ನಿಜಶರಣ ಅಂಬಿಗರ ಚೌಡಯ್ಯ

ವ್ಯಕ್ತಿಚಿತ್ರ : ನಿಜಶರಣ ಅಂಬಿಗರ ಚೌಡಯ್ಯ : ಮುಕ್ಕಣ್ಣ ಕರಿಗಾರ

ಅಂಬಿಗ ಅಂಬಿಗ ಎಂದು ಕುಂದ ನುಡಿಯದಿರು
ನಂಬಿದರೆ ಒಂದೆ ಹುಟ್ಟಲಿ
ಕಡೆಯ ಹಾಯಿಸುವನಂಬಿಗರ ಚೌಡಯ್ಯ

ಎಂದು ದಿಟ್ಟತನದಿಂದ ನುಡಿದ ಗಟ್ಟಿಧ್ವನಿಯ ವಚನಕಾರ ಅಂಬಿಗರ ಚೌಡಯ್ಯ ಕನ್ನಡದ ವಚನಕಾರರಲ್ಲಿ ವಿಶಿಷ್ಟ ವ್ಯಕ್ತಿತ್ವವನ್ನುಳ್ಳ,ಸ್ವತಂತ್ರಮತಿಯ,ಕಂಡುದುದನ್ನು ಕಂಡಂತಾಡಿದ ವಚನಕಾರ.ಅಂಬಿಗನು ಕೀಳು ಜಾತಿಯವನೆಂದು ನನ್ನ ಕುಲವನ್ನೇಕೆ ನಿಂದಿಸುತ್ತೀರಿ.ಬಂದು ನೋಡಿ ಒಂದೇ ಹುಟ್ಟಿನಲಿ ನದಿಯ ಈ ದಡದಿಂದ ಆ ದಡಕ್ಕೆ ಮುಟ್ಟಿಸುವೆ ಎಂದು ವೃತ್ತಿಯೊಂದಿಗೆ ತನ್ನ ಅನುಭಾವದೆತ್ತರವನ್ನು ಬಿತ್ತರಿಸಿದ ಸತ್ಯ ಶುದ್ಧ ಸಿದ್ಧಾತ್ಮವಚನಕಾರ. ಪ್ರಯಾಣಿಕರನ್ನು ತಾನು ಒಂದೆಹುಟ್ಟಲಿ ನದಿಯ ಈ ದಡದಿಂದ ಆ ದಡಕ್ಕೆ ಮುಟ್ಟಿಸುವ ಸಮರ್ಥ ಅಂಬಿಗನು ಎಂದು ಅರ್ಥೈಸಿಕೊಂಡರಷ್ಟೇ ಸಾಲದು ಈ ವಚನವನ್ನು.ತನ್ನನ್ನು ನಂಬಿದವರಿಗೆ ಇದೇ ಜನ್ಮದಲ್ಲಿ ಮೋಕ್ಷಕೊಡಿಸಿ ಉದ್ಧರಿಸುವೆನು ಎನ್ನುವುದು ‘ಒಂದೆ ಹುಟ್ಟಲಿ ಕಡೆಯ ಹಾಯಿಸುವ’ ಎನ್ನುವುದನ್ನು ಸೂಚಿಸುವ ಅಂಬಿಗರ ಚೌಡಯ್ಯನ ಆತ್ಮಶಕ್ತಿ.ಅದು ಒಣ ಪೊಗರಿನ ಮಾತಲ್ಲವೆಂಬುದು ಅಂಬಿಗರ ಚೌಡಯ್ಯನವರ ವಚನಗಳನ್ನು ಓದಿ,ಅರ್ಥೈಸಿಕೊಂಡರೆ ಮನದಟ್ಟಾಗುವ ಸ್ಪಷ್ಟನುಡಿ.ತನ್ನನ್ನು ನಂಬಿದವರನ್ನು ತಾನು ಹೇಗೆ ಭವದಾಟಿಸಬಲ್ಲೆ ಎನ್ನುವುದನ್ನು ಮತ್ತೊಂದು ವಚನದಲ್ಲಿ ಹೇಳಿದ್ದಾನೆ ;

ಕಟ್ಟಿಕಳೆ ಪಾಪವ, ಬಿಟ್ಟುಕಳೆ ಪುಣ್ಯವ.
ಒತ್ತು ರೋಷವ,ಸಮತೆಯ ಪಸರಿಸಾ.
ಎತ್ತಿದರ್ಥವನು ಬೈಚಿಟ್ಟು,
ಮನದಲ್ಲಿ ಚಕ್ಕನೆ ತೀವ್ರ ಪರಿಣಾಮವನು,ಇದು ಬಟ್ಟೆ,
ದೇವತತ್ವವ ಮುಟ್ಟಲುಪದೇಶವ ಕೊಟ್ಟನಂಬಿಗ ಚೌಡ
ತನ್ನನೊಲಿದವರಿಗೆ.

ಯಾರು ತನ್ನನ್ನು ಒಲಿದು ಬರುತ್ತಾರೋ,ತನ್ನನ್ನು ಗುರುವೆಂದು ಸ್ವೀಕರಿಸುತ್ತಾರೋ ಅವರನ್ನು ಭವಬಂಧನದಿಂದ ಪಾರು ಮಾಡಿ ಉದ್ಧರಿಸುವೆ ಎಂದು ಕೆಚ್ಚಿನಿಂದ ನುಡಿಯುವ ಅಂಬಿಗರ ಚೌಡಯ್ಯ ತಾನು ಜನರನ್ನು ಭವಶರದಿಯಿಂದ,ಜೀವತೊರೆಯಿಂದ ಪಾರುಮಾಡುವ ಬಗೆ ಹೇಗೆ ಎನ್ನುವುದನ್ನು ವಿವರಿಸಿದ್ದಾನೆ.ಸಂಸಾರ ಸಾಗರವನ್ನು ಗೆದ್ದು ಮುಕ್ತರಾಗಬೇಕೆಂದು ಬಯಸುವವರು ಪಾಪಮುಕ್ತರಾಗಬೇಕು,ಶುದ್ಧಾತ್ಮರಾಗಿ ಪುಣ್ಯಜೀವರುಗಳಾಗಬೇಕು.ಕ್ರೋಧವನ್ನು ಅದುಮಿಡಬೇಕು,ಸಮತ್ವವನ್ನು ಮೈಗೂಡಿಸಿಕೊಂಡು ಸಮಭಾವದಿಂದ ಕಾಣಬೇಕು ಜಗತ್ತನ್ನು,ಜನರನ್ನು.ಯೋಗಸಾಧನೆಯಿಂದ ಶಕ್ತಿಸಂಪನ್ನನಾಗಿ,ತನ್ನ ಶಕ್ತಿಯನ್ನು ಆರಿಗೂ ತೋರಗೊಡದಂತೆ ತನ್ನೊಳು ತಾನಿದ್ದು ಮನಮಗ್ನನಾಗಿರುವುದೇ ಯೋಗಪಥ,ಈ ಪಥಕ್ರಮಣದಿಂದ ದೇವತ್ವವನ್ನು ಪಡೆಯಬಹುದು ,ಮುಕ್ತಿಯನು‌ಹೊಂದಬಹುದೆನ್ನುತ್ತಾರೆ ಅಂಬಿಗರ ಚೌಡಯ್ಯ.

ಇಂತಹ ಆತ್ಮನಕೆಚ್ಚು ತನ್ನಲ್ಲಿ ಇದ್ದುದರಿಂದಲೆ ಅಂಬಿಗರ ಚೌಡಯ್ಯ ತನ್ನ ತಂಟೆಗೆ ಬಂದವರ ಮೈಬೆವರನ್ನಿಳಿಸುತ್ತಾನೆ.ಕನ್ನಡ ವಚನ ಚಳುವಳಿಯ ಸಂದರ್ಭದಲ್ಲಿ ಎಲ್ಲ ವಚನಕಾರರು ತಮ್ಮ ಇಷ್ಟದೇವರ ಹೆಸರುಗಳನ್ನು ವಚನಾಂಕಿತವನ್ನಾಗಿ ಹೊಂದಿದ್ದರೆ ಚೌಡಯ್ಯನು ಮಾತ್ರ ತನ್ನಕುಲಧರ್ಮದ ಮಹತಿಯನ್ನು ಸಾರುವ ಅಂಬಿಗರಚೌಡಯ್ಯ ಎಂದು ತನ್ನ ಹೆಸರನ್ನೇ ವಚನಾಂಕಿತವನ್ನಾಗಿ ಹೊಂದಿದ್ದಾನೆ.ಬಸವಣ್ಣ,ಚೆನ್ನಬಸವಣ್ಣ,ಅಲ್ಲಮಪ್ರಭು,ಅಕ್ಕಮಹಾದೇವಿಯವರಂತಹ ವಚನಕಾರರು ಷಟ್ ಸ್ಥಳಗಳ ನೆಲೆಕಟ್ಟಿನಲ್ಲಿ ,ವೀರಶೈವಮತದ ಪರಿಭಾಷೆಯಲ್ಲಿ ಹೆಚ್ಚಾನುಹೆಚ್ಚು ವಚನಗಳನ್ನು ರಚಿಸಿದ್ದರೆ ಅಂಬಿಗರ ಚೌಡಯ್ಯನು ಸಮಾಜದಲ್ಲಿ ತಾನು ಕಂಡುಂಡ ಸಂಗತಿಗಳಲ್ಲಿನ ಒಳಿತನ್ನು ಮೆಚ್ಚುತ್ತ,ಕೆಡುಕನ್ನು ಕೆಡೆನುಡಿಯುತ್ತ ಸಾಗಿದವನು.ಆ ಕಾರಣದಿಂದ ಅಂಬಿಗರ ಚೌಡಯ್ಯನು ಮನುಷ್ಯ ಸಮಾಜವನ್ನು ತಿದ್ದಿ ತೀಡಿ ಮುನ್ನಡೆಸುವ ಗುರುವಿನಂತೆ,ಹಿತಚಿಂತಕನಂತೆ,ಸಮಾಜಬಂಧುವಿನಂತೆ ಕಾಣಿಸುತ್ತಾನೆ.ಶರಣರು ‘ ಲೋಕನಿಷ್ಠುರಿಗಳು,ದಾಕ್ಷಿಣ್ಯಪರರಲ್ಲ’ ಎನ್ನುವ ಬಸವಣ್ಣನವರ ಮಾತು ಅಂಬಿಗರ ಚೌಡಯ್ಯನವರಿಗೆ ಸರಿಯಾಗಿ ಹೊಂದಿಕೆ ಯಾಗುತ್ತದೆ,ಅಂಬಿಗರ ಚೌಡಯ್ಯನವರನ್ನು ಕುರಿತೇ ಬಸವಣ್ಣನವರು ಆ ಮಾತನ್ನು ಆಡಿದ್ದಾರೇನೊ ಎನ್ನುವಷ್ಟು ಚೌಡಯ್ಯನವರಿಗೆ ಅನ್ವಯವಾಗುವ ಮಾತದು.ಅಂಬಿಗರ ಚೌಡಯ್ಯ ಅಂದಿನ ಸಮಾಜದಲ್ಲಿ ರೂಢಿಯಲ್ಲಿದ ಜಾತಿಯ ಹಿರಿತನದ ಭ್ರಮೆ,ಅರ್ಥಹೀನ ಪೂಜೆ- ಪುರಸ್ಕಾರಗಳು,ಸೋಗುಹಾಕಿ ನಟಿಸುವ ಗುರು- ಜಂಗಮರುಗಳು,ಹೊಟ್ಟೆಯ ಪಾಡಿನ ಗುರುಗಳು,ಮತಿಗೆಟ್ಟು ದೇಶಸುತ್ತುವ ಭಕ್ತರುಗಳು,ವೇದ ಶಾಸ್ತ್ರ ಪುರಾಣಗಳನ್ನು ನಂಬಿ ಹಾಳಾಗುವವರ ಮೂಳತನ– ಹೀಗೆ ತಾನು ನಿತ್ಯಜೀವನದಲ್ಲಿ ಕಂಡ ಎಲ್ಲ ಡಂಭ,ಟಕ್ಕುತನವನ್ನು ಖಂಡಿಸುತ್ತಲೇ ನಡೆದಿದ್ದಾನೆ.

ಜಾತಿ ವ್ಯವಸ್ಥೆಯು ಭಾರತೀಯ ಸಮಾಜಕ್ಕೆ ಅಂಟಿದ ಬಹುದೊಡ್ಡ ಕಳೆ,ಕೊಳೆ.ಕುಲದಲ್ಲಿ ಹಿರಿಯರು- ಕಿರಿಯರು ಎಂದು ಕೃತ್ರಿಮ ಭೇದ ಸೃಷ್ಟಿಸಿ ಅಸ್ಪೃಶ್ಯರನ್ನು ಹೊರಗಿಟ್ಟು ಪೈಶಾಚಿಕತೆಯನ್ನು ಮೆರೆಯಲು ಕಾರಣವಾಯಿತು ಜಾತಿ ಮತ್ತು ವರ್ಣವ್ಯವಸ್ಥೆ.ಎಲ್ಲ ವಚನಕಾರರು ಜಾತಿವ್ಯವಸ್ಥೆಯನ್ನು ಖಂಡಿಸಿದಂತೆ ಅಂಬಿಗರ ಚೌಡಯ್ಯನು ಜಾತಿಪದ್ಧತಿಯ ಬಗ್ಗೆ ತನ್ನ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿರುವನು.

ಕುರಿಕೋಳಿ ಕಿರುಮೀನ ತಿಂಬುವರ
ಊರೊಳಗೆ ಇರು ಎಂಬರು.
ಅಮೃತಾನ್ನವ ಕರೆವ ಗೋವ ತಿಂಬವರ
ಊರಿಂದ ಹೊರಗಿರು ಎಂಬರು.
ಆ ತನು ಹರಿಗೋಲಾಯಿತ್ತು.
ಬೊಕ್ಕಣ,ಸಿದಿಕೆ,ಬಾರುಕೋಲು,ಪಾದರಕ್ಷೆ
ದೇವರ ಮುಂದೆ ಬಾರಿಸುವುದಕ್ಕೆ ಮದ್ದಳೆಯಾಯಿತ್ತು.
ಈ ಬುದ್ಧಲಿಕೆಯೊಳಗಣ ತುಪ್ಪವ ಶುದ್ಧಮಾಡಿ
ತಿಂಬ ಗುಜ್ಜ ಹೊಲೆಯರ ಕಂಡರೆ
ಉದ್ದನ ಚಮ್ಮಾಳಿಗೆಯ ತೆಕ್ಕೊಂಡು
ಬಾಯ ಕೊಯ್ಯುವೆನು ಎಂದಾತ ನಮ್ಮ ಅಂಬಿಗರ ಚೌಡಯ್ಯ

ಎಂದು ನಿಜವಾದ ಹೊಲೆಯರು ಯಾರು ಎಂದು ಆಕ್ರೋಶಭರಿತನಾಗಿ ನುಡಿದಿದ್ದಾನೆ,ಸಮಾಜ ವ್ಯವಸ್ಥೆಯ ಕುಟಿಲ ಕುತ್ಸಿತಗಳನ್ನು ಖಂಡಿಸಿದ್ದಾನೆ.ಕುರಿಕೋಳಿಮೀನಿನ ಆಹಾರವೂ ಮಾಂಸಾಹಾರವೆ. ಆದರೂ ಅದನ್ನು ತಿನ್ನುವವರಿಗೆ ಊರಲ್ಲಿ ಇರಲು ಅಭ್ಯಂತರವಿಲ್ಲ.ಇಂತಹ ಮಾಂಸಾಹಾರಿಗಳನ್ನು ಊರಲ್ಲಿರಲು ಅವಕಾಶನೀಡುತ್ತಾರೆ.ಆದರೆ ಮನುಷ್ಯರಿಗೆ ಅಮೃತಸಮಾನವಾದ ಹಾಲನ್ನಿತ್ತು ಪೊರೆವ ಹಸುವನ್ನು ತಿನ್ನುವವರನ್ನು ನೀವು ಅಸ್ಪೃಶ್ಯರು ಊರ ಹೊರಗಿರಿ,ನಮ್ಮನ್ನು ಮುಟ್ಟದಿರಿ ಎನ್ನುತ್ತಾರೆ.ಸತ್ತಹಸುವಿನ ದೇಹದ ಚರ್ಮವು ನದಿದಾಟಿಸುವ ಹರಿಗೋಲಾಗುತ್ತದೆ.ರೈತರ ಏತದ ಬೊಕ್ಕಣ,ಸಿದಿಗೆ,ಬಾರುಕೋಲು ಆಗುವ ಸತ್ತ ಹಸುವಿನ ತೊಗಲು ಎಲ್ಲರ ಪಾದಗಳನ್ನು ರಕ್ಷಿಸುವ ಪಾದರಕ್ಷೆಯೂ ಆಗುತ್ತದೆ.ದೇವರ ಪೂಜಾ ಸಮಯದಲ್ಲಿ ದೇವಸ್ಥಾನಗಳಲ್ಲಿ ಬಾರಿಸುವ ಮದ್ದಳೆಯ ನಾದಹೊರಹೊಮ್ಮಿಸುವುದು ಅಸ್ಪೃಶ್ಯರು ತಿಂದ ಸತ್ತಹಸುವಿನ ದೇಹದ ತೊಗಲೆ !ಹಸುವಿನ ಮಾಂಸಮಧ್ಯದಿಂದ ಬಂದ ಹಾಲನ್ನು ಸಂಸ್ಕರಿಸಿ ತುಪ್ಪಮಾಡಿಕೊಂಡು ಚಪ್ಪರಿಸುವ ಕುಬ್ಜ ಹಾರುವರೆ ನಿಜವಾದ ಹೊಲೆಯರು ಎನ್ನುವ ಅಂಬಿಗರ ಚೌಡಯ್ಯ ಇಂಥಹ ಹಾರುವಹೊಲೆಯರನ್ನು ಉದ್ದನೆಯ ಚಪ್ಪಲಿಯ ತೆಗೆದುಕೊಂಡು ಅವರ ಬಾಯಿಗೆ ಹೊಡೆಯಬೇಕು ಎನ್ನುತ್ತಾನೆ.ಈ ವಚನದಲ್ಲಿ ಅಂಬಿಗರ ಚೌಡಯ್ಯನು ಅಸ್ಪೃಶ್ಯರು ಸತ್ತ ಹಸು ದನ ಕರುಗಳನ್ನು ತಿನ್ನುವುದರಿಂದಲೇ ಸಮಾಜದ ಕೃಷಿ ಕಾಯಕ ವಾಣಿಜ್ಯ ವ್ಯವಹಾರಗಳಿಗೆ ಆಧಾರವಾಗುತ್ತದೆ,ಆಸರೆಯಾಗುತ್ತದೆಯಾದ್ದರಿಂದ ಅವರನ್ನು ಕುಲದಲ್ಲಿ ಕೀಳಾದ ಹೊಲೆಯರು ಎನ್ನಲಾಗದು,ಊರಲ್ಲಿರುವವರು ತಿನ್ನುವುದು ಮಾಂಸವೆ,ಊರ ಹೊರಗಿರುವ ಅಸ್ಪೃಶ್ಯರು ತಿನ್ನುವುದು ಮಾಂಸವೆ! ಅಲ್ಲದೆ ಕುರಿಕೋಳಿಮೀನುಗಳ ಮಾಂಸವನ್ನು ತಿನ್ನುವವರು ಆ ಜೀವಿಗಳನ್ನು ಕೊಂದು ಇಲ್ಲವೆ ಬಲಿಗೊಟ್ಟು ತಿನ್ನುತ್ತಾರೆ.ಜೀವಿಗಳನ್ನು ಕೊಂದು ತಿನ್ನುವುದು ಹಿಂಸೆ,ಪಾಪಕಾರ್ಯ.ಇಂಥವರಿಗೆ ಊರಲ್ಲಿರುವ ಹಕ್ಕು ಇರುವುದಾದರೆ ಪ್ರಾಣಿಹಿಂಸೆ ಮಾಡದೆ,ಜೀವಿಗಳನ್ನು ಕೊಲ್ಲದೆ ಸತ್ತ ಹಸು ಕರುಗಳನ್ನು ತಿನ್ನುವವರು ಹೇಗೆ ಅಸ್ಪೃಶ್ಯರಾಗುತ್ತಾರೆ? ಹೇಗೆ ಕೀಳುಜನರಾಗುತ್ತಾರೆ ಎಂದು ಪ್ರಶ್ನಿಸುವ ಅಂಬಿಗರ ಚೌಡಯ್ಯನವರು ಶತಶತಮಾನಗಳಿಂದ ಹೊಲೆಯರೆಂದು ಬಾಯಿಸತ್ತಜನರನ್ನು ಹೊರಗಿಟ್ಟು ಅವರನ್ನು ಪಶುಗಳಿಗಿಂತ ಕಡೆಯಾಗಿ ಕಂಡ ಭಾರತೀಯ ಸಮಾಜದ ಧೂರ್ತನಡೆ,ಅನಾಚಾರವನ್ನು ಮೊನಚುಮಾತಿನಲ್ಲಿ ಪ್ರಶ್ನಿಸುವ ಮೂಲಕ ಜಾತಿವ್ಯವಸ್ಥೆಯ ಪೋಷಕಪ್ರಭುಗಳಿಗೆ ಚಾಟಿ ಏಟನ್ನಿತ್ತಿದ್ದಾರೆ.ಮುಂದುವರೆದು ಅಂಬಿಗರ ಚೌಡಯ್ಯ ಜಾತಿ ವ್ಯವಸ್ಥೆಯ ಕುಟಿಲವನ್ನು ಖಂಡಿಸುವುದು ;

ಕುಲ ಹಲವಾದಡೇನು ? ಉತ್ಪತ್ಯ ಸ್ಥಿತಿ ಲಯ ಒಂದೆ ಭೇದ.
ಮಾತಿನ ರಚನೆಯ ಬೇಕಾದಂತೆ ನುಡಿದರೇನು ?
ಬಿಡುಮುಡಿಯಲ್ಲಿ ಎರಡನರಿಯಬೇಕೆಂದನಂಬಿಗ ಚೌಡಯ್ಯ

ಕುಲಜಾತಿಗಳು ಹಲವು ಹತ್ತೆಂಟು ಆದರೇನು ? ಮರ್ತ್ಯದಲ್ಲಿ ಹುಟ್ಟಿದ ಮನುಷ್ಯರೆಲ್ಲರಿಗೂ ಹುಟ್ಟು,ವಾರ್ಧಕ್ಯ ಮತ್ತು ಮರಣಗಳು ಸಹಜ.ಬ್ರಾಹ್ಮಣರು ಮೇಲು ಜಾತಿಯವರೆಂದು ಚಿರಂಜೀವಿಗಳಾಗುವುದಿಲ್ಲ,ಅಸ್ಪೃಶ್ಯರು ಕೆಳಜಾತಿಯವರೆಂದು ಆಯುಷ್ಯವು ಮುಗಿಯುವ ಮುಂಚೆಯೇ ಸಾಯುವುದಿಲ್ಲ.ಇಲ್ಲಿ ಹುಟ್ಟಿದ ಎಲ್ಲರಿಗೂ ನೋವು,ಬೇನೆ- ಬೇಸರಿಕೆಗಳಿವೆಯಾದ್ದರಿಂದ ನಾವು ಕುಲದಲ್ಲಿ ದೊಡ್ಡವರು ಎಂದು ವ್ಯರ್ಥಮಾತುಗಳನ್ನಾಡುವುದರಿಂದ ಪ್ರಯೋಜನವೇನು ಎಂದು ಪ್ರಶ್ನಿಸುವ ಅಂಬಿಗರ ಚೌಡಯ್ಯ ಈ ಜಗತ್ತಿನಲ್ಲಿ ‘ ಬಿಡುವುದು’ ಮತ್ತು ‘ ಮುಡಿಯಬೇಕಾದುದು’ ಎನ್ನುವ ಎರಡು ಪ್ರತ್ಯೇಕ ಸಂಗತಿಗಳಿವೆ.ಅವನ್ನರಿತವರು ಮಾತ್ರ ಶ್ರೇಷ್ಠರು,ಜೀವನ್ಮುಕ್ತರು ಎನ್ನುತ್ತಾರೆ.ನಾನು ದೇಹ ಎನ್ನುವ ಭಾವನೆಯನ್ನು ಬಿಡಬೇಕು ; ನಾನು ಆತ್ಮನು ಎನ್ನುವ ಭಾವನೆಯನ್ನು ಮುಡಿಯಬೇಕು ಅಥವಾ ಧರಿಸಬೇಕು.ಜೀವರುಗಳಲ್ಲಿ ದೇಹಭಾವ ಇರುವವರೆಗೂ ಪ್ರಪಂಚದಲ್ಲಿ ದ್ವಂದ್ವ,ವೈರುಧ್ಯವಿರುತ್ತದೆ,ಭೇದ- ಭಾವ,ತರ- ತಮಗಳಿರುತ್ತವೆ; ಸ್ಪೃಶ್ಯ – ಅಸ್ಪೃಶ್ಯ,ಮೇಲು- ಕೀಳು,ಬೇಕಾದವರು- ಬೇಡವಾದವರು,ಮಿತ್ರರು– ಶತ್ರುಗಳೆನ್ನುವ ಉಭಯಭಾವ ಇರುತ್ತದೆ.ನಾನು ದೇಹಿಯಲ್ಲ,ಆತ್ಮನು ಎನ್ನುವ ಆತ್ಮಭಾವವು ಅಳವಟ್ಟರೆ ಅವನೇ ದೇವನಾಗುತ್ತಾನೆ.

ಭಕ್ತಿ ಎನ್ನುವುದು ಗುಪ್ತವಾಗಿ ಆಚರಿಸುವ ತನ್ನಖಾಸಗಿ ವಿಷಯವಾಗಬೇಕು,ಮಂದಿಯನ್ನು ಮೆಚ್ಚಿಸುವ ಆಡಂಬರವು ಭಕ್ತಿಯೆನ್ನಿಸದು ಎನ್ನುವುದನ್ನು ಅಂಬಿಗರ ಚೌಡಯ್ಯ ಬಹುಸೊಗಸಾಗಿ ವಿಡಂಬಿಸಿದ್ದಾರೆ ;

ಆರಿಕೆ ಬಿತ್ತಿದ ಗಿಡದ ಹೂವ ಕೊಯಿದು
ಊರೆಲ್ಲರೂ ಕಟ್ಟಿಸಿದ ಕೆರೆಯ ನೀರ ತಂದು,
ನಾಡೆಲ್ಲರೂ ನೋಡಿಯೆಂದು ಪೂಜಿಸುತ್ತ,
ಪೂಜಿಸಿದ ಪುಣ್ಯ ಹೂವಿಗೋ ? ನೀರಿಗೋ ?
ನಾಡೆಲ್ಲಕ್ಕೋ? ಪೂಜಿಸಿದಾತಗೊ ?
ಇದನಾನರಿಯೆ,ನೀ ಹೇಳೆಂದನಂಬಿಗ ಚೌಡಯ್ಯ.

ಡಾಂಭಿಕ ಪೂಜಕರ ನಿಜವಲ್ಲದ ಪೂಜೆಯನ್ನು ವಿಡಂಬಿಸಿದ್ದಾರೆ ಅಂಬಿಗರ ಚೌಡಯ್ಯ ಈ ವಚನದಲ್ಲಿ.ದೇವರ ಪೂಜೆ ಮಾಡುತ್ತೇನೆಂದು ಯಾರೋ ಬಿತ್ತಿ ಬೆಳೆದ ಹೂದೋಟದ ಹೂವುಗಳನ್ನು ದೇವರಿಗೆಂದು ಕೊಯ್ದು ತಂದು,ಊರಜನರೆಲ್ಲ ಸೇರಿ ಕಟ್ಟಿಸಿದ ಕೆರೆಯ ನೀರನ್ನು ದೇವರನ್ನು ಶುಚಿಗೊಳಿಸಲು,ಅಭಿಷೇಕ ಮಾಡಲು ತರುತ್ತ ಊರು ನಾಡುಗಳೆಲ್ಲ ಕೇಳುವಂತೆ ಜೋರಾಗಿ ಮಂತ್ರೋಚ್ಚಾರಣೆ ಗೈಯುತ್ತ ಪೂಜೆ ಮಾಡಿದರೆ ಆ ಪೂಜೆಯ ಫಲವು ಹೂವಿಗಾಯಿತೊ,ನೀರಿಗಾಯಿತೊ,ನೋಡಿದ ಜನರಿಗಾಯಿತೊ ಅಥವಾ ಪೂಜಿಸಿದವನಿಗಾಯಿತೋ ಎಂದು ಪ್ರಶ್ನಿಸುವ ಅಂಬಿಗರ ಚೌಡಯ್ಯನವರು ಇಂತಹ ಡಾಂಭಿಕ ಪೂಜೆಯಿಂದ ಮೃಡ ಮಹಾದೇವನನ್ನು ಒಲಿಸಲು ಸಾಧ್ಯವಿಲ್ಲ.ತನ್ನಂತರಂಗದ ಶುದ್ಧಭಕ್ತಿಯಲ್ಲಿ ಮಿಂದೆದ್ದು,ಕರಣೇಂದ್ರಿಯಗಳನ್ನು ಕಮಲಗಳನ್ನಾಗಿಸಿಕೊಂಡು,ಸದ್ಭಕ್ತಿ ಎಂಬ ಜಲದಿಂದ ತೊಳೆದು ಪೂಜಿಸಿದರೆ ಆ ಪೂಜೆಯನ್ನು ಶಿವನು ಒಪ್ಪಿ,ಒಲಿಯುತ್ತಾನೆ ಎಂದಿರುವರು.

ನಾವು ಶಿವಭಕ್ತರು,ಶಿವನಗಣಂಗಳು ಎಂದು ಹೇಳಿಕೊಳ್ಳುತ್ತ ನಿಜಭಕ್ತಿಯನ್ನಾಚರಿಸದ ಕಪಟಿಗಳಿಗೆ ಸಾಧ್ಯವಾಗದು ಶಿವನೊಲುಮೆ ಎನ್ನುವುದನ್ನು ಬಹುಮಾರ್ಮಿಕವಾಗಿ ವ್ಯಂಗಿಸಿದ್ದಾರೆ ಅಂಬಿಗರ ಚೌಡಯ್ಯನವರು ;

ಅತ್ಯಾಹಾರವನುಂಡು ಹೊತ್ತುಗಳೆದು
ಹೋಕಿನ ಮಾತನಾಡುತ್ತ
ಚಿತ್ತ ಬಂದ ಪರಿಯಲ್ಲಿ ವ್ಯವಹರಿಸಿಕೊಳ್ಳುತ್ತ
ಮತ್ತೆ ಶಿವನ ನೆನೆದೆನೆಂದಡೆ ಶಿವನ ವರ ಎತ್ತಲೆಂದರಿಯದೆಂದಾತ
ನಮ್ಮಂಬಿಗರ ಚೌಡಯ್ಯ.

ಕೂಳುಬಾಕರಾಗಿ ಹೆಚ್ಚುಹೆಚ್ಚು ತಿನ್ನುತ್ತ,ತಾಮಸ ಆಹಾರವನ್ನು ಸೇವಿಸುತ್ತ ಹೊತ್ತುಗಳೆಯುತ್ತ,ವ್ಯರ್ಥವಾದ ಕೊಂಕು ಕುಟಿಲೋಕ್ತಿಗಳನ್ನಾಡುತ್ತ,ಮನಸ್ಸು ಬಂದಂತೆ ವರ್ತಿಸುವ ಸ್ವೇಚ್ಛಾಚಾರಿಗಳು ಶಿವನನ್ನು ನೆನೆದರೆ ಶಿವನೆಂತು ವರನೀಡಬಲ್ಲನು ಈ ಮೂಢಾತ್ಮರುಗಳಿಗೆ ಎನ್ನುವ ಅಂಬಿಗರ ಚೌಡಯ್ಯನವರು ತನು ಮನ ಧನಗಳೆಂಬ ಕರಣತ್ರಯಗಳ ಶುದ್ಧಿಯುಳ್ಳವರೆ ಸಿದ್ಧಿಗಳಿಗೊಡೆಯ ಶಿವನ ಅನುಗ್ರಹವನ್ನುಣಲು ಸಾಧ್ಯ ಎನ್ನುವ ಶಿವಸಾಧನಾ ರಹಸ್ಯವನ್ನು ತೆರೆದಿಟ್ಟಿದ್ದಾರೆ.

ಜನರು ನಿಜವಾದ ದೇವರಾವುದು,ಬೂಟಾಟಿಕೆಯ ದೈವವಾವುದು ಎಂಬುದನ್ನರಿಯದೆ ಕಂಡಕಂಡ ಕಲ್ಲು ಮಣ್ಣು,ಕಟ್ಟಿಗೆ ಲೋಹದ ದೈವಗಳನ್ನು ಪೂಜಿಸುತ್ತಾರೆ.ಹಾದಿ ಬೀದಿಯ ದೇವರುಗಳಿಗೆ ಅಡ್ಡ ಉದ್ದ ಬಿದ್ದು ದಡ್ಡತನ ಪ್ರದರ್ಶಿಸುತ್ತಾರೆ.ಲೋಕದ ರಂಜನೆಯ,ಚಮತ್ಕಾರದ ದೇವರುಗಳು ದೇವರಲ್ಲ,ಪರಶಿವನೊಬ್ಬನೇ ನಿಜವಾದ ದೇವರು,ಪರಶಿವನನ್ನು ಪೂಜಿಸಿ,ಸೇವಿಸಿದರೆ ಮಾತ್ರ ಸದ್ಗತಿ ಎನ್ನುವುದನ್ನು ವಿವರಿಸಿರುವ ಅಂಬಿಗರ ಚೌಡಯ್ಯನವರ ವಚನ ;

ಕಲ್ಲ ದೇವರ ಪೂಜೆಯ ಮಾಡಿ
ಕಲಿಯುಗದ ಕತ್ತೆಗಳಾಗಿ ಹುಟ್ಟಿದರು.
ಮಣ್ಣ ದೇವರ ಪೂಜಿಸಿ ಮಾನಹೀನರಾದರು.
ಮರನದೇವರೆಂದು ಪೂಜಿಸಿ ಮಣ್ಣ ಕೂಡಿದರು.
ದೇವರ ಪೂಜಿಸಿ ಸ್ವರ್ಗಕ್ಕೇರದೆ ಹೋದರು !
ಜಗದ್ಭರಿತನಾದ ಪರಶಿವನೊಳಗೆ
ಕಿಂಕರನಾದ ಶಿವಭಕ್ತನೇ ಶ್ರೇಷ್ಠನೆಂದಾತ ನಮ್ಮ ಅಂಬಿಗರ ಚೌಡಯ್ಯ.

ಶಿವಭಕ್ತರು ಶಿವನನ್ನು ಮೆಚ್ಚಿಸುವುದನ್ನೇ ತಮ್ಮ ಜೀವನದ ಗುರಿಯಯನ್ನಾಗಿ ಸ್ವೀಕರಿಸಿ ನಡೆಯಬೇಕು ಹರಪಥದಲ್ಲಿ ಎಂದು ಉಪದೇಶಿಸುವ ಅಂಬಿಗರ ಚೌಡಯ್ಯನವರು ಮಂದಿಯನ್ನು ಮೆಚ್ಚಿಸಲು ಬದುಕಬಾರದು ; ಎಲ್ಲವನ್ನೂ ಆಡಿಕೊಳ್ಳುವ ಸ್ವಭಾವವುಳ್ಳ ಮಂದಿ ಯಾವುದನ್ನೂ ಮೆಚ್ಚರು ಎನ್ನುವುದನ್ನು ಹೃದಯಂಗಮವಾಗಿ ವಿವರಿಸಿದ್ದಾರೆ ;

ಉಂಡರೆ ಭೂತನೆಂಬರು,
ಉಣದಿದ್ದರೆ ಚಾತಕನೆಂಬರು.
ಭೋಗಿಸಿದರೆ ಕಾಮಿಯೆಂಬರು,
ಭೋಗಿಸದಿದ್ದರೆ ಮುನ್ನಮಾಡಿದ ಕರ್ಮ ಎಂಬರು.
ಊರೊಳಗಿದ್ದರೆ ಸಂಸಾರಿ ಎಂಬರು,
ಅಡವಿಯೊಳಗಿದ್ದರೆ ಮೃಗಜಾತಿ ಎಂಬರು.
ನಿದ್ರೆಗೈದರೆ ಜಡದೇಹಿ ಎಂಬರು
ಎದ್ದಿದ್ದರೆ ಚಕೋರನೆಂಬರು.
ಇಂತೀ ಜನ ಮೆಚ್ಚಿ ನಡೆದವರ
ಎಡದ ಪಾದ ಕಿರಿಕಿರುಗುಣಿಯಲ್ಲಿ ಮನೆಮಾಡು,ಮನೆಮಾಡು
ಎಂದಾತ ನಮ್ಮ ಅಂಬಿಗರ ಚೌಡಯ್ಯ.

ಲೋಕದಲ್ಲಿ ಹುಟ್ಟಿದ ಬಳಿಕ ಮನುಷ್ಯರಿಗೆ ಕಷ್ಟ ನಷ್ಟ,ಇಷ್ಟಾನಿಷ್ಟಗಳ ಚಿಂತೆ ಸಹಜ.ಈ ಚಿಂತೆಯು ಯಾರನ್ನೂ ಬಿಡದೆ ಎಲ್ಲರನ್ನೂ ಕಾಡುತ್ತದೆ.ಬಡವರಿಗಷ್ಟೇ ಚಿಂತೆ ಇರದು,ಶ್ರೀಮಂತರಿಗೂ ಅವರದ್ದೇ ಆದ ಚಿಂತೆಗಳಿರುತ್ತವೆ.ಆಳಿಗೊಂದು ಚಿಂತೆಯಾದರೆ ಅರಸನಿಗಿನ್ನೊಂದು ಚಿಂತೆ.ಗಂಡನಿಗೆ ಒಂದು ಚಿಂತೆಯಾದರೆ ಹೆಂಡತಿಗೆ ಬೇರೆಯದೆ ಆದ ಚಿಂತೆ ಕಾಡುತ್ತಿರುತ್ತದೆ.ಹೀಗೆ ಜಗತ್ತಿನ ಜೀವರುಗಳೆಲ್ಲರಿಗೂ ಅವರವರದ್ದೇ ಆದ ಚಿಂತೆಗಳಿರುವಾಗ ಆ ಚಿಂತೆಯನ್ನೇ ದೊಡ್ಡದು ಮಾಡಿ ಬದುಕುವುದಕ್ಕಿಂತ ನಿತ್ಯಸಂತಸವೀವ ಪರಶಿವನನ್ನು ನೆನೆಯಬಾರದೆ ಎನ್ನುವ ಅಂಬಿಗರ ಚೌಡಯ್ಯನವರು ಜನರಿಗೆ,ಜಗತ್ತಿಗೆ ಉಪದೇಶಿಸುವುದು ;

ಬಡತನಕ್ಕೆ ಉಂಬುವ ಚಿಂತೆ,ಉಣಲಾದರೆ ಉಡುವ ಚಿಂತೆ.
ಉಡಲಾದರೆ ಇಡುವ ಚಿಂತೆ,ಇಡಲಾದರೆ ಹೆಂಡಿರ ಚಿಂತೆ.
ಹೆಂಡಿರಾದರೆ ಮಕ್ಕಳ ಚಿಂತೆ, ಮಕ್ಕಳಾದರೆ ಬದುಕಿನ ಚಿಂತೆ.
ಬದುಕಾದರೆ ಕೇಡಿನ ಚಿಂತೆ,ಕೇಡಾದರೆ ಮರಣದ ಚಿಂತೆ.
ಇಂತೀ ಹಲವು ಚಿಂತೆಯಲ್ಲಿ ಇಪ್ಪವರ ಕಂಡೆನು
ಶಿವನ ಚಿಂತೆಯಲ್ಲಿದ್ದವರೊಬ್ಬರನೂ ಕಾಣೆನೆಂದಾತ
ನಮ್ಮ ಅಂಬಿಗರ ಚೌಡಯ್ಯ,ನಿಜ ಶರಣನು.

ಈ ವಚನದಲ್ಲಿ ಅಂಬಿಗರ ಚೌಡಯ್ಯನವರು ತಮ್ಮನ್ನು ತಾವು ‘ನಿಜಶರಣ’ ಎಂದು ಕರೆದುಕೊಂಡಿದ್ದಾರೆ.ಲೋಕದ ಡಾಂಭಿಕ ಶರಣರುಗಳಂತಲ್ಲದೆ,ಆಡಂಬರ ಜೀವಿಗಳಂತಲ್ಲದೆ ಸತ್ಯಶುದ್ಧ ಕಾಯಕವ ಮಾಡುತ್ತ,ನಿತ್ಯ ಶಿವಾನಂದದೊಳಿರುತ್ತ ಸಾಗಿಸುವ ದಿಟಶರಣನ ಬಾಳು ಅವರದ್ದಾಗಿತ್ತಾದ್ದರಿಂದ ಅವರು ತಮ್ಮನ್ನು ತಾವು ‘ ನಿಜಶರಣ’ ಎಂದು ಕರೆದುಕೊಂಡಿದ್ದು ಔಚಿತ್ಯಪೂರ್ಣವಾಗಿದೆ,ಅವರ ಸಾಧನೆಸಿದ್ಧಿಯ ಕುರುಹು ಆಗಿದೆ.

ಶಿವಾನುಗ್ರಹಕ್ಕೆ ಪಾತ್ರರಾಗಲು ಗುರುಕರುಣೆ ಬೇಕು ಎನ್ನುವ ಕಾರಣದಿಂದ ಶಿವದೀಕ್ಷೆ ಅಥವಾ ಗುರುದೀಕ್ಷೆಗೆ ಮಹತ್ವವನ್ನು ನೀಡಲಾಗಿದೆ.ಆದರೆ ಈ ಗುರುಬೋಧೆ ಎನ್ನುವುದು ಒಂದು ಫ್ಯಾಶನ್ ಆಗಿ,ಅರ್ಹತೆ ಇಲ್ಲದವರು ಗುರುಗಳಾಗಿ,ಅಯೋಗ್ಯರು ಶಿಷ್ಯರಾಗಿ ಮೆರೆಯುತ್ತಿದ್ದಾರೆ.ಇಂತಹ ಗುರುಶಿಷ್ಯರುಗಳಿಬ್ಬರೂ ವ್ಯರ್ಥಜೀವಿಗಳು,ಅವರಿಗೆ ಇತ್ತ ಇಹವೂ ಇಲ್ಲ,ಅತ್ತ ಪರವೂ ಇಲ್ಲ ; ಅಂತರಪಿಶಾಚಿಗಳಾಗಿಯೇ ತೊಳಲಿ ಬಳಲಬೇಕಾದರು ಮೂರ್ಖಗುರು ಮತ್ತು ಮೂಢಶಿಷ್ಯರುಗಳು ಎನ್ನುವುದನ್ನು ಹೃದಯಸ್ಪರ್ಶಿಯಾಗುವಂತೆ ವಿವರಿಸಿದ್ದಾರೆ ಅಂಬಿಗರ ಚೌಡಯ್ಯನವರು ;

ಅಡ್ಡ ಬಿದ್ದು ಶಿಷ್ಯನ ಮಾಡಿಕೊಂಬ ದಡ್ಡ ಪ್ರಾಣಿಗಳನೇನೆಂಬೆನಯ್ಯ.
ಏನೇನೂ ಅರಿಯದ ಎಡ್ಡ ಮಾನವರಿಗೆ ಉಪದೇಶವ ಮಾಡುವ
ಗೊಡ್ಡ ಮಾನವರ ಮುಖವ ತೋರದಿರಯ್ಯಾ.
ಅದೇನು ಕಾರಣವೆಂದರೆ ;
ಆ ಮೂಢಜೀವಿಯ ಪ್ರಪಂಚವ ಕಳೆಯಲಿಲ್ಲ.
ಅವನ ಪಂಚೇಂದ್ರಿಯಂಗಳು,ಸಪ್ತವ್ಯಸನಂಗಳು,ಅಷ್ಟಮದಗಳೆಂಬ
ಖೊಟ್ಟಿ ಗುಣಂಗಳ ಬಿಡಿಸಲಿಲ್ಲ.
ಸೂತಕ ಪಾತಕಂಗಳ ಕೆಡಿಸಿ,ಮೂರು ಮಲಂಗಳ ಬಿಡಿಸಿ
ಮುಕ್ತಿ ಪಥವನರುಹಲಿಲ್ಲ.
ಮಹಾಶೂನ್ಯ ನಿರಾಳ ನಿರಂಜನ ಲಿಂಗವ
ಕರ-ಮನ- ಭಾವ ಸರ್ವಾಂಗದಲ್ಲಿ ತುಂಬಿ ನಿತ್ಯನೆಂದೆನಿಸಲಿಲ್ಲ.
ಇದನರಿಯದ ವ್ಯರ್ಥಕಾಯರುಗಳ ಗುರುವೆಂದರೆ ಪ್ರಮಥರು ಮೆಚ್ಚುವರೆ ?
ಇಂತಪ್ಪ ಗುರು ಶಿಷ್ಯರುಗಳಿಬ್ಬರು ಅಜ್ಞಾನಿಗಳು.
ಅವರು ಇಹಲೋಕ ಪರಲೋಕಕ್ಕೆ ಹೊರಗೆಂದಾತನಂಬಿಗ ಚೌಡಯ್ಯ.

ಶಿವಪಥದಿ ನಡೆದು ದುಡಿದು ಪರಶಿವನನ್ನು ಪಡೆಯಲು ಇರುವ ಸಾಧನ ಸಂಪತ್ತೇ ಗುರು ಲಿಂಗ ಜಂಗಮ ಎನ್ನುವ ತತ್ತ್ವತ್ರಯವು.ಈ ತತ್ತ್ವವನ್ನರಿಯದೆ ವ್ಯರ್ಥಜೀವಿಗಳು ಬಡಿವಾರದಲ್ಲಿ ಬದುಕುತ್ತ,ಸೋಗು ನಟಿಸುತ್ತ ಡೊಂಬರಾಟವನ್ನಾಡುತ್ತಿದ್ದಾರೆ ಹೊಟ್ಟೆಹೊರೆಯಲು.ಶಿವತ್ವವನ್ನಳವಡಿಸಿಕೊಳ್ಳದ ಸತ್ತುಶವವಾಗುವ ಜೀವಚ್ಛವಗಳನ್ನು ತೀಕ್ಷ್ಣವಾಗಿ ಖಂಡಿಸಿದ್ದಾರೆ ಅಂಬಿಗರ ಚೌಡಯ್ಯನವರು -;

ಕಂಥೆ ತೊಟ್ಟವ ಗುರುವಲ್ಲ,
ಕಾವಿ ಹೊತ್ತವ ಜಂಗಮವಲ್ಲ,
ಶೀಲಕಟ್ಟಿದವ ಶಿವಭಕ್ತನಲ್ಲ,
ನೀರು ತೀರ್ಥವಲ್ಲ,
ಕೂಳು ಪ್ರಸಾದವಲ್ಲ
ಹೌದೆಂಬವನ ಬಾಯ ಮೇಲೆ
ಅರ್ಧಮಣದ ಪಾದರಕ್ಷೆಯ ತೆಗೆದುಕೊಂಡು
ಮಾಸಿ ಕಡಿಮೆಯಿಲ್ಲದೆ ತೂಗಿ ತೂಗಿ ಟೊಕ ಟೊಕನೆ
ಹೊಡೆ ಎಂದಾತ ನಮ್ಮ ಅಂಬಿಗರ ಚೌಡಯ್ಯ.

ಸ್ವಾಮಿಗಳು- ಸಂನ್ಯಾಸಿಗಳು,ಮಠ – ಪೀಠಾಧೀಶರುಗಳೆಂದು ಹೇಳುತ್ತ ಈಶನ ಲಾಂಛನವ ತೊಟ್ಟುಕೊಂಡು ಈಶಗುಣವನಳವಡಿಸಿಕೊಳ್ಳದೆ ವೇಷಧಾರಿಗಳು ಕಾಮವಶರಾಗಿ ಬಹುವಿಧ ನಟನೆ ಮಾಡುತ್ತ,ವೈಭವದಿಂದ ಮೆರೆಯುವುದು ಶರಣಪಥವಲ್ಲ,ಶಿವಪಥವಲ್ಲ ಎನ್ನುವುದನ್ನು ಲೋಕಕ್ಕೆ ಸಾರಿದ್ದಾರೆ ಅಂಬಿಗರ ಚೌಡಯ್ಯನವರು ಈ ಮುಂದಿನ ವಚನದಲ್ಲಿ,

ಈಶ ಲಾಂಛನವ ತೊಟ್ಟು ಮನ್ಮಥವೇಷ ಲಾಂಛನವ ತೊಡಲೇತಕ್ಕೆ ?
ಇದು ನಿಮ್ಮ ನುಡಿ ನಡೆಗೆ ನಾಚಿಕೆಯಲ್ಲವೆ ?
ಅಂದಳ ಛತ್ರ,ಆಭರಣ,ಕರಿ ತುರಂಗಗಳ ಗೊಂದಣವೇತಕ್ಕೆ ?
ಅದು ಘನಲಿಂಗದ ಮೆಚ್ಚಲ್ಲ ಎಂದನಂಬಿಗ ಚೌಡಯ್ಯ.

ಬಸವಣ್ಣನವರು ಜನರು ಗುಡಿ ಗುಂಡಾರ ದೇವಸ್ಥಾನಗಳ ಶೋಷಣೆಗೆ ಒಳಗಾಗಲೆಂದು ಎಲ್ಲರಿಗೂ ಇಷ್ಟಲಿಂಗವನ್ನಿತ್ತು ಉದ್ಧರಿಸಿದರು.ಆದರೆ ಲಿಂಗದೀಕ್ಷೆಯು ಒಂದು ಸದಾಚಾರವಾಗದೆ,ಅಂತರಂಗದ ಸಾಧನೆಯಾಗದೆ ಅದು ಉದರಂಭಣದ ಮಾಧ್ಯಮವಾದಾಗ ಅದನ್ನೂ ಖಂಡಿಸದೆ ಬಿಡಲಿಲ್ಲ ಅಂಬಿಗರ ಚೌಡಯ್ಯನವರು.

ಎರಡು ಗ್ರಾಮದ ನಡುವೆ ಕಡದ ಸೀಮೆಯ ಕಲ್ಲು.
ಅದ ಕಟ್ಟಿದಾತ ಗುರುವಲ್ಲ,ಕಟ್ಟಿಸಿಕೊಂಡಾತ ಶಿಷ್ಯನಲ್ಲ.
ಆದಿಯನರಿಯದ ಗುರುವು,ಭೇದಿಸಲರಿಯದ ಶಿಷ್ಯ
ಇವರಿಬ್ಬರೂ ಉಭಯಭ್ರಷ್ಟರೆಂದಾತನಂಬಿಗ ಚೌಡಯ್ಯ.

ಯೋಗಿಯಾದವನು ಎಲ್ಲವನ್ನು ಅಲ್ಲಗಳೆದಿರಬೇಕು,ಯಾವುದಕ್ಕೂ ಸಿಲುಕದಂತಿರಬೇಕು.ವಿಷಯೋಪಭೋಗ ಪ್ರಪಂಚದಲ್ಲಿ ಬಿದ್ದು ಒದ್ದಾಡುತ್ತ,ಮಾಯಾ ಪ್ರಪಂಚದ ಹಲವು ಅವಸ್ಥೆಗಳಿಗೀಡಾಗುತ್ತ,ಉಪಾಧಿಗಳಿಗೆ ವಶರಾದವರು ಯೋಗಿಗಳಲ್ಲ ಎನ್ನುತ್ತಾರೆ ಅಂಬಿಗರ ಚೌಡಯ್ಯನವರು ;

ಜಾತಿಭ್ರಮೆ,ನೀತಿಭ್ರಮೆ ಎಂಬ ಕರ್ಮಂಗಳನು
ಘಾತಿಸಿ ಕಳೆಯಬಲ್ಲಡಾತ ಯೋಗಿ.
ಕ್ಷೇತ್ರಭ್ರಮೆ,ತೀರ್ಥಭ್ರಮೆ,ಪಾಷಾಣಭ್ರಮೆ ಎಂಬ ಕರ್ಮಂಗಳನು
ನೀಕರಿಸಿ ಕಳೆಯಬಲ್ಲಡಾತ ಯೋಗಿ.
ಲೋಕಕ್ಕಂಜಿ ಲೌಕಿಕವ ಮರೆಗೊಂಡು ನಡೆದಾತ ತೂತುಯೋಗಿ
ಎಂದಾತನಂಬಿಗ ಚೌಡಯ್ಯ.

ಅಧ್ಯಾತ್ಮಿಕವಾಗಿ ಎತ್ತರದ ಸಾಧನೆ ಮಾಡಿದವರು,ಆರೂಢ ಸ್ಥಲಕ್ಕೇರಿದವರು ವಾಚಾಳತ್ವವನ್ನು ಬಿಟ್ಟಿರಬೇಕು.ಕಂಡಕಂಡವರೆದುರು ಆತ್ಮಜ್ಞಾನದ ಮಾತುಗಳನ್ನಾಡುವ ಚಪಲಮುಕ್ತರಾಗಿರಬೇಕು.ಯೋಗದ ಎತ್ತರಕ್ಕೆ ಏರಿದವನು ಆ ಎತ್ತರದಲ್ಲಿಯೇ ವಿಹರಿಸಬೇಕಲ್ಲದೆ ಲೋಕದ ಜನರನ್ನು ಮೆಚ್ಚಿಸಲು ಮಾತಿನ ಜಾಲಕ್ಕೆ ಸಿಲುಕಬಾರದು ಎನ್ನುತ್ತಾರೆ ಅಂಬಿಗರ ಚೌಡಯ್ಯನವರು —

ಆರೂಢಜ್ಞಾನಿಯಾದವನಿಗೆ ಅನುಭಾವವೇಕಯ್ಯಾ ?
ಮೀರಿದ ಸ್ಥಲದಲ್ಲಿ ನಿಂದವಂಗೆ ನೀರೇನು ನೆಲವೇನು ?
ಎಂದಾತನಂಬಿಗ ಚೌಡಯ್ಯ.

ಪರಶಿವನು ನಾಮ ರೂಪ ಕ್ರಿಯೆ ಕಳೆಗಳಿಗತೀತನಾಗಿಹ ನಿರಾಕಾರ ನಿರಂಜನ ಪರವಸ್ತು ಎನ್ನುವುದನ್ನು ಮನಮುಟ್ಟುವಂತೆ ಬಣ್ಣಿಸಿದ ವಚನ ಒಂದನ್ನು ಉಲ್ಲೇಖಿಸಿ ಅಂಬಿಗರ ಚೌಡಯ್ಯನವರ ಈ ವ್ಯಕ್ತಿಚಿತ್ರವನ್ನು ಮಂಗಲಮಾಡಬಹುದು ;

ಅಸುರರ ಮಾಲೆಗಳಿಲ್ಲ, ತ್ರಿಶೂಲ ಡಮರುಗವಿಲ್ಲ.
ಬ್ರಹ್ಮ ಕಪಾಲವಿಲ್ಲ,ಭಸ್ಮ ಭೂಷಣನಲ್ಲ.
ವೃಷಭವಾಹನನಲ್ಲ,ಋಷಿಯರುಗಳೊಡನಿದ್ದಾತನಲ್ಲ.
ಎಸಗುವ ಸಂಸಾರದ ಕುರುಹಿಲ್ಲದಾತಂಗೆ
ಹೆಸರಾವುದಿಲ್ಲೆಂದನಂಬಿಗರ ಚೌಡಯ್ಯ.

೨೦.೦೧.೨೦೨೪

About The Author