ ಯಾರ ಆಕ್ಷೇಪವೂ ಇಲ್ಲ.

ಆದರೆ ಕೆಲದಿನಗಳ ಹಿಂದಷ್ಟೇ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ‘ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕರು’ ಎಂದು ಘೋಷಿಸಿದ್ದಾರೆ.ಜೈಶ್ರೀರಾಮ್ ಘೋಷಣೆಯ ಅಬ್ಬರದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಬಸವಣ್ಣನವರನ್ನು ಮರೆಯಬಾರದು.ರಾಜ್ಯದ ಸಾಂಸ್ಕೃತಿಕ ನಾಯಕರು ಎಂದು ಘೋಷಿಸಿದ ದಿನದಿಂದ ಒಂದು ವರ್ಷಕಾಲ ಬಸವಣ್ಣನವರನ್ನು ಕುರಿತಾದ ಹತ್ತುಹಲವು ಸಾಹಿತ್ಯಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಾಡಿನಾದ್ಯಂತ ಹಮ್ಮಿಕೊಂಡು ಬಸವತತ್ತ್ವವನ್ನು ಪಸರಿಸಬೇಕು.ಘೋಷಿಸಿದ ದಿನದಿಂದ ಆಗದೆ ಇದ್ದರೂ ಬರುವ ಬಸವಜಯಂತಿಯಿಂದ ಮುಂದಿನವರ್ಷದ ಬಸವಜಯಂತಿಯವರೆಗೆ ಇಡೀ ವರ್ಷ ರಾಜ್ಯದಾದ್ಯಂತ ಬಸವಣ್ಣನವರನ್ನು ಕುರಿತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಬಸವಣ್ಣನವರಿಗೆ ಗೌರವ ಸಲ್ಲಿಸಬೇಕು.ಶಿವಬಸವ ಸಂಸ್ಕೃತಿಯ ಸರ್ವೋದಯ ಕ್ರಾಂತಿಕಹಳೆಯು ನಾಡಿನುದ್ದಗಲಕ್ಕೂ ನಿನದಿಸಬೇಕು.

ರಾಮಾಯಣದ ರಾಮನೇ ಬೇರೆ ಬಿಜೆಪಿಯವರ ರಾಮನೇ ಬೇರೆ; ಮಹಾತ್ಮಗಾಂಧೀಜಿಯವರ ರಾಮನೇ ಬೇರೆ,ಬಿಜೆಪಿಯವರ ರಾಮನೇ ಬೇರೆ.ಬಿಜೆಪಿಯವರು ರಾಮಮಂದಿರದ ಉದ್ಘಾಟನೆಯನ್ನು ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡೇ ಮಾಡಿದ್ದಾರೆಯೇ ಹೊರತು ಅದರಾಚೆಯ ಯಾವ ತತ್ತ್ವ ಸಿದ್ಧಾಂತವೂ ಇಲ್ಲ.ಜನರಲ್ಲಿ ಸಮೂಹಸನ್ನಿ ಸೃಷ್ಟಿಸಿ ರಾಮ ಭಾರತದ ಸಂಸ್ಕೃತಿಯ ಪ್ರತೀಕ ಎಂದು ಬಿಂಬಿಸ ಹೊರಟಿಸಿದ್ದಾರೆ.ರಾಮ ಭಾರತೀಯ ಸಂಸ್ಕೃತಿಯನ್ನು ರೂಪಿಸಿದ ಸಹಸ್ರಾರು ಮಹಾನ್ ಚೇತನರುಗಳಲ್ಲಿ ಒಬ್ಬನೇ ಹೊರತು ಆತನೊಬ್ಬನೇ ಭಾರತೀಯ ಸಂಸ್ಕೃತಿಯನ್ನು ರೂಪಿಸಲಿಲ್ಲ.ರಾಮನಷ್ಟೇ ಅಲ್ಲ, ಪರಶುರಾಮನೂ ಭಾರತೀಯ ಸಂಸ್ಕೃತಿಯನ್ನು ರೂಪಿಸಿದ ಮಹಾಪುರುಷನೆ‌.ಆದರೆ ಬಿಜೆಪಿಯವರಾಗಲಿ,ಪ್ರಧಾನಮಂತ್ರಿ ನರೇಂದ್ರ ಮೋದಿಯವರಾಗಲಿ ಪರಶುರಾಮನ ಬಗ್ಗೆ ಮಾತನಾಡುವುದಿಲ್ಲ ! ಹೇಗಿದೆ ನೋಡಿ,ರಾಮನೂ ವಿಷ್ಣುವಿನ ಅವತಾರ,ಪರಶುರಾಮನೂ ಅದೇ ವಿಷ್ಣುವಿನ ಅವತಾರ.ಆದರೆ ರಾಮನಿಗೆ ಇರುವ ಆದ್ಯತೆ ಪರಶುರಾಮನಿಗಿಲ್ಲ ! ಈ ಸಾಮಾಜಿಕ ಸೂಕ್ಷ್ಮವನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ.

ಶಿವಭಕ್ತರು ಶಿವನನ್ನು ಪೂಜಿಸುತ್ತಾರಲ್ಲದೆ ರಾಮನನ್ನು ಪೂಜಿಸುವುದಿಲ್ಲ.ಬಸವಣ್ಣನವರನ್ನು ‘ಕರ್ನಾಟಕದ ಸಾಂಸ್ಕೃತಿಕ ನಾಯಕರು’ ಎಂದು ಘೋಷಿಸಿದ ಬಳಿಕ ಕರ್ನಾಟಕವು ಶಿವಬಸವಮಯವಾಗಬೇಕೇ ಹೊರತು ಅನ್ಯದೈವಗಳ ಹೊಗಳಿಕೆಯ ತಾಣವಾಗಬಾರದು.ಸಂವಿಧಾನದ ಆಶಯದಂತೆ ಇತರರ ಮತ,ಧರ್ಮ,ಆರಾಧನಾ ಪದ್ಧತಿಗಳನ್ನು ಗೌರವಿಸಬೇಕಾದ್ದರಿಂದ ನಾವು ರಾಮನನ್ನು ಉಪಾಸಿಸುವವರ ಬಗ್ಗೆಯೂ ಪ್ರೀತಿಯನ್ನಿರಿಸಿಕೊಳ್ಳಬೇಕಾಗುತ್ತದೆ.ನಿಜನಿಷ್ಠೆಯ ಶಿವಭಕ್ತರು ರಾಮನನ್ನು ಶಿವಭಕ್ತರಾಮನೆಂದು ಪರಿಗ್ರಹಿಸಿ ರಾಮನನ್ನೂ ಶಿವವಿಭೂತಿ ಎಂದು ಭಾವಿಸಬೇಕು.ರಾಮನನ್ನು ವೈಭವೀಕರಿಸುವ ನಿಟ್ಟಿನಲ್ಲಿ ಶಿವಾಪಚಾರವನ್ನು,ಶಿವದ್ರೋಹವನ್ನು ಸಹಿಸಲಾಗದು.

‌ ರಾಮರಾಜ್ಯವು ಯಾರಿಗೆ ಬೇಕೋ ಅವರು ಅದನ್ನು ಇಟ್ಟುಕೊಳ್ಳಲಿ.ಆದರೆ ನಾವು ಕಟ್ಟಬೇಕಾದುದು ‘ ‘ಬಸವರಾಜ್ಯ’ವನ್ನು,’ಶಿವಸಾಮ್ರಾಜ್ಯ’ವನ್ನು ಎನ್ನುವುದನ್ನು ಮುಖ್ಯಮಂತ್ರಿಗಳು ಮನಸ್ಸಿನಲ್ಲಿಟ್ಟುಕೊಳ್ಳಬೇಕು.ಬಸವಣ್ಣನವರು ಕಟ್ಟಬಯಸಿದ್ದ ಶಿವಸಮಾಜಕ್ಕೂ ಬಿಜೆಪಿಯವರು ರಾಮಮಂದಿರದ ಹೆಸರಿನಲ್ಲಿ ಪ್ರತಿಷ್ಠಾಪಿಸ ಹೊರಟ ರಾಮರಾಜ್ಯಕ್ಕೂ ವ್ಯತ್ಯಾಸವಿದೆ.ಗಾಂಧೀಜಿಯವರಿಗೆ ಪ್ರಿಯವಾಗಿತ್ತು ಎಂದು ರಾಮರಾಜ್ಯವು ನಮಗೂ ಪ್ರಿಯವಾಗಬೇಕಿಲ್ಲ.ಗಾಂಧೀಜಿಯವರಿಗೆ ರಾಮರಾಜ್ಯದ ಹೊರತು ಬೇರೆ ಪರ್ಯಾಯಗಳಿರಲಿಲ್ಲ,ಅಲ್ಲದೆ ಗಾಂಧೀಜಿಯವರು ರಾಮ ಮತ್ತು ಭಗವದ್ಗೀತೆಗೆ ಕೊಟ್ಟಿರುವ ಪ್ರಾಮುಖ್ಯತೆಯನ್ನು ವೇದ- ಉಪನಿಷತ್ತುಗಳಿಗೆ ಕೊಟ್ಟಿರಲಿಲ್ಲವಾಗಿ ಅವರ ದೃಷ್ಟಿಯು ಪೂರ್ಣದೃಷ್ಟಿಯಲ್ಲ,ಅವರು ಹೇಳಿದುದೆಲ್ಲ ಪೂರ್ಣದರ್ಶನವಲ್ಲ.ಗಾಂಧೀಜಿಯವರಿಗೆ ಬಸವಣ್ಣನವರ ಪೂರ್ಣಪರಿಚಯ ಆಗಿದ್ದರೆ ಅವರು ಖಂಡಿತವಾಗಿ ರಾಮರಾಜ್ಯದ ಬದಲಿಗೆ ‘ ಬಸವರಾಜ್ಯ’ ವನ್ನೇ ತಮ್ಮ ರಾಜಕೀಯ ಆದರ್ಶವನ್ನಾಗಿ ಸ್ವೀಕರಿಸುತ್ತಿದ್ದರು.ಗಾಂಧೀಜಿಯವರು ‘ಬಸವರಾಜ್ಯ’ ವನ್ನು ರಾಜಕೀಯ ಆದರ್ಶವನ್ನಾಗಿ ಸ್ವೀಕರಿಸುತ್ತಿದ್ದರೋ ಬಿಡುತ್ತಿದ್ದರೋ, ಆ ಮಾತು ಅಪ್ರಸ್ತುತ ;ಆದರೆ ಈಗ ಕರ್ನಾಟಕ ಸರಕಾರವು ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದರಿಂದ ಕರ್ನಾಟಕವನ್ನು ‘ ಬಸವರಾಜ್ಯ’ ವನ್ನಾಗಿ ಪರಿವರ್ತಿಸುವ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಬೇಕು.ರಾಮರಾಜ್ಯಸ್ಥಾಪನೆಗೆ ಸಂವಿಧಾನದಲ್ಲಿ ಅವಕಾಶವಿಲ್ಲ ಆದರೆ ಸಂವಿಧಾನದ ಮೂಲ ಆಶಯವೇ’ ಬಸವರಾಜ್ಯ’ ಸ್ಥಾಪನೆ ಎನ್ನುವುದನ್ನು ಸರ್ವರೂ ಮನಗಾಣಬೇಕು.

‘ಬಸವರಾಜ್ಯ’ ಅಥವಾ ‘ ಶಿವಸಾಮ್ರಾಜ್ಯ’ ವೆಂದರೆ ಸರ್ವೋದಯ ಸಮಾಜ ನಿರ್ಮಾಣವೆಂದರ್ಥ.ಎಲ್ಲ ಬಗೆಯ ಭೇದಭಾವ,ಸರ್ವವಿಧ ಕೃತ್ರಿಮತೆಗಳಿಂದ ಮುಕ್ತವಾದ ಸರ್ವರ ಉನ್ನತಿಗೂ ಅವಕಾಶ ನೀಡುವ ಸಮಷ್ಟಿಕಲ್ಯಾಣದ ಕಲ್ಪನೆಯೇ ‘ಬಸವರಾಜ್ಯ ‘ಅಥವಾ ‘ಶಿವಸಾಮ್ರಾಜ್ಯ’ವಾಗಿದ್ದು ಆ ದಿಸೆಯಲ್ಲೀಗ ಪ್ರಯತ್ನಗಳು ನಡೆಯಬೇಕು.ಬಸವಣ್ಣನವರು ಹನ್ನೆರಡನೆಯ ಶತಮಾನದ,ರಾಜಪ್ರಭುತ್ವದ ಕಾಲಘಟ್ಟದಲ್ಲಿಯೇ ಶಿವಸಮಾಜ ಅಥವಾ ಸರ್ವೋದಯ ಸಮಾಜವನ್ನು ಕಟ್ಟಲು ಹಗಲಿರಳು ಶ್ರಮಿಸಿದ್ದರು.ಜಾತಿಭೇದಭಾವಮುಕ್ತ,ಸ್ತ್ರೀಯರ ಹಕ್ಕುಗಳನ್ನು ಗೌರವಿಸುವ ಸ್ತ್ರೀಸಮಾನತೆಯ ಅಪೂರ್ವ,ಆದರ್ಶಸಮಾಜ ಒಂದನ್ನು ಕಟ್ಟಲು ಬಸವಣ್ಣನವರು ಪ್ರಯತ್ನಿಸಿದರು.ಅಸ್ಪೃಶ್ಯತೆಯ ಕಳಂಕವನ್ನು ತೊಡೆದು ಹಾಕಲು ಪ್ರಯತ್ನಿಸಿದ್ದರು.ಉಳ್ಳವರು ಇಲ್ಲದವರ ನಡುವಿನ ಸಾಮಾಜಿಕ ಅಂತರವನ್ನು ಕಡಿಮೆ ಮಾಡಿ ರಾಜ್ಯದ ಸಂಪತ್ತನ್ನು ಅನುಭವಿಸುವ ಹಕ್ಕು ಎಲ್ಲರಿಗೂ ಇದೆ ಎಂದು ಸಾರಿದ್ದರು.ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಅಮಾನುಷ ಆಚರಣೆಗಳನ್ನು ಖಂಡಿಸಿ ಅಸ್ಪೃಶ್ಯರು ಶೂದ್ರರು ಮೊದಲಾದ ಸಮಾಜದಿಂದ ಹೊರಗುಳಿದಿದ್ದ ಸಮುದಾಯಗಳಿಗೆ ಧಾರ್ಮಿಕ ಸ್ವಾತಂತ್ರ್ಯ ನೀಡಿದರು.ಪಾಪ ಪುಣ್ಯಗಳ ಅನಗತ್ಯ ಭಯ ಭೀತಿ ಬೇಡವೆಂದು ಎಲ್ಲರನ್ನೂ ಪುಣ್ಯಾತ್ಮರುಗಳನ್ನಾಗಿಸಿದರು.ಸಮಾಜದಲ್ಲಿ ಯಾರೂ ಹಸಿದಿರಬಾರದು ಎಂದು ‘ಜಂಗಮತತ್ತ್ವ’ ‘ ದಾಸೋಹತತ್ತ್ವ’ ಗಳನ್ನು ಅನುಷ್ಠಾನಕ್ಕೆ ತಂದರು.ಒಂದೇ..ಎರಡೇ ಬಸವಣ್ಣನವರು ಸಾಧಿಸಿದ ಮನುಕುಲಕ್ಕೆ ಮಹಾಆದರ್ಶವಾಗುವ ಸತ್ಕಾರ್ಯಗಳು.ಕರ್ನಾಟಕ ಸರಕಾರವು ಮನುಕುಲದ ಉದ್ಧಾರದ ಮಹಾಕನಸಿಗ ಬಸವಣ್ಣನವರ ತತ್ತ್ವ ಆದರ್ಶಗಳನ್ನು ಆಧರಿಸಿ ಬಸವರಾಜ್ಯ ನಿರ್ಮಾಣಕ್ಕೆ ಪ್ರಯತ್ನಿಸಬೇಕು.

ರಾಮಾಯಣವಲ್ಲ , ‘ ಬಸವಾಯಣ’ ನಮ್ಮ ಆದರಣೀಯ ಗ್ರಂಥವಾಗಬೇಕು.ರಾಮರಾಜ್ಯವಲ್ಲ ‘ ಬಸವರಾಜ್ಯ’ ನಿರ್ಮಾಣ ನಮ್ಮ‌ಕನಸಾಗಬೇಕು,ಆದರ್ಶವಾಗಬೇಕು.ರಾಮರಾಜ್ಯದಲ್ಲಿ ಒಂದು ನಾಯಿಗೂ ನ್ಯಾಯಸಿಗುತ್ತಿತ್ತು ಎನ್ನುವುದು ಉತ್ಪ್ರೇಕ್ಷೆಯ ಮಾತಲ್ಲದೆ ಸತ್ಯವಲ್ಲ. ಯಕಶ್ಚಿತಃ ಅಗಸನೋರ್ವನ ಮಾತು ಕೇಳಿ ತುಂಬುಗರ್ಭಿಣಿಯಾಗಿದ್ದ ಸೀತೆಯನ್ನು ಕಡುನಿಷ್ಕರುಣಿಯಾಗಿ ಕಾಡಿಗೆ ಅಟ್ಟಿದ ರಾಮನಲ್ಲಿ ಎಂತಹ ನ್ಯಾಯ ದೊರಕಬಹುದಿತ್ತು ? ಸೀತೆಯು ಅಶೋಕವನದಲ್ಲಿ ರಾವಣನ ಬಂಧನದಲ್ಲಿದ್ದೂ ತನ್ನ ಪಾತಿವ್ರತ್ಯವನ್ನು ಕಾಪಾಡಿಕೊಂಡಿದ್ದಳು ಎಂದು ಸ್ವಂತ ಅಗ್ನಿಯೇ ಸಾಕ್ಷಿ ನುಡಿದಿದ್ದಾಗಲೂ ಮತ್ತೆ ಅವಳ ಶೀಲಶಂಕಿಸಿದ ರಾಮನಲ್ಲಿ ಎಂತಹ ನ್ಯಾಯವಿದ್ದೀತು ? ವಾಲಿಯನ್ನು ಮರದಹಿಂದೆ ಅಡಗಿಕೊಂದಿದ್ದರಲ್ಲಿ ಯಾವ ನ್ಯಾಯವಿದ್ದೀತು ? ಶೂದ್ರರಿಗೆ ದೇವರನ್ನು ಪೂಜಿಸುವ ಹಕ್ಕೇ ಇಲ್ಲ ಎಂದ ಬ್ರಾಹ್ಮಣರ ಮಾತಿಗೆ ಅಂಗೀಕಾರದ ಮುದ್ರೆಯನ್ನೊತ್ತಿ ಶಂಬೂಕನೆಂಬ ಶೂದ್ರನನ್ನು ಸಂಹರಿಸಿದ ರಾಮನಲ್ಲಿ ಎಂತಹ ಸಮಾನತೆಯ ನ್ಯಾಯ ಇದ್ದೀತು? ಇಂತಹ ಸಾಕಷ್ಟು ವಿರೋಧಾಭಾಸದ ಸನ್ನಿವೇಶಗಳಿವೆ ರಾಮನಚರಿತೆ ರಾಮಾಯಣದಲ್ಲಿ.ಆದರೆ ಬಿಜ್ಜಳನ ಪ್ರಧಾನಿಯಾಗಿದ್ದೂ ತನು ಮನ ಧನಗಳೆಂಬ ತ್ರಿಕರಣ ಶುದ್ಧಿಯನ್ನುಳ್ಳವರಾಗಿದ್ದ ಕಾರಣ ಸಾಧ್ಯವಾಗಿತ್ತು ಬಸವಣ್ಣನವರಿಗೆ ‘ ಆನಂಜುವೆನೆ ಭವಿ ಬಿಜ್ಜಳನಿಗೆ ?’ ಎಂದು ಪ್ರಶ್ನಿಸಲು.ಶಿವನಿತ್ತ ಸಂಪತ್ತನ್ನು ಶಿವಶರಣರ ಸಮಾಜದ ದುರ್ಬಲ ವರ್ಗಗಳ ಕಲ್ಯಾಣಕ್ಕಾಗಿ ಬಳಸಿದ ಬಸವಣ್ಣನವರು ಆಳುವವರಿಗೆಲ್ಲ ಸಾರ್ವಕಾಲಿಕ ಆದರ್ಶ.ಪ್ರಬುದ್ಧ ಸಂವಿಧಾನವನ್ನು ಹೊಂದಿ ಜಗತ್ತಿನ ಯಶಸ್ವಿ ಪ್ರಜಾಪ್ರಭುತ್ವ ರಾಷ್ಟ್ರ ಎನ್ನುವ ಕೀರ್ತಿಯನ್ನು ಹೊಂದಿಯೂ ನೀವು ಹಿಂದೂಗಳೆ, ನೀವು ಮುಸ್ಲಿಮರೆ ? ನೀವು ಬ್ರಾಹ್ಮಣರೆ ನೀವು ಶೂದ್ರರೆ?ನೀವು ಮೇಲ್ಜಾತಿಯವರೆ,ನೀವು ದಲಿತರೆ? ಎಂದು ಪ್ರಶ್ನಿಸುವ ತರತಮಬುದ್ಧಿಯೇ ರಾಜ್ಯಾಡಳಿತ ನೀತಿ ಎಂಬಂತೆ ವಿಜೃಂಭಿಸುತ್ತಿದೆ.ಅರಸೊತ್ತಿಗೆಯ‌ಕಾಲದಲ್ಲಿ ಪ್ರಜೆಗಳೆಲ್ಲರಿಗೂ ಉನ್ನತಿಯ, ಉದ್ಧಾರದ ಹಕ್ಕು‌ಇದೆ ಎನ್ನುವುದು ‘ ಇವನಾರವ ಇವನಾರವ ಇವನಾರವ ಎನಿಸದಿರಯ್ಯ,ಇವ ನಮ್ಮವ,ಇವ ನಮ್ಮವ ಇವ ನಮ್ಮವ ಎನಿಸಯ್ಯಾ’ ಎಂದು ಸರ್ವರಿಗೂ ಅಭ್ಯುದಯದ ಅವಕಾಶವನ್ನು ತೆರೆದಿಟ್ಟ ಬಸವಣ್ಣನವರು ನಮ್ಮ ಹೆಮ್ಮೆ,ನಮ್ಮ ಆದರ್ಶ ಎಂದು ಬಸವಣ್ಣನವರ ಕನಸುಗಳನ್ನು ಸಾಕಾರಗೊಳಿಸುವ ಪ್ರಯತ್ನಮಾಡಬೇಕು ಮುಖ್ಯಮಂತ್ರಿ ಸಿದ್ಧರಾಮಯ್ಯನವರು.

‌ ೨೩.೦೧.೨೦೨೪

About The Author