ಶಿವ ಮತ್ತು ಭಕ್ತರ ಸಂಬಂಧ ಬಳ್ಳಿ -ಕಾಯಿಯ ಸಂಬಂಧ

ಬಸವೋಪನಿಷತ್ತು ೧೮ : ಶಿವ ಮತ್ತು ಭಕ್ತರ ಸಂಬಂಧ ಬಳ್ಳಿ -ಕಾಯಿಯ ಸಂಬಂಧ : ಮುಕ್ಕಣ್ಣ ಕರಿಗಾರ

ಎನ್ನ ವಾಮ- ಕ್ಷೇಮ ನಿಮ್ಮದಯ್ಯಾ ;
ಎನ್ನ ಹಾನಿ- ವೃದ್ಧಿ ನಿಮ್ಮದಯ್ಯಾ ;
ಎನ್ನ ಮಾನಾಪಮಾನ ನಿಮ್ಮದಯ್ಯಾ ;
ಬಳ್ಳಿಗೆ ಕಾಯಿ ದಿಮ್ಮಿತ್ತೆ,‌ಕೂಡಲ ಸಂಗಮದೇವಾ.

ಶಿವ ಮತ್ತು ಶಿವಶರಣರ ನಡುವೆ ತಾಯಿ ಮಕ್ಕಳ ಕರುಳ ಸಂಬಂಧವಿದೆ ಎನ್ನುತ್ತಾರೆ ಬಸವಣ್ಣನವರು.ಭಕ್ತನು ತನ್ನನ್ನು ತಾನು ಶಿವನಿಗೆ ಸಮರ್ಪಿಸಿಕೊಂಡರೆ,ಶಿವನಲ್ಲಿ ಪೂರ್ಣ ಶರಣಾದರೆ ಆ ಭಕ್ತನ ಬದುಕಿನ ಹೊಣೆಯೆಲ್ಲವನ್ನೂ ವಿಶ್ವೇಶ್ವರನಾದ ಶಿವನೇ ಹೊರುತ್ತಾನೆ ಎನ್ನುವುದು ಈ ವಚನದ ತಾತ್ಪರ್ಯ.ಇಲ್ಲಿ ಶಿವಭಕ್ತನೊಬ್ಬನು ಶಿವನೆದುರು ಆರ್ತನಾಗಿ ಮೊರೆಯುವ,ಪ್ರಾರ್ಥಿಸುವ ಆತ್ಮನಿವೇದನೆ ಇದೆ.ಶಿವನೆ,ನನ್ನ ಕೆಡುಕು ಒಳಿತುಗಳನ್ನು ನಿರ್ಧರಿಸುವವನು ನೀನೆ.ನನ್ನ ನಷ್ಟ ವೃದ್ಧಿಗಳ ನಿರ್ಣಯವೂ ನಿನಗೇ ಸೇರಿದೆ. ನನ್ನ ಮಾನ ಅಪಮಾನಗಳೆರಡೂ ನಿನ್ನ ಇಚ್ಛೆಯಂತೆ.ಬಳ್ಳಿಯಲ್ಲಿ ಬೆಳೆದ ಕಾಯಿಯು ಬಳ್ಳಿಗೆ ಭಾರವಾಗುತ್ತದೆಯೆ ? ಇಲ್ಲ.ಹಾಗೆಯೇ ಭಕ್ತನಾದ ನಾನು ನಿನಗೆ ಭಾರವಾದವನಲ್ಲ.ನನ್ನನ್ನು ಹಿಡಿದೆತ್ತಿ ಉದ್ಧರಿಸು.

ಶಿವನು ತನ್ನ ಭಕ್ತರ ಯೋಗಕ್ಷೇಮವನ್ನು ತಾನೇ ಹೊತ್ತುಕೊಳ್ಳುತ್ತಾನೆ.ಭಕ್ತರ ಬದುಕಿನಲ್ಲಿ ಪ್ರತ್ಯಕ್ಷ ಲೀಲೆಯನ್ನುಂಟು ಮಾಡುವ ಶಿವನು ಆವ ರೂಪದಲ್ಲಾದರೂ ಭಕ್ತನ ಕುಟುಂಬದ ಜವಾಬ್ದಾರಿಯನ್ನು ಹೊತ್ತು ನಿರ್ವಹಿಸುತ್ತಾನೆ.ಶಿವಭಕ್ತರು ದುಡಿದುಣ್ಣುತ್ತ ಶಿವಭಕ್ತಿಯನ್ನಾಚರಿಸಿ ಉಳಿದುದನ್ನು ಶಿವನಿಗೆ ಬಿಡಬೇಕು,ಶಿವನೇ ಭಕ್ತನ ಬದುಕಿನ ಎಲ್ಲವನ್ನು ನೋಡಿಕೊಳ್ಳುತ್ತಾನೆ .ತನ್ನಲ್ಲಿ ಪೂರ್ಣಶರಣಾಗತನಾದ ಭಕ್ತನನ್ನು ಎಂದಿಗೂ ಕೈಬಿಡುವುದಿಲ್ಲ ಶಿವನು.ಭಕ್ತರಿಗೆ ದುರ್ದೆಸೆಯೊದಗಿದರೆ ಶಿವನು ಅದನ್ನು ಪರಿಹರಿಸುವನು.ಭಕ್ತರ ಕೃಷಿ ಕಾಯಕ ವ್ಯಾಪಾರ ವ್ಯವಹಾರಗಳಲ್ಲಿ ನಷ್ಟವಾಗದಂತೆ ಅವರಿಗೆ ಲಾಭವನ್ನೇ ಉಂಟು ಮಾಡುವನು.ತನ್ನ ಭಕ್ತರನ್ನು ನಿಂದಿಸಿದವರನ್ನು ಶಿಕ್ಷಿಸುತ್ತ ತನ್ನ ಭಕ್ತರ ತಂಟೆಗೆ ಯಾರೂ ಬಾರದಂತೆ ನೋಡಿಕೊಳ್ಳುವ ಶಿವನು ಜನರು ,ಜಗತ್ತು ತನ್ನ ಭಕ್ತರನ್ನು ಗೌರವಾದರಗಳಿಂದ ಕಾಣುವಂತೆ ಮಾಡುತ್ತಾನೆ .ಬಳ್ಳಿಯಲ್ಲುಂಟಾದ ಕಾಯಿಯು ಬಳ್ಳಿಗೆ ಹೇಗೆ ಭಾರವಾಗದೋ ಹಾಗೆಯೇ ಶಿವಭಕ್ತರು ಎಷ್ಟೇ ಬೇಡಿದರೂ ಏನೇ ಬೇಡಿದರೂ ಅವರ ಇಷ್ಟಾರ್ಥಗಳನ್ನು‌ ಈಡೇರಿಸುವ ಶಿವನಿಗೆ ಅವರು ಭಾರವಾಗುವುದಿಲ್ಲ,ಬೇಡವಾಗುವುದಿಲ್ಲ.

ಭಕ್ತ ಮತ್ತು ಭಗವಂತರ ನಡುವೆ ಬಳ್ಳಿ ಕಾಯಿಯ ಕರುಳ ಸಂಬಂಧವಿದೆ ಎನ್ನುತ್ತಾರೆ ಬಸವಣ್ಣನವರು.ಬಳ್ಳಿಯು ನೆಲದಮೇಲೆ ಹರಡಿರಬಹುದು ಅಥವಾ ಮರದ ಕೊಂಬೆ ರೆಂಬೆಗಳ ಆಶ್ರಯದಲ್ಲಿ ಬೆಳೆದಿರಬಹುದು.ಅದರ ಮೈತುಂಬ ಕಾಣಿಸಿಕೊಳ್ಳುವ ಕಾಯಿಗಳು ತಾಯಿ ಬಳ್ಳಿಗೆ ಭಾರವಾಗುವುದಿಲ್ಲ.ನೆಲದಲ್ಲಿ ಹರಡಿ ಹಬ್ಬುವ ಕುಂಬಳಬಳ್ಳಿಯಲ್ಲಿ ದೊಡ್ಡಗಾತ್ರದ ಕುಂಬಳ ಕಾಯಿಗಳು ಬೆಳೆಯುತ್ತವೆ.ಬಳ್ಳಿಯಿಂದ ಕಿತ್ತಿತರುವವರಿಗೆ ಭಾರವಾಗುವ ಕುಂಬಳಕಾಯಿಗಳು ಅದರ ತಾಯಿ ಬಳ್ಳಿಗೆ ಭಾರವಾಗಿರುವುದಿಲ್ಲ.ಒಂದು ಕುಂಬಳ ಬಳ್ಳಿಯಲ್ಲಿ ಹತ್ತಾರು ದೊಡ್ಡ ಕುಂಬಳಕಾಯಿಗಳಿದ್ದರೂ ಅವು ತಾಯಿ ಬಳ್ಳಿಗೆ ಭಾರವಾಗುವುದಿಲ್ಲ.ಹಾಗೆಯೇ ವಿಶ್ವಪ್ರಭುವಾದ ಶಿವನು ಜಗತ್ತಿನ ಜನರೆಲ್ಲರಿಗೆ ನೀಡಿದ್ದೇನೆ,ನಿನ್ನ ಬೇಡಿಕೆಯ ಬಗ್ಗೆ ಆಮೇಲೆ ನೋಡೋಣ ಎಂದು ತನ್ನ ಭಕ್ತರಿಗೆ ಹೇಳುವುದಿಲ್ಲ.ಯಾರು ಏನು ಬೇಡುತ್ತಾರೋ ಅದನ್ನು ನೀಡುವುದಷ್ಟೇ ಶಿವನಧರ್ಮ.ತಾಯಿಬಳ್ಳಿಯನ್ನು ಬಿಟ್ಟು ಕಾಯಿಯು ಬೆಳೆಯುವುದಿಲ್ಲ,ತಾಯಿ ಬಳ್ಳಿಯ ಸಂಬಂಧ ಕಡಿದರೆ ಅದು ಬದುಕುವುದಿಲ್ಲ.ಕಾಯಿಗಳನ್ನು ಉತ್ಪತ್ತಿ ಮಾಡಿ ಪೋಷಿಸುವುದೇ ತಾಯಿ ಬಳ್ಳಿಯ ಸಾರ್ಥಕತೆ.ಬಳ್ಳಿ ಮತ್ತು ಕಾಯಿಗಳ ನಡುವೆ ಪರಸ್ಪರ ಅನೋನ್ಯ ಆಶ್ರಯವಿದೆ.ಹಾಗೆಯೇ ಶಿವ ಮತ್ತು ಭಕ್ತರ ನಡುವೆ ಎಂದೆಂದೂ ಅಗಲದ ಅವಿನಾಶಿಯಾದ,ಅನೋನ್ಯ ಸಂಬಂಧವಿದೆ.ತನ್ನ ಭಕ್ತರು ಕೇಳಿದ,ಕೇಳುವ ಎಲ್ಲವನ್ನೂ ಅನುಗ್ರಹಿಸುವುದು ಶಿವನ ಮಹೋದಾರಿ ಗುಣ.ಶಿವನನ್ನು ನಂಬಿ ನಡೆಯುವ ಭಕ್ತರು ಬಯಸಿದ ಎಲ್ಲ ಫಲ ಪದವಿಗಳು ದೊರೆಯುತ್ತವೆ,ಶಿವಭಕ್ತರು ಅಸಾಧ್ಯವಾದ ಕೆಲಸ ಕಾರ್ಯಗಳನ್ನು ಮಾಡುತ್ತಾರೆ.ಕಾಯಿಯು ಬಳ್ಳಿಯಿಂದ ಹೊರಬಂದಾಗ ಇಲ್ಲವೆ ಕತ್ತರಿಸಿ ಬೇರ್ಪಟ್ಟಾಗ ಕೆಟ್ಟುಹೋಗಿ ಕೊಳೆಯುತ್ತದಲ್ಲದೆ ತಾಯಿ ಬೆನ್ನಿಗಂಟಿಕೊಂಡಿದ್ದರೆ ಅದಕ್ಕೆ ಯಾವ ಸಮಸ್ಯೆಯೂ ಆಗುವುದಿಲ್ಲ.ಹಾಗೆಯೇ ಶಿವಭಕ್ತರು ಜಗತ್ತಿನಲ್ಲಿ ಇದ್ದರೂ ನಾನು ಭವಪ್ರಪಂಚಕ್ಕೆ ಸೇರಿದವನಲ್ಲ,ಅಭವ ಶಿವನಿಗೆ ಸೇರಿದವನು ಎನ್ನುವ ಭಾವನೆಯನ್ನು ಎಚ್ಚರಿಸಿಕೊಂಡು ನಡೆದರೆ ಅವರ ಬದುಕು ಹಿರಿದಾಗುತ್ತದೆ,ಸಾರ್ಥಕವಾಗುತ್ತದೆ.

೧೮.೦೧.೨೦೨೪

About The Author