ಕನಕದಾಸರು ,ರಾಮಮಂದಿರದ ಉದ್ಘಾಟನೆ ಮತ್ತು ಗರ್ಭಗುಡಿ ಸಂಸ್ಕೃತಿ

ಮೂರನೇ ಕಣ್ಣು : ಕನಕದಾಸರು ,ರಾಮಮಂದಿರದ ಉದ್ಘಾಟನೆ ಮತ್ತು ಗರ್ಭಗುಡಿ ಸಂಸ್ಕೃತಿ

ಮುಕ್ಕಣ್ಣ ಕರಿಗಾರ

ಅಯೋಧ್ಯೆಯಲ್ಲಿ ಜನೆವರಿ ೨೨ ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಮನಪ್ರಾಣಪ್ರತಿಷ್ಠೆಯನ್ನು ಮಾಡಿ,ರಾಮಲಲ್ಲಾನ ದೇವಸ್ಥಾನವನ್ನು ಉದ್ಘಾಟಿಸಿದ್ದು ದೇಶದ ಬಹುದೊಡ್ಡ ಸಾಧನೆ ಎಂಬಂತೆ ಬಿಂಬಿಸಲಾಗುತ್ತಿದೆ.ರಾಮಮಂದಿರದ ನಿರ್ಮಾಣ ಮತ್ತು ಅದರ ಉದ್ಘಾಟನೆಯ ಹಿಂದಿರುವ ‘ ಸಾಂಸ್ಕೃತಿಕ ಯಜಮಾನಿಕೆ’ ಯನ್ನು ಅರ್ಥಮಾಡಿಕೊಳ್ಳದ,ತಮ್ಮ ಬುದ್ಧಿಯನ್ನು ವೈದಿಕರು,ಪುರೋಹಿತಶಾಹಿಗಳ ಪದತಲಗಳಲ್ಲಿ ಸಮರ್ಪಿಸಿ ಶರಣಾಗಿ ಧನ್ಯತೆಯನ್ನು ಮೆರೆಯುತ್ತಿರುವವರ ದೈನೇಸಿ ಸ್ಥಿತಿ ಮರುಕಹುಟ್ಟಿಸುತ್ತಿದೆ.ರಾಮಮಂದಿರದ ಉದ್ಘಾಟನೆಗಾಗಿ ದೇಶದುದ್ದಗಲದ ಸಾವಿರಾರು ಕಾವಿಧಾರಿಗಳು,ಮಠ ಪೀಠಗಳ ಗುರುಗಳು ,ಜಗದ್ಗುರುಗಳನ್ನು ಆಹ್ವಾನಿಸಲಾಗಿತ್ತು.ಕರ್ನಾಟಕದಿಂದಲೂ ಸಹಸ್ರಾರು ಕಾವಿಧಾರಿಗಳು ಅಯೋಧ್ಯೆಗೆ ತೆರಳಿದ್ದಾರೆ.ರಾಜ್ಯದಿಂದ ಅಯೋಧ್ಯೆಗೆ ತೆರಳಿದ ಸ್ವಾಮಿ ಮಠಾಧೀಶರುಗಳು,ಧಾರ್ಮಿಕ ಮುಖಂಡರುಗಳಲ್ಲಿ ಪ್ರಮುಖರೆಂದರೆ ಮೈಸೂರಿನ ಸುತ್ತೂರು ಮಠದ ಜಗದ್ಗುರುಗಳಾದ ಶಿವರಾತ್ರಿದೇಶೀಕೇಂದ್ರ ಸ್ವಾಮಿಗಳು,ಕಾಗಿನೆಲೆ ಕನಕಗುರುಪೀಠದ ಜಗದ್ಗುರುಗಳಾದ ನಿರಂಜನಾನಂದಪುರಿಸ್ವಾಮಿಗಳು,ಆದಿ ಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥಸ್ವಾಮಿಗಳು,ಮಾದಾರ ಚೆನ್ನಯ್ಯ ಸ್ವಾಮೀಜಿ ಮತ್ತು ಧರ್ಮಸ್ಥಳದ ಮಂಜುನಾಥಸ್ವಾಮಿ ದೇವಸ್ಥಾನದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು.ಆದರೆ ಪ್ರಾಣಪ್ರತಿಷ್ಠೆಗೊಂಡ ರಾಮನ ಗರ್ಭಗುಡಿಯಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಜೊತೆ ನಿಂತವರು ಪೇಜಾವರಮಠದ ಸ್ವಾಮಿಗಳಾದ ವಿಶ್ವಪ್ರಸನ್ನ ತೀರ್ಥರು ಮಾತ್ರ ! ಮೋಹನ್ ಭಾಗವತ್ ಅವರಿಗೂ ದೇವಸ್ಥಾನದ ಮುಂಭಾಗದ ವೇದಿಕೆಯಲ್ಲಿ ಪ್ರಧಾನಮಂತ್ರಿಗಳೊಂದಿಗೆ ಆಸೀನರಾಗಲು ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿಯವರೊಂದಿಗೆ ಗರ್ಭಗುಡಿಯನ್ನು ಪ್ರವೇಶಿಸಿಸಲು ಅವಕಾಶ ಕಲ್ಪಿಸಲಾಗಿತ್ತು .ಒಟ್ಟು ಏಳುಮಂದಿಗೆ ಮಾತ್ರ ಗರ್ಭಗುಡಿಯ ಪ್ರವೇಶಕ್ಕೆ ಅವಕಾಶಕಲ್ಪಿಸಲಾಗಿತ್ತು ಎನ್ನುವ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟಿನ ಹೇಳಿಕೆಯಂತೆ ಈ ಮೂವರಲ್ಲದೆ ಗರ್ಭಗುಡಿಯನ್ನು ಪ್ರವೇಶಿಸಿದ ಇತರ ನಾಲ್ವರು ಗಣ್ಯರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಬಿಟ್ಟರೆ ಉಳಿದ ಮೂವರು ಟ್ರಸ್ಟಿನ ಪದಾಧಿಕಾರಿಗಳು.ಕರ್ನಾಟಕದ ಪ್ರಸಿದ್ಧ ಮಠ ಪೀಠಗಳ ಗುರು ಜಗದ್ಗುರುಗಳು,ಧರ್ಮಾಧಿಕಾರಿಗಳು ರಾಮನ ದೇವಸ್ಥಾನದ ಮುಂದೆ ನಿಂತು ಫೋಟೋ ತೆಗೆಯಿಸಿಕೊಂಡಷ್ಟೆ ತೃಪ್ತಿಪಡಬೇಕಾಯಿತು.

ಸುತ್ತೂರು ಶ್ರೀಗಳು ಕಾಗಿನೆಲೆ ಗುರುಪೀಠದ ನಿರಂಜನಾನಂದ ಪುರಿಸ್ವಾಮಿಗಳು ಹಾಗೂ ಇತರ ಸ್ವಾಮೀಜಿಗಳೊಂದಿಗೆ ರಾಮಮಂದಿರದ ಮುಂದೆ ನಿಂತು ತೆಗೆಯಿಸಿಕೊಂಡ ಫೋಟೋವು ಪತ್ರಿಕೆಗಳಲ್ಲಿ ಮತ್ತು ವಾಟ್ಸಾಪ್ ಗುಂಪುಗಳಲ್ಲಿ ಹರಿದಾಡಿತ್ತು. ಕರ್ನಾಟಕದ ಹೆಸರಾಂತ ಮಠ ಪೀಠಗಳ ಸ್ವಾಮೀಜಿಗಳನ್ನು ಪ್ರಧಾನಮಂತ್ರಿ ನರೇಂದ್ರಮೋದಿಯವರ ಜೊತೆ ರಾಮಲಲ್ಲಾನ ಗರ್ಭಗುಡಿಯೊಳಗೆ ಬಿಡದೆ ಕೇವಲ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರಿಗಷ್ಟೇ ಅವಕಾಶ ನೀಡಿದ್ದು Security ಕಾರಣದಿಂದಲ್ಲ,ಬದಲಿಗೆ ಬ್ರಾಹ್ಮಣ ಪುರೋಹಿತಶಾಹಿ ವ್ಯವಸ್ಥೆಯು ಪರಿಪಾಲಿಸಿಕೊಂಡು ಬಂದಿರುವ ಗರ್ಭಗುಡಿ ಸಂಸ್ಕೃತಿಯನ್ನು ಎತ್ತಿಹಿಡಿಯುವ ಕಾರಣದಿಂದ.ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಒಂದುವರೆ ವರ್ಷದ ಹಿಂದೆ ಸುತ್ತೂರು ಮಠದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಹಿಂದೊಮ್ಮೆ ಧರ್ಮಸ್ಥಳದ ಮಂಜುನಾಥೇಶ್ವರನ ಸನ್ನಿಧಿಗೂ ಆಗಮಿಸಿದ್ದರು.ಸುತ್ತೂರು ಸ್ವಾಮಿಗಳು ಮತ್ತು ವೀರೇಂದ್ರ ಹೆಗ್ಗಡೆಯವರ ಪರಿಚಯ ನರೇಂದ್ರಮೋದಿ ಅವರಿಗಿದೆ.ಅವರಿಬ್ಬರನ್ನು ಗರ್ಭಗುಡಿಯೊಳಗೆ ಪ್ರಧಾನಮಂತ್ರಿಯವರೊಂದಿಗೆ ಬಿಟ್ಟಿದ್ದರೆ ನರೇಂದ್ರಮೋದಿಯವರೇನು ಆಕ್ಷೇಪಿಸುತ್ತಿರಲಿಲ್ಲ.ಆದರೆ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಉದ್ದೇಶಪೂರ್ವಕವಾಗಿಯೇ ಆ ಕೆಲಸ ಮಾಡಿಲ್ಲ.ವಿಶ್ವಪ್ರಸನ್ನ ತೀರ್ಥರು ಅಂತಹ ಹಿರಿಯ ಸಂತರೇನಲ್ಲ ,ಅವರ ಪೇಜಾವರ ಮಠವು ಧರ್ಮಸ್ಥಳ ಮತ್ತು ಸುತ್ತೂರು ಮಠಗಳಷ್ಟು ಪ್ರಸಿದ್ಧಿಪಡೆದ ಮಠವೂ ಅಲ್ಲ.ಆದರೂ ಅವರಿಗೆ ಅಗ್ರಮನ್ನಣೆ ನೀಡಲಾಗಿದೆ.ರಾಮಮಂದಿರ ಸ್ಥಾಪನೆ ಮತ್ತು ಉದ್ಘಾಟನೆಯಿಂದ ದೇಶವು ಪುನೀತವಾಯಿತು,ಭಾರತದ ಸಂಸ್ಕೃತಿಯ ಪುನರವತರಣವಾಯಿತು ಎಂದು ಅಬ್ಬರಿಸುವ ‘ ಎರವಲುಬುದ್ಧಿ’ಯುಳ್ಳವರು ಸುತ್ತೂರುಶ್ರೀಗಳು,ವೀರೇಂದ್ರ ಹೆಗ್ಗಡೆಯವರು ಸೇರಿದಂತೆ ಕರ್ನಾಟಕದ ಧಾರ್ಮಿಕ ಕ್ಷೇತ್ರದ ಅತಿಗಣ್ಯರುಗಳನ್ನು ಗರ್ಭಗುಡಿಯ ಒಳಗೆ ಬಿಡದೆ ತಮ್ಮ ಕುಟಿಲಪ್ರಭುತ್ವಮೆರೆದಿದ್ದಾರೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು.ಬ್ರಾಹ್ಮಣರು ಅವಕಾಶಸಿಕ್ಕಾಗಲೆಲ್ಲ ತಮ್ಮ ಪ್ರತಿಷ್ಠೆಯನ್ನು ಮೆರೆಯುತ್ತಲೇಬಂದಿದ್ದಾರೆ ಎನ್ನುವುದಕ್ಕೆ ಕರ್ನಾಟಕದ ಧಾರ್ಮಿಕಕ್ಷೇತ್ರದ ಪ್ರಮುಖರಿಗೆ ರಾಮಮಂದಿರದ ‘ಗರ್ಭಗುಡಿ ಪ್ರವೇಶ ನಿರಾಕರಣೆ’ಯ ಈ ಪ್ರಕರಣವು ಇಪ್ಪತ್ತೊಂದನೆಯ ಶತಮಾನದ ಪ್ರಜಾಪ್ರಭುತ್ವ ಭಾರತದ ವ್ಯಂಗ್ಯವಾಗಿ ನಮ್ಮ ಕಣ್ಣೆದುರು ನಿಲ್ಲುತ್ತದೆ.ಪ್ರಧಾನಮಂತ್ರಿಯವರ ಸೆಕ್ಯೂರಿಟಿಯ ನೆಪದಲ್ಲಿ ಕರ್ನಾಟಕದ ಶೈವ- ವೀರಶೈವ ಸಂಸ್ಕೃತಿಯನ್ನು ಪ್ರತಿನಿಧಿಸುತ್ತಿರುವ ಧಾರ್ಮಿಕ ಮುಖಂಡರುಗಳನ್ನು ‘ಹೊರಗಣ’ವರನ್ನಾಗಿ ಕಾಣಲಾಗಿದೆ.

ಉಡುಪಿಯ ಕೃಷ್ಣಮಠಕ್ಕೆ ಮಹಿಮಾಧಿಕ್ಯವು ಪ್ರಾಪ್ತವಾಗಿದ್ದು ಸಂತಕನಕದಾಸರಿಂದ.ಅದುವರೆಗೂ ಕೇವಲ ಬ್ರಾಹ್ಮಣ ಅರ್ಚಕರ ಒಂದು ಸಾಮಾನ್ಯ ಮಠವಾಗಿದ್ದ ಕೃಷ್ಣಮಠವು ಕನಕದಾಸರ ಭಕ್ತಿಯ ಕಾರಣಕ್ಕಾಗಿ ಎಲ್ಲರ ಗಮನಸೆಳೆಯಿತು,ವಿಶ್ವಪ್ರಸಿದ್ಧವಾಯಿತು.ತನ್ನ ಭಕ್ತಶ್ರೇಷ್ಠ ಕನಕನಿಗಾಗಿ ಉಡುಪಿಯ ಶ್ರೀಕೃಷ್ಣನು ಪಶ್ಚಿಮಾಭಿಮುಖನಾಗಿ ನಿಂತು ಕಿಂಡಿಯ ಮೂಲಕ ಕನಕದಾಸರಿಗೆ ದರ್ಶನನೀಡಿದ್ದು ಜಗತ್ತಿನ ಧಾರ್ಮಿಕೇತಿಹಾಸದಲ್ಲಿ ಅತ್ಯಪರೂಪದ ಪ್ರಸಂಗ.ಭಕ್ತಪ್ರಹ್ಲಾದನಿಗಾಗಿ ಕಂಭದಲ್ಲಿ ಅವತರಿಸಿದ ನರಸಿಂಹನ ಭಕ್ತವತ್ಸಲ ಮಹಿಮೆಯನ್ನು ಬಿಟ್ಟರೆ ಭಾರತದ ಸಾಂಸ್ಕೃತಿಕ ಇತಿಹಾಸದಲ್ಲಿ ಕೃಷ್ಣನು ಕನಕದಾಸರಿಗಾಗಿ ಪಶ್ಚಿಮಕ್ಕೆ ತಿರುಗಿ ದರ್ಶನ ನೀಡಿದ್ದು ಮಾತ್ರ ಅದ್ಭುತ ಪ್ರಸಂಗ.ಶ್ರೀಕೃಷ್ಣನ ಭಕ್ತವತ್ಸಲ ಗುಣವಿಶೇಷದಿಂದ ಕನಕದಾಸರು ಪ್ರಸಿದ್ಧರಾದರು ; ಕನಕದಾಸರ ಯೋಗಶಕ್ತಿಯ ಬಲದಿಂದ ಉಡುಪಿಯ ಶ್ರೀಕೃಷ್ಣನು ಜಗದ್ವಿಖ್ಯಾತನಾದ.ಆದರೆ ಅದೇ ಕನಕದಾಸರ ಹೆಸರಿನ ಗುರುಪೀಠದ ಕಾಗಿನೆಲೆ ಕನಕಪೀಠದ ಜಗದ್ಗುರುಗಳು ರಾಮಮಂದಿರದ ‘ಹೊರಗಡೆ’ ನಿಂತರೆ ಉಡುಪಿಯ ಕೃಷ್ಣನನ್ನು ಪೂಜಿಸುವ ಪೇಜಾವರ ಮಠದ ಸ್ವಾಮಿಗಳು ಗರ್ಭಗುಡಿಯ ‘ ಒಳಗಿನ’ನವರಾದರು ! ಇದು ಎಂತಹ ವ್ಯಂಗ್ಯ,ಎಂತಹ ವಿಡಂಬನೆ !

ಕನಕದಾಸರು ಉಡುಪಿಯ ಶ್ರೀಕೃಷ್ಣನ ದರ್ಶನ ಪಡೆಯುವ ಮುಂಚೆ ಹೀಗೆ ಯಾವುದೋ ರಾಮಮಂದಿರಕ್ಕೆ ಹೋಗಿ ಪ್ರವೇಶದೊರೆಯದೆ ಹೊರಗೆ ನಿಂತಿರಬೇಕು ಎನ್ನಿಸುತ್ತದೆ.ರಾಮನ ದೇವಸ್ಥಾನದ ಒಳಗೆ ಬಿಡದವರ ಸಣ್ಣತನವನ್ನು ಬಯಲಿಗೆ ಎಳೆದು ಎಲ್ಲೆಲ್ಲೂ ರಾಮನನ್ನು ಕಂಡಿದ್ದಾರೆ ಕನಕದಾಸರು.ರಾಮನು ಕಲ್ಲುಕಟ್ಟಡವಾದ ದೇವಸ್ಥಾನದ ಗರ್ಭಗುಡಿಯಲ್ಲಿ ಬಂಧಿಯಾಗಿಲ್ಲ ಅವನು ಎಲ್ಲೆಲ್ಲಿಯೂ ಇದ್ದಾನೆ ಎನ್ನುವುದನ್ನು ಸಾರುವ ಕನಕದಾಸರ ಒಂದು ಕೀರ್ತನೆ ;

ಎಲ್ಲಿ ನೋಡಿದರಲ್ಲಿ ರಾಮ
ಇದ ಬಲ್ಲ ಜಾಣರ ದೇಹದಲ್ಲಿ ನೋಡಣ್ಣ //ಪ//

ಕಣ್ಣೆ ಕಾಮನ ಬೀಜ ಈ
ಕಣ್ಣಿಂದಲೆ ನೋಡು ಮೋಕ್ಷ ಸಾಮ್ರಾಜ್ಯ
ಕಣ್ಣಿನ ಮೂರುತಿ ಬಿಗಿದು ಒಳ
ಗಣ್ಣಿನಿಂದಲೆ ದೇವರ ನೋಡಣ್ಣ (೧)

ಮೂಗೇ ಶ್ವಾಸ ನಿಶ್ವಾಸ ಈ
ಮೂಗಿನಿಂದಲೆ ಕಾಣೊ ಯೋಗ ಸನ್ಯಾಸ
ಮೂಗನಾದರೆ ವಿಶೇಷ ಒಳ
ಮೂಗಿನಲಿ ನೋಡಿರಣ್ಣ ಲೀಲಾ ವಿಲಾಸ (೨)
ಕಿವಿಯೇ ಕರ್ಮಕೆ ದ್ವಾರ ಈ
ಕಿವಿಯಿಂದಲೆ ಕೇಳೊ ಮೋಕ್ಷದ ಸಾರ
ಕಿವಿಯೇ ಕರ್ಮದ ಕುಠಾರ ಒಳ
ಗಿವಿಯಲ್ಲಿ ಕಾಣೋ ನಾದದ ಬೇರ (೩)

ಬೊಮ್ಮ ಮಾಡಿದ ತನು ಬಿಟ್ಟು ವಿಶ್ವ
ಕರ್ಮನು ಮಾಡಿದ ಬೊಂಬೆಯನಿಟ್ಟು
ಸುಮ್ಮನೆ ಕೂಗುಗಳಿಟ್ಟು ಅದ
ನಂಬುವನೆಂಬೋನೆ ಹೋಗ ಕಂಗೆಟ್ಟು (೪)

ರೂಢಿಯೊಳಗೆ ಶುದ್ಧ ಮೂಢ ಈ
ಕಾಡುಕಲ್ಲುಗಳನ್ನು ನಂಬಲುಬೇಡ
ನಾಡಾಡಿ ದೈವಗಳನೆಲ್ಲ ನಮ್ಮ
ಬಾಡದಾದಿಕೇಶವನೊಬ್ಬನೆ ಬಲ್ಲ. (೫)

ಅಯೋಧ್ಯೆಯಲ್ಲಿ ಪ್ರಾಣಪ್ರತಿಷ್ಠೆಗೊಂಡ ರಾಮನ ಮೂರ್ತಿಯೂ ಕಲ್ಲಿನಲ್ಲಿ ಕಟೆದ ಮೂರ್ತಿಯೆ !ಈ ಕೀರ್ತನೆಯು ರಾಮನ ಮೂರ್ತಿಪ್ರತಿಷ್ಠಾಪನೆ ಮತ್ತು ಅದರ ಉದ್ಘಾಟನೆ ಎರಡೂ ಅರ್ಥಹೀನ ಕ್ರಿಯೆಗಳು ಎನ್ನುವುದರತ್ತ ನಮ್ಮ ಗಮನಸೆಳೆಯುತ್ತದೆ .ರಾಮನನ್ನು ಬಯಲಲ್ಲಿ,ಎಲ್ಲೆಲ್ಲೂ ಕಂಡಾಗ ಅವನು ಸರ್ವರ,ದೇಶಸಮಸ್ತರ ರಾಮನಾಗುತ್ತಾನೆ,ಅಯೋಧ್ಯೆಯ ರಾಮಮಂದಿರದಲ್ಲಷ್ಟೇ ಕಂಡಾಗ ಆ ರಾಮನು ಪುರೋಹಿತರು ಮತ್ತು ಪಟ್ಟಭದ್ರರ ರಾಮನಷ್ಟೇ ಆಗುತ್ತಾನೆ. ಶೈವಸಂಸ್ಕೃತಿಯ ಹಿಂದುಳಿದ ವರ್ಗಗಳು ಮತ್ತು ಶೂದ್ರಸಮುದಾಯಗಳಿಂದ ಬಂದಿದ್ದ ಮಠ ಪೀಠಾಧೀಶರು ರಾಮನ ಮೂರ್ತಿಯ ಪ್ರಾಣಪ್ರತಿಷ್ಠೆ ಮತ್ತು ರಾಮಮಂದಿರದ ಉದ್ಘಾಟನೆಯ ಹಿಂದಿನ ನಿಜ ಉದ್ದೇಶವನ್ನು ಅರ್ಥಮಾಡಿಕೊಳ್ಳಬೇಕಿತ್ತು.ಗರ್ಭಗುಡಿ ಸಂಸ್ಕೃತಿಯ ಜನರ ಮುಂದೆ ‘ ಹೊರಗಿನವರಾಗಿ’ ಸಂಭ್ರಮಿಸುವ ಅಗತ್ಯವಿತ್ತೆ ?

೨೪.೦೧.೨೦೨೪

About The Author