ಶಿವನೊಲುಮೆಯಿಂದ ಸಕಲವೂ ಸಾಧ್ಯ

ಬಸವೋಪನಿಷತ್ತು ೧೯ : ಶಿವನೊಲುಮೆಯಿಂದ ಸಕಲವೂ ಸಾಧ್ಯ :

ಮುಕ್ಕಣ್ಣ ಕರಿಗಾರ

ನೀನೊಲಿದರೆ ಕೊರಡು ಕೊನರುವುದಯ್ಯಾ ;
ನೀನೊಲಿದರೆ ಬರಡು ಹಯನಹುದಯ್ಯಾ ;
ನೀನೊಲಿದರೆ ವಿಷವೆ ಅಮೃತವಹುದಯ್ಯಾ ;
ನೀನೊಲಿದರೆ ಸಕಲ ಪಡಿಪದಾರ್ಥ
ಇದಿರಲಿರ್ಪವು,
ಕೂಡಲ ಸಂಗಮದೇವಾ.

ಶಿವನೊಲುಮೆಯಿಂದ ಸಕಲವೂ ಸಾಧ್ಯ ಎನ್ನುವ ಬಸವಣ್ಣನವರು ಭಕ್ತರಾದವರು ಶಿವನೊಲುಮೆಯನ್ನು ಸಂಪಾದಿಸಲು ಪ್ರಯತ್ನಿಸಬೇಕು ಎಂದಿದ್ದಾರೆ ಈ ವಚನದಲ್ಲಿ.ಶಿವನು ಒಲಿದರೆ ಒಣಗಿದ ಕಟ್ಟಿಗೆಯ ಕೊರಡು ಚಿಗುರುತ್ತದೆ.ಶಿವನು ಒಲಿದರೆ ಬರಡು ಆಕಳು ಕರುಹಾಕಿ ಹಾಲನ್ನೀಯುತ್ತದೆ.ಶಿವನು ಒಲಿದರೆ ವಿಷವು ಅಮೃತವಾಗಿ ಪರಿವರ್ತನೆಯಾಗುತ್ತದೆ.ಶಿವನು ಒಲಿದರೆ ಭಕ್ತನು ಬಯಸುವ ಎಲ್ಲ ಪಡಿಪದಾರ್ಥಗಳು ಅವನ ಮನೆಯಲ್ಲಿರುತ್ತವೆ.ಆದುದರಿಂದ ಭಕ್ತರು ಶಿವನೊಲುಮೆಗೆ ಪಾತ್ರರಾಗಬೇಕು.

ಬಸವಣ್ಣನವರು ಶಿವನ ಅನುಗ್ರಹಕ್ಕೆ ಪಾತ್ರರಾದ ಶಿವಭಕ್ತರಿಗೆ,ಶಿವಶರಣರಿಗೆ ಈ ಪ್ರಪಂಚದಲ್ಲಿ ಅಸಾಧ್ಯವಾದದ್ದು ಯಾವುದು ಇಲ್ಲ ಎನ್ನುತ್ತಾರೆ.ಕೊರಡು ಕೊನರುವುದು,ಗೊಡ್ಡು ಆಕಳು ಹಾಲನ್ನೀಯುವುದು,ವಿಷವು ಅಮೃತವಾಗುವುದು ಇವೆಲ್ಲ ಅಸಂಭವನೀಯ ಸಂಗತಿಗಳು.ಆದರೆ ಪ್ರಕೃತಿಪತಿಯಾದ ಶಿವನ ಅನುಗ್ರಹದಿಂದ ಅಸಂಭವಗಳೆಲ್ಲ ಸಂಭವಿಸುತ್ತವೆ,ಅಘಟಿತಗಳೆಲ್ಲ ಘಟಿಸುತ್ತವೆ.ಶಿವನ ಅನುಗ್ರಹದಿಂದ ಅಸಾಧ್ಯವು ಸುಸಾಧ್ಯವಾಗುತ್ತದೆ.ಶಿವನು ಪ್ರಕೃತಿನಿಯಾಮಕನಾದ ಪರಮೇಶ್ವರನಿರುವುದರಿಂದ,ವಿಶ್ವನಿಯಾಮಕನಾದ ವಿಶ್ವೇಶ್ವರನಿರುವುದರಿಂದ ಶಿವನ ದೃಷ್ಟಿ ಬಿದ್ದೊಡನೆ ಜಡವು ಚೇನವಾಗುತ್ತದೆ,ಗೊಡ್ಡು ಹಯನಾಗುತ್ತದೆ,ಭಯಂಕರ ವಿಷವೂ ಅಮೃತವಾಗಿ ಪರಿವರ್ತನೆ ಹೊಂದಿ ಭಕ್ತನನ್ನು ಸಂರಕ್ಷಿಸುತ್ತದೆ.ಭಕ್ತರು ಅವರಿವರನ್ನು ಬೇಡದೆ ಏನನ್ನಾದರೂ ಬೇಡುವಂತಿದ್ದರೆ ಶಿವನನ್ನೇ ಬೇಡಬೇಕು.ಮನೆಯಲ್ಲಿ ಬಡತನ,ದಾರಿದ್ರ್ಯ ಇದ್ದವರು ಶಿವನನ್ನು ಬೇಡಿದರೆ ಅವರ ಮನೆಯಲ್ಲಿ ಲಕ್ಷ್ಮೀಯು ತಾಂಡವವಾಡುತ್ತಾಳೆ,ಅನ್ನಪೂರ್ಣೆಯು ನೆಲೆನಿಲ್ಲುತ್ತಾಳೆ.ಶಿವಭಕ್ತನು ಬಯಸಿದ ಎಲ್ಲವೂ ಅವನ ಕಣ್ಣೆದುರಿನಲ್ಲಿರುತ್ತದೆ.ಶಿವನು ಭಕ್ತವತ್ಸಲನಾಗಿದ್ದು ತನ್ನ ಭಕ್ತರ ಬದುಕಿನ ಹೊಣೆಯನ್ನು ಸ್ವಯಂ ತಾನೇ ಹೊತ್ತು ನಿರ್ವಹಿಸುವುದರಿಂದ ಶಿವಭಕ್ತರು ನಿಶ್ಚಿಂತರಾಗಿ ಶಿವನ ಧ್ಯಾನ ಪೂಜೆ ಸೇವೆಯಲ್ಲಿ ಇರಬೇಕು.

ಲೋಕದ ದೈವಗಳನ್ನು ಬೇಡುವ ಬದಲು,ನರರನ್ನು ಬೇಡುವ ಬದಲು ಪರಮಾತ್ಮನಾದ ಶಿವನನ್ನು ಬೇಡುವುದೇ ಶಿವಭಕ್ತರಿಗೆ ಶ್ರೇಯಸ್ಕರವು.ಶಿವನಲ್ಲಿ ದೃಢಭಕ್ತಿಯನ್ನಿಟ್ಟು ನಡೆಯಬೇಕು; ಮೃಡಮಹಾದೇವನೆ ಶರಣು ಎನ್ನಬೇಕು.ಶಿವನ ಒಲುಮೆಯಿಂದ ಅಘಟಿತಗಳು ಘಟಿಸುತ್ತವೆ,ಅಸಂಭವವು ಸಂಭವಿಸುತ್ತದೆ ಎನ್ನುವ ಬಸವಣ್ಣನವರು ‘ ನೀನೊಲಿದರೆ’ ಎನ್ನುವ ಒಂದು ನಿರ್ಬಂಧನೆಯನ್ನು ಹಾಕಿದ್ದಾರೆ ಎನ್ನುವುದನ್ನು ಗಮನಿಸಬೇಕು.ಲೋಕಕ್ಕೆ ಅಚ್ಚರಿಯಾಗುವ ಈ ಸಂಗತಿಗಳು ಘಟಿಸಬೇಕಾದರೆ ಶಿವನು ತನ್ನ ಭಕ್ತನನ್ನು ಒಲಿಯಬೇಕು ಅಂದರೆ ತನ್ನ ‘ ಅನುಗ್ರಹದೃಷ್ಟಿ’ ಯನ್ನು ಭಕ್ತನತ್ತ ಬೀರಬೇಕು.ಮುಗ್ಧ ಮನಸ್ಸಿನಿಂದ,ಶುದ್ಧಭಾವದಿಂದ ಶಿವನನ್ನು ನಂಬಿ ಪೂಜಿಸಿದರೆ ಮಾತ್ರ ಶಿವನ ಅನುಗ್ರಹಕ್ಕೆ ಪಾತ್ರರಾಗಬಹುದು.ಪ್ರತಿಷ್ಠೆಯ ಪೂಜೆ- ಸೇವೆಗಳು,ಆಡಂಬರದ ಭಕ್ತಿಯಿಂದ ಶಿವನನ್ನು ಒಲಿಸಲು ಸಾಧ್ಯವಿಲ್ಲ.ಸರಳ,ನಿರಾಡಂಬರ ಬಾಳ್ವೆಯನ್ನು ಬದುಕುತ್ತ,ಸರ್ವರಲ್ಲಿಯೂ ಶಿವನನ್ನೇ ಕಾಣುತ್ತ,ಸರ್ವವೂ ಶಿವಮಯವೆನ್ನುತ್ತ,ಉಣುವುದು- ಉಡುವುದು,ಕೊಡುವುದು-ಪಡೆಯುವುದು ಎಲ್ಲವೂ ಶಿವನಕರುಣೆಯೇ ಎನ್ನುತ್ತ ಶಿವಾರ್ಪಿತವಾದ ಬದುಕನ್ನು ಬಾಳೆ ಶಿವನು ಅಂತಹ ಸದ್ಭಕ್ತನನ್ನು ಒಲಿಯುತ್ತಾನೆ,ಅವನು ಕೇಳಿದ ಎಲ್ಲವನ್ನೂ ಕೊಡುತ್ತಾನೆ.ಒಡಲಿಲ್ಲದ ಶಿವನು ಒಡಲುಳ್ಳ ತನ್ನ ಭಕ್ತರ ಮೂಲಕ ತನ್ನ ವಿಶ್ವೋದ್ಧಾರದ ಲೀಲೆಯನ್ನಾಡುತ್ತಾನೆ.

೨೩.೦೧.೨೦೨೪

About The Author