ಶೈವಧರ್ಮವನ್ನುದ್ಧರಿಸಬಂದ ಶಿವವಿಭೂತಿಗಳು — ಶ್ರೀ ಬಸವಣ್ಣ

ಕರ್ನಾಟಕದ ಸಾಂಸ್ಕೃತಿಕ ನಾಯಕರು — ಶ್ರೀ ಬಸವಣ್ಣ

(೧೯.೦೧.೨೦೨೪ ರ ಮೊದಲ ಅಧ್ಯಾಯದಿಂದ ಮುಂದುವರೆದಿದೆ )

ಅಧ್ಯಾಯ ೦೨

ಶೈವಧರ್ಮವನ್ನುದ್ಧರಿಸಬಂದ ಶಿವವಿಭೂತಿಗಳು — ಶ್ರೀ ಬಸವಣ್ಣ

ಮುಕ್ಕಣ್ಣ ಕರಿಗಾರ

ಪರಶಿವನು ವಿಶ್ವದ ಉತ್ಪತ್ತಿ ಸ್ಥಿತಿ ಲಯಗಳಿಗೆ ಕಾರಣಕರ್ತನಾಗಿಯೂ ವಿಶ್ವದ ಆಗು ಚೇಗುಗಳಿಗೆ ಒಳಗಾಗದ ನಿರ್ಲಿಪ್ತನು,ನಿರಂಜನನು.ಹುಟ್ಟು ಸಾವುಗಳಿಲ್ಲದ ಪರಶಿವನು ತನ್ನ ಗಣೇಶ್ವರರುಗಳ ಮೂಲಕ ಜಗದ ವ್ಯವಹಾರವು ನಡೆಯುವ ಏರ್ಪಾಟು ಮಾಡಿರುವನು.ಜಗತ್ತಿನಲ್ಲಿ ಧರ್ಮವು ದಾರಿ ತಪ್ಪಿದಾಗ,ಜನತೆ ಧರ್ಮ ವಿಮುಖರಾಗಿ ನಡೆಯುತ್ತಿರುವಾಗ ಜಗವನ್ನು ಉದ್ಧರಿಸಿ,ಧರ್ಮಮಾರ್ಗದಲ್ಲಿ ಪ್ರವರ್ತಿಸುವಂತೆ ಮಾಡಲು ತನ್ನ ಗಣೇಶ್ವರರಲ್ಲಿ ಒಬ್ಬರನ್ನು ಭುವಿಗೆ ಕಳುಹಿಸಿ ಅವರ ಮೂಲಕ ಮರ್ತ್ಯವನ್ನು ಉದ್ಧರಿಸುವನು.ಶಿವಧರ್ಮಕ್ಕೆ ಆಪತ್ತು ಬಂದೊದಗಿದಾಗಲೆಲ್ಲ ಶಿವಗಣೇಶ್ವರರು ಧರೆಯಲ್ಲಿ ಅವತರಿಸಿ ಶಿವಧರ್ಮವನ್ನು ಎತ್ತಿಹಿಡಿದು ಶಿವಲೀಲೆ ಮೆರೆದಿದ್ದಾರೆ.

ಕಾಲಕಾಲಕ್ಕೆ ಋಷಿ ಮಹರ್ಷಿಗಳುದಿಸಿ ಶಿವಧರ್ಮವನ್ನು ಎತ್ತಿಹಿಡಿದ ಭರತಭೂಮಿಯಲ್ಲಿ ಆದಿಶಂಕರಾಚಾರ್ಯರು ಇತಿಹಾಸವು ಗುರುತಿಸಿದ ಶಿವವಿಭೂತಿಗಳು,ಶೈವಧರ್ಮಸ್ಥಾಪನಾಚಾರ್ಯರು.ಬೌದ್ಧಧರ್ಮದ ಹಾವಳಿಯು ಅತಿಯಾಗಿ ದೇಶದ ಮೂಲಧರ್ಮವಾದ ಶೈವಧರ್ಮದ ಕೀರ್ತಿಗೆ ಚ್ಯುತಿಯುಂಟಾದಾಗ ಶಂಕರಾಚಾರ್ಯರು ಅವತರಿಸಿ ಶಿವಧರ್ಮವನ್ನು,ದೇಶದ ಮೂಲ ಸಂಸ್ಕೃತಿಯಾದ ಶೈವ ಸಂಸ್ಕೃತಿಯನ್ನು ಎತ್ತಿಹಿಡಿದರು.

ಕರ್ನಾಟಕದಲ್ಲಿ ಜೈನಧರ್ಮದ ಹಾವಳಿಯು ವಿಪರೀತವಾದಾಗ ಬಸವಣ್ಣನವರು ಅವತರಿಸಿ ಜೈನಧರ್ಮಿಯರ ಉಪಟಳ- ಉಪದ್ರವಗಳಿಂದ ಶಿವೋಪಾಸಕ ಜನಸಮೂಹವನ್ನು ಸಂರಕ್ಷಿಸಿ,ಶಿವ ಧರ್ಮವನ್ನು ಎತ್ತಿಹಿಡಿಯುತ್ತಾರೆ,ಶೈವಸಂಸ್ಕೃತಿಯು ಮತ್ತೆ ಪ್ರವರ್ಧಮಾನಕ್ಕೆ ಬರಲು ಕಾರಣರಾಗುತ್ತಾರೆ.ಕಲ್ಯಾಣದ ಚಾಲುಕ್ಯರು ಮತ್ತು ಕಲುಚೂರಿ ಚಾಲುಕ್ಯರುಗಳು ಜೈನಮತಾವಲಂಬಿಗಳಾದ ಅರಸುಮನೆತನಗಳಾಗಿದ್ದು ತಮ್ಮ ಧರ್ಮದ ಪೋಷಣೆ ಮತ್ತು ಪ್ರತಿಷ್ಠೆಗಾಗಿ ಶೈವಧರ್ಮಕ್ಕೆ ಪೆಟ್ಟುಕೊಡುತ್ತಾರೆ.ಜೈನ ಮುನಿಗಳು ಶಿವಾಲಯಗಳನ್ನು ಬಸದಿಗಳನ್ನಾಗಿ ಪರಿವರ್ತಿಸಿಕೊಂಡು ಶಿವನನ್ನು,ಶಿವಭಕ್ತರನ್ನು ನಿಂದಿಸುತ್ತಾರೆ.ಶೈವಧರ್ಮೀಯರನ್ನು ಜೈನಮತಕ್ಕೆ ಮತಾಂತರಗೊಳಿಸುವ ಕಾರ್ಯ ಎಗ್ಗಿಲ್ಲದೆ ನಡೆಯುತ್ತಿರುತ್ತದೆ.ಕನ್ನಡದ ಆದಿಕವಿ ಪಂಪನ ಪೂರ್ವಿಕರು ಶಿವೋಪಾಸಕರಾಗಿದ್ದ ಶೈವಧರ್ಮೀಯರು.ಪಂಪನ ತಂದೆ ಶೈವ ಧರ್ಮವನ್ನು ತೊರೆದು ಜೈನಧರ್ಮವನ್ನು ಸ್ವೀಕರಿಸುತ್ತಾನೆ.ಜೈನ ಅರಸರುಗಳು ಮತಾಂತರಕ್ಕೆ ಪ್ರೋತ್ಸಾಹ ನೀಡುತ್ತಿದ್ದುದಕ್ಕೆ ಪಂಪನ ಪೂರ್ವಿಕರೆ ಉತ್ತಮ ನಿದರ್ಶನ.ಕನ್ನಡದ ಮೊದಲವಚನಕಾರ ಜೇಡರ ದಾಸಿಮಯ್ಯನು ಜೈನರ ಹಾವಳಿಯಿಂದ ಮತಾಂತರಗೊಂಡ ಶಿವಭಕ್ತರನ್ನು ತನ್ನ ಶಿವಯೋಗಶಕ್ತಿಯ ಬಲದಿಂದ ಪುನಃ ಅವರನ್ನು ಶೈವಧರ್ಮೀಯರನ್ನಾಗಿಸುತ್ತಾನೆ.ಬಸವಪೂರ್ವದ ಕಲ್ಯಾಣಿ ಚಾಲುಕ್ಯರು ಮತ್ತು ಕಲಚೂರಿ ಚಾಲುಕ್ಯರ ಮತಾಂತರ ಕ್ರಿಯೆಯನ್ನು ವಿರೋಧಿಸಿದ್ದಾರೆ ಬಸವಪೂರ್ವದಲ್ಲಿದ್ದ ವಚನಕಾರರು.ಧರೆಯಲ್ಲಿ ಶಿವಭಕ್ತಿಯನ್ನು ಬಿತ್ತಿಬೆಳೆಯುವ ಕಾರಣದಿಂದ ಬಸವಣ್ಣನವರ ಅವತರಣವಾಗುತ್ತದೆ.ಶಿವಸಂಸ್ಕೃತಿಯ ಗಂಧಗಾಳಿಯೇ ಸೋಂಕದ ಕೆಲವರು ಬಸವಣ್ಣನವರ‌ ಕುರಿತು ಸ್ವಕಪೋಲಕಲ್ಪಿತ ಸಂಗತಿಗಳನ್ನು ಪ್ರಸ್ತಾಪಿಸುತ್ತಾರೆ.ವಚನಸಾಹಿತ್ಯದ ಆಳ ಅಧ್ಯಯನವಿರದ,ಶರಣಚಳುವಳಿಯ ನೆಲೆ ಹಿನ್ನಲೆಯನ್ನರಿಯದ ಅಷ್ಟಿಷ್ಟು ವಚನಸಾಹಿತ್ಯವನ್ನು ಓದಿಕೊಂಡ ಅರೆಜ್ಞಾನಿಗಳು ಬಸವಣ್ಣನವರ ವಿಶ್ವಪ್ರಸಿದ್ಧ,ಕಾಲಾತೀತ ಶಿವ ವಿಭೂತಿ ವ್ಯಕ್ತಿತ್ವಕ್ಕೆ ಅಪಚಾರ ಎಸಗುತ್ತಿದ್ದಾರೆ.ಬಸವಣ್ಣನವರ ಆಗಮನಪೂರ್ವದಲ್ಲಿ ಕರ್ನಾಟಕದಲ್ಲಿ ಕಾಪಾಲಿಕ- ಕಾಳಾಮುಖ ಶೈವಪಂಥಗಳಿದ್ದವು,ಕಾಶ್ಮೀರ ಶೈವವೂ ಜನಾನುರಾಗಿ ಶೈವಪಂಥವಾಗಿತ್ತು.ಬಸವಣ್ಣನವರು ಶಿವಧರ್ಮವನ್ನು ಉದ್ಧರಿಸುತ್ತಲೇ ಶೈವಧರ್ಮದಲ್ಲಿ ಸೇರಿದ್ದ ಭೀಭತ್ಸ ಆಚರಣೆಗಳನ್ನು ಕಿತ್ತೆಸೆದು ಅದನ್ನು ಶುದ್ಧೀಕರಿಸಿ ವೀರಶೈವಮತವನ್ನಾಗಿಸುತ್ತಾರೆ.ಬಸವಣ್ಣನವರ ಪೂರ್ವದಲ್ಲಿ ವೀರಶೈವ ಮತವು ಕೇವಲ ಒಂದು ಆಗಮೋಕ್ತಮತವಾಗಿ ತಾಳೆಯೋಲೆ ಗ್ರಂಥಗಳಲ್ಲಿ ಅಡಗಿಸಿಟ್ಟ ಮತವಾಗಿತ್ತೇ ಹೊರತು ಜನಕೋಟಿಯ ಅನುಷ್ಠಾನದ ಮತವಾಗಿರಲಿಲ್ಲ.ಬಸವಣ್ಣನವರಿಂದಾಗಿ ವೀರಶೈವಮತವು ವಿಶೇಷಮನ್ನಣೆಯನ್ನು ಪಡೆಯಿತು.ಇಷ್ಟಲಿಂಗದ ಪರಿಕಲ್ಪನೆಯನ್ನು ಸ್ಪಷ್ಟಗೊಳಿಸಿ ಅದನ್ನು ಸರ್ವರ ಕರಸ್ಥಳಗಳಿಗೆ ನೀಡುವ ಮೂಲಕ ಇಷ್ಟಲಿಂಗೋಪಾಸನೆಯನ್ನು ಸಾರ್ವತ್ರೀಕರಣಗೊಳಿಸಿದವರು ಬಸವಣ್ಣನವರು.ಬಸವಣ್ಣನವರ ಬದುಕು ಶಿವಾರ್ಪಿತವಾದ ಬದುಕಾಗಿತ್ತು.ಕೂಡಲಸಂಗಮದೇವನು ಬಸವಣ್ಣನವರಿಗೆ ಸಾಕಾರಶಿವನಾಗಿದ್ದರೆ ಇಷ್ಟಲಿಂಗದ ಶಿವನು ನಿರಾಕಾರ ಪರಶಿವನಾಗಿದ್ದ.

ಬಸವಣ್ಣನವರು ಸ್ವತಃ ತಾವೇ ಹೇಳಿದ್ದಾರೆ ತಾವು ಶಿವಭಕ್ತರಾಗಿದ್ದು ಶಿವಭಕ್ತಿ,ಶಿವಧರ್ಮವನ್ನು ಲೋಕದಲ್ಲಿ ಪ್ರತಿಷ್ಠಾಪಿಸಲು ಕಾಲಕಾಲಕ್ಕೆ ಅವತರಿಸುವ ತಮ್ಮ ಶಿವಭಕ್ತ್ಯಾಧಿಕ್ಯವನ್ನು.ಬಸವಣ್ಣನವರನ್ನು ಹತ್ತಿರದಿಂದ ಕಂಡು ಬಲ್ಲ ಚೆನ್ನಬಸವಣ್ಣ,ಅಲ್ಲಮಪ್ರಭುದೇವರು ಮತ್ತು ಸಿದ್ಧರಾಮರು ಬಸವಣ್ಣನವರು ಶಿವಧರ್ಮವನ್ನು ಎತ್ತಿಹಿಡಿಯಲೆಂದೇ ಮರ್ತ್ಯದಲ್ಲಿ ಅವತರಿಸಿದ ಶಿವಗಣೇಶ್ವರರು ಎಂಬುದನ್ನು ಒತ್ತುಕೊಟ್ಟು ಹೇಳಿದ್ದಾರೆ ಅವರ ವಚನಗಳಲ್ಲಿ.ಬಸವಣ್ಣನವರು ತಮ್ಮನ್ನು ತಾವು ಶಿವಭಕ್ತರೆಂದು ಕರೆದುಕೊಂಡು,ಶಿವಧರ್ಮವನ್ನು ಎತ್ತಿಹಿಡಿಯಲು ಯುಗಯುಗದಲ್ಲಿ ಅವತರಿಸುತ್ತೇನೆ ಎಂದು ತಮ್ಮ ಏಳು ಭವಾವಳಿಗಳನ್ನು ವಿವರಿಸಿದ್ದಾರೆ.

ಅಯ್ಯಾ,ಏಳೇಳು ಜನ್ಮದಲ್ಲಿ ಶಿವಭಕ್ತನಾಗಿ
ಬಾರದಿರ್ದೊಡೆ ನಿಮ್ಮಾಣೆ,ನಿಮ್ಮ ಪ್ರಮಥರಾಣೆ !
ನಿಮ್ಮ ಪ್ರಸಾದಕ್ಕಲ್ಲದೆ ಬಾಯ್ದೆರೆಯೆನಯ್ಯಾ.
ಪ್ರಥಮಭವಾಂತರದಲ್ಲಿ ಶಿಲಾದನೆಂಬ
ಗಣೇಶ್ವರನ ಮಾಡಿ ಹೆಸರಿಟ್ಟು ಕರೆದು
ನಿಮ್ಮ ಭೃತ್ಯನ ಮಾಡಿಯೆನ್ನನಿರಿಸಿಕೊಂಡಿರ್ದಿರಯ್ಯಾ.
ಎರಡನೆಯ ಭವಾಂತರದಲ್ಲಿ ಸ್ಕಂದನೆಂಬ
ಗಣೇಶ್ವರನ ಮಾಡಿ ಹೆಸರಿಟ್ಟು ಕರೆದು
ನಿಮ್ಮ ಕಾರುಣ್ಯವ ಮಾಡಿರಿಸಿಕೊಂಡಿರ್ದಿರಯ್ಯಾ.
ಮೂರನೆಯ ಭವಾಂತರದಲ್ಲಿ ನೀಲಲೋಹಿತನೆಂಬ
ಗಣೇಶ್ವರನ ಮಾಡಿ ಹೆಸರಿಟ್ಟು ಕರೆದು
ನಿಮ್ಮ ಲೀಲಾವಿನೋದದಿಂದಿರಿಸಿಕೊಂಡಿರ್ದಿರಯ್ಯಾ.
ನಾಲ್ಕನೆಯ ಭವಾಂತರದಲ್ಲಿ ಮನೊಹರನೆಂಬ
ಗಣೇಶ್ವರನ ಮಾಡಿ ಹೆಸರಿಟ್ಟು ಕರೆದು
ನಿಮ್ಮ ಮನಃಪ್ರೇರಕನಾಗಲೆಂದಿರಿಸಿಕೊಂಡಿರ್ದಿರಯ್ಯಾ.
ಅಯ್ದನೆಯ ಭವಾಂತರದಲ್ಲಿ ಕಾಲಲೋಚನನೆಂಬ
ಗಣೇಶ್ವರನ ಮಾಡಿ ಹೆಸರಿಟ್ಟು ಕರೆದು
ಸರ್ವಕಾಲ ಸಂಹಾರವ ಮಾಡಿಸುತ್ತಿರ್ದಿರಯ್ಯಾ.
ಆರನೆಯ ಭವಾಂತರದಲ್ಲಿ ವೃಷಭನೆಂಬ
ಗಣೇಶ್ವರನ ಮಾಡಿ ಹೆಸರಿಟ್ಟು ಕರೆದು
ನಿಮಗೇರಲು ವಾಹನವಾಗಲೆಂದಿರಿಸಿಕೊಂಡಿರ್ದಿರಯ್ಯಾ.
ಏಳನೆಯ ಭವಾಂತರದಲ್ಲಿ ಬಸವನೆಂಬ
ಗಣೇಶ್ವರನ ಮಾಡಿ ಹೆಸರಿಟ್ಟು ಕರೆದು
ನಿಮ್ಮೊಕ್ಕುದ ಮಿಕ್ಕುದಕ್ಕೆ
ಯೋಗ್ಯನಾಗಲೆಂದಿರಿಸಿಕೊಂಡಿರ್ದಿರಯ್ಯಾ.
ಇದು ಕಾರಣ,ಕೂಡಲ ಸಂಗಮದೇವಾ
ನೀವು ಬರಿಸಿದ ಭವಾಂತರದಲ್ಲಿ ನಾನು ಬರುತಿರ್ದೆನಯ್ಯಾ.

ಬಸವಣ್ಣನವರ ಬಗ್ಗೆ ಇಲ್ಲಸಲ್ಲದ್ದನ್ನು ಗಳಹುವ ಮಂದಿ ಬಸವಣ್ಣನವರ ಈ ವಚನ ಮತ್ತು ಇಂತಹದೆ ಅರ್ಥವನ್ನು ಪ್ರಕಟಿಸುವ ಅವರು ಇನ್ನು ಎರಡು ವಚನಗಳನ್ನು ಓದಿ,ಅರ್ಥೈಸಿಕೊಳ್ಳಬೇಕು.ಕೆಲವು ಜನ ವಿಪರೀತಮತಿಗಳು ನಾವು ‘ ಶಿವನು ವೈದಿಕರ ದೇವರಾದ್ದರಿಂದ ನಾವು ಶಿವನನ್ನು ಒಪ್ಪುವುದಿಲ್ಲ’ ಎಂದು ಕರ್ಕಶಧ್ವನಿ ತೆಗೆಯುತ್ತಾರೆ.ಪಾಪ! ಇಂತಹ ಅಜ್ಞಾನಿ ಮಹಾನುಭಾವರುಗಳು ಬಸವಣ್ಣನವರೇ ತಮ್ಮನ್ನು ತಾವು ಶಿವಭಕ್ತರು ಎಂದು ಕರೆದುಕೊಂಡಿದ್ದಾರೆ,ಶಿವನ ಆಣತಿಯಂತೆ ಭವದಲ್ಲಿ ಅವತರಿಸಿ ಬರುತ್ತೇನೆ ಎಂದು ಹೇಳಿದ್ದಾರೆಂಬುದನ್ನು ಗಮನಿಸುವುದಿಲ್ಲ.ರಂಜನೆಯ ಬಸವಭಕ್ತರಿಗೆ ಬಸವಣ್ಣನವರ ಶಿವವಿಭೂತಿ ವ್ಯಕ್ತಿತ್ವ ಅರ್ಥವಾಗುವುದಿಲ್ಲ.ಬಸವಣ್ಣನವರ ಹೆಸರನ್ನು ಹಿಡಿದುಕೊಂಡು ಏನನ್ನೋ ಸಾಧಿಸಹೊರಟವರಿಗೂ ಬಸವಣ್ಣನವರು ಅರ್ಥವಾಗುವುದಿಲ್ಲ.ಬಸವಣ್ಣನವರನ್ನು ಅರ್ಥಮಾಡಿಕೊಳ್ಳಬೇಕು ಎಂದರೆ ಇದುವರೆಗೂ ದೊರೆತಿರುವ ಬಸವಣ್ಣನವರ ೯೬೧ ವಚನಗಳನ್ನು ಓದಬೇಕು; ಬಸವಣ್ಣರ ಸಮಕಾಲೀನ ವಚನಕಾರರಾಗಿದ್ದ ಅಲ್ಲಮಪ್ರಭು,ಅಕ್ಕಮಹಾದೇವಿ,ಚೆನ್ನಬಸವಣ್ಣ,ಸಿದ್ಧರಾಮರಂತಹ ಶರಣರುಗಳು ಬಸವಣ್ಣನವರ ಬಗ್ಗೆ ಏನು ಹೇಳಿದ್ದಾರೆ ಅವರ ವಚನಗಳಲ್ಲಿ ಎನ್ನುವುದನ್ನು ಓದಿ,ಅರ್ಥಮಾಡಿಕೊಳ್ಳಬೇಕು.

ತಮ್ಮ ಏಳನೆಯದಾದ ಈ ಭವಾಂತರದಲ್ಲಿ ಶಿವನ ಒಕ್ಕುಮಿಕ್ಕಪ್ರಸಾದದ ಮಹಿಮೆಯನ್ನು ಜಗತ್ತಿಗೆ ಪರಿಚಯಿಸಲು,ಜಗತ್ತಿನಾದ್ಯಂತ ಪಸರಿಸಲು ಬಸವಣ್ಣನಾಗಿ ಹುಟ್ಟಿದ್ದೇನೆನ್ನುವ ಬಸವಣ್ಣನವರು ಯುಗಯುಗದಲ್ಲಿ ಶಿವಧರ್ಮವನ್ನು ಎತ್ತಿಹಿಡಿಯಲು ತಾವು ಹುಟ್ಟಿರುವುದಾಗಿಯೂ ತಮ್ಮ ಬಸವಣ್ಣನೆಂಬ ಅವತಾರ ಪೂರ್ವದ ಇತರ ಆರು ಅವತಾರಗಳ ಬಗ್ಗೆಯೂ ವಿವರಿಸಿದ್ದಾರೆ ಈ ವಚನದಲ್ಲಿ.ಮೊದಲ ಅವತಾರದಲ್ಲಿ ಶಿಲಾದಮುನಿಯಾಗಿ ಹುಟ್ಟಿ ಶಿವತತ್ತ್ವವನ್ನು ಪ್ರಚಾರ ಮಾಡಿದ್ದಾರೆ.ಎರಡನೆಯ ಅವತಾರದಲ್ಲಿ ಸ್ಕಂದನೆಂಬ ಗಣೇಶ್ವರನಾಗಿ ಹುಟ್ಟಿ ಶಿವಧರ್ಮವನ್ನು ಎತ್ತಿ ಹಿಡಿದಿದ್ದಾರೆ.ಮೂರನೆಯ ಅವತಾರದಲ್ಲಿ ನೀಲಲೋಹಿತನೆಂಬ ಗಣೇಶ್ವರನಾಗಿ ಹುಟ್ಟಿ ಶಿವನಿಂದಕರ ಕುಲಸಮೂಲ ನಾಶಮಾಡಿ ಶಿವಮಹಿಮಾಧಿಕ್ಯವನ್ನು ಪ್ರತಿಷ್ಠಾಪಿಸಿದ್ದಾರೆ.ನಾಲ್ಕನೆಯ ಅವತಾರದಲ್ಲಿ ಮನೋಹರನೆಂಬ ಗಣೇಶ್ವರನಾಗಿ ಹುಟ್ಟಿ ಶಿವಭಕ್ತಿಯ ಮೆಯ್ಮೆಯನ್ನು ಪಸರಿಸಿದ್ದಾರೆ.ಆರನೆಯ ಅವತಾರದಲ್ಲಿ ಕಾಲಲೋಚನನೆಂಬ ಗಣೇಶ್ವರನಾಗಿ ಹುಟ್ಟಿ ಶಿವನಲ್ಲದನ್ಯದೈವೋಪಾಸಕರುಗಳ ಸಂಹಾರ ಮಾಡಿ ಶಿವಧರ್ಮವನ್ನು ಎತ್ತಿಹಿಡಿದಿದ್ದಾರೆ.ಆರನೆಯ ಅವತಾರದಲ್ಲಿ ವೃಷಭನಾಗಿ ಹುಟ್ಟಿ ಶಿವನ ವಾಹನನಾಗಿ ಜಗತ್ ಸಂಚಾರ ಕಾಲದಲ್ಲಿ ಶಿವನೊಂದಿಗೆ ಇದ್ದು ಲೋಕಪ್ರಭುವಾದ ಶಿವನ ಲೋಕಾನುಕಂಪೆಯ ಭಾವಕ್ಕೆ ಸಾಕ್ಷಿಯಾಗಿದ್ದಾರೆ.ಬಸವಣ್ಣನವರೇ ಆಣೆ ಪ್ರಮಾಣ ಮಾಡಿ ಘೋಷಿಸಿದ್ದಾರೆ ಏಳೇಳು ಜನ್ಮದಲ್ಲಿ ನಾನು ಶಿವಭಕ್ತನಾಗಿಯೇ ಹುಟ್ಟುತ್ತೇನೆ.ಇದಕ್ಕೆ ತಪ್ಪಿದರೆ ನಿಮ್ಮ ಆಣೆ ನಿಮ್ಮ ಪ್ರಮಥರ ಆಣೆ ಎಂದು.ಶಿವಪ್ರಸಾದವನ್ನಲ್ಲದೆ ಅನ್ಯ ಭವಿದೈವಗಳ ಎಂಜಲಿಗಾಸಿಸದೆ ಶಿವಪ್ರಸಾದದ ಮಹತ್ತು ಮಹಿಮೆಯನ್ನು ಜಗತ್ತಿಗೆ ಸಾರುವುದೇ ನನ್ನ ಗುರಿ ಎಂದಿರುವ ಬಸವಣ್ಣನವರನ್ನು ತಮ್ಮ ಮೂಗಿನ ನೇರಕ್ಕೆ ಅರ್ಥೈಸಿಕೊಳ್ಳುವ ತೋರಿಕೆಯ,ಆಡಂಬರದ ಬಸವ ಭಕ್ತರುಗಳಿಗೆ ಏನೆನ್ನಬೇಕು ?

ಶೂನ್ಯ ಸಿಂಹಾಸನಾಧೀಶ್ವರ,ವ್ಯೋಮಕಾಯಸಿದ್ಧಿಯ ಅತೀತ ನಿರಂಜನ ವ್ಯಕ್ತಿತ್ವದ ಅಲ್ಲಮ ಪ್ರಭುದೇವರು ಸಹ ಬಸವಣ್ಣನವರು ಶಿವಧರ್ಮವನ್ನು ಎತ್ತಿಹಿಡಿಯುವ ಕಾರಣದಿಂದ ಹುಟ್ಟಿದ ಶಿವಕಾರಣ ಸಂಭೂತರು,ಶಿವಶರಣರು ಎಂಬುದನ್ನು ಸ್ಪಷ್ಟವಾಗಿ ಸಾರಿದ್ದಾರೆ ;

ಮರ್ತ್ಯಲೋಕದ ಮಹಾಮನೆ
ಹಾಳಾಗಿ ಹೋಗಬಾರದೆಂದು
ಕರ್ತನಟ್ಟಿದನಯ್ಯ ಒಬ್ಬ ಶಿವಶರಣನ.
ಆ ಶರಣ ಬಂದು,
ಕಲ್ಯಾಣವೆಂಬ ಶಿವಪುರವ ಕೈಲಾಸವ ಮಾಡಿ
ರುದ್ರಗಣ- ಪ್ರಮಥಗಣಂಗಳೆಲ್ಲರ ಹಿಡಿತಂದು
ಅಸಂಖ್ಯಾತರೆಂದು ಹೆಸರಿಟ್ಟು ಕರೆದು
ಭಕ್ತಿಯ ಕುಳಸ್ಥಳವ ಶ್ರುತದೃಷ್ಟ ಪವಾಡವಂ ಮೆರೆದು ತೋರೆ
ಜಗವರಿಯೆ ಶಿವಾಚಾರದ ಧ್ವಜವನೆತ್ತಿಸಿ
ಮರ್ತ್ಯಲೋಕ- ಶಿವಲೋಕವೆರಡಕ್ಕೆ ನಿಚ್ಚಣಿಗೆಯಾದನು.
ಶಿವಶರಣರ ಮನೆಯೊಳಗಿಪ್ಪ ಶಿವಗಣಂಗಳ
ತಿಂಥಿಣಿಯ ಕಂಡು
ಎನ್ನ ಮನ ಉಬ್ಬಿ ಕೊಬ್ಬಿ ಓಲಾಡುತ್ತಿರ್ದೆನಯ್ಯ.
ನಮ್ಮ ಗೊಹೇಶ್ವರನ ಶರಣ ಸಂಗನ ಬಸವಣ್ಣನ
ದಾಸೋಹದ ಘನವನೇನೆಂದೆನ್ನಬಹುದು ನೋಡ
ಸಿದ್ಧರಾಮಯ್ಯ.

ಅಲ್ಲಮ ಪ್ರಭುದೇವರು ಶಿವನು ಈ ಲೋಕವನ್ನೇ ತನ್ನಮಹಾಮನೆಯಾಗಿ ಬಗೆದಿರುವ ಲೋಕಪ್ರಭು ಶಿವನ ಲೋಕಕಾರುಣ್ಯಗುಣವಿಶೇಷದತ್ತ ಗಮನಸೆಳೆದಿದ್ದಾರೆ.ಶಿವನು ಮರ್ತ್ಯದಲ್ಲಿ ತಾನು ಕಟ್ಟಿದ ಮಹಾಮನೆಯು ಹಾಳಾಗಬಾರದೆಂದು ಬಸವಣ್ಣನೆಂಬ ಶಿವಶರಣನನ್ನು ಕರೆದು ಈ ಲೋಕಕ್ಕೆ,ಭೂಲೋಕಕ್ಕೆ ಕಳುಹಿದನಂತೆ ಮಹಾಮನೆಯ ಚೆನ್ನಾಗಿ ನೋಡಿಕೊಳ್ಳಲು.ಶಿವನಾಣತಿಯನ್ನು ಹೊತ್ತು ಬಂದ ಬಸವಣ್ಣನು ದಿಕ್ಕುದಿಕ್ಕುಗಳಲ್ಲಿದ್ದ ಶಿವಶರಣರುಗಳನ್ನೆಲ್ಲ ಕಲ್ಯಾಣವೆಂಬ ಕೈಲಾಸಕ್ಕೆ ಕರೆಯಿಸಿಕೊಂಡು ಅವರೊಡನೆ ಶಿವಸಂಕಥಾಗೋಷ್ಠಿಯಲ್ಲಿದ್ದನಂತೆ.ಬಸವಣ್ಣನ ಮಹಾಮನೆಯಲ್ಲಿ ನಡೆಯುತ್ತಿರುವ ಆ ದಾಸೋಹಕ್ಕೆ ಸಮನಾವುದೂ ಇಲ್ಲ ಎಂದು ಸಿದ್ಧರಾಮನಿಗೆ ಉತ್ತರಗೊಡುತ್ತ ಹಾಡಿದ ಪ್ರಭುದೇವರ ಈ ವಚನವು ಬಸವಣ್ಣನವರು ಶಿವಧರ್ಮವನ್ನು ಎತ್ತಿಹಿಡಿಯಲೆಂದೇ ಮರ್ತ್ಯದಲ್ಲಿ ಅವತರಿಸಿದ ಶಿವಶರಣರು,ಶಿವಗಣಾಧೀಶ್ವರರು ಎನ್ನುವುದನ್ನು ಸ್ಪಷ್ಟವಾಗಿ ಸಾರುತ್ತದೆ.

ಬಸವಣ್ಣನ ಅಳಿಯನೂ ಷಟ್ ಸ್ಥಲಾಚಾರ್ಯಯನೂ ಆಗಿ ಬಸವಣ್ಣನವರನ್ನು ತೀರ ಹತ್ತಿರದಿಂದ ಕಂಡು ಬಲ್ಲ ಚೆನ್ನಬಸವಣ್ಣನವರು ಸಹ ಬಸವಣ್ಣನವರು ಯುಗಯುಗದಲ್ಲಿ ಶಿವಧರ್ಮವನ್ನು ಧರೆಯಲ್ಲಿ ಪ್ರಸಾರಗೊಳಿಸಲು ಅವತರಿಸಿದ ಶಿವಗಣಾಧೀಶ್ವರರು ಎನ್ನುತ್ತಾರೆ ;

ಅಂಧಕಾಸುರನ ಕೊಲುವಲ್ಲಿ ನೀಲಲೋಹಿತನೆಂಬ ಗಣೇಶ್ವರ,
ತ್ರಿಪುರವ ದಹನವ ಮಾಡುವಲ್ಲಿ ಸ್ಕಂದನೆಂಬ ಗಣೇಶ್ವರ,
ಗಜಾಸುರನ ಕೊಂದು ಚರ್ಮವ ಹೊದೆವಲ್ಲಿ ಉಗ್ರನೆಂಬ ಗಣೇಶ್ವರ,
ಬ್ರಹ್ಮಕಪಾಲವಿಡಿದು ವಿಷ್ಣು ಕಂಕಾಳವನ್ನಿಕ್ಕಿದಲ್ಲಿ ನೀಲಕಂಠನೆಂಬ ಗಣೇಶ್ವರ
ಪ್ರಾಣಲಿಂಗ ಸಂಗದಲ್ಲಿ ವೃಷಭನೆಂಬ ಗಣೇಶ್ವರ
ಜಂಗಮದ ಪೂರ್ವಾಶ್ರಯವ ಕಳೆದು ಪುನರ್ಜಾತನೆನಿಸಿ
ಪ್ರಾಣಲಿಂಗವಾದ ಬಳಿಕ ಕೂಡಲಚೆನ್ನಸಂಗನಲ್ಲಿ
ಬಸವನೆಂಬ ಗಣೇಶ್ವರ.

ಚೆನ್ನಬಸವಣ್ಣನು ಸಹ ಬಸವಣ್ಣನವರು ಶಿವಗಣಾಧೀಶ್ವರರಾಗಿದ್ದು ಕಾಲಕಾಲಕ್ಕೆ ಶಿವಧರ್ಮೋದ್ಧಾರಕ್ಕಾಗಿ ಧರೆಯಲ್ಲಿ ಅವತರಿಸಿದ ಶಿವವಿಭೂತಿಗಳೆಂಬುದನ್ನು ಸಾರಿದ್ದಾರೆ.

ಸಿದ್ಧರಾಮನಂತೂ ಬಸವಣ್ಣ,ಚೆನ್ನಬಸವಣ್ಣ ಮತ್ತು ಅಲ್ಲಮಪ್ರಭುದೇವರುಗಳು ಜೈನ ಬೌದ್ಧ ಚಾರುವಾಕ ಮತಗಳನ್ನು ಖಂಡಿಸಿ,ತುಂಡಿಸಲೆಂದೇ ಹುಟ್ಟಿದವರು ಎಂದು ಘಂಟಾಘೋಷವಾಗಿ ಸಾರಿದ್ದಾನೆ ;

ಕೇಳು ಕೇಳಾ,ಎಲೆ ಅಯ್ಯಾ,
ಬಸವಣ್ಣನು ಅನಿಮಿಷಂಗೆ ಲಿಂಗವ ಕೊಟ್ಟಕಾರಣ ಮರ್ತ್ಯಕ್ಕೆ ಬಂದನೆಂಬರು.
ಸಟೆ ಸಟೆ ! ಆ ನುಡಿಯ ಕೇಳಲಾಗದು,ಅದೇನು ಕಾರಣವೆಂದಡೆ
ಜೈನ ಚಾರ್ವಾಕ ಕಾಳಾಮುಖ ಎನಿಸುವ ಷಡ್ದರ್ಶನಾದಿಗಳು ಹೆಚ್ಚಿ,
ವಿಭೂತಿ ರುದ್ರಾಕ್ಷಿ ಪಂಚಾಕ್ಷರವನರಿಯದೆ
ನರಕಕ್ಕೆ ಭಾಜನವಾಗಿ ಪೋಪರೆಂದು,
ದೇವರು ನಂದಿಕೇಶ್ವರನ ಮುಖವ ನೋಡಲು,
ಆ ಪ್ರಶ್ನೆಯಿಂದ ಬಂದನಯ್ಯಾ ಬಸವಣ್ಣ ಪರಹಿತಾರ್ಥನಾಗಿ.
ದೇವರು ದೇವಿಯರಿಗೆ ಪ್ರಣವಾರ್ಥವ ಬೋಧಿಸುವಾಗ
ದೇವಿಯರ ಮುಡಿಯಲ್ಲಿ ಹೊನ್ನ ತುಂಬಿಯಾಗಿ
ಷಣ್ಮುಖ ಕೇಳಿದ ಪ್ರಶ್ನೆಯಿಂದ ಬಂದನೆಂಬರಯ್ಯಾ, ಚೆನ್ನಬಸವಣ್ಣನು.
ಸಟೆ ಸಟೆ ! ಆ ನುಡಿಯ ಕೇಳಲಾಗದು.ಅದೇನು ಕಾರಣವೆಂದಡೆ ;
ಷಡ್ವಿಧಸ್ಥಲಕ್ಕೆ ಸ್ಥಾಪನಾಚಾರ್ಯನಾಗಿ
ಸಕಲ ಪ್ರಮಥರ್ಗೆ ವೀರಶೈವವ ಪ್ರತಿಷ್ಠೆಯ ಮಾಡಲೋಸ್ಕರ
ಬಂದನಯ್ಯಾ ಚೆನ್ನಬಸವಣ್ಣನು.
ದೇವರ ಸಭೆಯಲ್ಲಿ ನಿರಂಜನನೆಂಬ ಗಣೇಶ್ವರನು
ಮಾಯಾಕೋಳಾಹಳನೆಂದು ಹೊಗಳಿಸಿಕೊಂಡು ಬರಲಾಗಿ
ಆ ಸಮಯದಲ್ಲಿ ದೇವಿಯರು ದೇವರ
ಮಾಯಾಕೋಳಹಳನಾದ ಪರಿಯಾವುದೆಂದು ಬೆಸಗೊಳಲು,
ಆ ಪ್ರಶ್ನೆಯಿಂದ ಪ್ರಭುದೇವರು ಮರ್ತ್ಯಕ್ಕೆ ಬಂದರೆಂಬರಯ್ಯಾ.
ಸಟೆ ಸಟೆ ! ಆ ನುಡಿಯ ಕೇಳಲಾಗದು,ಅದೇನುಕಾರಣವೆಂದಡೆ
ಸುಜ್ಞಾನಿ ನಿರಹಂಕಾರರ ಭಕ್ತಿಗೋಸ್ಕರ ಪ್ರತ್ಯಕ್ಷವಾಗಿ
ಬಸವಾದಿ ಪ್ರಮಥರ್ಗೆ ಬೋಧಿಸಿ,
ತನ್ನ ನಿಜಪದವ ತೋರಬಂದರಯ್ಯಾ ಪ್ರಭುದೇವರು.
ದಕ್ಷಸಂಹಾರದಿಂದ ಬರುವಾಗ ಗುಪ್ತಗಣೇಶ್ವರನ ನಿರಿ ಸೋಂಕಲು,
ಆ ಪ್ರಶ್ನೆಯಿಂದ ಬಂದನೆಂಬರಯ್ಯಾ ಮಡಿವಾಳನು.
ಸಟೆ ಸಟೆ ! ಆ ನುಡಿಯ ಕೇಳಲಾಗದು,ಅದೇನು
ಕಾರಣವೆಂದಡೆ,
ಬಿಜ್ಜಳ ಪರವಾದಿಗಳ ಸಂಹರಿಸಲೋಸ್ಕರ
ಬಸವಣ್ಣನ ನಿಮಿತ್ತವಾಗಿ ಬಂದನಯ್ಯಾ ಮಡಿವಾಳ ಮಾಚಯ್ಯಗಳು.
ಇಂತಿವರು ಮುಖ್ಯವಾದ ಏಳುನೂರು ಎಪ್ಪತ್ತು ಅಮರಗಣಂಗಳಿಗೆ
ವಾಸನಾಧರ್ಮವೆಂದಡೆ ಅಘೋರ ನರಕ ತಪ್ಪದಯ್ಯಾ.
ಇವರು ಮುಖ್ಯವಾದ ಪ್ರಮಥಗಣಂಗಳಿಗೆ ಶಾಪವೆಂದು ಕಲ್ಪಿಸಿದಡೆ,
ನಾಯಕನರಕ ತಪ್ಪದು,ಎಲೆ ಶಿವನೆ
ಕಪಿಲಸಿದ್ಧಮಲ್ಲಿಕಾರ್ಜುನಾ,ನಿಮ್ಮಾಣೆ.

ಸಿದ್ಧರಾಮನ ಈ ವಚನವು ಜೈನ ಚಾರ್ವಾಕ ಕಾಳಾಮುಖಾದಿ ಅನ್ಯದೈವ ಭಜನೆಯ ಮತಗಳ ಮೇಲುಗೈಯಾಗಲು ಮತ್ತು ಶಿವಧರ್ಮವು ಕಳೆಗುಂದಿ ಅನ್ಯಮತಗಳನ್ನಾಶ್ರಯಿಸಿದ ಜೀವಗಳು ಸದ್ಗತಿಯನ್ನು ಕಾಣದೆ ನರಕಸೇರುತ್ತಿರಲು ಭೂತಾನುಕಂಪೆಯಿಂದ ಶಿವನು ನಂದೀಶ್ವರನ ಮುಖವನ್ನು ನೋಡಲು ಶಿವನ ಭಾವವನ್ನರಿತ ನಂದೀಶ್ವರನು ಲೋಕದ ಜನರ ಉದ್ಧಾರಕ್ಕಾಗಿ,ಶಿವಧರ್ಮವನ್ನು ಎತ್ತಿಹಿಡಿಯಲು ಭೂಲೋಕದಲ್ಲಿ ಅವತರಿಸಿದರು ಎನ್ನುವುದನ್ನು ಸಾರುತ್ತಿದೆ.ಸಿದ್ಧರಾಮನು ಆ ಕಾಲದ ನಂಬಿಕೆಯಾಗಿದ್ದ ಕೈಲಾಸದಲ್ಲಿದ್ದ ಶಿವಗಣಾಧೀಶ್ವರರುಗಳು ಯಾವುದೋ ಶಾಪನಿಮಿತ್ತದಿಂದ ಭೂಲೋಕದಲ್ಲಿ ಅವತರಿಸುತ್ತಾರೆ ಎನ್ನುವ ಕಲ್ಪನೆಯು ಪೂರ್ಣ ಸುಳ್ಳಾಗಿದ್ದು ಶಿವಗಣಾಧೀಶ್ವರರುಗಳಾದ ನಿರಂಜನ ( ಅಲ್ಲಮ ಪ್ರಭು) ಷಣ್ಮುಖ ( ಚೆನ್ನಬಸವಣ್ಣ )
ವೀರಭದ್ರ ( ಮಡಿವಾಳ ಮಾಚಿದೇವ) ಮೊದಲಾದವರು ಶಿವಧರ್ಮಪಾರಮ್ಯವನ್ನು ಪ್ರತಿಷ್ಠಾಪಿಸಲೆಂದು ಉನ್ಮತ್ತನಾಗಿದ್ದ ಜೈನಮತೀಯ ಬಿಜ್ಜಳನನ್ನು ಸಂಹರಿಸಲೆಂದು ಬಂದು ಶಿವಕಾರಣಿಕರುಗಳು,ಶಿವವಿಭೂತಿಗಳು ಎನ್ನುವ ಸತ್ಯ ಪರತತ್ತ್ವದತ್ತ ಲೋಕದ ಗಮನಸೆಳೆದಿದ್ದಾನೆ.

( ಮುಂದುವರೆಯುತ್ತದೆ)

೨೨.೦೧.೨೦೨೪

About The Author