ದೇವರಿಗೆ ಕುಲ- ಗೋತ್ರಗಳಿಲ್ಲ !

ದೇವರಿಗೆ ಕುಲ- ಗೋತ್ರಗಳಿಲ್ಲ !

ಮುಕ್ಕಣ್ಣ ಕರಿಗಾರ

ಮಹಾಶೈವ ಧರ್ಮಪೀಠದಲ್ಲಿ ನಿನ್ನೆ ಅಂದರೆ 21.01.2024 ರ ರವಿವಾರದಂದು ನಡೆದ 77 ನೆಯ ‘ ಶಿವೋಪಶಮನ ಕಾರ್ಯ’ದ ಬಳಿಕ ತಾಯಿ ಮಹಾಕಾಳಿಯ ಸನ್ನಿಧಿಯಲ್ಲಿ ನಡೆದ ‘ ಆತ್ಮಾನುಸಂಧಾನ ಕಾರ್ಯಕ್ರಮ’ ದಲ್ಲಿ ನಮ್ಮೂರು ಗಬ್ಬೂರಿನ ‘ ಗಾಯತ್ರಿ ಪೀಠ’ ದ ಅಧ್ಯಕ್ಷರಾದ ಉದಯಕುಮಾರ ಪಂಚಾಳ ಅವರು ‘ ದ್ಯಾಮಮ್ಮನ ಕುಲ ಯಾವುದು ?’ ಎಂದು ಪ್ರಶ್ನಿಸಿದರು.ಮೊನ್ನೆ ಯಾರೋ ಅವರಿಗೆ ದೇವಿ ದ್ಯಾಮಮ್ಮ ಬ್ರಾಹ್ಮಣರ ಕುಲದವಳಾಗಿದ್ದು ದಲಿತನನ್ನು ಮದುವೆಯಾಗಿದ್ದರಿಂದ ಬ್ರಾಹ್ಮಣರು ಆಕೆಯನ್ನು ಪೂಜಿಸುವುದಿಲ್ಲ ಎಂದು ಹೇಳಿದ್ದರಿಂದ ಅವರಲ್ಲಿ ದ್ವಂದ್ವ,ಗೊಂದಲವನ್ನುಂಟು ಮಾಡಿದೆ.ಅವರು ಕೇಳಲ್ಪಟ್ಟ ಆ ಕಥೆ ದ್ಯಾವಮ್ಮನದಲ್ಲ,ಮಾರಮ್ಮನ ಕಥೆ.ಮಾರಮ್ಮ ದಲಿತ ಯುವಕನನ್ನು ಮದುವೆಯಾಗುತ್ತಾಳೆ.ದ್ಯಾವಮ್ಮ ಎಂದರೆ ಆಕೆ ದೇವಿ ಪಾರ್ವತಿಯೆ,ಪರಶಿವನ ಹೆಂಡತಿಯೆ.ಈಗ ವಿಶ್ವಕರ್ಮಸಮುದಾಯದವರು ಪೂಜಿಸುತ್ತಿರುವ ದೇವಿ ದ್ಯಾಮಮ್ಮ ನೂರಾರು ಗ್ರಾಮಗಳಲ್ಲಿ ಗ್ರಾಮದೇವತೆಯಾಗಿ ಪೂಜೆಗೊಳ್ಳುತ್ತಿದ್ದಾಳೆ.ಮಾರಮ್ಮ ದ್ಯಾವಮ್ಮನಾಗಲು ಸಾಧ್ಯವಿಲ್ಲ.ಮಾರಮ್ಮ ಎಲ್ಲ ಮನುಷ್ಯರಂತೆ ಮನುಷ್ಯಳಾಗಿ ಬ್ರಾಹ್ಮಣಕುಲದಲ್ಲಿ ಹುಟ್ಟಿದ್ದ ಯೋನಿಜೆ; ದ್ಯಾವಮ್ಮ ಪಾರ್ವತಿಯ ಅವತಾರವೇ ಆದ ಅಯೋನಿಜೆ.ಜನರು ತಮ್ಮ ಅಜ್ಞಾನದಿಂದ ಮಾರಮ್ಮನಾದಿ ಎಲ್ಲ ದೇವಿಯರನ್ನು ಪಾರ್ವತಿದೇವಿಯೊಂದಿಗೆ ಸಮೀಕರಿಸುತ್ತಾರೆ.ಇದು ದೇವಿಗೆ ಎಸಗುವ ಅಪಚಾರ,ದೈವದ್ರೋಹ.

ಇನ್ನು ಉದಯಕುಮಾರ ಪಂಚಾಳ ಅವರನ್ನು ಕಾಡುತ್ತಿರುವ ಸಂದೇಹಕ್ಕೆ ಉತ್ತರಿಸುವುದಾದರೆ ದೇವರಿಗೆ ಕುಲಗೋತ್ರಗಳಿಲ್ಲ.ದೇವರು ಎಂದರೆ ಇಲ್ಲಿ ಶೈವರ ಪರಶಿವ ಮತ್ತು ಶಾಕ್ತರ ಪರಾಶಕ್ತಿ.ಪರಮಾತ್ಮ ಮತ್ತು ಪರಬ್ರಹ್ಮೆ ಎನ್ನುವುದು ಕೇವಲ ಶಿವ ಪಾರ್ವತಿಯವರಿಗೆ ಅನ್ವಯಿಸುತ್ತದೆಯೇ ಹೊರತು ಹುಟ್ಟಿ ಸತ್ತ ಮನುಷ್ಯರಿಗೆ ಪರತತ್ತ್ವವನ್ನು ಅನ್ವಯಿಸಲಾಗದು.ಪರಶಿವನು ‘ಪುರುಷ’ನಾಗಿ ಜಗತ್ತನ್ನು ಸೃಷ್ಟಿಸಿದ್ದರೆ ಅವನ ಸತಿಯಾದ ಶಕ್ತಿಯು ‘ಪ್ರಕೃತಿ’ಯಾಗಿ ಜಗತ್ತನ್ನು ಪೊರೆಯುತ್ತಿದ್ದಾಳೆ.ಪರಶಿವ ಪಾರ್ವತಿಯರು ಬರಿಯ ಭಾರತವನ್ನಷ್ಟೇ ಸೃಷ್ಟಿಸಲಿಲ್ಲ,ಇಡೀ ಪ್ರಪಂಚವನ್ನೇ ಸೃಷ್ಟಿಸಿದ್ದಾರೆ.ಪರಶಿವ ಪರಾಶಕ್ತಿಯವರು ಶೈವ ಶಾಕ್ತಮತಗಳನ್ನಷ್ಟೇ ಸಂಕಲ್ಪಿಸಲಿಲ್ಲ; ಹಿಂದೂ ಮುಸ್ಲಿಂ ಕ್ರೈಸ್ತ ಬೌದ್ಧ ಜೈನ ಸಿಖ್ಖ್,ಜಾರತೂಷ್ಟ್ರವಾದಿ ಇಂದು ಜಗತ್ತಿನಲ್ಲಿ ಅಸ್ತಿತ್ವದಲ್ಲಿರುವ ಎಲ್ಲ ಮತಧರ್ಮಗಳು ಪರಶಿವ ಪರಾಶಕ್ತಿಯರ ಸಂಕಲ್ಪವೆ.ಆದ್ದರಿಂದ ಶಿವ ಪಾರ್ವತಿಯರು ಜಗತ್ತಿನ ಮಾತಾಪಿತರುಗಳು,ಜಗದ ಜನಕ- ಜನನಿಯರು.

ವಿಶ್ವದ ಮಾತಾಪಿತರುಗಳಾದ ಶಿವ ಪಾರ್ವತಿಯರನ್ನು ಜಗತ್ತಿನ ಬೇರೆ ಬೇರೆ ಪ್ರದೇಶದಲ್ಲಿ, ಬೇರೆ ಬೇರೆಯಾಗಿ ಕಂಡರು .ಅವರವರ ಕಲ್ಪನೆಯಂತೆ ಗೋಚರಿಸಿದರು ಶಿವ ಪಾರ್ವತಿಯರು.’ ಏಕ’ ವು ‘ ಅನೇಕ’ ವಾದದ್ದು ಹೀಗೆ.ಜನರು ತಾವು ಕಂಡ ತಮ್ಮ ಕಲ್ಪನೆಯ ದೇವರೇ ನಿಜ ದೇವರು,ಪರಮಾತ್ಮ- ಪರಬ್ರಹ್ಮೆ ಎಂದು ಪಟ್ಟುಹಿಡಿದು ಗಟ್ಟಿಯಾಗಿ ವಾದಿಸಿದ್ದರಿಂದ ಜಗತ್ತಿನಲ್ಲಿ ಮತ ಧರ್ಮಗಳ ಹೆಸರಿನಲ್ಲಿ ಸಂಘರ್ಷ ಉಂಟಾಯಿತು.ಮನುಷ್ಯರ ಕಲ್ಯಾಣಕ್ಕೆ ಕಾರಣವಾಗಬೇಕಿದ್ದ ಧರ್ಮವು ಮತವಾಗಿ ಮಾರ್ಪಟ್ಟು ಮನುಷ್ಯರ ಅವನತಿಗೆ ಕಾರಣವಾಯಿತು.

ವಿಶ್ವದ ಮಾತಾಪಿತರುಗಳಾದ ಶಿವ ಪಾರ್ವತಿಯರು ವಿಶ್ವದ ಸೃಷ್ಟಿ ಸ್ಥಿತಿ ಲಯಗಳಿಗೆ ಕಾರಣರಾಗಿದ್ದರೂ ಅವರು ವಿಶ್ವಾತೀತರು,ವಿಶ್ವದ ಆಗು- ಹೋಗುಗಳಲ್ಲಿ ಅನಾಸಕ್ತರು; ಆದಿ ಅಂತ್ಯಗಳಿರದ ಪರಬ್ರಹ್ಮ ಪರಾಶಕ್ತಿಯರು.ಪರಶಿವ ಪರಾಶಕ್ತಿಯರ ಸಂಕಲ್ಪದಂತೆ ಸೃಷ್ಟಿಗೊಂಡ ಜಗತ್ತಿನ ನಿರ್ವಹಣೆಯ ಕಾರ್ಯವನ್ನು ಬ್ರಹ್ಮ ವಿಷ್ಣು ರುದ್ರ ಎನ್ನುವ ತ್ರಿಮೂರ್ತಿಗಳು ನಿರ್ವಹಿಸುತ್ತಿದ್ದಾರೆ. ಈ ತ್ರಿಮೂರ್ತಿಗಳಿಗೆ ಸಹಾಯಕರುಗಳಾಗಿ ಋಷಿಗಳು ಮತ್ತು ದೇವತೆಗಳು ಇದ್ದಾರೆ.ಈ ಋಷಿ ಮತ್ತು ದೇವತೆಗಳೇ ಮನುಷ್ಯರ ಕುಲದೇವತೆಗಳು,ಗೋತ್ರಪುರುಷರುಗಳು.ಶಿವ ಪಾರ್ವತಿಯರು ಯಾರ ಮನೆದೇವರಲ್ಲ,ಯಾರ ಕುಲದೇವರಲ್ಲ ಆದರೆ ಎಲ್ಲರ ಮನಸ್ಸುಗಳಲ್ಲಿ ವಾಸಿಸುವ ಆತ್ಮಸ್ವರೂಪರು.ಇದನ್ನು ಒಂದು ಉದಾಹರಣೆಯ ಮೂಲಕ ಸ್ಪಷ್ಟಪಡಿಸಬಹುದಾದರೆ ಮೈಲಾಪುರದ ಮಲ್ಲಯ್ಯ ನಮ್ಮ ಮನೆಯದೇವರು,ಕರ್ನಾಟಕದ ಬಹುತೇಕ ಕುರುಬರ ಮನೆದೇವರು ಮೈಲಾಪುರದ ಮಲ್ಲಯ್ಯ,ಮೈಲಾರಿ ಇಲ್ಲವೆ ಮೈಲಾರಲಿಂಗನು.ಮೈಲಾಪುರ ಮಲ್ಲಯ್ಯನು ಕುರುಬರಿಗಷ್ಟೇ ಅಲ್ಲ ಒಕ್ಕಲಿಗರು,ಲಿಂಗಾಯತರು ಮತ್ತು ಕೆಲವು ಜನ ಬ್ರಾಹ್ಮಣರಿಗೂ ಮನೆ ದೇವರು- ಕುಲದೇವರು ಆಗಿದ್ದಾನೆ.ಆದರೆ ಮೈಲಾಪುರದ ಮಲ್ಲಯ್ಯನು ಶ್ರೀಶೈಲದ ಮಲ್ಲಿಕಾರ್ಜುನನಲ್ಲ ! ಶ್ರೀಶೈಲದ ಮಲ್ಲಿಕಾರ್ಜುನ ಜ್ಯೋತಿರ್ಲಿಂಗವು ಪರಶಿವನ ನಿರಾಕಾರ ತತ್ತ್ವದ ಪ್ರತೀಕವು.ಮೈಲಾಪುರ ಮಲ್ಲಯ್ಯನು ಶಿವಾಂಶ ಸಂಭೂತನಾದ ಮಾರ್ತಂಡ ಭೈರವನೆಂಬ ವೀರ,ಮಹಾಪುರುಷನು.ಕುರುಬರ ಮೂಲಪುರುಷನಾದ್ದರಿಂದ ಆತ ಕುರುಬರ ಕುಲದೇವರು,ಮನೆದೇವರು.ಶ್ರೀಶೈಲ ಮಲ್ಲಯ್ಯನು ಎಲ್ಲರ ಮನಸ್ಸುಗಳಲ್ಲಿ ವಾಸಿಸಬಲ್ಲ ಮಹಾದೇವನೇ ಹೊರತು ಯಾರ ಮನೆದೇವರಲ್ಲ,ಕುಲದೇವರಲ್ಲ.ಶ್ರೀಶೈಲ ಮಲ್ಲಿಕಾರ್ಜುನ ಮತ್ತು ಮೈಲಾಪುರದ ಮಲ್ಲಯ್ಯನಿಗೆ ಇರುವ ವ್ಯತ್ಯಾಸವೇ ಇಂದು ಮನೆದೇವರುಗಳು,ಕುಲದೇವರುಗಳಾಗಿ ಪೂಜಿಸಲ್ಪಡುತ್ತಿರುವ ದೇವ ದೇವಿಯರುಗಳಿಗಿದೆ.

ವೀರಭದ್ರನು ವೀರಶೈವರಲ್ಲಿ ಕೆಲವರಿಗೆ ಮನೆದೇವರು,ಗೋತ್ರಪುರುಷನು.ವೀರಭದ್ರನು ಶಿವನ ಮಗನಾದ ಕಾರಣದಿಂದ,ಮರ್ತ್ಯದಲ್ಲಿ ಅವತರಿಸಿದ ಕಾರಣದಿಂದ ಆತ ಕುಲದೇವರಾದ,ಗೋತ್ರಪುರುಷನಾದ.ವೀರಭದ್ರನ ಹೆಂಡತಿ,ಶಕ್ತಿ ಭದ್ರಕಾಳಿಯು ಇಂದು ಕೆಲವರ ಕುಲದೇವಿಯಾಗಿದ್ದಾಳೆ.ಭದ್ರಕಾಳಿಯು ಮಹಾಕಾಳಿಯಲ್ಲ ಎನ್ನುವುದನ್ನು ತಿಳಿಯುವುದು ಅವಶ್ಯಕವಿದೆ.ವೀರಭದ್ರನು ಶಿವನ ಒಂದಂಶವಾದಂತೆ ಭದ್ರಕಾಳಿಯು ಮಹಾಕಾಳಿಯ ಒಂದಂಶಸ್ವರೂಪಳೇ ಹೊರತು ಪರಬ್ರಹ್ಮೆಯಾದ ಮಹಾಕಾಳಿಯಲ್ಲ.ಇಂದು ವಿಶ್ವಕರ್ಮರಾದಿ ಕೆಲವು ಜನಾಂಗಗಳು ಪೂಜಿಸುತ್ತಿರುವ ಕಾಳಿ ಭದ್ರಕಾಳಿಯೇ ಹೊರತು ಮಹಾಕಾಳಿಯಲ್ಲ.ಭದ್ರಕಾಳಿಯ ಆರಾಧನೆ ರಾಮಾಯಣದ ಕಾಲದಿಂದಲೂ ಇದೆಯಾದ್ದರಿಂದ ಕಾಷ್ಠಶಿಲ್ಪಿಗಳು ರಾಮಾಯಣದ ಕಾಲದಿಂದಲೂ ಭದ್ರಕಾಳಿಯನ್ನು ಪೂಜಿಸುತ್ತ ಬಂದಿದ್ದು ಆ ಭದ್ರಕಾಳಿಯೇ ವಿಶ್ವಕರ್ಮರ ಕುಲದೇವಿಯಾಗಿದ್ದಾಳೆ.ಮಹಾಕವಿ ಕಾಳಿದಾಸ ಮತ್ತು ರಾಮಕೃಷ್ಣ ಪರಮಹಂಸರಿಗೆ ದರ್ಶನವನ್ನಿತ್ತ ಮಹಾಕಾಳಿಯು ಪರಶಿವನಾದ ಮಹಾಕಾಲನ ಶಕ್ತಿಯಾಗಿದ್ದು ಆಕೆಯು ಅತ್ಯುನ್ನತನಿಲುವಿನ ಯೋಗಿಗಳಿಗೆ ಮಾತ್ರ ದರ್ಶನ ನೀಡುತ್ತಾಳೆ,ಲೋಕಸಮಸ್ತರಿಂದ ಪೂಜೆಗೊಳ್ಳುವುದಿಲ್ಲ,ಯಾರ ಕುಲದೇವಿಯೂ ಆಗುವುದಿಲ್ಲ.ಬನಶಂಕರಿಯು ಕುಲದೇವಿಯಾಗಬಲ್ಲಳಲ್ಲದೆ ಪರಾಶಕ್ತಿಯಾದ ‘ಶಂಕರಿ’ಯು ಕುಲದೇವಿಯಾಗಳು.ಬನಶಂಕರಿಯು ದೇವಿ ಪಾರ್ವತಿಯ ಒಂದಂಶಸ್ವರೂಪಳು.ಅಷ್ಟಾದಶ ಶಕ್ತಿಪೀಠಗಳಲ್ಲಿ ಪರಾಶಕ್ತಿಯ ಒಂದೊಂದು ಅಂಶಪ್ರಕಟಗೊಂಡಿದೆಯೇ ಹೋರತು ಪೂರ್ಣಕಳೆಯು ಪ್ರಕಟಗೊಂಡಿಲ್ಲ.ಪರಾಶಕ್ತಿಯು ದುರ್ಗಾದೇವಿಯಾಗಿ ಮಹಾಕಾಲೀ ಮಹಾಲಕ್ಷ್ಮೀ ಮತ್ತು ಮಹಾಸರಸ್ವತೀದೇವಿಯರೆಂಬ ತತ್ತ್ವತ್ರಯಗಳ ಸಂಗಮಶಕ್ತಿಯಾಗಿದ್ದು ಋಷಿ ಮಾರ್ಕಂಡೇಯರಿಗೆ ತನ್ನ ಪರಾಶಕ್ತಿರೂಪದ ದರ್ಶನ ನೀಡಿರುತ್ತಾಳೆ.ಚಿದಾನಂದಾವಧೂತರಿಂದ ಆರಾಧಿಸಲ್ಪಟ್ಟ ಸಿದ್ಧಪರ್ವತವಾಸಿನಿಯಾದ ಬಗಳಾಮುಖಿಯು ಪಾರ್ವತಿಯ ಒಂದಂಶಸ್ವರೂಪಳೇ ಹೊರತು ಪೂರ್ಣಬ್ರಹ್ಮೆಯಲ್ಲ.ಆ ಕಾರಣದಿಂದಲೇ ಚಿದಾನಂದಾವಧೂತರು ದೇವಿಪುರಾಣಕ್ಕೆ ‘ ಪಾರ್ವತಿ ದೇವಿ ಮಹಾತ್ಮೆ’ ಎಂದು ಕರೆದಿದ್ದಾರೆ.ಸಿದ್ಧಪರ್ವತವಾಸಿನಿ ಬಗಳಾಮುಖಿಯು ಮನೆದೇವರಾಗಬಲ್ಲಳು,ಕುಲದೇವಿಯಾಗಬಲ್ಲಳು,ಆದರೆ ಪಾರ್ವತಿದೇವಿಯು ಯಾರಿಗೂ ಮನೆದೇವಿಯಲ್ಲ.

ತುಳಜಾಪುರದ ಅಂಬಾಭವಾನಿಯು ಮರಾಠರು ಸೇರಿದಂತೆ ಕೆಲವು ಜನಾಂಗಗಳ ಕುಲದೇವಿಯು.ತುಳಜಾಭವಾನಿಯು ಮಹಾಕಾಳಿಯ ಒಂದಂಶ ಸ್ವರೂಪಳು,ಕಾಳಿತತ್ತ್ವವನ್ನು ಜಗತ್ತಿನಲ್ಲಿ ಪ್ರಕಟಿಸಲು ಅವತರಿಸಿದವಳು.ಮರ್ತ್ಯದಲ್ಲಿ ಅವತಾರವೆತ್ತಿದ್ದರಿಂದ ತುಳಜಾಭವಾನಿಯು ಮನೆದೇವರಾದಳು,ಕುಲದೇವರಾದಳು.ಕೊಲ್ಲಾಪುರದ ಮಹಾಲಕ್ಷ್ಮೀಯು ಭೃಗು ಋಷಿಯ ಮಗಳಾಗಿ ಲೋಕದಲ್ಲಿ ಹುಟ್ಟಿ ದೇವಿಯಾದ್ದರಿಂದ ಆಕೆಯೂ ಮನೆದೇವರಾಗಬಲ್ಲಳು,ಕುಲದೇವರಾಗಬಲ್ಲಳು.ಪಂಢರಾಪುರದ ಪಾಂಡುರಂಗ ವಿಠ್ಠಲನೂ ಮನುಷ್ಯನಾಗಿ ಹುಟ್ಟಿ ದೈವತ್ವವನ್ನು ಸಂಪಾದಿಸಿದ್ದರಿಂದ ವಿಠ್ಠಲನು ಮನೆದೇವರಾಗಬಲ್ಲ,ಕುಲದೇವರಾಗಬಲ್ಲ.ಬ್ರಾಹ್ಮಣರು ವಿಷ್ಣುವಿನ ದಶಾವತಾರಗಳ ದೇವರುಗಳನ್ನು ಮನೆದೇವರು,ಕುಲದೇವರನ್ನಾಗಿ ಹೊಂದಬಹುದೇ ಹೊರತು ಮೂರುಮೂರ್ತಿಗಳಲ್ಲಿ ಒಬ್ಬನಾಗಿ ಜಗದ ಸ್ಥಿತಿಕರ್ತನಾಗಿರುವ ವಿಷ್ಣುವನ್ನು ಮನೆದೇವರನ್ನಾಗಿ ಇಲ್ಲವೆ ಕುಲದೇವರನ್ನಾಗಿ ಹೊಂದಲು ಸಾಧ್ಯವಿಲ್ಲ ! ವಿಷ್ಣುವನ್ನು ‘ ಮಹಾವಿಷ್ಣು’ ಎನ್ನಲಾಗುತ್ತದೆ.ಅಂದರೆ ಮಹತ್ ತತ್ತ್ವವನ್ನು ಹೊಂದಿರುವವನು ಎಂದರ್ಥ.ಶಿವನು ಮಹಾದೇವನಾದಂತೆ ವೈಷ್ಣವರು ವಿಷ್ಣುವನ್ನು ‘ ಮಹಾವಿಷ್ಣು’ ಎಂದು ಸಂಬೋಧಿಸುತ್ತಾರೆ.ವಿಷ್ಣುವು ಮಹಾವಿಷ್ಣುವು ಆಗಬೇಕಾದರೆ ಆತ ಪ್ರಪಂಚಾತೀತನಾಗಬೇಕಾಗುತ್ತದೆ.ಅತೀತರಾದವರಿಗೆ ಜಗತ್ತಿನ ಅಂಟು ನಂಟುಗಳಿರುವುದಿಲ್ಲವಾದ್ದರಿಂದ ಮಹಾವಿಷ್ಣು ಕುಲದೇವರಾಗಲಾರ,ಮನೆದೇವರಾಗಲಾರ.ಬ್ರಹ್ಮನಿಗಂತೂ ಲೋಕದಲ್ಲಿ ಪೂಜೆಯೇ ಇಲ್ಲವಾದ್ದರಿಂದ ಆತನನ್ನು ಮನೆದೇವರು ಇಲ್ಲವೆ ಕುಲದೇವರು ಎಂದು ಭಾವಿಸುವ ಪ್ರಶ್ನೆಯೇ ಬರುವುದಿಲ್ಲ.

ಗ್ರಾಮದೇವರುಗಳು ಮನೆಯದೇವರು,ಕುಲದೇವರುಗಳಾಗಬಹುದಲ್ಲದೆ ಪರಶಿವನು ಕುಲದೇವರಾಗಲಾರ.ಬಸವಪೂರ್ವದ ಶರಣರು,ಬಸವಣ್ಣನವರ ಕಾಲದ ಶರಣರು ಮನೆದೇವರಾಗಿ,ಕುಲದೇವರುಗಳಾಗಿ,ಗ್ರಾಮದೇವರುಗಳಾಗಿ ಪೂಜೆಗೊಳ್ಳುತ್ತಿದ್ದಾರೆ.ಇಲ್ಲಿ ಗಮನಿಸಬೇಕಾದ ಸೋಜಿಗದ ಸಂಗತಿಯು ಒಂದಿದೆ.ಬಸವಣ್ಣನವರ ನೇತೃತ್ವದಲ್ಲಿ ನಡೆದ ವಚನ ಚಳುವಳಿಯ ಬಹುತೇಕ ಶರಣ ಶರಣೆಯರು ಕರ್ನಾಟಕ ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಗಳ ವಿವಿಧ ಜಾತಿ- ಜನಾಂಗಗಳಿಗೆ ಮನೆದೇವರು,ಕುಲದೇವರುಗಳು ಆಗಿದ್ದಾರೆ; ಆದರೆ ಅಲ್ಲಮಪ್ರಭು ಮತ್ತು ಅಕ್ಕಮಹಾದೇವಿಯರು ಯಾರಿಗೂ ಮನೆದೇವರಾಗಿಲ್ಲ,ಕುಲದೇವರಾಗಿಲ್ಲ.ಅಲ್ಲಮಪ್ರಭು ಮತ್ತು ಅಕ್ಕಮಹಾದೇವಿಯರು ಶಿವ ಪಾರ್ವತಿಯರ ಪ್ರಕಟ ಲೀಲಾತತ್ತ್ವವಾದ್ದರಿಂದ ಅವರಿಬ್ಬರೂ ಯಾರಿಗೂ ಕುಲದೇವರಲ್ಲ,ಮನೆದೇವರಲ್ಲ.ಅಲ್ಲಮಪ್ರಭು ಮತ್ತು ಅಕ್ಕಮಹಾದೇವಿಯರ ವಿಶೇಷವೆಂದರೆ ಕಲ್ಯಾಣಕ್ರಾಂತಿಯ ಬಳಿಕ ಎಲ್ಲ ಶರಣರು ಒಂದೊಂದು ದಿಕ್ಕಿಗೆ ತೆರಳಿ ಒಂದೊಂದು ಊರಲ್ಲಿ ಐಕ್ಯರಾದರೆ ಅಲ್ಲಮಪ್ರಭು ಮತ್ತು ಅಕ್ಕಮಹಾದೇವಿ ಇಬ್ಬರೂ ಶ್ರೀಶೈಲಕ್ಕೆ ತೆರಳಿ ಕದಳಿಯವನದಲ್ಲಿ ಐಕ್ಯರಾಗುತ್ತಾರೆ,ಕಲಿಯುಗದ ಯುಗಶಕ್ತಿಸ್ವರೂಪಲಿಂಗವಾಗಿರುವ ಶ್ರೀಶೈಲದ ಮಲ್ಲಿಕಾರ್ಜುನ ಮಹಾಲಿಂಗದಲ್ಲಿ ಒಂದಾಗುತ್ತಾರೆ,ಬಂದ ಮೂಲವನ್ನು ಸೇರುತ್ತಾರೆ.

ಇದು ಪರಮಾತ್ಮ ದೇವರುಗಳ ನಡುವಿನ ವ್ಯತ್ಯಾಸ,ದೇವರು ಮನೆ ದೇವರುಗಳ ನಡುವಿನ ಅಂತರ.ನಮ್ಮಲ್ಲಿ ಯೋಗದೃಷ್ಟಿಯು ಅಳವಟ್ಟಾಗ ಮನದಟ್ಟಾಗುವ ಸಂಗತಿ ಇದು.ನಮ್ಮಲ್ಲಿ ಅಂತರಂಗದ ಕಣ್ಣು ತೆರೆದಾಗ ಹೊಳೆವ ಸುಳಿವು ಇದು.ಬಾಯ ಚಪಲಕ್ಕೆ ಮನಸ್ಸಿಗೆ ಬಂದುದನ್ನಾಡುವ,ಆಚರಿಸುವ ಚಪಲಚಿತ್ತರಿಗೆ ಪರಮನಿರಂಜನನ ಪರತತ್ತ್ವವು ಅರ್ಥವಾಗುವುದಿಲ್ಲ ಎನ್ನುವುದನ್ನು ಒತ್ತಿಹೇಳಬೇಕೆ ?

೨೨.೦೧.೨೦೨೪

About The Author