ಲೋಕದ ಮಾನವರಿಗೆಲ್ಲ ಶಿವದೀಕ್ಷೆ ನೀಡಬಾರದು !

ಬಸವೋಪನಿಷತ್ತು ೨೦ : ಲೋಕದ ಮಾನವರಿಗೆಲ್ಲ ಶಿವದೀಕ್ಷೆ ನೀಡಬಾರದು !

ಮುಕ್ಕಣ್ಣ ಕರಿಗಾರ

ಕುಂಬಳಕಾಯಿಗೆ ಕಬ್ಬುನದ ಕಟ್ಟ ಕೊಟ್ಟರೆ
ಕೊಳೆವುದಲ್ಲದೆ ಬಲುಹಾಗಬಲ್ಲುದೆ ?
ಅಳಿಮನದವಂಗೆ ಶಿವದೀಕ್ಷೆಯ ಕೊಟ್ಟರೆ
ಭಕ್ತಿ ಎಂತಹದೊ — ಮುನ್ನಿನಂತೆ —
ಕೂಡಲ ಸಂಗಯ್ಯ,ಮನಹೀನನ ಮೀಸಲು ಕಾಯ್ದಿರಿಸಿದಂತೆ !

ಶಿವಾನುಗ್ರಹವು ಲೋಕಸಮಸ್ತರ ಜನ್ಮಸಿದ್ಧ ಹಕ್ಕು ಆಗಿದ್ದರೂ ಲೋಕದ ಮಾನವರುಗಳಿಗೆಲ್ಲ ಶಿವದೀಕ್ಷೆಯನ್ನು ನೀಡಬಾರದು ಎನ್ನುತ್ತಾರೆ ಬಸವಣ್ಣನವರು.ಕುಂಬಳಕಾಯಿಗೆ ಕಬ್ಬಿಣ್ಣದ ಚೌಕಟ್ಟನ್ನಿಟ್ಟರೆ ಕುಂಬಳಕಾಯಿಯು ಕೊಳೆಯುತ್ತದೆಯಲ್ಲದೆ ಬಲಗೊಳ್ಳುವುದಿಲ್ಲ,ಗಟ್ಟಿಯಾಗುವುದಿಲ್ಲ.ಅದರಂತೆ ಚಂಚಲಮನಸ್ಕರಿಗೆ,ಹೀನಮನಸ್ಕರಿಗೆ ಶಿವದೀಕ್ಷೆಯನ್ನು ಕೊಟ್ಟರೆ ಅವರು ಶಿವಭಕ್ತರಾಗುವುದಿಲ್ಲ.ಇಂತಹ ಹೀನಮನಸ್ಕರಿಗೆ ಶಿವದೀಕ್ಷೆಯನ್ನು ನೀಡುವುದು ಕಳ್ಳನನ್ನು ಮನೆಯನಿಧಿಯನ್ನು ಕಾಯಲು ಕಾವಲಿಟ್ಟಂತೆ.

ಲೋಕದ ಮಾನವರಿಗೆಲ್ಲ ಶಿವದೀಕ್ಷೆಯನ್ನು ನೀಡಬಾರದು ಎನ್ನುವುದನ್ನು ಬಸವಣ್ಣನವರು ಸುಂದರ ಸಾಮಿತಿಯ ಮೂಲಕ ವಿವರಿಸಿದ್ದಾರೆ.ಕುಂಬಳಕಾಯಿಯು ಬೆಳೆದು ದೊಡ್ಡದಾಗಬೇಕೆಂದರೆ ಅದು ತಾಯಿಬಳ್ಳಿಯಲ್ಲೇ ಇರಬೇಕು.ಕುಂಬಳಕಾಯಿಯನ್ನು ಬೇಗಬೆಳೆಸುತ್ತೇನೆ,ಗಟ್ಟಿ ಮಾಡುತ್ತೇನೆ ಎಂದು ಬಳ್ಳಿಯಲ್ಲಿರುವ ಕುಂಬಳ ಕಾಯಿಗೆ ಕಬ್ಬಿಣ್ಣದ ಪಟ್ಟಿಯನ್ನು ಅಳವಡಿಸಿದರೆ ಅಥವಾ ಕುಂಬಳಕಾಯಿಯನ್ನು ಬಳ್ಳಿಯಿಂದ ಬೇರ್ಪಡಿಸಿ ಕಬ್ಬಿಣ್ಣದ ಪೆಟ್ಟಿಗೆಯಲ್ಲಿಟ್ಟರೆ ಅದು ಎರಡು ದಿನಗಳಲ್ಲೇ ಕೊಳೆತುಹೋಗುತ್ತದಲ್ಲದೆ ಬೆಳೆದು ದೊಡ್ಡದು ಆಗುವುದಿಲ್ಲ,ಗಟ್ಟಿಗೊಳ್ಳುವುದಿಲ್ಲ.ಕುಂಬಳಕಾಯಿ ಬೆಳೆದು ದೊಡ್ಡದಾಗಬೇಕೆಂದರೆ ಅದಕ್ಕೆ ತಾಯಿಬಳ್ಳಿಯ ಆಸರೆ,ಆರೈಕೆಬೇಕು.ಕುಂಬಳ ಬಳ್ಳಿಯು ತಾನು ನೆಲದಲ್ಲಿ ಹರಡಿದ್ದರೂ ದೊಡ್ಡ ದೊಡ್ಡ ಕುಂಬಳಕಾಯಿಗಳನ್ನು ಬೆಳೆಸುತ್ತದೆ ತನ್ನೊಡಲ ಅಂತಃಸತ್ತ್ವದಿಂದ.ಹಾಗೆಯೇ ಗುರುವಾದನು ತನ್ನ ಶಕ್ತಿಯ ಬಲದಿಂದ,ಯೋಗಸಾಮರ್ಥ್ಯದಿಂದ ಜಗತ್ತಿಗೆ ಆದರ್ಶನಾಗುವ,ಲೋಕಕ್ಕೆ ಗುರುವಾಗುವ ಮಹಾನ್ ಶಿಷ್ಯನನ್ನು ಬೆಳೆಸಬೇಕು.ಕುಂಬಳಬಳ್ಳಿಯಿಂದ ದೊಡ್ಡದೊಡ್ಡ ಕಾಯಿಗಳು ಹೊರಬರುವಂತೆ ಸಮರ್ಥಗುರುವಿನಿಂದ ಮಹಾತ್ಮರಾಗುವ,ಮಹಾಪುರುಷರಾಗುವ ಶಿಷ್ಯರುಗಳು ಹೊರಬರುತ್ತಾರೆ.ಕಬ್ಬಿಣವು ಗಟ್ಟಿಯಾದ ಲೋಹವಾಗಿರಬಹುದು,ಅದು ಮನೆ ಮಹಲುಗಳನ್ನು ಕಟ್ಟಲು ಉಪಯುಕ್ತವಾಗಿರಬಹುದು ಆದರೆ ಅದೇ ಕಬ್ಬಿಣ್ಣದ ಕಟ್ಟನ್ನಿಟ್ಟು ಬಳ್ಳಿಯಲ್ಲಿರುವ ಕುಂಬಳಕಾಯಿಯನ್ನು ಬೆಳೆಸಲು ಇಲ್ಲವೆ ಗಟ್ಟಿ ಮಾಡಲು ಸಾಧ್ಯವಿಲ್ಲ.ನಿರ್ಜೀವ ಕಬ್ಬಿಣವು ಜೀವವಿರುವ ಕುಂಬಳಕಾಯಿಯ ಅಂತಶ್ಚೇತನವು ಬಲಗೊಳ್ಳಲು ನೆರವಾಗದು.ಕುಂಬಳಕಾಯಿಗೆ ಕಬ್ಬಿಣದ ಕಟ್ಟನ್ನಿಟ್ಟಂತೆ ಲೋಕದ ಹೀನಮನಸ್ಕರುಗಳಿಗೆ ತ್ರಿಪುಂಡ್ರಧಾರಣೆ ಮಾಡಿಸಿ,ಶಿವಮಂತ್ರೋಪದೇಶ ಮಾಡಿದರೆ ಅವನು ಕೆಟ್ಟುಹೋಗುವನಲ್ಲದೆ ಉದ್ಧಾರವಾಗಲಾರನು.ಕಳ್ಳನಿಗೆ ಸಂಪತ್ತುಳ್ಳ ಮನೆಯನ್ನು ಕಾಯುವ ಜವಾಬ್ದಾರಿಯನ್ನು ಹೊರಿಸಿದಂತೆ ನೀಚಜನರಿಗೆ ಗುರೂಪದೇಶ ಮಾಡುವುದು ಅರ್ಥಹೀನಕಾರ್ಯ.

ಶಿವದೀಕ್ಷೆಯಿಂದ ಶಿಷ್ಯನ ಬಾಳು ಉದ್ಧಾರವಾಗುತ್ತದೆ,ಗುರುವರುಹಿದ ಶಿವಪಥದಿ ನಡೆದು ಶಿಷ್ಯನು ಶಿವಾನುಗ್ರಹಕ್ಕೆ ಪಾತ್ರನಾಗುವನು.ಆದರೆ ಆ ಶಿಷ್ಯನು ಶಿವದೀಕ್ಷೆಗೆ ಅರ್ಹನಾಗಿರಬೇಕು.ಸತ್ತ್ವಯುತವಾದ ಬೀಜವನ್ನು ಫಲವತ್ತಾದ ಭೂಮಿಯಲ್ಲಿ ಬಿತ್ತಿದರೆ ಅದು ಫಲಕೊಡುತ್ತದೆ.ಬೀಜವು ಸತ್ತ್ವಯುತವಾಗಿದೆ ಎಂದು ಬಂಡೆಯಲ್ಲಿ ಅಥವಾ ಬಂಜರು ಭೂಮಿಯಲ್ಲಿ ಚೆಲ್ಲಿದರೆ ಫಲಬರಬಹುದೆ?ಗುರುವು ಎಷ್ಟೇ ಸಮರ್ಥನಿದ್ದರೂ ಅಸಮರ್ಥ ಇಲ್ಲವೆ ಅಯೋಗ್ಯಶಿಷ್ಯನಲ್ಲಿ ಅವನ ಶಿವಯೋಗದ ಶಕ್ತಿ ಪ್ರತಿಫಲನಗೊಳ್ಳದು.ಶಿವಯೋಗಸಂಪತ್ತು ಮಹಾಸಂಪತ್ತು ಆಗಿದ್ದು ಸತ್ಪುರುಷರಿಗೆ ಮಾತ್ರ ಅದನ್ನು ಕಾಯುವ ಜವಾಬ್ದಾರಿಯನ್ನು ನೀಡಬೇಕು.ಕಳ್ಳನನ್ನು ನಂಬಿ ಮನೆಯ ಕೀಲಿಯನ್ನಿತ್ತರೆ ಅವನು ಸಮಯಸಾಧಿಸಿ ಮನೆಯ ಆಸ್ತಿಯನ್ನು ದೋಚುವನಲ್ಲದೆ ಮನೆಯೊಡೆಯನು ನನ್ನಲ್ಲಿ ವಿಶ್ವಾಸವಿರಿಸಿ ಬೀಗದ ಕೈ ಕೊಟ್ಟಿದ್ದಾನೆ ಎಂದು ಅವನು ಮನೆಯೊಡೆಯನ ಸಂಪತ್ತನ್ನು ಸಂರಕ್ಷಿಸಲಾರ.ಹೀನಮನಸ್ಸಿನವರಿಗೆ ಶಿವದೀಕ್ಷೆಯನ್ನು ನೀಡುವುದು ಸಂಪತ್ತನ್ನುಳ್ಳ ಮನುಷ್ಯ ಕಳ್ಳನಿಗೆ ತನ್ನ ಮನೆಯ ಕೀಲಿಯನ್ನು ಕೊಟ್ಟಂತೆ ಅನಾಹುತಕ್ಕೆ ಮೂಲ.ತನ್ನಲ್ಲಿ ನಿಜನಿಷ್ಠೆಯನ್ನುಳ್ಳ ಶಿಷ್ಯನಿಗೆ ಶಿವದೀಕ್ಷೆಯನ್ನು ನೀಡಬೇಕಲ್ಲದೆ‌ ನಿಷ್ಠೆನಟಿಸುವ ಕಪಟಿಗಳಿಗೆ ಶಿವದೀಕ್ಷೆಯನ್ನು ನೀಡಬಾರದು.ಅಳಿಮನದವನು ಎಂದರೆ ತುಚ್ಛಮನಸ್ಕ,ನಿಜನಿಷ್ಠೆಯಿಲ್ಲದವನು ಎಂದರ್ಥ.’ಅಳಿ ‘ಎನ್ನುವ ಶಬ್ದಕ್ಕೆ ದುಂಬಿ ಮತ್ತು ನಾಶ ಎನ್ನುವ ಎರಡು ಅರ್ಥಗಳಿದ್ದು ಎರಡೂ ಕೆಟ್ಟದ್ದನ್ನೇ ಸಂಕೇತಿಸುತ್ತವೆ.ದುಂಬಿಯು ಒಂದೇ ಹೂವಿನ ಮಕರಂದದಲ್ಲಿ ಸಂತೃಪ್ತಿಯನ್ನು ಹೊಂದುವುದಿಲ್ಲ.ಒಂದು ಪುಷ್ಪದ ಸೌರಭವನ್ನು ಹೀರಿದ ದುಂಬಿಯು ಮತ್ತೊಂದು, ಮಗದೊಂದು ಹೀಗೆ ನೂರಾರು ಪುಷ್ಪಗಳ ಮಕರಂದವನ್ನು ಹೀರುತ್ತಲೇ ಹೂವಿನಿಂದ ಹೂವಿಗೆ ಹಾರುತ್ತಿರುತ್ತದೆ.ದುಂಬಿಗೆ ಒಂದು ಹೂವಿನಲ್ಲಿ ಪ್ರೀತಿಯಿಲ್ಲ,ನಿಷ್ಠೆಯಿಲ್ಲ.ಹಾಗೆಯೇ ನೀಚ ಜನರಿಗೆ ಬೋಧಿಸಿದರೆ ಅವರು ತಮ್ಮ ಗುರುವಿನಲ್ಲಿ ಗಟ್ಟಿನಿಷ್ಠೆಯನ್ನಿಡದೆ ಆ ಗುರು,ಈ ಗುರು ಎಂದು ಲೋಕದ ಗುಗ್ಗುರುಗಳ ಬಳಿ ತಿರುಗುತ್ತಿರುತ್ತಾರೆ,ಅವರ ಮಾತು ಕೇಳುತ್ತಿರುತ್ತಾರೆ,ಅವರಿಂದಲೂ ಉಪದೇಶ ಪಡೆಯಲು ಬಯಸುತ್ತಾರೆ.’ಅಳಿಮನ’ ಎಂದರೆ ಕೆಟ್ಟಮನಸ್ಸು.ದುರ್ಬಲ ಮನಸ್ಕರು,ಕೆಟ್ಟ ಮನಸ್ಕರು ಆದವರನ್ನು ಶಿಷ್ಯರನ್ನಾಗಿ ಹೊಂದಿದರೆ ಅವರಿಂದ ಗುರುವಾದವನಿಗೆ ಕೆಟ್ಟಹೆಸರು ಬರುತ್ತದೆ.ಕೆಟ್ಟಮನುಷ್ಯರು ಇತ್ತ ಗುರುವಿನಲ್ಲಿ ನಿಷ್ಠೆಯನ್ನಿಡರು,ಅತ್ತ ಶಿವನಲ್ಲಿ ಭಕ್ತಿಯನ್ನಾಚರಿಸರು.ಲೋಕದ ವ್ಯವಹಾರದಲ್ಲೇ,ಹೀನ ವೃತ್ತಿ ಪ್ರವೃತ್ತಿಗಳಲ್ಲಿ ಸಿಕ್ಕಿ ಬಳಲುವವರಿಗೆ ಸದ್ಗತಿ ದೊರೆಯದು.ಆದ್ದರಿಂದ ಗುರುವಾದನು ಯೋಗ್ಯನೆನಿಸುವ ಶಿಷ್ಯನಿಗೆ ಮಾತ್ರ ಉಪದೇಶ ನೀಡಬೇಕು.ಯಾರಲ್ಲಿ ತನ್ನ ಯೋಗಶಕ್ತಿಯು ಬೆಳೆದು ಲೋಕಕ್ಕೆ ಬೆಳಕಾಗಬಲ್ಲುದೋ ಅಂತಹ ಸಾಧಕ ಶಿಷ್ಯನಿಗೆ ಮಾತ್ರ ಶಿವದೀಕ್ಷೆಯನ್ನು ಅನುಗ್ರಹಿಸಬೇಕು ಗುರುವಾದವನು.ಶಿಷ್ಯನು ನಾನು ಇವರಿಂದ ಶಿವದೀಕ್ಷೆ ಪಡೆದು ಉದ್ಧಾರವಾಗಬಹುದೆ ಎಂದು ಗುರುವನ್ನು ಪರೀಕ್ಷಿಸಬೇಕು ; ಗುರುವು ಈತನಲ್ಲಿ ನನ್ನ ಶಿವಯೋಗದ ಬಲವು ಫಲನೀಡಬಹುದೆ ಎಂದು ಶಿಷ್ಯನನ್ನು ಪರೀಕ್ಷಿಸಬೇಕು.ಹೀಗೆ ಗುರು ಶಿಷ್ಯರು ಪರಸ್ಪರ ಪರೀಕ್ಷಿಸಿಕೊಂಡೇ ಮುನ್ನಡೆಯಬೇಕು,ಮುಂದಡಿಯನ್ನಿಡಬೇಕು.

೨೩.೦೧.೨೦೨೪

About The Author