ಸ್ಥಾವರ ಅಳಿಯುತ್ತದೆ,ಜಂಗಮ ಅಳಿಯುವುದಿಲ್ಲ

ಬಸವೋಪನಿಷತ್ತು ೧೭ : ಸ್ಥಾವರ ಅಳಿಯುತ್ತದೆ,ಜಂಗಮ ಅಳಿಯುವುದಿಲ್ಲ : ಮುಕ್ಕಣ್ಣ ಕರಿಗಾರ

ಉಳ್ಳವರು ಶಿವಾಲಯವ ಮಾಡುವರು ;
ನಾನೇನ ಮಾಡುವೆ ? ಬಡವನಯ್ಯಾ.
ಎನ್ನ ಕಾಲೇ ಕಂಭ,ದೇಹವೇ ದೇಗುಲ,
ಸಿರ ಹೊನ್ನ ಕಳಶವಯ್ಯಾ.
ಕೂಡಲ ಸಂಗಮದೇವ,ಕೇಳಯ್ಯಾ
ಸ್ಥಾವರಕ್ಕಳಿವುಂಟು,ಜಂಗಮಕ್ಕಳಿವಿಲ್ಲ!

ಇದು ಬಸವಣ್ಣನವರ ಬಹುಮುಖ್ಯ ವಚನಗಳಲ್ಲೊಂದು ; ಬಸವಣ್ಣನವರನ್ನು ನಾನಾ ಜನರು ನಾನಾ ತೆರನಾಗಿ ಅರ್ಥೈಸಿಕೊಳ್ಳಲು ಕಾರಣವಾದ ವಚನವೂ ಹೌದು.ಸಿರಿವಂತರು ಶಿವದೇವಸ್ಥಾನಗಳನ್ನು ಕಟ್ಟಿಸುತ್ತಾರೆ.ಬಡವನಾದ ನನ್ನಿಂದ ದೇವಸ್ಥಾನ ಕಟ್ಟಿಸಲು ಸಾಧ್ಯವೆ ? ಇಲ್ಲ.ಅದಕ್ಕಾಗಿ ಓ ! ನನ್ನ ತಂದೆ ಶಿವನೆ , ನನ್ನ ದೇಹವನ್ನೇ ನಿನ್ನ ದೇವಾಲಯವನ್ನಾಗಿ ಮಾರ್ಪಡಿಸಿದ್ದೇನೆ,ನನ್ನ ದೇಹವೇ ಶಿವಾಲಯವಾಗಿದೆ.ನನ್ನ ಕಾಲುಗಳೇ ದೇವಸ್ಥಾನದ ಕಂಭಗಳು,ನನ್ನ ಇಡೀ ಶರೀರವೇ ಶಿವಾಲಯ.ನನ್ನ ಶಿರಸ್ಸು ಅಥವಾ ತಲೆಯೇ ದೇಹದೇವಾಲಯದ ಬಂಗಾರದ ಕಲಶವಾಗಿದೆ.ಆದ್ದರಿಂದ ಓ! ನನ್ನ ತಂದೆ ಶಿವನೆ,ಕೂಡಲಸಂಗಮದೇವನೇ ಕೇಳು,ಭವ್ಯದೇವಾಲಯಗಳನ್ನು‌ಕಟ್ಟಿಸಿದ್ದಾರೆ ಎಂದು ನೀನು ಶ್ರೀಮಂತರಲ್ಲಿ ಪ್ರಸನ್ನನಾಗಬೇಡ,ಅಧಿಕಾರಸ್ಥರಲ್ಲಿ ಪ್ರಸನ್ನನಾಗಬೇಡ.ದೇವಸ್ಥಾನವನ್ನು ಎಷ್ಟೇ ಭದ್ರವಾಗಿ ಕಟ್ಟಿದ್ದರೂ ದೇವಸ್ಥಾನವು ಎಷ್ಟೇ ಭವ್ಯವಾಗಿದ್ದರೂ ದೇವರ ಮೂರ್ತಿಯನ್ನು ಯಾರೇ ಪ್ರತಿಷ್ಠಾಪನೆ ಮಾಡಿದ್ದರೂ ಪ್ರಕೃತಿನಿಯಮಕ್ಕನುಸರಿಸಿ ಒಂದುದಿನ ಆ ದೇವಸ್ಥಾನ ಬಿದ್ದು ಮಣ್ಣಾಗುತ್ತದೆ,ದೇವಸ್ಥಾನಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಮೂರ್ತಿ ಅಳಿಯಬಹುದು ಆದರೆ ಜಗದ್ ಭರಿತನಾದ ಜಂಗಮ ಶಿವನು ಅಳಿಯಲಾರ ಎನ್ನುತ್ತಾರೆ ಬಸವಣ್ಣನವರು.

ಪ್ರಸ್ತುತ ದಿನಗಳಲ್ಲಿ ಈ ವಚನವನ್ನು ಅರ್ಥೈಸಿಕೊಳ್ಳುವುದು ಬಹಳ ಅಗತ್ಯವಿದೆ.ಧರ್ಮವು ವ್ಯಾಪಾರವಾದಾಗ,ರಾಜಕೀಯ ಸರಕು ಆದಾಗ ಎಂತಹ ವಿಪರೀತಗಳಾಗಬಹುದು ಎನ್ನುವ ವಿಷಮ ದಿನಗಳಿಗೆ ದೇಶ ಸಾಕ್ಷಿಯಾಗಿದೆ.ಉಳ್ಳವರು ಮತ್ತು ಪಟ್ಟಭದ್ರರು ದೇವರು,ಧರ್ಮವನ್ನು ಗುತ್ತಿಗೆ ಹಿಡಿದುಕೊಂಡವರಂತೆ ವಿಪರೀತ,ವಿನೋದಕಾರಿ ಆಟ- ನಾಟಕಗಳನ್ನು ಆಡುತ್ತಿದ್ದಾರೆ.ರಾಜಪ್ರಭುತ್ವದ ಕಾಲಘಟ್ಟದಲ್ಲಿ ಬಿಜ್ಜಳನ ಪ್ರಧಾನಿ ಹುದ್ದೆಯಲ್ಲಿದ್ದ ಬಸವಣ್ಣನವರು ಆಡಿದ ಈ ಮಾತುಗಳು ಧರ್ಮದ ಹೆಸರಿನಲ್ಲಿ ರಾಜಕೀಯ ಲಾಭ ಪಡೆಯಹೊರಟವರ ಮೈಮನಗಳನ್ನು ತಾಕಿ,ಅವರ ಅಂತರಾಳವನ್ನು ಕಲಕಿ,ಆತ್ಮವಿಮರ್ಶೆ ಮಾಡಿಕೊಳ್ಳಲು‌ ಪ್ರೇರಣೆಯಾಗಲಿ.ಉಳ್ಳವರು,ಉದ್ಯಮಿಗಳು,ಅಧಿಕಾರಸ್ಥರು ಭವ್ಯವಾದ ದೇವಾಲಯವನ್ನು ಕಟ್ಟಿಸುತ್ತಿದ್ದಾರೆ,ಬಡಭಕ್ತನಿಂದ ಇದು ಸಾಧ್ಯವೆ ? ಬಡವರಲ್ಲಿ ಶಿವನಲ್ಲಿ ಅಚಲಭಕ್ತಿಯ ಹೊರತಾಗಿ ಮತ್ತೇನೂ‌ ಇರುವುದಿಲ್ಲ.ಕಲ್ಲು,ಇಟ್ಟಿಗೆ ಮಣ್ಣು,ಸಿಮೆಂಟ್ ಗಳಿಂದ ಕಟ್ಟಲ್ಪಟ್ಟ ದೇವಾಲಯವು ಎಷ್ಟೇ ಸುಂದರವಾಗಿದ್ದರೂ,ಆ ದೇವಸ್ಥಾನವನ್ನು ಎಷ್ಟೇ ಭದ್ರವಾಗಿ‌ ಕಟ್ಟಿದ್ದರೂ ಒಂದು ದಿನ ಆ ದೇವಾಲಯ ಮಣ್ಣಾಗಲೇಬೇಕು,ಆ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಮೂರ್ತಿಯು ನಾಶವಾಗಲೇಬೇಕು.ಆದರೆ ಆ ದೇವಸ್ಥಾನದ ಲಿಂಗ ಇಲ್ಲವೆ ಮೂರ್ತಿತತ್ತ್ವದ ಹಿನ್ನೆಲೆಯಾದ ಪರಶಿವನಿಗೆ ಅಳಿವಿಲ್ಲ, ಸಮಾಜ ಜೀವನದಲ್ಲಿ ವ್ಯಕ್ತಿಗಳಾದ ಮನುಷ್ಯರಿಗೆ ಅಳಿವಿದೆ ಆದರೆ ಅವರ ಸತ್ಕಾರ್ಯಗಳಿಗೆ,ಉತ್ತಮವಿಚಾರಗಳಿಗೆ ಅಳಿವಿಲ್ಲ.ಸ್ಥಾವರ ಎಂದರೆ‌ಕಟ್ಟಡ,ಜಂಗಮ ಎಂದರೆ ಚೈತನ್ಯರೂಪಿ ಶಿವ.ದೇಹವು ಸ್ಥಾವರವಾದರೆ ಆತ್ಮವು ಜಂಗಮ.ಜಂಗಮ ಎಂದರೆ ಜಾತಿಯಲ್ಲ,ಅದೊಂದು ತತ್ತ್ವ.ಆಧ್ಯಾತ್ಮಿಕ ಸಾಧನೆ,ಯೋಗಬಲದಿಂದ ಯಾರಾದರೂ ಜಂಗಮತ್ವವನ್ನು ಸಂಪಾದಿಸಬಹುದು; ಜಂಗಮರು ಎನ್ನಿಸಿಕೊಳ್ಳುತ್ತಿರುವ ಜಾತಿಯಲ್ಲಿ ಹುಟ್ಟಿದ ಮಾತ್ರಕ್ಕೆ ಜಂಗಮತ್ವವು ದೊರಕದು.

ಬಸವಣ್ಣನವರನ್ನು ತಪ್ಪಾಗಿ ಅರ್ಥೈಸಿಕೊಳ್ಳಲು, ಅವರ ಬಗ್ಗೆ ಅಪಾರ್ಥ ಕಲ್ಪಿಸಿಕೊಳ್ಳಲು ಕಾರಣವಾದ ಅವರ ಹಲವು ವಚನಗಳಲ್ಲಿ ಇದು ಕೂಡ ಒಂದು.’ ಕಲ್ಲನಾಗರ ಕಂಡರೆ ಹಾಲನೆರೆಯೆಂಬರು’ ಎನ್ನುವ ವಚನ ಮತ್ತು ಸ್ಥಾವರಕ್ಕಳಿವುಂಟು,ಜಂಗಮಕ್ಕಳಿವಿಲ್ಲ ಎನ್ನುವ ಈ ವಚನವನ್ನು ಬಸವಾನುಯಾಯಿಗಳು ಮತ್ತು ಬಸವ ವಿರೋಧಿಗಳು ತಮ್ಮ ಮೂಗಿನ ನೇರಕ್ಕೆ ತಕ್ಕಂತೆ ಅರ್ಥೈಸಿಕೊಂಡಿದ್ದಾರೆ.ಬಸವಣ್ಣನವರ ಅನುಯಾಯಿಗಳು ಮತ್ತು ಬಸವಣ್ಣನವರ ವಿರೋಧಿಗಳಿಬ್ಬರೂ ಈ ವಚನವನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ.ಬಸವಣ್ಣನವರ ಅನುಯಾಯಿಗಳು ಬಸವಣ್ಣನವರು ದೇವಸ್ಥಾನ ನಿರ್ಮಾಣವಿರೋಧಿಯಾಗಿದ್ದರು ಎಂದು ಅರ್ಥೈಸಿಕೊಂಡರೆ ಬಸವಣ್ಣನವರನ್ನು ವಿರೋಧಿಸುವವರು ದೇವಸ್ಥಾನಗಳೇ ನಮ್ಮ ಸಂಸ್ಕೃತಿಯ ಜೀವಾಳ,ಅಂತಹ ದೇವಸ್ಥಾನಗಳ ನಿರ್ಮಾಣವನ್ನೇ ವಿರೋಧಿಸುವ ಬಸವಣ್ಣನವರನ್ನೆಂತು ಪುರಸ್ಕರಿಸಬಹುದು ಎಂದು ಪ್ರಶ್ನಿಸುತ್ತಾರೆ.ಬಸವಣ್ಣನವರು ದೇವಾಲಯಗಳ ನಿರ್ಮಾಣಕಾರ್ಯದ ವಿರೋಧಿಯಾಗಿರಲಿಲ್ಲ,ದೇವಸ್ಥಾನ ನಿರ್ಮಾಣದ ಹೆಸರಿನಲ್ಲಿ ನಡೆಯುವ ಅನ್ಯಾಯ- ಶೋಷಣೆಯ ವಿರುದ್ಧ ಇದ್ದರು,ಎಲ್ಲರ ಆತ್ಮವಿಕಾಸಕ್ಕೆ ಕಾರಣವಾಗಬೇಕಿದ್ದ ದೇವಸ್ಥಾನ ಕೆಲವೇ ಜನರ ಖಾಸಗಿ ಆಸ್ತಿಯಾಗಿ ಮಾರ್ಪಟ್ಟು ಸಮಾಜವನ್ನು ವಿಭಜಿಸುವ ಕೃತ್ರಿಮತೆಯನ್ನು,ಕುಟಿಲ ನಡೆಯನ್ನು ಬಸವಣ್ಣನವರು ವಿರೋಧಿಸಿದರು.ಬೆಳಕಿನ ಮೂಲವಾಗಬೇಕಿದ್ದ ದೇವಸ್ಥಾನವು ಪುರೋಹಿತರು,ಪಟ್ಟಭದ್ರರುಗಳ ಕಪಿಮುಷ್ಠಿಯಲ್ಲಿ ಸಿಕ್ಕು ಕತ್ತಲೆಯ ಕೂಪವಾಗಿ ಮಾರ್ಪಟ್ಟ ಸಾಮಾಜಿಕ- ಧಾರ್ಮಿಕ ಕಪಟ,ಮೋಸ ಮತ್ತು ಭೇದಬುದ್ಧಿಯನ್ನು ಬಸವಣ್ಣನವರು ವಿರೋಧಿಸಿದರು.ಇದು ಈ ವಚನದ ಆಶಯ,ನಿಜಾರ್ಥ.ಈ ವಚನದಲ್ಲೇ ಬಸವಣ್ಣನವರು ಉಳ್ಳವರ ವಿಪರೀತಬುದ್ಧಿ,ಇಲ್ಲದವರ ಅಸಹಾಯಕತೆಯ ಬಗ್ಗೆ ಪ್ರಸ್ತಾಪಿಸಿ ಸಿರಿವಂತರ ಪ್ರತಿಷ್ಠೆಯು ಅವರನ್ನು ಹಾಳು ಮಾಡಿದರೆ ಬಡವರ ಭಕ್ತಿಯು ಅವರನ್ನು ಉದ್ಧಾರ ಮಾಡುತ್ತದೆ ಎನ್ನುವ ಸಂದೇಶವಿದೆ.ಕಲ್ಲು ಮಣ್ಣುಗಳಿಂದ ನಿರ್ಮಿಸಲ್ಪಡುವ ಸ್ಥಾವರವಾದ ದೇವಸ್ಥಾನ ಮತ್ತು ಆ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಶಿವನ‌ ಲಿಂಗ ಅಥವಾ ಮೂರ್ತಿ ಅಳಿಯಬಹುದು ಆದರೆ ಶಿವನಿಗೆ ಅಳಿವಿಲ್ಲ.ನಾಶಕ್ಕೆ, ಪ್ರಳಯಕ್ಕೆ ತುತ್ತಾಗುವ ದೇವರಿಗೆ ಒಂದು ದೇವಾಲಯ ಕಟ್ಟಿಸುವ ಬದಲು ನಮ್ಮ ದೇಹವನ್ನೇ ದೇವಾಲಯವನ್ನಾಗಿ ಪರಿವರ್ತಿಸಿಕೊಳ್ಳಬೇಕು.ನಮ್ಮ ಅವಗುಣಗಳನ್ನು ಶಿವಗುಣಗಳನ್ನಾಗಿ ಪರಿವರ್ತಿಸಿಕೊಳ್ಳಬೇಕು,ಅಹಂಕಾರ ಮಮಕಾರಗಳನ್ನು ಭಕ್ತಿ,ವೈರಾಗ್ಯವನ್ನಾಗಿ ಮಾರ್ಪಡಿಸಿಕೊಳ್ಳಬೇಕು.ವಿಚಾರಶಕ್ತಿಯ ಮೂಲವಾದ ತಲೆಯನ್ನು ನೆಟ್ಟಗಿಟ್ಟುಕೊಂಡು ಅಂದರೆ ಸದ್ಬುದ್ಧಿಯನ್ನು ಬೆಳೆಸಿಕೊಂಡು ಜನರಲ್ಲಿ,ಜಗತ್ತಿನಲ್ಲಿ ಶಿವನನ್ನು ಕಾಣಬೇಕು.ಜಗತ್ತಿನ ಎಲ್ಲರಲ್ಲಿಯೂ ಶಿವನೇ ಇದ್ದಾನೆ,ಇಲ್ಲಿ ಜರುಗುತ್ತಿರುವ ಎಲ್ಲದರ ಹಿಂದೆಯೂ ಪರಶಿವನೇ ಇದ್ದಾನೆ ಎಂದು ತಿಳಿದುಕೊಳ್ಳಬೇಕು.ದೇಹ ಅಳಿಯುತ್ತದೆ,ಆತ್ಮವು ಅಳಿಯುವುದಿಲ್ಲವಾದ್ದರಿಂದ ಮನುಷ್ಯರು ತಮ್ಮ ದೇಹಭಾವನ್ನು ಕಳಚಿಕೊಂಡು ಆತ್ಮಭಾವವನ್ನು ಅಳವಡಿಸಿಕೊಳ್ಳಬೇಕು. ನಾನು ದೇಹಿಯಲ್ಲ,ಆತ್ಮನು ಎಂದು ತಿಳಿದುಕೊಳ್ಳಬೇಕು.ನಾನು ಜಡವಲ್ಲ ಜಂಗಮನು ಎಂಬ ಭಾವವನ್ನು ಅಂಗವಿಸಿಕೊಳ್ಳಬೇಕು.ಇದು ಬಸವಣ್ಣನವರ ಈ ವಚನದ ಅರ್ಥ,ಜಗತ್ತಿಗೆ ಬಸವಣ್ಣನವರು ಸಾರಿದ ಸಂದೇಶ,ತೋರಿದ ದಾರಿ.

೧೭.೦೧.೨೦೨೪

About The Author