ಕರ್ನಾಟಕದ ಸಾಂಸ್ಕೃತಿಕ‌ ನಾಯಕರು — ಶ್ರೀ ಬಸವಣ್ಣ

ವ್ಯಕ್ತಿಚಿತ್ರ : ಕರ್ನಾಟಕದ ಸಾಂಸ್ಕೃತಿಕ‌ ನಾಯಕರು  ಶ್ರೀ ಬಸವಣ್ಣ : ಮುಕ್ಕಣ್ಣ ಕರಿಗಾರ

ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಒಂದು ಮಹತ್ವದ, ಅವರ ರಾಜಕೀಯ ಜೀವನದಲ್ಲಿ ಒಂದು ಸಾರ್ಥಕ ಕಾರ್ಯಮಾಡಿದ್ದಾರೆ ಬಸವಣ್ಣನವರನ್ನು ‘ ಕರ್ನಾಟಕದ ಸಾಂಸ್ಕೃತಿಕ ನಾಯಕರು’ ಎಂದು ಘೋಷಿಸುವ ಮೂಲಕ.ಜನೆವರಿ ೧೮ ರ ಗುರುವಾರದಂದು ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆದ ಸಚಿವಸಂಪುಟ ಸಭೆಯಲ್ಲಿ ಬಸವಣ್ಣನವರನ್ನು ‘ಕರ್ನಾಟಕದ ಸಾಂಸ್ಕೃತಿಕ ನಾಯಕರು’ ಎಂದು ಘೋಷಿಸಲಾಗಿದೆ.ಕರ್ನಾಟಕದ ಕಾಂಗ್ರೆಸ್ ಸರಕಾರಕ್ಕೆ ಶಾಶ್ವತಕೀರ್ತಿ ತಂದುಕೊಟ್ಟ ಕಾರ್ಯವಿದು.ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಅಭಿನಂದನಾರ್ಹ‌ ಕಾರ್ಯವನ್ನು ಮಾಡಿದ್ದಾರೆ.ಬಸವಣ್ಣನವರು ಅವರನ್ನು ಅನುಗ್ರಹಿಸಲಿ.

ಕರ್ನಾಟಕ ಸರಕಾರವು ಬಸವಣ್ಣನವರನ್ನು ‘ ಕರ್ನಾಟಕದ ಸಾಂಸ್ಕೃತಿಕ ನಾಯಕರು’ ಎಂದು ಘೋಷಿಸಿದ ಸಂತಸದ ಸುದ್ದಿ ನನಗೆ ನಿನ್ನೆ ತಡವಾಗಿ ತಿಳಿಯಿತು ; ಇಲ್ಲದಿದ್ದರೆ ನಿನ್ನೆಯೇ ಬಸವಣ್ಣನವರ ಬಗ್ಗೆ ಲೇಖನ ಬರೆಯಲು ಪ್ರಾರಂಭಿಸುತ್ತಿದ್ದೆ.ನಮ್ಮ‌ಮಹಾಶೈವ ಧರ್ಮಪೀಠದ ಅತ್ಯಂತ ನಿಷ್ಠಾವಂತ ಭಕ್ತರೂ ಕಾರ್ಯಕರ್ತರೂ ಆಗಿರುವ ಗೋಪಾಲ ಮಸೀದಪುರ ಅವರ ತಾಯಿಯವರ ಅಂತ್ಯಕ್ರಿಯೆಯಲ್ಲಿ‌ ಪಾಲ್ಗೊಳ್ಳಲು ಮಸೀದಪುರಕ್ಕೆ ತೆರಳಿದ್ದೆ ನಿನ್ನೆ.ಮಸೀದಪುರ ಗ್ರಾಮವು ನಮ್ಮೂರು ಗಬ್ಬೂರಿಗೆ ಕೇವಲ ಐದೇ‌ ಕಿಲೋಮೀಟರ್ಗಳ ಅಂತರದಲ್ಲಿದ್ದರೂ ಅಲ್ಲಿ ಜಿಯೊ ಹೊರತಾಗಿ ಯಾವ ಮೊಬೈಲ್ ನೆಟ್ ವರ್ಕಗಳು ಸಿಗುತ್ತಿರಲಿಲ್ಲ.ನಾನು ಬಿ ಎಸ್ ಎನ್ ಎಲ್ ಮತ್ತು ಏರ್ ಟೆಲ್ ಸಿಮ್ಮುಗಳನ್ನು ಮಾತ್ರಹೊಂದಿದ್ದರಿಂದ ಊರಿನಿಂದ ಕೇವಲ ಐದೇ ಕಿಲೋಮೀಟರ್ ಗಳ ದೂರದಲ್ಲಿದ್ದರೂ ವ್ಯಾಪ್ತಿಪ್ರದೇಶದ ಹೊರಗೆ ಇದ್ದೆ ! ಸಂಜೆ ಆರುವರೆಯ ಸುಮಾರು ಊರಿಗೆ ಬಂದು ಮಹಾಶೈವ ಧರ್ಮಪೀಠವನ್ನು ತಲುಪಿದ ಬಳಿಕವೆ ಬಸವಣ್ಣನವರಿಗೆ ಕರ್ನಾಟಕದ ಸಾಂಸ್ಕೃತಿಕ ನಾಯಕರು ಎನ್ನುವ ಗೌರವ ಸಲ್ಲಿಸಲ್ಪಟ್ಟ ಸಂಗತಿಯು ಗೊತ್ತಾಯಿತು.ಇಪ್ಪತ್ತಕ್ಕೂ ಹೆಚ್ಚುಜನರು ವಾಟ್ಸಾಪ್ ಮೆಸೇಜ್ ಕಳಿಸಿದ್ದರು.ನನ್ನ ಶಿಷ್ಯ ಮಂಜುನಾಥ ಕರಿಗಾರ ವಿಷಯವನ್ನು ತಿಳಿಸಿದ್ದರೆ ಮತ್ತೊಬ್ಬ ಶಿಷ್ಯ ಗುರುಬಸವ ಹುರಕಡ್ಲಿಯವರು ಈ ಬಗ್ಗೆ ಕೆಲವು ದಿನಗಳ ಹಿಂದೆ ನಾನು ಬರೆದಿದ್ದ ಲೇಖನದ ಜೊತೆಗೆ ಕರ್ನಾಟಕ ಸರಕಾರವನ್ನು ಅಭಿನಂದಿಸಿ,ವಾಟ್ಸಾಪ್ ಗುಂಪುಗಳಲ್ಲಿ ಹಂಚಿಕೊಂಡಿದ್ದರು.ಮೈಸೂರು ಆಕಾಶವಾಣಿಯ ಪ್ರಸಾರ ನಿರ್ವಾಹಕ ಸ್ನೇಹಿತ ಜಾಂಪಣ್ಣ ಆಶಿಹಾಳ ಅವರು ‘ ಸರ್,ಬಸವಣ್ಣ ಸಾಂಸ್ಕೃತಿಕ ನಾಯಕ’ ಎಂದು ಮುಖ್ಯಮಂತ್ರಿಯವರು ಘೋಷಿಸಿದ್ದು ನಿಮ್ಮ ಹಿಂದಿನ ಆಗ್ರಹ ಲೇಖನ ನೆನಪಿಗೆ ಬಂದಿತು.ಈ ಬಗ್ಗೆ ನಿಮ್ಮ ಅಭಿಪ್ರಾಯ ಓದಲು ಉತ್ಸುಕನಾಗಿದ್ದೇನೆ’ ಎಂದು ಮೆಸೇಜ್ ಮಾಡಿದ್ದರು.ಜಾಂಪಣ್ಣ ಆಶಿಹಾಳ ಅವರು ಅತ್ಯಪರೂಪದ ಸ್ನೇಹಿತರು,ನನ್ನ ಬದುಕು ಬರಹಗಳೆರಡನ್ನೂ ತುಂಬ ಹೆಮ್ಮೆ,ಗೌರವಗಳಿಂದ ಕಾಣುತ್ತ,ಬೆಂಬಲಿಸುತ್ತ ಬಂದ ಮುಗ್ಧ ಮನಸ್ಸಿನ,ಉದಾರ ಹೃದಯಿಗಳು.ಜಾಂಪಣ್ಣನವರಂತೆ ಇನ್ನೂ ಹಲವು ಜನ ಸ್ನೇಹಿತರು ನಿನ್ನೆಯೇ ನನ್ನಿಂದ ಬಸವಣ್ಣನವರ‌ ಕುರಿತಾದ ಲೇಖನ ಬಯಸಿದ್ದರು.ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಬಸವಣ್ಣನವರ ಬಗ್ಗೆ ವಾಟ್ಸಾಪ್ ಗುಂಪುಗಳಲ್ಲಿ ಅತಿ ಹೆಚ್ಚಿನ ಬರವಣಿಗೆಯನ್ನು ಬರೆಯುತ್ತಿದ್ದವನು ನಾನೇ ಆಗಿದ್ದರಿಂದ ವಾಟ್ಸಾಪ್ ಗುಂಪುಗಳಲ್ಲಿ ಹರಿದಾಡುತ್ತಿರುವ ಮತ್ತು ವೈಯಕ್ತಿಕವಾಗಿ ಅವರಿಗೆ ರವಾನಿಸಲ್ಪಟ್ಟ ಬಸವಣ್ಣನವರನ್ನು‌ ಕುರಿತಾದ ನನ್ನ ಲೇಖನಗಳನ್ನು ಓದಿರುವ ಬಹಳಷ್ಟು ಜನ ಬಸವಾನುಯಾಯಿಗಳು ಮತ್ತು ಬಸವಾಭಿಮಾನಿಗಳು ಬಸವಣ್ಣನವರ ಕುರಿತ ನನ್ನ ಲೇಖನಗಳನ್ನು‌ ಓದಲು ಕಾತರತೆಯಿಂದ ಕಾಯುತ್ತಿರುವ ಸಂಗತಿ ನನಗೆ ಗೊತ್ತಿದೆ.ದಾವಣಗೆರೆಯಲ್ಲಿ ಡಿಸೆಂಬರ್ 24 ನೇ ತಾರೀಖಿನಂದು ಜರುಗಿದ್ದ ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭೆಯಲ್ಲಿ’ ಸರಕಾರವು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕರು’ ಎಂದು ಘೋಷಿಸಬೇಕು ಎಂದು ಒತ್ತಾಯಿಸುವ ನಿರ್ಣಯವನ್ನು ಅಂಗೀಕರಿಸಲಾಗಿತ್ತು.ಅದರ ಮರುದಿನವೆ ಅಂದರೆ 25.12.2023 ರಂದು ‘ ಸರಕಾರವು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕನಾಯಕರು ಎಂದು ಘೋಷಿಸಬೇಕು ಎನ್ನುವ ಲೇಖನವನ್ನು ಘೋಷಿಸಬೇಕಾದ ಕಾರಣಗಳ ಸಮೇತ ವಿವರಿಸಿ ಬರೆದಿದ್ದೆ.ಆ ಲೇಖನವು ವಾಟ್ಸಾಪ್ ಗುಂಪುಗಳಲ್ಲಿ ವೈರಲ್ ಆಗಿತ್ತು.ಅದಾದ ಬಳಿಕ ರಂಭಾಪುರಿ ಶ್ರೀಗಳವರು ಬಸವಣ್ಣನವರನ್ನು ‘ ಕರ್ನಾಟಕದ ಸಾಂಸ್ಕೃತಿಕ ನಾಯಕರು’ ಎಂದು ಘೋಷಿಸುವುದನ್ನು ಸಹಿಸಿಕೊಳ್ಳಲಾಗದೆ ಅಪಕ್ವಮನೋಭಾವದ ಅಸಹನೆಯನ್ನು ಹೊರಹಾಕಿದ್ದರು ಬಳ್ಳಾರಿ ಜಿಲ್ಲೆಯಲ್ಲಿ ನಡೆದ ಧಾರ್ಮಿಕ ಸಮಾರಂಭ ಒಂದರಲ್ಲಿ.ರಂಭಾಪುರಿ ಶ್ರೀಗಳ ನಿಲುವನ್ನು ಖಂಡಿಸಿ ನಾನು 26.12.2023 ರಂದು ” ಬಸವಣ್ಣನವರನ್ನು ವೈಭವೀಕರಿಸದೆ ರಂಭಾಪುರಿ ಶ್ರೀಗಳನ್ನು ವೈಭವೀಕರಿಸಬೇಕಿತ್ತೆ ?” ಎನ್ನುವ ಮತ್ತೊಂದು ಲೇಖನವನ್ನು ಬರೆದೆ.ಈ ಲೇಖನ ವಾಟ್ಸಾಪ್ ಗುಂಪುಗಳಲ್ಲಿ ಮೊದಲಿನ ಲೇಖನಕ್ಕಿಂತ ಹೆಚ್ಚು ವೈರಲ್ ಆಯಿತು.ಕರ್ನಾಟಕದುದ್ದಗಲದಿಂದಲೂ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿತ್ತು ನನ್ನ ವಾಟ್ಸಾಪ್ ಗೆ.ಆ ಕಾರಣದಿಂದ ಬಹಳಷ್ಟು ಜನರು ನಿನ್ನೆಯೇ ನಾನು ಬಸವಣ್ಣನವರ ಬಗ್ಗೆ ಲೇಖನ ಬರೆಯಬಹುದು ಎಂದು ನಿರೀಕ್ಷಿಸಿದ್ದರೆ ಅದು ಸಹಜ.

ಬಸವಣ್ಣನವರಿಗೆ ಸರಕಾರವು ” ಕರ್ನಾಟಕದ ಸಾಂಸ್ಕೃತಿಕ ನಾಯಕ” ಎನ್ನುವ ಅಪರೂಪದ– ಮಹಾರಾಷ್ಟ್ರ ಸರಕಾರವು ಛತ್ರಪತಿ ಶಿವಾಜಿಗೆ ಸಲ್ಲಿಸಿದ ಮಹಾರಾಷ್ಟ್ರ ರಾಜ್ಯದ ಐಕಾನ್ ಗೌರವವನ್ನು ಹೊರತುಪಡಿಸಿದರೆ ಕರ್ನಾಟಕವೇ ದೇಶದಲ್ಲಿ ಎರಡನೇ ರಾಜ್ಯ– ಗೌರವ ಸಲ್ಲಿಸಿದ ಸಂಗತಿಯನ್ನು ತಿಳಿದು ಎಲ್ಲರಿಗಿಂತ ಹೆಚ್ಚು ಸಂಭ್ರಮಿಸಿದವನು ನಾನು.ಆ ಸಂಭ್ರಮ ಎಂತಹದ್ದು ಎಂದರೆ ವೈಯಕ್ತಿಕ ಕಾರಣಗಳಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಬಗ್ಗೆ ‘ಉಗ್ರಪ್ರತಾಪಿ’ಯಾಗಿ ಕೆಂಡದುಂಡೆಗಳನ್ನು ಹೊರಚೆಲ್ಲುವ ಲೇಖನಗಳನ್ನು ಬರೆಯುತ್ತಿದ್ದ ನಾನು ಸಿದ್ಧರಾಮಯ್ಯನವರು ಬಸವಣ್ಣನವರಿಗೆ ರಾಜ್ಯದ ಸಾಂಸ್ಕೃತಿಕ ನಾಯಕರು ಎಂದು ಗೌರವ ಸಲ್ಲಿಸಿದ್ದರಿಂದ ಅವರ ಬಗ್ಗೆ ತುಸು ಮೆದು ಧೋರಣೆಯನ್ನೂ ತಳೆದೆ ! ಬಸವಣ್ಣನವರಿಗೆ ಸಲ್ಲಿಸಿದ ಈ ಗೌರವ ಅತಿದೊಡ್ಡಗೌರವವಾದ್ದರಿಂದ ನನಗೆ ಸಂತಸ ಉಂಟಾಗಿತ್ತು.ಡಿಸೆಂಬರ್ 25 ರಂದು ಬರೆದಿದ್ದ ಲೇಖನದಲ್ಲಿಯೇ ನಾನು ಈ ಕುರಿತು ಬರೆಯುತ್ತ ‘ಲಿಂಗಾಯತ ಜನಾಂಗದ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್ .ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರಿಬ್ಬರು ಮಾಡಿರದ ಮಹಾನ್ ಕಾರ್ಯಮಾಡಿದ ಕೀರ್ತಿ,ಶ್ರೇಯಸ್ಸು ತಮಗೊದಗುತ್ತದೆ ‘ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಆಗ್ರಹಿಸಿದ್ದೆ.ಆ ಲೇಖನವನ್ನು ಬಹಳಷ್ಟು ಲಿಂಗಾಯತ ಮಠ ಪೀಠಾಧೀಶರುಗಳು ಮತ್ತು ಲಿಂಗಾಯತ ಸ್ವತಂತ್ರ ಧರ್ಮ ಹೋರಾಟದ ಮುಂಚೂಣಿ ನಾಯಕರುಗಳು ಮೆಚ್ಚಿಕೊಂಡಿದ್ದರು.

ಬಸವಣ್ಣನವರಿಗೆ ಸಲ್ಲಬೇಕಾಗಿದ್ದ ಒಂದು ಗೌರವವನ್ನು ಸಲ್ಲಿಸುವ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ನೇತೃತ್ವದ ರಾಜ್ಯ ಕಾಂಗ್ರೆಸ್ ಸರಕಾರವು ಒಂದು ಅದ್ಭುತಕಾರ್ಯವನ್ನು ಮಾಡಿದೆ.ಬಸವಣ್ಣನವರು ವಿಶ್ವವಿಭೂತಿಗಳು,ಅವರ ಜೀವನ ಸಾಧನೆ- ಸಿದ್ಧಿ ಮತ್ತು ಸಂದೇಶಗಳು ಕನ್ನಡಿಗರಾದ ನಮಗಷ್ಟೇ ಅಲ್ಲ ಇಡೀ ವಿಶ್ವಕ್ಕೆ ಅನುಕರಣೀಯ ಆದರ್ಶವಾದ ಶಿವಬೆಳಕು.ಕರ್ನಾಟಕದ ಸಾಂಸ್ಕೃತಿಕ ನಾಯಕರು ಎಂತೋ ಅಂತೆಯೇ ಬಸವಣ್ಣನವರು ‘ ಭಾರತದ ರಾಷ್ಟ್ರಪುರುಷರು’.ಭಾರತದ ಸಮಾಜೋ ಧಾರ್ಮಿಕ ಇತಿಹಾಸದಲ್ಲಿ,ಸಮಾಜಸುಧಾರಕರಲ್ಲಿ ಬಸವಣ್ಣನವರಿಗೆ ಸರಿದೊರೆಯಾಗಿರುವ ಮತ್ತೊಬ್ಬ ನಾಯಕರಿಲ್ಲ,ಸುಧಾರಕರಿಲ್ಲ ಎನ್ನುವುದು ಅತಿಶಯೋಕ್ತಿಯ ಮಾತಲ್ಲ,ಸತ್ಯಸ್ಯಸತ್ಯ ಸಂಗತಿಯೂ ಅಹುದು.ಕೇಂದ್ರ ಸರಕಾರವೇ ಬಸವಣ್ಣನವರ ವಿಶ್ವವಿಭೂತಿ ವ್ಯಕ್ತಿತ್ವವನ್ನು ಗುರುತಿಸಿ,ಗೌರವಿಸುವ ಕೆಲಸ ಮಾಡಬೇಕಿತ್ತು.ಅದಾಗದಿದ್ದರೇನಂತೆ ಕರ್ನಾಟಕ ಸರಕಾರವು ಬಸವಣ್ಣನವರಿಗೆ ಸಲ್ಲಲೇಬೇಕಾಗಿದ್ದ ಮಹತ್ವದ ಗೌರವ ಒಂದನ್ನು ಸಲ್ಲಿಸಿದೆ.

ಬಸವಣ್ಣನವರಿಗೆ ‘ ಕರ್ನಾಟಕದ ಸಾಂಸ್ಕೃತಿಕ ನಾಯಕರು’ ಎಂದು ನೀಡಿದ ಗೌರವ ಎಂತಹದ್ದು ,ಅದರ ಸ್ವರೂಪವೇನು ಎನ್ನುವ ಗೊಂದಲವಿದೆಯಾದ್ದರಿಂದ ಮೊದಲು ಅದನ್ನು ವಿವರಿಸಿಯೇ ಬಸವಣ್ಣನವರ ಬಗ್ಗೆ ಬರೆಯುವೆ.’ಸಂಸ್ಕೃತಿ ‘ಎಂದರೆ ಕೆಲವು ಜನರು ಪದವಿ ಮತ್ತು ಸ್ನಾತಕೋತ್ತರ ಪದವಿ ತರಗತಿಗಳಲ್ಲಿ ಓದುವ ಕನ್ನಡ,ಇಂಗ್ಲಿಷ್,ಅರ್ಥಶಾಸ್ತ್ರ,ರಾಜ್ಯಶಾಸ್ತ್ರ,ಇತಿಹಾಸಗಳಂತಹ ಯಾವುದೋ ಐಚ್ಛಿಕ ವಿಷಯ ಎಂದು ತಿಳಿದುಕೊಂಡಿದ್ದಾರೆ.ಹಾಗಾಗಿ ಇದೊಂದೇ ವಿಷಯಕ್ಕಾಗಿ ಅವರನ್ನು ಗೌರವಿಸಬೇಕಿತ್ತೆ ಎಂದೂ ಪ್ರಶ್ನಿಸಿದ್ದಾರೆ.ಆದರೆ ಸಂಸ್ಕೃತಿ ಎನ್ನುವುದು ಶಾಲೆ ಕಾಲೇಜು ವಿಶ್ವವಿದ್ಯಾಲಯಗಳಲ್ಲಿ ಕಲಿಯುವ ಐಚ್ಛಿಕ ವಿಷಯಗಳಂತೆ ಯಾವುದೇ ಒಂದು ನಿರ್ದಿಷ್ಟವಿಷಯಕ್ಕೆ ಸೀಮಿತವಾದ ಅಧ್ಯಯನ ವಸ್ತುವಲ್ಲ.ಸಂಸ್ಕೃತಿ ಒಂದು ಪ್ರದೇಶದ,ಒಂದು ನಾಡಿನ ಜೀವನ ಪದ್ಧತಿ,ಬಾಳ ಬಟ್ಟೆ.ಸಂಸ್ಕೃತಿಯಲ್ಲಿ ಕಲೆ,ಸಾಹಿತ್ಯ,ಧರ್ಮ,ಆಡಳಿತ,ಶಿಕ್ಷಣ,ತಂತ್ರಜ್ಞಾನ ಸೇರಿದಂತೆ ಎಲ್ಲವೂ ಸಮಾವೇಶಗೊಳ್ಳುತ್ತವೆ.ಸಂಸ್ಕೃತಿಯನ್ನು ಕುರಿತಾದ ಕೆಲವು ಪ್ರಸಿದ್ಧ ವ್ಯಾಖ್ಯೆ ( definition) ಗಳನ್ನು ಗಮನಿಸಿ,ಅದನ್ನು ಅರ್ಥೈಸಿಕೊಂಡು ಮುಂದೆ ಹೋಗೋಣ.

ಇಂಗ್ಲಿಷಿನ Culture ಪದವನ್ನು ನಾವು ಸಂಸ್ಕೃತಿ ಎಂದು ಅರ್ಥೈಸಿಕೊಂಡಿದ್ದೇವೆ.ಆದರೆ ಸಂಸ್ಕೃತಿಯ ನಿಜಾರ್ಥವನ್ನು ವ್ಯಕ್ತಪಡಿಸಲಾರದು ಇಂಗ್ಲಿಷಿನ Culture .ನಮ್ಮಲ್ಲಿ ಧರ್ಮ ಮತ್ತು ಸಂಸ್ಕೃತಿಗಳು ಒಂದಾಗಿಯೇ ಸಂಸ್ಕೃತಿಯಾಗಿವೆ.ಭಾರತದಲ್ಲಿ ಹಿಂದೂ ಮುಸ್ಲಿಂ ಕ್ರೈಸ್ತ ಬೌದ್ಧ ಜೈನ ಸಿಖ್ಖ್ ಪಾರಸಿಕರಾದಿ ಎಷ್ಟೋ ಧರ್ಮಗಳನ್ನು ಅನುಸರಿಸುವ ಜನಸಮೂಹಗಳಿರಬಹುದು ಆದರೆ ಅವರೆಲ್ಲರೂ ಆ ಎಲ್ಲ ಮತಧರ್ಮೀಯರು ಸೇರಿ ರೂಪುಗೊಂಡಿದೆ ‘ ಭಾರತದ ಸಂಸ್ಕೃತಿ’. ‘ ವಿವಿಧತೆಯಲ್ಲಿ ಏಕತೆ’ ಯು ಭಾರತದ ಸಂಸ್ಕೃತಿಯ ಸಾರ.ಭಾರತ ಎನ್ನುವ ವಿಶಾಲ ಭೌಗೋಳಿಕ ಕ್ಷೇತ್ರದಲ್ಲಿ ವಾಸಿಸುತ್ತಿರುವ ಭಿನ್ನ ವಿಭಿನ್ನ ಜನಸಮುದಾಯಗಳು ತಮ್ಮ ಮತಧರ್ಮನಂಬಿಕೆಗಳಾಚೆಯ ಭಾರತದ ನಾಗರಿಕತ್ವವನ್ನು ಒಪ್ಪಿ,ಈ ದೇಶವಾಸಿಗಳೆಲ್ಲರೂ ಒಂದೇ ಎನ್ನುವ ಸಮೈಕ್ಯಭಾವನೆಯಲ್ಲಿ ಒಂದಾಗಿ ಬೆರೆತು ಬಾಳುತ್ತಿರುವುದೇ ಭಾರತದ ಸಂಸ್ಕೃತಿ.

‌ಮ್ಯಾಥ್ಯೂ ಆರ್ನಾಲ್ಡ್ ನ ಪ್ರಕಾರ “ಪೂರ್ಣತೆಯ ಸಿದ್ಧಿಗಾಗಿ ಮನುಷ್ಯನು ಮಾಡುತ್ತಿರುವ ಪ್ರಯತ್ನವೇ ಸಂಸ್ಕೃತಿ”. ಮುಂದುವರೆದು ಆರ್ನಾಲ್ಡ್ ಹೇಳುವುದು ” ಸಂಸ್ಕೃತಿ ಎಂಬುದು ಪ್ರಧಾನವಾಗಿ ಆಂತರಂಗಿಕವಾದ ವಿಕಾಸಕ್ಕೆ ಸಂಬಂಧಿಸಿದುದು.ಮನುಷ್ಯರಲ್ಲಿನ ಮೃಗತ್ವವನ್ನು ಅಳಿಸಿ ಅಲ್ಲಿ ನಿಜವಾದ ಮಾನವೀಯತೆಯನ್ನು ಸ್ಥಾಪಿಸುವುದೇ ಸಂಸ್ಕೃತಿ” ಎನ್ನುತ್ತಾನೆ.ಮ್ಯಾಥ್ಯೂ ಆರ್ನಾಲ್ಡ್ ನ ಪ್ರಕಾರ ನಮ್ಮನ್ನು ನಾವು ಉತ್ತಮಪಡಿಸಿಕೊಳ್ಳುವುದೇ ಸಂಸ್ಕೃತಿ.

ಪ್ರಸಿದ್ಧ ಕವಿ ಟಿ.ಎಸ್.ಎಲಿಯೆಟ್ ನು ಸಂಸ್ಕೃತಿಯನ್ನು ವ್ಯಾಖ್ಯಾನಿಸುವುದು ” ಮೊದಲನೆಯದಾಗಿ ಮಾನವ ಶಾಸ್ತ್ರಜ್ಞರನ್ನು ಅನುಸರಿಸಿ ಹೀಗೆ ಹೇಳಬಹುದು– ಒಂದು ಪ್ರದೇಶದಲ್ಲಿ ವಾಸಿಸುತ್ತಿರುವ ಒಂದು ಜನಾಂಗದ ಜೀವನವಿಧಾನವೇ ಸಂಸ್ಕೃತಿ.ಈ ಸಂಸ್ಕೃತಿಯು ಅವರ ಕಲೆಗಳಲ್ಲಿ,ಸಾಮಾಜಿಕ ವ್ಯವಸ್ಥೆಯಲ್ಲಿ,ಅವರ ಆಚಾರ ವ್ಯವಹಾರಗಳಲ್ಲಿ ,ಧರ್ಮದಲ್ಲಿ ವ್ಯಕ್ತವಾಗುತ್ತದೆ” . “….. ಹುಟ್ಟಿನಿಂದ ಬಾರದೆ,ಮನುಷ್ಯ ತನ್ನ ಪರಿಸರದಲ್ಲಿ ಕಲಿತುಕೊಳ್ಳುವ ಭಾಷೆ,ಉಪಕರಣಗಳ ತಯಾರಿಕೆ,ಕೈಗಾರಿಕೆ,ಕಲೆ,ವಿಜ್ಞಾನ,ಕಾನೂನು,ಆಡಳಿತ,ನೀತಿ ಮತ್ತು ಧರ್ಮ ಇತ್ಯಾದಿಗಳೆಲ್ಲವನ್ನೂ ಒಳಗೊಳ್ಳುತ್ತದೆ ಸಂಸ್ಕೃತಿ”.

ರವೀಂದ್ರನಾಥ ಠಾಕೂರ್ ಅವರು ಸಂಸ್ಕೃತಿಯನ್ನು ವ್ಯಾಖ್ಯಾನಿಸುವುದು ಹೀಗೆ :–” ಮನುಷ್ಯನ ಸಾಂಘಿಕ ಜೀವನದಲ್ಲಿ ಅಭಿವ್ಯಕ್ತಗೊಂಡ ಧರ್ಮವೇ ಸಂಸ್ಕೃತಿ.ಜೀವನಾದರ್ಶಗಳನ್ನು ಮೌಲ್ಯಗಳನ್ನು ನಮ್ಮ ಮುಂದಿಡುವುದು ಸಂಸ್ಕೃತಿಯ ಘನೋದ್ದೇಶಗಳಲ್ಲೊಂದು.ಎಲ್ಲಿ ಸರಳವಾದ ರೂಪದಲ್ಲಿ ಅಧ್ಯಾತ್ಮವು ಅಭಿವ್ಯಕ್ತವಾಗುವುದೋ ಅಲ್ಲಿ ಸಂಸ್ಕೃತಿಯು ಅತ್ಯುತ್ತಮ ರೂಪದಲ್ಲಿ ಸೃಷ್ಟಿಯಾಯಿತೆಂದೇ ಭಾವಿಸಬೇಕು.ರವೀಂದ್ರನಾಥ ಠಾಕೂರ್ ಅವರು ಸಂಸ್ಕೃತಿಯನ್ನು ಸಂಕ್ಷಿಪ್ತವಾಗಿ ” ಮನೋಮಯ ಜೀವನ”( the life of mind) ಎಂದು ವ್ಯಾಖ್ಯಾನಿಸುತ್ತಾರೆ.

ಸಂಸ್ಕೃತಿಯನ್ನು ಕುರಿತಾದ ಪ್ರಪಂಚದ ಪ್ರಸಿದ್ಧ ಕವಿ ಸಾಹಿತಿ,ತತ್ತ್ವಜ್ಞಾನಿಗಳ ಈ ವ್ಯಾಖ್ಯೆಗಳನ್ನು ಗಮನಿಸಿದಾಗ ಸಂಸ್ಕೃತಿಯು ಒಂದು ಪ್ರದೇಶವಾಸಿಗಳಾದ ಸಮಷ್ಟಿಜನತೆಯ ಜೀವನವಿಧಾನ ಎಂದು ಅರ್ಥವಾಗುತ್ತದೆ.ಆದ್ದರಿಂದ ಸಂಸ್ಕೃತಿ ಎಂದರೆ ಯಾವುದೋ ಒಂದು ಅಧ್ಯಯನ ವಿಷಯ ಎನ್ನುವ ಸೀಮಿತಾರ್ಥದಲ್ಲಿ ಅದನ್ನು ಗ್ರಹಿಸಬಾರದು.ಮನುಷ್ಯರು ಸಾಧಿಸಿದ ಎಲ್ಲ ಸಾಧನೆ ಸಿದ್ಧಿಗಳು ಸಂಸ್ಕೃತಿಯಲ್ಲಿ ಸಮಾವೇಶಗೊಳ್ಳುತ್ತವೆ.ಈ ಅರ್ಥದಲ್ಲಿ ಕರ್ನಾಟಕದ ಸಂಸ್ಕೃತಿ ಎಂದರೆ ಸಹಸ್ರಾರು ವರ್ಷಗಳಿಂದ ಪ್ರವಹಿಸುತ್ತ ಬಂದಿರುವ ಜೀವನಧಾರೆ.ಕರ್ನಾಟಕವು ಇಂದಿನ ಭಾರತ ದೇಶದ ಒಂದು ರಾಜ್ಯ.ಆದರೆ ಹಿಂದಿನ ಚಪ್ಪನ್ನೈವತ್ತಾರು ದೇಶಗಳುಳ್ಳ ಭರತಖಂಡ,ಆರ್ಯಾವೃತ್ತದ ಒಂದು ಪ್ರಮುಖ ದೇಶವಾಗಿತ್ತು.ರಾಮಾಯಣ,ಮಹಾಭಾರತಗಳಲ್ಲಿ ಕರ್ನಾಟಕವನು ಕುಂತಳ,ಕರ್ನಾಟ ದೇಶಗಳಿಂದ ಗುರುತಿಸಲಾಗಿದೆ.ಹಿರಿಯ ಸಂಶೋಧಕ ಎಂ.ಗೋವಿಂದ ಪೈಯವರು ಕ್ರಿಪೂ ಮೂರನೇ ಶತಮಾನದ ಗ್ರೀಕ್ ನಾಟಕ ಒಂದರಲ್ಲಿ ‘ ಪಾತ್ರೆಗೆ ಕೊಂಚ ಮಧುವನ್ನು ಹಾಕು’ ಎನ್ನುವರ್ಥದ ಪದಗಳಿವೆ ಎಂದಿದ್ದಾರೆ.ಐತಿಹಾಸಿಕವಾಗಿ ಅಶೋಕನ ಶಿಲಾಶಾಸನಗಳ ಕಾಲದಿಂದಲೂ ಕರ್ನಾಟಕದ ಅಸ್ತಿತ್ವ, ಮಹತ್ವವನ್ನು ಗುರುತಿಸಬಹುದು.ಪ್ರಾಕೃತ ಸಂಸ್ಕೃತ ಭಾಷೆಗಳೊಂದಿಗೆ ಬೆಳೆಯುತ್ತ ಬಂದ ಕನ್ನಡ ಭಾಷೆಯ ಮೊದಲ ಶಾಸನ ಹಲ್ಮಿಡಿ ಶಾಸನ.’ ಆರಂಕುಶಮಿಟ್ಟೊಡಂ ನೆನೆವುದೆನ್ನ ಮನ ಬನವಾಸಿ ದೇಶಮಂ’ ಎಂದ ಕನ್ನಡದ ಆದಿಕವಿ ಪಂಪನಿಂದ ಕನ್ನಡ ಭಾಷೆ,ಸಂಸ್ಕೃತಿಯ ಸತ್ತ್ವ ತತ್ತ್ವಗಳನ್ನು ತಿಳಿದುಕೊಳ್ಳಬಹುದು.ಮೊದಲು ಶೈವರಾಗಿದ್ದ ಪಂಪನ ಪೂರ್ವಿಜರು ಜೈನಮತವನ್ನು ಸ್ವೀಕರಿಸಿ ಜೈನ ಮತಾವಲಂಬಿಗಳಾದರು.ಜೈನಮತದ ನಂಬಿಕೆಗನುಗುಣವಾಗಿ ಒಂದು ಲೌಕಿಕ( ವಿಕ್ರಮಾರ್ಜುನ ವಿಜಯ) ಮತ್ತೊಂದು ಅಲೌಕಿಕ( ಆದಿಪುರಾಣ) ಕಾವ್ಯಗಳನ್ನು ಬರೆಯುವ ಸಂಪ್ರದಾಯವನ್ನು ಹುಟ್ಟುಹಾಕಿದನು.ಪಂಪನ ‘ ಮನುಷ್ಯಕುಲ ತಾನೊಂದೆ ವಲಂ’ ವಿಚಾರಧಾರೆಯು ಕನ್ನಡಸಂಸ್ಕೃತಿಯ ಸತ್ತ್ವದ ಸಂಕೇತ.ಪಂಪನ ನಂತರ ರನ್ನ ಜನ್ನ ಪೊನ್ನರೆಂಬ ಜೈನ ಕವಿಗಳು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುತ್ತಾರೆ.ಕನ್ನಡದ ಜೈನ ಕವಿಗಳು ತಾವು ಜೈನಮತಧರ್ಮೀಯರಾಗಿದ್ದರೂ ಅವರು ಆಯ್ದುಕೊಂಡ ಲೌಕಿಕ ಕಾವ್ಯವಸ್ತು ರಾಮಾಯಣ ಮಹಾಭಾರತಗಳಂತಹ ಭಾರತೀಯ ಜೀವನಪದ್ಧತಿಯನ್ನು ಪ್ರತಿಬಿಂಬಿಸುವ ಕಾವ್ಯ,ಇತಿಹಾಸಗಳೆ.ಕನ್ನಡ ಸಾಹಿತ್ಯವು ಪಂಪಯುಗದಿಂದ ಬಸವಯುಗದ ವೈಭವಕ್ಕೆ ಬರುವ ಪೂರ್ವದಲ್ಲಿಯೇ ಆ ವೈಭವಮಯಯುಗದ ಅರುಣೋದಯವಾಗಿತ್ತು.ಜೇಡರದಾಸಿಮಯ್ಯನು ಕನ್ನಡದ ಮೊದಲವಚನಕಾರನಾದರೆ ಮಾದಾರ ಚೆನ್ನಯ್ಯ,ಡೋಹಾರ ಕಕ್ಕಯ್ಯ,ವೀರಗೊಲ್ಲಾಳ ಮೊದಲಾದವರು ಬಸವಪೂರ್ವ ವಚನಕಾರರು.ಈ ಎಲ್ಲ ಪರಂಪರೆಯ ಪ್ರವಾಹದಲ್ಲರಳಿದೆ ಬಸವಣ್ಣನೆಂಬ ಕನ್ನಡ ಸಂಸ್ಕೃತಿಯ ವಿರಾಟ್ ವ್ಯಕ್ತಿತ್ವ. ಶ್ರೀವಿಜಯನು ತನ್ನ ಕವಿರಾಜಮಾರ್ಗದಲ್ಲಿ ವಿವರಿಸಿದಂತೆ ಕರ್ನಾಟಕವು’ ಕಾವೇರಿಯಿಂದ ಗೋದಾವರಿವರೆಮಿರ್ದ ನಾಡದಾ ಕನ್ನಡದೊಳ್’ ಎಂಬಷ್ಟು ವಿಸ್ತಾರವಾಗಿತ್ತು.ಇಂದಿನ ಮಹಾರಾಷ್ಟ್ರ ರಾಜ್ಯದ ಬಹುಭಾಗವು ಹಿಂದೆ ಕರ್ನಾಟಕವಾಗಿತ್ತು.ಮಹಾರಾಷ್ಟ್ರ ರಾಜ್ಯದ ಪ್ರಸಿದ್ಧ ಯಾತ್ರಾಸ್ಥಳಗಳಾಗಿರುವ ಸೊಲ್ಲಾಪುರ,ತುಳಜಾಪುರ ಮತ್ತು ಪಂಢರಾಪುರಗಳು ಅಖಂಡಕರ್ನಾಟಕದ ಭಾಗವಾಗಿದ್ದವು ಹಿಂದೆ.ಸಂತ ತುಕಾರಾಮ ಮತ್ತು ಜ್ಞಾನೇಶ್ವರರು ಪಾಂಡುರಂಗ ವಿಠಲನನ್ನು ‘ ಕಾನಡಿ ವಿಠ್ಠಲ’ ಎಂದಿದ್ದಾರೆ.ಬಸವಣ್ಣನವರು ತಮ್ಮ ಆರಂಭಿಕ ಜೀವನದ ಕೆಲಕಾಲ ಇಂದಿನ ಮಹಾರಾಷ್ಟ್ರ ರಾಜ್ಯದ ಒಂದು ತಾಲೂಕು ಆಗಿರುವ ಮಂಗಳವೇಢೆಯಲ್ಲಿ ಕಳೆದಿದ್ದರು.ಕನ್ನಡದ ವಚನಸಾಹಿತ್ಯದ ಶರಣರುಗಳ ಮೇಲೆ ಗಾಢಪ್ರಭಾವ ಬೀರಿರುವ ಶ್ರೀಶೈಲವು ಸಹ ಹಿಂದೆ ಕರ್ನಾಟಕದಲ್ಲಿತ್ತು.ಬಸವಣ್ಣನವರ ಕಟೂಕ್ತಿಗಳಿಗೆ ಗುರಿಯಾಗಿರುವ ಮೈಲಾರನು ಕೂಡ ಬಸವಣ್ಣನವರ ಕಾರ್ಯಕ್ಷೇತ್ರವಾದ ಕಲ್ಯಾಣಕ್ಕೆ ಸಮೀಪವೇ ಇರುವ ಬೀದರ್ ಜಿಲ್ಲೆಯಲ್ಲಿದ್ದಾನೆ.ಬಸವಣ್ಣನವರು ವೈದಿಕ ಸಾಹಿತ್ಯವನ್ನೂ ಅಧ್ಯಯನ ಮಾಡಿದ್ದರು.ಅವರಿಗೆ ವೇದ,ಉಪನಿಷತ್ತು, ಆಗಮಗಳು,ಭಗವದ್ಗೀತೆ,ರಾಮಾಯಣ,ಮಹಾಭಾರತ,ಅಷ್ಟಾದಶ ಪುರಾಣಗಳು,ಷಡ್ದರ್ಶನಗಳು ಇವೆ ಮೊದಲಾದ ಶಾಸ್ತ್ರ ಸಂಹಿತೆ ಸೂತ್ರಗಳಲ್ಲಿ ಸಾಕಷ್ಟು ಪ್ರಾವಿಣ್ಯವಿತ್ತು.ತಮಿಳುನಾಡಿನ ಅರವತ್ತು ಮೂರು ಮಂದಿ ಪುರಾತನರು ಮತ್ತು ತಮ್ಮ ಪೂರ್ವಿಕರಾದ ಕನ್ನಡದ ವಚನಕಾರರ ಪರಿಚಯ ಇತ್ತು.ಈ ಎಲ್ಲ ವಿಶ್ವದರ್ಶನವನ್ನುಂಡೇ ಪ್ರಕಟಗೊಂಡಿತ್ತು ಬಸವಣ್ಣನವರ ವಿರಾಟ್ ಪುರುಷ ವ್ಯಕ್ತಿತ್ವ.ವೀರಭದ್ರ ಮತ್ತು ಆಂಜನೇಯ ಈ ಇಬ್ಬರು ಮಹಾನ್ ಪುರುಷರುಗಳು ಕೂಡ ಕನ್ನಡಿಗರೆ.ಕನ್ನಡ ಸಂಸ್ಕೃತಿಯ ಮೇಲೆ ಬೌದ್ಧ,ಜೈನ,ಚಾರುವಾಕ ಮತಗಳ ಪ್ರಭಾವವಾಗಿದೆ.ಕಾಪಾಲಿಕರು ಕಾಳಾಮುಖರು ಕನ್ನಡದಲ್ಲಿ ಶೈವ ಸಂಸ್ಕೃತಿಯನ್ನು ಬಿತ್ತಿ ಬೆಳೆದಿದ್ದಾರೆ.ಕಾಶ್ಮೀರ ಶೈವವು ಕರ್ನಾಟಕದಲ್ಲಿ ಪ್ರಚಾರದಲ್ಲಿದ್ದ ಮತವಾಗಿತ್ತು.ಭಾರತದ ಸಮನ್ವಯ ಸಂಸ್ಕೃತಿಯೇ ಕನ್ನಡ ಸಂಸ್ಕೃತಿಯಾಗಿದ್ದು ಬಸವಣ್ಣನವರು ಈ ಸಾಂಸ್ಕೃತಿಕ ಪರಂಪರೆಯ ಗಂಗೆಯಲ್ಲಿ ಮಿಂದು ಮನುಕುಲಕ್ಕೆ ಆದರ್ಶವಾಗಬಲ್ಲ ಜೀವನದರ್ಶನ ಒಂದನ್ನು ಪ್ರತಿಪಾದಿಸಿದರು.ಕರ್ನಾಟಕದಲ್ಲಿ ಸಹಸ್ರಾರು ವರ್ಷಗಳಿಂದ ಪ್ರವಹಿಸುತ್ತ ಬಂದಿದ್ದ ಜೀವನ ಪ್ರವಾಹದ ಉದಾತ್ತತೆಯನ್ನು ಮೈಗೂಡಿಸಿಕೊಂಡು ವಿಶ್ವವಿಭೂತಿಗಳಾದರು.ಆಕಾಶದಲ್ಲಿ ಲಕ್ಷಾಂತರ ಗ್ರಹ ನಕ್ಷತ್ರ ತಾರೆ ನಿಹಾರಿಕೆಗಳಿದ್ದರೂ ಸೂರ್ಯನೊಬ್ಬನೇ ಬೆಳಗುವಂತೆ ನಡೆದು ಬಂದಿದ್ದ ಕನ್ನಡ ಪರಂಪರೆಯ ಕಿರುನಕ್ಷತ್ರಗಳ ಮಾಲೆಯಲ್ಲಿ ಜ್ವಾಜಲ್ಯಮಾನವಾಗಿ ಬೆಳಗುವ ಭಾಸ್ಕರರಾದರು ಬಸವಣ್ಣನವರು,ಬಸವಭಾಸ್ಕರರಾದರು.

ಕನ್ನಡ ಸಂಸ್ಕೃತಿಯನ್ನು ರೂಪಿಸಿದ ಅಗ್ಗಳಿಕೆ- ಹೆಗ್ಗಳಿಕೆಗಳು ಬಸವಣ್ಣನವರಿಗೆ ಸಲ್ಲುವುದರಿಂದ ಅವರನ್ನು ‘ ಕರ್ನಾಟಕದ ಸಾಂಸ್ಕೃತಿಕ ನಾಯಕರು’ ಎಂದು ಗುರುತಿಸಿ,ಗೌರವಿಸಿದ್ದು ಸಾರ್ಥಕ ಕಾರ್ಯವಾಗಿದೆ.ಕನ್ನಡ ಸಂಸ್ಕೃತಿಗೆ ಬಸವಣ್ಣನವರ ಅನನ್ಯ ಕೊಡುಗೆ ಏನು,ಬಸವಣ್ಣನವರು ಕರ್ನಾಟಕದ ಸಾಂಸ್ಕೃತಿಕ ನಾಯಕರು ಆಗಿ ಹೊರಹೊಮ್ಮಿದ ಬಗೆ ಹೇಗೆಂಬುದನ್ನು ಬಸವಣ್ಣನವರ ಉಪಲಬ್ಧ ೯೬೧ ವಚನಗಳ ಆಧಾರದ ಮೇಲೆ ಕಟ್ಟಿಕೊಡುವ ಪ್ರಯತ್ನ ಮಾಡುತ್ತಿದ್ದೇನೆ.

೧೯.೦೧.೨೦೨೪

( ಮುಂದುವರೆಯುತ್ತದೆ)

About The Author